Sunday, January 24, 2010

ಪುಸ್ತಕದ ನೆಪದಲ್ಲಿ ಮತ್ತೊಂದಿಷ್ಟು ಮಾತು

ಪುಸ್ತಕಗಳ ಬಗ್ಗೆ ಬರೆಯದೆ ಎಷ್ಟು ದಿನವಾಯಿತು ಎಂದು ಯೋಚಿಸಿದರೆ ಆಶ್ಚರ್ಯವಾಯಿತು. ಕಂಪ್ಯೂಟರಿನಲ್ಲಿ ಹಳೆಯ ಫೈಲುಗಳನ್ನೆಲ್ಲ ತೆರೆದು ನೋಡಿದರೆ, ಸುಮಾರು ಎರಡು ವರ್ಷದಿಂದ ಯಾವ ಪುಸ್ತಕದ ಕುರಿತೂ ಬರೆದಿರಲಿಲ್ಲ. ಒಳ್ಳೆಯ ಪುಸ್ತಕ ಬಂದಿಲ್ಲ ಹಾಗಾಗಿ ಬರೆದಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವುದು ಸುಲಭ. ಹಾಗೇ, ಒಳ್ಳೆಯ ಪುಸ್ತಕಗಳು ಬಂದಿವೆ ಎಂದು ಎದೆತಟ್ಟಿ ಹೇಳುವ ಧೈರ್ಯವೂ ನನಗಿಲ್ಲ.
ಹೊಸ ಪುಸ್ತಕಗಳನ್ನೆಲ್ಲ ಹುಡುಕಿ ಮುಂದೆ ತಂದಿಟ್ಟುಕೊಂಡೆ. ಕಾರಿನಲ್ಲೇ ಸುಮಾರು ಇಪ್ಪತ್ತು ಪುಸ್ತಕಗಳಿದ್ದವು. ರಸ್ತೆಯಲ್ಲಿ ಯಾವುದೋ ಮೆರವಣಿಗೆ ಎದುರಾದಾಗ, ಗಂಟೆಗಟ್ಟಲೆ ಟ್ರಾಪಿಕ್ ಜಾಮ್ ಆದಾಗ ಪುಸ್ತಕಗಳೇ ಒಳ್ಳೆಯ ಸಂಗಾತಿ. ಹೊತ್ತು ಹೋದದ್ದೇ ಗೊತ್ತಾಗದಂತೆ ಮಾಡುತ್ತವೆ ಅವು. ತುಂಬ ಒಳ್ಳೆಯ ಪುಸ್ತಕ ಸಿಕ್ಕರೆ, ಇನ್ನೂ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಇರಬಾರದಿತ್ತೇ ಅಂತಲೂ ಅನ್ನಿಸುವುದಿದೆ.
ಕಾರಿನಲ್ಲಿ ದೂರ ಪ್ರಯಾಣ ಹೊರಟಾಗಂತೂ ಪುಸ್ತಕಗಳು ಒಳ್ಳೆಯ ಕಂಪೆನಿ. ಇಷ್ಟೇ ಹೊತ್ತಿಗೆ ಊರು ಸೇರಬೇಕು ಎಂಬ ಧಾವಂತವಿಲ್ಲದೆ ಹೊರಟವರ ಪಾಲಿಗಂತೂ ಅದು ವರದಾನ. ಊರು ದಾಟಿ, ಹೈವೇಗೆ ಬಿದ್ದ ನಂತರ ತುಂಬಾ ದೂರ ಸಾಗಿದ ಮೇಲೆ ಯಾಕೋ ಸುಸ್ತಾಗಿದೆ ಅನ್ನಿಸಿದರೆ, ಒಂದಷ್ಟು ಹಗುರಾಗೋಣ ಅನ್ನಿಸಿದರೆ, ಕೈಲೊಂದು ಡ್ರಾಫ್ಟ್ ಬಿಯರ್ ಟಿನ್ ಹಿಡಕೊಂಡು, ಹಾದಿಯಲ್ಲಿ ಸಿಗುವ ಯಾವುದೋ ಹಳ್ಳಿಯ ಸಮೀಪದ ಮರದ ಬುಡದಲ್ಲಿ ಆರಾಮಾಗಿ ಕಾದಂಬರಿ ಓದುತ್ತಾ ಕೂತುಬಿಡಬಹುದು. ಆಗಾಗ ಕಣ್ಣೆತ್ತಿ ದೂರದ ಬೆಟ್ಟ ಗುಡ್ಡಗಳತ್ತ ಕಣ್ಣುಹಾಯಿಸಬಹುದು. ನೀವು ಒಂದು ದಿಂಬು ಜೊತೆಗೆ ಒಯ್ದರೆ, ಅದೇ ನೆರಳಲ್ಲಿ ನಿದ್ದೆ ಹೊಡೆಯಬಹುದು.
ಪುಸ್ತಕಗಳಿಗಿಂತ ಟೇಪ್‌ರೆಕಾರ್ಡರ್ ವಾಸಿ ಅನ್ನುವವರಿದ್ದಾರೆ. ನನಗಂತೂ ಕಾರಲ್ಲಿ ಹೋಗುವಾಗ ಪುಸ್ತಕವೇ ಒಳ್ಳೆಯದು ಅನ್ನಿಸುತ್ತದೆ. ಇಷ್ಟು ವರ್ಷಗಳೂ ಹಾಡು ಕೇಳಿ ಕೇಳಿ, ಯಾವ ಹಾಡು ಹಾಕಿದರೂ ಮೊದಲು ಕೇಳಿದ್ದೇ ಅಲ್ವಾ ಅನ್ನಿಸುತ್ತದೆ. ಕೇಳಿದ ಹಾಡನ್ನೇ ಮತ್ತೆ ಮತ್ತೆ ಸವಿಯುವುದು ಸಂತೋಷದ ಸಂಗತಿಯೇ. ಆದರೆ ಕೇಳುವ ಮೊದಲೇ ಆ ಹಾಡು ನಮ್ಮೊಳಗಿಂದ ಕೇಳಲಾರಂಭಿಸುತ್ತದೆ. ಹಳೆಯದಾದ, ನೀವು ತುಂಬ ಸಲ ಕೇಳಿರುವ, ಮೆಚ್ಚಿರುವ ಗೀತೆಯನ್ನು ಮ್ಯೂಸಿಕ್ ಸಿಸ್ಟಮ್‌ನಲ್ಲೇ ಕೇಳಬೇಕಾಗಿಲ್ಲ. ಅದನ್ನು ನೆನಪಿಸಿಕೊಂಡರೂ ಸಾಕು, ಇಡೀ ಹಾಡು ಕಿವಿತುಂಬುತ್ತದೆ. ಅದಕ್ಕಿಂತ ಹೆಚ್ಚಾಗಿ ಮನತುಂಬುತ್ತದೆ. ಬೇಕಿದ್ದರೆ ಗಮನಿಸಿ ನೋಡಿ, ನೀವು ನಿಮ್ಮ ಮೆಚ್ಚಿನ ಗೀತೆಯನ್ನು ನಿಜಕ್ಕೂ ಕೇಳಿಸಿಕೊಳ್ಳುತ್ತಿರುವುದಿಲ್ಲ, ಮೆಲುಕು ಹಾಕುತ್ತಿರುತ್ತೀರಿ.
ಎಫ್ಫೆಮ್ ಚಾನಲ್ಲುಗಳಂತೂ ಹಿಂಸೆ ಕೊಡುತ್ತವೆ. ರ್ಯಾನಪಿಡ್ ರಶ್ಮಿ, ಸ್ಟುಪಿಡ್ ಸುಶ್ಮಾ ಎಂಬ ವಿಚಿತ್ರ ಹೆಸರಿಟ್ಟುಕೊಂಡ ಹೆಣ್ಮಕ್ಕಳ ಮಾತು ಮೊದಲೆರಡು ಲವಲವಿಕೆಯಿಂದ ತುಂಬಿದೆ ಅನ್ನಿಸಿದರೂ ಆಮೇಲಾಮೇಲೆ ಯಾತನೆ ಕೊಡಲಾರಂಭಿಸುತ್ತವೆ. ಅವುಗಳಲ್ಲಿ ಬರುವ ಹಾಡುಗಳನ್ನು ಕೇಳಿದರೆ, ಇವತ್ತಿನ ಸಿನಿಮಾ ಸಂಗೀತ ಎಂಥ ಏಕತಾನತೆಗೆ ಬಿದ್ದಿದೆ ಎಂದು ಗೊತ್ತಾಗುತ್ತದೆ. ಮನೋಮೂರ್ತಿಯಂತೂ ತಮ್ಮ ರಾಗಗಳನ್ನು ತಾವೇ ಕದಿಯುತ್ತಿದ್ದಾರೆ. ಗೀತರಚನಕಾರರು ಮಳೆಯ ಬೆನ್ನು ಹತ್ತಿದ್ದಾರೆ. ಸುಮ್ಮನೆ ಕೇಳುತ್ತಾ ಹೋದರೆ ಕವಿರಾಜ್, ನಾಗೇಂದ್ರಪ್ರಸಾದ್, ಕಲ್ಯಾಣ್ ಮುಂತಾದವರೇ ಈಗೀಗ ಇಷ್ಟವಾಗುತ್ತಿದ್ದಾರೆ.
ಕಾರುಗಳಲ್ಲಿ ಪುಟ್ಟದೊಂದು ವೀಡಿಯೋ ಪ್ಲೇಯರ್ ಹಾಕಿಕೊಂಡು ಸಿನಿಮಾ ನೋಡುವವರೂ ಇದ್ದಾರೆ. ನನಗಂತೂ ಅದು ಸರಿಹೋಗುವುದಿಲ್ಲ. ಮೊನ್ನೆ ಸಿರ್ಸಿಗೆ ಹೋಗಿ ಬರುವಷ್ಟರಲ್ಲಿ ಗೆಳೆಯರೆಲ್ಲ ಮೂರೋ ನಾಲ್ಕೋ ಸಿನಿಮಾ ನೋಡಿ ಮುಗಿಸಿದ್ದರು. ಸಿನಿಮಾಗಳನ್ನು ಥೇಟರಿನಲ್ಲೇ ನೋಡಬೇಕು ಎಂಬುದು ನನ್ನ ಖಾಸಗಿ ನಂಬಿಕೆ. ಆಗಲೇ ಏಕಾಗ್ರತೆ, ಸಂವಹನ, ತನ್ಮಯತೆ ಸಾಧ್ಯವಾಗುತ್ತದೆ. ಮನೆಯಲ್ಲಿ ಕೂತು ನೋಡಬಹುದಾದದ್ದೆಂದರೆ ಟೀವಿ ಸೀರಿಯಲ್ಲು ಮತ್ತು ನ್ಯೂಸ್ ಮಾತ್ರ.
ಕಾರುಗಳಲ್ಲಿ ಪುಸ್ತಕ ಇಟ್ಟುಕೊಂಡು ಹೋಗುವುದನ್ನು ನನಗೆ ಕಲಿಸಿದ್ದು ಸೂರಿ. ಒಮ್ಮೆ ಹೈದಾರಾಬಾದ್‌ಗೆ ಹೋಗಿದ್ದಾಗ ಅವರ ಕಾರಿನ ಹಿಂಬದಿಯ ಸೀಟಲ್ಲಿ ನಾಲ್ಕಾರು ಕಾದಂಬರಿಗಳಿರುವುದನ್ನು ನೋಡಿದ್ದೆ. ಅದ್ಯಾಕೋ ಕಾರಲ್ಲಿ ಓದುವುದು ಅಸಾಧ್ಯ ಅನ್ನಿಸುತ್ತಿತ್ತು. ಕೆಲವೇ ದಿನಗಳಲ್ಲಿ ಅದು ಅನಿವಾರ್ಯ ಎನ್ನಿಸುವಷ್ಟು ರೂಢಿಯಾಯಿತು. ಈಗಂತೂ ಪುಸ್ತಕಗಳಿಲ್ಲದ ಪ್ರಯಾಣವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ದೂರ ಪ್ರಯಾಣದ ಮಧ್ಯದ ಊಟ ಕೂಡ ಖುಷಿ ಕೊಡುತ್ತದೆ. ಯಾವುದೋ ಹೊಟೆಲ್ ಹತ್ತಿರ ಕಾರು ನಿಲ್ಲಿಸಿ, ಆ ಗಿಜಿಗಿಡುವ ಹೊಟೆಲಿನಲ್ಲಿ ಏನಾದರೂ ತಿನ್ನುವ ಬದಲು, ಬೇಕಾದ್ದನ್ನೆಲ್ಲ ಕಟ್ಟಿಸಿಕೊಂಡು ಪುಟ್ಟ ಹಳ್ಳಿಯ ಕೆರೆಯ ಬದಿಯಲ್ಲಿ ಕಾರು ನಿಲ್ಲಿಸಿ, ಅಲ್ಲಿರುವ ಹೊಂಗೆ ಮರದಡಿಯಲ್ಲಿ ಬೆಡ್‌ಶೀಟ್ ಹಾಸಿಕೊಂಡು ಕೂತು ಸೊಗಸಾಗಿ ಊಟ ಮಾಡಬಹುದು. ಪ್ರಯಾಣದ ಜೊತೆಗೆ ಮತ್ತೊಂದು ಖುಷಿಯೂ ನಿಮ್ಮದಾಗುತ್ತದೆ. ಹಾಗೇ, ಕಾರಲ್ಲಿ ಸದಾ ಎರಡು ಬ್ಯಾಡ್ಮಿಂಟನ್ ಬ್ಯಾಟ್, ಶಟಲ್‌ಕಾಕ್, ಒಂದು ಕ್ರಿಕೆಟ್ ಬ್ಯಾಟ್ ಮತ್ತು ಬಾಲ್ ಇರಲಿ. ಎಲ್ಲೆಂದರಲ್ಲಿ ಕಾರು ನಿಲ್ಲಿಸಿ ಒಂದರ್ಧಗಂಟೆ ಆಟ ಆಡಿ ಪ್ರಯಾಣ ಮುಂದುವರಿಸಬಹುದು.
ಸರ್ರನೆ ಹೋಗವ್ವ, ಭರ್ರನೆ ಬಾರವ್ವ.. ಎಂಬ ಸಾಲು ಕೆರೆಗೆ ಹಾರ’ ಜನಪದ ಕಾವ್ಯದಲ್ಲಿ ಬರುತ್ತದೆ. ನಾವೂ ಕೂಡ ಪಯಣದ ವೇಳೆ ಹಾಗೇ ಮಾಡುತ್ತೇವೆ. ಸರ್ರನೆ ಹೋಗಿ ಭರ್ರನೆ ಬರುತ್ತೇವೆ. ಅದರಿಂದ ಪ್ರಯಾಣ ಕೇವಲ ಸುಸ್ತು ಮೈಗೂಡಿಸುವ ಕಸರತ್ತಷ್ಟೇ ಆಗುತ್ತದೆ. ಆದರೆ ನಿಧಾನವಾಗಿ ಕಂಡದ್ದೆಲ್ಲವನ್ನೂ ಸವಿಯುತ್ತಾ ಹೋಗುವ ಪ್ರಯಾಣ ನಿಜಕ್ಕೂ ಸಂತೋಷ ಕೊಡುತ್ತದೆ. ದಾರಿಬದಿಯಲ್ಲಿ ಕಾಣುವ ನವಿಲು, ಬಯಲುಸೀಮೆಯ ಸೂರ್ಯಾಸ್ತ, ಕಾಡು ಹಾದಿಯ ನೆರಳ ಚಿತ್ತಾರ, ಬತ್ತದ ಗದ್ದೆಯ ಕಂಪು, ಕಬ್ಬಿನ ಗದ್ದೆಯ ವಿಸ್ತಾರ, ಕಾಡಬದಿಯಲ್ಲಿ ನೀಲಿ ನೀಲಿ ಹೂ ಬಿಟ್ಟು ನಿಂತ ಗುರುಗಿ ಹೂವಿನ ಗಿಡಗಳು... ಪಯಣಕ್ಕೆ ಕೊನೆಯೆಲ್ಲಿ?
******
ಇತ್ತೀಚೆಗೆ ಬಂದ ಪುಸ್ತಕಗಳ ಪೈಕಿ ತುಂಬಾ ಇಷ್ಟವಾದದ್ದು ವೈಎನ್‌ಕೆ ಕೊನೆಸಿಡಿ’. ಅವರು ಅಷ್ಟೊಂದು ಕೊನೆ ಸಿಡಿ ಬರೆದಿದ್ದಾರೆ ಎಂಬ ಕಲ್ಪನೆಯೂ ನನಗಿರಲಿಲ್ಲ. ಅವರಿಗೆ ಎಷ್ಟೋ ಕೊನೆಸಿಡಿಗಳನ್ನು ನಾನೂ ಕೊಟ್ಟಿದ್ದೆ. ಒಮ್ಮೊಮ್ಮೆ ಚೆನ್ನಾಗಿಲ್ಲದ್ದನ್ನು ಕೊಟ್ಟಾಗ ಇದು ಚೆನ್ನಾಗಿಲ್ಲ . ನೀವು ಕೊಟ್ಟಿದ್ದು ಅಂತ ಬರೀತೀನಿ’ ಅನ್ನುತ್ತಿದ್ದರು. ಅದೀಗ ಅಂಕಿತ ಪುಸ್ತಕದಿಂದ ಪ್ರಕಟವಾಗಿದೆ. ಒಂದು ಸ್ಯಾಂಪಲ್ ತಗೊಳ್ಳಿ:
ಸಾಹಿತ್ಯ ಸಭೆಯಲ್ಲಿ ಹಿರಿಯ ಸಾಹಿತಿ ಮಾತಾಡುತ್ತಾ, ಬಳಸಿ ಬರೆಯಲು ಕಂಠಪತ್ರದ ಉಲುಹು ಕೆಡದ ಅಗ್ಗಳಿಕೆ’ ತಮ್ಮದು. ತಾವು ಕುಮಾರವ್ಯಾಸನಂತೆ ಎಂದೆಲ್ಲ ಹೊಗಳಿಕೊಂಡರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಾನು ಏನೇ ಬರೆದ್ರೂ ಅದನ್ನು ಮತ್ತೆ ಓದೋದಿಲ್ಲ’ ಎಂದರು.
ಅದಕ್ಕೆ ಶ್ರೀಮಾನ್ ಘಾ ಟೀಕೆ: ನೀವಷ್ಟೇ ಅಲ್ಲ, ಯಾರೂ ಓದೋದಿಲ್ಲ’.
ಇದೇ ಹೊತ್ತಲ್ಲಿ ಮತ್ತೊಂದು ಜೋಕ್: ಅದು ಬರಹಗಾರರ ಕುಟುಂಬ. ತಾಯಿ ಪದ್ಯ ಬರೀತಾಳೆ, ಯಾರೂ ಓದೋಲ್ಲ. ಮಗ ಅಪ್ಲಿಕೇಷನ್ ಬರೀತಾನೆ, ಕೆಲಸ ಸಿಗೋಲ್ಲ. ಮಗಳು ಕಾದಂಬರೀ ಬರೀತಾಳೆ, ಪಬ್ಲಿಷ್ ಆಗೋಲ್ಲ. ಅಪ್ಪ
ಚೆಕ್ ಬರೀತಾನೆ; ಕ್ಯಾಶ್ ಆಗೋಲ್ಲ.’
ಬರಗೂರು ರಾಮಚಂದ್ರಪ್ಪನವರ ಮರ್ಯಾದಸ್ತ ಮನುಷ್ಯರಾಗೋಣ’ ಎಂಬ ಲೇಖನಗಳ ಸಂಗ್ರಹ ಓದಿ ಖುಷಿಯಾಯಿತು. ಬರಗೂರು ಅತ್ಯಂತ ಸ್ಪಷ್ಟವಾಗಿ ಮಾತಾಡುವವರು, ಬರೆಯುವವರು. ಅವರ ವಿಚಾರಧಾರೆಯಲ್ಲಿ ಗೊಂದಲ ಇಲ್ಲ. ಅದನ್ನು ನೀವು ಒಪ್ಪುತ್ತೀರೋ ಬಿಡುತ್ತೀರೋ ಎಂಬುದು ಬೇರೆ ಪ್ರಶ್ನೆ. ಆದರೆ ತಾನು ಹೇಳಬೇಕಾದ್ದನ್ನು ನಿಖರ ಮತ್ತು ಪ್ರಖರ ಮಾತುಗಳಲ್ಲಿ ಅವರು ಹೇಳಬಲ್ಲರು.
ಈ ಲೇಖನ ಸಂಗ್ರಹದಲ್ಲಿ ಅವರ ಬಂಡಾಯದ ಒಳದನಿಗಳಿವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳ ಜೊತೆಗೇ ಹಸಿವಿನ ಕರ್ನಾಟಕವೂ ಇದೆ. ಯಾರೂ ಅದನ್ನು ಗಮನಿಸುತ್ತಿಲ್ಲ ಅಂತಾರೆ ಬರಗೂರು. ಭೈರಪ್ಪನವರಿಗೆ ಬರೆದ ಪತ್ರದಲ್ಲಿ ಮರ್ಯಾದಸ್ತ ಮನುಷ್ಯರಾಗೋಣ ಎನ್ನುತ್ತಾರೆ. ಈ ಶೀರ್ಷಿಕೆ ನೋಡುತ್ತಿದ್ದಂತೆ ಎಷ್ಟೋ ಸಾಹಿತಿಗಳು ಇದು ತಮ್ಮಿಂದಾಗದ ಕೆಲಸ ಎಂದು ಕಾರ್ಯಕ್ರಮಕ್ಕೇ ಬರಲಿಲ್ಲವಂತೆ! ಹಿಂದೆ ಸಿದ್ದಯ್ಯ ಪುರಾಣಿಕರು `ಏನಾದರೂ ಆಗು, ಮೊದಲು ಮಾನವನಾಗು’ ಎಂದು ಬರೆದಿದ್ದರು. ಅದನ್ನೂ ಪಾಲಿಸುವುದು ಅನೇಕರಿಗೆ ಕಷ್ಟವಾಗಿತ್ತಂತೆ. ಈಗ ಬರಗೂರು ಆ ಸೂಚನೆಯನ್ನೇ ವಿಸ್ತರಿಸಿದ್ದಾರೆ. ಮರ್ಯಾದಸ್ತ ಮನುಷ್ಯರಾಗೋಣ ಅಂದಿದ್ದಾರೆ. ಕಷ್ಟ ಕಷ್ಟ.
ಶ್ರೀವತ್ಸ ಜೋಶಿ ನಲಿವಿನ ಟಚ್ ಮತ್ತು ಒಲವಿನ ಟಚ್ ಎಂಬೆರಡು ಪುಸ್ತಕಗಳನ್ನು ಹೊರತಂದಿದ್ದಾರೆ. ಎರಡೂ ಸೊಗಸಾಗಿ ಓದಿಸಿಕೊಳ್ಳುತ್ತವೆ. ಜೋಶಿಯವರಿಗೆ ಓದಿನ ಅನುಭವಕ್ಕಿಂತ ನೋಡಿದ ಅನುಭವಗಳೇ ಜಾಸ್ತಿ. ಅವರ ಎಲ್ಲಾ ಲೇಖನಗಳಲ್ಲೂ ಸಿನಿಮಾ ಹಾಡುಗಳು ಪ್ರಾಸಕ್ಕಾಗಿ, ಹೋಲಿಕೆಗಾಗಿ ಬಳಕೆಯಾಗುತ್ತವೆ. ಭಾವಗೀತೆಗಳು ಅಷ್ಟಾಗಿ ಪ್ರಸ್ತಾಪ ಆಗುವುದಿಲ್ಲ.
ನನಗೆ ಗೊತ್ತಿರುವ ಗೆಳೆಯರೊಬ್ಬರು ಚೇತನ್ ಭಗತ್ ಪುಸ್ತಕಳನ್ನು ಓದಲೇಬೇಕು ಅನ್ನುತ್ತಿದ್ದರು. ಅವರ ಒತ್ತಾಯಕ್ಕೆ ಮಣಿದು ಚೇತನ್‌ನ ಮೂರು ಪುಸ್ತಕಗಳನ್ನು ತಂದರೆ, ಒಂದನ್ನೂ ಪೂರ್ತಿಯಾಗಿ ಓದುವುದಕ್ಕೆ ಸಾಧ್ಯವಾಗಲೇ ಇಲ್ಲ. ಯಾವುದೇ ಒಳನೋಟಗಳಿಲ್ಲದ, ಹೊಸ ಸಂಗತಿಗಳಿಲ್ಲದ, ಇವತ್ತಿನ ಮೇಲ್ಮಟ್ಟದ ಬದುಕನ್ನು ಸುಮ್ಮನೆ ಚಿತ್ರಿಸುವ ಕಾದಂಬರಿಗಳು ಅವು.
ಸದ್ಯಕ್ಕೆ ಇಸ್ತಾಂಬುಲ್‌ನ ಲೇಖಕ Orhan Pamukನ ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕೈಯಲ್ಲಿದೆ. ಅದನ್ನು ಓದಲಾ, ಮತ್ತೊಂದು ಕತೆ ಬರೆಯಲಾ ಎಂಬ ಗೊಂದಲದಲ್ಲಿ ಎರಡನ್ನೂ ಮಾಡಲಾಗುತ್ತಿಲ್ಲ. ಓದು ಮತ್ತು ಬರಹಗಳ ಮಧ್ಯೆ ಸಿಕ್ಕಿಬಿದ್ದ ಲೇಖಕನನ್ನು ಯಾರು ಕಾಪಾಡುತ್ತಾರೆ?
ವಿಮರ್ಶಕ!

2 comments:

Anonymous said...

ಅಪರಿಚಿತ ಜಾಗದಲ್ಲಿ, ಮರದಡಿ ಕೂತು.. ದಿಂಬಿಗೆ ತಲೆಯಾನಿಸಿ.. ಮೊಬೈಲ್ ಆಫ್ ಮಾಡಿ.. ಪುಸ್ತಕ ಓದುತ್ತಾ ಕೂರುವುದು.. ಅಹಾ! ಎಂಥ ಸಿಹಿ ಸುಖ.. ಮನಸ್ಸು ಅಯಾಚಿತವಾಗಿ ಚಪ್ಪರಿಸಿತು!

ಸಾಗರದಾಚೆಯ ಇಂಚರ said...

ಬರಗೂರರ ಬರಹಗಳು ಯಾವಾಗಲೂ ನಂಗೆ ಇಷ್ಟ
ಅವರ ಹೊಸ ಬರಹದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು