Saturday, March 12, 2011

ಪತ್ತೇದಾರ ಪುರುಷೋತ್ತಮ (ಒಂದು ಕತೆ)

ಎಂ ಎಸ್ ಪುಟ್ಟಣ್ಣಯ್ಯ `ಮಾಡಿದ್ದುಣ್ಣೋ ಮಹಾರಾಯ’, `ಮುಸುಕು ತೆಗೆಯೇ ಮಾಯಾಂಗನೆ’ ಮುಂತಾದ ಕಾದಂಬರಿಗಳನ್ನು ಬರೆದು ಅಜರಾಮರರಾದರು. ಕಾದಂಬರಿ ಪ್ರಕಾರದ ಹರಿಕಾರರೆಂದು ಹೆಸರಾದರು. ಆ ನಂತರ ಅನೇಕರು ಕಾದಂಬರಿ ಪ್ರಕಾರಕ್ಕೆ ನೀರೆರೆದು ಬೆಳೆಸಿದರು. ಬೇರೆ ಬೇರೆ ಪ್ರಕಾರದ ಕಾದಂಬರಿಗಳು ಬಂದವು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಪತ್ತೇದಾರಿ, ರೋಮಾಂಚಕ, ಪ್ರಣಯ- ಹೀಗೆ ಒಂದೊಂದು ಪ್ರಕಾರಗಳಲ್ಲಿ ಒಬ್ಬೊಬ್ಬರು ಅತ್ಯುತ್ತಮವಾದ ಸಾಧನೆ ಮಾಡಿ ಹೆಸರಾದರು.

ಕನ್ನಡದ ಓದುಗರನ್ನು ಆ ಕಾಲಕ್ಕೆ ಸೆಳೆದವರು ಅನೇಕರು. ತ್ರಿವೇಣಿ, ಎಂಕೆ ಇಂದಿರಾ, ಟಿಕೆ ರಾಮಾರಾವ್, ಭಾರತೀಪ್ರಿಯ, ಭಾರತೀಸುತ, ಕೆ.ಟಿ ಗಟ್ಟಿ ಮುಂತಾದ ಲೇಖಕರು ಒಂದಕ್ಕಿಂತ ಒಂದು ಸೊಗಸಾದ ಕಾದಂಬರಿಗಳನ್ನು ಬರೆದುಕೊಟ್ಟು ಓದುಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದರು.

ಇವರ ಮಧ್ಯೆ ಎಸ್ ಎಲ್ ಭೈರಪ್ಪ, ಶಿವರಾಮ ಕಾರಂತ ಮುಂತಾದವರು ತಮ್ಮದೇ ಮಾರ್ಗದಲ್ಲಿ ನಡೆದು, ತಮ್ಮದೇ ಶೈಲಿಯ ಕಾದಂಬರಿಗಳನ್ನು ಬರೆದು ಓದುಗರ ತಿಳುವಳಿಕೆಗೂ ಭಾವಶ್ರೀಮಂತಿಕೆಗೂ ಕಾರಣರಾದರು. ಅನೇಕ ಅನುವಾದಿತ ಕಾದಂಬರಿಗಳೂ ಬಂದವು. ಇಂಗ್ಲಿಷ್, ಫ್ರೆಂಚ್, ಐರಿಷ್, ಝೆಕ್- ಹೀಗೆ ಹಲವು ದೇಶಭಾಷೆಯ ಕಾದಂಬರಿಗಳೂ ಕನ್ನಡಕ್ಕೆ ಬಂದವು. ಇಷ್ಟೆಲ್ಲ ಬಂದರೂ ಓದುಗರ ಹಸಿವು ಹಿಂಗಿದಂತೆ ಕಾಣಲಿಲ್ಲ. ಪ್ರತಿಯೊಂದು ಹೊಸ ಕಾದಂಬರಿಯೂ ಸಾವಿರಾರು ಪ್ರತಿ ಮಾರಾಟವಾಗುತ್ತಿತ್ತು. ತರಾಸು, ರಾಮಮೂರ್ತಿ ಮುಂತಾದ ಲೇಖಕರು ಲಕ್ಷಾಂತರ ಪ್ರತಿಗಳನ್ನು ಮಾರಿದ್ದೂ ಇದೆ. ಕನ್ನಡದ ಓದುಗರ ಮನಸ್ಸಿನಲ್ಲಿ ನೆಲೆಸಿದ್ದೂ ಆರಂಭದ ದಿನಗಳಲ್ಲಿ ಬಂದ ಕಾದಂಬರಿಗಳೇ. ಇವತ್ತಿಗೂ ಕಾದಂಬರಿಕಾರ ಎಂದರೆ ಥಟ್ಟನೆ ನೆನಪಾಗುವುದು ಶಿವರಾಮ ಕಾರಂತರು. ಇವತ್ತಿಗೂ ಬರೆಯುತ್ತಿರುವವರ ಪೈಕಿ ಭೈರಪ್ಪನವರು. ಅಕ್ಷರ ಪ್ರೀತಿ ಇರುವ ಎಲ್ಲರೂ ಭೈರಪ್ಪನವರ, ಕಾರಂತರ ಒಂದೊಂದು ಕಾದಂಬರಿಯನ್ನಾದರೂ ಓದಿಯೇ ಇರುತ್ತಾರೆ.

ಧಾರಾವಾಹಿಗಳ ಜನಪ್ರಿಯತೆಯನ್ನು ಕಂಡ ಪತ್ರಿಕೆಗಳು ಧಾರಾವಾಹಿಯನ್ನು ಪ್ರಕಟಿಸತೊಡಗಿದವು. ಎಲ್ಲ ಜನಪ್ರಿಯ ಲೇಖಕರ ಕಾದಂಬರಿಗಳೂ ಧಾರಾವಾಹಿಯಾಗಿ ಪ್ರಕಟಗೊಂಡವು. ವಾರಪತ್ರಿಕೆಗಳಲ್ಲಿ ಕಂತುಕಂತಾಗಿ ಪ್ರಕಟವಾಗುತ್ತಿದ್ದ ಕಾದಂಬರಿಗಳನ್ನು ಓದಲು ಓದುಗರು ಮುಗಿಬಿದ್ದರು. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳಂತೂ ಮಾರಾಟದಲ್ಲಿ ದಾಖಲೆ ನಿರ್ಮಿಸಿದವು

ಈ ಮಧ್ಯೆ ಓದುವುದಕ್ಕೆ ಆಗಷ್ಟೇ ಆರಂಭಿಸಿದವರನ್ನು ಸೆಳೆದದ್ದು ಪತ್ತೇದಾರಿ ಕಾದಂಬರಿಗಳು.. ಪತ್ರೇದಾರಿ ಕಾದಂಬರಿ ಎಂದಾಗ ನೆನಪಾಗುವ ಮೊದಲ ಹೆಸರು ಎನ್. ನರಸಿಂಹಯ್ಯ. ಅವರು ಮುನ್ನೂರೋ ನಾನ್ನೂರೋ ಕಾದಂಬರಿಗಳನ್ನು ಬರೆದು ಪ್ರಖ್ಯಾತಿ ಪಡೆದರು. ಅವರ ಜೊತೆಗೇ ಜಿಂದೆ ನಂಜುಂಡಸ್ವಾಮಿ, ಸುದರ್ಶನ ದೇಸಾಯಿ ಮುಂತಾದವರೂ ರೋಚಕ ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಎಚ್ ಕೆ. ಅನಂತರಾಮ್ ರಾಜಕೀಯದ ಸ್ಪರ್ಶವಿರುವ ಕಾದಂಬರಿಗಳಿಂದ ಮನೆಮಾತಾದರು. ಇವರೆಲ್ಲರನ್ನು ಓದುತ್ತಿದ್ದ ಕನ್ನಡದ ಓದುಗವರ್ಗದ ಅಭಿರುಚಿಯನ್ನು ಬದಲಾಯಿಸುವಂಥ ಘಟನೆಗಳು ತೊಂಬತ್ತರ ದಶಕದಲ್ಲಿ ನಡೆದವು.

೧೯೯೦ರ ಸುಮಾರಿಗೆ ಕನ್ನಡ ಜನಪ್ರಿಯ ಸಾಹಿತ್ಯಲೋಕಕ್ಕೆ ಯಂಡಮೂರಿ ವೀರೇಂದ್ರನಾಥ್ ಕಾಲಿಟ್ಟರು. ವಾರಪತ್ರಿಕೆಗಳು ಯಂಡಮೂರಿ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸತೊಡಗಿದವು. ತೆಲುಗಿನಲ್ಲಿ ದಂಡಿಯಾಗಿ ಬರೆಯುತ್ತಿದ್ದ ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳು ಯಾವ ಮಟ್ಟದ ಜನಪ್ರಿಯತೆ ಗಳಿಸಿತು ಎಂದರೆ ಉಳಿದೆಲ್ಲ ಲೇಖಕರು ಒಂದೇ ಏಟಿಗೆ ಮೂಲೆಗುಂಪಾಗಿ ಹೋದರು.

ಯಂಡಮೂರಿ ವೀರೇಂದ್ರನಾಥರ ಜೊತೆಗೇ ಮಲ್ಲಾದಿ ವೆಂಕಟಕೃಷ್ಣ, ಅಬಿದ್ ಸುರತಿ ಮುಂತಾದವರು ಬರೆಯಲು ಆರಂಭಿಸಿದರು. ಆ ಹೊತ್ತಿಗಾಗಲೇ ಟಿಕೆ ರಾಮರಾವ್ ಕಣ್ಮರೆಯಾಗಿದ್ದರು. ಉಳಿದ ಲೇಖಕರು ಕ್ರಮೇಣ ಮಾಸುತ್ತಾ ಹೋದರು. ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ರೋಚಕತೆಯನ್ನು ಕಾಯ್ದಿರಿಸುವ ಮೂಲಕ ಅವರು ಇನ್ನಿಲ್ಲದ ಜನಪ್ರಿಯತೆಯನ್ನು ಸಂಪಾದಿಸಿದರು. ಪ್ರಕಾಶನ ಸಂಸ್ಥೆಗಳು ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳಿಗೆ ಮುಗಿಬಿದ್ದರು. ಅವರ ನಂತರದ ದಿನಗಳಲ್ಲಿ ಆ ಮಟ್ಟಿನ ಜನಪ್ರಿಯತೆಯನ್ನು ಗಳಿಸಿದ್ದು ರವಿ ಬೆಳಗೆರೆ ಕಾದಂಬರಿಗಳೇ ಅನ್ನಬೇಕು.

ಯಾವಾಗ ಯಂಡಮೂರಿ ಬರೆಯಲು ಆರಂಭಿಸಿದರೋ, ಆ ಹೊತ್ತಿಗೆ ಕೇವಲ ಲೇಖಕರು ಮಾತ್ರ ನಿರುದ್ಯೋಗಿಗಳಾಗಲಿಲ್ಲ. ಕೆಲಸ ಕಳೆದುಕೊಂಡು ಸುತ್ತಾಡುತ್ತಿದ್ದ, ಹೊಸ ಕೆಲಸಕ್ಕಾಗಿ ಹಾತೊರೆಯುತ್ತಿದ್ದ, ತಮ್ಮ ಪ್ರತಿಭೆಯ ಪ್ರದರ್ಶನಕ್ಕಾಗಿ ಕಾಯುತ್ತಿದ್ದವರ ಪಟ್ಟಿಯಲ್ಲಿ ಇನ್ನೂ ಕೆಲವರಿದ್ದಾರೆ. ಅವರ ಹೆಸರು ಅರಿಂಜಯ ಮತ್ತು ಪುರುಷೋತ್ತಮ.

-೨-

ಸುಮಾರು ನೂರಕ್ಕೂ ಹೆಚ್ಚು ಕೊಲೆ ಪ್ರಕರಣಗಳನ್ನು ಬೇದಿಸಿದ, ಸಾವಿರಾರು ಅಪರಾಧಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಅಪ್ರತಿಮ ಧೈರ್ಯಶಾಲಿ ಪುರುಷೋತ್ತಮ ಖಿನ್ನನಾಗಿ ಕೂತಿದ್ದ. ತನಗೆ ಇಂಥದ್ದೊಂದು ಸ್ಥಿತಿ ಬರುತ್ತದೆ ಅನ್ನುವ ಸಣ್ಣ ಕಲ್ಪನೆಯೂ ಅವನಿಗಿರಲಿಲ್ಲ. ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿತ್ತು. ದಿನಕ್ಕೆ ನೂರಾರು ಮಂದಿ ವಿವಿಧ ಕಾರಣಗಳಿಗೋಸ್ಕರ ಕೊಲೆಯಾಗುತ್ತಿದ್ದವು. ಹೆಂಡತಿಯನ್ನು ಗಂಡ ಕೊಲೆ ಮಾಡುತ್ತಿದ್ದ. ಗಂಡನನ್ನು ಹೆಂಡತಿ ಕೊಲೆ ಮಾಡುತ್ತಿದ್ದಳು. ಮಾಲೀಕನನ್ನು ಉದ್ಯೋಗಿ ಕೊಲೆ ಮಾಡುತ್ತಿದ್ದ. ಯಾವುದೇ ಸುಳಿವಿಲ್ಲದೆ ಹರೆಯದ ಹೆಣ್ಣೊಬ್ಬಳು ಕಣ್ಮರೆಯಾಗುತ್ತಿದ್ದಳು.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ಪುರುಷೋತ್ತಮ ನೋಡುತ್ತಿದ್ದ. ಎಷ್ಟೋ ಪ್ರಸಂಗಗಳನ್ನು ಅವನು ತನ್ನ ಕುತೂಹಲಕ್ಕೆಂಬಂತೆ ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದ. ಆಗೆಲ್ಲ ಅವನಿಗೆ ಅಪರಾಧಿ ಯಾರೆಂಬುದು ಅರಿವಿಗೆ ಬರುತ್ತಿತ್ತು. ಅದನ್ನು ಪೊಲೀಸರಿಗೆ ಹೇಳಬೇಕು ಅಂತ ಎಷ್ಟೋ ಸಲ ಅಂದುಕೊಳ್ಳುತ್ತಿದ್ದ. ಆದರೆ ಪೊಲೀಸರು ತಮಗೆ ಅದರಲ್ಲಿ ಆಸಕ್ತಿಯೇ ಇಲ್ಲ ಎಂಬಂತೆ ವರ್ತಿಸುತ್ತಿದ್ದರು. ಒಂದು ಸಲ ಫೋನ್ ಮಾಡಿದಾಗ ಇನ್ಸ್‌ಪೆಕ್ಟರ್ ಒಬ್ಬ ರೇಗಿದ್ದ: ನಮಗೆ ಖಾಸಗಿ ಪತ್ತೇದಾರರು ಬೇಕಾಗಿಲ್ಲ. ಯಾವುದಾದರೂ ಸೆಕ್ಯೂರಿಟಿ ಏಜೆನ್ಸಿ ತೆರೆಯಿರಿ. ಅದೇ ನಿಮ್ಮ ಯೋಗ್ಯತೆ’ ಎಂದಿದ್ದ. ಆವತ್ತಿನಿಂದ ಪುರುಷೋತ್ತಮ ಪೊಲೀಸರಿಗೆ ಫೋನು ಮಾಡುವುದನ್ನು ಬಿಟ್ಟುಬಿಟ್ಟಿದ್ದ.

ಕೊಲೆಯಾದವರ ಸಂಬಂಧಿಕರು ಕೂಡ ಪುರುಷೋತ್ತಮನನ್ನು ಸಂಪರ್ಕಿಸುತ್ತಿರಲಿಲ್ಲ. ಅವನ ಆಫೀಸು ಅದೇ ಜಾಗದಲ್ಲಿ ಆದೇ ಸ್ಥಿತಿಯಲ್ಲಿದ್ದರೂ ಅದರೊಳಗೆ ಯಾರೂ ಕಾಲಿಡುತ್ತಿರಲಿಲ್ಲ. ಹಾಗಾದಾಗ ಎಷ್ಟೋ ಸಲ ಅವನಿಗೆ ಅನುಮಾನ ಬರುತ್ತಿತ್ತು. ಹೆಂಡತಿ ಕೊಲೆಯಾದಾಗ ಗಂಡ, ಮಗ ಕೊಲೆಯಾದಾಗ ಅಪ್ಪ ತನ್ನನ್ನು ಸಂಪರ್ಕಿಸಬೇಕಾಗಿತ್ತು. ಕೊಲೆಗಾರನನ್ನು ಹಿಡಿದುಕೊಡಿ ಎಂದು ಕೇಳಿಕೊಳ್ಳಬೇಕಾಗಿತ್ತು. ಆದರೆ ಅಂಥ ಯಾವ ಉತ್ಸಾಹವೂ ಬದುಕಿರುವವರಲ್ಲಿ

ಯಾಕಿಲ್ಲ ಎಂದು ಅಚ್ಚರಿಗೊಳ್ಳುತ್ತಿದ್ದ. ಅವನು ನೋಡಿದ ಪ್ರಕಾರ, ಈ ಕಾಲದಲ್ಲಿ ಅತ್ಯಂತ ಹೆಚ್ಚು ಜಾಣ್ಮೆಯಿಂದ ಕೊಲೆಗಳನ್ನು ಅಪರಾಧಗಳನ್ನು ಪತ್ತೆ ಮಾಡುತ್ತಿದ್ದವನು ಪತ್ತೇದಾರ ಅಲ್ಲ, ಒಬ್ಬ ವಕೀಲ. ಸಿ ಎಸ್ ಪಿ ಎಂಬ ವಕೀಲ ಮಾತ್ರ ಅಪರಾಧಗಳನ್ನು ಪತ್ತೆ ಹಚ್ಚುವ ಕಲೆಯಲ್ಲಿ ನಿಷ್ಣಾತನಾದಂತೆ ಕಾಣಿಸುತ್ತಿದ್ದ. ಅವನನ್ನೂ ಪೊಲೀಸರು ಬಳಸಿಕೊಳ್ಳುತ್ತಿರಲಿಲ್ಲ. ರಾಜಕಾರಣಿಗಳು ಅವನ ವಿರೋಧಿಗಳಾಗಿದ್ದರು. ಸಹಜವಾಗಿ ಪೊಲೀಸರಿಗೂ ಅವನ ಮೇಲೆ ಸಿಟ್ಟಿತ್ತು. ಒಮ್ಮೊಮ್ಮೆ ಪೊಲೀಸ್ ಅಧಿಕಾರಿಗಳ ಭ್ರಷ್ಟತೆಯನ್ನೂ ಅವನು ಬಯಲಿಗೆಳೆಯುತ್ತಿದ್ದ.

ಇವೆಲ್ಲವನ್ನೂ ನೋಡುತ್ತಿದ್ದಂತೆ ಪುರುಷೋತ್ತಮನಿಗೊಂದು ಅನುಮಾನ ಕಾಡುತ್ತಿತ್ತು. ಕೇವಲ ತನ್ನನ್ನು ಮಾತ್ರ ಈ ನಿರುದ್ಯೋಗ ಕಾಡುತ್ತಿದೆಯಾ ಅಥವಾ ಬೇರೆ ಪತ್ತೇದಾರರೂ ಹೀಗೇ ಕಷ್ಟ ಅನುಭವಿಸುತ್ತಿದ್ದಾರಾ ಎಂದು ತಿಳಿದುಕೊಳ್ಳುವ ಆಸೆಯಾಯಿತು. ಹಾಗೆ ಹುಡುಕುತ್ತಾ ಹೋದವ ಹೇಗೋ ಮಾಡಿ ಪತ್ತೇದಾರ ಅರಿಂಜಯನ ಪತ್ತೆ ಮಾಡಿ, ಅವನನ್ನು ಒಂದು ದಿನ ಭೇಟಿಯಾದ.

ಅವನ ಪರಿಸ್ಥಿತಿಯೂ ಪುರುಷೋತ್ತಮನದಕ್ಕಿಂತ ಉತ್ತಮವಾಗೇನೂ ಇರಲಿಲ್ಲ. ಅವನಿಗೂ ಕೇಸು ಬರದೇ ವರ್ಷಗಳೇ ಆಗಿದ್ದವು. ಅವನೂ ಕೂಡ ಪುರುಷೋತ್ತಮ ಕೇಳಿಕೊಂಡಂಥ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಕೂತಿದ್ದ. ಅವರಿಬ್ಬರ ಮಧ್ಯೆ ಒಂದಷ್ಟು ಮಾತಾಯಿತು:

ಪುರುಷೋತ್ತಮ: ಕೊಲೆಯಾಯಿತು, ರಕ್ತಪಾತವಾಯಿತು ಎಂಬ ವಿಚಾರದಲ್ಲಿ ಇರುವಷ್ಟು ಆಸಕ್ತಿ, ಯಾರು ಕೊಲೆ ಮಾಡಿದರು, ಯಾಕೆ ಕೊಲೆ ಮಾಡಿದರು, ಕೊಲೆಗಾರನಿಗೆ ಶಿಕ್ಷೆಯಾಯಿತೇ ಎಂದು ತಿಳಿದುಕೊಳ್ಳುವ ವಿಚಾರದಲ್ಲಿ ಇಲ್ಲ.

ಅರಿಂಜಯ: ನಾನೂ ಗಮನಿಸಿದ್ದೇನೆ. ಈಗಿನ ಮಂದಿಗೆ ಕೊಲೆಗಾರ ಮುಖ್ಯವೇ ಅಲ್ಲ.

ಪುರುಷೋತ್ತಮ: ಕೊಲೆಯ ರೋಚಕತೆ, ಅಪರಾಧದ ರೋಚಕತೆಯನ್ನಷ್ಟೇ ಅವರು ನೋಡುತ್ತಾರೆ. ಆಮೇಲೇನಾಯಿತು ಎಂದು ಅವರು ಗಮನಿಸುವುದಕ್ಕೆ ಹೋಗುವುದೇ ಇಲ್ಲ.

ಅರಿಜಂಯ: ನಾನೂ ನೋಡ್ತಾ ಇದ್ದೆ. ಸಿಕ್ಕಾಪಟ್ಟೆ ಕೊಲೆಗಳು, ಕಳ್ಳತನಗಳು, ದರೋಡೆಗಳು ನಡೆಯುತ್ತಿವೆ. ನಮಗೆ ಕೈತುಂಬ ಕೆಲಸ ಸಿಗುತ್ತದೆ ಅಂತ ಸಣ್ಣ ಸಂತೋಷವೂ ಇತ್ತು. ಆದರೆ ಈಗ ನಿರಾಸೆಯಾಗಿದೆ.

ಪುರುಷೋತ್ತಮ: ಈಗ ಕೊಲೆಯಾಗುವುದು ಅಂಥ ಬೆಚ್ಚಿಬೀಳಿಸುವ ಸಂಗತಿ ಅಲ್ಲವೇ ಅಲ್ಲ. ಅದೊಂದು ಸಹಜ ವ್ಯಾಪಾರ. ಕೊಲೆಗಾರ ಯಾರು ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಅದು ಗೊತ್ತಿದ್ದ ಮೇಲೆ ಪತ್ತೆ ಮಾಡುವಂಥದ್ದೇನಿದೆ. ನಮ್ಮ ವರದಿ, ತನಿಖೆ ಯಾರಿಗೆ ಬೇಕು.

ಅರಿಂಜಯ: ಈಗ ನಾವೇನು ಮಾಡಬಹುದು ಅಂತ ನಿನಗನ್ನಿಸುತ್ತದೆ.

ಪುರುಷೋತ್ತಮ: ಯಾವ ಸಮಾಜದಲ್ಲಿ ಕೆಲವೇ ಕೆಲವು ಅಪರಾಧಿಗಳಿರುತ್ತಾರೋ, ಎಲ್ಲಿ ಶಿಕ್ಷೆಯ ಬಗ್ಗೆ ಭಯ ಇರುತ್ತದೋ, ಎಲ್ಲಿ ಮಂದಿಗೆ ಅವಮಾನ ಆಗುತ್ತದೋ ಅಲ್ಲಿ ನಮಗೂ ಕೆಲಸ ಇರುತ್ತೆ. ಆದರೆ ಈ ಕಾಲದಲ್ಲಿ ಬಹುತೇಕರು ಅಪರಾಧಿಗಳೇ, ಶಿಕ್ಷೆಯ ಭಯ ಯಾರಿಗೂ ಇಲ್ಲ, ಅಪರಾಧಿ ಎಂದು ಸಾಬೀತಾದರೂ ಯಾರಿಗೂ ಅವಮಾನ ಆಗುವುದಿಲ್ಲ. ಅಂದ ಮೇಲೆ ನಮಗೆ ಕೆಲಸ ಇಲ್ಲ.

ಅರಿಂಜಯ: ನಮಗೇ ಇಲ್ಲವೆಂದ ಮೇಲೆ ನಮ್ಮ ಸೃಷ್ಟಿಕರ್ತನಿಗೆ.

-೩-

ಎನ್ . ನರಸಿಂಹಯ್ಯನವರು ಪತ್ತೇದಾರಿ ಕಾದಂಬರಿ ಬರೆಯುವುದನ್ನು ನಿಲ್ಲಿಸಿ ವರ್ಷಗಳೇ ಆಗಿವೆ.