Tuesday, April 27, 2010

ಗಿಣಿಯಿಲ್ಲದ ಮೇಲೆ ಕೆಂಪು ಕೊಕ್ಕಿಲ್ಲ, ಸೊಕ್ಕಿಲ್ಲ, ಮಿಕ್ಕಿಲ್ಲ, ಸಿಕ್ಕಿಲ್ಲ,

ದೂರದ ಕಾಡಲ್ಲೊಂದು
ಹಸಿರು ಗಿಳಿ.
ಅದಕ್ಕೊಂದು ಕೆಂಪು ಕೊಕ್ಕು.

ತುಟಿಗೆಂಪಿನ ಅವಳಿಗೆ
ಪ್ರತಿರಾತ್ರಿ
ಕೆಂಪುಕೊಕ್ಕಿನ ಗಿಣಿಯ
ಕನಸು.

ಗಿಣಿಗೂ ಅವಳಿಗೂ
ಕೊಕ್ಕಿನ ಕುರಿತು ಅಜ್ಞಾನ.
ಆ ಅಜ್ಞಾನದಲ್ಲೇ ಸುಖ.

ಒಮ್ಮೊಮ್ಮೆ ನಡು ಸುಡು
ಮಧ್ಯಾಹ್ನದಲ್ಲಿ
ಅವಳಿಗೆ ಕೆಂಪುಕೊಕ್ಕು
ಕುಟುಕಿದ ಹಾಗೆ ಅನ್ನಿಸಿ
ರೋಮಾಂಚನ.
ಅದು ಗಿಣಿಯ ಕೊಕ್ಕೋ
ಮುಂಗುಸಿಯ ಮೂಗೋ ಅನುಮಾನ.
ವಿಚಾರಿಸಲು ಒಳಗೊಳಗೆ
ಮುಜುಗರ
ಸಂಕೋಚ.

ಹೊರಗೆ ಬಂದು ನೋಡಿದರೆ
ಕವಲೊಡೆದ ಸಂಪಿಗೆ ಮರದ
ಟೊಂಗೆಮಧ್ಯಕ್ಕೆ ಕೊಕ್ಕು
ಮಸೆಯುತ್ತಿರುವ ಗಿಳಿರಾಯ.

ಮದುವೆಯ ಕತ್ತಲ
ಬೆತ್ತಲ ಇರುಳು
ಅದೇ ಗಿಣಿಕೊಕ್ಕು ಬಂದು
ಗುಟ್ಟನ್ನೆಲ್ಲ ಕೆದಕಿದ ನಂತರ
ಎಲ್ಲಾ ಯಥಾಪ್ರಕಾರ.


ಕೆಂಪುಕೊಕ್ಕಿನ ಗಿಣಿಗಳ
ಮೇಲಿನ ವ್ಯಾಮೋಹ ಕಳಕೊಂಡ
ಕತೆಯನ್ನು ಅವಳು ಮಗಳಿಗೆ
ಎಷ್ಟೋ ವರ್ಷದ ನಂತರ ಹೇಳಿದಳಂತೆ.

ಮಗಳು ನಕ್ಕು ನಡೆದದ್ದು
ಕಂಡು ಅವಳಿಗೆ ಅಪಾರ ದಿಗಿಲು.
ಮಧ್ಯಾಹ್ನದ ನಡು ಸುಡು
ಬಿಸಿಲು.
ಕಂಡೂ ಕಾಣಿಸದ ಹಾಗೆ
ಮಗಳು.
ಅವಳ ಮೈತುಂಬ
ಕೆಂಪುಕೊಕ್ಕಿನ ಕರಿನೆರಳು.

ದೂರದಲ್ಲಿ ಕಾಡಿಲ್ಲ,
ಹಸಿರು ಗಿಳಿಯಿಲ್ಲ
ಅದಕ್ಕೆ ಕೆಂಪುಕೊಕ್ಕಿಲ್ಲ
ಎಂದರೆ ಮಗಳು
ನಂಬಲೊಲ್ಲಳು.
ಇವಳಿಗೂ
ನಂಬಿಕೆಯಿಲ್ಲ.
ನಂಬಿಸಲೇ ಬೇಕೆಂಬ
ಹಠಕ್ಕೆ ಇದೀಗ ವಜ್ರ
ಮಹೋತ್ಸವ.

Friday, April 23, 2010

ಏಪ್ರಿಲ್ 25, 2010

ಈ ಭಾನುವಾರ ಎಲ್ಲಿಗೆ ಹೋಗುವುದು?
ಪ್ರತಿವಾರ ಕಾಡುವ ಪ್ರಶ್ನೆ ಇದು. ಆದರೆ, ಈ ವಾರ ಅದರ ಬಗ್ಗೆ ಯೋಚಿಸಬೇಕಿಲ್ಲ, ನಾನಂತೂ ರವೀಂದ್ರ ಕಲಾಕ್ಷೇತ್ರದಲ್ಲಿರುತ್ತೇನೆ.
ಆವತ್ತು, ದೇಶಕಾಲ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಜಾವೇದ್ ಅಖ್ತರ್ ವೇದಿಕೆಯಲ್ಲಿರುತ್ತಾರೆ ಎಂಬ ಖುಷಿಯ ಜೊತೆ, ನೂರಾರು ಗೆಳೆಯರು, ಸಹಲೇಖಕರು ಸಿಗುತ್ತಾರೆ ಎಂಬುದು ಮತ್ತೊಂದು ಸಂತೋಷ.
ಹಳೆಯ ದಿನಗಳು ನೆನಪಾಗುತ್ತಿವೆ. ಸಂಕೇತ್ -ನಾಗಮಂಡಲ- ನಾಟಕ ಆಡಿದಾಗ ಚಿತ್ರಕಲಾ ಪರಿಷತ್ತಿನಲ್ಲಿ ಸಂಭ್ರಮ, ಅದಕ್ಕೂ ಮುಂಚೆ ಬಿವಿ ಕಾರಂತರು ಮೂರು ನಾಟಕಗಳ ಪ್ರದರ್ಶನ ಏರ್ಪಡಿಸಿ ಥ್ರಿಲ್ ಕೊಟ್ಟಿದ್ದರು. ಆಮೇಲೆ, ಕುಸುಮಬಾಲೆ ನಾಟಕದ ಪ್ರದರ್ಶನ ನಡೆಯಿತು. ಅಡಿಗರ ಭೂಮಿಗೀತ ರಂಗಕ್ಕೆ ಬಂದಾಗೊಂದು ಸಂಭ್ರಮವಿತ್ತು. ಕಾರ್ನಾಡರ ಅಗ್ನಿ ಮತ್ತು ಮಳೆಯ ಇಂಗ್ಲಿಷ್ ಪ್ರದರ್ಶನ ಕೊಟ್ಟ ಖುಷಿಯೇ ಬೇರೆ. ಇತ್ತೀಚೆಗೆ ಸೂರಿ ನಿರ್ದೇಶಿಸಿದ ಇಬ್ಬರು ಮುದುಕರ ಕತೆ ಹೇಳುವ ನಾಟಕ ನಾ ತುಕಾರಾಮ್ ಅಲ್ಲ- ಹೀಗೆ ನಮ್ಮ ಖುಷಿಯನ್ನು ಹೆಚ್ಚಿಸುವ ಹಬ್ಬಗಳು ಆಗಾಗ ನಡೆಯುತ್ತಿರುತ್ತವೆ.
ಈ ಸಲದ ಹಬ್ಬಕ್ಕೆ ವಿವೇಕ ಶಾನಭಾಗರು ನೆಪ. ಅವರು ಅಕ್ಕರೆಯಿಂದ ರೂಪಿಸಿದ ದೇಶಕಾಲ ವಿಶೇಷ ಸಂಚಿಕೆಯ ಬಿಡುಗಡೆ ಮತ್ತೊಂದು ನೆಪ. ಬೆಳಗ್ಗೆ ಒಂಬತ್ತೂವರೆಗೆಲ್ಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿ, ಒಂದಿಷ್ಟು ಕಾಫಿ ಕುಡಿದು, ಹರಟುತ್ತಾ ನಮ್ಮ ಜ್ಞಾಪಕ ಚಿತ್ರಶಾಲೆಯನ್ನು ಅಲಂಕರಿಸಿಕೊಳ್ಳೋಣ.
ಬರ್ತೀರಲ್ಲ, ಈ ಭಾನುವಾರ ನಮ್ಮದು.

ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ..

ಬೆಂಗಳೂರಿನ ಬೇಸಗೆಯ ಬಣ್ಣ ಯಾವುದು ಒಂದು ಯೋಚಿಸುತ್ತಿದ್ದೆ. ನಮ್ಮರಲ್ಲಂತೂ ಬೇಸಗೆ ಸುಡುಹಳದಿ. ಮಳೆಗಾಲ ಕಡು ಹಸಿರು. ಚಳಿಗಾಲಕ್ಕೂ ಬೇಸಗೆಗೂ ಅಂಥ ವ್ಯತ್ಯಾಸವಿಲ್ಲ. ಒಂದಷ್ಟು ಮರಗಳು ಎಲೆಯುದುರಿಸಿ ನಿಂತದ್ದು ಬಿಟ್ಟರೆ, ಹಗಲಿಡೀ ಅದೇ ಸುಡುವ ಸೂರ್ಯ ಮತ್ತು ಆ ಬೆಳಕಲ್ಲಿ ಮತ್ತಷ್ಟು ಚಪ್ಪಟೆಯಾಗಿ ಕಾಣುವ ಚಿತ್ರಗಳು.
ಆದರೆ ಬೆಂಗಳೂರಲ್ಲಿ ಹಾಗಲ್ಲ. ಅಲ್ಲಿ ಋತುಗಳು ಬದಲಾದದ್ದೇ ಗೊತ್ತಾಗುವುದಿಲ್ಲ. ಇದೀಗ ವಸಂತ ಋತು ಅನ್ನುವುದಾಗಲೀ, ಇದು ಶಿಶಿರ ಅನ್ನುವುದಾಗಲೇ ಪ್ರಕೃತಿಯಿಂದ ಗೊತ್ತಾಗಬೇಕೇ ಹೊರತು ಕ್ಯಾಲೆಂಡರಿನಿಂದಲ್ಲ. ಬೆಂಗಳೂರಿನಿಂದ ಕೊಂಚ ಆಚೆಗೆ ಹೋದರೆ ಮುಂಜಾನೆ ಹೊತ್ತಲ್ಲಿ ದಟ್ಟ ಮಂಜು ಕವಿದಿರುತ್ತದೆ. ಆದರೆ ಬೆಂಗಳೂರಲ್ಲಿ ಮಂಜು, ಮಳೆ ಮತ್ತು ಬಿಸಿಲು ಮೂರೂ ಅಕಾಲಿಕ. ಇಲ್ಲಿ ಮಳೆಯಾದರೂ ಅದು ಬ್ರೇಕಿಂಗ್ ನ್ಯೂಸ್.
ನನಗೆ ಬೇಸಗೆ ಇಷ್ಟ. ಬೇಸಗೆಯಲ್ಲಿ ಪ್ರಕೃತಿ ಉಳಿದೆಲ್ಲ ಕಾಲಕ್ಕಿಂತ ಸಮೃದ್ಧವಾಗಿರುತ್ತದೆ. ಬೇಸಗೆಯ ಆರಂಭಕ್ಕೆ ಎಲ್ಲ ಮರಗಳೂ ಹೂ ಬಿಡುತ್ತವೆ. ನಡುಬೇಸಗೆಯ ಹೊತ್ತಿಗೆ ಫಲವತಿ ಪೃಥ್ವಿ. ಮಾವಿನ ಹಣ್ಣು, ಗೇರುಹಣ್ಣು, ನೇರಳೆ, ಪೇರಲ ಮತ್ತು ಹೆಸರಿಲ್ಲದ ನೂರೆಂಟು ಹಣ್ಣುಗಳ ಸುಗ್ಗಿಕಾಲ ಅದು. ಜಂಬುನೇರಳೆಯೆಂಬ ರುಚಿರುಚಿಯಾದ ಹಣ್ಣಿಗೆ ಮನಸ್ಸು ಹಂಬಲಿಸುತ್ತದೆ. ತುಮಕೂರು, ಗುಬ್ಬಿ, ಚಿಕ್ಕಮಗಳೂರು ಮುಂತಾದ ಕಡೆ ತಾಳೆಗಿಡಗಳು ಖರ್ಜೂರದ ರುಚಿಯ ಹೊಂಬಣ್ಣದ ಹಣ್ಣನ್ನು ಮೈತುಂಬ ತುಂಬಿಕೊಂಡು ಆಕರ್ಷಿಸುತ್ತವೆ.
ಇಂಥ ಬೇಸಗೆಯಲ್ಲೇ ಎಷ್ಟೋ ಸಲ ಕಾದಂಬರಿಗೊಂದು ವಸ್ತು ಸಿಗುತ್ತದೆ. ಯಾರೋ ಬರೆದ ರುಚಿಕಟ್ಟಾದ ಕಾದಂಬರಿಯೊಂದು ಹೇಗೋ ಕೈ ಸೇರುತ್ತದೆ. ಮೊನ್ನೆ ಹಾಗೇ ಆಯ್ತು. ಯುಸುನಾರಿ ಕವಾಬಾಟ ಎಂಬ ಜಪಾನ್ ಕಾದಂಬರಿಕಾರ ಬರೆದ ಸಾವಿರ ಪಕ್ಷಿಗಳು’ ಎಂಬ ಪುಟ್ಟ ಕಾದಂಬರಿ ಹೇಗೋ ಕೈಸೇರಿತು. ಹಳೆಯ ಕಾಲದ ಕಾದಂಬರಿ ಎಂದುಕೊಂಡು ನಿರ್ಲಕ್ಷಿಸಿದ್ದನ್ನು ಸೆಕೆಗೆ ನಿದ್ದೆ ಬಾರದ ರಾತ್ರಿ ಕೈಗೆತ್ತಿಕೊಂಡಾಗ ಬೆಳಗಿನ ತನಕ ಓದಿಸಿಕೊಂಡಿತು.
ತುಂಬ ವಿಚಿತ್ರವಾಗಿ ಬರೆಯುತ್ತಾನೆ ಕವಾಬಾಟ. ಕಿಕುಜಿ ಎಂಬ ಹುಡುಗನ ಕತೆ ಅದು. ಕಾದಂಬರಿಯಲ್ಲಿ ಎಲ್ಲೂ ತುಂಬ ಅಚ್ಚರಿ ಹುಟ್ಟಿಸುವ ಚಿತ್ರಗಳು ಎದುರಾಗುವುದಿಲ್ಲ. ಆ ಪುಟ್ಟ ಹುಡುಗ ತನ್ನ ತಂದೆಯನ್ನು ಗೆಲ್ಲುವ ಕತೆ ಅದು ಅಂತ ಮುನ್ನುಡಿ ಓದಿದ ಮೇಲೆ ನನಗೂ ಅನ್ನಿಸಿತು. ಕಾದಂಬರಿಯನ್ನಷ್ಟೇ ಓದಿದಾಗ ನೆನಪಾದದ್ದು ನಮ್ಮ ಬಾಲ್ಯ. ನಮ್ಮೂರು, ನಮ್ಮೂರಿನ ರೂಪಸಿಯರು ಮತ್ತು ಎಲ್ಲರೂ ಸಿಟ್ಟಿನಿಂದ ನೋಡುತ್ತಿದ್ದ ಆದರೆ, ನಮ್ಮಂಥ ಹುಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದ್ದ ದಿಟ್ಟೆಯರು.
ಹೇಗೆ ನಮ್ಮ ಅಭಿಪ್ರಾಯಗಳು ಬದಲಾಗುತ್ತಾ ಹೋಗುತ್ತವೆ ಎಂದು ಯೋಚಿಸುತ್ತೇನೆ. ಚಿಕ್ಕವರಿದ್ದಾಗ ಈ ರೂಪಸಿಯರು ಅಮ್ಮನ ಕಣ್ಣಿಗೋ ಅತ್ತಿಗೆಯ ಕಣ್ಣಿಗೋ ಸವತಿಯರ ಹಾಗೆ, ಸ್ಪರ್ಧಿಗಳ ಹಾಗೆ ಕಾಣಿಸುತ್ತಾರೆ ಎಂದು ನಮಗೆ ಅನ್ನಿಸಿರಲೇ ಇಲ್ಲ. ಅವರ ಜೀವನೋತ್ಸಾಹ, ಗಟ್ಟಿ ನಗು, ಆತ್ಮವಿಶ್ವಾಸ, ನಾಜೂಕು ಎಲ್ಲವೂ ಇಷ್ಟವಾಗುತ್ತಿತ್ತು. ಆದರೆ ಅದನ್ನು ಅದುಮಿಡುವ, ಹೀಗಳೆಯುವ ಹೆಂಗಸರನ್ನೂ ನೋಡಿದ್ದೆ. ಒಂದು ಹೊಸ ಸ್ನೇಹ ಅರಳಬಹುದು ಎಂಬ ನಿರೀಕ್ಷೆಯಲ್ಲಿ ಗಂಡಸರೂ ಆತಂಕದಲ್ಲಿ ಹೆಂಗಸರೂ ಬದುಕುತ್ತಿರುತ್ತಾರೆ ಎಂದು ಆಮೇಲೆ ಗೊತ್ತಾಯಿತು. ಈಗ ಅಂಥ ಆತಂಕ ಹುಡುಗರಲ್ಲೂ ಮನೆ ಮಾಡಿಕೊಂಡಿದೆ. ತನ್ನನ್ನು ಪ್ರೀತಿಸುವ ಹುಡುಗಿಯನ್ನು ತನಗಿಂತ ಸುಂದರನೊಬ್ಬ ಆಕರ್ಷಿಸಬಹುದು. ಅಷ್ಟಕ್ಕೂ ಅವಳಿಗೆ ಸೌಂದರ್ಯವಷ್ಟೇ ಮುಖ್ಯವಾಗದೇ ಹೋಗಬಹುದು. ಅವನ ಮಾತು, ಸಾಂತ್ವನ, ಧಾರಾಳತನ, ಮುಗ್ಧತೆ, ಸಂಕೋಚಗಳೂ ಅವಳನ್ನು ಸೆಳೆಯಬಹುದಲ್ಲ ಎಂದು ಅನೇಕರು ಯೋಚಿಸುತ್ತಾರೆ. ಹಿಂದಿನ ಕಾಲದಲ್ಲಿ ಆಗುತ್ತಿದ್ದ ಹಾಗೆ, ಮದುವೆಯೆಂಬ ಬಂಧನ ಗಂಡನ್ನಾಗಲೀ ಹೆಣ್ಣನ್ನಾಗಲೀ ಕಟ್ಟಿಹಾಕಲಾರದು.
ಕವಾಬಾಟನ ಕಾದಂಬರಿಯಲ್ಲೂ ಅದೇ ಆಗುತ್ತದೆ. ಅವನ ಅಪ್ಪನಿಗೆ ಇಬ್ಬರು ಪ್ರೇಯಸಿಯರು: ಚಿಕಕೋ ಮತ್ತು ಓಟ. ಅವಳಲ್ಲಿ ಒಬ್ಬಳು, ಇನ್ನೊಬ್ಬಳಿಂದ ಕಿಕುಜಿಯನ್ನು ಕಾಪಾಡಲು ಹೆಣಗಾಡುತ್ತಿರುತ್ತಾಳೆ. ಕೊನೆಗೂ ಕಿಕುಜಿಯನ್ನು ಆ ಇನ್ನೊಬ್ಬಳೇ ಸೆಳೆಯುತ್ತಾಳೆ. ಅವಳ ಪ್ರೀತಿಯಲ್ಲೊಂದು ಸಹಜತೆ ಅವನಿಗೆ ಕಾಣಿಸುತ್ತದೆ. ತಾನು ತಪ್ಪು ಮಾಡುತ್ತಿದ್ದೇನೆ ಎಂದು ಆಕೆಯೇ ಹೇಳಿಕೊಂಡರು ಕೂಡ ಕಿಕುಜಿಗೆ ಪಾಪಪ್ರಜ್ಞೆ ಕಾಡುವುದಿಲ್ಲ.
ಅವನನ್ನು ಇಮುನಾರ ಎಂಬ ಹುಡುಗಿಗೆ ಕೊಟ್ಟು ಮದುವೆ ಮಾಡುವುದು ಚಿಕಕೋಳ ಉದ್ದೇಶ. ಕಿಕುಜಿಗೂ ಅವಳು ಮತ್ತು ಅವಳ ಕೈಯಲ್ಲಿರುವ ಸಾವಿರ ಕ್ರೌಂಚಪಕ್ಷಿಗಳ ಕರ್ಚೀಫು ಇಷ್ಟ. ಆದರೆ ಸಂಬಂಧಗಳ ಮಾತು ಬಂದಾಗ ಅವನು ವರ್ತಿಸುವ ರೀತಿಯೇ ಬೇರೆ. ತನ್ನ ಅಪ್ಪನನ್ನು ಸೆಳೆದುಕೊಂಡಿದ್ದ ಓಟಾಳ ಸಂಗ ಅವನಿಗೆ ಹಿತವೆನ್ನಿಸುತ್ತದೆ. ಅದಕ್ಕೆ ಕಾರಣ ಅವನಿಗೆ ಓಟಾಳ ಮೇಲಿರುವ ಪ್ರೀತಿಯೋ, ಅಪ್ಪನ ಮೇಲಿರುವ ದ್ವೇಷವೋ ಅನ್ನುವುದೂ ಅರ್ಥವಾಗುವುದಿಲ್ಲ. ಇಂಥ ಅನಿರೀಕ್ಷಿತ ಘಟನೆಗಳ ಮೂಲಕವೇ ಇಡೀ ಕತೆ ಸಾಗುತ್ತದೆ. ಅವು ನಮ್ಮ ಪಾಲಿಗೆ ಅನಿರೀಕ್ಷಿತ, ಕತೆಯ ಪಾತ್ರಕ್ಕಲ್ಲ ಎಂಬ ಕಾರಣಕ್ಕೆ ಅದು ಇಷ್ಟವಾಗುತ್ತದೆ.
ಇಂಥ ಸರಳ ಕತೆಗಳನ್ನು ಓದುವುದು ಸದ್ಯದ ಖುಷಿ. ಬೇಸಗೆಯ ಮಧ್ಯಾಹ್ನಗಳಲ್ಲಿ ಸುಮ್ಮನೆ ಕೂತಾಗ ಕಾರಂತರ ಸರಸಮ್ಮನ ಸಮಾಧಿ’ಯ ಸರಸಿ, ಸೀತಕ್ಕ ಕಣ್ಮುಂದೆ ಬರುತ್ತಾರೆ. ಅವರ ಮೂಲಕ ಕಾದಂಬರಿಯನ್ನು ನೋಡಬೇಕು ಅನ್ನಿಸುತ್ತದೆ. ಇದ್ದಕ್ಕಿದ್ದ ಹಾಗೆ de-construction ಥಿಯರಿ ನೆನಪಾಗುತ್ತದೆ. ಓದಿದ ಕತೆಯನ್ನು ಮತ್ತೊಂದು ಕ್ರಮದಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವಂತೆ ಅದು. ಲೇಖಕನ ದೃಷ್ಟಿಕೋನ ಬದಿಗಿಟ್ಟು, ಮತ್ತೊಂದು ಪಾತ್ರದ ದೃಷ್ಟಿಕೋನದಿಂದ ನೋಡಿದಾಗ ಕಾದಂಬರಿಯ ನೆಲೆಯೇ ಬದಲಾಗಬಹುದಲ್ಲ. ಉದಾಹರಣೆಗೆ ನನ್ನವಳು ನನ್ನೆದೆಯ ಹೊನ್ನಾಡನಾಳುವಳು, ಬೆಳಗುಗೆನ್ನೆಯ ಚೆಲುವೆ ನನ್ನ ಹುಡುಗಿ ಕವಿತೆಯಲ್ಲಿ ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ, ಬಂಗಾರದಂಥ ಹುಡುಗಿ ಎಂಬ ಸಾಲು ಬರುತ್ತದೆ. ಇದು ಕವಿಯ ಆಶಯವೋ ಅವಳ ಸ್ಥಿತಿಯೋ ಅನ್ನುವುದು ನಮಗೆ ಗೊತ್ತಿಲ್ಲ. ನಮಗೂ ಕೂಡ ಬಂಗಾರದೊಡವೆಗಳ ಬಯಸದ ಬಂಗಾರದಂಥ ಹುಡುಗಿ ಆ ಕ್ಷಣ ಇಷ್ಟವಾಗುತ್ತಾಳೆ. ಅದೇ, ಡಿವಿಜಿಯವರ ಅಂತಃಪುರಗೀತೆ ಏನೀ ಮಹಾನಂದವೇ’ ಕವಿತೆಯಲ್ಲಿ ಆಭರಣ ಕೊಟ್ಟುಕೊಂಡ ಸುಂದರಿಯ ವರ್ಣನೆ ಬರುತ್ತದೆ. ಆಗ ನಮಗೆ ಆಭರಣಗಳಿಂದ ಅಲಂಕೃತಳಾದ ಹುಡುಗಿ ಇಷ್ಟವಾಗತೊಡಗುತ್ತಾಳೆ. ಹೀಗೆ ನಮ್ಮೊಳದೇ ಒಂದು ಸಂಘರ್ಷವೋ ವಿರೋಧಾಭಾಸವೂ ಸೃಷ್ಟಿಯಾಗುತ್ತದೆ. ಅದನ್ನು ನಾವು ಹೇಗೆ ಮೀರುತ್ತೇವೆ ಅನ್ನುವುದು ನಿಜಕ್ಕೂ ನಮ್ಮ ಮುಂದಿರುವ ಸವಾಲು.
ಬೇಸಗೆಯಲ್ಲಿ ವಿಚಿತ್ರವಾದ ಹೂವುಗಳೂ ಅರಳುತ್ತವೆ. ಸುಗಂಧ ಬೀರುತ್ತಾ ಇಡೀ ಕಾಡನ್ನೇ ಪುಷ್ಪವತಿಯನ್ನಾಗಿ ಮಾಡುತ್ತವೆ. ಅವುಗಳತ್ತ ನಮ್ಮ ಕಣ್ಣೇ ಹಾಯುವುದಿಲ್ಲ. ತೇಜಸ್ವಿಯ ಕಾದಂಬರಿಯಲ್ಲಿ ಬರುವ ಹಕ್ಕಿಗಳ ಹೆಸರನ್ನಷ್ಟೇ ಕೇಳಿ ಖುಷಿಪಟ್ಟಿದ್ದ ಗೆಳೆಯ, ಅದ್ಭುತ ಛಾಯಾಗ್ರಾಹಕ ಸತ್ಯಬೋಧ ಜೋಶಿ, ಅವನ್ನೆಲ್ಲ ಚಾರ್ಮಾಡಿ ಘಾಟಿಯ ಉದ್ದಕ್ಕೂ ನೋಡಿದಾಗ ಬೆರಗಾದರು. ಸಾಹಿತ್ಯದಿಂದಲೋ ಸುತ್ತಾಟದಿಂದಲೋ ಏನು ಉಪಯೋಗ ಎಂದು ಕೇಳುವವರಿಗೆ ಅವರ ಮಾತು ಉತ್ತರವಾಗಬಹುದು: ಇಂಥ ಪ್ರಯಾಣ ನಂಗಿಷ್ಟ. ನನ್ನ ಮಗಳಿಗೆ ಮುಂದೆ ನಾನು ಇಂಥ ಕಡೆ ಹೋಗಿದ್ದೆ, ಇಂಥ ಹಕ್ಕಿ ನೋಡಿದ್ದೆ ಅಂತ ಹೇಳಬಹುದು. ಇಲ್ಲದೇ ಹೋದರೆ ನಾನೇನು ಹೇಳಲಿ, ನನ್ನ ಜಗತ್ತು ಯಾವುದು ಅಂತ ಹೇಗೆ ತೋರಿಸಲಿ. ನನ್ನಲ್ಲಿ ಅವಳಿಗೆ ತೋರಿಸೋದಕ್ಕೆ ದೊಡ್ಡ ಮನೆಯೋ ವೈಭವದ ಬದುಕೋ ಇಲ್ಲ. ಅವಳಿಗೆ ನಾನು ಕೊಡಬಹುದಾದದ್ದು ನನ್ನ ಇಂಥ ಅನುಭವದ ತುಣುಕೊಂದನ್ನು ಮಾತ್ರ.
ಮಕ್ಕಳಿಗೆ ಅವೆಲ್ಲ ಬೇಕಾ ಎಂಬ ಪ್ರಶ್ನೆಯೂ ಇಂಥ ಹೊತ್ತಲ್ಲಿ ಅನೇಕರನ್ನು ಕಾಡೀತು. ಆದರೆ ಎರಡೂ ಜಗತ್ತನ್ನು ಕಂಡುಕೊಳ್ಳುವುದು ಅವರವರ ಭಾಗ್ಯ. ಆದರೆ ಅದಕ್ಕೆ ಬೇಕಾದ ಅವಕಾಶವನ್ನಷ್ಟೇ ನಾವು ಕಲ್ಪಿಸಬಹುದು. ನಮ್ಮ ಬಾಲ್ಯದ
ಜಗತ್ತೂ ಹಾಗೇ ಇತ್ತೆಂದು ಕಾಣುತ್ತದೆ. ಬಹುಶಃ ಅಲ್ಲಿ ಮತ್ತಷ್ಟು ಸಂಘರ್ಷಗಳಿದ್ದವೇನೋ?
ಈ ವರ್ಷ ಮಾವಿನಮಿಡಿಯಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಮಳೆ ಸುರಿಯುತ್ತದೆ. ದೇವಸ್ಥಾನದ ಜೀರ್ಣೋದ್ಧಾರ ಆಗಿಲ್ಲ, ಭಕ್ತಾದಿಗಳು ಹೆಚ್ಚಾಗಿದ್ದಾರೆ. ದೇವರ ಮಹಿಮೆಯ ಬಗ್ಗೆ ಪ್ರಚಾರ ಬೇಕು, ದುಡ್ಡಂತೂ ಧಾರಾಳವಾಗಿ ಹರಿದು ಬರುತ್ತದೆ. ಭಕ್ತರು ಉದಾರಿಗಳಾಗಿದ್ದಾರೆ.
ಉದಾರಿಗಳಾಗಬೇಕಾದದ್ದು ಭಕ್ತರೋ ದೇವರೋ ಎಂಬ ಗೊಂದಲದಲ್ಲಿ ಅರ್ಚಕರು ನಿಂತಿದ್ದರು. ದೇವರು ಉದಾರಿಯಾದರೆ ಇಡಿ ಪ್ರದೇಶ ಸುಭಿಕ್ಷವಾಗುತ್ತದೆ. ಭಕ್ತರು ಉದಾರಿಯಾದರೆ ದೊಡ್ಡ ದೇವಸ್ಥಾನ ಕಟ್ಟುತ್ತಾರೆ. ರಾಜಮಹಾರಾಜರು ಕಟ್ಟಿಸಿದ ದೇವಾಲಯಗಳನ್ನು ಪ್ರಾಚ್ಯವಸ್ತು ಇಲಾಖೆ ಶಿಲ್ಪಕಲೆಯೆಂಬ ಹೆಸರಲ್ಲಿ ಕಾಪಾಡುತ್ತದೆ. ಅಲ್ಲಿ ದೇವರೂ ಇಲ್ಲ. ಭಕ್ತಿಯೂ ಇಲ್ಲ, ಕೇವಲ ಸೌಂದರ್ಯ ಮಾತ್ರ. ಈಗಿನ ಹೊಸ ದೇವಾಲಯಗಳಲ್ಲಿ ಸೌಂದರ್ಯವೂ ಇಲ್ಲ, ಭಕ್ತಿಯೂ ಇಲ್ಲ. ಯಾರೋ ಜ್ಯೋತಿಷಿ ಎಳ್ಳು ಕೊಡಿ, ನೀರು ಕೊಡಿ, ಉಂಗುರ ಧರಿಸಿ, ಹಾರ ಹಾಕಿಕೊಳ್ಳಿ, ಹರಕೆ ಹೇಳಿ ಎಂದು ಸಲಹೆ ಕೊಡುತ್ತಾ ಭಯಂಕರ ರಗಳೆ ಮಾಡುತ್ತಿರುತ್ತಾರೆ. ಅದನ್ನು ನಂಬಿಕೊಂಡು ಹುಡುಗ ಹುಡುಗಿಯರೂ ತಾಯಿತ ಹಾಕಿಕೊಂಡು, ಕೈಗೊಂದು ದಾರ ಕಟ್ಟಿಕೊಂಡು ಓಡಾಡುತ್ತಾರೆ.
ನಮ್ಮ ಆತ್ಮವಿಶ್ವಾಸ, ಆರೋಗ್ಯವಂತ ಉಡಾಫೆ, ತಮಾಷೆ ಮಾಡುವ ಗುಣ ಮತ್ತು ನಮ್ಮ ಮೇಲೆ ನಮಗೇ ಇರುವ ನಂಬಿಕೆ ಕೂಡ ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿಕೊಂಡಿದೆಯೇನೋ ಎಂದು ಅನುಮಾನವಾಗುತ್ತದೆ.