Saturday, December 7, 2013

ಅಜ್ಜಂಪುರದ ಅಪರಾತ್ರಿ


ಅಜ್ಜಂಪುರದ ಅಕ್ಕಪಕ್ಕದ ಊರುಗಳಾದ ಕಗ್ಗಿ, ಮುಗಿಲಹಳ್ಳಿ, ಶಿವಾನಿ, ರಾಮಗಿರಿ, ಸೊಕ್ಕೆ, ಬಳೆಮಾರನಹಳ್ಳಿ ಇವೆಲ್ಲ ಈ ಕತೆ ನಡೆಯುವ ಕಾಲಕ್ಕೆ ದೊಡ್ಡ ಊರುಗಳೇನೂ ಆಗಿರಲಿಲ್ಲ. ಒಂದೂರಿಂದ ಇನ್ನೊಂದೂರಿಗೆ ಸಂಪರ್ಕವೂ ಇರಲಿಲ್ಲ. ಕಗ್ಗಿಯವರು ಬಳೆಮಾರನಹಳ್ಳಿಗೋ ರಾಮಗಿರಿಗೋ ಹೋಗಿ ಬರುವ ಪರಿಪಾಠವೂ ಇರಲಿಲ್ಲ. ಹೋಗಬೇಕಾದ ಸಂದರ್ಭಗಳೂ ಕಡಿಮೆ ಇರುತ್ತಿದ್ದವು.
ಈ ಹಳ್ಳಿಗಳಿಗೆ ಸೇರಿದ ಮಂದಿ ಒಟ್ಟು ಸೇರುತ್ತಿದ್ದದ್ದು ಬೀರೂರು ದೇವರ ಜಾತ್ರೆಯಲ್ಲೋ ಭದ್ರಾವತಿಯ ಸಂತೆಯಲ್ಲೋ ಅಷ್ಟೇ. ಸಂತೆಯೋ ಜಾತ್ರೆಯೋ ನಡೆದಾಗ ಪ್ರತಿಯೊಂದು ಹಳ್ಳಿಯ ಮಂದಿಯೂ ಗಾಡಿಕಟ್ಟಿಕೊಂಡು ಬರುತ್ತಿದ್ದರು. ಒಂದೊಂದು ಹಳ್ಳಿಯಿಂದ ಹತ್ತೊ ಹನ್ನೆರಡೋ ಗಾಡಿಗಳು ಹೊರಡುತ್ತಿದ್ದವು. ಗಾಡಿಗೆ ಒಂದಾಣೆಯಂತೆ ಕೊಟ್ಟು ಸ್ವಂತ ಗಾಡಿಯಿಲ್ಲದವರು ಕೂಡ ಭದ್ರಾವತಿಗೆ ಪ್ರಯಾಣ ಮಾಡುತ್ತಿದ್ದರು. ಈ ಎಲ್ಲಾ ಊರುಗಳ ಮಂದಿಯಲ್ಲಿ ಅಜ್ಜಂಪುರಕ್ಕೆ ಬಂದು ಠಿಕಾಣಿ ಹೂಡಿ, ಅಲ್ಲಿಗೆ ಸಮೀಪದಲ್ಲಿರುವ ಬಗ್ಗವಳ್ಳಿಯ ಯೋಗಾನರಸಿಂಹ ದೇವಸ್ಥಾನದ ಅಂಗಳದಲ್ಲಿ ಸೇರುತ್ತಿದ್ದರು. ಅಲ್ಲಿಂದ ಎಲ್ಲರೂ ಒಟ್ಟಾಗಿ ಭದ್ರಾವತಿಗೆ ತೆರಳುತ್ತಿದ್ದರು.
ಬಗ್ಗವಳ್ಳಿಯ ಯೋಗಾನರಸಿಂಹ ದೇವಸ್ಥಾನವನ್ನು ಕಟ್ಟಿಸಿದ್ದು ಹೊಯ್ಸಳರ ರಾಜ. ಯೋಗಾನರಸಿಂಹ ದೇವಸ್ಥಾನ ಎಂದೇ ಹೆಸರಾಗಿದ್ದರೂ ಗರ್ಭಗುಡಿಯಲ್ಲಿ ಈಗಲೂ ಇರುವುದು ಚೆನ್ನಕೇಶವನ ಮೂರ್ತಿಯೇ.  ಆ ಕಾಲಕ್ಕೆ ಬಗ್ಗವಳ್ಳಿ ದೇವಸ್ಥಾನಕ್ಕಿನ್ನೂ ನಿತ್ಯಪೂಜೆಯ ಸೌಭಾಗ್ಯ ಇರಲಿಲ್ಲ. ಅಜ್ಜಂಪುರದ ಮಂದಿ ನಂಬಿಕೊಂಡಿದ್ದದ್ದು ಅಮೃತೇಶ್ವರ ದೇವರನ್ನೇ. ಜಾತ್ರೆ, ನಿತ್ಯಪೂಜೆಯೆಲ್ಲ ಅಮೃತೇಶ್ವರ ದೇವಸ್ಥಾನದಲ್ಲೇ ನಡೆಯುತ್ತಿತ್ತು.
ಅಜ್ಜಂಪುರದಲ್ಲೊಂದು ಹಳೇ ರೇಲ್ವೇ ಸ್ಟೇಷನ್ನಿತ್ತು. ಆದರೆ ಅದು ಬಳಕೆಯಲ್ಲಿರಲಿಲ್ಲ. ಯಾವ ರೇಲೂ ನಿಲ್ಲದ ಆ ಸ್ಚೇಷನ್ನಿನಲ್ಲಿ ಬ್ರಿಟಿಷರ ಕಾಲದಲ್ಲೊಬ್ಬ ಸ್ಟೇಷನ್ ಮಾಸ್ಟರರನ್ನು ನೇಮಕ ಮಾಡಿದ್ದರು. ನಂತರದ ದಿನಗಳಲ್ಲೂ ಆ ಸಂಪ್ರದಾಯ ಮುಂದುವರಿದಿತ್ತು. ಹೇಳುವವರು ಕೇಳುವವರಿಲ್ಲದ ಅಜ್ಜಂಪುರ ಸ್ಟೇಷನ್ನಿನ ಸ್ಟೇಷನ್ ಮಾಸ್ಟರ್ ರಂಗಣ್ಣ, ತೀರ್ಥಹಳ್ಳಿಯಿಂದ ಬಂದವನಾಗಿದ್ದ. ಅವನಿಗೆ ಸ್ಟೇಷನ್ನಿನಲ್ಲಿದ್ದು ಮಾಡುವುದೇನೂ ಇರಲಿಲ್ಲ. ಹೀಗಾಗಿ ಅವನು ತಿಂಗಳ ಇಪ್ಪತ್ತೈದು ದಿನ ಬೀರೂರಿನಲ್ಲೋ ತೀರ್ಥಹಳ್ಳಿಯಲ್ಲೋ ಕಳೆಯುತ್ತಿದ್ದ.
ಇಂಥದ್ದರಲ್ಲಿ ಒಂದು ವಿಚಿತ್ರ ಘಟನೆ ನಡೆದು ಅವನು ಅಜ್ಜಂಪುರದಲ್ಲೇ ನೆಲಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಯೆರೆಹಳ್ಳಿಯಿಂದ ಗಾಡಿ ಹೊಡೆದುಕೊಂಡು ತರೀಕೆರೆಗೆ ಹೊರಟಿದ್ದ ರಾಜಪ್ಪ ನಾಯಕ ಎಂಬ ಜಮೀನ್ದಾರನ ಕುಟುಂಬ ಬಗ್ಗವಳ್ಳಿಯ ದೇವಸ್ಥಾನದಲ್ಲಿ ಠಿಕಾಣಿ ಹೂಡಿತ್ತು.ರಾಜಪ್ಪ ನಾಯಕನ ಹೆಂಡತಿ ತುಂಬು ಗರ್ಭಿಣಿಯಾಗಿದ್ದಳು. ಅವಳನ್ನು ತರೀಕೆರೆಯಲ್ಲಿರುವ ತವರು ಮನೆಗೆ ಕರೆದೊಯ್ಯಲು ರಾಜಪ್ಪ ಗಾಡಿಯಲ್ಲಿ ಕರೆತಂದಿದ್ದ. ಏಳನೇ ತಿಂಗಳಿಗೆ ಅವಳನ್ನು ತವರು ಮನೆಗೆ ಕರೆದೊಯ್ಯಬೇಕು ಅಂತ ರಾಜಪ್ಪ ನಿರ್ಧರಿಸಿದ್ದರೂ, ಆ ವರುಷ ವಿಪರೀತ ಮಳೆಯಾಗಿತ್ತು. ಮಳೆ ನಿಲ್ಲದೇ ಯೆರೆಹಳ್ಳಿಯಿಂದ ಹೊರಗೆ ಹೋಗುವುದು ಸಾಧ್ಯವೇ ಇರಲಿಲ್ಲ. ಅಲ್ಲದೇ ಲಕ್ಕವಳ್ಳಿಯ ಆಸುಪಾಸಿನಲ್ಲಿ ನರಭಕ್ಷಕ ಹುಲಿಯೊಂದು ಕಾಣಿಸಿಕೊಂಡು ಅನೇಕರನ್ನು ಬಲಿ ತೆಗೆದುಕೊಂಡಿದ್ದರಿಂದ, ಆ ಹುಲಿಯ ಉಪಟಳ ಕಡಿಮೆ ಆಗುವ ತನಕ ಯಾರೂ ಮನೆ ಬಿಟ್ಟು ಹೊರಗೇ ಬರುತ್ತಿರಲಿಲ್ಲ. ದೂರ ಪ್ರಯಾಣ ಮಾಡುವ ಮಾತಂತೂ ಇರಲೇ ಇಲ್ಲ.
ಹೀಗಾಗಿ ಆಕೆಗೆ ಎಂಟು ತಿಂಗಳು ತುಂಬಿದ ನಂತರವೇ ರಾಜಪ್ಪ ಅವಳನ್ನು ತವರು ಮನೆಗೆ ಕರೆದೊಯ್ಯಲು ನಿರ್ಧರಿಸಿ, ಆ ರಾತ್ರಿ ಬಗ್ಗವಳ್ಳಿ ದೇವಸ್ಥಾನದಲ್ಲಿ ಉಳಕೊಂಡಿದ್ದ. ಬೆಳಗ್ಗೆ ಬೇಗನೇ ಅಲ್ಲಿಂದ ತರೀಕೆರೆಗೆ ಹೊರಡುವುದೆಂದು ತೀರ್ಮಾನವಾಗಿತ್ತು.  ಲಾಟೀನು ದೀಪ ಹಚ್ಚಿಟ್ಟು, ಎತ್ತುಗಳನ್ನು  ದೇವಾಲಯದ ಹೊರಗಿರುವ ಕಲ್ಲುಕಂಬಗಳಿಗೆ ಕಟ್ಟಿ ರಾಜಪ್ಪನೂ ಅವನ ಹೆಂಡತಿಯೂ ದೇವಸ್ಥಾನದ ಒಳಗೆ ವಿಶ್ರಾಂತಿ ಪಡಕೊಳ್ಳುತ್ತಿದ್ದರು.
ನಡುರಾತ್ರಿಯ ಹೊತ್ತಿಗೆ ಹೊರಗಿನಿಂದ ಹುಲಿ ಗರ್ಜಿಸುವ ಸದ್ದು ಭೀಕರವಾಗಿ ಕೇಳಿಸಿ ರಾಜಪ್ಪನಿಗೆ ಎಚ್ಚರವಾಯಿತು. ರಾಜಪ್ಪ ಗಾಬರಿ ಬಿದ್ದು ಎದ್ದು ಕೂತು ಏನಾಗುತ್ತಿದೆ ಅಂತ ಕೇಳಿಸಿಕೊಂಡ. ದೇವಸ್ಥಾನದ ಕಲ್ಲು ಕಿಂಡಿಯಿಂದ ಹೊರಗೆ ನೋಡಿದರೆ ಹೆಬ್ಬುಲಿಯೊಂದು ರಾಜಪ್ಪನ ಗಾಡಿಯೆತ್ತಿನ ಮೇಲೆ ನೆಗೆದು ಅದನ್ನು ಕೊಲ್ಲಲು ಹವಣಿಸುತ್ತಿತ್ತು. ಎತ್ತು ಕೂಡ ಬಲಶಾಲಿ ಆಗಿದ್ದರಿಂದ ಹುಲಿಯ ಏಟಿನಿಂದ ಪಾರಾಗುತ್ತಾ, ಹುಲಿಯನ್ನು ತಿವಿಯಲು ನೋಡುತ್ತಿತ್ತು. ಎತ್ತನ್ನು ರಾಜಪ್ಪ ಕಟ್ಟಿ ಹಾಕಿದ್ದರಿಂದ ಅದಕ್ಕೆ ತಪ್ಪಿಸಿಕೊಂಡು ಓಡಿ ಹೋಗುವುದಕ್ಕೂ ಅವಕಾಶ ಇರಲಿಲ್ಲ.
ರಾಜಪ್ಪ ನೋಡುತ್ತಿದ್ದಂತೆ ಹುಲಿ ಬಾಗಿ ಕುಳಿತು, ಎತ್ತಿನ ಮೇಲೆ ಜಿಗಿಯಿತು. ಎತ್ತು ಪಕ್ಕಕ್ಕೆ ಸರಿದು ತಪ್ಪಿಸಿಕೊಂಡಿತು. ಹುಲಿ ಗುರಿತಪ್ಪಿ ಎತ್ತನ್ನು ಕಟ್ಟಿದ ಕಲ್ಲು ಕಂಬವನ್ನು ಅಪ್ಪಳಿಸಿತು. ಅದರ ಪಂಜಾದ ಏಟಿಗೋ ಹುಲಿ ಬಿದ್ದ ಭಾರಕ್ಕೋ  ಆ ಹಳೆಯ ಕಂಬ ಪಕ್ಕಕ್ಕೆ ವಾಲುತ್ತಾ ಬಿದ್ದೇ ಬಿಟ್ಟಿತು. ಎತ್ತು ಆ ಆ ಕಂಬವನ್ನು ಎಳಕೊಂಡೇ ಅಲ್ಲಿಂದ ಓಟ ಕಿತ್ತಿತು. ಆ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹುಲಿಯ ಮುಸುಡಿಗೂ ಏಟಾದಂತಿತ್ತು. ಅದು ಎತ್ತನ್ನು ಹಿಂಬಾಲಿಸುವ ಗೋಜಿಗೆ ಹೋಗದೆ ಮೂತಿಯನ್ನು ಮುಂಗೈಯಿಂದ ಒರೆಸಿಕೊಳ್ಳುತ್ತಾ ಮತ್ತೊಂದು ದಿಕ್ಕಿನಲ್ಲಿ ಹೊರಟು ಹೋಯಿತು. ಇದನ್ನು ನೋಡುತ್ತಿದ್ದ ರಾಜಪ್ಪ ಭಯದಿಂದ ನಡುಗುತ್ತಾ ನಿಂತಿದ್ದರೆ, ಅವನ ಪಕ್ಕದಲ್ಲಿ ಯಾರೋ ಕುಸಿದು ಬಿದ್ದಂತಾಯಿತು. ರಾಜಪ್ಪನಿಗೆ ಅರಿವೇ ಆಗದಂತೆ ಅವನ ಪಕ್ಕದಲ್ಲಿ ಬಂದು ನಿಂತು ಈ ಕಾಳಗ ನೋಡುತ್ತಿದ್ದ ಅವನ ಹೆಂಡತಿ ಭಯದಿಂದ ಕಂಪಿಸಿ ಮೂರ್ಛೆ ತಪ್ಪಿ ಬಿದ್ದಿದ್ದಳು. ರಾಜಪ್ಪ ಅವಳಿಗೆ ನೀರು ತಂದು ಆರೈಕೆ ಮಾಡತೊಡಗಿದ. ಆ ಭಯಕ್ಕೆ ಅವಳಿಗೆ ಅಲ್ಲೇ ಹೆರಿಗೆಯೂ ಆಯಿತು.

ಅದಾಗಿ ಸ್ವಲ್ಪ ಹೊತ್ತಿಗೆಲ್ಲ ಭೀಕರವಾದ ಸದ್ದೊಂದು ಇಡೀ ಊರನ್ನೇ ಬೆಚ್ಚಿಬೀಳಿಸುವಂತೆ ಕೇಳಿಸಿತು. ಆ ಸದ್ದಿನ ಬೆನ್ನಿಗೇ ಒಂದು ಚೀತ್ಕಾರವೂ ಹೊರಟಿತು. ಆಗಷ್ಟೇ ಬೆಳಕು ಹರಿಯಲು ಶುರುವಾಗಿತ್ತು.  ಆ ಸದ್ದು ಮತ್ತು ಚೀತ್ಕಾರ ಎಷ್ಟು ಭೀಕರವಾಗಿತ್ತೆಂದರೆ ಅದನ್ನು ಕೇಳಿಸಿಕೊಂಡ ಆಸುಪಾಸಿನ ಹಳ್ಳಿಯ ಮಂದಿ ಕತ್ತಿ, ಕುಡುಗೋಲು, ಕೊಡಲಿಯ ಸಮೇತ ಓಡಿ ಬಂದರು. ನಾಲ್ಕೈದು ಧೈರ್ಯಸ್ಥರು ಆ ಸದ್ದು ಎಲ್ಲಿಂದ ಬಂದಿರಬಹುದು ಎಂದು ಹುಡುಕುತ್ತಾ ಹೋದರೆ, ಅನಾಹುತವೊಂದು ಸಂಭವಿಸಿತ್ತು.
ಅಜ್ಜಂಪುರ ರೇಲ್ವೇ ಸ್ಟೇಷನ್ನನ್ನು ಹಾದು ಹೋಗುತ್ತಿದ್ದ ಗೂಡ್ಸು ರೇಲು ಹಳಿ ತಪ್ಪಿ ಬಿದ್ದು, ಪಕ್ಕದಲ್ಲಿರುವ ಪ್ರಪಾತಕ್ಕೆ ನುಗ್ಗಿತ್ತು. ಹಳಿಯ ಮೇಲೆ ಗುರುತು ಸಿಗದಷ್ಟು ನುಜ್ಜುಗುಜ್ಜಾದ ಎತ್ತು ಪ್ರಾಣ ಕಳಕೊಂಡು ಬಿದ್ದಿತ್ತು. ರೇಲು ಗುದ್ದಿದ ರಭಸಕ್ಕೆ ಅದರ ಕತ್ತು ಕತ್ತರಿಸಿ ಹೋಗಿತ್ತು.  ಅದರ ಕೊರಳಿಗೆ ಕಟ್ಟಿದ ಹಗ್ಗ, ಅದರ ತುದಿಯಲ್ಲಿರುವ ಕಂಬ ನೋಡಿದವರಿಗೆ ಎತ್ತು ರೇಲ್ವೇ ಹಳಿ ದಾಟುವುದಕ್ಕೆ ಸಾಧ್ಯವಾಗದಂತೆ ಮಾಡಿದ್ದು ಆ ಕಲ್ಲಿನ ಕಂಬವೇ ಅನ್ನುವುದು ಗೊತ್ತಾಗುವಂತಿತ್ತು. ಹಳಿದಾಟಿ ಓಡುವ ಹೊತ್ತಿಗೆ ಆ ಕಂಬ ಹಳಿಯ ನಡುವಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿತ್ತು. ಅದರಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿರುವ ಹೊತ್ತಿಗೆ ರೇಲು ಬಂದು ಡಿಕ್ಕಿ ಹೊಡೆದು,ಹಳಿಯ ಮೇಲಿರುವ ಕಲ್ಲಿನ ಕಂಬಕ್ಕೆ ಗುದ್ದಿದ  ರಭಸಕ್ಕೆ ಪ್ರಪಾತಕ್ಕೆ ನುಗ್ಗಿತ್ತು.
ಈ ಘಟನೆ ನಡೆಯುವ ಹೊತ್ತಿಗೆ ಸ್ಟೇಷನ್ ಮಾಸ್ಟರ್ ರಂಗಣ್ಣ ಬೀರೂರಿನಲ್ಲಿದ್ದ. ಅವನು ಸ್ಥಳದಲ್ಲಿರಲಿಲ್ಲ ಎಂಬ ಕಾರಣಕ್ಕೆ ಅವನ ಮೇಲೆ ವಿಚಾರಣೆ ನಡೆದು, ಅವನು ಕಡ್ಡಾಯವಾಗಿ ಸ್ಚೇಷನ್ನಿನಲ್ಲೇ ಇರಬೇಕು ಎಂದು ಇಲಾಖೆ ಆದೇಶ ಹೊರಡಿಸಿತು.
-೨-
ಈ ಪ್ರಕರಣ ನಾನೀಗ ಹೇಳಹೊರಟಿರುವ ಸಂಗತಿಗೆ ಕೇವಲ ಮುನ್ನುಡಿ ಅಷ್ಟೇ.  ಇದಾಗಿ ನಾಲ್ಕೈದು ತಿಂಗಳ ನಂತರ, ವಿಚಾರಣೆ ಮುಗಿದು, ಶಿಕ್ಷೆಗೆ ಗುರಿಯಾಗಿ, ಸ್ಚೇಷನ್ನಿಗೆ ಬಂದ ರಂಗಣ್ಣನಿಗೆ ಇದೆಲ್ಲ ಯಾರಾದರೂ ಬೇಕು ಅನ್ನಿಸತೊಡಗಿತ್ತು. ಅವನಿಗಿನ್ನೂ ಮದುವೆ ಆಗಿರಲಿಲ್ಲ. ಮದುವೆ ಆಗುತ್ತೇನೆಂಬ ನಂಬಿಕೆಯೂ ಇರಲಿಲ್ಲ. ಬಾಲ್ಯದಲ್ಲೇ ಅವನ ಅಮ್ಮ ತೀರಿಕೊಂಡಿದ್ದರು. ಅವನ ಅಪ್ಪ ದಾವಣಗೆರೆಯ ಕಾಟನ್ ಮಿಲ್ಲಿನಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ. ಬಂದ ಸಂಬಳವನ್ನು ಕುಡಿದು ಖಾಲಿ ಮಾಡುತ್ತಿದ್ದ ಅವನು ಮನೆಗೂ ಬರುತ್ತಿರಲಿಲ್ಲ. ತೀರ್ಥಹಳ್ಳಿಯಲ್ಲಿ ಯಾವ ಮಳೆಗಾಲದಲ್ಲಿ ಬೇಕಿದ್ದರೂ ಮುರಿದು ಬೀಳಬಹುದಾದ ಮನೆಯೊಂದು ಬಿಟ್ಟರೆ ರಂಗಣ್ಣನಿಗೆ ಮತ್ಯಾವ ಆಸ್ತಿಯೂ ಇರಲಿಲ್ಲ.
ತಾನು ಯಾಕಾಗಿ, ಯಾರಿಗಾಗಿ ಈ ಕೊಂಪೆಯಲ್ಲಿದ್ದು ಒದ್ದಾಡಬೇಕು ಅಂತ ಬೇಜಾರಿನಿಂದಲೇ ಅಜ್ಜಂಪುರಕ್ಕೆ ಬರುವ ಹೊತ್ತಿಗೆ ರಂಗಣ್ಣನೂ ವಿಪರೀತ ಕುಡಿಯಲು ಶುರು ಮಾಡಿದ್ದ. ಅದಕ್ಕೂ ಮೊದಲು ವಾರಕ್ಕೊಮ್ಮೆ ಕುಡಿಯುತ್ತಿದ್ದವನು, ರೇಲ್ವೇ ಇಲಾಖೆಯ ಅವಕೃಪೆಗೆ ಗುರಿಯಾದಂದಿನಿಂದ ದಿನಾ ಕುಡಿಯಲು ಅಭ್ಯಾಸ ಮಾಡಿದ್ದ. ಮತ್ತೆ ಡ್ಯೂಟಿಗೆ ಸೇರಿಕೊಂಡ ಮೊದಲನೇ ದಿನ ರಾತ್ರಿಯೂ ಸಿಕ್ಕಾಪಟ್ಟೆ ಕುಡಿದು, ಇಷ್ಟಗಲ ಕಣ್ಣು ಬಿಟ್ಟುಕೊಂಡು ಸ್ಟೇಷನ್ನಿನ ಹೊರಗಿರುವ ಕಲ್ಲು ಬೆಂಚಿನ ಮೇಲೆ ಕೂತಿದ್ದ.

ನಡುರಾತ್ರಿ ದಾಟುತ್ತಿದ್ದಂತೆ ಗೂಡ್ಸು ಟ್ರೇನು ಬರುತ್ತಿತ್ತು. ಅದಕ್ಕೆ ಹಸಿರು ಬಾವುಟ ಬೀಸಿ ಲೈನು ಕ್ಲಿಯರ್ ಇದೆ ಅಂತ ತೋರಿಸುವ ಹೊಸ ಕೆಲಸವನ್ನೂ ಇಲಾಖೆ ಅವನಿಗೆ ಒಪ್ಪಿಸಿತ್ತು. ಎತ್ತು ಡಿಕ್ಕಿ ಹೊಡೆದು ಅಪಘಾತವಾಗಿ ಲಕ್ಷಾಂತರ ರುಪಾಯಿ ಮೌಲ್ಯದ ಕಾಳು ಮೆಣಸು, ಕಾಫಿ ಬೀಜ ಇವೆಲ್ಲ ನಷ್ಟವಾಗಿದ್ದರಿಂದ ಪ್ರತಿ ಸ್ಚೇಷನ್ನು ಮಾಸ್ತರರಿಗೂ ಲೈನ್ ಕ್ಲಿಯರ್ ಮಾಡುವ ಕೆಲಸವನ್ನು ಕಡ್ಡಾಯ ಮಾಡಿದ್ದರು. ಹೀಗಾಗಿ ರಂಗಣ್ಣ ರಾತ್ರಿ ಪೂರ ಎಚ್ಚರವಿರಬೇಕಾಗಿತ್ತು.
ಆವತ್ತು ರಾತ್ರಿ ನಡುರಾತ್ರಿಯ ತನಕ ಕುಡಿದು, ಟ್ರೇನಿಗೆ ಕಾಯುತ್ತಾ ಕುಂತವನಿಗೆ ದೂರದಲ್ಲಿ ಟ್ರೇನು ಬರುತ್ತಿರುವುದು ಕಂಡಿತು.  ಕಷ್ಟ ಪಟ್ಟು ಎದ್ದು ನಿಂತು ಪಕ್ಕದಲ್ಲೇ ಇಟ್ಟುಕೊಂಡಿದ್ದ ಹಸಿರು ಬಾವುಟವನ್ನು ಕೈಗೆತ್ತಿಕೊಂಡು ಇನ್ನೇನು ಬೀಸಬೇಕು ಅನ್ನುವಷ್ಟರಲ್ಲಿ ರಂಗಣ್ಣ ಬೆಚ್ಚಿಬೀಳುವಂತೆ, ರೇಲ್ವೇ ಸ್ಟೇಷನ್ನಿನ ಹೊರಭಾಗದಿಂದ ಎತ್ತೊಂದು ಓಡಿ ಬಂದಿತು. ರಂಗಣ್ಣ ಹಸಿರು ಬಾವುಟ ಎತ್ತುವ ಹೊತ್ತಿಗೆ ಸರಿಯಾಗಿ ಅದು ಭೀಕರವಾಗಿ ಆರ್ತನಾದ ಮಾಡುತ್ತಾ, ರೇಲ್ವೇ ಹಳಿಯತ್ತ ನುಗ್ಗಿತು. ರಂಗಣ್ಣ ದಿಗ್ಭ್ರಾಂತನಾಗಿ ನಿಂತು ನೋಡುತ್ತಿದ್ದಂತೆ, ಆ ಎತ್ತಿನ ಕೊರಳಿಗೆ ಕಟ್ಟಿದ ಹಗ್ಗವೂ ಆ ಹಗ್ಗದ ತುದಿಗೆ ಆಗಷ್ಟೇ ನೆಲದಿಂದ ಕಿತ್ತಂತೆ ಕಾಣುವ ಕಲ್ಲು ಕಂಬವೂ ಕಾಣಿಸಿತು. ಎತ್ತಿದ ಹಸಿರು ಬಾವುಟವನ್ನು ಕೆಳಗಿಳಿಸಲೂ ಆಗದೇ ರಂಗಣ್ಣ ಹಾಗೇ ನಿಂತಿದ್ದ.
ಅದೇ ಹೊತ್ತಿಗೆ ಗೂಡ್ಸು ರೇಲು ಭೀಕರವಾಗಿ ಸಿಳ್ಳೆ ಹಾಕುತ್ತಾ, ಭಯಂಕರ ಸದ್ದು ಮಾಡುತ್ತಾ ಸ್ಟೇಷನ್ನು ದಾಟಿತು. ಅದೇ ಹೊತ್ತಿಗೆ ರೇಲು ಹಳಿಯನ್ನು ಎತ್ತು ದಾಟುತ್ತಿತ್ತು. ಎತ್ತಿಗೂ ರೇಲಿಗೂ ಮೂರಡಿಯಷ್ಟೇ ಅಂತರ ಉಳಿದಿದೆ ಅನ್ನುವುದು ಕಂಠಪೂರ್ತಿ ಕುಡಿದಿದ್ದ ರಂಗಣ್ಣನಿಗೆ ಮನವರಿಕೆಯಾಗುತ್ತಿದ್ದಂತೆ ರಂಗಣ್ಣ ಊರೇ ಬೆಚ್ಚಿಬೀಳುವಂತೆ ಆರ್ತನಾದ ಮಾಡಿ ನಿಂತಲ್ಲೇ ಕುಸಿದು ಬಿದ್ದ.
ರಂಗಣ್ಣ ಏಳುವ ಹೊತ್ತಿಗೆ ರೈಲು ಹೊರಟು ಹೋಗಿತ್ತು. ಅವನು ಊಹಿಸಿದಂತೆ ಅಪಘಾತವೇನೂ ಆಗಿರಲಿಲ್ಲ. ಸದ್ಯ ಬದುಕಿದೆ ಎಂದುಕೊಂಡು ರಂಗಣ್ಣ ನಿಟ್ಟುಸಿರುಬಿಟ್ಟು ಇನ್ನು ಮೇಲೆ ರಾತ್ರಿ ಕುಡಿಯಬಾರದು ಅಂತ ತೀರ್ಮಾನಿಸುವ ಹೊತ್ತಿಗೆ ಭೀಕರವಾದ ಸುದ್ದಿಯೊಂದು ಬಂತು.
ರೇಲು ಮುಂದಿನ ಸ್ಟೇಷನ್ನಿನಲ್ಲಿ ನಿಂತಿದ್ದ ಗೂಡ್ಸ್ ರೇಲಿಗೆ ಡಿಕ್ಕಿ ಹೊಡೆದಿತ್ತು. ಎರಡೂ ರೇಲುಗಳೂ ಚಿಂದಿಯಾಗಿ ಹೋಗಿದ್ದವು. ನಿಂತಿದ್ದ ಗೂಡ್ಸು ರೇಲಿನ ಡ್ರೈವರು ಇಂಜಿನಿನಲ್ಲೇ ಅಪ್ಪಚ್ಚಿಯಾಗಿ ಪ್ರಾಣ ಬಿಟ್ಟಿದ್ದ. ಯಾರೆಷ್ಟೇ ಹುಡುಕಿದರೂ ಬಂದು ಗುದ್ದಿದ್ದ ಗೂಡ್ಸು ರೇಲಿನ ಡ್ರೈವರು ಸಣ್ಣೀರಯ್ಯ ಮಾತ್ರ ಪತ್ತೆಯಾಗಿರಲಿಲ್ಲ.
ಸಣ್ಣೀರಯ್ಯ ಅಜ್ಜಂಪುರ ಸ್ಟೇಷನ್ನಿನ ಫ್ಲಾಟ್ ಫಾರಮ್ಮಿನ ಕೊನೆಗೆ ತಲೆಯೊಡೆಸಿಕೊಂಡು ಬಿದ್ದುಬಿಟ್ಟಿದ್ದ. ಅವನನ್ನು ರಂಗಣ್ಣ ನೋಡಿದ್ದು ಈ ಘಟನೆಯೆಲ್ಲ ಅವನಿಗೆ ಗೊತ್ತಾಗಿ ಎಷ್ಟೋ ಹೊತ್ತಿನ ನಂತರ. ಪುಣ್ಯಕ್ಕೆ ಸಣ್ಣೀರಯ್ಯನ ಪ್ರಾಣ ಹೋಗಿರಲಿಲ್ಲ.  ಅವನನ್ನು ದಾವಣಗೆರೆಯ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಿದ ಮೇಲೆ ಕೊಂಚ ಕೊಂಚವೇ ಚೇತರಿಸಿಕೊಂಡ ಅವನು ಮೂರು ದಿನಗಳ ನಂತರ ರಂಗಣ್ಣನಿಗೆ ಆವತ್ತೇನಾಯಿತು ಅನ್ನುವುದನ್ನು ಹೇಳಿದ್ದ.
ರಂಗಣ್ಣ ಮೂರ್ಛೆ ಬಿದ್ದ ರಾತ್ರಿ ಆ  ರೇಲು ಓಡಿಸುತ್ತಿದ್ದ ದಾವಣಗೆರೆಯ ಸಣ್ಣೀರಯ್ಯ ಕೂಡ ಕೊನೆ ಗಳಿಗೆಯಲ್ಲಿ ಎತ್ತು ಓಡಿಬರುವುದನ್ನು ನೋಡಿದ್ದ. ರೇಲನ್ನು ನಿಲ್ಲಿಸುವುದಂತೂ ಸಾಧ್ಯವೇ ಇರಲಿಲ್ಲ ಅನ್ನುವ ಅಂತರಲ್ಲಿ ಎತ್ತು ಹಳಿಗೆ ನುಗ್ಗಿತ್ತು. ಇನ್ನೇನು ಆ ರಭಸಕ್ಕೆ ಒಂದೋ ಎತ್ತು ಸತ್ತು ಹೋಗುತ್ತದೆ ಅಥವಾ ರೇಲು ಹಳಿ ತಪ್ಪಿ ತಾನು ಸಾಯುತ್ತೇನೆ ಎಂದು ಭಾವಿಸಿ, ಅಷ್ಟೇನೂ ವೇಗದಲ್ಲಿಲ್ಲದ ರೈಲಿನಿಂದ ಸಣ್ಣೀರಯ್ಯ ಧುಮುಕಿಬಿಟ್ಟಿದ್ದ. ಅವನು ಧುಮುಕಿದ ರಭಸಕ್ಕೆ, ರೇಲ್ವೇ ಹಳಿ ಪಕ್ಕದಲ್ಲಿ ಗೂಟದಂತೆ ನೆಟ್ಟಿದ್ದ ಕಬ್ಬಿಣದ ಸರಳು ತಲೆಗೆ ಬಡಿದಿತ್ತು. ಸಣ್ಣೀರಯ್ಯ ಪ್ರಜ್ಞೆ ತಪ್ಪಿ ಅಲ್ಲೇ ಬಿದ್ದಿದ್ದ.
ಹೀಗೆ ರಾತ್ರೋ ರಾತ್ರಿ ಅದೇ ಹೊತ್ತಿಗೆ ಜಿಗಿದು ಬರುವ ಎತ್ತು ಎರಡು ರೇಲು ಅಪಘಾತಗಳಿಗೆ ಕಾರಣವಾದದ್ದು ಬ್ರಿಟಿಶ್ ಸರ್ಕಾರಕ್ಕೆ ತಲೆನೋವಿನ ಸಂಗತಿಯಾಯಿತು. ಅಜ್ಜಂಪುರದ ದಾರಿಯಲ್ಲಿ ಗೂಡ್ಸು ರೇಲು ಹೋಗುವುದನ್ನು ನಿಲ್ಲಿಸುವುದೇನೂ ಕಷ್ಟವಾಗಿರಲಿಲ್ಲ. ಆದರೆ ಬ್ರಿಟಿಷರು ಚಿಕ್ಕಮಗಳೂರು ಆಸುಪಾಸಿನ ಸಂಬಾರ ಪದಾರ್ಥಗಳನ್ನು ರೇಲಿನ ಮೂಲಕವೇ ಸಾಗಿಸಬೇಕಾಗಿತ್ತು. ಲಾರಿಯಲ್ಲೋ ಚಕ್ಕಡಿಯಲ್ಲೋ ಸಾಗಿಸಿದರೆ, ಅದು ಬೆಂಗಳೂರು ತಲುಪಿ, ಅಲ್ಲಿಂದ ಮದ್ರಾಸು ತಲುಪುವ ಹೊತ್ತಿಗೆ ಬಿಸಿಲು ಮಳೆಗೆ ಒಡ್ಡಿಕೊಂಡು ಅದರ ಪರಿಮಳ ಹೊರಟು ಹೋಗುತ್ತಿತ್ತು. ಹೀಗಾಗಿ ಅವುಗಳಿಗೆ ಒಳ್ಳೆಯ ಬೆಲೆಯೂ ಸಿಗುತ್ತಿರಲಿಲ್ಲ.
ಈ ಎಲ್ಲಾ ಕಾರಣಕ್ಕೆ ಅಜ್ಜಂಪುರ ಮುಖಾಂತರ ಹೋಗುತ್ತಿರುವ ಗೂಡ್ಸು ರೇಲನ್ನು ನಿಲ್ಲಿಸುವುದು ಸಾಧ್ಯವೇ ಇರಲಿಲ್ಲ. ಅಲ್ಲದೇ ಒಂದು ಎತ್ತಿಗೋಸ್ಕರ ರೇಲು ಸಂಚಾರವನ್ನು ನಿಲ್ಲಿಸುವುದು ಹುಚ್ಚುತನದ ಪರಮಾವಧಿಯಂತೆ ಅಧಿಕಾರಿಗಳಿಗೆ ಕಂಡಿತು. ಎರಡು ಅಪಘಾತಗಳು ನಡೆದು, ಒಬ್ಬ ಡ್ರೈವರು ಮತ್ತು ಮೂವರು ಗಾರ್ಡುಗಳನ್ನು ಬಲಿತೆಗೆದುಕೊಂಡ ರೂಟಿನಲ್ಲಿ ಹೋಗುವುದಕ್ಕೆ ಅನೇಕರು ಅಂಜತೊಡಗಿದವರು. ಬ್ರಿಟಿಷರು ಆ ರೇಲ್ವೇ ರೂಟಿನ ಇತಿಹಾಸ ಗೊತ್ತಿಲ್ಲದ ಯಾವ್ಯಾವುದೋ ಭಾಷೆಯ ಡ್ರೈವರುಗಳನ್ನು ತಂದು ಅಲ್ಲಿಗೆ ಹಾಕಿ ನೋಡಿದರು.
ಅವರೆಲ್ಲರ ಅನುಭವ ಒಂದೇ ಆಗಿತ್ತು. ಅಜ್ಜಂಪುರದ ಸ್ಟೇಷನ್ನಿನ ಬಳಿ ಬರುತ್ತಿದ್ದಂತೆ ಎತ್ತೊಂದು ಶರವೇಗದಿಂದ ಓಡಿ ಬಂದು ರೈಲ್ವೇ ಹಳಿಯನ್ನು ದಾಟಿಕೊಂಡು ಹೋದಂತೆ ಕಾಣಿಸುತ್ತಿತ್ತು. ಅದು ನಿಜವೆಂದೇ ಭಾವಿಸುವ ಡ್ರೈವರುಗಳು ಒಂದೋ ರೇಲನ್ನು ನಿಲ್ಲಿಸುವುದಕ್ಕೆ ಯತ್ನಿಸುತ್ತಿದ್ದರು. ಮತ್ತೆ ಕೆಲವರು ಕಣ್ಮುಚ್ಚಿಕೊಂಡು ರೇಲಿಂದ ಧುಮುಕುತ್ತಿದ್ದರು. ರೇಲು ನಿಲ್ಲಿಸಲು ಯತ್ನಿಸಿದರೆ ಥಟ್ಟನೆ ಬ್ರೇಕ್ ಹಾಕಿದ ಪರಿಣಾಮ ಒಂದೆರಡು ಬೋಗಿಗಳು ಹಳಿ ತಪ್ಪುತ್ತಿದ್ದವು. ಡ್ರೈವರುಗಳು ಜಿಗಿದು ಪಾರಾದರೆ, ರೇಲು ಡ್ರೈವರಿಲ್ಲದೇ ಹೋಗಿ ಮುಂದಿನ ಸ್ಟೇಷನ್ನಿನಲ್ಲಿ ಅನಾಹುತಕ್ಕೆ ಈಡಾಗುತ್ತಿತ್ತು. ಕ್ರಮೇಣ ಅದು ಎತ್ತಲ್ಲವೆಂದೂ, ಎತ್ತಿನ ದೆವ್ವವೆಂದೂ ಪ್ರಚಾರ ಆಗುತ್ತಿದ್ದ ಹಾಗೇ, ಇಡೀ ಊರಲ್ಲಿ ಭೀತಿ ಹಬ್ಬಿತು. ಆ ರಸ್ತೆಯಲ್ಲಿ ಸಂಚರಿಸಲು ಡ್ರೈವರುಗಳು ಅಂಜತೊಡಗಿದರು. ಆ ರೂಟಿಗೆ ಹಾಕುತ್ತಿದ್ದಂತೆ, ಕೆಲಸ ಬಿಟ್ಟು ಹೇಳದೇ ಕೇಳದೇ ಪರಾರಿ ಆಗುತ್ತಿದ್ದರು.
ಇದೆಲ್ಲ ಸವಾಲಾಗಿ ಕಾಣಿಸಿದ್ದು ಜಾನ್ ಡೈಕ್ ಎಂಬ ಅಧಿಕಾರಿಗೆ. ಆ ರೇಲ್ವೇ ಝೋನ್ ಮುಖ್ಯಸ್ಥನಾಗಿದ್ದ ಅವನು ಭೂತಚೇಷ್ಟೆಗಳನ್ನೆಲ್ಲ ನಂಬುತ್ತಲೇ ಇರಲಿಲ್ಲ. ಯಾರೋ ಕಿಡಿಗೇಡಿಗಳ ಕೆಲಸ ಅದಿರಬೇಕು ಎಂದುಕೊಂಡು , ತನ್ನ ಜೀಪು ಹತ್ತಿಕೊಂಡು ಅವನು ಅಜ್ಜಂಪುರಕ್ಕೆ ಬಂದು ನೆಲೆಯೂರಿದ. ತನ್ನ ಜೀಪಲ್ಲಿ ಸುತ್ತಾಡಿ ಆ ಎತ್ತು ಯಾರದ್ದು ಅನ್ನುವ ವಿವರ ಸಂಗ್ರಹಿಸಿದ. ಅದು ರಾಜಪ್ಪನದು ಎಂದು ಗೊತ್ತಾಗುತ್ತಿದ್ದಂತೆ, ರಾಜಪ್ಪ ನಾಯಕನ ಮನೆಗೆ ಹೋಗಿ ಅವನ ಮೇಲೆ ಕೇಸು ಹಾಕುವುದಾಗಿ ಕೂಗಾಡಿದ, ತನ್ನ ಎತ್ತು ರೇಲಿಗೆ ಸಿಕ್ಕಿ ಸತ್ತು ಹೋಗಿ ಆರೇಳು ತಿಂಗಳುಗಳೇ ಆಗಿವೆ ಎಂದು ಹೇಳಿದರೂ ಜಾನ್ ಡೈಕ್ ನಂಬಲಿಲ್ಲ.
ಅವನ ತಲೆಯಲ್ಲಿ ಬೇರೆಯೇ ಸಂಶಯ ಓಡುತ್ತಿತ್ತು. ರೇಲಿನ ಮೂಲಕ ಸಾಗಿಸಲಾಗುತ್ತಿದ್ದ ಸಂಬಾರ ಪದಾರ್ಥಗಳನ್ನು ಕದಿಯಲು ಅಜ್ಜಂಪುರದಲ್ಲಿ ಬೀಡು ಬಿಟ್ಟಿರುವ ಕಳ್ಳರು ಈ ಉಪಾಯ ಹೂಡಿದ್ದಾರೆ ಅಂತ ಅವನು ಭಾವಿಸಿದ್ದ. ಹೀಗಾಗಿ ಅವನು ಸ್ಥಳೀಯ ಪೊಲೀಸ್ ಅಧಿಕಾರಿಯನ್ನೂ ಕರೆಸಿ, ಹಳ್ಳಿಯ ರೈತರ ಮನೆಗಳನ್ನೆಲ್ಲ ಜಪ್ತಿ ಮಾಡಿಸಿದ. ಯಾರ ಮನೆಯಲ್ಲೂ ಒಂದೇ ಒಂದು ಹಿಡಿ ಕಾಳು ಮೆಣಸಾಗಲೀ, ಏಲಕ್ಕಿಯಾಗಲಿ ಸಿಗಲಿಲ್ಲ. ಯಾವುದೋ ಒಂದು ದೊಡ್ಡ ಗ್ಯಾಂಗು ಈ ಕೆಲಸದಲ್ಲಿ ತೊಡಗಿದೆ ಎಂದು ಖಾತ್ರಿಯಾಗಿ, ಅವನು ತಾನೇ ರೇಲ್ವೇ ಸ್ಟೇಷನ್ನಿನ ಬಳಿ ಕಾವಲು ಕಾಯುವುದಾಗಿ ಹೇಳಿ, ತನ್ನ ಇಲಾಖೆಯ ಸಿಬ್ಬಂದಿಗಳಿಗೆ ರೇಲು ಓಡಿಸಿಕೊಂಡು ಬರುವಂತೆ ಹೇಳಿದ.
ಆವತ್ತು ರಾತ್ರಿಯೂ ರೇಲು ಬಂತು. ಅಜ್ಜಂಪುರ ಸ್ಟೇಷನ್ನಿನಲ್ಲಿ ಜಾನ್ ಡೈಕ್ ಕಾಯುತ್ತಾ ಕೂತಿದ್ದ. ಆವತ್ತು ಯಾವ ಎತ್ತೂ ಬರಲಿಲ್ಲ. ಅಲ್ಲಿಗೆ ಜಾನ್ ಡೈಕನಿಗೆ ಯಾರೋ ಪಿತೂರಿ ಮಾಡುತ್ತಿದ್ದಾರೆ ಎನ್ನುವುದು ಖಾತ್ರಿಯಾಯಿತು. ಇಂಥ ಆಟವೆಲ್ಲ ನನ್ನ ಬಳಿ ನಡೆಯುವುದಿಲ್ಲವೆಂದೂ, ರಂಗಣ್ಣನನ್ನು ಕರೆದು ಎಚ್ಚರಿಸಿದ ಜಾನ್ ಡೈಕ್. ಇನ್ನು ಮುಂದೆ ಎಚ್ಚರಿಕೆಯಿಂದ ಸ್ಟೇಷನ್ ಕಾಯಬೇಕೆಂದು, ಕುಡಿಯುವುದನ್ನು ಇಲಾಖೆ ಸಹಿಸುವುದಿಲ್ಲವೆಂದೂ, ಇನ್ನೊಂದು ಸಲ ಅಪಘಾತವಾದರೆ ಕೆಲಸಕ್ಕೆ ಸಂಚಕಾರ ಬರುತ್ತದೆಂದೂ ಜೈಲುವಾಸ ಎದುರಿಸಬೇಕಾಗುತ್ತದೆ ಎಂದೂ ಹೆದರಿಸಿದ. ರಂಗಣ್ಣ ಕೆಲಸ ಬಿಟ್ಟು ಎಲ್ಲಿಗಾದರೂ ಓಡಿ ಹೋಗುವುದೇ ತನಗಿರುವ ಏಕೈಕ ದಾರಿ ಎಂದು ಯೋಚಿಸುತ್ತಿರಬೇಕಾದರೆ, ನಾಗವಂಗಲದ ಬಳಿ ರೇಲ್ವೇ ಟ್ರಾಕಿಗೆ ಎತ್ತು ಅಡ್ಡಬಂದಿದೆಯೆಂದೂ ಅಲ್ಲಿ ಅಪಘಾತ ಆಗಿದೆಯೆಂದೂ ಸುದ್ದಿ ಬಂತು. ರಂಗಣ್ಣನೂ ಜಾನ್ ಡೈಕನೂ ಜೀಪು ಹತ್ತಿ ನಾಗವಂಗಲಕ್ಕೆ ಹೋದರು.
ಅಜ್ಜಂಪುರದಲ್ಲಾದ ರೀತಿಯಲ್ಲೇ ಅಲ್ಲೂ ಅಪಘಾತವಾಗಿತ್ತು.  ಡ್ರೈವರು ಎತ್ತು ನುಗ್ಗಿದ ರಭಸಕ್ಕೆ ರೇಲಿನಿಂದ  ಹಾರಿ ಪ್ರಾಣ ಬಿಟ್ಟಿದ್ದ. ರೇಲು ಡ್ರೈವರಿಲ್ಲದೇ ಆರೆಂಟು ಮೈಲಿ ಹೋಗಿ, ನಾಗವಂಗಲದಲ್ಲಿ ನಿಂತಿದ್ದ ರೇಲಿಗೆ ಡಿಕ್ಕಿ ಹೊಡೆದಿತ್ತು. ಜಾನ್ ಡೈಕ್ ಈ ಘಟನೆಯ ನಂತರವೂ ಅದು ದೆವ್ವದ ಕಾಟ ಎಂದು ನಂಬಲಿಲ್ಲ. ತಾವು ಅಜ್ಜಂಪುರದಲ್ಲಿದ್ದ ಹೊತ್ತಿಗೇ, ನಾಗವಂಗಲದಲ್ಲಿ ಯಾರೋ ದರೋಡೆ ಮಾಡುವುದಕ್ಕೆ ಈ ಉಪಾಯ ಮಾಡಿದ್ದಾರೆ ಎಂದು ಅವನು ಯೋಚಿಸುತ್ತಿದ್ದ.
ಅವನ ಅನುಮಾನಕ್ಕೆ ಕಾರಣಗಳೂ ಇದ್ದವು. ಅಪಘಾತವಾದ ರೇಲಿನಲ್ಲಿದ್ದ ಏಲಕ್ಕಿ, ಕಾಳುಮೆಣಸು, ಕೆಂಪು ಮೆಣಸು, ಜಾಯಿಕಾಯಿ, ಲವಂಗ, ಶುಂಠಿಗಳನ್ನೆಲ್ಲ ಯಾರೋ ಕಳ್ಳತನ ಮಾಡಿರುತ್ತಿದ್ದರು.  ಆ ಕಾಲಕ್ಕೆ ರೇಲು ಅಪಘಾತವಾದರೆ ಸಿಬ್ಬಂದಿ ಬಂದು ಅದರ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ನಾಲ್ಕಾರು ದಿನ ಬೇಕಾಗುತ್ತಿತ್ತು. ಅಷ್ಟರಲ್ಲಿ ರೇಲಿನಲ್ಲಿರುವ ಸಾಮಾನುಗಳೆಲ್ಲ ಕಳ್ಳತನ ಆಗಿರುತ್ತಿದ್ದವು. ಕಳ್ಳತನ ಮಾಡುವುದಕ್ಕೇ ರೇಲನ್ನು ಅಪಘಾತ ಮಾಡಿಸುತ್ತಿದ್ದರೋ, ಅಪಘಾತ ಆದ ರೇಲನ್ನು ಕೊಳ್ಳೆಹೊಡೆಯುತ್ತಿದ್ದರೋ ಅನ್ನುವುದು ಮಾತ್ರ ಖಾತ್ರಿಯಾಗುತ್ತಿರಲಿಲ್ಲ.
ಜಾನ್ ಡೈಕನಿಗೆ ಇದೊಂದು ಸವಾಲಾಗಿ ಪರಿಣಮಿಸಿತು. ಆ ಪ್ರದೇಶದಲ್ಲಿ ಯಾಕೆ ಹಾಗಾಗುತ್ತದೆ ಅನ್ನುವುದನ್ನು ನೋಡಲೇಬೇಕು ಅನ್ನಿಸಿ, ಆತ ಆ ಆಸುಪಾಸಿನಲ್ಲಿ ಎಲ್ಲ ರೈತರ ಮನೆಯಲ್ಲಿದ್ದ ಬಿಳಿ ಎತ್ತುಗಳನ್ನು ಕೊಂಡುಕೊಂಡು ಬೇರೆ ಊರಿಗೆ ಸಾಗಿಸಿದ. ಕೇವಲ ಕರಿ ಎತ್ತುಗಳನ್ನು ಮಾತ್ರ ಇಟ್ಟುಕೊಳ್ಳಬಹುದೆಂದು ಸುತ್ತೋಲೆ ಹೊರಡಿಸಿದ. ಜಾನ್ ಡೈಕನ ಕಡೆಯವರು ಸುತ್ತಲ ಹತ್ತೂರಿನಲ್ಲಿ ಬಿಳಿ ಎತ್ತುಗಳೇ ಇಲ್ಲ ಎಂದು ಖಾತ್ರಿ ಮಾಡಿಕೊಂಡರು.
ಆದಾದ ಮೇಲೂ ಅಪಘಾತ ನಡೆಯಿತು. ಕೊನೆಗೆ ಎತ್ತುಗಳನ್ನು ಶೂಟ್ ಮಾಡಿ ಕೊಲ್ಲುವುದಕ್ಕೆ ಸರ್ಕಾರ ಅನುಮತಿ ನೀಡಿತು. ಜಾನ್ ಡೈಕ್ ಕರೆಸಿದ ವಿಲಿಯಂ ಎಂಬ ಪ್ರಸಿದ್ಧ ಬೇಟೆಗಾರ ಅಜ್ಜಂಪುರದ ರೇಲ್ವೇ ಸ್ಟೇಷನ್ನಿನ ಬಳಿ ರಾತ್ರಿಪೂರ ಕಾದು ಕುಳಿತ. ಅವನು ಕಾದು ಕೂತ ಮೂರನೇ ದಿನಕ್ಕೆ ರೇಲು ಬರುವ ಹೊತ್ತಿಗೆ ಸರಿಯಾಗಿ ಎತ್ತು ರೇಲ್ವೇ ಹಳಿಗೆ ಅಡ್ಡವಾಗಿ ಓಡಿ ಬಂತು. ಚಾಣಾಕ್ಷನಾಗಿದ್ದ ವಿಲಿಯಂ, ಗುರಿಯಿಟ್ಟು ಗುಂಡು ಹಾರಿಸಿದ.
ಆ ಗುಂಡು ಹಾರುವುದಕ್ಕೂ ರೇಲು ಸಾಗುವುದಕ್ಕೂ ಸರಿಹೋಯಿತು. ವಿಲಿಯಂ ಹೊಡೆದ ಗುಂಡು ರೇಲ್ವೇ ಗಾಡಿಯ ಚಕ್ರಕ್ಕೆ ಬಡಿದು, ಅಷ್ಟೇ ರಭಸಕ್ಕೆ ಠಣ್ಣನೆ ಹಿಂದಕ್ಕೆ ಚಿಮ್ಮಿ   ವಿಲಿಯಂ ಎಡಗಣ್ಣನ್ನೇ ಬಲಿತೆಗೆದುಕೊಂಡಿತು.
ಜಾನ್ ಡೈಕನ ಪ್ರಯೋಗಗಳೆಲ್ಲ ಒಂದೊಂದಾಗಿ ಬಿದ್ದು ಹೋಗಿ, ಅದರಿಂದಾಗಿ ಅಪಾರ ನಷ್ಟವೂ ಆದ ಮೇಲೆ ಬ್ರಿಟಿಷ್ ಸರ್ಕಾರ ಅವನನ್ನು ಹಿಂದಕ್ಕೆ ಕರೆಸಿಕೊಂಡಿತು. ಹೇಗಾದರೂ ಮಾಡಿ ಆ ಎತ್ತಿನ ಮೂಲ ಕಂಡುಹಿಡಿಯಬೇಕೆಂದು ಅವನು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಊರಿನ ಮಂದಿಯೂ ಅವನ ದಾರಿ ತಪ್ಪಿಸಲಿಕ್ಕೆ ಅವನಿಗೆ ವಿಚಿತ್ರವಾದ ಕತೆಗಳನ್ನು ಹೇಳುತ್ತಿದ್ದರು. ಊರಲ್ಲಿ ಒಂದೇ ಒಂದು ಬಿಳಿ ಎತ್ತೂ ಇಲ್ಲವೆಂದು ನಂಬಿದ್ದ ಅವನಿಗೆ, ಬೇಕಂತಲೇ ಅಲ್ಲೊಂದು ಬಿಳಿ ಎತ್ತು ನೋಡಿದೆ, ನಾನೂ ಇಲ್ಲೊಂದು ನೋಡಿದೆ ಎಂದೆಲ್ಲ ಹೇಳಿ ಕಂಗಾಲು ಮಾಡಿದ್ದರು. ಅವರ ಸುಳ್ಳುಗಳಿಂದ ಪಾರಾಗಲು ಸಾಧ್ಯವೇ ಆಗದೇ ಆತ ಕೊನೆಗೆ ಮೇಲಧಿಕಾರಿಗಳ ಆಜ್ಞೆ ಒಪ್ಪಿಕೊಂಡು ಹೊರಟೇ ಹೋದ.
ಕೊನೆಗೆ ಆ ರೇಲ್ವೇ ರಸ್ತೆಯನ್ನೇ ಬ್ರಿಟಿಷ್ ಸರ್ಕಾರ ಬಂದು ಮಾಡಿತು. ಸ್ವಾತಂತ್ರ್ಯ ಬಂದು ಎಷ್ಟೋ ವರ್ಷಗಳ ನಂತರ ಅಲ್ಲಿ ರೇಲ್ವೇ ಸಂಚಾರ ಆರಂಭವಾಗಿ ಚಿಕ್ಕಜಾಜೂರಿನಿಂದ ಅಜ್ಜಂಪುರ ಮಾರ್ಗವಾಗಿ ಕಡೂರು ಬೀರೂರಿಗೆ ರೇಲು ಓಡಾಡಿತು.
      ಅಷ್ಟು ಹೊತ್ತಿಗೆ ಎತ್ತಿನ ಕತೆಯನ್ನು ಅಲ್ಲಿಯ ಮಂದಿಯೂ ಮರೆತಿದ್ದರು. ರೇಲ್ವೇ ಇಲಾಖೆಯೂ ಮರೆತಿತ್ತು. ರೇಲ್ವೇ ಇಲಾಖೆಯ ದಾಖಲೆಗಳನ್ನು ತೆರೆದು ನೋಡಿದರೆ ಇಂತಿಂಥ ಇಸವಿಯಿಂದ ಇಂತಿಂಥ ಇಸವಿಯ ತನಕ ರೇಲು ಓಡಾಟ ಸಸ್ಪೆಂಡ್ ಮಾಡಲಾಗಿತ್ತು ಅನ್ನುವ ವಿವರಗಳು ಮಾತ್ರ ಸಿಗುತ್ತವೆ.

ಕೊನೆಗೂ ಎತ್ತು ಏನಾಯಿತು. ಅದು ಎತ್ತಿನ ದೆವ್ವವಾ, ಕಳ್ಳರ ಕೈವಾಡವಾ ಅನ್ನುವುದು ಮಾತ್ರ ಬಯಲಾಗದೇ ಉಳಿದುಬಿಟ್ಟಿತು.