Saturday, December 7, 2013

ಅಜ್ಜಂಪುರದ ಅಪರಾತ್ರಿ


ಅಜ್ಜಂಪುರದ ಅಕ್ಕಪಕ್ಕದ ಊರುಗಳಾದ ಕಗ್ಗಿ, ಮುಗಿಲಹಳ್ಳಿ, ಶಿವಾನಿ, ರಾಮಗಿರಿ, ಸೊಕ್ಕೆ, ಬಳೆಮಾರನಹಳ್ಳಿ ಇವೆಲ್ಲ ಈ ಕತೆ ನಡೆಯುವ ಕಾಲಕ್ಕೆ ದೊಡ್ಡ ಊರುಗಳೇನೂ ಆಗಿರಲಿಲ್ಲ. ಒಂದೂರಿಂದ ಇನ್ನೊಂದೂರಿಗೆ ಸಂಪರ್ಕವೂ ಇರಲಿಲ್ಲ. ಕಗ್ಗಿಯವರು ಬಳೆಮಾರನಹಳ್ಳಿಗೋ ರಾಮಗಿರಿಗೋ ಹೋಗಿ ಬರುವ ಪರಿಪಾಠವೂ ಇರಲಿಲ್ಲ. ಹೋಗಬೇಕಾದ ಸಂದರ್ಭಗಳೂ ಕಡಿಮೆ ಇರುತ್ತಿದ್ದವು.
ಈ ಹಳ್ಳಿಗಳಿಗೆ ಸೇರಿದ ಮಂದಿ ಒಟ್ಟು ಸೇರುತ್ತಿದ್ದದ್ದು ಬೀರೂರು ದೇವರ ಜಾತ್ರೆಯಲ್ಲೋ ಭದ್ರಾವತಿಯ ಸಂತೆಯಲ್ಲೋ ಅಷ್ಟೇ. ಸಂತೆಯೋ ಜಾತ್ರೆಯೋ ನಡೆದಾಗ ಪ್ರತಿಯೊಂದು ಹಳ್ಳಿಯ ಮಂದಿಯೂ ಗಾಡಿಕಟ್ಟಿಕೊಂಡು ಬರುತ್ತಿದ್ದರು. ಒಂದೊಂದು ಹಳ್ಳಿಯಿಂದ ಹತ್ತೊ ಹನ್ನೆರಡೋ ಗಾಡಿಗಳು ಹೊರಡುತ್ತಿದ್ದವು. ಗಾಡಿಗೆ ಒಂದಾಣೆಯಂತೆ ಕೊಟ್ಟು ಸ್ವಂತ ಗಾಡಿಯಿಲ್ಲದವರು ಕೂಡ ಭದ್ರಾವತಿಗೆ ಪ್ರಯಾಣ ಮಾಡುತ್ತಿದ್ದರು. ಈ ಎಲ್ಲಾ ಊರುಗಳ ಮಂದಿಯಲ್ಲಿ ಅಜ್ಜಂಪುರಕ್ಕೆ ಬಂದು ಠಿಕಾಣಿ ಹೂಡಿ, ಅಲ್ಲಿಗೆ ಸಮೀಪದಲ್ಲಿರುವ ಬಗ್ಗವಳ್ಳಿಯ ಯೋಗಾನರಸಿಂಹ ದೇವಸ್ಥಾನದ ಅಂಗಳದಲ್ಲಿ ಸೇರುತ್ತಿದ್ದರು. ಅಲ್ಲಿಂದ ಎಲ್ಲರೂ ಒಟ್ಟಾಗಿ ಭದ್ರಾವತಿಗೆ ತೆರಳುತ್ತಿದ್ದರು.
ಬಗ್ಗವಳ್ಳಿಯ ಯೋಗಾನರಸಿಂಹ ದೇವಸ್ಥಾನವನ್ನು ಕಟ್ಟಿಸಿದ್ದು ಹೊಯ್ಸಳರ ರಾಜ. ಯೋಗಾನರಸಿಂಹ ದೇವಸ್ಥಾನ ಎಂದೇ ಹೆಸರಾಗಿದ್ದರೂ ಗರ್ಭಗುಡಿಯಲ್ಲಿ ಈಗಲೂ ಇರುವುದು ಚೆನ್ನಕೇಶವನ ಮೂರ್ತಿಯೇ.  ಆ ಕಾಲಕ್ಕೆ ಬಗ್ಗವಳ್ಳಿ ದೇವಸ್ಥಾನಕ್ಕಿನ್ನೂ ನಿತ್ಯಪೂಜೆಯ ಸೌಭಾಗ್ಯ ಇರಲಿಲ್ಲ. ಅಜ್ಜಂಪುರದ ಮಂದಿ ನಂಬಿಕೊಂಡಿದ್ದದ್ದು ಅಮೃತೇಶ್ವರ ದೇವರನ್ನೇ. ಜಾತ್ರೆ, ನಿತ್ಯಪೂಜೆಯೆಲ್ಲ ಅಮೃತೇಶ್ವರ ದೇವಸ್ಥಾನದಲ್ಲೇ ನಡೆಯುತ್ತಿತ್ತು.
ಅಜ್ಜಂಪುರದಲ್ಲೊಂದು ಹಳೇ ರೇಲ್ವೇ ಸ್ಟೇಷನ್ನಿತ್ತು. ಆದರೆ ಅದು ಬಳಕೆಯಲ್ಲಿರಲಿಲ್ಲ. ಯಾವ ರೇಲೂ ನಿಲ್ಲದ ಆ ಸ್ಚೇಷನ್ನಿನಲ್ಲಿ ಬ್ರಿಟಿಷರ ಕಾಲದಲ್ಲೊಬ್ಬ ಸ್ಟೇಷನ್ ಮಾಸ್ಟರರನ್ನು ನೇಮಕ ಮಾಡಿದ್ದರು. ನಂತರದ ದಿನಗಳಲ್ಲೂ ಆ ಸಂಪ್ರದಾಯ ಮುಂದುವರಿದಿತ್ತು. ಹೇಳುವವರು ಕೇಳುವವರಿಲ್ಲದ ಅಜ್ಜಂಪುರ ಸ್ಟೇಷನ್ನಿನ ಸ್ಟೇಷನ್ ಮಾಸ್ಟರ್ ರಂಗಣ್ಣ, ತೀರ್ಥಹಳ್ಳಿಯಿಂದ ಬಂದವನಾಗಿದ್ದ. ಅವನಿಗೆ ಸ್ಟೇಷನ್ನಿನಲ್ಲಿದ್ದು ಮಾಡುವುದೇನೂ ಇರಲಿಲ್ಲ. ಹೀಗಾಗಿ ಅವನು ತಿಂಗಳ ಇಪ್ಪತ್ತೈದು ದಿನ ಬೀರೂರಿನಲ್ಲೋ ತೀರ್ಥಹಳ್ಳಿಯಲ್ಲೋ ಕಳೆಯುತ್ತಿದ್ದ.
ಇಂಥದ್ದರಲ್ಲಿ ಒಂದು ವಿಚಿತ್ರ ಘಟನೆ ನಡೆದು ಅವನು ಅಜ್ಜಂಪುರದಲ್ಲೇ ನೆಲಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಯೆರೆಹಳ್ಳಿಯಿಂದ ಗಾಡಿ ಹೊಡೆದುಕೊಂಡು ತರೀಕೆರೆಗೆ ಹೊರಟಿದ್ದ ರಾಜಪ್ಪ ನಾಯಕ ಎಂಬ ಜಮೀನ್ದಾರನ ಕುಟುಂಬ ಬಗ್ಗವಳ್ಳಿಯ ದೇವಸ್ಥಾನದಲ್ಲಿ ಠಿಕಾಣಿ ಹೂಡಿತ್ತು.ರಾಜಪ್ಪ ನಾಯಕನ ಹೆಂಡತಿ ತುಂಬು ಗರ್ಭಿಣಿಯಾಗಿದ್ದಳು. ಅವಳನ್ನು ತರೀಕೆರೆಯಲ್ಲಿರುವ ತವರು ಮನೆಗೆ ಕರೆದೊಯ್ಯಲು ರಾಜಪ್ಪ ಗಾಡಿಯಲ್ಲಿ ಕರೆತಂದಿದ್ದ. ಏಳನೇ ತಿಂಗಳಿಗೆ ಅವಳನ್ನು ತವರು ಮನೆಗೆ ಕರೆದೊಯ್ಯಬೇಕು ಅಂತ ರಾಜಪ್ಪ ನಿರ್ಧರಿಸಿದ್ದರೂ, ಆ ವರುಷ ವಿಪರೀತ ಮಳೆಯಾಗಿತ್ತು. ಮಳೆ ನಿಲ್ಲದೇ ಯೆರೆಹಳ್ಳಿಯಿಂದ ಹೊರಗೆ ಹೋಗುವುದು ಸಾಧ್ಯವೇ ಇರಲಿಲ್ಲ. ಅಲ್ಲದೇ ಲಕ್ಕವಳ್ಳಿಯ ಆಸುಪಾಸಿನಲ್ಲಿ ನರಭಕ್ಷಕ ಹುಲಿಯೊಂದು ಕಾಣಿಸಿಕೊಂಡು ಅನೇಕರನ್ನು ಬಲಿ ತೆಗೆದುಕೊಂಡಿದ್ದರಿಂದ, ಆ ಹುಲಿಯ ಉಪಟಳ ಕಡಿಮೆ ಆಗುವ ತನಕ ಯಾರೂ ಮನೆ ಬಿಟ್ಟು ಹೊರಗೇ ಬರುತ್ತಿರಲಿಲ್ಲ. ದೂರ ಪ್ರಯಾಣ ಮಾಡುವ ಮಾತಂತೂ ಇರಲೇ ಇಲ್ಲ.
ಹೀಗಾಗಿ ಆಕೆಗೆ ಎಂಟು ತಿಂಗಳು ತುಂಬಿದ ನಂತರವೇ ರಾಜಪ್ಪ ಅವಳನ್ನು ತವರು ಮನೆಗೆ ಕರೆದೊಯ್ಯಲು ನಿರ್ಧರಿಸಿ, ಆ ರಾತ್ರಿ ಬಗ್ಗವಳ್ಳಿ ದೇವಸ್ಥಾನದಲ್ಲಿ ಉಳಕೊಂಡಿದ್ದ. ಬೆಳಗ್ಗೆ ಬೇಗನೇ ಅಲ್ಲಿಂದ ತರೀಕೆರೆಗೆ ಹೊರಡುವುದೆಂದು ತೀರ್ಮಾನವಾಗಿತ್ತು.  ಲಾಟೀನು ದೀಪ ಹಚ್ಚಿಟ್ಟು, ಎತ್ತುಗಳನ್ನು  ದೇವಾಲಯದ ಹೊರಗಿರುವ ಕಲ್ಲುಕಂಬಗಳಿಗೆ ಕಟ್ಟಿ ರಾಜಪ್ಪನೂ ಅವನ ಹೆಂಡತಿಯೂ ದೇವಸ್ಥಾನದ ಒಳಗೆ ವಿಶ್ರಾಂತಿ ಪಡಕೊಳ್ಳುತ್ತಿದ್ದರು.
ನಡುರಾತ್ರಿಯ ಹೊತ್ತಿಗೆ ಹೊರಗಿನಿಂದ ಹುಲಿ ಗರ್ಜಿಸುವ ಸದ್ದು ಭೀಕರವಾಗಿ ಕೇಳಿಸಿ ರಾಜಪ್ಪನಿಗೆ ಎಚ್ಚರವಾಯಿತು. ರಾಜಪ್ಪ ಗಾಬರಿ ಬಿದ್ದು ಎದ್ದು ಕೂತು ಏನಾಗುತ್ತಿದೆ ಅಂತ ಕೇಳಿಸಿಕೊಂಡ. ದೇವಸ್ಥಾನದ ಕಲ್ಲು ಕಿಂಡಿಯಿಂದ ಹೊರಗೆ ನೋಡಿದರೆ ಹೆಬ್ಬುಲಿಯೊಂದು ರಾಜಪ್ಪನ ಗಾಡಿಯೆತ್ತಿನ ಮೇಲೆ ನೆಗೆದು ಅದನ್ನು ಕೊಲ್ಲಲು ಹವಣಿಸುತ್ತಿತ್ತು. ಎತ್ತು ಕೂಡ ಬಲಶಾಲಿ ಆಗಿದ್ದರಿಂದ ಹುಲಿಯ ಏಟಿನಿಂದ ಪಾರಾಗುತ್ತಾ, ಹುಲಿಯನ್ನು ತಿವಿಯಲು ನೋಡುತ್ತಿತ್ತು. ಎತ್ತನ್ನು ರಾಜಪ್ಪ ಕಟ್ಟಿ ಹಾಕಿದ್ದರಿಂದ ಅದಕ್ಕೆ ತಪ್ಪಿಸಿಕೊಂಡು ಓಡಿ ಹೋಗುವುದಕ್ಕೂ ಅವಕಾಶ ಇರಲಿಲ್ಲ.
ರಾಜಪ್ಪ ನೋಡುತ್ತಿದ್ದಂತೆ ಹುಲಿ ಬಾಗಿ ಕುಳಿತು, ಎತ್ತಿನ ಮೇಲೆ ಜಿಗಿಯಿತು. ಎತ್ತು ಪಕ್ಕಕ್ಕೆ ಸರಿದು ತಪ್ಪಿಸಿಕೊಂಡಿತು. ಹುಲಿ ಗುರಿತಪ್ಪಿ ಎತ್ತನ್ನು ಕಟ್ಟಿದ ಕಲ್ಲು ಕಂಬವನ್ನು ಅಪ್ಪಳಿಸಿತು. ಅದರ ಪಂಜಾದ ಏಟಿಗೋ ಹುಲಿ ಬಿದ್ದ ಭಾರಕ್ಕೋ  ಆ ಹಳೆಯ ಕಂಬ ಪಕ್ಕಕ್ಕೆ ವಾಲುತ್ತಾ ಬಿದ್ದೇ ಬಿಟ್ಟಿತು. ಎತ್ತು ಆ ಆ ಕಂಬವನ್ನು ಎಳಕೊಂಡೇ ಅಲ್ಲಿಂದ ಓಟ ಕಿತ್ತಿತು. ಆ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹುಲಿಯ ಮುಸುಡಿಗೂ ಏಟಾದಂತಿತ್ತು. ಅದು ಎತ್ತನ್ನು ಹಿಂಬಾಲಿಸುವ ಗೋಜಿಗೆ ಹೋಗದೆ ಮೂತಿಯನ್ನು ಮುಂಗೈಯಿಂದ ಒರೆಸಿಕೊಳ್ಳುತ್ತಾ ಮತ್ತೊಂದು ದಿಕ್ಕಿನಲ್ಲಿ ಹೊರಟು ಹೋಯಿತು. ಇದನ್ನು ನೋಡುತ್ತಿದ್ದ ರಾಜಪ್ಪ ಭಯದಿಂದ ನಡುಗುತ್ತಾ ನಿಂತಿದ್ದರೆ, ಅವನ ಪಕ್ಕದಲ್ಲಿ ಯಾರೋ ಕುಸಿದು ಬಿದ್ದಂತಾಯಿತು. ರಾಜಪ್ಪನಿಗೆ ಅರಿವೇ ಆಗದಂತೆ ಅವನ ಪಕ್ಕದಲ್ಲಿ ಬಂದು ನಿಂತು ಈ ಕಾಳಗ ನೋಡುತ್ತಿದ್ದ ಅವನ ಹೆಂಡತಿ ಭಯದಿಂದ ಕಂಪಿಸಿ ಮೂರ್ಛೆ ತಪ್ಪಿ ಬಿದ್ದಿದ್ದಳು. ರಾಜಪ್ಪ ಅವಳಿಗೆ ನೀರು ತಂದು ಆರೈಕೆ ಮಾಡತೊಡಗಿದ. ಆ ಭಯಕ್ಕೆ ಅವಳಿಗೆ ಅಲ್ಲೇ ಹೆರಿಗೆಯೂ ಆಯಿತು.

ಅದಾಗಿ ಸ್ವಲ್ಪ ಹೊತ್ತಿಗೆಲ್ಲ ಭೀಕರವಾದ ಸದ್ದೊಂದು ಇಡೀ ಊರನ್ನೇ ಬೆಚ್ಚಿಬೀಳಿಸುವಂತೆ ಕೇಳಿಸಿತು. ಆ ಸದ್ದಿನ ಬೆನ್ನಿಗೇ ಒಂದು ಚೀತ್ಕಾರವೂ ಹೊರಟಿತು. ಆಗಷ್ಟೇ ಬೆಳಕು ಹರಿಯಲು ಶುರುವಾಗಿತ್ತು.  ಆ ಸದ್ದು ಮತ್ತು ಚೀತ್ಕಾರ ಎಷ್ಟು ಭೀಕರವಾಗಿತ್ತೆಂದರೆ ಅದನ್ನು ಕೇಳಿಸಿಕೊಂಡ ಆಸುಪಾಸಿನ ಹಳ್ಳಿಯ ಮಂದಿ ಕತ್ತಿ, ಕುಡುಗೋಲು, ಕೊಡಲಿಯ ಸಮೇತ ಓಡಿ ಬಂದರು. ನಾಲ್ಕೈದು ಧೈರ್ಯಸ್ಥರು ಆ ಸದ್ದು ಎಲ್ಲಿಂದ ಬಂದಿರಬಹುದು ಎಂದು ಹುಡುಕುತ್ತಾ ಹೋದರೆ, ಅನಾಹುತವೊಂದು ಸಂಭವಿಸಿತ್ತು.
ಅಜ್ಜಂಪುರ ರೇಲ್ವೇ ಸ್ಟೇಷನ್ನನ್ನು ಹಾದು ಹೋಗುತ್ತಿದ್ದ ಗೂಡ್ಸು ರೇಲು ಹಳಿ ತಪ್ಪಿ ಬಿದ್ದು, ಪಕ್ಕದಲ್ಲಿರುವ ಪ್ರಪಾತಕ್ಕೆ ನುಗ್ಗಿತ್ತು. ಹಳಿಯ ಮೇಲೆ ಗುರುತು ಸಿಗದಷ್ಟು ನುಜ್ಜುಗುಜ್ಜಾದ ಎತ್ತು ಪ್ರಾಣ ಕಳಕೊಂಡು ಬಿದ್ದಿತ್ತು. ರೇಲು ಗುದ್ದಿದ ರಭಸಕ್ಕೆ ಅದರ ಕತ್ತು ಕತ್ತರಿಸಿ ಹೋಗಿತ್ತು.  ಅದರ ಕೊರಳಿಗೆ ಕಟ್ಟಿದ ಹಗ್ಗ, ಅದರ ತುದಿಯಲ್ಲಿರುವ ಕಂಬ ನೋಡಿದವರಿಗೆ ಎತ್ತು ರೇಲ್ವೇ ಹಳಿ ದಾಟುವುದಕ್ಕೆ ಸಾಧ್ಯವಾಗದಂತೆ ಮಾಡಿದ್ದು ಆ ಕಲ್ಲಿನ ಕಂಬವೇ ಅನ್ನುವುದು ಗೊತ್ತಾಗುವಂತಿತ್ತು. ಹಳಿದಾಟಿ ಓಡುವ ಹೊತ್ತಿಗೆ ಆ ಕಂಬ ಹಳಿಯ ನಡುವಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿತ್ತು. ಅದರಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿರುವ ಹೊತ್ತಿಗೆ ರೇಲು ಬಂದು ಡಿಕ್ಕಿ ಹೊಡೆದು,ಹಳಿಯ ಮೇಲಿರುವ ಕಲ್ಲಿನ ಕಂಬಕ್ಕೆ ಗುದ್ದಿದ  ರಭಸಕ್ಕೆ ಪ್ರಪಾತಕ್ಕೆ ನುಗ್ಗಿತ್ತು.
ಈ ಘಟನೆ ನಡೆಯುವ ಹೊತ್ತಿಗೆ ಸ್ಟೇಷನ್ ಮಾಸ್ಟರ್ ರಂಗಣ್ಣ ಬೀರೂರಿನಲ್ಲಿದ್ದ. ಅವನು ಸ್ಥಳದಲ್ಲಿರಲಿಲ್ಲ ಎಂಬ ಕಾರಣಕ್ಕೆ ಅವನ ಮೇಲೆ ವಿಚಾರಣೆ ನಡೆದು, ಅವನು ಕಡ್ಡಾಯವಾಗಿ ಸ್ಚೇಷನ್ನಿನಲ್ಲೇ ಇರಬೇಕು ಎಂದು ಇಲಾಖೆ ಆದೇಶ ಹೊರಡಿಸಿತು.
-೨-
ಈ ಪ್ರಕರಣ ನಾನೀಗ ಹೇಳಹೊರಟಿರುವ ಸಂಗತಿಗೆ ಕೇವಲ ಮುನ್ನುಡಿ ಅಷ್ಟೇ.  ಇದಾಗಿ ನಾಲ್ಕೈದು ತಿಂಗಳ ನಂತರ, ವಿಚಾರಣೆ ಮುಗಿದು, ಶಿಕ್ಷೆಗೆ ಗುರಿಯಾಗಿ, ಸ್ಚೇಷನ್ನಿಗೆ ಬಂದ ರಂಗಣ್ಣನಿಗೆ ಇದೆಲ್ಲ ಯಾರಾದರೂ ಬೇಕು ಅನ್ನಿಸತೊಡಗಿತ್ತು. ಅವನಿಗಿನ್ನೂ ಮದುವೆ ಆಗಿರಲಿಲ್ಲ. ಮದುವೆ ಆಗುತ್ತೇನೆಂಬ ನಂಬಿಕೆಯೂ ಇರಲಿಲ್ಲ. ಬಾಲ್ಯದಲ್ಲೇ ಅವನ ಅಮ್ಮ ತೀರಿಕೊಂಡಿದ್ದರು. ಅವನ ಅಪ್ಪ ದಾವಣಗೆರೆಯ ಕಾಟನ್ ಮಿಲ್ಲಿನಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ. ಬಂದ ಸಂಬಳವನ್ನು ಕುಡಿದು ಖಾಲಿ ಮಾಡುತ್ತಿದ್ದ ಅವನು ಮನೆಗೂ ಬರುತ್ತಿರಲಿಲ್ಲ. ತೀರ್ಥಹಳ್ಳಿಯಲ್ಲಿ ಯಾವ ಮಳೆಗಾಲದಲ್ಲಿ ಬೇಕಿದ್ದರೂ ಮುರಿದು ಬೀಳಬಹುದಾದ ಮನೆಯೊಂದು ಬಿಟ್ಟರೆ ರಂಗಣ್ಣನಿಗೆ ಮತ್ಯಾವ ಆಸ್ತಿಯೂ ಇರಲಿಲ್ಲ.
ತಾನು ಯಾಕಾಗಿ, ಯಾರಿಗಾಗಿ ಈ ಕೊಂಪೆಯಲ್ಲಿದ್ದು ಒದ್ದಾಡಬೇಕು ಅಂತ ಬೇಜಾರಿನಿಂದಲೇ ಅಜ್ಜಂಪುರಕ್ಕೆ ಬರುವ ಹೊತ್ತಿಗೆ ರಂಗಣ್ಣನೂ ವಿಪರೀತ ಕುಡಿಯಲು ಶುರು ಮಾಡಿದ್ದ. ಅದಕ್ಕೂ ಮೊದಲು ವಾರಕ್ಕೊಮ್ಮೆ ಕುಡಿಯುತ್ತಿದ್ದವನು, ರೇಲ್ವೇ ಇಲಾಖೆಯ ಅವಕೃಪೆಗೆ ಗುರಿಯಾದಂದಿನಿಂದ ದಿನಾ ಕುಡಿಯಲು ಅಭ್ಯಾಸ ಮಾಡಿದ್ದ. ಮತ್ತೆ ಡ್ಯೂಟಿಗೆ ಸೇರಿಕೊಂಡ ಮೊದಲನೇ ದಿನ ರಾತ್ರಿಯೂ ಸಿಕ್ಕಾಪಟ್ಟೆ ಕುಡಿದು, ಇಷ್ಟಗಲ ಕಣ್ಣು ಬಿಟ್ಟುಕೊಂಡು ಸ್ಟೇಷನ್ನಿನ ಹೊರಗಿರುವ ಕಲ್ಲು ಬೆಂಚಿನ ಮೇಲೆ ಕೂತಿದ್ದ.

ನಡುರಾತ್ರಿ ದಾಟುತ್ತಿದ್ದಂತೆ ಗೂಡ್ಸು ಟ್ರೇನು ಬರುತ್ತಿತ್ತು. ಅದಕ್ಕೆ ಹಸಿರು ಬಾವುಟ ಬೀಸಿ ಲೈನು ಕ್ಲಿಯರ್ ಇದೆ ಅಂತ ತೋರಿಸುವ ಹೊಸ ಕೆಲಸವನ್ನೂ ಇಲಾಖೆ ಅವನಿಗೆ ಒಪ್ಪಿಸಿತ್ತು. ಎತ್ತು ಡಿಕ್ಕಿ ಹೊಡೆದು ಅಪಘಾತವಾಗಿ ಲಕ್ಷಾಂತರ ರುಪಾಯಿ ಮೌಲ್ಯದ ಕಾಳು ಮೆಣಸು, ಕಾಫಿ ಬೀಜ ಇವೆಲ್ಲ ನಷ್ಟವಾಗಿದ್ದರಿಂದ ಪ್ರತಿ ಸ್ಚೇಷನ್ನು ಮಾಸ್ತರರಿಗೂ ಲೈನ್ ಕ್ಲಿಯರ್ ಮಾಡುವ ಕೆಲಸವನ್ನು ಕಡ್ಡಾಯ ಮಾಡಿದ್ದರು. ಹೀಗಾಗಿ ರಂಗಣ್ಣ ರಾತ್ರಿ ಪೂರ ಎಚ್ಚರವಿರಬೇಕಾಗಿತ್ತು.
ಆವತ್ತು ರಾತ್ರಿ ನಡುರಾತ್ರಿಯ ತನಕ ಕುಡಿದು, ಟ್ರೇನಿಗೆ ಕಾಯುತ್ತಾ ಕುಂತವನಿಗೆ ದೂರದಲ್ಲಿ ಟ್ರೇನು ಬರುತ್ತಿರುವುದು ಕಂಡಿತು.  ಕಷ್ಟ ಪಟ್ಟು ಎದ್ದು ನಿಂತು ಪಕ್ಕದಲ್ಲೇ ಇಟ್ಟುಕೊಂಡಿದ್ದ ಹಸಿರು ಬಾವುಟವನ್ನು ಕೈಗೆತ್ತಿಕೊಂಡು ಇನ್ನೇನು ಬೀಸಬೇಕು ಅನ್ನುವಷ್ಟರಲ್ಲಿ ರಂಗಣ್ಣ ಬೆಚ್ಚಿಬೀಳುವಂತೆ, ರೇಲ್ವೇ ಸ್ಟೇಷನ್ನಿನ ಹೊರಭಾಗದಿಂದ ಎತ್ತೊಂದು ಓಡಿ ಬಂದಿತು. ರಂಗಣ್ಣ ಹಸಿರು ಬಾವುಟ ಎತ್ತುವ ಹೊತ್ತಿಗೆ ಸರಿಯಾಗಿ ಅದು ಭೀಕರವಾಗಿ ಆರ್ತನಾದ ಮಾಡುತ್ತಾ, ರೇಲ್ವೇ ಹಳಿಯತ್ತ ನುಗ್ಗಿತು. ರಂಗಣ್ಣ ದಿಗ್ಭ್ರಾಂತನಾಗಿ ನಿಂತು ನೋಡುತ್ತಿದ್ದಂತೆ, ಆ ಎತ್ತಿನ ಕೊರಳಿಗೆ ಕಟ್ಟಿದ ಹಗ್ಗವೂ ಆ ಹಗ್ಗದ ತುದಿಗೆ ಆಗಷ್ಟೇ ನೆಲದಿಂದ ಕಿತ್ತಂತೆ ಕಾಣುವ ಕಲ್ಲು ಕಂಬವೂ ಕಾಣಿಸಿತು. ಎತ್ತಿದ ಹಸಿರು ಬಾವುಟವನ್ನು ಕೆಳಗಿಳಿಸಲೂ ಆಗದೇ ರಂಗಣ್ಣ ಹಾಗೇ ನಿಂತಿದ್ದ.
ಅದೇ ಹೊತ್ತಿಗೆ ಗೂಡ್ಸು ರೇಲು ಭೀಕರವಾಗಿ ಸಿಳ್ಳೆ ಹಾಕುತ್ತಾ, ಭಯಂಕರ ಸದ್ದು ಮಾಡುತ್ತಾ ಸ್ಟೇಷನ್ನು ದಾಟಿತು. ಅದೇ ಹೊತ್ತಿಗೆ ರೇಲು ಹಳಿಯನ್ನು ಎತ್ತು ದಾಟುತ್ತಿತ್ತು. ಎತ್ತಿಗೂ ರೇಲಿಗೂ ಮೂರಡಿಯಷ್ಟೇ ಅಂತರ ಉಳಿದಿದೆ ಅನ್ನುವುದು ಕಂಠಪೂರ್ತಿ ಕುಡಿದಿದ್ದ ರಂಗಣ್ಣನಿಗೆ ಮನವರಿಕೆಯಾಗುತ್ತಿದ್ದಂತೆ ರಂಗಣ್ಣ ಊರೇ ಬೆಚ್ಚಿಬೀಳುವಂತೆ ಆರ್ತನಾದ ಮಾಡಿ ನಿಂತಲ್ಲೇ ಕುಸಿದು ಬಿದ್ದ.
ರಂಗಣ್ಣ ಏಳುವ ಹೊತ್ತಿಗೆ ರೈಲು ಹೊರಟು ಹೋಗಿತ್ತು. ಅವನು ಊಹಿಸಿದಂತೆ ಅಪಘಾತವೇನೂ ಆಗಿರಲಿಲ್ಲ. ಸದ್ಯ ಬದುಕಿದೆ ಎಂದುಕೊಂಡು ರಂಗಣ್ಣ ನಿಟ್ಟುಸಿರುಬಿಟ್ಟು ಇನ್ನು ಮೇಲೆ ರಾತ್ರಿ ಕುಡಿಯಬಾರದು ಅಂತ ತೀರ್ಮಾನಿಸುವ ಹೊತ್ತಿಗೆ ಭೀಕರವಾದ ಸುದ್ದಿಯೊಂದು ಬಂತು.
ರೇಲು ಮುಂದಿನ ಸ್ಟೇಷನ್ನಿನಲ್ಲಿ ನಿಂತಿದ್ದ ಗೂಡ್ಸ್ ರೇಲಿಗೆ ಡಿಕ್ಕಿ ಹೊಡೆದಿತ್ತು. ಎರಡೂ ರೇಲುಗಳೂ ಚಿಂದಿಯಾಗಿ ಹೋಗಿದ್ದವು. ನಿಂತಿದ್ದ ಗೂಡ್ಸು ರೇಲಿನ ಡ್ರೈವರು ಇಂಜಿನಿನಲ್ಲೇ ಅಪ್ಪಚ್ಚಿಯಾಗಿ ಪ್ರಾಣ ಬಿಟ್ಟಿದ್ದ. ಯಾರೆಷ್ಟೇ ಹುಡುಕಿದರೂ ಬಂದು ಗುದ್ದಿದ್ದ ಗೂಡ್ಸು ರೇಲಿನ ಡ್ರೈವರು ಸಣ್ಣೀರಯ್ಯ ಮಾತ್ರ ಪತ್ತೆಯಾಗಿರಲಿಲ್ಲ.
ಸಣ್ಣೀರಯ್ಯ ಅಜ್ಜಂಪುರ ಸ್ಟೇಷನ್ನಿನ ಫ್ಲಾಟ್ ಫಾರಮ್ಮಿನ ಕೊನೆಗೆ ತಲೆಯೊಡೆಸಿಕೊಂಡು ಬಿದ್ದುಬಿಟ್ಟಿದ್ದ. ಅವನನ್ನು ರಂಗಣ್ಣ ನೋಡಿದ್ದು ಈ ಘಟನೆಯೆಲ್ಲ ಅವನಿಗೆ ಗೊತ್ತಾಗಿ ಎಷ್ಟೋ ಹೊತ್ತಿನ ನಂತರ. ಪುಣ್ಯಕ್ಕೆ ಸಣ್ಣೀರಯ್ಯನ ಪ್ರಾಣ ಹೋಗಿರಲಿಲ್ಲ.  ಅವನನ್ನು ದಾವಣಗೆರೆಯ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಿದ ಮೇಲೆ ಕೊಂಚ ಕೊಂಚವೇ ಚೇತರಿಸಿಕೊಂಡ ಅವನು ಮೂರು ದಿನಗಳ ನಂತರ ರಂಗಣ್ಣನಿಗೆ ಆವತ್ತೇನಾಯಿತು ಅನ್ನುವುದನ್ನು ಹೇಳಿದ್ದ.
ರಂಗಣ್ಣ ಮೂರ್ಛೆ ಬಿದ್ದ ರಾತ್ರಿ ಆ  ರೇಲು ಓಡಿಸುತ್ತಿದ್ದ ದಾವಣಗೆರೆಯ ಸಣ್ಣೀರಯ್ಯ ಕೂಡ ಕೊನೆ ಗಳಿಗೆಯಲ್ಲಿ ಎತ್ತು ಓಡಿಬರುವುದನ್ನು ನೋಡಿದ್ದ. ರೇಲನ್ನು ನಿಲ್ಲಿಸುವುದಂತೂ ಸಾಧ್ಯವೇ ಇರಲಿಲ್ಲ ಅನ್ನುವ ಅಂತರಲ್ಲಿ ಎತ್ತು ಹಳಿಗೆ ನುಗ್ಗಿತ್ತು. ಇನ್ನೇನು ಆ ರಭಸಕ್ಕೆ ಒಂದೋ ಎತ್ತು ಸತ್ತು ಹೋಗುತ್ತದೆ ಅಥವಾ ರೇಲು ಹಳಿ ತಪ್ಪಿ ತಾನು ಸಾಯುತ್ತೇನೆ ಎಂದು ಭಾವಿಸಿ, ಅಷ್ಟೇನೂ ವೇಗದಲ್ಲಿಲ್ಲದ ರೈಲಿನಿಂದ ಸಣ್ಣೀರಯ್ಯ ಧುಮುಕಿಬಿಟ್ಟಿದ್ದ. ಅವನು ಧುಮುಕಿದ ರಭಸಕ್ಕೆ, ರೇಲ್ವೇ ಹಳಿ ಪಕ್ಕದಲ್ಲಿ ಗೂಟದಂತೆ ನೆಟ್ಟಿದ್ದ ಕಬ್ಬಿಣದ ಸರಳು ತಲೆಗೆ ಬಡಿದಿತ್ತು. ಸಣ್ಣೀರಯ್ಯ ಪ್ರಜ್ಞೆ ತಪ್ಪಿ ಅಲ್ಲೇ ಬಿದ್ದಿದ್ದ.
ಹೀಗೆ ರಾತ್ರೋ ರಾತ್ರಿ ಅದೇ ಹೊತ್ತಿಗೆ ಜಿಗಿದು ಬರುವ ಎತ್ತು ಎರಡು ರೇಲು ಅಪಘಾತಗಳಿಗೆ ಕಾರಣವಾದದ್ದು ಬ್ರಿಟಿಶ್ ಸರ್ಕಾರಕ್ಕೆ ತಲೆನೋವಿನ ಸಂಗತಿಯಾಯಿತು. ಅಜ್ಜಂಪುರದ ದಾರಿಯಲ್ಲಿ ಗೂಡ್ಸು ರೇಲು ಹೋಗುವುದನ್ನು ನಿಲ್ಲಿಸುವುದೇನೂ ಕಷ್ಟವಾಗಿರಲಿಲ್ಲ. ಆದರೆ ಬ್ರಿಟಿಷರು ಚಿಕ್ಕಮಗಳೂರು ಆಸುಪಾಸಿನ ಸಂಬಾರ ಪದಾರ್ಥಗಳನ್ನು ರೇಲಿನ ಮೂಲಕವೇ ಸಾಗಿಸಬೇಕಾಗಿತ್ತು. ಲಾರಿಯಲ್ಲೋ ಚಕ್ಕಡಿಯಲ್ಲೋ ಸಾಗಿಸಿದರೆ, ಅದು ಬೆಂಗಳೂರು ತಲುಪಿ, ಅಲ್ಲಿಂದ ಮದ್ರಾಸು ತಲುಪುವ ಹೊತ್ತಿಗೆ ಬಿಸಿಲು ಮಳೆಗೆ ಒಡ್ಡಿಕೊಂಡು ಅದರ ಪರಿಮಳ ಹೊರಟು ಹೋಗುತ್ತಿತ್ತು. ಹೀಗಾಗಿ ಅವುಗಳಿಗೆ ಒಳ್ಳೆಯ ಬೆಲೆಯೂ ಸಿಗುತ್ತಿರಲಿಲ್ಲ.
ಈ ಎಲ್ಲಾ ಕಾರಣಕ್ಕೆ ಅಜ್ಜಂಪುರ ಮುಖಾಂತರ ಹೋಗುತ್ತಿರುವ ಗೂಡ್ಸು ರೇಲನ್ನು ನಿಲ್ಲಿಸುವುದು ಸಾಧ್ಯವೇ ಇರಲಿಲ್ಲ. ಅಲ್ಲದೇ ಒಂದು ಎತ್ತಿಗೋಸ್ಕರ ರೇಲು ಸಂಚಾರವನ್ನು ನಿಲ್ಲಿಸುವುದು ಹುಚ್ಚುತನದ ಪರಮಾವಧಿಯಂತೆ ಅಧಿಕಾರಿಗಳಿಗೆ ಕಂಡಿತು. ಎರಡು ಅಪಘಾತಗಳು ನಡೆದು, ಒಬ್ಬ ಡ್ರೈವರು ಮತ್ತು ಮೂವರು ಗಾರ್ಡುಗಳನ್ನು ಬಲಿತೆಗೆದುಕೊಂಡ ರೂಟಿನಲ್ಲಿ ಹೋಗುವುದಕ್ಕೆ ಅನೇಕರು ಅಂಜತೊಡಗಿದವರು. ಬ್ರಿಟಿಷರು ಆ ರೇಲ್ವೇ ರೂಟಿನ ಇತಿಹಾಸ ಗೊತ್ತಿಲ್ಲದ ಯಾವ್ಯಾವುದೋ ಭಾಷೆಯ ಡ್ರೈವರುಗಳನ್ನು ತಂದು ಅಲ್ಲಿಗೆ ಹಾಕಿ ನೋಡಿದರು.
ಅವರೆಲ್ಲರ ಅನುಭವ ಒಂದೇ ಆಗಿತ್ತು. ಅಜ್ಜಂಪುರದ ಸ್ಟೇಷನ್ನಿನ ಬಳಿ ಬರುತ್ತಿದ್ದಂತೆ ಎತ್ತೊಂದು ಶರವೇಗದಿಂದ ಓಡಿ ಬಂದು ರೈಲ್ವೇ ಹಳಿಯನ್ನು ದಾಟಿಕೊಂಡು ಹೋದಂತೆ ಕಾಣಿಸುತ್ತಿತ್ತು. ಅದು ನಿಜವೆಂದೇ ಭಾವಿಸುವ ಡ್ರೈವರುಗಳು ಒಂದೋ ರೇಲನ್ನು ನಿಲ್ಲಿಸುವುದಕ್ಕೆ ಯತ್ನಿಸುತ್ತಿದ್ದರು. ಮತ್ತೆ ಕೆಲವರು ಕಣ್ಮುಚ್ಚಿಕೊಂಡು ರೇಲಿಂದ ಧುಮುಕುತ್ತಿದ್ದರು. ರೇಲು ನಿಲ್ಲಿಸಲು ಯತ್ನಿಸಿದರೆ ಥಟ್ಟನೆ ಬ್ರೇಕ್ ಹಾಕಿದ ಪರಿಣಾಮ ಒಂದೆರಡು ಬೋಗಿಗಳು ಹಳಿ ತಪ್ಪುತ್ತಿದ್ದವು. ಡ್ರೈವರುಗಳು ಜಿಗಿದು ಪಾರಾದರೆ, ರೇಲು ಡ್ರೈವರಿಲ್ಲದೇ ಹೋಗಿ ಮುಂದಿನ ಸ್ಟೇಷನ್ನಿನಲ್ಲಿ ಅನಾಹುತಕ್ಕೆ ಈಡಾಗುತ್ತಿತ್ತು. ಕ್ರಮೇಣ ಅದು ಎತ್ತಲ್ಲವೆಂದೂ, ಎತ್ತಿನ ದೆವ್ವವೆಂದೂ ಪ್ರಚಾರ ಆಗುತ್ತಿದ್ದ ಹಾಗೇ, ಇಡೀ ಊರಲ್ಲಿ ಭೀತಿ ಹಬ್ಬಿತು. ಆ ರಸ್ತೆಯಲ್ಲಿ ಸಂಚರಿಸಲು ಡ್ರೈವರುಗಳು ಅಂಜತೊಡಗಿದರು. ಆ ರೂಟಿಗೆ ಹಾಕುತ್ತಿದ್ದಂತೆ, ಕೆಲಸ ಬಿಟ್ಟು ಹೇಳದೇ ಕೇಳದೇ ಪರಾರಿ ಆಗುತ್ತಿದ್ದರು.
ಇದೆಲ್ಲ ಸವಾಲಾಗಿ ಕಾಣಿಸಿದ್ದು ಜಾನ್ ಡೈಕ್ ಎಂಬ ಅಧಿಕಾರಿಗೆ. ಆ ರೇಲ್ವೇ ಝೋನ್ ಮುಖ್ಯಸ್ಥನಾಗಿದ್ದ ಅವನು ಭೂತಚೇಷ್ಟೆಗಳನ್ನೆಲ್ಲ ನಂಬುತ್ತಲೇ ಇರಲಿಲ್ಲ. ಯಾರೋ ಕಿಡಿಗೇಡಿಗಳ ಕೆಲಸ ಅದಿರಬೇಕು ಎಂದುಕೊಂಡು , ತನ್ನ ಜೀಪು ಹತ್ತಿಕೊಂಡು ಅವನು ಅಜ್ಜಂಪುರಕ್ಕೆ ಬಂದು ನೆಲೆಯೂರಿದ. ತನ್ನ ಜೀಪಲ್ಲಿ ಸುತ್ತಾಡಿ ಆ ಎತ್ತು ಯಾರದ್ದು ಅನ್ನುವ ವಿವರ ಸಂಗ್ರಹಿಸಿದ. ಅದು ರಾಜಪ್ಪನದು ಎಂದು ಗೊತ್ತಾಗುತ್ತಿದ್ದಂತೆ, ರಾಜಪ್ಪ ನಾಯಕನ ಮನೆಗೆ ಹೋಗಿ ಅವನ ಮೇಲೆ ಕೇಸು ಹಾಕುವುದಾಗಿ ಕೂಗಾಡಿದ, ತನ್ನ ಎತ್ತು ರೇಲಿಗೆ ಸಿಕ್ಕಿ ಸತ್ತು ಹೋಗಿ ಆರೇಳು ತಿಂಗಳುಗಳೇ ಆಗಿವೆ ಎಂದು ಹೇಳಿದರೂ ಜಾನ್ ಡೈಕ್ ನಂಬಲಿಲ್ಲ.
ಅವನ ತಲೆಯಲ್ಲಿ ಬೇರೆಯೇ ಸಂಶಯ ಓಡುತ್ತಿತ್ತು. ರೇಲಿನ ಮೂಲಕ ಸಾಗಿಸಲಾಗುತ್ತಿದ್ದ ಸಂಬಾರ ಪದಾರ್ಥಗಳನ್ನು ಕದಿಯಲು ಅಜ್ಜಂಪುರದಲ್ಲಿ ಬೀಡು ಬಿಟ್ಟಿರುವ ಕಳ್ಳರು ಈ ಉಪಾಯ ಹೂಡಿದ್ದಾರೆ ಅಂತ ಅವನು ಭಾವಿಸಿದ್ದ. ಹೀಗಾಗಿ ಅವನು ಸ್ಥಳೀಯ ಪೊಲೀಸ್ ಅಧಿಕಾರಿಯನ್ನೂ ಕರೆಸಿ, ಹಳ್ಳಿಯ ರೈತರ ಮನೆಗಳನ್ನೆಲ್ಲ ಜಪ್ತಿ ಮಾಡಿಸಿದ. ಯಾರ ಮನೆಯಲ್ಲೂ ಒಂದೇ ಒಂದು ಹಿಡಿ ಕಾಳು ಮೆಣಸಾಗಲೀ, ಏಲಕ್ಕಿಯಾಗಲಿ ಸಿಗಲಿಲ್ಲ. ಯಾವುದೋ ಒಂದು ದೊಡ್ಡ ಗ್ಯಾಂಗು ಈ ಕೆಲಸದಲ್ಲಿ ತೊಡಗಿದೆ ಎಂದು ಖಾತ್ರಿಯಾಗಿ, ಅವನು ತಾನೇ ರೇಲ್ವೇ ಸ್ಟೇಷನ್ನಿನ ಬಳಿ ಕಾವಲು ಕಾಯುವುದಾಗಿ ಹೇಳಿ, ತನ್ನ ಇಲಾಖೆಯ ಸಿಬ್ಬಂದಿಗಳಿಗೆ ರೇಲು ಓಡಿಸಿಕೊಂಡು ಬರುವಂತೆ ಹೇಳಿದ.
ಆವತ್ತು ರಾತ್ರಿಯೂ ರೇಲು ಬಂತು. ಅಜ್ಜಂಪುರ ಸ್ಟೇಷನ್ನಿನಲ್ಲಿ ಜಾನ್ ಡೈಕ್ ಕಾಯುತ್ತಾ ಕೂತಿದ್ದ. ಆವತ್ತು ಯಾವ ಎತ್ತೂ ಬರಲಿಲ್ಲ. ಅಲ್ಲಿಗೆ ಜಾನ್ ಡೈಕನಿಗೆ ಯಾರೋ ಪಿತೂರಿ ಮಾಡುತ್ತಿದ್ದಾರೆ ಎನ್ನುವುದು ಖಾತ್ರಿಯಾಯಿತು. ಇಂಥ ಆಟವೆಲ್ಲ ನನ್ನ ಬಳಿ ನಡೆಯುವುದಿಲ್ಲವೆಂದೂ, ರಂಗಣ್ಣನನ್ನು ಕರೆದು ಎಚ್ಚರಿಸಿದ ಜಾನ್ ಡೈಕ್. ಇನ್ನು ಮುಂದೆ ಎಚ್ಚರಿಕೆಯಿಂದ ಸ್ಟೇಷನ್ ಕಾಯಬೇಕೆಂದು, ಕುಡಿಯುವುದನ್ನು ಇಲಾಖೆ ಸಹಿಸುವುದಿಲ್ಲವೆಂದೂ, ಇನ್ನೊಂದು ಸಲ ಅಪಘಾತವಾದರೆ ಕೆಲಸಕ್ಕೆ ಸಂಚಕಾರ ಬರುತ್ತದೆಂದೂ ಜೈಲುವಾಸ ಎದುರಿಸಬೇಕಾಗುತ್ತದೆ ಎಂದೂ ಹೆದರಿಸಿದ. ರಂಗಣ್ಣ ಕೆಲಸ ಬಿಟ್ಟು ಎಲ್ಲಿಗಾದರೂ ಓಡಿ ಹೋಗುವುದೇ ತನಗಿರುವ ಏಕೈಕ ದಾರಿ ಎಂದು ಯೋಚಿಸುತ್ತಿರಬೇಕಾದರೆ, ನಾಗವಂಗಲದ ಬಳಿ ರೇಲ್ವೇ ಟ್ರಾಕಿಗೆ ಎತ್ತು ಅಡ್ಡಬಂದಿದೆಯೆಂದೂ ಅಲ್ಲಿ ಅಪಘಾತ ಆಗಿದೆಯೆಂದೂ ಸುದ್ದಿ ಬಂತು. ರಂಗಣ್ಣನೂ ಜಾನ್ ಡೈಕನೂ ಜೀಪು ಹತ್ತಿ ನಾಗವಂಗಲಕ್ಕೆ ಹೋದರು.
ಅಜ್ಜಂಪುರದಲ್ಲಾದ ರೀತಿಯಲ್ಲೇ ಅಲ್ಲೂ ಅಪಘಾತವಾಗಿತ್ತು.  ಡ್ರೈವರು ಎತ್ತು ನುಗ್ಗಿದ ರಭಸಕ್ಕೆ ರೇಲಿನಿಂದ  ಹಾರಿ ಪ್ರಾಣ ಬಿಟ್ಟಿದ್ದ. ರೇಲು ಡ್ರೈವರಿಲ್ಲದೇ ಆರೆಂಟು ಮೈಲಿ ಹೋಗಿ, ನಾಗವಂಗಲದಲ್ಲಿ ನಿಂತಿದ್ದ ರೇಲಿಗೆ ಡಿಕ್ಕಿ ಹೊಡೆದಿತ್ತು. ಜಾನ್ ಡೈಕ್ ಈ ಘಟನೆಯ ನಂತರವೂ ಅದು ದೆವ್ವದ ಕಾಟ ಎಂದು ನಂಬಲಿಲ್ಲ. ತಾವು ಅಜ್ಜಂಪುರದಲ್ಲಿದ್ದ ಹೊತ್ತಿಗೇ, ನಾಗವಂಗಲದಲ್ಲಿ ಯಾರೋ ದರೋಡೆ ಮಾಡುವುದಕ್ಕೆ ಈ ಉಪಾಯ ಮಾಡಿದ್ದಾರೆ ಎಂದು ಅವನು ಯೋಚಿಸುತ್ತಿದ್ದ.
ಅವನ ಅನುಮಾನಕ್ಕೆ ಕಾರಣಗಳೂ ಇದ್ದವು. ಅಪಘಾತವಾದ ರೇಲಿನಲ್ಲಿದ್ದ ಏಲಕ್ಕಿ, ಕಾಳುಮೆಣಸು, ಕೆಂಪು ಮೆಣಸು, ಜಾಯಿಕಾಯಿ, ಲವಂಗ, ಶುಂಠಿಗಳನ್ನೆಲ್ಲ ಯಾರೋ ಕಳ್ಳತನ ಮಾಡಿರುತ್ತಿದ್ದರು.  ಆ ಕಾಲಕ್ಕೆ ರೇಲು ಅಪಘಾತವಾದರೆ ಸಿಬ್ಬಂದಿ ಬಂದು ಅದರ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ನಾಲ್ಕಾರು ದಿನ ಬೇಕಾಗುತ್ತಿತ್ತು. ಅಷ್ಟರಲ್ಲಿ ರೇಲಿನಲ್ಲಿರುವ ಸಾಮಾನುಗಳೆಲ್ಲ ಕಳ್ಳತನ ಆಗಿರುತ್ತಿದ್ದವು. ಕಳ್ಳತನ ಮಾಡುವುದಕ್ಕೇ ರೇಲನ್ನು ಅಪಘಾತ ಮಾಡಿಸುತ್ತಿದ್ದರೋ, ಅಪಘಾತ ಆದ ರೇಲನ್ನು ಕೊಳ್ಳೆಹೊಡೆಯುತ್ತಿದ್ದರೋ ಅನ್ನುವುದು ಮಾತ್ರ ಖಾತ್ರಿಯಾಗುತ್ತಿರಲಿಲ್ಲ.
ಜಾನ್ ಡೈಕನಿಗೆ ಇದೊಂದು ಸವಾಲಾಗಿ ಪರಿಣಮಿಸಿತು. ಆ ಪ್ರದೇಶದಲ್ಲಿ ಯಾಕೆ ಹಾಗಾಗುತ್ತದೆ ಅನ್ನುವುದನ್ನು ನೋಡಲೇಬೇಕು ಅನ್ನಿಸಿ, ಆತ ಆ ಆಸುಪಾಸಿನಲ್ಲಿ ಎಲ್ಲ ರೈತರ ಮನೆಯಲ್ಲಿದ್ದ ಬಿಳಿ ಎತ್ತುಗಳನ್ನು ಕೊಂಡುಕೊಂಡು ಬೇರೆ ಊರಿಗೆ ಸಾಗಿಸಿದ. ಕೇವಲ ಕರಿ ಎತ್ತುಗಳನ್ನು ಮಾತ್ರ ಇಟ್ಟುಕೊಳ್ಳಬಹುದೆಂದು ಸುತ್ತೋಲೆ ಹೊರಡಿಸಿದ. ಜಾನ್ ಡೈಕನ ಕಡೆಯವರು ಸುತ್ತಲ ಹತ್ತೂರಿನಲ್ಲಿ ಬಿಳಿ ಎತ್ತುಗಳೇ ಇಲ್ಲ ಎಂದು ಖಾತ್ರಿ ಮಾಡಿಕೊಂಡರು.
ಆದಾದ ಮೇಲೂ ಅಪಘಾತ ನಡೆಯಿತು. ಕೊನೆಗೆ ಎತ್ತುಗಳನ್ನು ಶೂಟ್ ಮಾಡಿ ಕೊಲ್ಲುವುದಕ್ಕೆ ಸರ್ಕಾರ ಅನುಮತಿ ನೀಡಿತು. ಜಾನ್ ಡೈಕ್ ಕರೆಸಿದ ವಿಲಿಯಂ ಎಂಬ ಪ್ರಸಿದ್ಧ ಬೇಟೆಗಾರ ಅಜ್ಜಂಪುರದ ರೇಲ್ವೇ ಸ್ಟೇಷನ್ನಿನ ಬಳಿ ರಾತ್ರಿಪೂರ ಕಾದು ಕುಳಿತ. ಅವನು ಕಾದು ಕೂತ ಮೂರನೇ ದಿನಕ್ಕೆ ರೇಲು ಬರುವ ಹೊತ್ತಿಗೆ ಸರಿಯಾಗಿ ಎತ್ತು ರೇಲ್ವೇ ಹಳಿಗೆ ಅಡ್ಡವಾಗಿ ಓಡಿ ಬಂತು. ಚಾಣಾಕ್ಷನಾಗಿದ್ದ ವಿಲಿಯಂ, ಗುರಿಯಿಟ್ಟು ಗುಂಡು ಹಾರಿಸಿದ.
ಆ ಗುಂಡು ಹಾರುವುದಕ್ಕೂ ರೇಲು ಸಾಗುವುದಕ್ಕೂ ಸರಿಹೋಯಿತು. ವಿಲಿಯಂ ಹೊಡೆದ ಗುಂಡು ರೇಲ್ವೇ ಗಾಡಿಯ ಚಕ್ರಕ್ಕೆ ಬಡಿದು, ಅಷ್ಟೇ ರಭಸಕ್ಕೆ ಠಣ್ಣನೆ ಹಿಂದಕ್ಕೆ ಚಿಮ್ಮಿ   ವಿಲಿಯಂ ಎಡಗಣ್ಣನ್ನೇ ಬಲಿತೆಗೆದುಕೊಂಡಿತು.
ಜಾನ್ ಡೈಕನ ಪ್ರಯೋಗಗಳೆಲ್ಲ ಒಂದೊಂದಾಗಿ ಬಿದ್ದು ಹೋಗಿ, ಅದರಿಂದಾಗಿ ಅಪಾರ ನಷ್ಟವೂ ಆದ ಮೇಲೆ ಬ್ರಿಟಿಷ್ ಸರ್ಕಾರ ಅವನನ್ನು ಹಿಂದಕ್ಕೆ ಕರೆಸಿಕೊಂಡಿತು. ಹೇಗಾದರೂ ಮಾಡಿ ಆ ಎತ್ತಿನ ಮೂಲ ಕಂಡುಹಿಡಿಯಬೇಕೆಂದು ಅವನು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಊರಿನ ಮಂದಿಯೂ ಅವನ ದಾರಿ ತಪ್ಪಿಸಲಿಕ್ಕೆ ಅವನಿಗೆ ವಿಚಿತ್ರವಾದ ಕತೆಗಳನ್ನು ಹೇಳುತ್ತಿದ್ದರು. ಊರಲ್ಲಿ ಒಂದೇ ಒಂದು ಬಿಳಿ ಎತ್ತೂ ಇಲ್ಲವೆಂದು ನಂಬಿದ್ದ ಅವನಿಗೆ, ಬೇಕಂತಲೇ ಅಲ್ಲೊಂದು ಬಿಳಿ ಎತ್ತು ನೋಡಿದೆ, ನಾನೂ ಇಲ್ಲೊಂದು ನೋಡಿದೆ ಎಂದೆಲ್ಲ ಹೇಳಿ ಕಂಗಾಲು ಮಾಡಿದ್ದರು. ಅವರ ಸುಳ್ಳುಗಳಿಂದ ಪಾರಾಗಲು ಸಾಧ್ಯವೇ ಆಗದೇ ಆತ ಕೊನೆಗೆ ಮೇಲಧಿಕಾರಿಗಳ ಆಜ್ಞೆ ಒಪ್ಪಿಕೊಂಡು ಹೊರಟೇ ಹೋದ.
ಕೊನೆಗೆ ಆ ರೇಲ್ವೇ ರಸ್ತೆಯನ್ನೇ ಬ್ರಿಟಿಷ್ ಸರ್ಕಾರ ಬಂದು ಮಾಡಿತು. ಸ್ವಾತಂತ್ರ್ಯ ಬಂದು ಎಷ್ಟೋ ವರ್ಷಗಳ ನಂತರ ಅಲ್ಲಿ ರೇಲ್ವೇ ಸಂಚಾರ ಆರಂಭವಾಗಿ ಚಿಕ್ಕಜಾಜೂರಿನಿಂದ ಅಜ್ಜಂಪುರ ಮಾರ್ಗವಾಗಿ ಕಡೂರು ಬೀರೂರಿಗೆ ರೇಲು ಓಡಾಡಿತು.
      ಅಷ್ಟು ಹೊತ್ತಿಗೆ ಎತ್ತಿನ ಕತೆಯನ್ನು ಅಲ್ಲಿಯ ಮಂದಿಯೂ ಮರೆತಿದ್ದರು. ರೇಲ್ವೇ ಇಲಾಖೆಯೂ ಮರೆತಿತ್ತು. ರೇಲ್ವೇ ಇಲಾಖೆಯ ದಾಖಲೆಗಳನ್ನು ತೆರೆದು ನೋಡಿದರೆ ಇಂತಿಂಥ ಇಸವಿಯಿಂದ ಇಂತಿಂಥ ಇಸವಿಯ ತನಕ ರೇಲು ಓಡಾಟ ಸಸ್ಪೆಂಡ್ ಮಾಡಲಾಗಿತ್ತು ಅನ್ನುವ ವಿವರಗಳು ಮಾತ್ರ ಸಿಗುತ್ತವೆ.

ಕೊನೆಗೂ ಎತ್ತು ಏನಾಯಿತು. ಅದು ಎತ್ತಿನ ದೆವ್ವವಾ, ಕಳ್ಳರ ಕೈವಾಡವಾ ಅನ್ನುವುದು ಮಾತ್ರ ಬಯಲಾಗದೇ ಉಳಿದುಬಿಟ್ಟಿತು.

Thursday, August 23, 2012

Sunday, August 12, 2012

ಬೆಸ್ಟ್ ವೇ ಅಂದರೆ ಹೆಮಿಂಗ್-ವೇ


ನಾನು ಲೇಖಕನಾಗುವುದು ಹೇಗೆ. ಬರೆಯಬೇಕಾದ್ದು ಹೇಗೆ ಎಂದು ಯೋಚಿಸುವ ಪ್ರತಿಯೊಬ್ಬ ಕೂಡ ತನ್ನೊಳಗೇ ಒಂದು ಸತ್ವಶೀಲ ಬೀಜವನ್ನು ಬಚ್ಚಿಟ್ಟುಕೊಂಡಿರುತ್ತಾನೆ. ಈ ಕಾಲದಲ್ಲಿ, ಎಲ್ಲ eನವೂ ಸಂಪತ್ತಿನ ಸಂಪಾದನೆಯ ಮೂಲ ಎಂದು ನಂಬಿರುವ ದಿನಗಳಲ್ಲಿ ಇದು ಮುಖ್ಯ ಅಲ್ಲ ಅಂತ ಬಹಳಷ್ಟು ಮಂದಿಗೆ ಅನ್ನಿಸಬಹುದು. ಆದರೆ ಏಕಾಂತ ಎಂಬುದೊಂದು ಎಲ್ಲರನ್ನೂ ಆವರಿಸುತ್ತದೆ. ಅಂಥ ಹೊತ್ತಲ್ಲಿ ಸಂಪತ್ತಾಗಲೀ, ಅಧಿಕಾರವಾಗಲೀ ಉಪಯೋಗಕ್ಕೆ ಬರುವುದಿಲ್ಲ. ಆ ನೆರವಾಗುವುದು ಕೇವಲ ನಮ್ಮ ಸೃಜನಶೀಲತೆ. ಅದರಲ್ಲೂ ದ್ವೀಪಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಅಂಥದ್ದೊಂದು ಅದಮ್ಯ ಆಸೆ ಮೂಡಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಅವರ ಭಾವನೆಗಳಿಗೆ ಅಲ್ಲಿ ಹೊರದಾರಿಗಳೇ ಇರುವುದಿಲ್ಲವಲ್ಲ.
ಅಂಥ ಹೊರದಾರಿಗಳಿಲ್ಲದ ಆ ಅಧಿಕಾರಿಯ ಹೆಸರು ಲೆಡರರ್. ಅವನು ಚುಂಗ್‌ಕಿಂಗ್ ದ್ವೀಪದಲ್ಲಿ ಕೆಲಸ ಮಾಡುತ್ತಿದ್ದಆಗಿನ್ನೂ ಅವನಿಗೆ ಹದಿಹರೆಯ. ಅನೇಕ ಗೆಳೆಯರು. ಮೋಜು, ಸುತ್ತಾಟ, ವಾರಾಂತ್ಯದಲ್ಲಿ ಮದ್ಯ ಸೇವನೆಯೇ ಖಯಾಲಿಯಾಗಿದ್ದ ಅವನಿಗೆ ಬರೆಯುವ ಹುಚ್ಚು. ಎಲ್ಲ ಮೋಜು ಮಸ್ತಿಗಳು ಮುಗಿದ ನಂತರ ಅವನನ್ನು ಭೀಕರವಾದ ನಿರಾಶೆ ಕಾಡುತ್ತಿತ್ತು. ಏನಾದರೂ ಅದ್ಭುತವಾದದ್ದು ಮಾಡಬೇಕು. ಈ ಜೀವನ ಹೀಗೆಯೇ ಸೋರಿ ಹೋಗುತ್ತದೆ ಅಂತ ಅನ್ನಿಸುತ್ತಿತ್ತು. ಏನು ಮಾಡಬೇಕು ಅನ್ನುವ ಕಿಂಚಿತ್ ದಾರಿಯೂ ಅವನಿಗೆ ತೋಚುತ್ತಿರಲಿಲ್ಲ . ಆಗ ಬರಹವೊಂದೇ ತನ್ನ ಹೊರದಾರಿ ಅಂತ ಅವನಿಗೆ ಅನ್ನಿಸುತ್ತಿತ್ತು.
ಆದರೆ ಹೇಗೆ ಬರೆಯಬೇಕು ಎಂದು ಹೇಳಿಕೊಡುವವರು ಯಾರೂ ಇರಲಿಲ್ಲ. ಬರೆದದ್ದು ಸರಿಯಾಗಿದೆಯೇ ಚೆನ್ನಾಗಿದೆಯೇ ಎಂದು ಹೇಳುವವರು ಇರಲಿಲ್ಲ. ಆ ದ್ವೀಪದ ತುಂಬ ಇದ್ದದ್ದು ಕಳ್ಳರು, ಕಡಲುಗಳ್ಳರು, ಬ್ರೋಕರುಗಳು ಮತ್ತು ತಲೆಹಿಡುಕರು. ಅವರ ನಡುವೆ ಇವನೊಬ್ಬ ವಿಚಿತ್ರ ಪ್ರಾಣಿಯಂತೆ ಕಾಣುತ್ತಿದ್ದ.
ಅವನಿದ್ದ ಆ ಪುಟ್ಟ ದ್ವೀಪದಂಥ ಊರಲ್ಲಿ ಮದ್ಯಕ್ಕೆ ಬರ. ಒಳ್ಳೆಯ ಸ್ಕಾಚ್‌ವಿಸ್ಕಿ ಸಿಗಬೇಕು ಅಂದರೆ ಒದ್ದಾಟ. ಆ ಕಾಲಕ್ಕೆ ಹಡಗಿನ ಕಟ್ಟೆಯ ಬಳಿ, ಕಡಲುಗಳ್ಳರಿಂದ ವಶಪಡಿಸಿಕೊಂಡ ಮಾಲುಗಳನ್ನು ಹರಾಜು ಹಾಕುತ್ತಿದ್ದರು. ಆ ಹರಾಜನ್ನು ಬ್ಲೈಂಡ್ ಆಕ್ಷನ್ ಎಂದು ಕರೆಯಲಾಗುತ್ತಿತ್ತು. ಸೀಲು ಮಾಡಲಾಗಿದ್ದ ಪೆಟ್ಟಿಗೆಗಳನ್ನು ಹರಾಜಿಗೆ ಇಡುತ್ತಿದ್ದರು. ಅದರೊಳಗೆ ಏನಿದೆ ಅನ್ನುವುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ಅದನ್ನು ಹರಾಜಿನಲ್ಲಿ ಕೊಂಡುಕೊಂಡವರ ಅದೃಷ್ಟ ಚೆನ್ನಾಗಿದ್ದರೆ ಒಳ್ಳೆಯ ಮಾಲು ಸಿಗುತ್ತಿತ್ತು.
ಲೆಡರರ್‌ಗೆ ಹಾಗೆ ಹರಾಜಿನಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸುವ ಚಟವಿತ್ತು. ಅನೇಕ ಬಾರಿ ಅವನಿಗೆ ಅದೃಷ್ಟ ಕೈ ಕೊಟ್ಟಿದ್ದರೂ ಮತ್ತೆ ಮತ್ತೆ ಏನನ್ನಾದರೂ ಅವನು ಕೊಳ್ಳುತ್ತಿದ್ದ. ಈ ಬಾರಿ ಅವನು ಕೊಂಡ ಪೆಟ್ಟಿಗೆಯ ಒಳಗೆ ಎರಡು ಡಜನ್ ಸ್ಕಾಚ್ ವಿಸ್ಕಿಯ ಬಾಟಲುಗಳು ಸಿಕ್ಕವು. ಅವನು ಅದು ತನ್ನ ಅದೃಷ್ಟವೆಂದೇ ಭಾವಿಸಿದ. ಎಲ್ಲರಿಗೂ ವಿಸ್ಕಿ ಬೇಕಾಗಿದ್ದುದರಿಂದ ಮತ್ತು ವಿಸ್ಕಿ ದುರ್ಲಭವಾದ್ದರಿಂದ ಅವನಿಗೆ ಸಿಕ್ಕ ಹತ್ತು ಪಟ್ಟು ಬೆಲೆಗೆ ಅನೇಕರು ಅದನ್ನು ಕೊಳ್ಳಲು ಮುಂದೆ ಬಂದರು. ಲೆಡರರ್ ಅದನ್ನು ತಾನು ಮಾರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ.
ಅದೇ ಸಮಯಕ್ಕೆ ಚುಂಗ್‌ಕಿಂಗ್‌ಗೆ ಲೇಖಕ ಹೆಮಿಂಗ್‌ವೇ ಬಂದಿದ್ದರು. ಒಂದು ತಿಂಗಳ ಭೇಟಿಗಾಗಿ ಬಂದ ಹೆಮಿಂಗ್‌ವೇ ವಿಸ್ಕಿ ಪ್ರಿಯರು. ಅವರಿಗೆ ಅಲ್ಲಿ ಸ್ಕಾಚ್‌ವಿಸ್ಕಿ ಸಿಗುವುದಿಲ್ಲ ಎಂದು ಗೊತ್ತಾಯಿತು. ಅವರ ಗೆಳೆಯರು ಲೆಡರರ್ ಬಳಿ ವಿಸ್ಕಿ ಇರುವುದಾಗಿ ಹೇಳಿದರು. ಆದರೆ ಆತ ಅದನ್ನು ಯಾರಿಗೂ ಮಾರುವುದಿಲ್ಲ ಎಂದುಬಿಟ್ಟರು. ತಾನೇ ಪ್ರಯತ್ನಿಸುವುದಾಗಿ ಹೇಳಿ ಹೆಮಿಂಗ್‌ವೇ ಒಂದು ಬೆಳಗ್ಗೆ ಲೆಡರರ್ ಮನೆಗೆ ಬಂದೇಬಿಟ್ಟರು.
ಲೆಡರರ್‌ಗೆ ಸಂತೋಷದಿಂದ ಪ್ರಾಣ ಬಿಡುವುದಷ್ಟೇ ಬಾಕಿ. ತನ್ನ ಮೆಚ್ಚಿನ ಲೇಖಕ ತನ್ನನ್ನೇ ಹುಡುಕಿಕೊಂಡು ಬಂದುಬಿಟ್ಟಿದ್ದಾನೆ. ಹೆಮಿಂಗ್‌ವೇ ತನಗೆ ವಿಸ್ಕಿ ಬೇಕು ಅಂದರು. ಎಷ್ಟು ಬೇಕಾದರೂ ದುಡ್ಡು ಕೊಡುವುದಾಗಿ ಹೇಳಿದರು. ಲೆಡರರ್ ತನಗೆ ದುಡ್ಡು ಬೇಡ ಎಂದೂ ಕತೆ ಬರೆಯುವುದನ್ನು ಹೇಳಿಕೊಡಬೇಕೆಂದೂ ಕೇಳಿಕೊಂಡ. ಹೆಮಿಂಗ್‌ವೇ ದುಡ್ಡು ತಗೊಂಡು ಮಜಾ ಮಾಡು. ಅದೆಲ್ಲ ಆಗದ್ದು ಅಂದರು. ಲೆಡರರ್ ಹಠ ಬಿಡಲಿಲ್ಲ. ಕೊನೆಗೆ ಆರು ಬಾಟಲಿ ವಿಸ್ಕಿಗೆ, ಕತೆ ಬರೆಯುವುದನ್ನು ಹೇಳಿಕೊಡುವುದಕ್ಕೆ ಹೆಮಿಂಗ್‌ವೇ ಒಪ್ಪಿಕೊಂಡರು. ಉಳಿದ ಆರು ಬಾಟಲಿಗೆ ಒಳ್ಳೆಯ ಬೆಲೆ ಕೊಟ್ಟು ಕೊಂಡುಕೊಂಡರುಅಷ್ಟೂ ದಿನ ಬ್ಲೈಂಡ್ ಆಕ್ಷನ್‌ನಲ್ಲಿ ಕಳಕೊಂಡ ಹಣ ಲೆಡರರ್‌ಗೆ ಬಂದೇ ಬಿಟ್ಟಿತು. ಹೆಮಿಂಗ್‌ವೇ ವಿಸ್ಕಿ ಬಾಟಲಿಯನ್ನು ಹೊತ್ತುಕೊಂಡು ಹೊರಟು ಹೋದರು.
ಮಾರನೇ ದಿನದಿಂದ ಲೆಡರರ್ ಹೆಮಿಂಗ್‌ವೇ ಜೊತೆ ಓಡಾಡತೊಡಗಿದ. ಹೆಮಿಂಗ್‌ವೇ ಹೇಗೆ ಗಮನಿಸುತ್ತಾರೆ, ಹೇಗೆ ಮಾತಾಡುತ್ತಾರೆ ಅನ್ನುವುದನ್ನು ಗಮನಿಸುತ್ತಿದ್ದ. ತಾನು ಲೇಖಕ ಎಂಬುದನ್ನು ಅವರು ತೋರಿಸಿಕೊಳ್ಳುತ್ತಲೇ ಇರಲಿಲ್ಲ. ಯಾವುದನ್ನೂ ಅವರು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದಾರೆ ಎಂದು ಅವನಿಗೆ ಅನ್ನಿಸಲಿಲ್ಲ. ಎಲ್ಲವನ್ನೂ ಉಡಾಪೆಯಿಂದ ನೋಡುತ್ತಾ, ನಿರಾಕರಿಸುತ್ತಾ, ಎದುರಿಗೆ ಸಿಕ್ಕ ಸಣ್ಣಪುಟ್ಟ ಮನುಷ್ಯರ ಜೊತೆ ಮಾತಾಡುತ್ತಾ, ಅವರಿಗೆ ತಮಾಷೆ ಮಾಡುತ್ತಾ, ಅವರಿಂದ ಬೈಸಿಕೊಳ್ಳುತ್ತಾ ಅವರು ತಾನೇನೂ ಅಲ್ಲ ಎಂಬಂತೆ ಇದ್ದರು.
ಲೆಡರರ್ ಇವತ್ತಿನ ಪಾಠ ಏನು ಎಂದು ಕೇಳಿದ. ಮನಸ್ಸನ್ನು ಕನ್ನಡಿಯ ಹಾಗಿಟ್ಟುಕೋ ಎಂದರು ಹೆಮಿಂಗ್‌ವೇ. ಮಾರನೇ ದಿನ ಅವನು ಬಂದಾಗ ಹೆಮಿಂಗ್‌ವೇ ನಿನ್ನ ಬಳಿ ಇದ್ದ ವಿಸ್ಕಿ ಕುಡಿದೆಯಾ ಎಂದು ಕೇಳಿದರು. ಲೆಡರರ್ ಇಲ್ಲ, ಅದನ್ನು ಒಂದು ಪಾರ್ಟಿಗೋಸ್ಕರ ಇಟ್ಟುಕೊಂಡಿದ್ದೇನೆ. ಈಗಲೇ ಕುಡಿಯುವುದಿಲ್ಲ ಎಂದ. ಹೆಮಿಂಗ್‌ವೇ ನಕ್ಕರು. ಪಾಠ ಎರಡು- ಲೇಖಕನಾದವನು ಯಾವುದನ್ನೂ ನಾಳೆಗೆಂದು ಇಟ್ಟುಕೊಳ್ಳಬಾರದು.
ಲೆಡರರ್ ಅವರಿಗೆ ಲೇಖಕ ಆಗೋದು ಹೇಗೆ ಎಂದು ಹೇಳಿ ಎಂದು ಒತ್ತಾಯಿಸಿದ. ಅವರು ಅದನ್ನೆಲ್ಲ ಹೇಳಿಕೊಡಲಿಕ್ಕೆ ಕಷ್ಟ ಅಂತ ಆವತ್ತೇ ಹೇಳಿದ್ದೇನೆ. ಆದರೂ ಒಂದು ಮಾತು ಹೇಳ್ತೀನಿ ಕೇಳು. ಒಳ್ಳೆಯ ಬಾಳು ನಡೆಸುವುದಕ್ಕೆ ಏನೇನು ಸೂತ್ರಗಳಿವೆಯೋ ಲೇಖಕ ಆಗುವುದಕ್ಕೂ ಅವೇ ಸೂತ್ರಗಳು. ಒಳ್ಳೆಯ ಮನುಷ್ಯ ಅಂತಿಮವಾಗಿ ಒಳ್ಳೆಯ ಲೇಖಕ ಆಗುತ್ತಾನೆ. ಸಜ್ಜನ, ಸುಸಂಸ್ಕೃತ, ಮಿತಭಾಷಿ, ತನ್ನ ಹಾಗೆ ಇನ್ನೊಬ್ಬರು ಎಂದು ಭಾವಿಸುವುದು ಮತ್ತು ಪ್ರಾಮಾಣಿಕವಾಗಿ ಹಾಗೆ ತಿಳಿಯುವುದು ಲೇಖಕನಾಗುವ ಮೊದಲ ಮೆಟ್ಟಲು ಅಂದರು. ಲೆಡರರ್ ಅವರ ಬಳಿ ವಾದಕ್ಕಿಳಿದ. ಲೇಖಕನಾಗಲು ಅದ್ಯಾವುದೂ ಮುಖ್ಯ ಲಕ್ಷಣ ಅಂತ ನನಗೆ ಅನ್ನಿಸುತ್ತಿಲ್ಲ ಅಂದ. ಹೆಮಿಂಗ್‌ವೇ ಸುಮ್ಮನೆ ನಕ್ಕರು. ಅವರ ಬಳಿ ಇನ್ನಷ್ಟು ಸಂಗತಿಗಳನ್ನು ಕೇಳಬೇಕು ಅಂದುಕೊಂಡ ಲೆಡರರ್ ಹೇಗಾದರೂ ಮಾಡಿ ಅವರ ಬಾಯಿ ಬಿಡಿಸಬೇಕು ಎಂದು ತೀರ್ಮಾನಿಸಿಬಿಟ್ಟಿದ್ದ.
ಆದರೆಮೂರನೇ ದಿನ ಹೆಮಿಂಗ್‌ವೇ ಹೊರಟುಬಿಟ್ಟರು. ತಿಂಗಳು ಇರಲೆಂದು ಬಂದವರಿಗೆ ಮೂರೇ ದಿನಕ್ಕೆ ಮರಳಿ ಬರಬೇಕೆಂದು ಕರೆಬಂತು. ಲೆಡರರ್‌ಗೆ ನಿರಾಶೆಯಾಯಿತು. ಹೆಮಿಂಗ್‌ವೇ ಮುಂದೊಂದು ದಿನ ಬಂದಾಗ ಪಾಠ ಮುಂದುವರಿಸುತ್ತೇನೆ ಎಂದು ಹೇಳಿ ಹೊರಟು ನಿಂತರು. ಅವನು ಪಾಠ ಹೇಳುವ ಶುಲ್ಕವೆಂದು ಕೊಟ್ಟಿದ್ದ ಆರು ಬಾಟಲಿ ವಿಸ್ಕಿಯ ದುಡ್ಡನ್ನು ಅವನ ಕೈಗಿಟ್ಟರು. ನಾನು ಪಾಠ ಹೇಳಿಕೊಡಲಾಗಲಿಲ್ಲ. ನೀನು ನಷ್ಟ ಮಾಡಿಕೊಳ್ಳಬಾರದು ಅಂದರು. ಹೊರಡುವ ಮುನ್ನ ಕೊನೆಯ ಪಾಠ ಹೇಳಿದರು- ಲೇಖಕ ತನ್ನಲ್ಲಿರುವ ವಿಸ್ಕಿಯನ್ನು ರುಚಿ ನೋಡದೇ ಬೇರೆಯವರಿಗೆ ನೀಡಬಾರದು. ವಿಸ್ಕಿ ಕೆಟ್ಟದಾಗಿದ್ದರೂ ಒಳ್ಳೆಯತನ ಬಿಡಬಾರದು.
ಲೆಡರರ್‌ಗೆ ಏನೂ ಅರ್ಥವಾಗಲಿಲ್ಲ. ಮನೆಗೆ ಬಂದು ಸುಮ್ಮನೆ ಕೂತ. ನಾಲ್ಕೈದು ದಿನ ಯೋಚಿಸಿದ. ಅವನು ಆಯೋಜಿಸಿದ್ದ ಪಾರ್ಟಿ ಸಮೀಪಿಸುತ್ತಿತ್ತು. ಇದ್ದಕ್ಕಿದ್ದಂತೆ ಹೆಮಿಂಗ್ವೇ ಹೇಳಿದ ಕೊನೆಯ ಪಾಠ ನೆನಪಾಗಿ ವಿಸ್ಕಿ ಬಾಟಲು ತೆಗೆದು ರುಚಿ ನೋಡಿದ.
ಕಳ್ಳರು ವಿಸ್ಕಿ ಬಾಟಲಿಯೊಳಗೆ ಟೀ ತುಂಬಿಸಿಟ್ಟಿದ್ದರು. ಎಲ್ಲ ಬಾಟಲಿಗಳಲ್ಲೂ ಬರೀ ಕಹಿ ಟೀ ಇತ್ತು.
ಲೆಡರರ್ ಬರೆದುಕೊಳ್ಳುತ್ತಾನೆ. ಹೆಮಿಂಗ್‌ವೇ ಕಲಿಸಿದ ಪಾಠವನ್ನು ನಾನು ಯಾವತ್ತೂ ಮರೆಯಲಾರೆ. ಅವರು ಟೀ ಬಾಟಲ್ಲಿಗೆ ಕೈ ತುಂಬ ದುಡ್ಡು ಕೊಟ್ಟಿದ್ದರು. ಯಾವತ್ತೂ ಅದರ ಬಗ್ಗೆ ಕೊರಗಲಿಲ್ಲ. ನನ್ನ ಅವಿವೇಕವನ್ನು ಆಡಿಕೊಳ್ಳಲಿಲ್ಲ. ನನ್ನ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ. ಒಳ್ಳೆಯತನ ಎಂದರೇನು ಎಂದು ಹೇಳಿಕೊಟ್ಟರು.
ನಾನು ಲೇಖಕನಾದೆ.
ಒಳ್ಳೆಯ ಲೇಖಕನಾದವನು ಒಳ್ಳೆಯ ಮನುಷ್ಯನೇನೂ ಆಗಿರಬೇಕಿಲ್ಲ ಎಂದು ಸಾಬೀತು ಪಡಿಸಿದವರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ ಬಾಳುವುದಕ್ಕಿರುವ ಸೂತ್ರಗಳೇ ಲೇಖಕನಾಗುವುದಕ್ಕೂ ಸಾಕು ಎಂದ ಹೆಮಿಂಗ್ವೇ ಕೂಡ ಹಾಗೇ ಬಾಳಿದ್ದನ್ನು ನೋಡಿದಾಗ ಬೆರಗಾಗುತ್ತೇವೆ. ಎಲ್ಲರಂತೆ ಓಡಾಡಿಕೊಂಡು, ಕೆಲಸ ಮಾಡಿಕೊಂಡು, ಲೇಖಕ ಎಲ್ಲರಂತೆ ಸಾಮಾನ್ಯ, ಬರೆಯುವ ಹೊತ್ತಲ್ಲಿ ಮಾತ್ರ ಅವನು ದಾರ್ಶನಿಕವಾಗುತ್ತಾನೆ ಎಂದು ತೋರಿಸಿಕೊಟ್ಟವರು ಅವರು.
ಎಲ್ಲ ತರುಣ ಬರಹಗಾರು ಹಿಡಿಯಬೇಕಾದ ದಾರಿ ಯಾವುದು ಎಂದು ಕೇಳಿದರೆ ನಾನು ಹೆಮಿಂಗ್-ವೇ ಅನ್ನುತ್ತೇನೆ.


Saturday, March 17, 2012

ಕೊಟ್ಟ ಮಾತು, ಕಾಣದ ಜಗತ್ತು ಮತ್ತು ಅಹಂಕಾರವೆಂಬ ಕನ್ನಡಕ


ಇತ್ತೀಚೆಗೆ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್   ಪ್ರಶಸ್ತಿ ಪಡಕೊಂಡ ‘ದಿ ಸೆಪರೇಷನ್’  ಇರಾನಿ ಚಲನಚಿತ್ರದಲ್ಲೊಂದು ಸನ್ನಿವೇಶವಿದೆ.  ಗಂಡ-ಹೆಂಡತಿ ಜಗಳಾಡಿದ್ದಾರೆ. ಇನ್ನೇನು ವಿವಾಹ ವಿಚ್ಛೇದನ ಪಡಕೊಳ್ಳುವ ಹಂತದಲ್ಲಿದ್ದಾರೆ. ಹನ್ನೊಂದು ವರ್ಷದ ಮಗಳಿಗೆ ಅಪ್ಪನೂ ಬೇಕು, ಅಮ್ಮನೂ ಬೇಕು. ಈ ಮಧ್ಯೆ ಅಪ್ಪ ಕೊಲೆ ಆರೋಪಕ್ಕೆ ಸಿಕ್ಕಿಹಾಕಿಕೊಂಡು ಕೈದಿಯಾಗಿದ್ದಾನೆ. ಅಪ್ಪನನ್ನು ನೋಡಲು ಹೋಗುವ ಮಗಳು, ಅಪ್ಪನ ಹತ್ತಿರ ಹೇಳ್ತಾಳೆ: ‘ಇದೆಲ್ಲ ಸಾಕು ಅಪ್ಪಾ.. ಬಿಟ್ಟುಬಿಡಿ.. ಅಮ್ಮನೂ ನೀವೂ ಒಂದಾಗಿ’. ಅವಳ ಸಮಾಧಾನಕ್ಕೆಂಬಂತೆ ಅಪ್ಪ ‘ಸರಿ’ ಅನ್ನುತ್ತಾನೆ. ಹಾಗಂತ ಮಾತುಕೊಡಿ ಅನ್ನುತ್ತಾಳೆ ಮಗಳು. ಅಪ್ಪ ಒಂದಷ್ಟು ಯೋಚಿಸಿ ಪ್ರಾಮಿಸ್ ಅಂತ ಕೈ ಎತ್ತುತ್ತಾನೆ. ಕೈ ಎತ್ತಲು ಸಾಧ್ಯವಾಗುವುದಿಲ್ಲ ಅವನಿಗೆ. ನೋಡಿದರೆ, ಅವನ ಬಲಗೈಗೂ ಮತ್ತೊಬ್ಬ ಕೈದಿಯ ಎಡಗೈಗೂ ಸೇರಿಸಿ ಬೇಡಿ ಹಾಕಲಾಗಿದೆ. ಪಕ್ಕದ ಕೈದಿ ಸಣ್ಣಗೆ ನಗುತ್ತಾ ‘ಯಾರಿಗೆ ಏನಂತ ಪ್ರಾಮಿಸ್ ಮಾಡ್ತಿದ್ದೀಯಾ ನೀನು?’ ಎಂದು ಅರ್ಥಪೂರ್ಣವಾಗಿ ನಗುತ್ತಾನೆ.
ಸುಮಾರು ಹದಿನೈದು ಸೆಕೆಂಡುಗಳ ದೃಶ್ಯ ಅದು. ನಾವು ಬದುಕುತ್ತಿರುವ ಒಟ್ಟಾರೆ ಜಗತ್ತಿನಲ್ಲಿ ಯಾರಿಗೆ ಯಾರೂ ಯಾವ ಭರವಸೆಯನ್ನೂ ಕೊಡಲಾರೆವು ಅನ್ನುವುದನ್ನು ಅದು ಅಚ್ಚುಕಟ್ಟಾಗಿ ಹೇಳುತ್ತದೆ.
ನಾವು ಅಂದಕೊಂಡದ್ದನ್ನು ಮಾಡಲಿಕ್ಕಾಗದ ಸನ್ನಿವೇಶ ಪದೇ ಪದೇ ನಮಗೆ ಎದುರಾಗುತ್ತಲೇ ಇರುತ್ತವೆ. ಸಂಬಂಧವನ್ನು ವ್ಯಕ್ತಿತ್ವವನ್ನು ಇದು ಬಾಧಿಸುತ್ತಲೇ ಹೋಗುತ್ತದೆ. ಸುಮ್ಮನೆ ಯೋಚಿಸಿ ನೋಡಿ. ಹತ್ತಿಪ್ಪತ್ತು ವರ್ಷಗಳ ಹಿಂದೆ, ಇಂಥ ಹೊತ್ತಿಗೆ ಇಂಥ ಜಾಗಕ್ಕೆ ಬರುತ್ತೇನೆ ಅಂತ ಹೇಳಿದರೆ, ಅಂಥ ಹೊತ್ತಿಗೆ ನಾವು ಹೋಗುವುದು ಸಾಧ್ಯವಿತ್ತು.  ಆಗ ನಾವು ನಂಬಿಕೊಂಡಿದ್ದದ್ದು ನಮ್ಮ ಕಾಲ್ನಡಿಗೆಯನ್ನು. ಇವತ್ತು ವಿಮಾನ, ವೇಗವಾಗಿ ಸಾಗುವುದಕ್ಕೆ ಚತುಷ್ಪಥ ರಸ್ತೆ, ಯಮವೇಗದಲ್ಲಿ ಚಲಿಸುವ ಕಾರುಗಳಿದ್ದರೂ ಕೂಡ ಹೇಳಿದ ಸಮಯಕ್ಕೆ ತಲುಪುತ್ತೇವೆ ಅನ್ನುವುದು ಖಾತ್ರಿಯಿಲ್ಲ.
ನಾವು ಹೇಗೆ ಬಂದಿಯಾಗುತ್ತಿದ್ದೇವೆ ಯೋಚಿಸಿ. ಕೆಲವು ದಿನಗಳ ಹಿಂದೆ ಅಚಾನಕ್ ಆಗಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ವಕೀಲರು ರಸ್ತೆ ತಡೆ ಮಾಡಿದರು. ಆವತ್ತು ಸಾವಿರಾರು ಮಂದಿ, ಆರೆಂಟು ಗಂಟೆಗಳ ಕಾಲ ರಸ್ತೆಯಲ್ಲಿ ಕಾರೊಳಗೆ ಉಳಿದುಕೊಳ್ಳಬೇಕಾಗಿ ಬಂತು. ಇಂಥ ಪರಿಸ್ಥಿತಿ ಕೇವಲ ಹೊರಗಿನ ಓಡಾಟದಲ್ಲಿ ಮಾತ್ರವಲ್ಲ, ಸಂಬಂಧಗಳಲ್ಲೂ ನಡೆಯುತ್ತಿರುತ್ತೆ. ಹೇಳಬೇಕಾದ್ದನ್ನು ಹೇಳಲಾಗದೇ ಒದ್ದಾಡುತ್ತೇವೆ. ಹೇಳಬಾರದ್ದನ್ನು ಹೇಳಿಬಿಡುತ್ತೇವೆ. ಅದನ್ನು ಹೇಳಬೇಕಾಗಿತ್ತು, ಇದನ್ನು ಹೇಳಬಾರದಿತ್ತು ಅಂದುಕೊಳ್ಳುತ್ತೇವೆ. ಅಷ್ಟು ಹೊತ್ತಿಗೆ ಸಂಬಂಧ ಕೆಟ್ಟುಹೋಗಿ, ಏನೇನೋ ಆಗಿಹೋಗಿರುತ್ತದೆ.
ಎಲ್ಲರೂ ಸ್ವತಂತ್ರರಾಗಿ ಹುಟ್ಟುತ್ತಾರೆ, ನಂತರ ನೋಡಿದರೆ ಕೈಕಾಲುಗಳಿಗೆ ಕೋಳ ಹಾಕಿಕೊಂಡಿರುತ್ತಾರೆ ಎನ್ನುವ ಮಾತಿದೆ. ನಮ್ಮ ವಿದ್ಯೆ, ವೃತ್ತಿ, ಊರು, ಆಕಾಂಕ್ಷೆ, ಅಹಂಕಾರ, ಪ್ರತಿಷ್ಠೆ, ಹುದ್ದೆ, ಸಂಬಂಧ- ಎಲ್ಲವೂ ನಮ್ಮನ್ನು ಬಂಧಿಸುತ್ತಲೇ ಹೋಗುತ್ತವೆ. ಇವುಗಳಿಂದ ಬಿಡುಗಡೆ ಹೊಂದುತ್ತೇವೆ ಅಂತ ಹೊರಡುವುದೂ ಒಂದು ಬಂಧನವೇ. ಬಿಡುಗಡೆಗಾಗಿ ಹಾತೊರೆಯತೊಡಗಿದರೆ ನೀವು ಬಂಧನದಲ್ಲಿದ್ದೀರಿ ಅಂತಲೇ ಅರ್ಥ. ಕಂಬವನ್ನು ಗಟ್ಟಿಯಾಗಿ ಅಪ್ಪಿಕೊಂಡು ನನ್ನನ್ನು ಬಿಡಿಸಿ ಅಂತ ಸಹಾಯಕ್ಕಾಗಿ ಕೂಗಿಕೊಂಡಂತೆ. ಕಂಬವನ್ನು ಹಿಡಕೊಂಡಿರುವವರು ನೀವು. ಕಂಬ ಬಿಡಬೇಕು ಎಂಬ ಆಸೆ, ಬಿಡುವುದಕ್ಕೆ ಭಯ. ಯಾರಾದರೂ ಬಂದು ಬಿಡಿಸಲಿ ಎಂಬ ಆಸೆ.
ಕಥಾಸರಿತ್ಸಾಗರದಲ್ಲಿ ಒಂದು ಚೆಂದದ ಕತೆಯಿದೆ. ದುರಾಸೆಯನ್ನು ಪ್ರತಿನಿಧಿಸುವ ಕತೆ ಅದಾದರೂ, ಅದನ್ನೂ ಮೀರಿದ ಒಂದು ಅರ್ಥ ಅದಕ್ಕಿದ್ದಂತಿದೆ. ಒಬ್ಬ ವ್ಯಕ್ತಿಗೆ ಗುರುವೊಬ್ಬ ಶ್ರೀಮಂತನಾಗುವ ವಿಧಾನ ಹೇಳುತ್ತಾನೆ. ಬೆಟ್ಟದ ದಾರಿಯಲ್ಲಿ ನಡೆಯುತ್ತಾ ಹೋಗು. ಮೊದಲು ಬೆಳ್ಳಿ ಸಿಗುತ್ತದೆ, ನಂತರ ಬಂಗಾರ ಸಿಗುತ್ತದೆ, ಆನಂತರ ಅದಕ್ಕಿಂತಲೂ ಹೆಚ್ಚಿನದು ಸಿಗುತ್ತದೆ. ಹುಡುಕುತ್ತಾ ಹೋಗು ಅನ್ನುತ್ತಾನೆ. ನಿನಗೆಷ್ಟು ಬೇಕೋ ಅಷ್ಟೇ ತೆಗೆದುಕೋ, ಅಲ್ಪತೃಪ್ತಿಯೇ ಸೌಭಾಗ್ಯ ಅನ್ನುತ್ತಾನೆ.
ಆತ ಬೆಟ್ಟವೇರುತ್ತಾನೆ. ಮೊದಲು ಬೆಳ್ಳಿಯ ನಾಣ್ಯ ಸಿಗುತ್ತವೆ. ಇದು ಬೇಡ, ಬಂಗಾರದ ನಾಣ್ಯವೇ ಸಿಗಲಿ ಅಂತ ಮತ್ತೂ ಮುಂದೆ ಹೋಗುತ್ತಾನೆ. ಬಂಗಾರದ ಭಂಡಾರ ಕಾಣಿಸುತ್ತದೆ. ಮುಂದೆ ಇದಕ್ಕಿಂತಲೂ ಹೆಚ್ಚಿನದು ಸಿಗಬಹುದು ಅಂದುಕೊಂಡು ಮತ್ತಷ್ಟು ಎತ್ತರಕ್ಕೆ ಹೋದರೆ, ಅಲ್ಲೊಬ್ಬ ಬಿರುಬಿಸಿಲಲ್ಲಿ ನಿಂತಿದ್ದಾನೆ. ಅವನ ನೆತ್ತಿಯ ಮೇಲೆ ಚಕ್ರವೊಂದು ತಿರುಗುತ್ತಿದೆ. ಅವನನ್ನು ಈತ ಕೇಳುತ್ತಾನೆ, ಬೆಳ್ಳಿಗಿಂತಲೂ ಬಂಗಾರಕ್ಕಿಂತಲೂ ಹೆಚ್ಚಿನದು ಇಲ್ಲೇನು ಸಿಗುತ್ತದೆ?
ಥಟ್ಟನೆ ಆ ಚಕ್ರ ಅವನ ತಲೆಯಿಂದ ಇವನ ನೆತ್ತಿಗೆ ಬಂದು ಕೂರುತ್ತದೆ. ಆತ ಹೇಳುತ್ತಾನೆ. ನಾನೂ ನಿನ್ನ ಹಾಗೆ ದುರಾಸೆಯಿಂದ ಬಂದೆ. ಇನ್ನೊಬ್ಬ ದುರಾಸೆಯ ಮನುಷ್ಯ ಬರುವ ತನಕ ನೀನೂ ಕಾಯುತ್ತಿರು. ಅವನು ಬಂದು ನಿನ್ನನ್ನು ಬಿಡುಗಡೆ ಮಾಡುತ್ತಾನೆ. ನಾನು ಐದು ವರ್ಷ ಈ ಚಕ್ರ ನೆತ್ತಿಯಲ್ಲಿಟ್ಟು ಕಾದಿದ್ದೆ.
ಇವತ್ತಿನ ಪರಿಸ್ಥಿತಿಯಲ್ಲಿ ಐದು ವರುಷ ಕಾಯುವ ಅಗತ್ಯವೇ ಇಲ್ಲವೇನೋ? ಐದೈದು ಸೆಕೆಂಡಿಗೊಬ್ಬರು ಚಕ್ರಹೊರುವುದಕ್ಕೆ ಸಿಗುತ್ತಿದ್ದರು. ದುರಾಸೆ ನೆತ್ತಿಯ ಮೇಲಿನ ಚಕ್ರದಂತೆ, ಸುತ್ತುತ್ತಲೇ ಇರುತ್ತದೆ. ಅದು ಸುತ್ತುತ್ತಿದ್ದಷ್ಟೂ ದಿನ ಎಲ್ಲವನ್ನೂ ಮರೆಸುತ್ತದೆ. ನಾವು ದಾಪುಗಾಲಿಟ್ಟು ಏಕಮುಖಿಗಳಾಗಿ ಅದರತ್ತ ಧಾವಿಸುತ್ತಲೇ ಇರುತ್ತೇವೆ. ಕೊನೆಗೆ ನಮಗೆ ಸಿಗುವುದು ಕೇವಲ ನೆತ್ತಿಯ ಮೇಲೆ ಸಿಗುವ ಚಕ್ರ.
ಮತ್ತೆ ಭರವಸೆ ಮಾತಿಗೆ ಮರಳಿದರೆ, ನಾವು ಇವತ್ತು ಯಾರಿಗೆ ಯಾವ ಭರವಸೆ ಕೊಡಬಲ್ಲೆವು. ಕೊಟ್ಟ ಮಾತನ್ನು ಉಳಿಸಿಕೊಳ್ಳಬಲ್ಲೆವಾ? ಒಂದು ಸಣ್ಣ ಮಾತನ್ನು ಉಳಸಿಕೊಳ್ಳುವುದು ನಮ್ಮ ಕೈಲಿ ಸಾಧ್ಯವಾದೀತಾ? ಅಮ್ಮನೊಂದಿಗೆ ಜಗಳ ಆಡೋಲ್ಲ ಅಂತ ಅಪ್ಪ ಮಗುವಿಗೆ ಹೇಳುವುದಕ್ಕೆ ಸಾಧ್ಯವಾ? ಆ ಮಗುವಿನ ಮೇಲೆ ಎಷ್ಟೊಂದು ಒತ್ತಡಗಳಿರುತ್ತವೆ? ಅವಳನ್ನು ನಾವು ಎಂಥ ಪರಿಸರದಲ್ಲಿ ಬೆಳೆಸುತ್ತಿದ್ದೇವೆ? ಆ ಮಕ್ಕಳ ಸಮಸ್ಯೆಗಳೇನು?
ಪೀಳಿಗೆಯ ಅಂತರ ಎಂದಿಗಿಂತ ಹೆಚ್ಚಾಗಿದೆ. ಮೊದಲು ನಲವತ್ತು ವರ್ಷದ ಅಪ್ಪ, ಹತ್ತು ವರ್ಷದ ಮಗನ ನಡುವೆ ಅಂಥ ಅಂತರ ಇರಲಿಲ್ಲ. ಅಪ್ಪನ ಆಸಕ್ತಿಗಳೂ, ಪ್ರೀತಿಗಳೂ, ಆಲೋಚನೆಗಳೂ ಮಕ್ಕಳದ್ದೂ ಆಗಿದ್ದವು. ಪರಿಸರದಲ್ಲಿ ಅಂಥ ಹೇಳಿಕೊಳ್ಳಬಹುದಾದ ಯಾವ ಬದಲಾವಣೆಗಳೂ ಆಗುತ್ತಿರಲಿಲ್ಲ.  ಹೀಗಾಗಿ ಅಪ್ಪ ತಿನ್ನುತ್ತಿದ್ದ, ಅಮ್ಮ ಪ್ರೀತಿಯಿಂದ ಮಾಡುತ್ತಿದ್ದ ಗಂಜಿ, ದೋಸೆ, ಉಪ್ಪಿಟ್ಟು ಇಡೀ ಮನೆಮಂದಿಗೆಲ್ಲ ಇಷ್ಟವಾಗುತ್ತಿತ್ತು. ಇವತ್ತು ಏಳು ವರ್ಷದ ಮಗು ಉಪ್ಪಿಟ್ಟಾ ಅಂತ ವರಾತ ತೆಗೆದು ಸೂರು ಹರಿಯುವಂತೆ ಕೂಗಾಡುತ್ತದೆ.
-2-
ಇದ್ದಕ್ಕಿದ್ದ ಹಾಗೆ, ಒಂದು ಬೆಳಗ್ಗೆ ಅವನಿಗೆ ಎಲ್ಲವೂ ಮಂಜು ಮಂಜಾಗಿ ಕಾಣಿಸಲಾರಂಭಿಸುತ್ತದೆ. ಮಗಳ ಮುಖದ ಭಾವನೆಗಳು ಗೋಚರಿಸುವುದಿಲ್ಲ. ಹೆಂಡತಿಯ ಮುಗುಳ್ನಗೆ ಕಾಣಿಸುವುದಿಲ್ಲ. ಪಕ್ಕದ ಮನೆಯವನ ಅಸಹನೆ ಕಣ್ಣಿಗೆ ಕಾಣುವುದಿಲ್ಲ. ಎಲ್ಲವೂ ಮಂಜು ಮಂಜು. ತನಗೇನೋ ಆಗಿದೆ ಎಂಬ ಗಾಬರಿಯಲ್ಲಿ ಆತ ಒಂದೆರಡು ದಿನ ಕಳೆಯುತ್ತಾನೆ. ಕಣ್ಣುಜ್ಜಿಕೊಂಡು ಕಣ್ಣಿಗೆ ಅದ್ಯಾವುದೋ ಔಷಧಿ ಬಿಟ್ಟುಕೊಂಡು ಎಲ್ಲವನ್ನೂ ಸೂಕ್ಷ್ಮವಾಗಿ ನೋಡಲು ಯತ್ನಿಸುತ್ತಾ ಮತ್ತೊಂದಷ್ಟು ದಿನ ಕಳೆಯುತ್ತಾನೆ. ಕ್ರಮೇಣ ಅವನಿಗೆ ದಿನಪತ್ರಿಕೆ ಓದುವುದೂ ಕಷ್ಟವಾಗುತ್ತದೆ. ಹಾಳಾಗಿ ಹೋಗಲಿ ಅಂತ ಅದನ್ನೂ ಬಿಟ್ಟುಬಿಡುತ್ತಾನೆ.
ಹೀಗೆ ಸ್ವಲ್ಪ ದಿನ ಕಳೆಯುತ್ತಿದ್ದಂತೆ ಅವನಿಗೆ ಇಡೀ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ. ಆಡಿದ ಮಾತುಗಳಷ್ಟೇ ಕಿವಿಗೆ ಬೀಳುತ್ತವೆಯೇ ಹೊರತು, ಯಾರ ಮುಖದ ಭಾವನೆಗಳೂ ಅವನಿಗೆ ಕಾಣಿಸದು. ಹೀಗಾಗಿ ಮಾತುಗಳ ಹಿಂದಿನ ಮರ್ಮ ಅವನಿಗೆ ಹೊಳೆಯುವುದು ನಿಂತುಹೋಗುತ್ತದೆ. ಮಾತಿಗೆ ಮಾತಿಗೆಷ್ಟಿದೆಯೋ ಅಷ್ಟೇ ಅರ್ಥ. ಅದರಾಚೆ ಏನಿಲ್ಲ. ಉಪ್ಪಿಟ್ಟು ಮಾಡಿದ್ದೀನಿ, ತಿಂದ್ಕೊಂಡು ಹೋಗಿ ಅಂತ ಹೆಂಡತಿ ಹೇಳಿದರೆ, ಅವಳು ಉಪ್ಪಿಟ್ಟು ಮಾಡಿದ್ದಾಳೆ, ತಾನು ತಿಂದು ಹೋಗಬೇಕು ಎನ್ನುವುದು ಮಾತ್ರ ವಾಚಾಮಗೋಚರ. ನೀವು ದುಡಿಯೋ ಸಂಬಳಕ್ಕೆ, ನಿಮ್ಮ ಯೋಗ್ಯತೆಗೆ ಇನ್ನೇನು ತಾನೇ ಮಾಡಲಾದೀತು ಎಂಬ ಸಣ್ಣ ಅಸಹನೆ ಅವಳ ತುಟಿಕೊಂಕಲ್ಲೋ, ಕಣ್ಣಂಚಲ್ಲೋ ಹಣಿಕಿ ಹಾಕಿದರೆ ಅವನಿಗೆ ಅದು ಕಾಣಿಸದಂಥ ಸುಖದ ಸ್ಥಿತಿ. ಪತ್ರಿಕೆಯನ್ನಂತೂ ಓದುವಂತಿಲ್ಲ. ಹೀಗಾಗಿ ಜಗತ್ತೇ ಸುಂದರ.
ಹೀಗೆ ಅತ್ಯಂತ ಸುಖವಾಗಿರುವ ಅವನನ್ನು ಗೆಳೆಯನೊಬ್ಬ ಭೇಟಿಯಾಗುತ್ತಾನೆ. ನಿನಗೆ ಬಂದಿರೋದು ಚಾಳೀಸು. ನಲವತ್ತಕ್ಕೆ ಹೀಗೆ ಕಣ್ಣು ಮಂಜಾಗತ್ತೆ.  ಕನ್ನಡಕ ಹಾಕಿಕೋ ಅಂತ ಅವನು ಸಲಹೆ ಕೊಟ್ಟದ್ದೂ ಅಲ್ಲದೇ, ತಾನೇ ಒಂದು ಕನ್ನಡಕವನ್ನೂ ತಂದುಕೊಡುತ್ತಾನೆ. ಅದನ್ನು ಹಾಕಿಕೊಂಡದ್ದೇ ತಡ ಅವನಿಗೆ ಕಾಣಿಸೋ ಜಗತ್ತೇ ಬದಲಾಗುತ್ತದೆ. ಎಲ್ಲವೂ ನಿಚ್ಚಳವಾಗಿ, ತಾನು ಇದುವರೆಗೆ ನೋಡಿದ್ದಕ್ಕಿಂತ ಸ್ಪಷ್ಟವಾಗಿ ಕಾಣಿಸತೊಡಗಿ ಗಾಬರಿಯಾಗುತ್ತದೆ.
ಬೆಳ್ಳಂಬೆಳಗ್ಗೆ ಎದ್ದು ಕಾಫಿ ತಂದಿಟ್ಟುಹೋಗುವ ಹೆಂಡತಿಯ ಮುಖದಲ್ಲಿ ಧುಮುಧುಮು ಸಿಟ್ಟಿದೆ. ಹರಿದ ಕಾಲುಚೀಲ ಹಾಕಿಕೊಂಡು ಸ್ಕೂಲಿಗೆ ಹೊರಡುವ ಮಗನ ಮುಖದಲ್ಲಿ ನಿರ್ಲಕ್ಷವೂ ಅಸಹನೆಯೂ ಇದೆ. ಒಂದೊಳ್ಳೇ  ಮೊಬೈಲು ಕೊಡಿಸದ ಅವನ ಬಗ್ಗೆ ಮಗಳ ಕಣ್ಣಲ್ಲಿ ಇವನೊಬ್ಬ ಕೈಲಾಗದವನು ಎಂಬ ಭಾವವಿದೆ. ಪಕ್ಕದ ಮನೆಯಾತನ ಮುಖದಲ್ಲಿ ಇವನ ಬಗ್ಗೆ ವಿನಾಕಾರಣ ಸಿಟ್ಟಿದೆ. ಎದುರು ಮನೆಯ ಶ್ರೀಮಂತ ತನ್ನನ್ನು ಕ್ರಿಮಿಯಂತೆ ನೋಡುತ್ತಾನೆ. ಆಫೀಸಿನಲ್ಲಿ ತನ್ನ ಬಾಸು, ಯಾವಾಗ ಇವನು ಸಾಯುತ್ತಾನೋ ಎಂಬ ಮುಖ ಮಾಡಿಕೊಂಡು ಕೂತಿದ್ದಾನೆ.
ಇದ್ದಕ್ಕಿದ್ದಂತೆ ಪ್ರತಿಯೊಬ್ಬರ ಮಾತಿನ ಹಿಂದಿರುವ ಹುನ್ನಾರಗಳೂ ಅವನಿಗೆ ಹೊಳೆಯುತ್ತಾ ತಿಳಿಯುತ್ತಾ ಹೋಗುತ್ತವೆ. ಕ್ರಮೇಣ ಅವನು ಅದನ್ನು ಮೀರಲು ಯತ್ನಿಸುತ್ತಾನೆ. ಎಷ್ಟೇ ಪ್ರಯತ್ನಪಟ್ಟರೂ ಅದು ಅವನಿಗೆ ಸಾಧ್ಯವಾಗುವುದೇ ಇಲ್ಲ. ತನ್ನವರ ಅಸಹನೆ, ಅಲಕ್ಷ, ಸಿಟ್ಟನ್ನು ಸಿಟ್ಟಿನ ಮೂಲಕ ಎದುರಿಸಲು ಹೋಗುತ್ತಾನೆ. ಪರಿಸ್ಥಿತಿ ಮತ್ತಷ್ಟು ಕಂಗೆಡುತ್ತದೆ. ಕ್ರಮೇಣ ಅವನು ಕಂಗಾಲಾಗುತ್ತಾ ಹೋಗುತ್ತಾನೆ. ತಾನು ಅಸಹಾಯಕ ಎಂಬ ಭಾವನೆ ಅವನಲ್ಲಿ ಬಲವಾಗುತ್ತಾ ಹೋಗಿ, ಕೊನೆಗೊಂದು ದಿನ ತಾನು ಈ ಜಗತ್ತಿನಲ್ಲಿ ಇರಲು ಅರ್ಹನಲ್ಲ ಅನ್ನಿಸುತ್ತದೆ.
ಅದೇ ಸಂಜೆ ಅವನು ಆಫೀಸಿನಿಂದ ಬರುತ್ತಿರಬೇಕಾದರೆ, ಯಾರಿಗೋ ಡಿಕ್ಕಿ ಹೊಡೆಯುತ್ತಾನೆ. ಕನ್ನಡಕ ಬಿದ್ದು ಒಡೆದುಹೋಗುತ್ತದೆ. ಇಡೀ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ. ಆಮೇಲೆ ಅವನು ಸುಖವಾಗಿರುತ್ತಾನೆ.
ತುಂಬ ವಿವರವಾಗಿ ಗಮನಿಸುವುದು ಕೂಡ ಅಪಾಯಕಾರಿ. ಒಬ್ಬ ಲೇಖಕ, ಕತೆಗಾರ ಮತ್ತೊಬ್ಬರ ಮನಸ್ಸಿನ ಒಳಗೆ ಹೊಕ್ಕಂತೆ ಮತ್ಯಾರೂ ಹೊಗಲಾರರು. ಹಾಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಮತ್ತೊಂದು ಜಗತ್ತೇ ಎದುರಾಗುತ್ತದೆ. ವರ್ತಮಾನದ ವಿನಯವಂತ ಜಗತ್ತು ಮತ್ತು ಒಳಗಿನ ಅಹಂಕಾರಿ ಜಗತ್ತು. ಹೊರಗಿನ ಧೈರ್ಯವಂತ ಜಗತ್ತು ಮತ್ತು ಒಳಗಿನ ಹಿಂಜರಿಕೆಯ ಲೋಕ, ಹೊರಗಿನ ಡೌಲಿನ ಪ್ರಪಂಚ, ಒಳಗಿನ ಕೀಳರಿಮೆಯ ನೆಲ- ಯಾವ ಹಂತದಲ್ಲಿ ಮುಖಾಮುಖಿ ಆಗುತ್ತದೋ ಗೊತ್ತಿಲ್ಲ. ಹಾಗೆ ನಮ್ಮ ಹೊರಜಗತ್ತು ಮತ್ತು ಒಳಜಗತ್ತು ಎದುರುಬದುರಾದಾಗ ಘರ್ಷಣೆ ತಪ್ಪಿದ್ದಲ್ಲ. ಆ ಘರ್ಷಣೆಯಲ್ಲಿ ಇಬ್ಬರಲ್ಲೊಬ್ಬ ಸಾಯಲೇಬೇಕು.
ಒಳಗಿನವನು ಸತ್ತರೆ, ಒಳಜಗತ್ತು ಶೂನ್ಯ. ಹೊರಗಿನವನು ಸತ್ತರೆ ಬಂಧುಮಿತ್ರರು ದೂರದೂರ. ಇವೆರಡರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿತರೆ ನಾಜೂಕಯ್ಯ.
ಅಂತರಂಗದ ಅರಿವು ಬಹಿರಂಗದ ಕ್ರಿಯೆ ಆಗುವ ಕ್ಷಣ ಯಾವುದು?

Making of Seperation


Monday, February 6, 2012

ಹೂವು ತಂದವನಿಗೆ ವಯಸ್ಸಾಗಿತ್ತು, ಕಾಯುತ್ತಾ ಕೂತವಳು ಮುದುಕಿಯಾಗಿದ್ದಳು


ಮುಸ್ಸಂಜೆಗಳು ಅಪಾಯಕಾರಿ. ಹಗಲೂ ಅಲ್ಲದ ರಾತ್ರಿಯೂ ಅಲ್ಲ ಮುಸ್ಸಂಜೆಗಳಲ್ಲಿ ಮನಸ್ಸು ಇದ್ದಕ್ಕಿದ್ದಂತೆ ಮುದುಡಿಬಿಡುತ್ತದೆ. ಆಫೀಸು ಬಿಟ್ಟು ಮನೆಗೆ ಹೊರಟಾಗ, ಮನೆಯಲ್ಲೇ ಸುಮ್ಮನೆ ಕೂತಾಗ ಇದ್ದಕ್ಕಿದ್ದಂತೆ ಅದೆಂಥದ್ದೋ ಖಿನ್ನತೆ. ಇಳಿಸಂಜೆಯ ಮೌನದೊಳಗೊಂದು ಸ್ಪೋಟಿಸದ ಆರ್ತನಾದ.
ಲೈಫ್ ಈಸ್ ಎಲ್ಸ್ವೇರ್.
ನನ್ನ ಬದುಕು ಇನ್ನೆಲ್ಲೋ ಇದೆ. ಬೇರೇನನ್ನೋ ನಾನು ಮಾಡಬೇಕಾಗಿತ್ತು. ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದೇನೆ. ಇದೂ ಒಂದು ಬದುಕಾ? ಮನಸ್ಸೆಂಬ ಸಮುದ್ರ ಬೇಡದ ಯೋಚನೆಗಳನ್ನು ಬುದ್ಧಿತೀರಕ್ಕೆ ತಂದು ಎಸೆಯುತ್ತದೆ. ಹಿಂತಿರುಗಿ ನೋಡಿದರೆ ರಹೀನ ಕಬ್ಬಿನಜಲ್ಲೆಯಂತೆ ನಿನ್ನೆಗಳ ರಾಶಿ. ಮುಂದಕ್ಕೆ ನೋಡಿದರೆ ಚಾಚಿಕೊಂಡ ಮೂರುದಾರಿಗಳು. ಸಂದಿಗ್ಧದ ಮೂರುಸಂಜೆ!
ಸಾಧನೆಗಳೇ ಬದುಕು ಅನ್ನುವುದನ್ನು ಬಾಲ್ಯದಿಂದಲೇ ನಮ್ಮ ತಲೆಗೆ ತುಂಬುತ್ತಲೇ ಬಂದಿದ್ದಾರೆ. ಏನಾದರೂ ಮಾಡು ಅನ್ನುವುದಕ್ಕಿಲ್ಲಿ ಅರ್ಥವಿಲ್ಲ. ಇಂಥದ್ದು ಮಾಡಿದರೆ, ಇಂಥದ್ದು ಸಿಗುತ್ತದೆ ಎನ್ನುವುದು ಖಚಿತವಾಗಬೇಕು. ಪಂಪನನ್ನೋದಿದರೆ ಕನ್ನಡ ಎಂಎ. ಷೇಕ್ಸ್ಪಿಯರ್ ಕಲಿತರೆ ಇಂಗ್ಲಿಷ್ ಎಂಎ. ಎಂಬಿಬಿಎಸ್ ಓದಿದರೆ ಕತ್ತಿಗೆ ಸ್ಟೆತಾಸ್ಕೋಪು. ಅಲ್ಲಿಗೆ ಓದುವ ಖುಷಿಯನ್ನು ಗುರಿಯ ಚಿಂತೆ ಕಸಿದುಕೊಂಡು ಬಿಡುತ್ತದೆ. ಪ್ರೀತಿಸುವುದು ಯಾಕೆ ಎಂದರೆ ಮದುವೆ ಆಗುವುದಕ್ಕೆ ಎಂದಂತೆ.
ಪಯಣದ ಸುಖವನ್ನು ಅನುಭವಿಸು ಅಂತ ನಮಗೆ ಹೇಳುತ್ತಲೇ ಬಂದಿದ್ದಾರೆ. ಗುರಿ ಮುಖ್ಯವಲ್ಲ, ದಾರಿ ಅನ್ನುವುದನ್ನು ಕೂಡ. ಹಾಗೆ ಹೇಳುವುದು ಸುಲಭ. ದಾರಿ ಸವೆಸದವರೂ ಆ ಮಾತು ಹೇಳಬಹುದು. ವನು ಮತ್ತು ಅವಳು ಎಲ್ಲೋ ಸಂಧಿಸಿದರು. ಒಬ್ಬರನ್ನೊಬ್ಬರು ಮೆಚ್ಚಿಕೊಂಡರು. ಅವನಲ್ಲಿ ಅವಳೇನು ಕಂಡಳೋ ಅವಳಿಗಷ್ಟೇ ಗೊತ್ತು, ಅವಳಲ್ಲಿ ಅವನಿಗೇನು ಕಾಣಿಸಿತೋ ಅವನೊಬ್ಬನೇ ಬಲ್ಲ. ಕಾಲದ ಅಪೂರ್ವ ನಟನೆಯಲ್ಲಿ ಅವರಿಬ್ಬರೂ ಕಾಲಾತೀತ ಆನಂದದಲ್ಲಿ ತೇಲಾಡಿದರು. ಕಾಡುಮೇಡು ಸುತ್ತಾಡಿದರು. ಪ್ರೇಮ ದಾಹವನ್ನು ಇಂಗಿಸಿತ್ತು. ಪ್ರೀತಿ ಆಯಾಸವನ್ನು ನೀಗಿಸಿತ್ತು. ಹಾಗೆ ನಡೆಯುತ್ತಾ ಬಂದರೆ ಎದುರಿಗೊಂದು ದೊಡ್ಡ ಕೊಳ. ಆ ಕೊಳದ ನಡುವಲ್ಲೊಂದು ಪುಟ್ಟ ದ್ವೀಪ. ಆ ದ್ವೀಪದ ನಡುವೆ ಒಂದು ಗಿಡ. ಅದರಲ್ಲಿ ಅರಳಿದ ಬಂಗಾರಬಣ್ಣದ ಹೂವು. ಆ ಹೂವಿನ ಪರಿಮಳ ಮೈಲುಗಟ್ಟಲೆ ಹಾದು ಅವಳನ್ನು ಪುಲಕಗೊಳಿಸಿತು.
ನಂಗೆ ಆ ಹೂವು ಬೇಕು ಅಂದಳು.ದೋ ತಂದುಕೊಟ್ಟೆ, ಇಲ್ಲೇ ಕಾಯುತ್ತಿರು ಎಂದು ಅವನು ಕೊಳಕ್ಕೆ ಜಿಗಿದ. ಕೈ ಬೀಸುತ್ತಾ ಬೀಸುತ್ತಾ ಈಜಿದ. ಈಜುತ್ತಲೇ ಹೋದ. ಅವಳು ದಡದಲ್ಲಿ ಅವನ ಪ್ರೀತಿಯ ಆಳಕ್ಕೆ, ತೀವ್ರತೆಗೆ ಬೆರಗಾಗಿ ಕಾಯುತ್ತ ಕೂತಳು. ವನು ಈಜುತ್ತಿದ್ದ. ದ್ವೀಪ ದೂರದಲ್ಲಿ ಕಾಣಿಸುತ್ತಿತ್ತು. ಕಾಯುತ್ತಿದ್ದ ಅವಳು ನೆನಪಾಗುತ್ತಿದ್ದಳು. ಕೈ ಸೋಲುತ್ತಿತ್ತು. ಹಾಗೆ ಅದೆಷ್ಟು ಕಾಲ ಈಜಿದನೋ ಅವನಿಗೂ ಗೊತ್ತಿರಲಿಲ್ಲ. ಅವಳೆಷ್ಟು ಕಾಲ ಕಾದಿದ್ದಳೋ ಅವಳಿಗೂ ನೆನಪಿರಲಿಲ್ಲ. ಕಾಯುವುದು ಬೇಜಾರು ಅಂತ ಅವಳಿಗೂ ಅನ್ನಿಸಲಿಲ್ಲ. ಈಜುವುದು ಸುಸ್ತು ಅಂತ ಅವನೂ ಭಾವಿಸಲಿಲ್ಲ.ೊನೆಗೂ ದ್ವೀಪ ಸಮೀಪಿಸಿತು. ದೂರದಿಂದ ಕಂಡ ಹೂವು ಈಗ ಕೈಯಳತೆಯಲ್ಲಿ. ಅವನು ಲಗುಬಗೆಯಿಂದ ಹೋಗಿ ಆ ಘಮಘಮಿಸುವ ಹೂವನ್ನು ಸಮೀಪಿಸಿದ. ಒಂದಿಷ್ಟೂ ನಲುಗದಂತೆ ಅದನ್ನು ಕೊಯ್ದ. ಮತ್ತೆ ಕೊಳಕ್ಕೆ ಜಿಗಿದು ಈಜತೊಡಗಿದ. ಹೋದ ದಾರಿಯೇ ಮರಳಿ ಬರುವುದಕ್ಕೆ. ಹೋದಷ್ಟೇ ದೂರ ವಾಪಸ್ಸಾಗುವುದಕ್ಕೆ. ಮತ್ತೆ ಕಾಲಾತೀತನಾಗಿ ಈಜಿದ. ಅವಳ ಹಂಬಲವನ್ನು ಈಡೇರಿಸಿದ ತೃಪ್ತಿ ಅವನ ತೋಳುಗಳಿಗೆ ಬಲಕೊಟ್ಟಂತಿತ್ತು.ೊನೆಗೂ ಅವನು ಮರಳಿ ದಡ ಸೇರಿದಾಗ ಋತುಗಳು ಅರಳಿ, ಮರಳಿ, ಹೊರಳಿದ್ದವು. ಅವಳು ಕಲ್ಲಿನ ಮೇಲೆ ಕುಳಿತೇ ಇದ್ದಳು, ಕಾಯುತ್ತಾ. ಅವನಿಗಾಗಿ ಕಾಯುತ್ತಿದ್ದೇನೆ ಎನ್ನುವುದನ್ನೂ ಅವಳು ಮರೆತಂತಿತ್ತು. ಗೆದ್ದ ಹುಮ್ಮಸ್ಸಿನಲ್ಲಿ ಅವನು ಅವಳನ್ನು ಸಮೀಪಿಸಿದರೆ ಅವಳಲ್ಲ. ಅಲ್ಲಿ ಕೂತಿದ್ದವಳು ಮುಪ್ಪಡರಿದ ಹೆಂಗಸು. ಅವಳ ದೃಷ್ಟಿಯೂ ಮಸುಕಾಗಿತ್ತು. ಅವನು ಬಂದಿದ್ದೂ ಅವಳಿಗೆ ಕಾಣಿಸಿರಲಿಲ್ಲ. ವನು ದಿಗ್ಭ್ರಮೆಗೊಂಡು ತನ್ನನ್ನು ನೋಡಿಕೊಂಡ. ತೋಳುಗಳು ನಿರಿಗೆಗಟ್ಟಿದ್ದವು. ತಲೆ ಬೋಳಾಗಿತ್ತು. ಕೊಳದ ತಡಿಗೆ ಹೋಗಿ ನೀರಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡರೆ ಇಳಿಸಂಜೆಯಲ್ಲಿದ್ದ ಮುದುಕ, ಪ್ರತಿಫಲಿಸಿದ.
ತಾರುಣ್ಯ ಕಳಕೊಂಡ ಅವಳಿಗೆ ಅವನು ಆ ಹೂವು ಕೊಟ್ಟ. ಹೂ ತರಲು ಹೋದವನು ಅವನಲ್ಲ ಎಂದು ಅವಳು ಅಂದುಕೊಂಡಳು. ಹೂವು ಕೇಳಿದವಳು ಇವಳಲ್ಲ ಅನ್ನೋದು ಅವನಿಗೂ ಅನ್ನಿಸಿತು. ತಾನು ಕಾಯುತ್ತಲೇ ಇರಬೇಕಾಗಿತ್ತು ಎಂದು ಅವಳು, ನಾನು ಈಜುತ್ತಲೇ ಇರಬೇಕಾಗಿತ್ತು ಎಂದು ಅವನು ಅಂದುಕೊಂಡು ನಿಟ್ಟುಸಿರಿಟ್ಟರು. ಅವಳು ಕೈಯೆತ್ತಿ ದೂರದ ದ್ವೀಪ ತೋರಿಸುತ್ತ, ನಂಗೆ ಆ ಹೂವು ಬೇಕು ಅಂದಳು. ಅಲ್ಲಿ ಮತ್ತೊಂದು ಹೂವು ಆಗಷ್ಟೇ ಮೊಗ್ಗೆಯರಳಿಸುತ್ತಿತ್ತು. ಇದೋ ತಂದೆ, ಇಲ್ಲೇ ಕಾಯುತ್ತಿರು ಎಂದು ಹೇಳಿ ಅವನು ನೀರಿಗೆ ಜಿಗಿದ.
ಹೊಸ ಯೌವನದಲ್ಲಿ ಈಜುತ್ತಾ ಹೋದ. ಅವಳು ಹೊಸ ಕಾತರದಲ್ಲಿ ಲಂಗ ನಿರಿಗೆ ಸರಿಪಡಿಸಿಕೊಂಡು ಕಾಯುತ್ತಾ ಕೂತಳು.
-2-
ಬದುಕು ಒಡಂಬಡಿಕೆಯಲ್ಲಿ ಇದೆಯೋ, ಈಡೇರಿಕೆಯಲ್ಲೋ ಅನ್ನುವ ದ್ವಂದ್ವ ನಮ್ಮದು. ಅವನು ಈಜುತ್ತಿದ್ದಷ್ಟು ಹೊತ್ತೂ ಕಾಲ ಸ್ತಬ್ಧ. ಕಾಯುತ್ತಿದ್ದಷ್ಟು ಕಾಲವೂ ಅವಳ ಕೆನ್ನೆ ನುಣುಪು ಕಳಕೊಳ್ಳುವುದಿಲ್ಲ. ಅವಳ ಕಾಯುವಿಕೆ, ಅವನ ಕಾಯಕ- ಎರಡೂ ಮುಗಿದ ತಕ್ಷಣ ಅವತಾರ ಸಮಾಪ್ತಿಯಾಗುತ್ತದೆ. ಆ ಬದುಕಿಗೆ ಉದ್ದೇಶಗಳೇ ಇಲ್ಲ. ಜೀವಮಾನಪೂರ್ತಿ ಈ ಕ್ಷಣಕ್ಕೋಸ್ಕರ ಕಾಯುತ್ತಿದ್ದೆ ಅನ್ನಿಸುವಂಥ ಕ್ಷಣವೊಂದು ಥಟ್ಟನೆ ಹಾಜರಾಗಿಬಿಟ್ಟರೆ ಅಲ್ಲಿಗೆ ಮುಕ್ತಿ. ಜ್ಞಾನೋದಯ ಆಗುವ ತನಕ ಮಾತ್ರ ಹುಡುಕಾಟ. ಒಮ್ಮೆ ಅರಿವು ಬೆಳಕಾದರೆ, ಆಮೇಲೆ ಅರಿವೇ ಇರುವುದಿಲ್ಲ. ಇಡಿಯಾಗಿ ದಕ್ಕಿದ್ದು ಯಾವುದೂ ನಮ್ಮದಲ್ಲ. ದಕ್ಕುವ ತನಕದ ಹೋರಾಟವೇ ಬದುಕು. ಜೀವಿಸಿದರೆ ಮಾತ್ರವೇ ಜೀವನ. ಜೀವಿಸುವುದು ಅಂದರೆ ಏನು?್ಷಣಾರ್ಧದಲ್ಲಿ ಎಲ್ಲವೂ ನಡೆದುಹೋಗುತ್ತದೆ. ಪುಟ್ಟಹುಡುಗನಿಗೆ ಕಾರು ಓಡಿಸುವ ಕನಸು. ದೊಡ್ಡವನಾಗುತ್ತಾ ಆಗುತ್ತಾ ಅದೊಂದು ಸಹಜ ಆಶೆ. ಕೊನೆಗೊಂದು ದಿನ ಕಾರು ಕೈಗೆ ಬರುತ್ತದೆ. ಒಂದಷ್ಟು ದಿನ ಕಾರಿನ ಧ್ಯಾನ. ಆಮೇಲೆ ಎರಡೋ ಮೂರೋ ಕಾರು ಕೊಳ್ಳುವಷ್ಟು ಶ್ರೀಮಂತನಾಗುತ್ತಾನೆ. ಮನೆಯಂಗಳದಲ್ಲಿ ಕಾರುಗಳು ನಿಂತಿರುತ್ತವೆ. ಡ್ರೈವರ್ ಕಾರು ಓಡಿಸುತ್ತಾನೆ. ಅವನು ಗಂಭೀರವಾಗಿ ಹಿಂದಿನ ಸೀಟಲ್ಲಿ ಕೂತಿರುತ್ತಾನೆ. ಒಂದು ಕಾಲದ ಕಾರು ಓಡಿಸುವ ಆಸೆಯನ್ನು ನುಂಗಿಹಾಕಿದ್ದು ಯಾವುದು? ಕಾರು ಕೇವಲ ಇಲ್ಲಿಂದ ಅಲ್ಲಿಗೆ ಆರಾಮಾಗಿ ತಲುಪಿಸುವ ವಾಹಕ ಮಾತ್ರ ಎಂದು ಅರಿವಾದ ಕ್ಷಣ ಅದರ ಮಾಂತ್ರಿಕತೆ ಮಾಯ. ವಿಮಾನವನ್ನು ನೆಲದಲ್ಲಿ ನಿಂತು ನೋಡಿದರಷ್ಟೇ ಅಚ್ಚರಿ. ಒಳಗೆ ಕುಳಿತವರಿಗೆ ಅದು ಕೇವಲ ವಾಹನ!
ಒಂದು ವಿಚಿತ್ರ ಕತೆಯನ್ನು ಇತ್ತೀಚಿಗೆ ಗೆಳೆಯನೊಬ್ಬ ಹೇಳಿದ. ಮಲೆಯಾಳಂ ಲೇಖಕರೊಬ್ಬರು ಬರೆದ ಕತೆಯದು. ಒಂದೂರಲ್ಲಿ ಒಂದು ಬಡಕುಟುಂಬ. ಸೋರುವ ಮನೆ. ಹೆಂಡತಿ ಸೋರುವ ಜಾಗಕ್ಕೆ ಬಿಂದಿಗೆಯಿಟ್ಟು ಮನೆಯೊಳಗೆ ನೀರು ತುಂಬದಂತೆ ಕಾಳಜಿ ಮಾಡುತ್ತಾ, ಮಾಡಿಗೆ ಹೊಸ ಹುಲ್ಲು ಹೊದಿಸುವಂತೆ ಗಂಡನಿಗೆ ಹೇಳುತ್ತಿರುತ್ತಾಳೆ. ಅವನಿಗೋ ಸೋಮಾರಿತನ. ಅವಳ ಬೈಗಳು, ಅವನ ಸೋಮಾರಿತನದಲ್ಲಿ ಸಂಸಾರ ಸಾಗುತ್ತಿರುತ್ತದೆ.ಂದು ದಿನ ಗಂಡ ಕಾಡಿಗೆ ಹೋಗುತ್ತಾನೆ. ನದಿಯೊಂದು ಅಡ್ಡವಾಗುತ್ತೆ. ಅದನ್ನು ದಾಟಿಕೊಂಡು ಆಚೆಗೆ ಹೋದರೆ ಅಲ್ಲೊಂದು ಮನೆ. ತನ್ನ ಮನೆಯಂಥದ್ದೇ ಮನೆ. ಅಲ್ಲಿ ತನ್ನ ಹೆಂಡತಿಯಂತೆಯೇ ಕಾಣುವ ಒಬ್ಬಳು. ಆ ಮನೆಯೂ ಸೋರುತ್ತಿರುತ್ತೆ. ಅವಳ ಕಷ್ಟ ನೋಡಲಾರದೆ ಅವನು ಸೂರು ಏರುತ್ತಾನೆ. ಮಾಡಿಗೆ ಹೊಸ ಹುಲ್ಲು ಹೊದೆಸುತ್ತಾನೆ. ಅವಳಿಗೆ ಸಂತೋಷವಾಗುತ್ತದೆ. ಅವನ ಮೇಲೆ ಪ್ರೀತಿ ಉಕ್ಕುತ್ತದೆ. ಅವನು ಅವಳ ಮನೆ ಸರಿಹೋದ ಸಂತೋಷದಲ್ಲಿ ವಾಪಸ್ಸು ಹೊರಡುತ್ತೇನೆ ಅನ್ನುತ್ತಾನೆ. ಅವಳು ಸಣ್ಣ ದನಿಯಲ್ಲಿ ಕೇಳುತ್ತಾಳೆ. ನಿನಗೆ ನನ್ನ ಮೇಲೆ ಪ್ರೀತಿ ಮೂಡಿಯೇ ಇಲ್ಲವಾ? ಅವನೆನ್ನುತ್ತಾನೆ: ಇಲ್ಲವೆಂದರೆ ನನ್ನ ಪ್ರೀತಿಗೆ ವಂಚನೆ ಮಾಡಿದ ಹಾಗೆ. ಹೌದು ಎಂದರೆ ನನ್ನ ಹೆಂಡತಿಗೆ ದ್ರೋಹ ಬಗೆದ ಹಾಗೆ.ವನು ಮತ್ತದೇ ನದಿ ದಾಟಿ ಮರಳಿ ಬಂದು ನೋಡಿದರೆ ಅವನ ಮನೆಯ ಮಾಡಿಗೆ ಹೊಸ ಹುಲ್ಲು. ಬೆರಗಾಗಿ ಕೇಳಿದರೆ ಹೆಂಡತಿ ವಿವರಿಸುತ್ತಾಳೆ: ನೀವು ಕಾಡಿಗೆ ಹೋಗಿದ್ದಾಗ ನಿಮ್ಮ ಥರಾ ಇರೋನೊಬ್ಬ ಬಂದಿದ್ದ. ಇದನ್ನೆಲ್ಲ ಸರಿಮಾಡಿದ. ಹೊರಡೋವಾಗ ನನ್ನ ಮೇಲೆ ಪ್ರೀತಿ ಮೂಡಿಲ್ವಾ ಅಂತ ಕೇಳಿದ. ಮೂಡಿಲ್ಲ ಅಂದರೆ ನನ್ನ ಪ್ರೀತಿಗೆ ವಂಚಿಸಿದ ಹಾಗೆ. ಮೂಡಿದೆ ಅಂದರೆ ನನ್ನ ಗಂಡನಿಗೆ ದ್ರೋಹ ಬಗೆದ ಹಾಗೆ ಅಂದೆ. ಸುಮ್ಮನೆ ಹೊರಟು ಹೋದ.ವನ ಮನೆಗೆ ಹುಲ್ಲು ಹೊದೆಸಿದವನು ಅವನೇನಾ? ನದಿಯಾಚೆ ಪ್ರತಿಬಿಂಬಿಸಿದ್ದು ಅವನದೇ ಮನೇನಾ? ಅವಳೂ ಇವಳೇನಾ? ಇವನೂ ಅವನೇನಾ? ಇದ್ದಕ್ಕಿದ್ದ ಹಾಗೆ ವಿಸ್ಮಯವೊಂದು ಹೊಕ್ಕು, ಅವರಿಬ್ಬರೂ ಹೊಸಬರಾಗಿಬಿಟ್ಟರಾ?
ಗೊತ್ತಿಲ್ಲ, ಮನೆ ಸೋರುವುದು ನಿಂತಿದೆ.


Saturday, December 24, 2011

ಗೆಳೆಯ ಕುಂಟಿನಿ ಬರೆದ ಮುನ್ನುಡಿ


ನನಗೆ ಮಾತ್ರ ಗೊತ್ತಿರುವ
ಜೋಗಿ ಕಥೆಗಳು


ಯಾರನ್ನೂ ನೋಯಿಸೋದಿಲ್ಲ.ತಾನೇ ಒಬ್ಬನೇ ಕುಳಿತು ಜೋರಾಗಿ ಅತ್ತುಬಿಟ್ಟಾನು.ನೋವನ್ನು ನುಂಗಿ ಸುಮ್ಮನೇ ನಕ್ಕಾನು.ಏನಾಯಿತೋ ಎಂದರೆ ಮತ್ತೆ ಅದೇ ತುಂಟ ತುಂಟ ನಗೆ.
ಅದು ಜೋಗಿ.
ಜೋಗಿಯೊಳಗೊಬ್ಬ ಕಥೆಗಾರ ಅಥವಾ ಕವಿ ಅಥವಾ ವಿಮರ್ಶಕನನ್ನು ನೀವು ಕಂಡರೆ ಅದು ಆ  ಮೂಲದ ನೆಲೆಯಿಂದ ಬಂದದ್ದು.ಅದನ್ನು ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ,ನನ್ನ ಅಡ್ಡಿ ಇಲ್ಲ.
ಜೋಗಿ ತಡವಾಗಿ ಹುಟ್ಟಿದವನು.ಅವನ ಅಣ್ಣನಿಗಿಂತ ಎಷ್ಟೋ ವರ್ಷ ಚಿಕ್ಕವನು.ಅವನು ಹುಟ್ಟಿದ್ದು ಮೈಸೂರಿನ ಆಸ್ಪತ್ರೆಯೊಂದರಲ್ಲಿ.ಅವನಿನ್ನೂ ಅಂಬೆಗಾಲಿಡುತ್ತಿದ್ದಾಗ ಓರ್ವ ಅವಧೂತ ಜೋಗಿ ಮನೆಗೆ ಭಿಕ್ಷೆ ಕೇಳಿ ಬಂದಿದ್ದ.ಅಂಬೆಗಾಲಿಡುತ್ತಿದ್ದ ಮಗುವನ್ನು ನೋಡಿ ಅಮ್ಮ ಶಾರದೆ ಬಳಿ ಅವಧೂತ ಹೇಳಿದ್ದನಂತೆ,
ಅಮ್ಮಾ ಈ ಹುಡುಗ ಈ ನಾಡಿಗೆ ಕೀರ್ತಿ ತರುತ್ತಾನೆ.
"ಹಾಗಂದರೆ ಏನು?" ಎಂದು ಕೇಳಿದ್ದರು ಶಾರದಮ್ಮ.
ಅವಧೂತ ಹೇಳಿದ್ದು ಒಂದೇ ಮಾತು,"ಇವನು ಬರವಣಿಗೆಯಲ್ಲಿ ಅಚ್ಚರಿ ಮೂಡಿಸುತ್ತಾನೆ."
ಬಹಳ ಕಾಲ ಆ ತಾಯಿ ತನ್ನ ಮಗ ಲೆಕ್ಕಪತ್ರ ಬರೆಯುವ ದೊಡ್ಡ ಗುಮಾಸ್ತನಾಗುತ್ತಾನೆ ಎಂದೇ ನಂಬಿದ್ದರು.
ಅವಧೂತ ಹೇಳಿದ ಮಾತು ಸತ್ಯವಾಗಿ ದಶಕವೇ ಸಂದಿದೆ.
ಜೋಗಿ ಮೂಲತಃ ಸಮುದ್ರ ದಂಡೆಯವನು.ಮಂಗಳೂರು ಸಮೀಪದ ಕೂಳೂರಿನ ಸಮುದ್ರದ ಕಿನಾರೆಯಿಂದ ಹೊರಟದ್ದು ಅವನ ಕುಟುಂಬ.ಅಪ್ಪ ಅಮ್ಮ ಹೊಟ್ಟೆಪಾಡಿಗೆ ಬದುಕನ್ನು ಹುಡುಕುತ್ತಾ ಸಾಗಿದರು.ಹಾಗೇ ಬಂದವರು ನೆಲೆಯಾದದ್ದು ಉಪ್ಪಿನಂಗಡಿಯಲ್ಲಿ.
ಅದು ನನ್ನ ಹುಟ್ಟೂರು.ನಾನು ಹುಟ್ಟಿದ್ದು, ಬೆಳೆದದ್ದು, ಮತ್ತು ಈಗಲೂ ಬದುಕುತ್ತಿರುವ ಊರು.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರೆ ನದಿಗಳು ಮಿಲನಗೊಂಡು ಧಾವಂತದಿಂದ ಸಾಗುವುದು ಮೂವತ್ತು ಮೈಲಿ ದೂರದ ಸಮುದ್ರದ ಬಳಿಗೆ.ಉಪ್ಪಿನಂಗಡಿ ಮಳೆಗಾಲದಲ್ಲಿ ಪ್ರಕೃತಿಯ ಪರಮವೈಭವ ನಾಡು.ತುಂಬಿ ಹರಿಯುವ ನದಿಗಳೆರಡು ವಿವಶವಾಗಿ ಅಪ್ಪಿಕೊಂಡು ಸಾಗುವ ಚಿತ್ರ ನಮ್ಮಿಬ್ಬರಿಗೆ ಇಂದಿಗೂ ಸವಾಲು.
ಜೋಗಿಯ ಬರಹಗಳಲ್ಲಿ ಈಗಲೂ ಕಾಣುವುದು ಆ ನದಿಗಳು ನಮಗೆ ಹಾಕಿದ ಸವಾಲುಗಳೇ.
ಜೋಗಿ ನಮ್ಮ ಸಂಗಮಕ್ಷೇತ್ರದ ಸ್ಕೂಲಿಗೆ ಬಂದು ಕುಳಿತದ್ದೇ ನನ್ನ ಬಳಿ.ಆ ಕ್ಷಣದಿಂದ ಶುರುವಾದ ನಮ್ಮ ಗೆಳೆತನಕ್ಕೆ ಬಿಡುವಿಲ್ಲ.
ಗೋಪಾಲ ಮತ್ತು ಗಿರೀಶ ಎಂಬ ಇಬ್ಬರು ಹುಡುಗರು ನಾವು ಆ ಕ್ಷಣಕ್ಕೇ ಸಿದ್ಧಗೊಂಡಿದ್ದೆವು. ಕಪ್ಪು ಬಣ್ಣದ ಚಡ್ಡಿ ಮತ್ತು ಬಿಳಿಗೀಟಿನ ಅವನ ಟೆರ್ರಿಕಾಟನ್ ಶರಟು ಇಂದಿಗೂ ನನ್ನನ್ನು ಬಿಟ್ಟುಹೋಗಿಲ್ಲ.
ಸಂಜೆ ಸ್ಕೂಲು ಬಿಟ್ಟೊಡನೆ ಆ ಮೊದಲ ದಿನ ಆ ಮಳೆಗಾಲದಲ್ಲೂ ನನ್ನನ್ನು ಚಿಣ್ಣಮಾಮರ ಕೋಲ್ಡ್ ಹೌಸಿಗೆ ಕರೆದೊಯ್ದು ಲಾಲಿಪಾಪ್ ಕೊಡಿಸಿದ್ದ.
ಅದಕ್ಕೆ ಪ್ರತಿಯಾಗಿ ನಾನು ಅವನಿಗೆ ಇಂದಿಗೂ ಏನೂ ಕೊಟ್ಟಿಲ್ಲ.ಏಕೆಂದರೆ ಜೋಗಿಯ ಪ್ರೀತಿ ಮುಂದೆ ಯಾರು ಏನು ಕೊಟ್ಟರೂ ಅದು ಸಂದಾಯ ಆಗೋದೇ ಇಲ್ಲ.
ಜೋಗಿ ಭಯಂಕರ ತುಂಟ.ಶಾಲೆಯಲ್ಲಿ ಅವನ ಕಿತಾಪತಿಗಳಿಗೆ ಲೆಕ್ಕವಿಲ್ಲ.ಅಬ್ಬೇಪಾರಿ ಮೇಸ್ತರುಗಳ ತರಗತಿಗಳಿಂದ ಗೆಟ್‌ಔಟ್ ಆಗುವುದಕ್ಕೆ  ಆಯಾ ದಿನಗಳಲ್ಲಿ ಏನು ಬೇಕೋ ಅದನ್ನೆಲ್ಲಾ ಮಾಡುತ್ತಿದ್ದ.ನಾವು ಓದುತ್ತಿದ್ದುದು ಕನ್ನಡ ಶಾಲೆಗಳಲ್ಲಿ.ಸರಕಾರಿ ಶಾಲೆಗಳ ಕಾಲವದು.ಮೇಸ್ತರುಗಳು ಎಂದರೆ ನಮಗೆ ಅರ್ಧ ತಮಾಶೆ,ಹೈಸ್ಕೂಲಿನಲ್ಲಿರುವಾಗಲೇ ನಮಗೆ ಈ ಮೇಸ್ತರರು ನಮ್ಮ ಲೆವೆಲ್‌ಗೆ ಇಲ್ಲ ಎಂದು ಮೊದಲ ಬಾರಿಗೆ ನನಗೆ ಪಾಠ ಮಾಡಿದ್ದ.ಪಿಯುಸಿಗೆ ಬರುವಾಗ ನಮ್ಮ ಮುಂದೆ ಇದ್ದ ಕೋರ್ಸು ಎರಡೇ,ಒಂದು ಕಾಮರ್ಸ್ ಮತ್ತೊಂದು ಆರ್ಟ್ಸ್.ಕಾಮರ್ಸ್ ತೆಗೊಳ್ಳೋಣ.ಏಕೆಂದರೆ ನಾವು ಸಿ.. ಮಾಡಿ ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು ಎಂದು ನನ್ನಲ್ಲಿ ಆಸೆ ಹುಟ್ಟಿಸಿದ.ಪಿಯು ಸೇರಿದ ಮೂರನೇ ದಿನಕ್ಕೇ ಡೆಬಿಟ್ ವಾಟ್ ಕಮ್ಸ್ ಇನ್ ಅಂತ ರೆಡ್ಡಿ ಮಾಸ್ತರ ಪೆದ್ದು ಪೆದ್ದಾಗಿ ಗಿಳಿಪಾಠ ಹೇಳುತ್ತಿದ್ದಾಗ ನಾನು ಸಿಕ್ಕಿ ಬಿದ್ದೆ ಎಂದು ಅವನಲ್ಲಿ ಗೋಗರೆದರೆ,ಜೋರಾಗಿ ನಕ್ಕು(ಈಗಲೂ ಆಗೊಮ್ಮೆ ಈಗೊಮ್ಮೆ ಜೋಗಿ ಆ ನಗು ನಗುವುದು ಇದೆ ನೋಡಿ)ಇದೆಲ್ಲಾ ಸುಮ್ಮನೇ ಮಾರಾಯ.ನಮಗೆ ಕಾಲೇಜಿಗೆ ಬರೋ ನೆಪ ಅಷ್ಟೇ.ಐದು ವರ್ಷ ಹೀಗೆ ಕಳೆಯೋಣ.ನಾವು ಕಲಿಯೋದು ಬೇರೇನೇ ಇದೆ ಎಂದು ಸಂತೈಸಿದ.
ಆ ಮಾತು ನಿಜವಾಯಿತು.ಪಠ್ಯ ಒಂದನ್ನು ಬಿಟ್ಟು ನಾವು ಬದುಕನ್ನು ಕಲಿತೆವು.ಕಾವ್ಯ ಓದಿದೆವು,ಕಾದಂಬರಿ ತಂದು ಮುಗಿಸಿದೆವು.ಕಾಡು ಅಲೆದೆವು,ಹೊಳೆಯಲ್ಲಿ ಈಜಾಡಿದೆವು.ಮಾವಿನ ತೋಟ ಮಾಡಿದೆವು,ಬತ್ತದ ಗದ್ದೆ ಉತ್ತು ಕೊಯ್ಲು ಮಾಡಿದೆವು.
ಜೋಗಿ ಬರೆದ ಮೊದಲ ಕಥೆ,ಜೋಗಿ ಬರೆದ ಮೊದಲ ಕವಿತೆ,ಜೋಗಿ ಮಾಡಿದ ಮೊದಲ ಭಾಷಣ,ಜೋಗಿ ಪ್ರೀತಿಸಿದ ಮೊದಲ ಹುಡುಗಿ,..ಎಲ್ಲದಕ್ಕೂ ನಾನೊಬ್ಬನೇ ಸಾಕ್ಷಿ.ಆ ಮಟ್ಟಿಗೆ ನಾನು ಧನ್ಯ.ಇಂದಿಗೂ ಅವನ ಒಳನೋಟ,ಅವನ ಅಂತರ್ಯಗಳು,ಅವನ ಒಳಗಿನ ಲಹರಿ ನನಗೆ ಮಾತ್ರಾ ಅರ್ಥವಾಗುತ್ತದೆ.ಇದನ್ನು ಅರ್ಧ ಅಹಂಕಾರ ಮತ್ತು ಅರ್ಧ ವಿನಯದಿಂದ ಹೇಳುತ್ತೇನೆ.ಅವನು ಮತ್ತು ನಾನು ಬಿಚ್ಚಿಕೊಳ್ಳದ ಸತ್ಯಗಳಿಲ್ಲ.ನಾವು ಮುಚ್ಚಿಟ್ಟ ವಿಚಾರಗಳೇ ಇಲ್ಲ.ಇದನ್ನು ಕಂಡ ಅವನ ಜ್ಯೋತಿ ಅನೇಕ ಬಾರಿ ಅಸೂಯೆಪಟ್ಟಿದ್ದಾಳೆ.
ಜೋಗಿ ಕತೆಗಾರನಾಗುತ್ತಾನೆ ಎಂದು ಮೊದಲ ಬಾರಿಗೆ ನನಗೆ ಹೇಳಿದವನು ನನ್ನ ಅಪ್ಪ.ಅವನು ಜೋಗಿಯನ್ನು ಏಕೋ ಬಹುವಚನದಲ್ಲೇ ಕರೆಯುತ್ತಿದ್ದ.ನಾವು ಹೈಸ್ಕೂಲಿನಲ್ಲಿ ಇದ್ದಾಗ ನಾವಿಬ್ಬರೂ ಜಿದ್ದಿಗೆ ಬಿದ್ದವರಂತೆ ಕತೆ ಬರೆಯತ್ತಿದ್ದೆವು.ನೂರು ಪುಟದ ನೋಟ್ಸ್ ಬುಕ್ಕು ನಮ್ಮ ಸಂಕಲನ.ಅವನ ಕಥಾಸಂಕಲನಕ್ಕೆ ಕೊನೆ ಪುಟದಲ್ಲಿ ನನ್ನ ವಿಮರ್ಶೆ.ನನ್ನ ಸಂಕಲನಕ್ಕೆ ಅವನದ್ದು.ಎರಡನ್ನೂ ನಾವು ನಮ್ಮ ಕ್ಲಾಸಿನ ಸುಂದರಾಂಗಿಯರಿಗೆ ಕೊಟ್ಟು ಓದಿಸಿ,ಅವರೂ ನಮ್ಮದೇ ವಾಕ್ಯಗಳನ್ನು ಕದ್ದು ವಿಮರ್ಶೆ ಬರೆಯುತ್ತಿದ್ದುದು ಈಗಲೂ ಮರೆತಿಲ್ಲ.
ಹಾಗೇ ಅವನ ಕಥೆಗಳನ್ನು ನನ್ನ ಅಪ್ಪ ಓದುತ್ತಿದ್ದ.ಗಿರೀಶ ದೊಡ್ಡವ ಕತೆಗಾರ ಆಗುತ್ತಾನೆ ಎಂದು ಹೇಳುತ್ತಿದ್ದ.ಬರೆದರೆ ಗಿರೀಶನ ಥರ ಬರೆಯಬೇಕಯ್ಯಾ ಎಂದು ಚಪ್ಪರಿಸುತ್ತಿದ್ದ.ಅಪ್ಪ ಹಾಗೇ ಹೊಗಳಿದ ಎಂದು ನಾನು ಜೋಗಿಗೆ ಹೇಳಿದಾಗ ಅದನ್ನು ಸ್ವತಃ ಕೇಳಿಸಿಕೊಳ್ಳಲು ಜೋಗಿ ನಮ್ಮ ಮನೆಗೆ ಬಂದು ಅಪ್ಪನ ಎದುರು ಕುಳಿತರೆ ನನ್ನ ಅಪ್ಪ ಕುಮಾರವ್ಯಾಸ ಭಾರತವನ್ನು ಏರು ಸ್ವರದಲ್ಲಿ ಮಧ್ಯ ರಾತ್ರಿ ತನಕ ಜೋಗಿ ಮುಂದೆ ಅರ್ಥಸಹಿತ ಪಾರಾಯಣ ಮಾಡಿ ಅವನಿಗೆ ಸಾಕೋ ಸಾಕೋ ಮಾಡಿದ್ದ.
ಜೋಗಿ ಅವನ ಕಿತ್ತು ತಿನ್ನುವ ಬಡತನವನ್ನು ಮೀರಲು ಎಂದೂ ಸಾಹಿತ್ಯವನ್ನು ಆಶ್ರಯಿಸಲಿಲ್ಲ.ಅವನಿಗೆ ಕತೆ,ಕಾವ್ಯ,ಓದು ಬರಹ ಅವನೆಂದೂ ನಂಬದ ದೈವದತ್ತವಾಗಿಯೇ ಬಂದಿತ್ತು.ನಾವು ಚಾರ್ಮಾಡಿ,ಶಿರಾಡಿ ಘಾಟಿಗಳ ತಿರುವುಗಳಲ್ಲಿ ಲ್ಯಾಂಬಿ ಸ್ಕೂಟರ್ ಪಾರ್ಕ್ ಮಾಡಿ,ಕಾಡೊಳಗೆ ಹೊಕ್ಕೆವು ಎಂದರೆ ಹೊರಗೆ ಬರೋವಾಗ ಮೂರು ದಿನಗಳೇ ಕಳೆಯುತ್ತಿದ್ದೆವು.ಕಾಡಿನಲ್ಲಿ ನಾವು ಗಂಟೆಗಟ್ಟಲೆ ಮೌನವಾಗಿ ಕುಳಿತು ಯಾವ ಯಾವ ಹಕ್ಕಿಗಳು ಹೇಗೆ ಹೇಗೆ ಕೂಗುತ್ತವೆ ಎಂದು ಧ್ಯಾನಸ್ಥರಾಗುತ್ತಿದ್ದುದು ಜೋಗಿ ಓರ್ವ ತಪಸ್ವೀಯಾಗಲು ಕಾರಣ ಮಾಡಿತು ಎಂದು ಈಗ ನನಗೆ ಅನಿಸುತ್ತಿದೆ.ಅವನೊಳಗಣ ಆ ತಪಸ್ವೀ ಈಗಲೂ ಅವನ ಕಮರ್ಶಿಯಲ್ ಸೀರಿಯೆಲ್ಲುಗಳಲ್ಲೂ ಎದ್ದೆದ್ದು ಕಾಣಿಸುತ್ತಿದೆ.
ಒಮ್ಮೆ ಬೆಳ್ತಂಗಡಿ ಸಮೀಪದ ಗಡಾಯಿಕಲ್ಲು ಏರಿದ್ದೆವು.ಆ ಪಯಣವನ್ನು ಆಯೋಜಿಸಿದವನು ಜೋಗಿಯೇ.ಕಾರಣ ಕಾವ್ಯಶಕ್ತಿಯನ್ನು ಪ್ರಕೃತಿಯ ಆಸರೆಯಲ್ಲಿ ಪಡೆಯುವುದು.ಎರಡೇ ಎರಡು ಬಾಟಲಿ ಬಿಯರ್ ಮತ್ತು ಒಂದು ಕ್ಯಾನು ನೀರು ಮಾತ್ರಾ ನಮ್ಮ ಜೊತೆಗಿತ್ತು.ಆ ರಾತ್ರಿ ಇಡೀ ಗಡಾಯಿಕಲ್ಲಿನ ನೆತ್ತಿಯಲ್ಲಿ ಕುಳಿತದ್ದು,ಕಾವ್ಯ ಶಕ್ತಿಯನ್ನು ಧ್ಯಾನಿಸಿದ್ದು ಬಹಳ ಕಾಲ ನಮಗೆ ನಗು ತರಿಸಿತ್ತು.ಕೊರೆವ ಛಳಿಯಲ್ಲಿ ಥಂಡಿ ಹಿಡಿದು ನಾನು ವಾರ ಕಾಲ ಜ್ವರ ಹಿಡಿದು ಮಲಗಿದ್ದು ಈಗಲೂ ನನ್ನನ್ನು ಅಣಕಿಸುತ್ತದೆ,ಆದರೆ ಜೋಗಿ ಮಾತ್ರಾ ಅವನ ಕೃತಿಗಳಲ್ಲಿ ಗಡಾಯಿಕಲ್ಲಿನ ತಿರುಳನ್ನು ಢಾಳಾಗಿ ತಂದು ಕೊಡುತ್ತಿದ್ದಾನೆ.
ಪೇಜಾವರ ಮಠದ ವತಿಯಿಂದ ನಡೆದ ಸಾಹಿತ್ಯ ಸ್ಫರ್ಧೆಯಲ್ಲಿ ಜೋಗಿಗೆ ಮೊದಲ ಬಹುಮಾನ.ಆ ಪೇಜಾವರ ಸ್ವಾಮೀಜಿ ಅವರು ಸನ್ಮಾನ ಮಾಡಿ ಕೊಟ್ಟ ಎಂಟುನೂರು ರೂಪಾಯಿಯನ್ನು ಮಂಗಳೂರಿನಲ್ಲಿ ಬೀರ್ ಕುಡಿದು ಮುಗಿಸಿ ಉಳಿದ ಹಣದಲ್ಲಿ ನನಗೆ ಆತ ಆಕ್ಸ್‌ಫರ್ಡ್ ಡಿಕ್ಷನರಿ ಕೊಡಿಸಿದ್ದ.

ಜೋಗಿ ತಂದೆ ಇಂದಿರಾಗಾಂಧಿಯನ್ನು ದೇವರೇ ಎಂದು ನಂಬಿದ್ದರು,ಮಗನನ್ನು ಅಪಾರವಾಗಿ ಪ್ರೀತಿಸುತ್ತಿದ್ದರು,ಮಗ ಮಾಡಿದ್ದೆಲ್ಲವೂ ಸರಿಯಾಗಿದೆ ಎಂದುಕೊಂಡಿದ್ದರು.ಹಾಗಾಗಿ ಅವರೆಂದೂ ಮಗನನ್ನು ತಿದ್ದಿತೀಡಲು ಹೋಗಲೇ ಇಲ್ಲ.ಹಾಗೇನಾದರೂ ಮಾಡಿದ್ದರೆ ಪ್ರಮಾದವಾಗುತ್ತಿತ್ತು.ಜೋಗಿ ತನಗೆ ಇಷ್ಟವಾಗುವಂತೆ ತಾನು ಬೆಳೆದ.ಒಮ್ಮೆ ರೈಲಲ್ಲಿ ಅಪ್ಪ ಮಗ ಹೋಗುತ್ತಿದ್ದರು.ಜೋಗಿ ಮಲಗಿ ನಿದ್ರಿಸಿದ್ದ.ದಾವಣಗೆರೆ ದಾಟಿ ರೈಲು ಹೋಯಿತು.ಜೋಗಿಗೆ ಎಚ್ಚರವಾದಾಗ ಐವತ್ತು ಮೈಲಿ ಮುಂದೆ ಹೋಗಿದ್ದಾಗಿತ್ತು.ಏಕೆ ಎಂದು ತಂದೆಯನ್ನು ಕೇಳಿದರೆ "ನೀನು ನಿದ್ದೆ ಮಾಡ್ತಿದ್ದೆ.ಏಕೆ ಎಬ್ಬಿಸೋದು ಅಂತ ಸುಮ್ಮನಾದೆ.ಏನೀಗ ವಾಪಾಸು ಹೋದರಾಯಿತು ಅಷ್ಟೇ" ಎಂದರು ಆ ಪುಣ್ಯಾತ್ಮ್ಮ!
1989 ಅಕ್ಟೋಬರ 31 ಜೋಗಿ ನನ್ನ ಬಿಟ್ಟು ಹೋದ. ಅವನು ಹೊರಟಿದ್ದು ಬೆಂಗಳೂರಿಗೆ. ಖುಲ್ಲಂಖುಲ್ಲಂ ಬದುಕನ್ನು ಕಟ್ಟುವುದಕ್ಕೆ.ಮುಂದಿನ ಜೀವನದ ರೂಬುರೂಬಿಗೆ.ಆ ರಾತ್ರಿ ಅವನನ್ನು ಕೆಂಪು ಬಸ್ಸು ಏರಿಸಿ ವಾಪಾಸ್ಸು ಬಂದ ನಾನು ವಿಷಣ್ಣನಾಗಿದ್ದೆ.ಮನಸ್ಸು ಭಾರವಾಗಿ ಬಿದ್ದಿತ್ತು.ಜೋಗಿ ಇಲ್ಲದೇ ನಾನು ಊರಿನಲ್ಲಿ ಏನು ಮಾಡೋದು ಸಾಧ್ಯ ಎಂದು ಚಿಂತಿಸಿದೆ.ಅಳು ಬರುವುದೇ ಬಾಕಿ.ಮನೆಗೆ ಬಂದು ಟೇಬಲ್ಲು ಡ್ರಾವರ್ ಎಳೆದರೆ ಒಂದು ಪತ್ರ.
ಅದು ಜೋಗಿ ನನಗೆ ಬರೆದಿಟ್ಟು ಹೋದದ್ದು.
ಅದರಲ್ಲಿ ಬರೆದ ಒಂದೇ ವಾಕ್ಯ."ಹೊಸ ಬದುಕಿನ ಹಾದಿ ಹಿಡಿಯುವುದು ನನಗೆ ಅಗತ್ಯ.ನಿನ್ನ ಬಿಟ್ಟುಹೋಗುವ ಸಂಕಟ ನನ್ನ ಕೊರೆಯುತ್ತಿದೆ.ಏನು ಮಾಡೋಣ ರಕ್ತದೊಂದಿಗೆ ಲಾಳ ಬಡಿಯುತ್ತೇನೆ.ಗೆದ್ದರೆ ನಿನಗೆ ಸಿಗುತ್ತೇನೆ,ಸೋತರೆ ಜಗತ್ತಿಗೇ ವಿದಾಯ!"
ಜೋಗಿ ಗೆದ್ದ.ಕನ್ನಡಿಗರಿಗೆಲ್ಲಾ ಸಿಕ್ಕ,ನನಗೆ ಮಾತ್ರವೇ ಅಲ್ಲ.ಥ್ಯಾಂಕ್ಸ್ ಟು ಬೆಂಗಳೂರ್!
ಜೋಗಿಯ 21 ನೇ ಪುಸ್ತಕ ಇದು.ಅವನು ಬರೆದ ಮೊದಲ ಕಥೆ ನನಗೆ ಗೊತ್ತಿದೆ.ಅದು ಒಂದು ಯುವಕನ ಕಥೆ.ಆ ಕಾಲದ ಆ ಯುವಕನ ಹಂಬಲ ಮತ್ತು ತಹತಹ ಕಥೆಯಲ್ಲಿ ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ನಿರೂಪಿತವಾಗುತ್ತದೆ.ಆ ಯುವಕ ಅಕ್ಕಿ ಮಂಡಿ ಮೇಲೆ ಕುಳಿತು ಗೋಣಿಚೀಲದಿಂದ ಒಂದೊಂದೇ ಅಕ್ಕಿ ಕಾಳನ್ನು ಬಾಯಿಗೆ ಎಸೆಯುತ್ತಾ ಇರುತ್ತಾನೆ.ಒಂದು ಅಕ್ಕಿ ಕಾಳು ಅವನ ಹಲ್ಲಿನ ಕುಳಿಯೊಳಗೆ ಸಿಕ್ಕು ಅವನಿಗೆ ಅಸಾಧ್ಯ ನೋವಾಗಿ,ಅದನ್ನು ಕುಳಿಯಿಂದ ಎಬ್ಬಿಸಲು ಪ್ರಯತ್ನ ಪಡುತ್ತಾನೆ. ಆ ಕ್ಷಣಕ್ಕೆ ಅವನಿಗೆ ತಾನೂ ಒಂದು ಅಕ್ಕಿ ಕಾಳೇ ಎಂದನಿಸುತ್ತದೆ.ಯಾರದೋ ಕುಳಿಯಲ್ಲಿ ಕುಳಿತ ಹಾಗೇ ಅನಿಸುತ್ತದೆ.ಅದೇ ಅವನನ್ನು ಮುಂದಿನ ಹೋರಾಟಕ್ಕೆ ಕಟ್ಟುತ್ತದೆ.ಈ ಕಥೆಯನ್ನು  ಯಾವುದೋ ಮಾಸಿಕ ಪ್ರಕಟಿಸಿದ್ದು,ಅದೇ ಕಥೆ ಆ ತಿಂಗಳ ಬಹುಮಾನಿತ ಕತೆಯಾಗಿ ಪ್ರಶಸ್ತಿ ಪಡೆದದ್ದು ,ಕಾಲೇಜಿನಲ್ಲಿ ನನಗೆ ಹೊಟ್ಟೆ ಉರಿದದ್ದು ನೆನಪು.
ಜೋಗಿಯ ಶಕ್ತಿ ಅಥವಾ ವಿಮರ್ಶೆಯ ಪರಿಭಾಷೆಯಲ್ಲಿ ಹೇಳುವುದಾದರೆ ಸೃಜನಾತ್ಮಕ ಸಾಧ್ಯತೆಗಳು ಆ ತರುಣ ವಯಸ್ಸಿಗೇ ಕೆನೆಗಟ್ಟಿದ್ದವು.ಆದರೆ ಅವುಗಳಿಗೆ ರೂಪ ಸಿಗಲು ಆತ ಬೆಂಗಳೂರಿಗೇ ಹೋಗಬೇಕಾಯಿತು.ಜೋಗಿ ಬೆಂಗಳೂರಿಗೆ ಹೋದದ್ದೂ ಅದಕ್ಕಾಗಿ ಏನಲ್ಲ.ಅವನಿಗೆ ರೊಟ್ಟಿ ಬೇಕಾಗಿತ್ತು.ರೊಟ್ಟಯೇ ಅವನ ಗುರಿ ಈಗಲೂ ಅಲ್ಲ.ಚೆನ್ನಾಗಿ ಬದೋಕೋದು ಅವನು ಕಲಿತ ಜೀವನ ಕಲೆ.ವೈಎನ್ಕೆ ಜೋಗಿಯ ವಿದ್ವತ್‌ಪ್ರತಿಭೆಯನ್ನು ಮೊದಲಾಗಿ ಗುರುತಿಸಿದರು.ಯಾರ ಕೈಗೆ ಸಿಗಬೇಕಿತ್ತೋ ಅವರ ಕೈಗೇ ಜೋಗಿ ಸಿಕ್ಕ.ಆಮೇಲೆ ಅವನು ಬೆಳೆದ ರೀತಿಯನ್ನು ಕರ್ನಾಟಕ ಕಂಡಿದೆ.
ವೈಎನ್ಕೆ ಗರಡಿಯಲ್ಲಿ ಬೆಳೆದ ಜೋಗಿ ಇಂದು ಕನ್ನಡದ ವಿಶಿಷ್ಟ ಬಗೆಯ ಸಾಹಿತಿ.ಅವನು ಕನ್ನಡಕ್ಕೆ ತನ್ನದೇ ಛಾಪಿನ ಹೊಸ ಭಾವ ನೀಡಿದ್ದಾನೆ.ಹಾಗೆಂದು ಹೇಳುವಾಗ ಜೋಗಿಯ ಬರಹಗಳ ತುಂಟತನ ನನ್ನನ್ನು ಅಟ್ಟಾಡಿಸುತ್ತದೆ.ಅವನ ಪ್ರತೀ ಮಾತುಗಳಲ್ಲಿ ಕಾಣುವ ತುಂಟತನ ಅವನ ಯಾವತ್ತೂ ಬರಹಗಳಲ್ಲಿ ಬಂದು ನಮ್ಮನ್ನು ಮುದಗೊಳಿಸುತ್ತದೆ.
ಒಮ್ಮೆ  ಭೈರಪ್ಪನವರ ಬಗ್ಗೆ ಅವನು ಯವುದೋ ವೆಬ್‌ನಲ್ಲಿ ಬರೆದ ಬರಹಕ್ಕೆ ಭೈರಪ್ಪ ಅಭಿಮಾನಿಗಳು ಅವನನ್ನು ಗಂಡಾಗುಂಡಿ ಮಾಡಿದ್ದರು.ಕಾಮೆಂಟ್‌ಗಳ ಮಹಾಪೂರದಲ್ಲಿ ಜೋಗಿ ಕೊಚ್ಚಿಹೋಗುವುದೇ ಬಾಕಿ.ಕೊನೆಯಲ್ಲಿ ಜೋಗಿಯೇ ಆ ಟೀಕಾಸರಣಿಗೆ ಒಂದು ಕಾಮೆಂಟ್ ಹಾಕಿ ಮುಕ್ತಾಯ ಮಾಡಿದ್ದ.ಹೇಗೆಂದರೆ,"ಎಷ್ಟು ಬೇಕಾದರೂ ಬೈರಪ್ಪಾ".
ಅವನ ತುಂಟತನಕ್ಕೆ ಇಂಥ ನೂರಾರು ಉದಾಹರಣೆಗಳನ್ನು ಕಾಣುತ್ತೇವೆ.
"ದಪ್ಪಗಾಗಿದ್ದೀಯಾ, ವೆಜ್ ಮಾತ್ರಾ ತಿನ್ನು,ವಾಕ್ ಮಾಡು" ಎಂದು ಯಾರೋ ಸಲಹೆ ನೀಡಿದರೆ, "ಆನೆ ಪ್ಯೂರ್ ವೆಜ್,ಅದು ಎಷ್ಟು ವಾಕ್ ಮಾಡುತ್ತದೆ ಅಲ್ವಾ, ಸಣ್ಣಗಾಗಿದ್ದು ನೋಡಿದ್ದೀರಾ? ಎಂದು ಕೇಳಿ ಕೇಳಿದವರನ್ನು ಗರ ಬಡಿಸಿದ್ದ.ವೀರಪ್ಪ ಮೊಯ್ಲಿ ಅವರ ಕಾವ್ಯಕ್ಕೆ ಅವನ ವಿಮರ್ಶೆ, "ಮೊಯ್ಲಿ ಕಾವ್ಯ(ದಿಂದ)ಮೈಲಿ ದೂರ".ಶಿಲ್ಪಾಶೆಟ್ಟಿಯನ್ನು ಕನ್ನಡದಲ್ಲಿ ಅವನು ಪರಿಚಯಿಸಿದ್ದು,"ಇವಳ ಕಾಲೇ ಕಂಬ".ನಾನೊಮ್ಮೆ ಬೈಕ್‌ನಿಂದ ಬಿದ್ದು ಕೈ ಮುರಿಸಿಕೊಂಡಾಗ ಅವನು ಕಳುಹಿಸಿದ ಸಂತಾಪ."ಹೇಗಿದ್ದಿಯೋ "ಏಕೈಕ" ಕನ್ನಡಿಗಾ".
ಒಮ್ಮೆ ಭೀಕರವಾಗಿ ಮಾತನಾಡುವವರು ನಮ್ಮ ಜೊತೆ ಕುಳಿತು ಸಾಯೋ ಬಡಿವ ಹಾಗೇ ಮಾತನಾಡಿದರು.ಮಾತೆತ್ತಿದರೆ ನಾನು ನಿಮ್ಮ ಅಭಿಮಾನಿ ಎಂದು ಪಟ್ಟಾಗಿ ಕುಳಿತುಬಿಟ್ಟಿದ್ದರು. ಅವರು ಹೋದ ಮೇಲೆ ಜೋಗಿ ಹೇಳಿದ್ದು,ಇವರು ಅಭಿಮಾನಿ ನಿಜ.ಆದರೆ ಇವರು ಎಲ್ಲಿ ಸಿಗಬೇಕು ಎಂದರೆ "ನಾವು ಹೋಗುತ್ತಿದ್ದ ಹಡಗು ಒಡೆದು ಚಿಂದಿಯಾಗಿ ಯಾವುದೋ ದ್ವೀಪಕ್ಕೆ ಹೋಗಿ ಬಿದ್ದು,ಅಲ್ಲಿ ನಾವು ಮತ್ತೊಂದು ಹಡಗಿಗೆ ಕಾಯುತ್ತಾ ಇರುವಾಗ ಇವರು ಸಿಗಬೇಕು, ಇಲ್ಲಿ ಅಲ್ಲ."
ಜೋಗಿಯ ಅಭಿಮಾನಿಯೊಬ್ಬರು ಅವನ ಬರಹಗಳ ಬಗ್ಗೆ ಹೇಳಿದ ಒಂದು ಮಾತು ಇಲ್ಲಿ ಕೋಟ್ ಮಾಡಲೇಬೇಕು,"ಜೋಗಿ ಅವರ ಬರಹಗಳು ನಮ್ಮ ಮನೆಯ ಬೆಕ್ಕಿನ ಹಾಗೇ ಸಾರ್.ನಮ್ಮನ್ನು ಸವರಿಕೊಂಡು ತಾನೂ ಅನುಭವಿಸುತ್ತಾ ನಮಗೂ ಅನುಭವ ನೀಡುತ್ತಾ ಹೋಗುತ್ತವೆ"
"ಪಾಪಿ ಇಷ್ಟೊಂದು ಪುಸ್ತಕ ಅದೆಂತು ಬರೆಯುತ್ತಿಯೋ" ಎಂದು ನಮ್ಮ ಊರಿನ ಗೆಳೆಯರ ಅವನು ಬಂದಾಗಲೆಲ್ಲಾ ಹಿಡಿ ಶಾಪ ಹಾಕುತ್ತಾರೆ.ಅವನು ಹ್ಹೋ ಹ್ಹೋ ಎಂದು ಅಬ್ಬರಿಸಿ ಬೊಬ್ಬಿರಿದು ನಗುತ್ತಾನೆ.ಅವನ ಗೆಳತಿಯರು ಅವನನ್ನು ಕಾಡುವ ಪರಿ ನೋಡಿ ನಮ್ಮೂರಿನ ಗೆಳೆಯರು ದಂಗಾಗುತ್ತಾರೆ.
"ಈ ಪರಿಯ ಬೆಡಗಾ ಆವ ದೇವರಲೂ ನಾ ಕಾಣೆ" ಎಂದು ನಾನು ಅವರ ನಡುವೆ ಅರ್ಥಗರ್ಭಿತವಾಗಿ ಹಾಡುತ್ತೇನೆ.
ಅವನ ಯಶಸ್ಸಿನ ಫಾರ್ಮುಲಾ ಕೇಳಬೇಕೆಂದು ಅವನಿಗೆ ದುಂಬಾಲು ಬಿದ್ದವರು,ಆವನಂತೆ ಆಗಬೇಕೆಂದು ನಿರ್ಧಾರ ಮಾಡಿ ಬೆಂಗಳೂರು ಬಸ್ಸು ಹತ್ತಿದವರು,ಅವನ ಗರಡಿಯಲ್ಲಿ ಇರಬೇಕೆಂದು ಬೇಡಿದವರು ಅವನು ಕೊನೆಗೂ ಅರ್ಥವಾಗದೇ ಮರಳುತ್ತಾರೆ.
ಅದೇ ಜೋಗಿ.ಅವನನ್ನು ಅವನೊಳಗೆ ಹುಡುಕಿ ಹಿಡಿಯೋದೇ ಒಂದು ಸವಾಲು.ಸೀರಿಯೆಲ್ಲು, ಸಿನಿಮಾ ಮಂದಿಗೆ ಈ ಕಾರಣಕ್ಕೆ ಅವನ ಸಹವಾಸ ಸಾಕು-ಬೇಕು ಮಾಡುವುದು ಇದೇ ಕಾರಣಕ್ಕೆ.
ಈ ಕತೆಗಳ ಮೂಲಕ ನಿಮಗೆ ಕಾಣಿಸುವ ಈ ಕಥೆಗಾರ ನಿಮ್ಮನ್ನು ಯಾವಜ್ಜೀವ ಪಕ್ಕದಲ್ಲಿ ಕೂರಿಸಿಕೊಂಡು ಹೇಳುತ್ತಿರುವುದು ಅದೇ ಜೋಗಿ ಎಂಬ ಅನಾವರಣವನ್ನೇ.ಅವನನ್ನು ಪೂರ್ತಿ ಅರ್ಥ ಮಾಡಿಕೊಂಡ ಅಹಂಕಾರದಲ್ಲಿ ಈ ಮಾತುಗಳನ್ನು ನಾನು ಪೆಗ್ಗಿಲ್ಲದೇ ಎಗ್ಗಿಲ್ಲದೇ ಒಪ್ಪಿಸಿದ್ದೇನೆ.
ಇಂತು,
ಅವನ ಗೋಪಿ
ಮತ್ತು
ನಿಮ್ಮ ಗೋಪಾಲಕೃಷ್ಣ ಕುಂಟಿನಿ