Friday, October 22, 2010

ನೀ ತಿರುಗಿ ನೋಡದಿರು ಇತ್ತ, ಮುಂದಿನದು ದೇವರ ಚಿತ್ತ

ನಡೆಯುತ್ತಿದ್ದೆ. ಇಳಿಬಿಸಿಲಿನ ಸಂಜೆ. ಆಗಷ್ಟೇ ಮಳೆ ನಿಂತಿತ್ತು. ತುಂತುರು ಹನಿ ಗಾಳಿಗೆ ಓರೆಯಾಗಿ ಮೈಯನ್ನು ತಬ್ಬುತ್ತಿತ್ತು. ಅಕಾಲದಲ್ಲಿ ತಬ್ಬುವ ಪ್ರೇಮದಂತೆ. ಪೂರ್ತಿ ತೋಯಿಸದೇ, ಒಣಗಿರುವುದಕ್ಕೂ ಬಿಡದೇ ಒದ್ದೆಯಾಗಿಸುವ ಪ್ರೀತಿ. ಬೆಳ್ಳಗಿನ ಶರಟಿನ ತುಂಬ ಹನಿಹನಿ ಕವನ.

ಇಳಿವಯಸ್ಸಲ್ಲಿ ಹುಟ್ಟುವ ಪ್ರೀತಿಯ ಬಗ್ಗೆ ಯೋಚಿಸುತ್ತಿದ್ದೆ. ನನ್ನ ಗೆಳೆಯರ ಪೈಕಿ ಅನೇಕರು ಮದುವೆಯಾಗಿಲ್ಲ. ಅವರ ಬಿಡುಬೀಸು ಬದುಕು ನಮ್ಮನ್ನು ರೋಮಾಂಚಗೊಳಿಸುತ್ತಿತ್ತು. ಅವರ ಕಟ್ಟುಪಾಡುಗಳಿಲ್ಲದ ಹಗಲು, ಕರ್ತವ್ಯರಹಿತ ರಾತ್ರಿ ಮತ್ತು ಸಮಯಪ್ರಜ್ಞೆ ಬಯಸದ ಮುಂಜಾನೆಗಳು ನಮ್ಮ ಬಾಲ್ಯವನ್ನು ನೆನಪಿಸುತ್ತಿದ್ದವು. ಅಂಥ ಪುಣ್ಯಾತ್ಮರು ತಾರುಣ್ಯದ ದಿವಸಗಳನ್ನು ವಿಸ್ತರಿಸಿಕೊಂಡವರಂತೆ ಕಾಣಿಸುತ್ತಿದ್ದರು.

ಅವರ ಮಧ್ಯೆ ಮದುವೆ ಮುರಿದುಕೊಂಡವರಿದ್ದರು. ಜೊತೆಗಿರೋಕೆ ಆಗೋಲ್ಲ ಅನ್ನಿಸ್ತು, ಬಿಟ್ಟು ಬಂದೆ ಅಂತ ನೇರಾನೇರ ಹೇಳಿಕೊಳ್ಳುತ್ತಾ ಅದೊಂದು ದೊಡ್ಡ ಸಂಗತಿಯೇ ಅಲ್ಲವೆಂಬಂತೆ ಅವರೆಲ್ಲ ಓಡಾಡುತ್ತಿದ್ದರು. ಕಳಚಿಕೊಂಡ ಖುಷಿ ಅವರ ಕಣ್ಣಲ್ಲಿ ಪ್ರತಿಫಲಿಸದೇ ಇದ್ದರೂ, ಅದೊಂದು ಬಿಡುಗಡೆ ಎಂಬ ನಿಟ್ಟುಸಿರನ್ನಂತೂ ಕೇಳಬಹುದಾಗಿತ್ತು. ಎಷ್ಟೋ ಸಲ ತುಂಬ ಅನ್ಯೋನ್ಯವಾಗಿದ್ದಾರೆ ಎಂದು ನಾನು ಕಲ್ಪಿಸಿಕೊಂಡ ಸಾಂಗತ್ಯದಲ್ಲಿ ಕೂಡ ಅಪಸ್ವರ ಮೂಡುತ್ತಿತ್ತು. ಲೆಕ್ಕಾಚಾರ ಎಲ್ಲಿ ತಪ್ಪಾಗಿದೆ ಎನ್ನುವುದು ಅರ್ಥವೇ ಆಗುತ್ತಿರಲಿಲ್ಲ.

ಅರ್ಥ ಮಾಡಿಕೊಳ್ಳುವುದು, ಹೊಂದಿಕೊಂಡು ಬಾಳುವುದು ಕಷ್ಟ, ಅನಿವಾರ್ಯ. ಹೊಂದಿಕೊಳ್ಳುವುದು ಎಂದರೆ ಹೊಂದಾಣಿಕೆ ಮಾಡಿಕೊಳ್ಳುವುದಲ್ಲ. ಎಷ್ಟೋ ಸಲ ಇಬ್ಬರ ಅಭಿರುಚಿ, ಆಸಕ್ತಿ, ಕ್ಷೇತ್ರ ಒಂದೇ ಆಗಿರುತ್ತದೆ. ಹಾಗಿದ್ದರೂ ಪರಸ್ಪರರಲ್ಲಿ ಹೊಂದಿಕೆ ಇರುವುದಿಲ್ಲ. ವಿಭಿನ್ನ ಅಭಿರುಚಿಯ ಮಂದಿ ಎಷ್ಟೋ ಸಲ ಒಟ್ಟಿಗೆ ಬಾಳುತ್ತಾರೆ. ಈ ವಿಚಿತ್ರಕ್ಕೆ ಅರ್ಥವೇನು ಎಂದು ಹುಡುಕಹೊರಟರೆ ಸಿಗುವುದು ಮತ್ತಷ್ಟು ಪ್ರಶ್ನೆಗಳು.

ಒಳತೋಟಿಯೇ ಬೇರೆ. ಕನಸುಗಳೇ ಬೇರೆ, ಹುಡುಕಾಟವೇ ಬೇರೆ. ಎಷ್ಟೋ ಸಂಜೆಗಳು ವಿನಾಕಾರಣ ಖುಷಿಕೊಡುತ್ತವೆ. ಹಾಗೆ ಖುಷಿಕೊಟ್ಟ ಸಂಜೆಗಳೇ ಎಷ್ಟೋ ಸಲ ನೀರಸ ಅನ್ನಿಸುತ್ತವೆ. ಪ್ರಕೃತಿಗೂ ಮನಸ್ಸಿಗೂ ಸಂಬಂಧ ಇದೆ ಎಂದು ಹುಡುಕಿಕೊಂಡು ಹೊರಟರೆ ಎದುರಾಗುವುದು ಮತ್ತದೇ ಪ್ರಶ್ನೆ. ಆ ಸಂಜೆ ಯಾಕೆ ಹಾಗೆ, ಈ ಸಂಜೆಯ ಪಾಡೇಕೆ ಹೀಗೆ?

ಮಧುರವಾದದ್ದು ರುಚಿಯೆನ್ನಿಸಿದ್ದು ಸದಾ ರುಚಿಯಾಗಿಯೇ ಉಳಿಯುತ್ತದೆ ಎಂಬ ನಂಬಿಕೆ ಕೂಡ ಸುಳ್ಳಾಗುವುದುಂಟು. ಅದನ್ನು ಸುಳ್ಳಾಗಿಸುವವರೂ ನಾವೇ. ನಮ್ಮ ನಿರ್ಧಾರಗಳ ಹಿಂದಿರುವುದು ನಮ್ಮ ವಿವೇಕ ಅಲ್ಲ, ಹೃದಯ ಅಲ್ಲ. ಹಂಬಲ ಮಾತ್ರ. ಹಂಬಲದ ಬೆನ್ನಿಗೆ ಬಿದ್ದರೆ ಅಪಾಯ ಖಾತ್ರಿ ಎಂದು ಗೊತ್ತಿದ್ದೂ ಹಾಗೊಂದು ಹುಚ್ಚು ಹುದಲಿಗೆ ಮನಸ್ಸು ಕಾಲು ಹಾಕುತ್ತದೆ. ಮುಂದಿನದು ದೇವರ ಚಿತ್ತ!

ದೇವರು ಅಂದಾಕ್ಷಣ ವಿಲಕ್ಷಣ ನೆನಪು. ಯಾರ ಮುಂದೆ ಎಲ್ಲರೂ ಸಾಯಬೇಕೋ ಸಾಯಬಹುದೋ ಸಾಯುತ್ತಾರೋ ಅವರು ದೇವರು ಎಂದರು ಲಕ್ಷ್ಮೀಶ ತೋಳ್ಪಾಡಿ. ಯಾವುದರ ಮುಂದೆ ಎಲ್ಲರೂ ಬೇಯುತ್ತಾರೋ ಬೇಯಬಹುದೋ ಬೇಯಬೇಕೋ ಅದು ಹಂಬಲ ಎನ್ನಬೇಕೆನಿಸಿತು. ನಮ್ಮ ಆರು ವೈರಿಗಳ ಪಟ್ಟಿಯಲ್ಲಿ, ಕಾಮ,ಕ್ರೋಧ, ಮದ, ಲೋಭ, ಮೋಹ, ಮಾತ್ಸರ್ಯಗಳಿವೆ. ಹಂಬಲ ಇಲ್ಲ. ಹಾರಿ ಹಾರೈಸುವೆ, ಹಲವ ಹಂಬಲಿಸುವೆ, ತೋರಯ್ಯ ಕರುಣಾ ಎಂದು ಕಂಬಾರರು ಹಾಡಿದ್ದು ನೆನಪಾದಾಗೆಲ್ಲ ಹಂಬಲವೂ ಕಣ್ಮುಂದೆ ಹಾಯುತ್ತದೆ.

ಹಂಬಲಕ್ಕೆ ಸುದೀರ್ಘ ಆಯಸ್ಸಿಲ್ಲ, ಪ್ರೇಮದ ಹಾಗೆ ಅದು ನಿರಂತರ ಕಾಡುವುದಿಲ್ಲ. ವಿರಹದ ಹಾಗೆ ವಿಪರೀತ ಬಾಧಿಸುವುದಿಲ್ಲ. ಹಳಹಳಿಕೆಯ ಹಾಗೆ ಮತ್ತೆ ಮತ್ತೆ ಸುಳಿಯುವುದಿಲ್ಲ, ಅವಮಾನದಂತೆ ಅಪರಾತ್ರಿಯಲ್ಲೆಲ್ಲ ಹೆಡೆಯೆತ್ತಿ ನಿಂತು ಹಂಗಿಸುವುದಿಲ್ಲ. ಸಂಜೆಯಾಕಾಶದ ಹಾಗೆ, ಆ ಕೆಂಪಿನ ಹಾಗೆ ಕೊಂಚ ಹೊತ್ತು ಇದ್ದು ಹೊರಟು ಹೋಗುತ್ತದೆ. ಹಾಗಿದ್ದು ಹೋದ ಗಳಿಗೆಯಲ್ಲಿ ಏನೂ ಮಾಡದೇ ಸುಮ್ಮನಿದ್ದರೆ?

ಹಂಬಲ ಹಾಗೆ ಸುಮ್ಮನಿರಗೊಡುವುದಿಲ್ಲ. ಒಂದು ಅರ್ಥದಲ್ಲಿ ಅದು ಟೆಂಪ್ಟೇಶನ್ನು. ಲಾಲಸೆಯ ಹಾಗೆ ಹಂಬಲಕ್ಕೂ ಮೈತುಂಬ ನಿಮಿರು. ಅದರ ಆಯಸ್ಸು ಕಡಿಮೆ ಎಂದು ನಿಟ್ಟುಸಿರಿಟ್ಟವರು, ನಂತರದ ದಿನಗಳಲ್ಲಿ ಅದರಿಂದ ಪಾಡುಪಟ್ಟ ಉದಾಹರಣೆಗಳಿವೆ. ಅದರ ಆಯಸ್ಸು ಕಡಿಮೆ ನಿಜ. ಆದರೆ ಅದು ಮರುಕಳಿಸುತ್ತಿರುತ್ತದೆ. ವೈರಲ್ ಜ್ವರದ ಹಾಗೆ. ಬೆಳಗ್ಗೆ ಮೈ ಬೆಚ್ಚಗೆ, ಮಧ್ಯಾಹ್ನ ಎಲ್ಲ ತಹಬಂದಿಗೆ, ಸಂಜೆ ಹೊತ್ತಿಗೆ ಮತ್ತೆ ಮೈಬಿಸಿ. ಅದಕ್ಕೆ ಮದ್ದೇ ಇಲ್ಲ, ಕಾಲಕ್ರಮೇಣ ಕಡಿಮೆ ಆಗುತ್ತದೆ ಎನ್ನುವುದು ಬುದ್ಧಿವಂತರ ಸಿದ್ಧ ಉತ್ತರ.

********

ಅಂಥ ಹಂಬಲದ ಸುಳಿಗೆ ಸಿಕ್ಕವರಿಗೆ ಇಳಿಹೊತ್ತಲ್ಲಿ ಪ್ರೇಮೋದಯವಾಗುವುದಂತೆ. ಒಟ್ಟಿಗೇ ನೆಟ್ಟ ಮಂದಾರದ ಗಿಡಗಳ ಪೈಕಿ ಕೆಲವು ನಿಧಾನವಾಗಿ ಹೂ ಬಿಡುತ್ತವೆ. ಪ್ರೇಮ ಹುಟ್ಟುವುದಕ್ಕೆ ಯಾವ ವಯಸ್ಸಾದರೇನಂತೆ. ಅಷ್ಟಕ್ಕೂ ಪ್ರೇಮದ ಆಯಸ್ಸೆಷ್ಟು?

ಪ್ರೀತಿ ಹೆಚ್ಚೆಂದರೆ ಆರೋ ಎಂಟೋ ವರ್ಷ ಬದುಕಿರಬಹಲ್ಲದು. ಕ್ರಮೇಣ ಅದು ಚಟವಾಗಿ ಬದಲಾಗುತ್ತದೆ. ಐ ಲವ್ ಯೂ ಅಂತ ಎಷ್ಟು ಸಲ ಹೇಳಬೇಕು ಜೀವನದಲ್ಲಿ, ಒಂದೇ ಒಂದು ಸಲ ಹೇಳಿದರೆ ಸಾಲದಾ ? ಮತ್ತೆ ಮತ್ತೆ ಹೇಳಬೇಕು ಅಂತ ನಿರೀಕ್ಷಿಸುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಹಾಗೆ ಹೇಳುವುದು ಕೂಡ ನಮಸ್ಕಾರ, ಚೆನ್ನಾಗಿದ್ದೀರಾ?’ ಎಂದಷ್ಟೇ ಯಾಂತ್ರಿಕವಾಗಿಬಿಟ್ಟರೆ?

ಅವಳು ಪ್ರೀತಿಸುತ್ತಿಲ್ಲ ಎಂಬ ಅನುಮಾನ ಅವನಿಗೆ. ವಯಸ್ಸಾಗುತ್ತಾ ಆಗುತ್ತಾ ಆ ಅನುಮಾನ ಮತ್ತಷ್ಟು ದೃಢವಾಗುತ್ತಾ ಹೋಗುತ್ತದೆ. ದೃಢವಾಗುತ್ತಾ ಹೋಗುವುದು ಅನುಮಾನವೇ ಅಂದ ಮೇಲೆ ನಮ್ಮ ಸುಳ್ಳನ್ನು ನಾವು ನಂಬುತ್ತಿದ್ದೇವೆ ಎಂದೇ ಅರ್ಥ. ಮೊನ್ನೆ ಲಕ್ಷ್ಮೀಶ ತೋಳ್ಪಾಡಿ ಮಾತಾಡುತ್ತಾ ಮತ್ತೊಂದು ಸಂಗತಿ ಹೇಳಿದರು:

ಅರ್ಜುನನಲ್ಲಿ ಉಂಟಾದ ವಿಷಾದ, ತನ್ನವರನ್ನು ಕೊಲ್ಲಬೇಕಲ್ಲ ಎಂಬ ಸಂಕಟ ಅವನಲ್ಲಿ ನಿಜವಾಗಿಯೂ ಹುಟ್ಟಿದ್ದಲ್ಲ. ಅಂಥ ಸಂಕಟ ಹುಟ್ಟುವಂತೆ ಮಾಡಿದವನು ದುರ್ಯೋಧನ. ಅವನ ತಂತ್ರ ಅದು. ಆದರೆ ಅಂಥ ಭಾವನೆ ಹುಟ್ಟಿಸಿದ್ದು ಬೇರೆಯವರ ತಂತ್ರವೇ ಆಗಿದ್ದರೂ, ಅರ್ಜುನ ಪ್ರಾಮಾಣಿಕವಾಗಿ ವಿಷಾದಕ್ಕೆ ಒಳಗಾಗಿದ್ದರೆ ಅವನು ಗೆಲ್ಲುತ್ತಾನೆ. ಪ್ರೀತಿಯಲ್ಲೂ ಅಷ್ಟೇ. ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಅವಳನ್ನು ಅವನು ಕಪಟದಿಂದ ನಂಬಿಸಲು ಯತ್ನಿಸಿದರೂ ಕೂಡ, ಅವನ ಪ್ರೀತಿ ಪ್ರಾಮಾಣಿಕವಾದದ್ದೇ ಆಗಿದ್ದರೆ ಅವನು ಗೆಲ್ಲುತ್ತಾನೆ. ಅಷ್ಟಕ್ಕೂ ಪ್ರೀತಿಯಲ್ಲಿ ಗೆಲ್ಲುತ್ತಾ ಹೋಗುವುದು ಅಂದರೇನು?

ಮತ್ತೆ ಇಳಿವಯಸ್ಸಿನ ಪ್ರೀತಿಗೆ ಬಂದರೆ ಮನಸ್ಸು ಕಂಗಾಲು. ಐವತ್ತಮೂರು ದಾಟಿದ ಗೆಳೆಯನೊಬ್ಬ ಪ್ರೀತಿಸಲು ಹೊರಟು ಅದು ನಿಜವಾದ ಪ್ರೀತಿಯೆಂದೇ ನಂಬಿ, ಅವಳೂ ಕೂಡ ಹಾಗಂತ ನಂಬಿಸಿ, ಮೊನ್ನೆ ಮೊನ್ನೆ ಅದು ಹಾಗಲ್ಲ ಎಂದು ಗೊತ್ತಾಗಿ ನಿಟ್ಟುಸಿರಿಟ್ಟ. ಆ ನಿಟ್ಟುಸಿರಿನಲ್ಲಿ ಹಂಬಲ ಇರಲಿಲ್ಲ, ವಿರಹ ಇರಲಿಲ್ಲ, ಪಾರಾಗಿ ಬಂದ ಸಂತೋಷವೂ ಇರಲಿಲ್ಲ. ಅವಳ ಕುರಿತು ಸಿಟ್ಟೂ ಇರಲಿಲ್ಲ. ತಾನು ಮಾಡಿದ್ದು ತಪ್ಪು ಎಂಬ ವಿಷಾದವೂ ಇರಲಿಲ್ಲ. ತುಂತುರು ಮಳೆಗೆ ಮೈಯೊಡ್ಡಿಕೊಂಡು ಕೊಂಚ ದೂರ ನಡೆಯುತ್ತಿದ್ದಂತೆ ಮಳೆ ನಿಂತು, ಬಿಸಿಲು ಶುರುವಾಗಿ ಮತ್ತೆ ಮೈ ಒಣಗಿ ಬೆಚ್ಚಗಾದ ಹಾಗೆ. ಮತ್ತೊಂದು ತುಂತುರು ಮಳೆಗೆ ಮನಸ್ಸು ಹಾತೊರೆಯುತ್ತದಾ? ಹಾತೊರೆದು, ಕಾದು ಕಾದು ಬರುವ ತುಂತುರು

ಮಳೆಗಿಂತ ಸುಳಿವು ಕೊಡದೇ ಬರುವ ಮಳೆಯೇ ಆಪ್ಯಾಯಮಾನ.

ಅವನು ಹೆಂಡತಿಯ ಜೊತೆ ಬೇಟೆಗೆ ಹೋಗಿದ್ದಾನೆ. ಜೊತೆಗೆ ಹೆಂಡತಿಯ ಪ್ರಿಯಕರನೂ ಇದ್ದಾನೆ. ಆ ಪ್ರಿಯಕರನನ್ನು ಕಾಡಿನಲ್ಲಿ ಕೊಲ್ಲಬೇಕು ಎನ್ನುವುದು ಅವನ ಸಂಚು. ಆದರೆ ಅವನು ಪುಕ್ಕಲ ಎಂಬುದು ಅವನಿಗೂ ಅವನ ಹೆಂಡತಿಗೂ ಪ್ರಿಯಕರನಿಗೂ ಗೊತ್ತು. ಸಿಟ್ಟನ್ನು ಒಳಗೆ ಅದುಮಿಟ್ಟುಕೊಂಡು ಒಂದಲ್ಲ ಒಂದು ಕ್ಷಣ ಹೆಂಡತಿಗೆ ತಾನೂ ಶೂರ ಎಂದು ತೋರಿಸುವ ಆಸೆ ಹೊತ್ತವನು ಅವನು.

ಅವರು ಕಾಡಲ್ಲಿ ನಡೆಯುತ್ತಾ ಹೋಗುತ್ತಿದ್ದಂತೆ ಇದ್ದಕ್ಕಿದ್ದಂತೆ ಹುಲಿಯೊಂದು ಎದುರಾಗುತ್ತದೆ. ಪ್ರೇಮಿ ಕೋವಿ ಎತ್ತಿ ಗುರಿಯಿಡುತ್ತಾನೆ. ಗುರಿ ತಪ್ಪು ಗುಂಡು ಹುಲಿಯ ಬಾಲ ಸವರಿಕೊಂಡು ಹೋಗುತ್ತದೆ. ಆಕೆ ಥತ್ ಎಂದು ನಿಟ್ಟುಸಿರಿಟ್ಟು ಪ್ರೇಮಿಯನ್ನು ಹೀನಾಯವಾಗಿ ನೋಡುತ್ತಾಳೆ. ಹುಲಿ ಬೆದರದೆ, ಮುಂಗಾಲು ಮುಂದಕ್ಕೂರಿ ಜಿಗಿಯಲು ಸಿದ್ಧವಾಗುತ್ತದೆ. ಆಗ ಗಂಡ ತನ್ನ ಕೋವಿ ಎತ್ತಿಕೊಂಡು ಹುಲಿಯೆದುರು ನಿಂತು ಜಿಗಿಯುವ ಹುಲಿಯ ಗುಂಡಿಗೆ ಸೀಳುತ್ತಾನೆ.

ಆ ಕ್ಷಣವೇ ಮತ್ತೊಂದು ಗುಂಡು ಅವನ ಬೆನ್ನು ಸೀಳುತ್ತದೆ.

ಗುಂಡು ಹಾರಿಸಿದಾಕೆ ಅವನ ಹೆಂಡತಿ. ಅವಳಿಗೆ ಗಂಡ ವೀರನೆಂದು ಒಪ್ಪಿಕೊಳ್ಳಲಾಗುತ್ತಿಲ್ಲ. ಹುಲಿಯನ್ನು ಸಾಯಿಸಿದ ನಂತರದ, ತಾನು ಸಾಯುವ ಮೊದಲಿನ ಒಂದೇ ಒಂದು ಕ್ಷಣ ಅವನ ಬದುಕಿನ ಅತ್ಯಂತ ರೋಚಕ ಗಳಿಗೆ. ಅವನು ಪ್ರೇಮಿಯೆದುರು ಗೆದ್ದಿದ್ದಾನೆ. ಹೆಂಡತಿಯ ಅಭಿಪ್ರಾಯ, ಭಾವನೆ ಸುಳ್ಳಾಗುವಂತೆ ಮಾಡಿದ್ದಾನೆ. ಅವಳ ಕಣ್ಣ ಮನೆ ಮಾಡಿರುವ ದಿಗ್ಬ್ರಮೆಯನ್ನು ಅವನು ತಿರುಗಿ ನೋಡಬೇಕು ಅನ್ನುವಷ್ಟರಲ್ಲಿ ಅವನು ಸಾಯುತ್ತಾನೆ.

ಅಂಥ ಒಂದು ಕ್ಷಣ ಎಲ್ಲರ ಬದುಕಲ್ಲೂ ಬರುತ್ತದೆ. ಹಾಗಾದಾಗ ಅವನು ಪ್ರೇಮಿಯಾಗಿದ್ದರೂ ಗಂಡನಾಗಿದ್ದರೂ ಗೆಳೆಯನಾಗಿದ್ದರೂ ಏನೂ ಆಗಿರದೇ ಇದ್ದರೂ ಗೆಲ್ಲುತ್ತಾನೆ. ಆ ಕ್ಷಣವನ್ನು ವಿಸ್ತರಿಸಲು ಯತ್ನಿಸಿದರೆ ಮತ್ತೆ ಅದೇ ಮೆಚ್ಚುಗೆಯ ಮಾತು, ಅವನಿಗಿಂತ ವೀರ ಸಿಕ್ಕಾನೆಂಬ ನಿರೀಕ್ಷೆ, ಅವನು ಅಂಥ ವೀರತ್ವವನ್ನು ಮುಂದುವರಿಸಬೇಕು ಎಂಬ ಆಶೆ...

ಬದುಕು ಬೇರೆಯೇ ತಿರುವು ಪಡೆದುಕೊಳ್ಳುತ್ತದೆ. ನಿರಂತರತೆ ಎಲ್ಲವನ್ನೂ ನಾಶ ಮಾಡುತ್ತದೆ. ಹೀಗೇ ಇರಬೇಕು ಎಂಬುದು ಸೃಜನಶೀಲತೆಯನ್ನು ಕೊಲ್ಲುತ್ತದೆ. ತನ್ನ ಓದುಗರನ್ನು ಕಳೆದುಕೊಳ್ಳಲು ಇಚ್ಚಿಸದ ಲೇಖಕ ಕ್ರಮೇಣ ನಾಶವಾಗಿ ಹೋಗುತ್ತಾನೆ. ಹಳೆಯ ಓದುಗರನ್ನು ಕಳೆದುಕೊಳ್ಳದ ಹೊರತು, ಹೊಸ ಓದುಗರು ಸಿಗುವುದಿಲ್ಲ. ಎಲ್ಲಾ ಕಲಾವಿದರ ವಿಚಾರದಲ್ಲೂ ಇದು ನಿಜ.

ಆದರೆ ಹಳಬರನ್ನು ಕಳೆದುಕೊಂಡು ಹೊಸಬರನ್ನು ಪಡೆದುಕೊಳ್ಳುವ ಪೊರೆ ಕಳಚುವ ಸಮಯ ಮಾತ್ರ ಹಿಂಸೆಯದ್ದು. ಆ ಹಿಂಸೆಗೆ ಒಡ್ಡಿಕೊಳ್ಳದೇ ಹೊಸ ಮೈ ಮೈಗೂಡದು.

********