Monday, February 22, 2010

ನಿಲ್ಲಿಸದಿರು ವನಮಾಲೀ ಕೊಳಲ ಗಾನವಾ...

ಎಪ್ಪತ್ತು ಕತೆಗಳನ್ನು ಬರೆದಾದ ನಂತರ ಒಂದು ದಿನ ವೈಯನ್ಕೆಗೆ ಹೇಳಿದ್ದೆ. ಇನ್ನು ನಾನು ಬರೆಯುವುದಿಲ್ಲ, ಅವರು ಹೇಳಿದರು : ಬರೆಯುವುದನ್ನು ನಿಲ್ಲಿಸಬೇಡ, ಪ್ರಕಟಿಸುವುದನ್ನು ನಿಲ್ಲಿಸು.
ಆವತ್ತು ಡೈರಿ ಬರೆಯಲು ಆರಂಭಿಸಿದೆ. ದಿನಕ್ಕೆ ಹತ್ತು ಪುಟದಂತೆ ಬರೆಯುತ್ತಾ ಹೋದೆ. ತಿಂಗಳಲ್ಲಿ 20 ದಿನವಂತೂ ಬರೆದೇ ಬರೆಯುತ್ತಿದ್ದೆ. ಪ್ರತಿತಿಂಗಳೂ 200 ಪುಟದ ಪುಸ್ತಕದ ತುಂಬ ನಾನು ನೋಡಿದ ಸಿನಿಮಾ, ಓದಿದ ಪುಸ್ತಕ, ಆಗಷ್ಟೇ ಹುಟ್ಟಿದ ಕತೆ, ಎಲ್ಲೋ ಓದಿದ ಕತೆಯಿಂದ ಗ್ರಹಿಸಿದ್ದು, ನ್ಯೂಯಾರ್ಕ್ ಟೈಮ್ಸಲ್ಲಿ ಬಂದು ಲೇಖನದ ಅನುವಾದ- ಹೀಗೆ ಏನಾದರೊಂದು ಬರೆಯುತ್ತಿದ್ದೆ. ಬರೆಯದೇ ಊಟ ಮಾಡುವುದಿಲ್ಲ ಎಂಬುದನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದೆ. ನಾಲ್ಕು ವರ್ಷ ಹಾಗೆ ಬರೆದಿಟ್ಟದ್ದು ಸುಮಾರು 60 ಪುಸ್ತಕಗಳಲ್ಲಿ ತುಂಬಿಹೋಗಿದೆ.
ಅವನ್ನೆಲ್ಲ ಎತ್ತಿ ಅಟ್ಟಕ್ಕೆ ಹಾಕುವಾಗ ಕಣ್ಣೀರು ಬಂತು. ಪ್ರಕಟಿಸುವ ಆಸೆಯಾಯಿತು. ಎಷ್ಟಾದರೂ ನಾನೇ ಬರೆದದ್ದು. ಯಾರಾದರೂ ಪ್ರಕಾಶಕರು ಕೇಳಿದರೆ ಥಟ್ಟನೆ ಇದನ್ನು ಪ್ರಕಟಿಸಿ ಅಂತ ಕೊಟ್ಟುಬಿಟ್ಟರೆ? ಏನು ಮಾಡಲಿ ಅಂತ ವೈಯನ್ಕೆಗೆ ಕೇಳಿದೆ.
ಕಿಲ್ಯುವರ್ ಬೇಬೀಸ್ ಅಂದರು. ಮರದ ಹಾಗೆ ದಿನವೂ ಹೂವು ಅರಳಿಸುತ್ತಿರಬೇಕು. ಅವನ್ನು ಕಾಪಿಟ್ಟುಕೊಳ್ಳಲು ಹೋಗಬಾರದು. ಯೋಜನಗಂಧಿಯ ಹಾಗೆ ಹೆತ್ತ ಮಕ್ಕಳನ್ನೆಲ್ಲ ನೀರಿಗೆ ಎಸೆಯಬೇಕು. ಲೇಖಕನಿಗೂ ಆ ನಿಷ್ಠುರವಾದ ನಿಲುವು ಇರಬೇಕು. ಪ್ರಕಟಿಸಬೇಕಾದ ಪುಸ್ತಕಗಳು ಯಾವುದು, ಯಾವುದು ಪ್ರಕಟಣೆಗೆ ಅರ್ಹವಲ್ಲ ಎಂಬುದು ಗೊತ್ತಿರಬೇಕು. ಎಷ್ಟೋ ಸಲ ಪ್ರಕಟಣೆಗೆ ಅರ್ಹವಾಗಿದ್ದರೂ ಪ್ರಿಂಟು ಮಾಡಲಿಕ್ಕೆ ಹೋಗಬಾರದು. ಪ್ರಕಟಿಸುವ ಆಮಿಷವೇ ಲೇಖಕನಿಗೆ ಶತ್ರು. ಅಂಥ ಆಮಿಷ ಇಲ್ಲದವರೆಂದರೆ ಕಿ ರಂ ನಾಗರಾಜ ಮತ್ತು ಬಿವಿ ಕಾರಂತ ಅಂದಿದ್ದರು ವೈಯನ್ಕೆ.
ಅದಾಗಿ ಎಷ್ಟೋ ದಿನದ ನಂತರ ಕಿರಂ ಸಿಕ್ಕಾಗ ವೈಯನ್ಕೆ ಹೇಳಿದ್ದನ್ನು ಅವರಿಗೆ ಹೇಳಿದೆ. ಅವರು ಎಂದಿನ ಉಡಾಫೆಯಲ್ಲಿ ನಕ್ಕು, ಅಯ್ಯೋ ಯಾವನ್ರೀ ಬರೀತಾನೆ ಅಂದರು. ಬರೆದು ಏನು ಮಾಡೋದಿದೆ ಹೇಳಿ. ಅಡಿಗರು ಹೇಳಿದ್ದು ಗೊತ್ತಲ್ಲ ಅಂತ ಒಂದು ಪ್ರಸಂಗ ನೆನಪಿಸಿಕೊಂಡರು: ಸಂದರ್ಭ ಅಡಿಗರ ಹುಟ್ಟುಹಬ್ಬ. ನಡೆದದ್ದು ಜಯನಗರದ ಪ್ರಿಸಂ, ದಿ ಬುಕ್ ಶಾಪ್ನಲ್ಲಿ. “ನಾನೂ, ಅಡಿಗರು ನಡೀತಾ ಹೋಗುತ್ತಿದ್ವಿ. ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರ ಒಬ್ಬ ಹಳ್ಳಿಯ ಹುಂಬ ರಸ್ತೆ ದಾಟುತ್ತಿದ್ದ. ಅಡಿಗರು ನನ್ನನ್ನೊಂದು ಕ್ಷಣ ತಡೆದು ನಿಲ್ಲಿಸಿ, ಅವನನ್ನು ತೋರಿಸಿ ಹೇಳಿದರು. “ನೋಡಯ್ಯಾ, ನೀನು ಆ ರಸ್ತೆದಾಟುವ ಹಳ್ಳಿಯವನನ್ನು ಹೇಗೆ ನೋಡ್ತೀಯೋ, ನನ್ನನ್ನು ಕೂಡ ಹಾಗೇ ನೋಡಬೇಕು. ನಾನು ಬೇರೆಯಲ್ಲ. ಅಲ್ಲಿ ರಸ್ತೆ ದಾಟುವ ಹಳ್ಳಿಗ ಬೇರೆಯಲ್ಲ.” ನಾವೆಲ್ಲ, ಅಡಿಗರ ಥಿಂಕಿಂಗ್ ಬಗ್ಗೆ ಮೆಚ್ಚುಗೆ ಪಡುತ್ತಿರಬೇಕಾದರೆ ಕಿ.ರಂ. ಮುಂದುವರೆಸಿದರು. “...ಮತ್ತೆ ನೀನೂ ಕೂಡ ಬೇರೆಯಲ್ಲ!”
ಕಿರಂ ಸಂಯಮದ ಗುಟ್ಟೇನು ಅಂತ ನನಗೆ ಕೊನೆಗೂ ಗೊತ್ತೇ ಆಗಲಿಲ್ಲ. ನೀವೇ ಬರೆಯಿರಿ, ನಾವು ಬರೀತೀವಿ, ನೀವು ಡಿಕ್ಟೇಟ್ ಮಾಡಿ, ನೀವು ಮಾತಾಡಿದ್ದನ್ನೆಲ್ಲ ರೆಕಾರ್ಡ್ ಮಾಡಿಕೊಂಡು ಪುಸ್ತಕ ಮಾಡೋಣ ಅಂತ ನಾನೂ ಉದಯ ಮರಕಿಣಿಯೂ ಅವರಿಗೆ ನೂರಾರು ಸಲ ಹೇಳಿದ್ದೆವು. ಒಂದು ಸಲ ನೆಟ್ಟಕಲ್ಲಪ್ಪ ಸರ್ಕಲಿನ ಬಾರಲ್ಲಿ ಕೂತಾಗ ಗುಟ್ಟಾಗಿ ಕಿರಂ ಮಾತಾಡಿದ್ದನ್ನು ರೆಕಾರ್ಡು ಮಾಡಲು ನನ್ನ ಹಳೆಯ ಟೇಪ್ ರೆಕಾರ್ಡು ಒಯ್ದು ಆನ್ ಮಾಡಿ ಇಟ್ಟಿದ್ದೆ. ಪಾರ್ಟಿ ಮುಗಿಸಿ ಮನೆಗೆ ಬಂದ ರೆಕಾರ್ಡು ಹಾಕಿದರೆ ಮೆತ್ತಗೆ ಮಾತಾಡುವ ಕಿರಂ ದನಿ ದಾಖಲಾಗಿರಲೇ ಇಲ್ಲ. ನಮ್ಮ ಪಕ್ಕದ ಟೇಬಲಲ್ಲಿ ಕೂತಿದ್ದವನು ಕೆಟ್ಟ ಮಾತಲ್ಲಿ ಯಾರಿಗೋ ಬೈಯುತ್ತಿದ್ದದ್ದು, ಸಪ್ಲೈಯರ್ ಏನ್ ಕೊಡ್ಲಿ, ಚಿಕನ್ ಸುಕ್ಕಾ, ಮಟನ್ ಕೈಮ, ಪಿಷ್ ಫಿಂಗರ್ ಇದೆ ಅಂದಿದ್ದೆಲ್ಲ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅದನ್ನು ಕಿರಂಗೆ ಹೇಳಿದಾಗ ಮನಸಾರೆ ನಕ್ಕು, ಅದೇ ಅತ್ಯುತ್ತಮ ಸಾಹಿತ್ಯ ಅಂದಿದ್ದರು.
ವೈಯನ್ಕೆ 1999ರ ಅಕ್ಟೋಬರ್ 16ರಂದು ಕಾಲವಾದರು. ಅವರು ಅಮೆರಿಕಾಕ್ಕೆ ಹೋಗುವ ತಿಂಗಳ ಮುಂಚೆ ಅವರಿಗೆ ನನ್ನ ಹೊಸ ಪುಸ್ತಕದ ಹಸ್ತಪ್ರತಿ ತೋರಿಸಿದೆ. ಅವರು ಅದನ್ನು ತಮ್ಮ ಎಂದಿನ ಶರವೇಗದಲ್ಲಿ ಕಣ್ಣಾಡಿಸಿ ಓದಿದರು. ಗುಡ್ ಗುಡ್... ಅಂದರು. ರಾತ್ರಿ ಗಾಲ್ಫ್ ಕ್ಲಬ್ಬಲ್ಲಿ ನಾನೂ ಉದಯ್ ಮರಕಿಣಿ ಕೂತಿದ್ದಾಗ ಮತ್ತೆ ಪುಸ್ತಕದ ಬಗ್ಗೆ ಮಾತಾಡಿದರು.ಆ ಪುಸ್ತಕ ಪ್ರಿಂಟ್ ಮಾಡ್ಲೇಬೇಕಾ ನೀನು ಅಂತ ಕೇಳಿದ್ದರು. ಹಾಗೇನಿಲ್ಲ ಸರ್. ಚೆನ್ನಾಗಿದ್ದರೆ ಮಾಡ್ತೀನಿ ಅಂದಿದ್ದೆ. ಚೆನ್ನಾಗಿದೆ. ಅದು ನಿನಗೂ ಗೊತ್ತಿದೆ. ಚೆನ್ನಾಗಿರೋದು ಮುಖ್ಯ ಅಲ್ಲ. ನೀನು ನಿನ್ನ ಭಾಷೆಯಲ್ಲಿ ಬರೀಬೇಕು. ಆರ್ಥರ್ ಕ್ವಿಲ್ಲರ್ ಅಂತ ಒಬ್ಬ ಹುಚ್ಚ ಇದ್ದಾನೆ. ಅವನು ಜಗತ್ತಿನ ಅತ್ಯುತ್ತಮ ಇಂಗ್ಲಿಷ್ ಪದ್ಯಗಳನ್ನೆಲ್ಲ ಸಂಗ್ರಹ ಮಾಡಿದ್ದಾನೆ. ಅದನ್ನೆಲ್ಲ ಮಾಡಿದ ನಂತರ ಅವನೊಂದು ಪುಸ್ತಕ ಬರೆದ. ಚೆನ್ನಾಗಿರೋ ಪದ್ಯಗಳನ್ನು ಬರೆಯುವಾಗ, ಚೆನ್ನಾಗಿರೋ ಬರಹ ಬರೆಯುವಾಗ ಹುಷಾರಾಗಿರಬೇಕು. ನಿಮಗಿಷ್ಟವಾಗಿರೋದು ಓದುಗರಿಗೂ ಇಷ್ಟವಾಗಬೇಕಾಗಿಲ್ಲ. ಕೇಂಬ್ರಿಜ್ ಯೂನಿವರ್ಸಿಟೀಲಿ ಅವನು ಒಂದು ಸಲ ಭಾಷಣ ಮಾಡ್ತಾ ಹೇಳಿದ ‘Whenever you feel an impulse to perpetrate a piece of exceptionally fine writing, obey it—whole-heartedly—and delete it before sending your manuscript to press. Murder your darlings.’ ಅಂದ್ರೆ ಬರೆಯುವಾಗ ಚೆಂದ ಚೆಂದದ ಪದಗಳು, ಅಭಿವ್ಯಕ್ತಿಗಳು ಬರುತ್ತವೆ. ಪ್ರಕೃತಿಯ ಸೊಬಗನ್ನು ವರ್ಣಿಸೋಣ ಅನ್ನಿಸುತ್ತೆ. ಬರೆಯುವಾಗ ಅದನ್ನು ತಡೆಯೋದಕ್ಕೆ ಹೋಗಬೇಡಿ. ಬರೆದುಬಿಡಿ. ಆದರೆ ಪ್ರಿಂಟಿಗೆ ಹೋಗುವಾಗ ನೀವು ಮೆಚ್ಚಿ ಬರೆದ ಸಾಲುಗಳನ್ನು ನಿರ್ದಾಕ್ಷಿಣ್ಯಾಗಿ ಅಳಿಸಿಹಾಕಿ, ಕಿಲ್ ಯುವರ್ ಡಾರ್ಲಿಂಗ್ಸ್.
ವೈಯನ್ಕೆ ಅಷ್ಟು ಹೇಳಿದ್ದೆ ತಡ, ನಾನು ಬರೆದಿಟ್ಟಿದ್ದ ಅರವತ್ತೂ ಪುಸ್ತಕಗಳನ್ನೂ ನನ್ನ ಅಣ್ಣನ ಮನೆಗೆ ಸಾಗಿಸಿದೆ. ಅಲ್ಲಿದ್ದ ನನ್ನ ಇತರ ಪುಸ್ತಕಗಳ ನಡುವೆ ಇವೂ ಜಾಗ ಪಡೆದವು. I killed my darlings! ನಾವೇ ಮೆಚ್ಚೋದನ್ನು ನಾವು ಬರೆಯಬಾರದು ಅಂತ ತಿಳಿಸಿಕೊಟ್ಟ ವೈಯನ್ಕೆಗೆ ನಮಸ್ಕಾರ.

3 comments:

ಸಾಗರದಾಚೆಯ ಇಂಚರ said...

ತುಂಬಾ ಕುತೂಹಲಕಾರಿಯಾಗಿ ಬರೆದಿದ್ದೀರಿ
ಮುಂದೇನಾಯಿತು ಎಂದು ತುದಿಗಾಲಲ್ಲಿ ನಿಂತು ಓದಿದ್ದೆ ಬಂತು
ಒಳ್ಳೆಯ ಶೈಲಿಯಿದೆ ನಿಮಗೆ

ದಿನಕರ ಮೊಗೇರ said...

ಸರ್,
ಓದುತ್ತಾ ಹೋದಂತೆ ಇದು ನಿಜ ಘಟನೆಯಾ, ಕಲ್ಪನೆಯಾ ಎಂದು ಗಲಿಬಿಲಿಗೊಳಗಾಯ್ತು..... ತುಂಬಾ ಕುತೂಹಲ ಮೂಡಿಸಿತು ನಿರೂಪಣೆ......

Anonymous said...

ade shaili aadare t.v canelge hoda mele jogi maathra badalagiddare yeno missing andutte 24*7 news chanel parinama irabahude?