Monday, February 22, 2010

ನಿಲ್ಲಿಸದಿರು ವನಮಾಲೀ ಕೊಳಲ ಗಾನವಾ...

ಎಪ್ಪತ್ತು ಕತೆಗಳನ್ನು ಬರೆದಾದ ನಂತರ ಒಂದು ದಿನ ವೈಯನ್ಕೆಗೆ ಹೇಳಿದ್ದೆ. ಇನ್ನು ನಾನು ಬರೆಯುವುದಿಲ್ಲ, ಅವರು ಹೇಳಿದರು : ಬರೆಯುವುದನ್ನು ನಿಲ್ಲಿಸಬೇಡ, ಪ್ರಕಟಿಸುವುದನ್ನು ನಿಲ್ಲಿಸು.
ಆವತ್ತು ಡೈರಿ ಬರೆಯಲು ಆರಂಭಿಸಿದೆ. ದಿನಕ್ಕೆ ಹತ್ತು ಪುಟದಂತೆ ಬರೆಯುತ್ತಾ ಹೋದೆ. ತಿಂಗಳಲ್ಲಿ 20 ದಿನವಂತೂ ಬರೆದೇ ಬರೆಯುತ್ತಿದ್ದೆ. ಪ್ರತಿತಿಂಗಳೂ 200 ಪುಟದ ಪುಸ್ತಕದ ತುಂಬ ನಾನು ನೋಡಿದ ಸಿನಿಮಾ, ಓದಿದ ಪುಸ್ತಕ, ಆಗಷ್ಟೇ ಹುಟ್ಟಿದ ಕತೆ, ಎಲ್ಲೋ ಓದಿದ ಕತೆಯಿಂದ ಗ್ರಹಿಸಿದ್ದು, ನ್ಯೂಯಾರ್ಕ್ ಟೈಮ್ಸಲ್ಲಿ ಬಂದು ಲೇಖನದ ಅನುವಾದ- ಹೀಗೆ ಏನಾದರೊಂದು ಬರೆಯುತ್ತಿದ್ದೆ. ಬರೆಯದೇ ಊಟ ಮಾಡುವುದಿಲ್ಲ ಎಂಬುದನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದೆ. ನಾಲ್ಕು ವರ್ಷ ಹಾಗೆ ಬರೆದಿಟ್ಟದ್ದು ಸುಮಾರು 60 ಪುಸ್ತಕಗಳಲ್ಲಿ ತುಂಬಿಹೋಗಿದೆ.
ಅವನ್ನೆಲ್ಲ ಎತ್ತಿ ಅಟ್ಟಕ್ಕೆ ಹಾಕುವಾಗ ಕಣ್ಣೀರು ಬಂತು. ಪ್ರಕಟಿಸುವ ಆಸೆಯಾಯಿತು. ಎಷ್ಟಾದರೂ ನಾನೇ ಬರೆದದ್ದು. ಯಾರಾದರೂ ಪ್ರಕಾಶಕರು ಕೇಳಿದರೆ ಥಟ್ಟನೆ ಇದನ್ನು ಪ್ರಕಟಿಸಿ ಅಂತ ಕೊಟ್ಟುಬಿಟ್ಟರೆ? ಏನು ಮಾಡಲಿ ಅಂತ ವೈಯನ್ಕೆಗೆ ಕೇಳಿದೆ.
ಕಿಲ್ಯುವರ್ ಬೇಬೀಸ್ ಅಂದರು. ಮರದ ಹಾಗೆ ದಿನವೂ ಹೂವು ಅರಳಿಸುತ್ತಿರಬೇಕು. ಅವನ್ನು ಕಾಪಿಟ್ಟುಕೊಳ್ಳಲು ಹೋಗಬಾರದು. ಯೋಜನಗಂಧಿಯ ಹಾಗೆ ಹೆತ್ತ ಮಕ್ಕಳನ್ನೆಲ್ಲ ನೀರಿಗೆ ಎಸೆಯಬೇಕು. ಲೇಖಕನಿಗೂ ಆ ನಿಷ್ಠುರವಾದ ನಿಲುವು ಇರಬೇಕು. ಪ್ರಕಟಿಸಬೇಕಾದ ಪುಸ್ತಕಗಳು ಯಾವುದು, ಯಾವುದು ಪ್ರಕಟಣೆಗೆ ಅರ್ಹವಲ್ಲ ಎಂಬುದು ಗೊತ್ತಿರಬೇಕು. ಎಷ್ಟೋ ಸಲ ಪ್ರಕಟಣೆಗೆ ಅರ್ಹವಾಗಿದ್ದರೂ ಪ್ರಿಂಟು ಮಾಡಲಿಕ್ಕೆ ಹೋಗಬಾರದು. ಪ್ರಕಟಿಸುವ ಆಮಿಷವೇ ಲೇಖಕನಿಗೆ ಶತ್ರು. ಅಂಥ ಆಮಿಷ ಇಲ್ಲದವರೆಂದರೆ ಕಿ ರಂ ನಾಗರಾಜ ಮತ್ತು ಬಿವಿ ಕಾರಂತ ಅಂದಿದ್ದರು ವೈಯನ್ಕೆ.
ಅದಾಗಿ ಎಷ್ಟೋ ದಿನದ ನಂತರ ಕಿರಂ ಸಿಕ್ಕಾಗ ವೈಯನ್ಕೆ ಹೇಳಿದ್ದನ್ನು ಅವರಿಗೆ ಹೇಳಿದೆ. ಅವರು ಎಂದಿನ ಉಡಾಫೆಯಲ್ಲಿ ನಕ್ಕು, ಅಯ್ಯೋ ಯಾವನ್ರೀ ಬರೀತಾನೆ ಅಂದರು. ಬರೆದು ಏನು ಮಾಡೋದಿದೆ ಹೇಳಿ. ಅಡಿಗರು ಹೇಳಿದ್ದು ಗೊತ್ತಲ್ಲ ಅಂತ ಒಂದು ಪ್ರಸಂಗ ನೆನಪಿಸಿಕೊಂಡರು: ಸಂದರ್ಭ ಅಡಿಗರ ಹುಟ್ಟುಹಬ್ಬ. ನಡೆದದ್ದು ಜಯನಗರದ ಪ್ರಿಸಂ, ದಿ ಬುಕ್ ಶಾಪ್ನಲ್ಲಿ. “ನಾನೂ, ಅಡಿಗರು ನಡೀತಾ ಹೋಗುತ್ತಿದ್ವಿ. ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರ ಒಬ್ಬ ಹಳ್ಳಿಯ ಹುಂಬ ರಸ್ತೆ ದಾಟುತ್ತಿದ್ದ. ಅಡಿಗರು ನನ್ನನ್ನೊಂದು ಕ್ಷಣ ತಡೆದು ನಿಲ್ಲಿಸಿ, ಅವನನ್ನು ತೋರಿಸಿ ಹೇಳಿದರು. “ನೋಡಯ್ಯಾ, ನೀನು ಆ ರಸ್ತೆದಾಟುವ ಹಳ್ಳಿಯವನನ್ನು ಹೇಗೆ ನೋಡ್ತೀಯೋ, ನನ್ನನ್ನು ಕೂಡ ಹಾಗೇ ನೋಡಬೇಕು. ನಾನು ಬೇರೆಯಲ್ಲ. ಅಲ್ಲಿ ರಸ್ತೆ ದಾಟುವ ಹಳ್ಳಿಗ ಬೇರೆಯಲ್ಲ.” ನಾವೆಲ್ಲ, ಅಡಿಗರ ಥಿಂಕಿಂಗ್ ಬಗ್ಗೆ ಮೆಚ್ಚುಗೆ ಪಡುತ್ತಿರಬೇಕಾದರೆ ಕಿ.ರಂ. ಮುಂದುವರೆಸಿದರು. “...ಮತ್ತೆ ನೀನೂ ಕೂಡ ಬೇರೆಯಲ್ಲ!”
ಕಿರಂ ಸಂಯಮದ ಗುಟ್ಟೇನು ಅಂತ ನನಗೆ ಕೊನೆಗೂ ಗೊತ್ತೇ ಆಗಲಿಲ್ಲ. ನೀವೇ ಬರೆಯಿರಿ, ನಾವು ಬರೀತೀವಿ, ನೀವು ಡಿಕ್ಟೇಟ್ ಮಾಡಿ, ನೀವು ಮಾತಾಡಿದ್ದನ್ನೆಲ್ಲ ರೆಕಾರ್ಡ್ ಮಾಡಿಕೊಂಡು ಪುಸ್ತಕ ಮಾಡೋಣ ಅಂತ ನಾನೂ ಉದಯ ಮರಕಿಣಿಯೂ ಅವರಿಗೆ ನೂರಾರು ಸಲ ಹೇಳಿದ್ದೆವು. ಒಂದು ಸಲ ನೆಟ್ಟಕಲ್ಲಪ್ಪ ಸರ್ಕಲಿನ ಬಾರಲ್ಲಿ ಕೂತಾಗ ಗುಟ್ಟಾಗಿ ಕಿರಂ ಮಾತಾಡಿದ್ದನ್ನು ರೆಕಾರ್ಡು ಮಾಡಲು ನನ್ನ ಹಳೆಯ ಟೇಪ್ ರೆಕಾರ್ಡು ಒಯ್ದು ಆನ್ ಮಾಡಿ ಇಟ್ಟಿದ್ದೆ. ಪಾರ್ಟಿ ಮುಗಿಸಿ ಮನೆಗೆ ಬಂದ ರೆಕಾರ್ಡು ಹಾಕಿದರೆ ಮೆತ್ತಗೆ ಮಾತಾಡುವ ಕಿರಂ ದನಿ ದಾಖಲಾಗಿರಲೇ ಇಲ್ಲ. ನಮ್ಮ ಪಕ್ಕದ ಟೇಬಲಲ್ಲಿ ಕೂತಿದ್ದವನು ಕೆಟ್ಟ ಮಾತಲ್ಲಿ ಯಾರಿಗೋ ಬೈಯುತ್ತಿದ್ದದ್ದು, ಸಪ್ಲೈಯರ್ ಏನ್ ಕೊಡ್ಲಿ, ಚಿಕನ್ ಸುಕ್ಕಾ, ಮಟನ್ ಕೈಮ, ಪಿಷ್ ಫಿಂಗರ್ ಇದೆ ಅಂದಿದ್ದೆಲ್ಲ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅದನ್ನು ಕಿರಂಗೆ ಹೇಳಿದಾಗ ಮನಸಾರೆ ನಕ್ಕು, ಅದೇ ಅತ್ಯುತ್ತಮ ಸಾಹಿತ್ಯ ಅಂದಿದ್ದರು.
ವೈಯನ್ಕೆ 1999ರ ಅಕ್ಟೋಬರ್ 16ರಂದು ಕಾಲವಾದರು. ಅವರು ಅಮೆರಿಕಾಕ್ಕೆ ಹೋಗುವ ತಿಂಗಳ ಮುಂಚೆ ಅವರಿಗೆ ನನ್ನ ಹೊಸ ಪುಸ್ತಕದ ಹಸ್ತಪ್ರತಿ ತೋರಿಸಿದೆ. ಅವರು ಅದನ್ನು ತಮ್ಮ ಎಂದಿನ ಶರವೇಗದಲ್ಲಿ ಕಣ್ಣಾಡಿಸಿ ಓದಿದರು. ಗುಡ್ ಗುಡ್... ಅಂದರು. ರಾತ್ರಿ ಗಾಲ್ಫ್ ಕ್ಲಬ್ಬಲ್ಲಿ ನಾನೂ ಉದಯ್ ಮರಕಿಣಿ ಕೂತಿದ್ದಾಗ ಮತ್ತೆ ಪುಸ್ತಕದ ಬಗ್ಗೆ ಮಾತಾಡಿದರು.ಆ ಪುಸ್ತಕ ಪ್ರಿಂಟ್ ಮಾಡ್ಲೇಬೇಕಾ ನೀನು ಅಂತ ಕೇಳಿದ್ದರು. ಹಾಗೇನಿಲ್ಲ ಸರ್. ಚೆನ್ನಾಗಿದ್ದರೆ ಮಾಡ್ತೀನಿ ಅಂದಿದ್ದೆ. ಚೆನ್ನಾಗಿದೆ. ಅದು ನಿನಗೂ ಗೊತ್ತಿದೆ. ಚೆನ್ನಾಗಿರೋದು ಮುಖ್ಯ ಅಲ್ಲ. ನೀನು ನಿನ್ನ ಭಾಷೆಯಲ್ಲಿ ಬರೀಬೇಕು. ಆರ್ಥರ್ ಕ್ವಿಲ್ಲರ್ ಅಂತ ಒಬ್ಬ ಹುಚ್ಚ ಇದ್ದಾನೆ. ಅವನು ಜಗತ್ತಿನ ಅತ್ಯುತ್ತಮ ಇಂಗ್ಲಿಷ್ ಪದ್ಯಗಳನ್ನೆಲ್ಲ ಸಂಗ್ರಹ ಮಾಡಿದ್ದಾನೆ. ಅದನ್ನೆಲ್ಲ ಮಾಡಿದ ನಂತರ ಅವನೊಂದು ಪುಸ್ತಕ ಬರೆದ. ಚೆನ್ನಾಗಿರೋ ಪದ್ಯಗಳನ್ನು ಬರೆಯುವಾಗ, ಚೆನ್ನಾಗಿರೋ ಬರಹ ಬರೆಯುವಾಗ ಹುಷಾರಾಗಿರಬೇಕು. ನಿಮಗಿಷ್ಟವಾಗಿರೋದು ಓದುಗರಿಗೂ ಇಷ್ಟವಾಗಬೇಕಾಗಿಲ್ಲ. ಕೇಂಬ್ರಿಜ್ ಯೂನಿವರ್ಸಿಟೀಲಿ ಅವನು ಒಂದು ಸಲ ಭಾಷಣ ಮಾಡ್ತಾ ಹೇಳಿದ ‘Whenever you feel an impulse to perpetrate a piece of exceptionally fine writing, obey it—whole-heartedly—and delete it before sending your manuscript to press. Murder your darlings.’ ಅಂದ್ರೆ ಬರೆಯುವಾಗ ಚೆಂದ ಚೆಂದದ ಪದಗಳು, ಅಭಿವ್ಯಕ್ತಿಗಳು ಬರುತ್ತವೆ. ಪ್ರಕೃತಿಯ ಸೊಬಗನ್ನು ವರ್ಣಿಸೋಣ ಅನ್ನಿಸುತ್ತೆ. ಬರೆಯುವಾಗ ಅದನ್ನು ತಡೆಯೋದಕ್ಕೆ ಹೋಗಬೇಡಿ. ಬರೆದುಬಿಡಿ. ಆದರೆ ಪ್ರಿಂಟಿಗೆ ಹೋಗುವಾಗ ನೀವು ಮೆಚ್ಚಿ ಬರೆದ ಸಾಲುಗಳನ್ನು ನಿರ್ದಾಕ್ಷಿಣ್ಯಾಗಿ ಅಳಿಸಿಹಾಕಿ, ಕಿಲ್ ಯುವರ್ ಡಾರ್ಲಿಂಗ್ಸ್.
ವೈಯನ್ಕೆ ಅಷ್ಟು ಹೇಳಿದ್ದೆ ತಡ, ನಾನು ಬರೆದಿಟ್ಟಿದ್ದ ಅರವತ್ತೂ ಪುಸ್ತಕಗಳನ್ನೂ ನನ್ನ ಅಣ್ಣನ ಮನೆಗೆ ಸಾಗಿಸಿದೆ. ಅಲ್ಲಿದ್ದ ನನ್ನ ಇತರ ಪುಸ್ತಕಗಳ ನಡುವೆ ಇವೂ ಜಾಗ ಪಡೆದವು. I killed my darlings! ನಾವೇ ಮೆಚ್ಚೋದನ್ನು ನಾವು ಬರೆಯಬಾರದು ಅಂತ ತಿಳಿಸಿಕೊಟ್ಟ ವೈಯನ್ಕೆಗೆ ನಮಸ್ಕಾರ.

Tuesday, February 9, 2010

ಅಶ್ರಫ್, ಕುಂಟಿನಿ, ಮುಸ್ತಫಾ, ಮಹೇಂದ್ರ, ಕಿಶೋರ್ ಮತ್ತು ಉಪ್ಪಿನಂಗಡಿ ಎಂಬ ಪುಣ್ಯಭೂಮಿ

ಜೀವಂತವಾಗಿದ್ದಾರಾ?
ಹೂಂ.
ಕರ್ನಾಟಕದವರಾ? ಹೊರಗಿನವರಾ?
ಕರ್ನಾಟಕದವರು.
ಕಲೆ, ಧಾರ್ಮಿಕ, ಸಾಹಿತ್ಯ, ರಾಜಕೀಯ, ಸಿನಿಮಾ, ಕ್ರೀಡೆ...
ಸಾಹಿತ್ಯ.
ಪ್ರಶಸ್ತಿ ಬಂದಿದ್ಯಾ...
ಹೂಂ.
ನಮ್ಮ ದೇಶದ ಪ್ರಶಸ್ತಿಯಾ, ವಿದೇಶಿ ಪ್ರಶಸ್ತಿಯಾ?
ವಿದೇಶಿ..
ಅಡಿಗ, ಅರವಿಂದ ಅಡಿಗ.
ಎಲ್ಲರೂ ಹೋ’ ಎಂದು ಸಂಭ್ರಮಿಸಿದರು. ಕವಿಗಳು ಬೆರಗಾಗಿ ಕೂತರು.ಮತ್ಯಾರೋ ಕೈ ಕುಲುಕಿದರು. ಐದೇ ಪ್ರಶ್ನೆಗಳಲ್ಲಿ ಉತ್ತರ ಸಿಕ್ಕಿತು ಅಂದರು. ಇದು ನಮ್ಮೂರ ಹುಡುಗರ ಹೊಸ ಆಟ. ಅದಕ್ಕೆ ಅವರಿಟ್ಟ ಹೆಸರು ಅಶ್ವಮೇಧ’. ಆಟದ ನಿಯಮ ಇಷ್ಟೇ. ಒಂದು ಪುಟ್ಟ ಚೀಟಿಯಲ್ಲಿ ಒಬ್ಬ ಖ್ಯಾತನಾಮರ ಹೆಸರು ಬರೆದಿಟ್ಟುಕೊಳ್ಳಿ. ಅವರ ಬಗ್ಗೆ ಆಥ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾನೆ. ನೀವು ಇಪ್ಪತ್ತೊಂದು ಪ್ರಶ್ನೆಗಳಿಗೆ ಉತ್ತರ ಕೊಡುವ ಮೊದಲೇ ನೀವು ಬರೆದಿಟ್ಟುಕೊಂಡ ವ್ಯಕ್ತಿ ಯಾರೆಂದು ಆತ ಹೇಳುತ್ತಾನೆ. ಹಾಗೆ ಹೇಳುವವನ ಹೆಸರು ಮುಸ್ತಫಾ.
ಮೇಲ್ನೋಟಕ್ಕೆ ಇದೊಂದು ಅತ್ಯಂತ ಸರಳವಾದ ಆಟದಂತೆ ಕಾಣಿಸುತ್ತದೆ. ಆದರೆ ಒಂದು ಮಟ್ಟದ ಜನರಲ್ ನಾಲೆಜ್ ಇಲ್ಲದೇ ಹೋದರೆ, ನಿತ್ಯವೂ ಪೇಪರ್ ಓದದೇ ಇದ್ದರೆ, ಚರಿತ್ರೆಯಿಂದ ಹಿಡಿದು, ಇತ್ತೀಚಿನ ಆಗುಹೋಗುಗಳ ತನಕ ಎಲ್ಲವನ್ನೂ ತಿಳಿದುಕೊಂಡಿರದೇ ಇದ್ದರೆ ಕೇವಲ ಕೆಲವೇ ಕೆಲವು ಸೂಚನೆಗಳನ್ನು ಮುಂದಿಟ್ಟುಕೊಂಡು ಹೇಳುವುದು ಕಷ್ಟ. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್, ದಕ್ಷಿಣ ಕನ್ನಡದ ವಿಟ್ಲ ಎಂಬ ಊರಿನ ಹವ್ಯಕ ಹೆಂಗಸು ಎಂಬ ಸಣ್ಣ ವಿವರಗಳೂ ಅಲ್ಲಿ ಮುಖ್ಯ.
ಇದನ್ನು ನೋಡುತ್ತಿದ್ದರೆ ಆಶ್ಚರ್ಯವಾಯಿತು. ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ, ಕೆ ವಿ ತಿರುಮಲೇಶ್, ಯಶವಂತ ಚಿತ್ತಾಲ, ಭೀಮಸೇನ ಜೋಷಿ, ಅಷ್ಟೇನೂ ಖ್ಯಾತರಲ್ಲದ ಡಿ ಎ ಶಂಕರ್- ಹೀಗೆ ಎಲ್ಲರ ಕುರಿತು ಮಾಹಿತಿ ಇಟ್ಟುಕೊಂಡ ಮುಸ್ತಫಾ ಮತ್ತು ಗೆಳೆಯರ ಗುಂಪು ತಮ್ಮಷ್ಟಕ್ಕೇ ತಾವು ಓದುತ್ತಾ, ತಿಳಿದುಕೊಳ್ಳುತ್ತಾ, ಬೆರಗುಗೊಳ್ಳುತ್ತಾ, ಸಂಭ್ರಮಪಡುತ್ತಾ ಇರುವುದನ್ನು ನೋಡಿ ಡುಂಡಿರಾಜ್, ಸುಬ್ರಾಯ ಚೊಕ್ಕಾಡಿ, ಲಕ್ಷ್ಮಣರಾವ್ ಕೂಡ ಅಚ್ಚರಿಯಿಂದ ನೋಡತೊಡಗಿದರು. ಲಕ್ಷ್ಮಣರಾವ್ ಅವರ ಮೂವತ್ತೋ ನಲವತ್ತೋ ಕವಿತೆಗಳನ್ನು ಥಟ್ಟನೆ ಹೇಳಬಲ್ಲ ಆರೆಂಟು ಹುಡುಗರು ಅಲ್ಲಿದ್ದರು. ಎಷ್ಟೋ ವರ್ಷಗಳ ಹಿಂದೆ ಸಂತೋಷ’ ಪತ್ರಿಕೆಯಲ್ಲಿ ದೆಹಲಿಯ ಬಗ್ಗೆ ಚೊಕ್ಕಾಡಿ ಬರೆದ ಕವಿತೆಯನ್ನು ಮತ್ಯಾರೋ ನೆನಪಿಸಿದರು. ಡುಂಡಿರಾಜ್ ಎಂದೋ ಬರೆದಿದ್ದ, ಸದ್ಯಕ್ಕೆ ಯಾರೂ ನೆನಪಿಸಿಕೊಳ್ಳದ ಓಡುವವರು’ ನಾಟಕದ ಸಾಲುಗಳನ್ನು ಹೇಳಿದರು. ಹೀಗೆ ಇಡೀ ರಾತ್ರಿ ಉಲ್ಲಾಸದಿಂದ ಸರಿಯುತ್ತಿತ್ತು.
ಇದು ಉಪ್ಪಿನಂಗಡಿಯ ಕತೆ. ಅಲ್ಲಿ ಎದುರಾಗುವ ಅಶ್ರಫ್, ಮಹೇಂದ್ರ, ಶಾಹುಲ್ ಹಮೀದ್, ಕಿಶೋರ್ ಅಧಿಕಾರಿ, ಮುಸ್ತಫಾ ಮತ್ತು ಇವರೆಲ್ಲರ ಗುರುವಿನಂತಿರುವ ಗೋಪಾಲಕೃಷ್ಣ ಕುಂಟಿನಿ ಮುಂತಾದ ಗೆಳೆಯರ ಬಳಗವೊಂದು ತಣ್ಣಗೆ ತಮಗೆ ಬೇಕಾದ್ದನ್ನು ಓದಿಕೊಂಡು, ನೋಡಿಕೊಂಡು, ಮಾಡಿಕೊಂಡು ತಮ್ಮ ಆರೋಗ್ಯವನ್ನು ಅಭಿರುಚಿಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿದೆ. ನಾನು ನೋಡಿದ ಎಲ್ಲ ಪುಟ್ಟ ಊರುಗಳಲ್ಲೂ ಇಂಥದ್ದೊಂದು ಗುಂಪಿದೆ. ಅವರು ತಮಗಿಷ್ಟ ಬಂದಿದ್ದನ್ನು ಓದುತ್ತಾ, ಪತ್ರಿಕೆಯಲ್ಲಿ ಬಂದ ಪುಸ್ತಕ ತರಿಸಿಕೊಂಡು ಓದಿ ಚರ್ಚಿಸುತ್ತಾ, ಬೆಂಗಳೂರಲ್ಲಿ ಮಾತ್ರ ಒಂದೋ ಎರಡೋ ಪ್ರದರ್ಶನ ಕಾಣುವ ಕಲಾತ್ಮಕ ಚಿತ್ರಗಳ ಡೀವೀಡಿ ತರಿಸಿಕೊಂಡು ಸಿನಿಮಾ ನೋಡುತ್ತಾ, ತಮ್ಮನ್ನು ಮುಖ್ಯವಾಹಿನಿಯಿಂದ ಹೊರಗಿಟ್ಟದ್ದರ ಬಗ್ಗೆ ಬೇಸರಪಡುತ್ತಾ, ಆ ಮಿತಿಯಲ್ಲೇ ಜೀವನೋತ್ಸಾಹ ಕಂಡುಕೊಳ್ಳುತ್ತಿರುತ್ತಾರೆ. ಅಂಥವರಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಬೆಂಗಳೂರು ತಲೆಕೊಡವಿಕೊಂಡು ಇನ್ನೆಲ್ಲೋ ನೋಡುತ್ತಿದೆ.
*****

ಇವತ್ತಿನ ಚೈತನ್ಯದ ಚಿಲುಮೆಗಳು ಗ್ರಾಮೀಣ ಕರ್ನಾಟಕದಲ್ಲಿವೆ ಅನ್ನುವುದಂತೂ ಸತ್ಯ. ಬೆಂಗಳೂರಿನ ಮಟ್ಟಿಗೆ ಇವತ್ತು ದುಡಿಮೆ ಎನ್ನುವುದು ಮೂಲಮಂತ್ರ. ದುಡಿಮೆ ಒಂದು ಮೌಲ್ಯ ಮಾತ್ರವೇ ಆಗಿದ್ದ ದಿನಗಳು ಕಣ್ಮರೆಯಾಗಿ, ದುಡಿಮೆಗೆ ಇವತ್ತು ಅದಕ್ಕಿಂತ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ. ಕಾಯಕವೇ ಕೈಲಾಸ ಎನ್ನುವುದು ಸುಳ್ಳಾಗುತ್ತಿದೆ. ದುಡಿಮೆಯ ಜೊತೆಗೇ ಬೆಸೆದುಕೊಂಡಿದ್ದ ಸೌಖ್ಯ ಮಾಯವಾಗಿದೆ. ನಮ್ಮಲ್ಲಿ ಬಹುತೇಕ ಮಂದಿ, ನಾವು ಮಾಡಬೇಕಾದದ್ದನ್ನು ಸಂತೋಷದಿಂದ ಮಾಡುತ್ತಿಲ್ಲ. ಅದರ ಬದಲು, ಅಲ್ಲೊಂದು ಬಗೆಯ ಅನಿವಾರ್ಯ ಕರ್ಮದ ಒತ್ತಡ, ಸೂತಕದ ಛಾಯೆ ಕಾಣಿಸುತ್ತಿದೆ. ಹಾಡುತ್ತಾ ಗೆಯ್ಮೆ ಮಾಡುತ್ತಿದ್ದ, ನಾಟಿ ಮಾಡುತ್ತಾ, ಬತ್ತ ಕುಟ್ಟುತ್ತಾ, ರಾಗಿ ಬೀಸುತ್ತಾ ಆ ಕೆಲಸದ ಸಂತೋಷವನ್ನು ಅನುಭವಿಸುತ್ತಿದ್ದ ದಿನಗಳು ಇವತ್ತಿಲ್ಲ. ದಿನಕ್ಕೆ ಲಕ್ಷಾಂತರ ರುಪಾಯಿ ವ್ಯಾಪಾರ ಮಾಡುವ ಹೊಟೆಲೊಂದರ ಅಡುಗೆ ಭಟ್ಟರೊಬ್ಬರು ಹೇಳುತ್ತಿದ್ದರು; ಮೊದಲೆಲ್ಲ ನಮ್ಮ ಹೊಟೆಲಿಗೆ ನಾನು ಇಷ್ಟಪಡೋ ವ್ಯಕ್ತಿಗಳು ಬರುತ್ತಿದ್ದರು. ಸಾಹಿತಿಗಳು, ಸಂಗೀತಗಾರರು, ರಾಜಕಾರಣಿಗಳು, ಕ್ರೀಡಾಪಟುಗಳು ಬಂದು ನಾನು ಮಾಡಿದ ದೋಸೆ ತಿಂದು ಸಂತೋಷಪಡುತ್ತಿದ್ದರು. ಆಗೆಲ್ಲ ನನ್ನ ಬಗ್ಗೆ ಒಂಥರ ಖುಷಿಯಾಗುತ್ತಿತ್ತು. ಸಾರ್ಥಕತೆ ಮೂಡುತ್ತಿತ್ತು. ಇವತ್ತು ಹಾಗಿಲ್ಲ. ಆಗ ದಿನಕ್ಕೆ ನೂರಿನ್ನೂರು ದೋಸೆ ಮಾಡುತ್ತಿದ್ದೆ. ಈಗ ಎಂಟು ನೂರು ದೋಸೆ ಮಾಡುತ್ತೇನೆ. ಬರೀ ದೋಸೆ ಮಾಡುವುದಷ್ಟೇ ಜೀವನ ಎಂಬಂತಾಗಿದೆ.
ಪತ್ರಿಕೋದ್ಯಮದಲ್ಲೂ ಅದೇ ಆಗಿದೆ. ನಾವು ಸಿನಿಮಾ ಪತ್ರಿಕೋದ್ಯಮ ಆರಂಭಿಸಿದ ದಿನಗಳಲ್ಲಿ ಅಲ್ಲೊಂದು ಸಂಭ್ರಮ ಇರುತ್ತಿತ್ತು. ಸಿನಿಮಾ ನಟರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸುಮ್ಮನೆ’ ಹರಟುವಷ್ಟು ವ್ಯವಧಾನ ಇಟ್ಟುಕೊಂಡಿದ್ದರು. ವಿಷ್ಣುವರ್ಧನ್ ಜೊತೆ ಕುಳಿತರೆ, ರಾಜಕೀಯ, ಕ್ರಿಕೆಟ್, ಸಂಗೀತ, ಮತ್ಯಾವುದೋ ಇಟೆಲಿಯ ಸಿನಿಮಾದ ಬಗ್ಗೆ ಮಾತಾಗುತ್ತಿತ್ತು. ಪರಸ್ಪರರನ್ನು ಗೇಲಿ ಮಾಡಿಕೊಳ್ಳುತ್ತಾ ಅಲೆಲ್ಲ ನಗು ಹರಡುತ್ತಿತ್ತು. ಇವತ್ತು ಪತ್ರಕರ್ತರಿಗೂ ಅಷ್ಟು ಪುರುಸೊತ್ತಿಲ್ಲ. ಸಿನಿಮಾನಟರಂತೂ ಸೆಕೆಂಡುಗಳ ಲೆಕ್ಕದಲ್ಲಿ ಬದುಕುತ್ತಿದ್ದಾರೆ. ಪತ್ರಕರ್ತ ತಾನು ಕೇಳಿಸಿಕೊಂಡಿದ್ದನ್ನೋ ಶೂಟ್ ಮಾಡಿದ್ದನ್ನೋ ತಕ್ಷಣ ಜನರಿಗೆ ತಲುಪಿಸಬೇಕು ಎಂದು ಓಡುತ್ತಿರುತ್ತಾನೆ. ನಟನಿಗೋಸ್ಕರ ಮುಂದಿನ ಚಿತ್ರದ ಕತೆ ಹೇಳುವವರು ಕಾಯುತ್ತಿರುತ್ತಾರೆ.
ಇಂಥದ್ದರ ಮಧ್ಯೆ ಪ್ರಕಾಶ್ ರೈ ಬೇರೆಯೇ ಆಗಿ ನಿಲ್ಲುತ್ತಾರೆ. ಮೊನ್ನೆ ಊರಿಗೆ ಹೋಗುತ್ತಾ ಅವರ ನಾನೂ ನನ್ನ ಕನಸು’ ಶೂಟಿಂಗ್ ನಡೆಯುತ್ತಿದ್ದ ಯಜಮಾನ್ ಎಸ್ಟೇಟ್‌ಗೆ ಹೋದರೆ ಅಲ್ಲಿ ಪ್ರಕಾಶ್ ರೈ ಎಂದಿನ ಉಲ್ಲಾಸದಲ್ಲಿ ಕೂತಿದ್ದರು. ಎರಡು ಹಾಡು ನೋಡೋಣ ಎಂದರು. ಹಾಡು ಮುಗಿಯುತ್ತಿದ್ದಂತೆ ಇತ್ತೀಚೆಗೆ ಓದಿದ ಪುಸ್ತಕಗಳ ಬಗ್ಗೆ ಮಾತಾಡಿದರು. ಹಳೆಯ ಗೆಳೆಯರಾದ ಶೆಣೈ, ಮರಕಿಣಿ ಹೇಗಿದ್ದಾರೆ ಎಂದು ವಿಚಾರಿಸಿಕೊಂಡರು. ಕರ್ತವ್ಯದಲ್ಲಿ ಕಳೆದು
ಹೋಗುತ್ತಿದ್ದೀರಿ. ಸುಮ್ಮನೆ ಎಲ್ಲರೂ ಹೊರಟು ಬನ್ನಿ, ಖುಷಿಯಾಗಿ ಒಂದೆರಡು ದಿನ ಇದ್ದು ಹೋಗಿ ಎಂದರು. ಇವತ್ತು ಖುಷಿಯಾಗಿ ಒಂದೆರಡು ದಿನ ಸುಮ್ಮನೆ ಇದ್ದುಹೋಗಿ ಎನ್ನುವವರು ಸಿಕ್ಕಿದ್ದೇ ಒಂದು ಪವಾಡ ಎಂದು ನಾವೊಂದಷ್ಟು ಮಂದಿ ಮಾತಾಡಿಕೊಂಡೆವು.
ಉಲ್ಲಾಸ ತುಂಬುವ ಸಂಗತಿಗಳು ತುಂಬಾ ಕಡಿಮೆ. ಅವುಗಳನ್ನು ನಾವು ಸವಿಯದೇ ಹೋದರೆ, ಆ ರಸಬಿಂದುಗಳೂ ಬತ್ತಿಹೋಗುತ್ತವೆ. ಅನ್ನಿಸಿದ್ದೇನನ್ನೋ ಬರೆದಾಗ, ಅದನ್ನು ಆಪ್ತರ ಜೊತೆ ಹಂಚಿಕೊಳ್ಳುವುದು, ಥ್ರೀ ಈಡಿಯಟ್ಸ್ ಸಿನಿಮಾದ ದೃಶ್ಯವೊಂದನ್ನು ನೆನೆದು ಹಳೆಯ ದಿನಗಳಿಗೆ ಜಾರುವುದು, ನಾಲ್ಕಾರು ಮಂದಿ ತಿಂಗಳಿಗೊಮ್ಮೆ ಕಾವೇರಿ ಫಿಷಿಂಗ್ ಕ್ಯಾಂಪಿಗೆ ಹೋಗಿ ಗಾಳ ಹಾಕುತ್ತಾ ಕೂರುವುದು, ಪಿವಿಆರ್ ಚಿತ್ರಮಂದಿರದ ಮೆಟ್ಟಲಲ್ಲಿ ಕೂತು ಪಾಪ್‌ಕಾರ್ನ್ ತಿನ್ನುತ್ತಾ ಆ ಗದ್ದಲವನ್ನು ಸವಿಯುವುದು.. ಇವೆಲ್ಲ ಇವತ್ತಿಗೂ ಜಗತ್ತಿನಲ್ಲಿ ನಡೆಯುತ್ತಲೇ ಇದೆ. ಮೊನ್ನೆ ಮೊನ್ನೆ ಒಂದಷ್ಟು ಮಿತ್ರರು ಕೊಡಗಿನ ಪುಷ್ಪಗಿರಿಗೆ ಹೋಗಿ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ನಡೆದಾಡಿ, ಸೂರ್ಯಾಸ್ತ ನೋಡಿ ಬಂದರು. ನಾವೊಂದಷ್ಟು ಮಂದಿ ಡ್ರೈವರ್ ಮೇಲೆ ರೇಗುತ್ತಾ, ಇನ್ನೊಂದು ದಾರಿಯಲ್ಲಿ ಬಂದಿದ್ದರೆ ಅರ್ಧಗಂಟೆ ಮುಂಚೆ ತಲುಪಬಹುದು ಎಂದು ಗೊಣಗಿಕೊಳ್ಳುತ್ತಾ, ಶೂಟಿಂಗು ಮುಗಿದಿದ್ದೇ ತಡ ಮತ್ತೊಂದು ಊರಿಗೆ ಹೋಗುವ ತರಾತುರಿಯಲ್ಲಿ ಧಾವಂತ ಮಾಡಿಕೊಳ್ಳುತ್ತಿದ್ದೆವು.
ಪಯಣಿಸಿದ ಹಾದಿ, ಹೊರಟ ಜಾಗ, ತಲುಪಬೇಕಾದ ಊರು, ಅಲ್ಲಿನ ತಂಗಾಳಿ, ಸೊರಗಿದ ನದಿ, ಮುಂಜಾವದ ಮಂಜು, ಹಳೆಯ ಗುಡಿ, ಕತ್ತಲ ಸುರಂಗ, ನೀರು ಜಿನುಗಿಸುವ ಗುಹೆ- ಎಲ್ಲವನ್ನೂ ಕರ್ತವ್ಯ ನಿಷ್ಠರಂತೆ ನೋಡುತ್ತಿದ್ದೆವು.
ವಾಪಸ್ಸು ಬರುವ ದಾರಿಯಲ್ಲಿ ಕೌದಿ ಹೊದ್ದುಕೊಂಡು ಬೆಂಕಿ ಕಾಯಿಸಿಕೊಳ್ಳುತ್ತಾ ಕುಳಿತಿದ್ದ ಅರುವತ್ತು ದಾಟಿದಂತಿದ್ದ ಮುದುಕನೊಬ್ಬನ ಕಣ್ಣುಗಳು, ಬೆಂಕಿಬೆಳಕಿಗೆ ಪ್ರಜ್ವಲಿಸುತ್ತಿದ್ದವು. ಆ ಕಾಡಿನ ಮಧ್ಯೆ ಕೂತುಕೊಂಡು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಕಲ್ಪನೆಯೇ ಇಲ್ಲದೇ ಕಾಲಾಂತರದಲ್ಲಿ ಲೀನನಾದ ಅವನಂತೆ ಬದುಕಬೇಕು ಎಂದು ಆಸೆಯಾಯಿತು.
ನಡುರಾತ್ರಿ ಸಾಗರದ ಹೊಟೆಲ್ಲಿಗೆ ಕಾಲಿಟ್ಟರೆ, ನಿದ್ದೆಗಣ್ಣಿನ ಹುಡುಗನೊಬ್ಬ ರಿಜಿಸ್ಟರ್ ಮುಂದಿಟ್ಟು ತುಂಬಿ’ ಅಂದ. ಅದರಲ್ಲಿ ಎಲ್ಲಿಂದ ಬರುತ್ತಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ಎಷ್ಟು ದಿನ ಇರುತ್ತೀರಿ ಎಂಬ ಪ್ರಶ್ನೆಗಳಿದ್ದವು. ಆ ಅಪರಾತ್ರಿಯಲ್ಲಿ ಅವು ನನಗೆ ಬದುಕಿನ ಬಹುಮುಖ್ಯ ಪ್ರಶ್ನೆಗಳಾಗಿ ಕಾಣಿಸಿದವು.

Tuesday, February 2, 2010

ಎಂದೋ ಕೇಳಿದ ಒಂದು ಹಾಡಿನ ನೆನಪಲ್ಲಿ...

ನಂಗೆ ಟಿ ಕೆ ರಾಮರಾವ್ ಇಷ್ಟ, ಎನ್ ಟಿ ರಾಮರಾವ್ ಸಿನಿಮಾ ಇಷ್ಟ, ಜೋಸೈಮನ್ ಇಷ್ಟ, ಜಿಂದೆ ನಂಜುಂಡಸ್ವಾಮಿ ಎಂದರೆ ಪ್ರಾಣ, ಮುಸ್ಸಂಜೆಯ ಕಥಾಪ್ರಸಂಗ ಮತ್ತೆ ಮತ್ತೆ ಓದಬೇಕೆನ್ನಿಸುತ್ತೆ, ಪರಸಂಗದ ಗೆಂಡೆತಿಮ್ಮನ ಬೀದಿ ಕಣ್ಮುಂದೆ ಸುಳಿದರೆ ಸಂತೋಷವಾಗುತ್ತದೆ. ಭುಜಂಗಯ್ಯನ ದಶಾವತಾರಗಳು ಎಂಬ ಟೈಟಲ್ಲೂ ಮೆಚ್ಚುಗೆ. ನಮ್ಮೂರಿನಲ್ಲಿದ್ದ ಪುಟ್ಟ ಹೊಟೆಲಿನಲ್ಲಿ ಸಿಗುತ್ತಿದ್ದ ಕೇಟಿ ಮತ್ತು ಮೊಸರವಲಕ್ಕಿ ಇಷ್ಟ.
ಹಾಗಂತ ಇವತ್ತಿಗೂ ನಾನು ಅಂದುಕೊಂಡಿದ್ದೇನೆ. ಅದು ನಿಜಕ್ಕೂ ನನಗಿಷ್ಟ ಎಂದು ನಾನು ಮೊನ್ನೆ ಮೊನ್ನೆಯವರೆಗೂ ನಂಬಿದ್ದೆ. ಅದೇ ಹುಮ್ಮಸ್ಸಿನಲ್ಲಿ ಎನ್ ಟಿ ರಾಮರಾವ್ ಸಿನಿಮಾ ನೋಡಲು ಯತ್ನಿಸಿದೆ. ಐದು ನಿಮಿಷ ನೋಡುವಷ್ಟರಲ್ಲಿ ಯಾಕೋ ಹಿಂಸೆಯಾಗತೊಡಗಿತು. ಮತ್ತೊಂದು ದಿನ ಟಿ ಕೆ ರಾಮರಾವ್ ಕಾದಂಬರಿ ಓದಲು ಕುಳಿತೆ. ಮೂರು ಪುಟ ಮುಗಿಸುವ ಹೊತ್ತಿಗೆ ಸಾಕಾಗಿಹೋಯಿತು.ಜಿಂದೆ ನಂಜುಂಡಸ್ವಾಮಿ ಕಾದಂಬರಿಯನ್ನು ಕೈಗೆತ್ತಿಕೊಳ್ಳಲಾಗಲೇ ಇಲ್ಲ. ಭುಜಂಗಯ್ಯನ ದಶಾವತಾರಗಳು ಯಾಕೋ ಹಿಂದಿನ ಹುಮ್ಮಸ್ಸು ತುಂಬಲಿಲ್ಲ. ನಮ್ಮೂರಿನ ಪುಟ್ಟ ಶೆಣೈ ಹೋಟೆಲಿನ ಅವಲಕ್ಕಿ ಮೊಸರು ಸ್ವಾದ ಕಳಕೊಂಡಿದೆ ಅನ್ನಿಸತೊಡಗಿತು.
ಆಮೇಲೆ ಯೋಚಿಸಿದೆ; ನಿಜಕ್ಕೂ ಕೆಟ್ಟಿರುವುದು ನನ್ನ ಬಾಯಿರುಚಿಯೋ, ಶೆಣೈ ಹೊಟೆಲ್ಲಿನ ಮೊಸರವಲಕ್ಕಿಯ ರುಚಿಯೋ?
ಹಿಂದೆಂದೋ ಸುಳಿದಾಡಿದ, ಜೀವಿಸಿದ ಜಾಗಗಳಿಗೆ ಮತ್ತೆ ಮತ್ತೆ ಹೋಗಬೇಕು ಅನ್ನಿಸುವುದು ನಮ್ಮ ಮನಸ್ಸಿನ ಅದಮ್ಯ ಆಶೆಗಳಲ್ಲಿ ಒಂದು. ಸಾಹಿತ್ಯದಲ್ಲಿ ಅದನ್ನು ಪ್ರತ್ಯಭಿಜ್ಞಾನ ಅನ್ನುತ್ತಾರಾ? ನನಗೆ ಗೊತ್ತಿಲ್ಲ, ಪ್ರತ್ಯಬಿಜ್ಞಾನ ಅಂದರೆ ಗೊತ್ತಿದ್ದದ್ದನ್ನು ಮತ್ತೆ ತಿಳಿದುಕೊಳ್ಳುವುದು. ಹಾಗೆ ನಮಗೆ ಗೊತ್ತಿರುವುದು, ನಮಗೆ ಪ್ರಿಯವಾಗಿರುವುದು ಕ್ರಮೇಣ ನಮ್ಮ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನವೊಂದನ್ನು ಪಡೆದುಕೊಳ್ಳುತ್ತದೆ. ಆ ನಲ್ದಾಣದಲ್ಲಿ ಮತ್ತೆ ಮತ್ತೆ ಹೋಗಬೇಕು ಎಂದು ಮನಸ್ಸು ಆಶಿಸುತ್ತದೆ. ಹಾಗೆ ಹೋದಾಗ ಅಲ್ಲಿ ನಮಗೆ ಸಿಗುವ ಸ್ವಾಗತ, ಸಂತೋಷ ಮತ್ತು ಖುಷಿಯ ಹೇಗಿರುತ್ತದೆ. ನಾವು ನಿಜಕ್ಕೂ ಅದನ್ನೆಲ್ಲ ಸವಿಯುತ್ತೇವಾ?
ಬಹುಶಃ ಇಲ್ಲ. ನಮ್ಮ ಅನುಭವದ ಒಂದು ಭಾಗವಾಗಿರುವ ಸಂಗತಿಗಳೆಲ್ಲ ಕೇವಲ ಮನಸ್ಸಿನಲ್ಲಿದ್ದಾಗಷ್ಟೇ ಸಂತೋಷಕೊಡುತ್ತವೆ. ನಾವು ಬದಲಾಗಿರುತ್ತೇವೆ. ನಮ್ಮ ವಯಸ್ಸು ಮತ್ತು ಅನುಭವ ನಮ್ಮನ್ನು ಮಾಗಿಸಿ ಮತ್ತೆಲ್ಲೋ ತಂದು ನಿಲ್ಲಿಸಿರುತ್ತವೆ. ವರ್ತಮಾನದ ಗಳಿಗೆಗಳನ್ನು ನಮ್ಮ ನೋಟವನ್ನು ಬದಲಾಯಿಸಿರುತ್ತವೆ. ಈ ಕ್ಷಣವನ್ನು ನಿರಾಕರಿಸಲು ಹೊರಡುವ ನಾವು, ಹಿಂದೆ ಎಂದೋ ಸವಿದದ್ದು ಸೊಗಸಾಗಿತ್ತು ಎಂದುಕೊಳ್ಳುತ್ತಿರುತ್ತೇವೆ. ಅದನ್ನೆ ಮತ್ತೊಮ್ಮೆ ಸವಿಯುವುದಕ್ಕೆ ಮನಸ್ಸು ಹಾತೊರೆಯುತ್ತದೆ. ಆದರೆ ಆ ಹಾತೊರೆಯುವಿಕೆಗೆ ಸ್ಥಾನ ಇರುವುದು ಕೇವಲ ಮನಸ್ಸಿನಲ್ಲಿ ಮಾತ್ರ.
ಬದಲಾಗಿರುವುದು ಶೆಣೈ ಹೊಟೆಲ್ಲಿನ ಅವಲಕ್ಕಿಯ ರುಚಿಯಲ್ಲ. ನಮ್ಮ ನಾಲಗೆ ರುಚಿ. ರುಚಿಕೆಡಿಸಿಕೊಂಡು ಕೂತ ನಮಗೆ ಎಂದೋ ತಿಂದ ಅವಲಕ್ಕಿಯೇ ಸೊಗಸಾಗಿರಬಹುದು ಅನ್ನಿಸಿರುತ್ತದೆ. ಅದು ಕೂಡ ಕೇವಲ ಮನೋವ್ಯಾಪಾರ. ತುಂಬಾ ಕಾಡಿದ ಅವಳ ಕಣ್ಣೋಟ, ಮನಸ್ಸಲ್ಲಿ ನಾವು ಗುನುಗುವ ಹಳೆಯ ಹಾಡು, ನಾವು ಸುತ್ತಾಡಿದ ತಾಣ, ನಮ್ಮ ಹಳೆಯ ಸ್ಕೂಲುಗಳೆಲ್ಲ ಎಲ್ಲೀ ತನಕ ನಮ್ಮ ನೆನಪುಗಳಲ್ಲಿ ಮಾತ್ರ ಎದುರಾಗುತ್ತದೆಯೋ ಅಲ್ಲೀ ತನಕ ಸೊಗಸಾಗಿರುತ್ತದೆ. ಅದನ್ನು ನಾವು ಮತ್ತೆ ಕಂಡಾಗ ಅದು ಅಷ್ಟೊಂದು ಖುಷಿ ಕೊಡುವುದಿಲ್ಲ. ಅದು ಮನಸ್ಸಿಗಿರುವ ಶಕ್ತಿ, ಮಿತಿ ಮತ್ತು ನಮ್ಮ ಅತ್ಯಂತ ದೊಡ್ಡ ಯಾತನೆ.
ಅದನ್ನೇ ಮುಂದಿಟ್ಟುಕೊಂಡು ನಾನೇನನ್ನು ಮೆಚ್ಚುತ್ತೇನೆ ಎಂದು ನೋಡುತ್ತಾ ಕುಳಿತೆ. ಸದ್ಯಕ್ಕೆ ನಾನು ಮೆಚ್ಚುವ ಕತೆ
ಹೇಗಿರಬೇಕು, ನಾನು ಮೆಚ್ಚುವ ಹಾಡು ಯಾರದ್ದು, ಇವತ್ತಿಗೂ ಕೆ ಎಸ್ ನರಸಿಂಹಸ್ವಾಮಿಯ ಹಾಡನ್ನೇ ನಾನೇಕೆ ಮೆಚ್ಚುತ್ತಿದ್ದೇನೆ, ನನ್ನ ತರುಣ ಮಿತ್ರರಿಗೆ ಯಾಕೆ ಕೆ ಎಸ್‌ನರಸಿಂಹಸ್ವಾಮಿ ಇಷ್ಟವಾಗುವುದಿಲ್ಲ. ಇಷ್ಟವಾದರೂ ಯಾಕೆ ಕೆಎಸ್‌ನ ಅವರ ಸಹಜ ಆಯ್ಕೆಯಲ್ಲ. ರಾಜ್‌ಕುಮಾರ್ ನಟಿಸಿದ ’ಮಯೂರ’, ಶಂಕರ್ ಗುರು ಸಿನಿಮಾಗಳು ನನ್ನನ್ನು ಆವರಿಸಿದಷ್ಟು ಆಪ್ತವಾಗಿ ಅವರನ್ನೇಕೆ ಆವರಿಸಿಕೊಂಡಿಲ್ಲ ಎಂದೆಲ್ಲ ಯೋಚಿಸಿದೆ. ನಾನು ಅದ್ಬುತ ಎಂದು ವರ್ಣಿಸಿದ ಶಂಕರ್‌ಗುರು ಸಿನಿಮಾ ನೋಡುತ್ತಾ ನನ್ನ ಯುವ ಮಿತ್ರನೊಬ್ಬ ಆಕಳಿಸತೊಡಗಿದ.
ಆದರೆ, ಅವನಿಗೆ ಕುವೆಂಪು ಕಾದಂಬರಿ ಮಲೆಗಳಲ್ಲಿ ಮದುಮಗಳು’ ಮೆಚ್ಚುಗೆಯಾಯಿತು, ರಾಶೋಮನ್ ಸಿನಿಮಾ ಇಷ್ಟವಾಯಿತು. ಕ್ಲಾಸಿಕ್ ಮತ್ತು ಜನಪ್ರಿಯತೆಗೆ ಇರುವ ವ್ಯತ್ಯಾಸ ಇದೇ ಇರಬಹುದಾ ಎಂಬ ಗುಮಾನಿ ನನ್ನಲ್ಲಿ ಮೊಳೆಯಲು ಆರಂಭಿಸಿದ್ದೇ ಆಗ.
ಜನಪ್ರಿಯ ಸಂಗತಿಯೊಂದು ಆಯಾ ಕಾಲದಲ್ಲಿ, ಆಯಾ ದೇಶದಲ್ಲಿ ಎಲ್ಲರಿಗೂ ಮೆಚ್ಚುಗೆಯಾಗಿರುತ್ತದೆ. ಫ್ಯಾಷನ್ನಿನಂತೆ ಅದು ನಮ್ಮನ್ನು ಮುದಗೊಳಿಸಿರುತ್ತದೆ. ಆಗ ನಮ್ಮನ್ನು ಸಂತೋಷಗೊಳಿಸಿದ ಆ ಕೃತಿ ಕೊನೆಯವರೆಗೂ ನಮ್ಮ ಮನಸ್ಸಿನ ಅಂಗಳದಲ್ಲಿ ಹೂ ಬಿಟ್ಟ ಸುಂದರ ವೃಕ್ಷವಾಗಿಯೇ ಉಳಿದಿರುತ್ತದೆ. ಹತ್ತಾರು ವರ್ಷಗಳ ನಂತರವೂ ನಾವು ನಮ್ಮ ಮನಸ್ಸಿನಲ್ಲಿ ಹಿಂದಕ್ಕೆ ಹೋಗಿ ಆ ಮಾಧುರ್ಯವನ್ನು ಸವೆಯಬಲ್ಲವರಾಗಿರುತ್ತೇವೆ. ಆದರೆ, ನಮಗಿಂತ ಕಿರಿಯರಾದವರ ಪಾಲಿಗೆ ಅಂಥ ಮಾಧುರ್ಯವನ್ನು ನೀಡುವ ಸಂಗತಿ ಮತ್ತೇನೋ ಆಗಿರುತ್ತದೆ. ಪ್ರತಿಯೊಬ್ಬನೂ ತನ್ನ ಪರಿಸರ ಮತ್ತು ಸಂಭ್ರಮಕ್ಕೆ ಒಪ್ಪುವಂಥ ಒಂದು ಖುಷಿಯ ಸೆಲೆಯನ್ನು ಕಂಡುಕೊಂಡಿರುತ್ತಾನೆ.
ಇದು ನಮ್ಮ ವರ್ತಮಾನದ ಅಭಿರುಚಿಯನ್ನೂ ನಿರ್ಧಾರ ಮಾಡುತ್ತದೆ ಅಂದುಕೊಂಡಿದ್ದೇನೆ. ಹದಿನೆಂಟನೇ ವಯಸ್ಸಿಗೆ ಟಾಲ್‌ಸ್ಟಾಯ್ ಇಷ್ಟವಾಗುವುದಿಲ್ಲ, ಕಾನೂರು ಹೆಗ್ಗಡಿತಿ ಅಷ್ಟಾಗಿ ಪಥ್ಯವಾಗುವುದಿಲ್ಲ. ಕುಮಾರವ್ಯಾಸನನ್ನು ಓದಬೇಕು ಅನ್ನಿಸುವುದಿಲ್ಲ. ಆದರೆ, ಮತ್ತೊಂದು ಹಂತ ತಲುಪುತ್ತಿದ್ದಂತೆ ಎಲ್ಲವೂ ಬದಲಾಗಿರುತ್ತದೆ ಎಂದು ನಮಗೇ ಅನ್ನಿಸತೊಡಗುತ್ತದೆ.
ಸುಬ್ರಾಯ ಚೊಕ್ಕಾಡಿ ಬರೆದ ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂಥ ದಿನಗಳವು ಇನ್ನೆಂದೂ ಬಾರವು..ಎನ್ನುವ ಕವಿತೆಯನ್ನು ಓದಿದಾಗ ಅನ್ನಿಸುವುದು ಅದೇ ಆದರೆ, ಆ ಮಿಂಚಂಥಾ ದಿನಗಳ ಮಿಂಚು ನಮ್ಮ ತರುಣ ಮಿತ್ರರನ್ನೂ ಸ್ಪರ್ಶಿಸುತ್ತದೆಯಾ ಎನ್ನುವುದಷ್ಟೇ ಪ್ರಶ್ನೆ. ಅದು ಎಂದಿಗೂ ಅವರನ್ನು ಮುಟ್ಟಲಾರದು ಎಂಬ ಸತ್ಯದಲ್ಲೇ ಸಾತತ್ಯವಿದೆ, ಬೆಳವಣಿಗೆಯಿದೆ. ಹೊಸತನವಿದೆ ಮತ್ತು ಯೌವನವಿದೆ.
*******
ಈ ವಾರ ನಿಜಕ್ಕೂ ನಾನು ಬರೆಯಲು ಹೊರಟದ್ದು ಯೇಟ್ಸ್ ಕವಿತೆಗಳ ಕುರಿತು. ಯು ಆರ್ ಅನಂತಮೂರ್ತಿಯವರ ಉಜ್ವಲ ಅನುವಾದದಲ್ಲಿ ಅವು ಹೊಸ ಹೊಳಪು ಪಡಕೊಂಡಿವೆ. ಅದರ ಪೈಕಿ ವೃದ್ದಾಪ್ಯಕ್ಕೊಂದು ಪ್ರಾರ್ಥನೆ ಕವಿತೆ, ವೃದ್ದಾಪ್ಯದ ಕುರಿತು ಹೊಸ ಹೊಳಹೊಂದನ್ನು ನೀಡುವಂತಿದೆ. ನನ್ನನ್ನು ಪ್ರಬುದ್ದನಾದ ಚಿಂತನೆಗಳು ತುಂಬಿದ ಗಾಢವಾದ ವಿಚಾರಧಾರೆಗಳಿರುವ ಮುದುಕನನ್ನಾಗಿ ಮಾಡಬೇಡ. ಹುಂಬತನ ಮತ್ತು ವ್ಯಾಮೋಹ ಇನ್ನೂ ಹಾಗೇ ಉಳಿದಿರುವ ಮುದುಕನಾಗಿ ಉಳಿಸು ಎಂದು ಯೇಟ್ಸ್ ಕೇಳಿಕೊಳ್ಳುತ್ತಾನೆ.
ನನಗೆ ಅಂಥ ಮುದುಕರು ಇಷ್ಟ, ಅದೇ ಕಾರಣಕ್ಕೆ ಖುಷ್‌ವಂತ್ ಸಿಂಗ್ ಇಷ್ಟ. ಎಪ್ಪತ್ತು ದಾಟುತ್ತಿದ್ದರೂ ಉಲ್ಲಾಸದಿಂದ ಓಡಾಡುವ, ನಮ್ಮ ಓರಗೆಯವರೇ ಅನ್ನಿಸುವ, ಯಾವುದೋ ಜಗತ್ತಿನಲ್ಲಿದ್ದಾರೆ ಅನ್ನಿಸದ, ನಮ್ಮಂತೆಯೇ ಯೋಚಿಸುವ, ಅವರ ಕಾಲದ ಬಗ್ಗೆ ಮತಾಡಿ ಬೋರು ಹೊಡೆಸದ ತುಂಟ ವೃದ್ಧರ ಪಟ್ಟಿಯಲ್ಲಿ ಎ ಎಸ್ ಮೂರ್ತಿ, ಸುಬ್ರಾಯ ಚೊಕ್ಕಾಡಿ ಮುಂತಾದವರಿದ್ದಾರೆ. ಅನಂತಮೂರ್ತಿಯವರನ್ನು ನೋಡುತ್ತಿದ್ದರೆ, ಅವರಿಗೆ ಅಷ್ಟು ವಯಸ್ಸಾಗಿದೆ
ಎಂದು ಅನ್ನಿಸುವುದೇ ಇಲ್ಲ. ಕೆಲವರು ನಮ್ಮ ಕಣ್ಣಮುಂದೆ, ನಮ್ಮ ಕಲ್ಪನೆಯಲ್ಲಿ ಹರೆಯದವರಾಗಿಯೇ ಇರುತ್ತಾರೆ. ಬಿ ಆರ್ ಲಕ್ಷ್ಮಣರಾವ್ ಅವರಿಗೆ ಅರವತ್ತಮೂರು ವಯಸ್ಸು ಎಂದು ಯಾರಾದರೂ ಹೇಳಿದರೆ, ಅದನ್ನು ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸುತ್ತದೆ. ನಮಗಿನ್ನೂ ಅವರು ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರಲ್ಲೊಬ್ಬರಾಗಿಯೇ ಕಾಣಿಸುತ್ತಾರೆ. ಮಹಡಿಯಲ್ಲಿ ನಿಂತ ಸುಂದರಿಯ ಮಿಂಚುವ ಮೀನ ಖಂಡಗಳನ್ನು ನೋಡಿ ಚಕಿತವಾಗುವ ಕಣ್ಣುಗಳಷ್ಟೇ ನಮ್ಮ ಪ್ರಜ್ಞೆಯಲ್ಲಿ ದಾಖಲಾಗಿರುತ್ತದೆ.
ವಯಸ್ಸು ಮತ್ತು ಅನುಭವ ಹೀಗೆ ನಮ್ಮನ್ನು ಮಾಗಿಸುತ್ತಾ ಹೋದ ಹಾಗೇ, ನಮ್ಮ ಸ್ಮೃತಿಯಲ್ಲಿ ಯೌವನದ ಕಂಪು, ಹೊಳಪು, ಉಲ್ಲಾಸ, ತೀವ್ರತೆ ಮತ್ತು ಬಿರುಸನ್ನು ಹಾಗೇ ಉಳಿಸಿರುತ್ತದೆ. ಅದೇ ನಮ್ಮನ್ನು ಜೀವಂತವಾಗಿ ಇಡುವ ಶಕ್ತಿ ಎಂದು ನಾನು ನಂಬಿದ್ದೇನೆ.
ಇಲ್ಲದೇ ಹೋದರೆ, ನಾವು ಹುತ್ತಗಟ್ಟಿದ, ಹೊರದಾರಿಗಳಿಲ್ಲದ ಕೋಟೆಯಲ್ಲಿ ಬಂದಿಗಳಾಗಿ ಉಳಿದೇ ಬಿಡುತ್ತೇವೇನೋ ?
ಇದೂ ಒಂದು ಭ್ರಮೆಯೇ ಇರಬಹುದು. ಬದುಕನ್ನು ಪ್ರೀತಿಸುವ ರೀತಿ ಇರಬಹುದು. ಅಥವಾ ಬದುಕನ್ನು ನಾನು ತೀವ್ರವಾಗಿ ಪ್ರೀತಿಸುತ್ತಿದ್ದೇನೆ ಎಂದು ನಂಬಲು ನಾನು ಕಂಡುಕೊಂಡ ಒಂದು ಮಾರ್ಗವೂ ಇರಬಹುದು.