Tuesday, September 22, 2009

ಕಾವ್ಯ, ಆಧ್ಯಾತ್ಮ ಮತ್ತು ಒಂಚೂರು ಕಾಮ!

ದಿನನಿತ್ಯದ ಜಂಜಾಟಗಳಿಂದ ಪಾರಾಗುವುದಕ್ಕೆ ಇರುವ ಮಾರ್ಗಗಳು ಮೂರು; ಲೋಲುಪತೆ, ಕಾವ್ಯ, ಆಧ್ಯಾತ್ಮ. ಲೋಲುಪತೆಗೂ ಕಾವ್ಯಕ್ಕೂ ಹತ್ತಿರದ ಸಂಬಂಧವುಂಟು. ಹಾಗೆ ನೋಡಿದರೆ ಕಾವ್ಯವನ್ನು ಕಲೆಗೂ ವಿಸ್ತರಿಸಬಹುದು. ಆಧ್ಯಾತ್ಮಕ್ಕೂ ಕಲೆಗೂ ಹತ್ತಿರದ ಸಂಬಂಧವಿದೆ. ಲೋಲುಪತೆಯ ತುತ್ತುತುದಿಯಲ್ಲೇ ಆಧ್ಯಾತ್ಮದ ಕಿರಣವೊಂದು ಕಂಡು ನಮ್ಮನ್ನು ಬೆಚ್ಚಿ ಬೀಳಿಸಬಹುದು. ಅಥವಾ ಈ ಮೂಳೆ ಮಾಂಸದ ದೇಹದ ನಶ್ವರತೆ ಅರಿತವನು, ಅದನ್ನು ಬೇಕಾಬಿಟ್ಟಿ ಬಳಸಿ ಎಸೆದು ಹೋಗಬಹುದು. ಈ ದೇಹ ಮುಖ್ಯವಲ್ಲ, ಆತ್ಮ ಮುಖ್ಯ ಎಂದು ವಾದಿಸುವವನಿಗೆ ದೇಹದ ಬಗ್ಗೆ ಗೌರವವಾಗಲೀ, ಪ್ರೀತಿಯಾಗಲಿ ಇರುವುದಕ್ಕೆ ಸಾಧ್ಯವಿಲ್ಲವಲ್ಲ. ಅದೊಂದು ಆಯುಧ ಮಾತ್ರ. ಅದನ್ನೂ ಹರಿತವಾಗಿ ಇಟ್ಟುಕೊಂಡರೆ ಸಾಕು.
ಅಷ್ಟಕ್ಕೂ ಕಲೆ ಮತ್ತು ಆಧ್ಯಾತ್ಮದ ದಾಹ ನಿಜಕ್ಕೂ ನಮ್ಮನ್ನು ಅಷ್ಟೊಂದು ತೀವ್ರವಾಗಿ ಕಾಡುತ್ತದಾ? ಅದೊಂದು ಭ್ರಮಾಲೋಕಕ್ಕೆ ಒಯ್ದು ನಮ್ಮನ್ನು ಪಲಾಯನವಾದಿಗಳನ್ನಾಗಿಸುವ ಹುನ್ನಾರವಾ? ನಂಬದಿರು ಈ ದೇಹ ನಿತ್ಯವಲ್ಲ ಎಂದು ಹಾಡಿಕೊಳ್ಳುವ ಆಧ್ಯಾತ್ಮಕ್ಕೂ, ನಮ್ಮನ್ನು ನಮ್ಮ ಜಂಜಾಟಗಳಿಂದ ಅರೆಕ್ಷಣವಾದರೂ ಬಿಡುಗಡೆ ಮಾಡಿಸುವ ಕಲೆಗೂ ಎಷ್ಟು ಹತ್ತಿರದ ಸಂಬಂಧವಿದೆ ನೋಡಿ. ಸುಮ್ಮನೆ ನೆನಪಿಸಿಕೊಂಡರೆ ಹಳೆಯದೊಂದು ಜನಪದ ಗೀತೆ ನೆನಪಾಗುತ್ತದೆ:
ಸುಖ ಎಲ್ಲರಿಗೆಲ್ಲೈತವ್ವ
ದುಃಖ ತುಂಬ್ಯಾವ ಮನಶ್ಯಾದ ಮ್ಯಾಲ
ಎಂದು ಶುರುವಾಗುವ ಈ ಹಾಡಿನಲ್ಲಿ ಧರ್ಮರಾಯ ಕಾಡಿಗೆ ಹೋದದ್ದು, ರಾಮ ವನವಾಸಕ್ಕೆ ಹೋದದ್ದೆಲ್ಲ ಪ್ರಸ್ತಾಪವಾಗುತ್ತದೆ. ಅವರ ಗತಿಯೇ ಹೀಗಾದ ಮೇಲೆ ನಮ್ಮದೇನು ಎಂಬ ಅರಿವಿನಲ್ಲಿ ನಾವು ಬದುಕನ್ನು ಒಪ್ಪಿಕೊಳ್ಳುತ್ತಾ, ಸಹಿಸಿಕೊಳ್ಳುತ್ತಾ ಹೋಗುತ್ತೇವಾ? ಅದು ಕೂಡ ಒಂದು ರೀತಿಯಲ್ಲಿ ನಮಗೆ ನಂಬಿಕೆಯನ್ನು ಕೊಡುವಂಥ ಶಕ್ತಿಯಾ? ಅದರಾಚೆಗೂ ನಮ್ಮನ್ನು ಸಂತೋಷಪಡಿಸುವಂಥದ್ದು ಮತ್ತೇನಾದ್ರೂ ಇದೆಯಾ?
ಸಾಹಿತ್ಯವನ್ನು ಪ್ರಜ್ಞಾಪೂರ್ವಕವಾಗಿ ಓದುವವರ ಮಾತು ಬಿಟ್ಟುಬಿಡೋಣ. ಅದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾ, ಅದನ್ನು ಅರಿವಿಲ್ಲದೆಯೇ ತಮ್ಮ ಹಾಡಾಗಿ ಮಾಡಿಕೊಂಡವರು ಎಲ್ಲೆಂದರಲ್ಲಿ ಎದುರಾಗುತ್ತಾರೆ. ಲಂಕೇಶರ ಕಾದಂಬರಿಯಲ್ಲಿ ಸಾವಂತ್ರಿಯ ಅವ್ವ ಪಾಂಡವರ ಥರ ಹಾಳಾಗಿ ಹೋಗ್ತೀರಿ’ ಅಂತ ಬೈಯುವ ಪ್ರಸಂಗ ಬರುತ್ತದೆ. ಅದು ಆಕೆ ಅರ್ಥ ಮಾಡಿಕೊಂಡ ಮಹಾಭಾರತ. ಹೀಗೆ ಏಕಕಾಲಕ್ಕೆ ಆಧ್ಯಾತ್ಮವನ್ನೂ ಕಾವ್ಯವನ್ನೂ ನೀಡುತ್ತಾ ಬಂದಿರುವ ಉದಾಹರಣೆ ನಮಗೆ ಸಿಗುವುದು ಬಹುಶಃ ಭಾರತೀಯ ಸಾಹಿತ್ಯದಲ್ಲಿ ಮಾತ್ರವೇ ಏನೋ? ಮಹಾಭಾರತ ಮತ್ತು ರಾಮಾಯಣದ ಪಾತ್ರಗಳಷ್ಟೇ ಅಲ್ಲ, ಉಪನಿಷತ್ತಿನ ಕತೆಗಳಲ್ಲಿ ಬರುವ ನಚಿಕೇತನಂಥವರೂ ನಮ್ಮೆಲ್ಲರಿಗೂ ಗೊತ್ತು. ಅದಕ್ಕೆ ಕಾರಣ ಕಲೆ, ನಾಟಕ, ಯಕ್ಷಗಾನ, ಗೀತೆ.
ದೇವರನ್ನು ಸ್ತುತಿಸುವ ಸ್ತೋತ್ರ ಮತ್ತು ಭಜನೆಗಳು ಕೂಡ ಕಾವ್ಯವಾಗಿಯೇ ನಮ್ಮನ್ನು ತಲುಪುತ್ತಾ ಹೋಯಿತು ಅನ್ನುವುದನ್ನೂ ನಾವು ಮರೆಯುವಂತಿಲ್ಲ. ಶೃಂಗಾರವಾಗಿಹುದು ಶ್ರೀಹರಿಯ ಮಂಚ ಎಂಬ ಪುರಂದರದಾಸರ ಭಜನಾಪದ ಯಾವ ಕವಿಗೂ ಕಡಿಮೆಯಿಲ್ಲದಂತೆ ರೂಪಕಗಳ ಮೂಲಕ ಹರಿಯ ಮಂಚವನ್ನು ವಿವರಿಸುತ್ತಾ ಹೋಗುತ್ತದೆ. ಏಕಕಾಲಕ್ಕೆ ಭಕ್ತಿ ಮತ್ತು ಕಾವ್ಯರಸ- ಎರಡರ ಅನುಭವವನ್ನೂ ಕೊಡುತ್ತವೆ.
ಇದು ಅಕ್ಷರ ಬಲ್ಲವರ ಮಾತಾಯಿತು. ಕಾವ್ಯಾಸ್ವಾದನೆಯಿಂದ ದೂರವೇ ಉಳಿದವರಿಗೆ ಇಂಥ ಪ್ರೇರಣೆ ಎಲ್ಲಿಂದ ಸಿಗುತ್ತದೆ. ಗುಡ್ಡಗಾಡುಗಳಲ್ಲಿ ಇದ್ದುಕೊಂಡು ಕವಿತೆ, ಹಾಡು, ಆಧ್ಯಾತ್ಮ ಮತ್ತು ಅಂಥ ಅನುಭವಗಳಿಂದ ದೂರ ಉಳಿದವರು ಹೇಗೆ ಅವನ್ನೆಲ್ಲ ತಮ್ಮದಾಗಿಸಿಕೊಳ್ಳುತ್ತಾರೆ. ತನಗೆ ಅನ್ನಿಸಿದ್ದನ್ನು ಹೇಳಿಕೊಳ್ಳಬೇಕು ಅನ್ನುವ ತುರ್ತು ಹುಟ್ಟುವುದು ಅಕ್ಷರಾಭ್ಯಾಸದ ಜೊತೆಗೇನಾ? ಹರಪ್ಪ ಮೊಹೆಂಜೋದಾರೋಗಳಲ್ಲಿ ಗೋಡೆಯ ಮೇಲೆ ಕೆತ್ತಿಟ್ಟ ಚಿತ್ರಗಳು ಹಾಗಿದ್ದರೆ ಏನು?
ಸುಮ್ಮನೆ ಯೋಚಿಸಿ ನೋಡಿ: ಏಕಾಂತದಲ್ಲಷ್ಟೇ ಸಾಧ್ಯವಾಗುವ ಕ್ರಿಯೆ ಬರಹ. ಒಂಟಿಯಾಗಿ ಕುಳಿತು ಬರೆದದ್ದನ್ನು ಮತ್ತೊಬ್ಬರು ಒಂಟಿಯಾಗಿದ್ದಾಗ ಓದಿಕೊಳ್ಳುತ್ತಾರೆ. ಹೀಗೆ ನಮ್ಮನ್ನು ಏಕಾಂಗಿಯಾಗಿ ಮಾಡಿಯೂ ಎಲ್ಲರ ಜೊತೆ ಬೆರೆಸುವ ಶಕ್ತಿ ಇರುವುದು ಬರಹಕ್ಕೆ ಮಾತ್ರ.
ಈ ಪವಾಡವನ್ನು ನೆನೆಯುತ್ತಾ ಕುಳಿತಾಗ ಹೊಳೆದದ್ದು ಈ ಪುಟ್ಟ ಪ್ರಸಂಗ:
ಅವನಿಗೆ ಇಪ್ಪತ್ತೊಂಬತ್ತು. ಇನ್ನೂ ಮದುವೆ ಆಗಿಲ್ಲ. ಅವನು ಬಾಲ್ಯದಲ್ಲಿ ನೋಡುತ್ತಿದ್ದ ಹುಡುಗಿಯರೆಲ್ಲ ದೊಡ್ಡವರಾಗಿ ಮದುವೆ ಮಾಡಿಕೊಂಡು ಪಟ್ಟಣ ಸೇರಿಕೊಂಡಿದ್ದಾರೆ. ಈತನಿಗೆ ಊರು ಬಿಟ್ಟು ಹೋಗುವ ಹಾಗಿಲ್ಲ. ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುವ ಅವನಿಗೆ ಅಲ್ಲಿ ಅಸಾಧ್ಯ ಗೌರವವಿದೆ. ಅವನ ಮಾತುಗಳನ್ನು ನಂಬುತ್ತಾರೆ. ಮಗಳ ಮದುವೆಗೆ ಹೊತ್ತು ಗೊತ್ತು ನೋಡಲು ಅವನಲ್ಲಿಗೆ ಜನ ಬರುತ್ತಾರೆ. ಆಗೆಲ್ಲ ಅವನಿಗೆ ತನಗಿನ್ನೂ ಮದುವೆ ಆಗಿಲ್ಲ ಎಂಬುದು ನೆನಪಾಗುತ್ತದೆ.
ಅವನ ಅಮ್ಮ ಅವನಿಗಾಗಿ ಹಲವಾರು ಹುಡುಗಿಯರನ್ನು ನೋಡಿ ಸೋತಿದ್ದಾರೆ. ಅವರ್ಯಾುರಿಗೂ ದೇವಾಲಯ ಅರ್ಚಕ ವೃತ್ತಿ ಮಾಡಿಕೊಂಡಿರುವ ಹುಡುಗ ಬೇಕಾಗಿಲ್ಲ. ಹಳ್ಳಿಯಲ್ಲಿದ್ದುಕೊಂಡು ಪೂಜೆ ಭಟ್ಟ ಎಂದು ಕರೆಸಿಕೊಳ್ಳುವ ಹುಡುಗನ ಜೊತೆ ಸಂಸಾರ ಮಾಡುವುದಕ್ಕೆ ಅವರ್ಯಾಲರಿಗೂ ಇಷ್ಟವಿಲ್ಲ.
ಇದರಿಂದ ಪಾರಾಗುವ ಏಕೈಕ ಉಪಾಯವೆಂದರೆ ಆತ ಅರ್ಚಕ ವೃತ್ತಿಯನ್ನು ಬಿಟ್ಟು ಬೇರೇನಾದರೂ ಮಾಡಬೇಕು. ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರಬೇಕು. ಆದರೆ ಅವನಿಗೆ ಅದು ಇಷ್ಟವಿಲ್ಲ. ಅವನು ಹೊರಟು ಹೋದರೆ ದೇವಸ್ಥಾನದಲ್ಲಿ ಪೂಜೆ ಮಾಡುವುದಕ್ಕೆ ಯಾರೂ ಸಿಗುವುದಿಲ್ಲ ಎನ್ನುವುದು ಗೊತ್ತು.
ಹಾಗಿದ್ದರೂ ಅವನು ಊರು ಬಿಡುತ್ತಾನೆ. ನಗರ ಸೇರಿಕೊಂಡು ಒಂದು ಸಣ್ಣ ಸಂಸ್ಥೆಯಲ್ಲಿ ಸಣ್ಣದೊಂದು ಉದ್ಯೋಗ ಆರಂಭಿಸುತ್ತಾನೆ. ಐದಾರು ವರುಷಗಳಲ್ಲಿ ಕಂಪೆನಿ ಬದಲಾಯಿಸಿ ಕೈ ತುಂಬ ಸಂಬಳ ಬರುವ ಕೆಲಸ ಹಿಡಿಯುತ್ತಾನೆ. ಮೂವತ್ತನಾಲ್ಕನೆಯ ವಯಸ್ಸಿಗೆ ಅವನಿಗೆ ಮದುವೆಯಾಗುತ್ತದೆ.
ಮದುವೆಯಾಗಿ ಹೆಂಡತಿಯನ್ನು ಕರೆದುಕೊಂಡು ಅವನು ಹಳ್ಳಿಗೆ ಬಂದು ನೋಡಿದರೆ, ಅಲ್ಲಿನ ದೇವಸ್ಥಾನ ಪಾಳು ಬಿದ್ದಿದೆ. ಅವನು ಹೋದಾಗಿನಿಂದ ಆ ಗುಡಿಯಲ್ಲಿ ಪೂಜೆ ನಡೆಯುತ್ತಿಲ್ಲ. ತಾನು ಅರ್ಚಿಸುತ್ತಿದ್ದ ದೇವಾಲಯ ಪಾಳು ಬಿದ್ದದ್ದು ಅವನನ್ನು ಕಾಡತೊಡಗುತ್ತದೆ. ಮತ್ತೆ ಹಳ್ಳಿಯಲ್ಲೇ ಉಳಿಯುವ ನಿರ್ಧಾರ ಮಾಡುತ್ತಾನೆ. ಆದರೆ ಆ ನಿರ್ಧಾರವನ್ನು ಅವನ ಹುಡುಗಿ ಒಪ್ಪುವುದಿಲ್ಲ. ಮತ್ತೆ ಅವನು ನಗರಕ್ಕೆ ಮರಳಬೇಕಾಗುತ್ತದೆ.
ಆವತ್ತಿನಿಂದ ಅವನ ಕನಸಿನಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ. ಚಿತ್ರವಿಚಿತ್ರವಾದ ಕನಸುಗಳು ಬೀಳತೊಡಗುತ್ತವೆ. ಅನಾಥನಾಗಿ ಕುಳಿತ ಜನಾರ್ದನಸ್ವಾಮಿ ಮತ್ತೆ ಮತ್ತೆ ಕಾಡುತ್ತಾನೆ. ಮದುವೆಯಾಗಬೇಕು ಎಂಬ ಏಕೈಕ ಆಸೆಯಿಂದಾಗಿ ಭಗವಂತನನ್ನು ಬಿಟ್ಟು ಬಂದೆ ಎಂಬ ಪಾಪಪ್ರಜ್ಞೆಯಿಂದ ನರಳುತ್ತಾನೆ.
ದೇವರು ಮುಖ್ಯವಾ ಸಂಸಾರ ಮುಖ್ಯವಾ ಎಂಬ ಪ್ರಶ್ನೆ ಕಾಡತೊಡಗುತ್ತದೆ. ದಾಂಪತ್ಯ ಸಾಧ್ಯವಾಗುವುದಿಲ್ಲ. ರಾತ್ರಿ ಮಲಗಿದಾಗೆಲ್ಲ ದೇವರ ಮುಖವೇ ಕಣ್ಮುಂದೆ ಬರುತ್ತದೆ. ಒಂದು ಬಗೆಯ ಅತಂತ್ರ ಸ್ಥಿತಿ ಅವನನ್ನು
ಆವರಿಸಿಕೊಳ್ಳುತ್ತದೆ. ಒಂದು ಬೆಳಗ್ಗೆ ಅವನು ಇದ್ದಕ್ಕಿದ್ದಂತೆ ಹೊರಟು ಹಳ್ಳಿಗೆ ಬಂದು ದೇವಸ್ಥಾನದ ಬಳಿಗೆ ಬರುತ್ತಾನೆ. ಅದನ್ನು ಚೊಕ್ಕಟ ಮಾಡಿ ಮತ್ತೆ ಪೂಜೆ ಆರಂಭಿಸುತ್ತಾನೆ.
ಅಷ್ಟು ಹೊತ್ತಿಗೆ ಹಳ್ಳಿಯ ಮಂದಿ ದೇವರನ್ನು ಮರೆತಿದ್ದಾರೆ. ಗುಡಿಗೆ ಬರುತ್ತಿದ್ದ ಹಿರಿಯರ ಪೈಕಿ ಅನೇಕರು ತೀರಿಕೊಂಡಿದ್ದಾರೆ. ಉಳಿದವರು ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ. ನಂತರದ ತಲೆಮಾರಿಗೆ ಸೇರಿದವರಿಗೆ ದೇವರು ಬೇಕಾಗಿಲ್ಲ. ದೇವರಿಲ್ಲದ ಜಗತ್ತಿನಲ್ಲಿ ಬದುಕುತ್ತಿರುವವರ ಮಧ್ಯೆ ದೇವರಿಗಾಗಿ ಬದುಕು ಬಿಟ್ಟು ಬಂದ ಅವನು ವಿಚಿತ್ರವಾಗಿ ವಿಕ್ಷಿಪ್ತನಂತೆ ಹುಚ್ಚನಂತೆ ಕಾಣತೊಡಗುತ್ತಾನೆ.
ಅವನನ್ನು ಕಂಡಾಗ ನನಗೆ ಹಲವಾರು ಅನುಮಾನಗಳು ಮೂಡಿದವು. ಅರ್ಚಕವೃತ್ತಿ ಅವನಿಗೆ ಅನಿವಾರ್ಯವಾಗಿತ್ತಾ? ಅವನು ದೇವರನ್ನು ಪೂಜಿಸುತ್ತಿದ್ದದ್ದು ಭಕ್ತಿಯಿಂದಲೇ? ಅಭ್ಯಾಸ ಬಲದಿಂದಲೇ? ಆ ಮಟ್ಟಿಗೆ ಏಕಾಗ್ರತೆ ಅವನಿಗೆ ನಿಜಕ್ಕೂ ಸಾಧ್ಯವಾಗಿತ್ತಾ? ಅವನನ್ನು ಮತ್ತೆ ಅಲ್ಲಿಗೆ ಎಳೆತಂದದ್ದು ವೃತ್ತಿಯಲ್ಲಿರುವ ಸುಖವಾ? ಸಂಸಾರದ ದುಃಖವಾ?
ಇಂಥ ವಿಚಿತ್ರಗಳಿಗೆ ನಮ್ಮಲ್ಲಿ ಸುಲಭವಾಗಿ ಉತ್ತರ ಸಿಗುವುದಿಲ್ಲ. ನಡವಳಿಕೆಗಳಿಗೆ ಉತ್ತರ ಹುಡುಕುತ್ತಾ ಹೋಗುವುದು ಕೂಡ ಕಷ್ಟ. ನಾನು ಬಲ್ಲ ಹುಡುಗನೊಬ್ಬ ಬಾಲ್ಯದ ಸಂಗತಿಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದನ್ನು ನಾನು ನೋಡಿದ್ದೆ. ಅವನು ಅದರಿಂದ ಬಿಡಿಸಿಕೊಳ್ಳಲು ಇವತ್ತಿನ ತನಕವೂ ಸಾಧ್ಯವಾಗಿರಲೇ ಇಲ್ಲ.
ನಾನು ಮತ್ತು ಗೆಳೆಯ ಕುಂಟಿನಿ ಇತ್ತೀಚೆಗೆ ಮಾತಾಡುತ್ತಾ ಕೂತಿದ್ದೆವು. ನಮ್ಮ ನೆನಪುಗಳಿಗೆ ಹೇಗೆ ವಯಸ್ಸಾಗುವುದಿಲ್ಲ ಎಂದು ಯೋಚಿಸುತ್ತಿದ್ದೆವು. ಪಿಯೂಸಿ ಓದುತ್ತಿದ್ದಾಗ ನಮ್ಮ ಕಣ್ಣೆದುರು ಸುಳಿದಾಡಿ ಒಂಥರ ಖುಷಿ ಕೊಡುತ್ತಿದ್ದ ನಮ್ಮ ತರಗತಿಯ ಹುಡುಗಿಯನ್ನು ನಾವು ಆಮೇಲೆ ಭೇಟಿಯಾಗಲೇ ಇಲ್ಲ. ಆದರೆ ಈಗಲೂ ಅವಳ ಅದೇ ಮುಖ ಕಣ್ಮುಂದೆ ಸುಳಿಯುತ್ತದೆ. ಆಕೆಗೆ ನಮ್ಮ ನೆನಪಿನಲ್ಲಿ ವಯಸ್ಸೇ ಆಗಿಲ್ಲ. ಈಗಲೂ ಅವಳ ಹೊಳೆಯುವ ಕಣ್ಣುಗಳು, ಮೊಡವೆ ಮೊಳೆಯುತ್ತಿದ್ದ ಮುಖ, ತುಟಿಯಂಚಿನಲ್ಲಿ ಕಂಡೂ ಕಾಣದಂತಿದ್ದ ನಗು ಯಾವುದನ್ನೂ ಕಾಲ ಅಳಿಸಿಹಾಕಿಲ್ಲ. ಬಹುಶಃ ಆಕೆಯನ್ನು ಮತ್ತೆ ಎದುರಾದರೆ ನೆನಪು ಮತ್ತು ವಾಸ್ತವ ಮುಖಾಮುಖಿಯಾಗಬಹುದೋ ಏನೋ?
ಎಂದೋ ಓದಿದ ಪುಸ್ತಕ, ಯಾವತ್ತೋ ಕೇಳಿದ ಕವಿತೆ, ಎಲ್ಲೋ ಕಂಡ ಮುಖ, ಅಪರಾತ್ರಿಯಲ್ಲಿ ಸುರಿದ ಮಳೆ, ಎಲ್ಲೋ ಆದ ಅವಮಾನ ಇವೆಲ್ಲವೂ ಹೀಗೆಯೇ. ನಮ್ಮ ಮನಸ್ಸಿನೊಳಗೆ ಕೂತು ನಮ್ಮನ್ನು ಮುದಗೊಳಿಸುತ್ತಾ, ಗಾಬರಿ ಬೀಳಿಸುತ್ತಾ, ಎಚ್ಚರಿಸುತ್ತಾ, ತಲ್ಲಣಕ್ಕೆ ತಳ್ಳುತ್ತಾ ಇರುತ್ತದೆ. ಅದರ ಮಧುರ ನೆನಪಿನಲ್ಲಿ ನಾವು ಕಳೆದುಹೋಗುತ್ತೇವೆ.
ಅದು ಎಲ್ಲರಿಗೂ ಹಾಗಾಬೇಕು ಅಂತೇನಿಲ್ಲ. ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ ಎಂಬ ಸಾಲನ್ನು ನಾನು ಮೆಚ್ಚಿಕೊಂಡಾಡುತ್ತಿರುವ ಹೊತ್ತಿಗೇ, ಹೊಸ ತಲೆಮಾರಿನ ಹುಡುಗಿ ಹೇಳಿದಳು; ಎಲ್ಲಿದೆ ಸಾರ್ ಮೌನ. ಭೇಟಿ ಆಗೋದಕ್ಕೆ ಮುಂಚೇನೇ ಗಂಟಾನುಗಟ್ಟಲೆ ಮಾತಾಡಿರ್ತೀನಿ. ನೋಡಿರ್ತೀನಿ, ಜೊತೆಗೇ ಓಡಾಡಿರ್ತೀನಿ. ಮತ್ತೆ ಮೌನ ಎಲ್ಲಿ, ಅಳುವೆಲ್ಲಿ? ಅದಕ್ಕೆ ಅವಳ ಅಕ್ಕ ಹೇಳಿದಳಂತೆ: ಮೊದಲ ಸಾರಿ ಎಲ್ಲಿ ಭೇಟಿಯಾಗ್ತೀವೋ ಅಲ್ಲಿ ಮೌನ ಇರುತ್ತೆ. ಇರೋಲ್ಲ, ಇರುತ್ತೆ ಅಂತ ಅವರಿಬ್ಬರೂ ಮಾತಾಡಿಕೊಂಡರಂತೆ.
ಅಷ್ಟಕ್ಕೂ ಮೌನ ಮತ್ತು ತುಟಿಗೆ ಬಂದ ಅಳು ಒಳಗೆಲ್ಲೋ ಇದ್ದರೆ ಸಾಕು. ಅದು ಅವನನ್ನು ಭೇಟಿಯಾದಾಗ ಎದುರಾಗುವ ಮೌನವಲ್ಲವೇ ಅಲ್ಲ. ನಾವಿದ್ದ ಪರಿಸರ, ಪರಿಸ್ಥಿತಿ ಎರಡೂ ಬದಲಾದಾಗ ತುಂಬಿಕೊಳ್ಳುವ ಅಗತ್ಯ ಅನಿವಾರ್ಯ ಮೌನ ಅಲ್ಲವೇ ಎಂದು ಯೋಚಿಸತೊಡಗಿದೆ.
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು ಕೇಳಿಸದೇ ಹೋದರೆ ಎಂದು ಭಯವಾಗತೊಡಗಿತು.