Thursday, August 23, 2012
Sunday, August 12, 2012
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ
ನಾನು
ಲೇಖಕನಾಗುವುದು ಹೇಗೆ.
ಬರೆಯಬೇಕಾದ್ದು ಹೇಗೆ ಎಂದು ಯೋಚಿಸುವ ಪ್ರತಿಯೊಬ್ಬ ಕೂಡ ತನ್ನೊಳಗೇ ಒಂದು
ಸತ್ವಶೀಲ ಬೀಜವನ್ನು ಬಚ್ಚಿಟ್ಟುಕೊಂಡಿರುತ್ತಾನೆ. ಈ ಕಾಲದಲ್ಲಿ,
ಎಲ್ಲ eನವೂ ಸಂಪತ್ತಿನ ಸಂಪಾದನೆಯ ಮೂಲ ಎಂದು ನಂಬಿರುವ
ದಿನಗಳಲ್ಲಿ ಇದು ಮುಖ್ಯ ಅಲ್ಲ ಅಂತ ಬಹಳಷ್ಟು ಮಂದಿಗೆ ಅನ್ನಿಸಬಹುದು. ಆದರೆ
ಏಕಾಂತ ಎಂಬುದೊಂದು ಎಲ್ಲರನ್ನೂ ಆವರಿಸುತ್ತದೆ. ಅಂಥ ಹೊತ್ತಲ್ಲಿ
ಸಂಪತ್ತಾಗಲೀ, ಅಧಿಕಾರವಾಗಲೀ ಉಪಯೋಗಕ್ಕೆ ಬರುವುದಿಲ್ಲ. ಆ ನೆರವಾಗುವುದು ಕೇವಲ ನಮ್ಮ ಸೃಜನಶೀಲತೆ. ಅದರಲ್ಲೂ
ದ್ವೀಪಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಅಂಥದ್ದೊಂದು ಅದಮ್ಯ ಆಸೆ ಮೂಡಿದ್ದರೆ
ಆಶ್ಚರ್ಯಪಡಬೇಕಾಗಿಲ್ಲ. ಅವರ ಭಾವನೆಗಳಿಗೆ ಅಲ್ಲಿ ಹೊರದಾರಿಗಳೇ
ಇರುವುದಿಲ್ಲವಲ್ಲ.
ಅಂಥ
ಹೊರದಾರಿಗಳಿಲ್ಲದ ಆ ಅಧಿಕಾರಿಯ ಹೆಸರು ಲೆಡರರ್. ಅವನು ಚುಂಗ್‌ಕಿಂಗ್ ದ್ವೀಪದಲ್ಲಿ
ಕೆಲಸ ಮಾಡುತ್ತಿದ್ದ. ಆಗಿನ್ನೂ
ಅವನಿಗೆ ಹದಿಹರೆಯ. ಅನೇಕ ಗೆಳೆಯರು. ಮೋಜು,
ಸುತ್ತಾಟ, ವಾರಾಂತ್ಯದಲ್ಲಿ ಮದ್ಯ ಸೇವನೆಯೇ
ಖಯಾಲಿಯಾಗಿದ್ದ ಅವನಿಗೆ ಬರೆಯುವ ಹುಚ್ಚು. ಎಲ್ಲ ಮೋಜು ಮಸ್ತಿಗಳು
ಮುಗಿದ ನಂತರ ಅವನನ್ನು ಭೀಕರವಾದ ನಿರಾಶೆ ಕಾಡುತ್ತಿತ್ತು. ಏನಾದರೂ
ಅದ್ಭುತವಾದದ್ದು ಮಾಡಬೇಕು. ಈ ಜೀವನ ಹೀಗೆಯೇ ಸೋರಿ ಹೋಗುತ್ತದೆ ಅಂತ
ಅನ್ನಿಸುತ್ತಿತ್ತು. ಏನು ಮಾಡಬೇಕು ಅನ್ನುವ ಕಿಂಚಿತ್ ದಾರಿಯೂ ಅವನಿಗೆ
ತೋಚುತ್ತಿರಲಿಲ್ಲ . ಆಗ ಬರಹವೊಂದೇ ತನ್ನ ಹೊರದಾರಿ ಅಂತ ಅವನಿಗೆ
ಅನ್ನಿಸುತ್ತಿತ್ತು.
ಆದರೆ ಹೇಗೆ ಬರೆಯಬೇಕು
ಎಂದು ಹೇಳಿಕೊಡುವವರು ಯಾರೂ ಇರಲಿಲ್ಲ. ಬರೆದದ್ದು ಸರಿಯಾಗಿದೆಯೇ
ಚೆನ್ನಾಗಿದೆಯೇ ಎಂದು ಹೇಳುವವರು ಇರಲಿಲ್ಲ. ಆ ದ್ವೀಪದ ತುಂಬ ಇದ್ದದ್ದು
ಕಳ್ಳರು, ಕಡಲುಗಳ್ಳರು, ಬ್ರೋಕರುಗಳು ಮತ್ತು
ತಲೆಹಿಡುಕರು. ಅವರ ನಡುವೆ ಇವನೊಬ್ಬ ವಿಚಿತ್ರ ಪ್ರಾಣಿಯಂತೆ
ಕಾಣುತ್ತಿದ್ದ.
ಅವನಿದ್ದ ಆ
ಪುಟ್ಟ ದ್ವೀಪದಂಥ ಊರಲ್ಲಿ ಮದ್ಯಕ್ಕೆ ಬರ. ಒಳ್ಳೆಯ ಸ್ಕಾಚ್‌ವಿಸ್ಕಿ ಸಿಗಬೇಕು
ಅಂದರೆ ಒದ್ದಾಟ. ಆ ಕಾಲಕ್ಕೆ ಹಡಗಿನ ಕಟ್ಟೆಯ ಬಳಿ, ಕಡಲುಗಳ್ಳರಿಂದ ವಶಪಡಿಸಿಕೊಂಡ ಮಾಲುಗಳನ್ನು ಹರಾಜು ಹಾಕುತ್ತಿದ್ದರು. ಆ ಹರಾಜನ್ನು ಬ್ಲೈಂಡ್ ಆಕ್ಷನ್ ಎಂದು ಕರೆಯಲಾಗುತ್ತಿತ್ತು. ಸೀಲು
ಮಾಡಲಾಗಿದ್ದ ಪೆಟ್ಟಿಗೆಗಳನ್ನು ಹರಾಜಿಗೆ ಇಡುತ್ತಿದ್ದರು. ಅದರೊಳಗೆ
ಏನಿದೆ ಅನ್ನುವುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ಅದನ್ನು
ಹರಾಜಿನಲ್ಲಿ ಕೊಂಡುಕೊಂಡವರ ಅದೃಷ್ಟ ಚೆನ್ನಾಗಿದ್ದರೆ ಒಳ್ಳೆಯ ಮಾಲು ಸಿಗುತ್ತಿತ್ತು.
ಲೆಡರರ್‌ಗೆ ಹಾಗೆ
ಹರಾಜಿನಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸುವ ಚಟವಿತ್ತು. ಅನೇಕ
ಬಾರಿ ಅವನಿಗೆ ಅದೃಷ್ಟ ಕೈ ಕೊಟ್ಟಿದ್ದರೂ ಮತ್ತೆ ಮತ್ತೆ ಏನನ್ನಾದರೂ ಅವನು ಕೊಳ್ಳುತ್ತಿದ್ದ.
ಈ ಬಾರಿ ಅವನು ಕೊಂಡ ಪೆಟ್ಟಿಗೆಯ ಒಳಗೆ ಎರಡು ಡಜನ್ ಸ್ಕಾಚ್ ವಿಸ್ಕಿಯ ಬಾಟಲುಗಳು
ಸಿಕ್ಕವು. ಅವನು ಅದು ತನ್ನ ಅದೃಷ್ಟವೆಂದೇ ಭಾವಿಸಿದ. ಎಲ್ಲರಿಗೂ ವಿಸ್ಕಿ ಬೇಕಾಗಿದ್ದುದರಿಂದ ಮತ್ತು ವಿಸ್ಕಿ ದುರ್ಲಭವಾದ್ದರಿಂದ ಅವನಿಗೆ
ಸಿಕ್ಕ ಹತ್ತು ಪಟ್ಟು ಬೆಲೆಗೆ ಅನೇಕರು ಅದನ್ನು ಕೊಳ್ಳಲು ಮುಂದೆ ಬಂದರು. ಲೆಡರರ್ ಅದನ್ನು ತಾನು ಮಾರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ.
ಅದೇ ಸಮಯಕ್ಕೆ
ಚುಂಗ್‌ಕಿಂಗ್‌ಗೆ ಲೇಖಕ ಹೆಮಿಂಗ್‌ವೇ ಬಂದಿದ್ದರು. ಒಂದು ತಿಂಗಳ ಭೇಟಿಗಾಗಿ ಬಂದ
ಹೆಮಿಂಗ್‌ವೇ ವಿಸ್ಕಿ ಪ್ರಿಯರು. ಅವರಿಗೆ ಅಲ್ಲಿ ಸ್ಕಾಚ್‌ವಿಸ್ಕಿ
ಸಿಗುವುದಿಲ್ಲ ಎಂದು ಗೊತ್ತಾಯಿತು. ಅವರ ಗೆಳೆಯರು ಲೆಡರರ್ ಬಳಿ ವಿಸ್ಕಿ
ಇರುವುದಾಗಿ ಹೇಳಿದರು. ಆದರೆ ಆತ ಅದನ್ನು ಯಾರಿಗೂ ಮಾರುವುದಿಲ್ಲ
ಎಂದುಬಿಟ್ಟರು. ತಾನೇ ಪ್ರಯತ್ನಿಸುವುದಾಗಿ ಹೇಳಿ ಹೆಮಿಂಗ್‌ವೇ ಒಂದು
ಬೆಳಗ್ಗೆ ಲೆಡರರ್ ಮನೆಗೆ ಬಂದೇಬಿಟ್ಟರು.
ಲೆಡರರ್‌ಗೆ
ಸಂತೋಷದಿಂದ ಪ್ರಾಣ ಬಿಡುವುದಷ್ಟೇ ಬಾಕಿ. ತನ್ನ ಮೆಚ್ಚಿನ ಲೇಖಕ ತನ್ನನ್ನೇ
ಹುಡುಕಿಕೊಂಡು ಬಂದುಬಿಟ್ಟಿದ್ದಾನೆ. ಹೆಮಿಂಗ್‌ವೇ ತನಗೆ ವಿಸ್ಕಿ ಬೇಕು
ಅಂದರು. ಎಷ್ಟು ಬೇಕಾದರೂ ದುಡ್ಡು ಕೊಡುವುದಾಗಿ ಹೇಳಿದರು. ಲೆಡರರ್ ತನಗೆ ದುಡ್ಡು ಬೇಡ ಎಂದೂ ಕತೆ ಬರೆಯುವುದನ್ನು ಹೇಳಿಕೊಡಬೇಕೆಂದೂ ಕೇಳಿಕೊಂಡ.
ಹೆಮಿಂಗ್‌ವೇ ದುಡ್ಡು ತಗೊಂಡು ಮಜಾ ಮಾಡು. ಅದೆಲ್ಲ
ಆಗದ್ದು ಅಂದರು. ಲೆಡರರ್ ಹಠ ಬಿಡಲಿಲ್ಲ. ಕೊನೆಗೆ
ಆರು ಬಾಟಲಿ ವಿಸ್ಕಿಗೆ, ಕತೆ ಬರೆಯುವುದನ್ನು ಹೇಳಿಕೊಡುವುದಕ್ಕೆ
ಹೆಮಿಂಗ್‌ವೇ ಒಪ್ಪಿಕೊಂಡರು. ಉಳಿದ ಆರು ಬಾಟಲಿಗೆ ಒಳ್ಳೆಯ ಬೆಲೆ
ಕೊಟ್ಟು ಕೊಂಡುಕೊಂಡರು. ಅಷ್ಟೂ ದಿನ ಬ್ಲೈಂಡ್ ಆಕ್ಷನ್‌ನಲ್ಲಿ ಕಳಕೊಂಡ ಹಣ ಲೆಡರರ್‌ಗೆ ಬಂದೇ ಬಿಟ್ಟಿತು.
ಹೆಮಿಂಗ್‌ವೇ ವಿಸ್ಕಿ ಬಾಟಲಿಯನ್ನು ಹೊತ್ತುಕೊಂಡು ಹೊರಟು ಹೋದರು.
ಮಾರನೇ ದಿನದಿಂದ
ಲೆಡರರ್ ಹೆಮಿಂಗ್‌ವೇ ಜೊತೆ ಓಡಾಡತೊಡಗಿದ. ಹೆಮಿಂಗ್‌ವೇ ಹೇಗೆ ಗಮನಿಸುತ್ತಾರೆ,
ಹೇಗೆ ಮಾತಾಡುತ್ತಾರೆ ಅನ್ನುವುದನ್ನು ಗಮನಿಸುತ್ತಿದ್ದ. ತಾನು ಲೇಖಕ ಎಂಬುದನ್ನು ಅವರು ತೋರಿಸಿಕೊಳ್ಳುತ್ತಲೇ ಇರಲಿಲ್ಲ. ಯಾವುದನ್ನೂ ಅವರು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದಾರೆ ಎಂದು ಅವನಿಗೆ ಅನ್ನಿಸಲಿಲ್ಲ.
ಎಲ್ಲವನ್ನೂ ಉಡಾಪೆಯಿಂದ ನೋಡುತ್ತಾ, ನಿರಾಕರಿಸುತ್ತಾ,
ಎದುರಿಗೆ ಸಿಕ್ಕ ಸಣ್ಣಪುಟ್ಟ ಮನುಷ್ಯರ ಜೊತೆ ಮಾತಾಡುತ್ತಾ, ಅವರಿಗೆ ತಮಾಷೆ ಮಾಡುತ್ತಾ, ಅವರಿಂದ ಬೈಸಿಕೊಳ್ಳುತ್ತಾ ಅವರು
ತಾನೇನೂ ಅಲ್ಲ ಎಂಬಂತೆ ಇದ್ದರು.
ಲೆಡರರ್ ಇವತ್ತಿನ
ಪಾಠ ಏನು ಎಂದು ಕೇಳಿದ.
ಮನಸ್ಸನ್ನು ಕನ್ನಡಿಯ ಹಾಗಿಟ್ಟುಕೋ ಎಂದರು ಹೆಮಿಂಗ್‌ವೇ. ಮಾರನೇ ದಿನ ಅವನು ಬಂದಾಗ ಹೆಮಿಂಗ್‌ವೇ ನಿನ್ನ ಬಳಿ ಇದ್ದ ವಿಸ್ಕಿ ಕುಡಿದೆಯಾ ಎಂದು
ಕೇಳಿದರು. ಲೆಡರರ್ ಇಲ್ಲ, ಅದನ್ನು ಒಂದು
ಪಾರ್ಟಿಗೋಸ್ಕರ ಇಟ್ಟುಕೊಂಡಿದ್ದೇನೆ. ಈಗಲೇ ಕುಡಿಯುವುದಿಲ್ಲ ಎಂದ.
ಹೆಮಿಂಗ್‌ವೇ ನಕ್ಕರು. ಪಾಠ ಎರಡು- ಲೇಖಕನಾದವನು ಯಾವುದನ್ನೂ ನಾಳೆಗೆಂದು ಇಟ್ಟುಕೊಳ್ಳಬಾರದು.
ಲೆಡರರ್ ಅವರಿಗೆ
ಲೇಖಕ ಆಗೋದು ಹೇಗೆ ಎಂದು ಹೇಳಿ ಎಂದು ಒತ್ತಾಯಿಸಿದ. ಅವರು ಅದನ್ನೆಲ್ಲ
ಹೇಳಿಕೊಡಲಿಕ್ಕೆ ಕಷ್ಟ ಅಂತ ಆವತ್ತೇ ಹೇಳಿದ್ದೇನೆ. ಆದರೂ ಒಂದು ಮಾತು
ಹೇಳ್ತೀನಿ ಕೇಳು. ಒಳ್ಳೆಯ ಬಾಳು ನಡೆಸುವುದಕ್ಕೆ ಏನೇನು ಸೂತ್ರಗಳಿವೆಯೋ
ಲೇಖಕ ಆಗುವುದಕ್ಕೂ ಅವೇ ಸೂತ್ರಗಳು. ಒಳ್ಳೆಯ ಮನುಷ್ಯ ಅಂತಿಮವಾಗಿ
ಒಳ್ಳೆಯ ಲೇಖಕ ಆಗುತ್ತಾನೆ. ಸಜ್ಜನ, ಸುಸಂಸ್ಕೃತ,
ಮಿತಭಾಷಿ, ತನ್ನ ಹಾಗೆ ಇನ್ನೊಬ್ಬರು ಎಂದು
ಭಾವಿಸುವುದು ಮತ್ತು ಪ್ರಾಮಾಣಿಕವಾಗಿ ಹಾಗೆ ತಿಳಿಯುವುದು ಲೇಖಕನಾಗುವ ಮೊದಲ ಮೆಟ್ಟಲು ಅಂದರು.
ಲೆಡರರ್ ಅವರ ಬಳಿ ವಾದಕ್ಕಿಳಿದ. ಲೇಖಕನಾಗಲು
ಅದ್ಯಾವುದೂ ಮುಖ್ಯ ಲಕ್ಷಣ ಅಂತ ನನಗೆ ಅನ್ನಿಸುತ್ತಿಲ್ಲ ಅಂದ. ಹೆಮಿಂಗ್‌ವೇ
ಸುಮ್ಮನೆ ನಕ್ಕರು. ಅವರ ಬಳಿ ಇನ್ನಷ್ಟು ಸಂಗತಿಗಳನ್ನು ಕೇಳಬೇಕು
ಅಂದುಕೊಂಡ ಲೆಡರರ್ ಹೇಗಾದರೂ ಮಾಡಿ ಅವರ ಬಾಯಿ ಬಿಡಿಸಬೇಕು ಎಂದು ತೀರ್ಮಾನಿಸಿಬಿಟ್ಟಿದ್ದ.
ಆದರೆ, ಮೂರನೇ ದಿನ ಹೆಮಿಂಗ್‌ವೇ
ಹೊರಟುಬಿಟ್ಟರು. ತಿಂಗಳು ಇರಲೆಂದು ಬಂದವರಿಗೆ ಮೂರೇ ದಿನಕ್ಕೆ ಮರಳಿ
ಬರಬೇಕೆಂದು ಕರೆಬಂತು. ಲೆಡರರ್‌ಗೆ ನಿರಾಶೆಯಾಯಿತು. ಹೆಮಿಂಗ್‌ವೇ ಮುಂದೊಂದು ದಿನ ಬಂದಾಗ ಪಾಠ ಮುಂದುವರಿಸುತ್ತೇನೆ ಎಂದು ಹೇಳಿ ಹೊರಟು
ನಿಂತರು. ಅವನು ಪಾಠ ಹೇಳುವ ಶುಲ್ಕವೆಂದು ಕೊಟ್ಟಿದ್ದ ಆರು ಬಾಟಲಿ
ವಿಸ್ಕಿಯ ದುಡ್ಡನ್ನು ಅವನ ಕೈಗಿಟ್ಟರು. ನಾನು ಪಾಠ ಹೇಳಿಕೊಡಲಾಗಲಿಲ್ಲ.
ನೀನು ನಷ್ಟ ಮಾಡಿಕೊಳ್ಳಬಾರದು ಅಂದರು. ಹೊರಡುವ ಮುನ್ನ
ಕೊನೆಯ ಪಾಠ ಹೇಳಿದರು- ಲೇಖಕ ತನ್ನಲ್ಲಿರುವ ವಿಸ್ಕಿಯನ್ನು ರುಚಿ ನೋಡದೇ
ಬೇರೆಯವರಿಗೆ ನೀಡಬಾರದು. ವಿಸ್ಕಿ ಕೆಟ್ಟದಾಗಿದ್ದರೂ ಒಳ್ಳೆಯತನ
ಬಿಡಬಾರದು.
ಲೆಡರರ್‌ಗೆ ಏನೂ
ಅರ್ಥವಾಗಲಿಲ್ಲ.
ಮನೆಗೆ ಬಂದು ಸುಮ್ಮನೆ ಕೂತ. ನಾಲ್ಕೈದು ದಿನ ಯೋಚಿಸಿದ.
ಅವನು ಆಯೋಜಿಸಿದ್ದ ಪಾರ್ಟಿ ಸಮೀಪಿಸುತ್ತಿತ್ತು. ಇದ್ದಕ್ಕಿದ್ದಂತೆ
ಹೆಮಿಂಗ್ವೇ ಹೇಳಿದ ಕೊನೆಯ ಪಾಠ ನೆನಪಾಗಿ ವಿಸ್ಕಿ ಬಾಟಲು ತೆಗೆದು ರುಚಿ ನೋಡಿದ.
ಕಳ್ಳರು ವಿಸ್ಕಿ
ಬಾಟಲಿಯೊಳಗೆ ಟೀ ತುಂಬಿಸಿಟ್ಟಿದ್ದರು. ಎಲ್ಲ ಬಾಟಲಿಗಳಲ್ಲೂ ಬರೀ ಕಹಿ ಟೀ
ಇತ್ತು.
ಲೆಡರರ್
ಬರೆದುಕೊಳ್ಳುತ್ತಾನೆ.
ಹೆಮಿಂಗ್‌ವೇ ಕಲಿಸಿದ ಪಾಠವನ್ನು ನಾನು ಯಾವತ್ತೂ ಮರೆಯಲಾರೆ. ಅವರು ಟೀ ಬಾಟಲ್ಲಿಗೆ ಕೈ ತುಂಬ ದುಡ್ಡು ಕೊಟ್ಟಿದ್ದರು. ಯಾವತ್ತೂ
ಅದರ ಬಗ್ಗೆ ಕೊರಗಲಿಲ್ಲ. ನನ್ನ ಅವಿವೇಕವನ್ನು ಆಡಿಕೊಳ್ಳಲಿಲ್ಲ.
ನನ್ನ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ. ಒಳ್ಳೆಯತನ
ಎಂದರೇನು ಎಂದು ಹೇಳಿಕೊಟ್ಟರು.
ನಾನು ಲೇಖಕನಾದೆ.
ಒಳ್ಳೆಯ ಲೇಖಕನಾದವನು
ಒಳ್ಳೆಯ ಮನುಷ್ಯನೇನೂ ಆಗಿರಬೇಕಿಲ್ಲ ಎಂದು ಸಾಬೀತು ಪಡಿಸಿದವರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ
ಬಾಳುವುದಕ್ಕಿರುವ ಸೂತ್ರಗಳೇ ಲೇಖಕನಾಗುವುದಕ್ಕೂ ಸಾಕು ಎಂದ ಹೆಮಿಂಗ್ವೇ ಕೂಡ ಹಾಗೇ ಬಾಳಿದ್ದನ್ನು
ನೋಡಿದಾಗ ಬೆರಗಾಗುತ್ತೇವೆ. ಎಲ್ಲರಂತೆ ಓಡಾಡಿಕೊಂಡು, ಕೆಲಸ ಮಾಡಿಕೊಂಡು, ಲೇಖಕ ಎಲ್ಲರಂತೆ ಸಾಮಾನ್ಯ, ಬರೆಯುವ ಹೊತ್ತಲ್ಲಿ ಮಾತ್ರ ಅವನು ದಾರ್ಶನಿಕವಾಗುತ್ತಾನೆ ಎಂದು ತೋರಿಸಿಕೊಟ್ಟವರು ಅವರು.
ಎಲ್ಲ ತರುಣ
ಬರಹಗಾರು ಹಿಡಿಯಬೇಕಾದ ದಾರಿ ಯಾವುದು ಎಂದು ಕೇಳಿದರೆ ನಾನು ಹೆಮಿಂಗ್-ವೇ
ಅನ್ನುತ್ತೇನೆ.
Saturday, March 17, 2012
ಕೊಟ್ಟ ಮಾತು, ಕಾಣದ ಜಗತ್ತು ಮತ್ತು ಅಹಂಕಾರವೆಂಬ ಕನ್ನಡಕ
ಇತ್ತೀಚೆಗೆ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡಕೊಂಡ ‘ದಿ ಸೆಪರೇಷನ್’ ಇರಾನಿ ಚಲನಚಿತ್ರದಲ್ಲೊಂದು ಸನ್ನಿವೇಶವಿದೆ. ಗಂಡ-ಹೆಂಡತಿ ಜಗಳಾಡಿದ್ದಾರೆ. ಇನ್ನೇನು ವಿವಾಹ ವಿಚ್ಛೇದನ ಪಡಕೊಳ್ಳುವ ಹಂತದಲ್ಲಿದ್ದಾರೆ. ಹನ್ನೊಂದು ವರ್ಷದ ಮಗಳಿಗೆ ಅಪ್ಪನೂ ಬೇಕು, ಅಮ್ಮನೂ ಬೇಕು. ಈ ಮಧ್ಯೆ ಅಪ್ಪ ಕೊಲೆ ಆರೋಪಕ್ಕೆ ಸಿಕ್ಕಿಹಾಕಿಕೊಂಡು ಕೈದಿಯಾಗಿದ್ದಾನೆ. ಅಪ್ಪನನ್ನು ನೋಡಲು ಹೋಗುವ ಮಗಳು, ಅಪ್ಪನ ಹತ್ತಿರ ಹೇಳ್ತಾಳೆ: ‘ಇದೆಲ್ಲ ಸಾಕು ಅಪ್ಪಾ.. ಬಿಟ್ಟುಬಿಡಿ.. ಅಮ್ಮನೂ ನೀವೂ ಒಂದಾಗಿ’. ಅವಳ ಸಮಾಧಾನಕ್ಕೆಂಬಂತೆ ಅಪ್ಪ ‘ಸರಿ’ ಅನ್ನುತ್ತಾನೆ. ಹಾಗಂತ ಮಾತುಕೊಡಿ ಅನ್ನುತ್ತಾಳೆ ಮಗಳು. ಅಪ್ಪ ಒಂದಷ್ಟು ಯೋಚಿಸಿ ಪ್ರಾಮಿಸ್ ಅಂತ ಕೈ ಎತ್ತುತ್ತಾನೆ. ಕೈ ಎತ್ತಲು ಸಾಧ್ಯವಾಗುವುದಿಲ್ಲ ಅವನಿಗೆ. ನೋಡಿದರೆ, ಅವನ ಬಲಗೈಗೂ ಮತ್ತೊಬ್ಬ ಕೈದಿಯ ಎಡಗೈಗೂ ಸೇರಿಸಿ ಬೇಡಿ ಹಾಕಲಾಗಿದೆ. ಪಕ್ಕದ ಕೈದಿ ಸಣ್ಣಗೆ ನಗುತ್ತಾ ‘ಯಾರಿಗೆ ಏನಂತ ಪ್ರಾಮಿಸ್ ಮಾಡ್ತಿದ್ದೀಯಾ ನೀನು?’ ಎಂದು ಅರ್ಥಪೂರ್ಣವಾಗಿ ನಗುತ್ತಾನೆ.
ಸುಮಾರು ಹದಿನೈದು ಸೆಕೆಂಡುಗಳ ದೃಶ್ಯ ಅದು. ನಾವು ಬದುಕುತ್ತಿರುವ ಒಟ್ಟಾರೆ ಜಗತ್ತಿನಲ್ಲಿ ಯಾರಿಗೆ ಯಾರೂ ಯಾವ ಭರವಸೆಯನ್ನೂ ಕೊಡಲಾರೆವು ಅನ್ನುವುದನ್ನು ಅದು ಅಚ್ಚುಕಟ್ಟಾಗಿ ಹೇಳುತ್ತದೆ.
ನಾವು ಅಂದಕೊಂಡದ್ದನ್ನು ಮಾಡಲಿಕ್ಕಾಗದ ಸನ್ನಿವೇಶ ಪದೇ ಪದೇ ನಮಗೆ ಎದುರಾಗುತ್ತಲೇ ಇರುತ್ತವೆ. ಸಂಬಂಧವನ್ನು ವ್ಯಕ್ತಿತ್ವವನ್ನು ಇದು ಬಾಧಿಸುತ್ತಲೇ ಹೋಗುತ್ತದೆ. ಸುಮ್ಮನೆ ಯೋಚಿಸಿ ನೋಡಿ. ಹತ್ತಿಪ್ಪತ್ತು ವರ್ಷಗಳ ಹಿಂದೆ, ಇಂಥ ಹೊತ್ತಿಗೆ ಇಂಥ ಜಾಗಕ್ಕೆ ಬರುತ್ತೇನೆ ಅಂತ ಹೇಳಿದರೆ, ಅಂಥ ಹೊತ್ತಿಗೆ ನಾವು ಹೋಗುವುದು ಸಾಧ್ಯವಿತ್ತು. ಆಗ ನಾವು ನಂಬಿಕೊಂಡಿದ್ದದ್ದು ನಮ್ಮ ಕಾಲ್ನಡಿಗೆಯನ್ನು. ಇವತ್ತು ವಿಮಾನ, ವೇಗವಾಗಿ ಸಾಗುವುದಕ್ಕೆ ಚತುಷ್ಪಥ ರಸ್ತೆ, ಯಮವೇಗದಲ್ಲಿ ಚಲಿಸುವ ಕಾರುಗಳಿದ್ದರೂ ಕೂಡ ಹೇಳಿದ ಸಮಯಕ್ಕೆ ತಲುಪುತ್ತೇವೆ ಅನ್ನುವುದು ಖಾತ್ರಿಯಿಲ್ಲ.
ನಾವು ಹೇಗೆ ಬಂದಿಯಾಗುತ್ತಿದ್ದೇವೆ ಯೋಚಿಸಿ. ಕೆಲವು ದಿನಗಳ ಹಿಂದೆ ಅಚಾನಕ್ ಆಗಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ವಕೀಲರು ರಸ್ತೆ ತಡೆ ಮಾಡಿದರು. ಆವತ್ತು ಸಾವಿರಾರು ಮಂದಿ, ಆರೆಂಟು ಗಂಟೆಗಳ ಕಾಲ ರಸ್ತೆಯಲ್ಲಿ ಕಾರೊಳಗೆ ಉಳಿದುಕೊಳ್ಳಬೇಕಾಗಿ ಬಂತು. ಇಂಥ ಪರಿಸ್ಥಿತಿ ಕೇವಲ ಹೊರಗಿನ ಓಡಾಟದಲ್ಲಿ ಮಾತ್ರವಲ್ಲ, ಸಂಬಂಧಗಳಲ್ಲೂ ನಡೆಯುತ್ತಿರುತ್ತೆ. ಹೇಳಬೇಕಾದ್ದನ್ನು ಹೇಳಲಾಗದೇ ಒದ್ದಾಡುತ್ತೇವೆ. ಹೇಳಬಾರದ್ದನ್ನು ಹೇಳಿಬಿಡುತ್ತೇವೆ. ಅದನ್ನು ಹೇಳಬೇಕಾಗಿತ್ತು, ಇದನ್ನು ಹೇಳಬಾರದಿತ್ತು ಅಂದುಕೊಳ್ಳುತ್ತೇವೆ. ಅಷ್ಟು ಹೊತ್ತಿಗೆ ಸಂಬಂಧ ಕೆಟ್ಟುಹೋಗಿ, ಏನೇನೋ ಆಗಿಹೋಗಿರುತ್ತದೆ.
ಎಲ್ಲರೂ ಸ್ವತಂತ್ರರಾಗಿ ಹುಟ್ಟುತ್ತಾರೆ, ನಂತರ ನೋಡಿದರೆ ಕೈಕಾಲುಗಳಿಗೆ ಕೋಳ ಹಾಕಿಕೊಂಡಿರುತ್ತಾರೆ ಎನ್ನುವ ಮಾತಿದೆ. ನಮ್ಮ ವಿದ್ಯೆ, ವೃತ್ತಿ, ಊರು, ಆಕಾಂಕ್ಷೆ, ಅಹಂಕಾರ, ಪ್ರತಿಷ್ಠೆ, ಹುದ್ದೆ, ಸಂಬಂಧ- ಎಲ್ಲವೂ ನಮ್ಮನ್ನು ಬಂಧಿಸುತ್ತಲೇ ಹೋಗುತ್ತವೆ. ಇವುಗಳಿಂದ ಬಿಡುಗಡೆ ಹೊಂದುತ್ತೇವೆ ಅಂತ ಹೊರಡುವುದೂ ಒಂದು ಬಂಧನವೇ. ಬಿಡುಗಡೆಗಾಗಿ ಹಾತೊರೆಯತೊಡಗಿದರೆ ನೀವು ಬಂಧನದಲ್ಲಿದ್ದೀರಿ ಅಂತಲೇ ಅರ್ಥ. ಕಂಬವನ್ನು ಗಟ್ಟಿಯಾಗಿ ಅಪ್ಪಿಕೊಂಡು ನನ್ನನ್ನು ಬಿಡಿಸಿ ಅಂತ ಸಹಾಯಕ್ಕಾಗಿ ಕೂಗಿಕೊಂಡಂತೆ. ಕಂಬವನ್ನು ಹಿಡಕೊಂಡಿರುವವರು ನೀವು. ಕಂಬ ಬಿಡಬೇಕು ಎಂಬ ಆಸೆ, ಬಿಡುವುದಕ್ಕೆ ಭಯ. ಯಾರಾದರೂ ಬಂದು ಬಿಡಿಸಲಿ ಎಂಬ ಆಸೆ.
ಕಥಾಸರಿತ್ಸಾಗರದಲ್ಲಿ ಒಂದು ಚೆಂದದ ಕತೆಯಿದೆ. ದುರಾಸೆಯನ್ನು ಪ್ರತಿನಿಧಿಸುವ ಕತೆ ಅದಾದರೂ, ಅದನ್ನೂ ಮೀರಿದ ಒಂದು ಅರ್ಥ ಅದಕ್ಕಿದ್ದಂತಿದೆ. ಒಬ್ಬ ವ್ಯಕ್ತಿಗೆ ಗುರುವೊಬ್ಬ ಶ್ರೀಮಂತನಾಗುವ ವಿಧಾನ ಹೇಳುತ್ತಾನೆ. ಬೆಟ್ಟದ ದಾರಿಯಲ್ಲಿ ನಡೆಯುತ್ತಾ ಹೋಗು. ಮೊದಲು ಬೆಳ್ಳಿ ಸಿಗುತ್ತದೆ, ನಂತರ ಬಂಗಾರ ಸಿಗುತ್ತದೆ, ಆನಂತರ ಅದಕ್ಕಿಂತಲೂ ಹೆಚ್ಚಿನದು ಸಿಗುತ್ತದೆ. ಹುಡುಕುತ್ತಾ ಹೋಗು ಅನ್ನುತ್ತಾನೆ. ನಿನಗೆಷ್ಟು ಬೇಕೋ ಅಷ್ಟೇ ತೆಗೆದುಕೋ, ಅಲ್ಪತೃಪ್ತಿಯೇ ಸೌಭಾಗ್ಯ ಅನ್ನುತ್ತಾನೆ.
ಆತ ಬೆಟ್ಟವೇರುತ್ತಾನೆ. ಮೊದಲು ಬೆಳ್ಳಿಯ ನಾಣ್ಯ ಸಿಗುತ್ತವೆ. ಇದು ಬೇಡ, ಬಂಗಾರದ ನಾಣ್ಯವೇ ಸಿಗಲಿ ಅಂತ ಮತ್ತೂ ಮುಂದೆ ಹೋಗುತ್ತಾನೆ. ಬಂಗಾರದ ಭಂಡಾರ ಕಾಣಿಸುತ್ತದೆ. ಮುಂದೆ ಇದಕ್ಕಿಂತಲೂ ಹೆಚ್ಚಿನದು ಸಿಗಬಹುದು ಅಂದುಕೊಂಡು ಮತ್ತಷ್ಟು ಎತ್ತರಕ್ಕೆ ಹೋದರೆ, ಅಲ್ಲೊಬ್ಬ ಬಿರುಬಿಸಿಲಲ್ಲಿ ನಿಂತಿದ್ದಾನೆ. ಅವನ ನೆತ್ತಿಯ ಮೇಲೆ ಚಕ್ರವೊಂದು ತಿರುಗುತ್ತಿದೆ. ಅವನನ್ನು ಈತ ಕೇಳುತ್ತಾನೆ, ಬೆಳ್ಳಿಗಿಂತಲೂ ಬಂಗಾರಕ್ಕಿಂತಲೂ ಹೆಚ್ಚಿನದು ಇಲ್ಲೇನು ಸಿಗುತ್ತದೆ?
ಥಟ್ಟನೆ ಆ ಚಕ್ರ ಅವನ ತಲೆಯಿಂದ ಇವನ ನೆತ್ತಿಗೆ ಬಂದು ಕೂರುತ್ತದೆ. ಆತ ಹೇಳುತ್ತಾನೆ. ನಾನೂ ನಿನ್ನ ಹಾಗೆ ದುರಾಸೆಯಿಂದ ಬಂದೆ. ಇನ್ನೊಬ್ಬ ದುರಾಸೆಯ ಮನುಷ್ಯ ಬರುವ ತನಕ ನೀನೂ ಕಾಯುತ್ತಿರು. ಅವನು ಬಂದು ನಿನ್ನನ್ನು ಬಿಡುಗಡೆ ಮಾಡುತ್ತಾನೆ. ನಾನು ಐದು ವರ್ಷ ಈ ಚಕ್ರ ನೆತ್ತಿಯಲ್ಲಿಟ್ಟು ಕಾದಿದ್ದೆ.
ಇವತ್ತಿನ ಪರಿಸ್ಥಿತಿಯಲ್ಲಿ ಐದು ವರುಷ ಕಾಯುವ ಅಗತ್ಯವೇ ಇಲ್ಲವೇನೋ? ಐದೈದು ಸೆಕೆಂಡಿಗೊಬ್ಬರು ಚಕ್ರಹೊರುವುದಕ್ಕೆ ಸಿಗುತ್ತಿದ್ದರು. ದುರಾಸೆ ನೆತ್ತಿಯ ಮೇಲಿನ ಚಕ್ರದಂತೆ, ಸುತ್ತುತ್ತಲೇ ಇರುತ್ತದೆ. ಅದು ಸುತ್ತುತ್ತಿದ್ದಷ್ಟೂ ದಿನ ಎಲ್ಲವನ್ನೂ ಮರೆಸುತ್ತದೆ. ನಾವು ದಾಪುಗಾಲಿಟ್ಟು ಏಕಮುಖಿಗಳಾಗಿ ಅದರತ್ತ ಧಾವಿಸುತ್ತಲೇ ಇರುತ್ತೇವೆ. ಕೊನೆಗೆ ನಮಗೆ ಸಿಗುವುದು ಕೇವಲ ನೆತ್ತಿಯ ಮೇಲೆ ಸಿಗುವ ಚಕ್ರ.
ಮತ್ತೆ ಭರವಸೆ ಮಾತಿಗೆ ಮರಳಿದರೆ, ನಾವು ಇವತ್ತು ಯಾರಿಗೆ ಯಾವ ಭರವಸೆ ಕೊಡಬಲ್ಲೆವು. ಕೊಟ್ಟ ಮಾತನ್ನು ಉಳಿಸಿಕೊಳ್ಳಬಲ್ಲೆವಾ? ಒಂದು ಸಣ್ಣ ಮಾತನ್ನು ಉಳಸಿಕೊಳ್ಳುವುದು ನಮ್ಮ ಕೈಲಿ ಸಾಧ್ಯವಾದೀತಾ? ಅಮ್ಮನೊಂದಿಗೆ ಜಗಳ ಆಡೋಲ್ಲ ಅಂತ ಅಪ್ಪ ಮಗುವಿಗೆ ಹೇಳುವುದಕ್ಕೆ ಸಾಧ್ಯವಾ? ಆ ಮಗುವಿನ ಮೇಲೆ ಎಷ್ಟೊಂದು ಒತ್ತಡಗಳಿರುತ್ತವೆ? ಅವಳನ್ನು ನಾವು ಎಂಥ ಪರಿಸರದಲ್ಲಿ ಬೆಳೆಸುತ್ತಿದ್ದೇವೆ? ಆ ಮಕ್ಕಳ ಸಮಸ್ಯೆಗಳೇನು?
ಪೀಳಿಗೆಯ ಅಂತರ ಎಂದಿಗಿಂತ ಹೆಚ್ಚಾಗಿದೆ. ಮೊದಲು ನಲವತ್ತು ವರ್ಷದ ಅಪ್ಪ, ಹತ್ತು ವರ್ಷದ ಮಗನ ನಡುವೆ ಅಂಥ ಅಂತರ ಇರಲಿಲ್ಲ. ಅಪ್ಪನ ಆಸಕ್ತಿಗಳೂ, ಪ್ರೀತಿಗಳೂ, ಆಲೋಚನೆಗಳೂ ಮಕ್ಕಳದ್ದೂ ಆಗಿದ್ದವು. ಪರಿಸರದಲ್ಲಿ ಅಂಥ ಹೇಳಿಕೊಳ್ಳಬಹುದಾದ ಯಾವ ಬದಲಾವಣೆಗಳೂ ಆಗುತ್ತಿರಲಿಲ್ಲ. ಹೀಗಾಗಿ ಅಪ್ಪ ತಿನ್ನುತ್ತಿದ್ದ, ಅಮ್ಮ ಪ್ರೀತಿಯಿಂದ ಮಾಡುತ್ತಿದ್ದ ಗಂಜಿ, ದೋಸೆ, ಉಪ್ಪಿಟ್ಟು ಇಡೀ ಮನೆಮಂದಿಗೆಲ್ಲ ಇಷ್ಟವಾಗುತ್ತಿತ್ತು. ಇವತ್ತು ಏಳು ವರ್ಷದ ಮಗು ಉಪ್ಪಿಟ್ಟಾ ಅಂತ ವರಾತ ತೆಗೆದು ಸೂರು ಹರಿಯುವಂತೆ ಕೂಗಾಡುತ್ತದೆ.
-2-
ಇದ್ದಕ್ಕಿದ್ದ ಹಾಗೆ, ಒಂದು ಬೆಳಗ್ಗೆ ಅವನಿಗೆ ಎಲ್ಲವೂ ಮಂಜು ಮಂಜಾಗಿ ಕಾಣಿಸಲಾರಂಭಿಸುತ್ತದೆ. ಮಗಳ ಮುಖದ ಭಾವನೆಗಳು ಗೋಚರಿಸುವುದಿಲ್ಲ. ಹೆಂಡತಿಯ ಮುಗುಳ್ನಗೆ ಕಾಣಿಸುವುದಿಲ್ಲ. ಪಕ್ಕದ ಮನೆಯವನ ಅಸಹನೆ ಕಣ್ಣಿಗೆ ಕಾಣುವುದಿಲ್ಲ. ಎಲ್ಲವೂ ಮಂಜು ಮಂಜು. ತನಗೇನೋ ಆಗಿದೆ ಎಂಬ ಗಾಬರಿಯಲ್ಲಿ ಆತ ಒಂದೆರಡು ದಿನ ಕಳೆಯುತ್ತಾನೆ. ಕಣ್ಣುಜ್ಜಿಕೊಂಡು ಕಣ್ಣಿಗೆ ಅದ್ಯಾವುದೋ ಔಷಧಿ ಬಿಟ್ಟುಕೊಂಡು ಎಲ್ಲವನ್ನೂ ಸೂಕ್ಷ್ಮವಾಗಿ ನೋಡಲು ಯತ್ನಿಸುತ್ತಾ ಮತ್ತೊಂದಷ್ಟು ದಿನ ಕಳೆಯುತ್ತಾನೆ. ಕ್ರಮೇಣ ಅವನಿಗೆ ದಿನಪತ್ರಿಕೆ ಓದುವುದೂ ಕಷ್ಟವಾಗುತ್ತದೆ. ಹಾಳಾಗಿ ಹೋಗಲಿ ಅಂತ ಅದನ್ನೂ ಬಿಟ್ಟುಬಿಡುತ್ತಾನೆ.
ಹೀಗೆ ಸ್ವಲ್ಪ ದಿನ ಕಳೆಯುತ್ತಿದ್ದಂತೆ ಅವನಿಗೆ ಇಡೀ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ. ಆಡಿದ ಮಾತುಗಳಷ್ಟೇ ಕಿವಿಗೆ ಬೀಳುತ್ತವೆಯೇ ಹೊರತು, ಯಾರ ಮುಖದ ಭಾವನೆಗಳೂ ಅವನಿಗೆ ಕಾಣಿಸದು. ಹೀಗಾಗಿ ಮಾತುಗಳ ಹಿಂದಿನ ಮರ್ಮ ಅವನಿಗೆ ಹೊಳೆಯುವುದು ನಿಂತುಹೋಗುತ್ತದೆ. ಮಾತಿಗೆ ಮಾತಿಗೆಷ್ಟಿದೆಯೋ ಅಷ್ಟೇ ಅರ್ಥ. ಅದರಾಚೆ ಏನಿಲ್ಲ. ಉಪ್ಪಿಟ್ಟು ಮಾಡಿದ್ದೀನಿ, ತಿಂದ್ಕೊಂಡು ಹೋಗಿ ಅಂತ ಹೆಂಡತಿ ಹೇಳಿದರೆ, ಅವಳು ಉಪ್ಪಿಟ್ಟು ಮಾಡಿದ್ದಾಳೆ, ತಾನು ತಿಂದು ಹೋಗಬೇಕು ಎನ್ನುವುದು ಮಾತ್ರ ವಾಚಾಮಗೋಚರ. ನೀವು ದುಡಿಯೋ ಸಂಬಳಕ್ಕೆ, ನಿಮ್ಮ ಯೋಗ್ಯತೆಗೆ ಇನ್ನೇನು ತಾನೇ ಮಾಡಲಾದೀತು ಎಂಬ ಸಣ್ಣ ಅಸಹನೆ ಅವಳ ತುಟಿಕೊಂಕಲ್ಲೋ, ಕಣ್ಣಂಚಲ್ಲೋ ಹಣಿಕಿ ಹಾಕಿದರೆ ಅವನಿಗೆ ಅದು ಕಾಣಿಸದಂಥ ಸುಖದ ಸ್ಥಿತಿ. ಪತ್ರಿಕೆಯನ್ನಂತೂ ಓದುವಂತಿಲ್ಲ. ಹೀಗಾಗಿ ಜಗತ್ತೇ ಸುಂದರ.
ಹೀಗೆ ಅತ್ಯಂತ ಸುಖವಾಗಿರುವ ಅವನನ್ನು ಗೆಳೆಯನೊಬ್ಬ ಭೇಟಿಯಾಗುತ್ತಾನೆ. ನಿನಗೆ ಬಂದಿರೋದು ಚಾಳೀಸು. ನಲವತ್ತಕ್ಕೆ ಹೀಗೆ ಕಣ್ಣು ಮಂಜಾಗತ್ತೆ. ಕನ್ನಡಕ ಹಾಕಿಕೋ ಅಂತ ಅವನು ಸಲಹೆ ಕೊಟ್ಟದ್ದೂ ಅಲ್ಲದೇ, ತಾನೇ ಒಂದು ಕನ್ನಡಕವನ್ನೂ ತಂದುಕೊಡುತ್ತಾನೆ. ಅದನ್ನು ಹಾಕಿಕೊಂಡದ್ದೇ ತಡ ಅವನಿಗೆ ಕಾಣಿಸೋ ಜಗತ್ತೇ ಬದಲಾಗುತ್ತದೆ. ಎಲ್ಲವೂ ನಿಚ್ಚಳವಾಗಿ, ತಾನು ಇದುವರೆಗೆ ನೋಡಿದ್ದಕ್ಕಿಂತ ಸ್ಪಷ್ಟವಾಗಿ ಕಾಣಿಸತೊಡಗಿ ಗಾಬರಿಯಾಗುತ್ತದೆ.
ಬೆಳ್ಳಂಬೆಳಗ್ಗೆ ಎದ್ದು ಕಾಫಿ ತಂದಿಟ್ಟುಹೋಗುವ ಹೆಂಡತಿಯ ಮುಖದಲ್ಲಿ ಧುಮುಧುಮು ಸಿಟ್ಟಿದೆ. ಹರಿದ ಕಾಲುಚೀಲ ಹಾಕಿಕೊಂಡು ಸ್ಕೂಲಿಗೆ ಹೊರಡುವ ಮಗನ ಮುಖದಲ್ಲಿ ನಿರ್ಲಕ್ಷವೂ ಅಸಹನೆಯೂ ಇದೆ. ಒಂದೊಳ್ಳೇ ಮೊಬೈಲು ಕೊಡಿಸದ ಅವನ ಬಗ್ಗೆ ಮಗಳ ಕಣ್ಣಲ್ಲಿ ಇವನೊಬ್ಬ ಕೈಲಾಗದವನು ಎಂಬ ಭಾವವಿದೆ. ಪಕ್ಕದ ಮನೆಯಾತನ ಮುಖದಲ್ಲಿ ಇವನ ಬಗ್ಗೆ ವಿನಾಕಾರಣ ಸಿಟ್ಟಿದೆ. ಎದುರು ಮನೆಯ ಶ್ರೀಮಂತ ತನ್ನನ್ನು ಕ್ರಿಮಿಯಂತೆ ನೋಡುತ್ತಾನೆ. ಆಫೀಸಿನಲ್ಲಿ ತನ್ನ ಬಾಸು, ಯಾವಾಗ ಇವನು ಸಾಯುತ್ತಾನೋ ಎಂಬ ಮುಖ ಮಾಡಿಕೊಂಡು ಕೂತಿದ್ದಾನೆ.
ಇದ್ದಕ್ಕಿದ್ದಂತೆ ಪ್ರತಿಯೊಬ್ಬರ ಮಾತಿನ ಹಿಂದಿರುವ ಹುನ್ನಾರಗಳೂ ಅವನಿಗೆ ಹೊಳೆಯುತ್ತಾ ತಿಳಿಯುತ್ತಾ ಹೋಗುತ್ತವೆ. ಕ್ರಮೇಣ ಅವನು ಅದನ್ನು ಮೀರಲು ಯತ್ನಿಸುತ್ತಾನೆ. ಎಷ್ಟೇ ಪ್ರಯತ್ನಪಟ್ಟರೂ ಅದು ಅವನಿಗೆ ಸಾಧ್ಯವಾಗುವುದೇ ಇಲ್ಲ. ತನ್ನವರ ಅಸಹನೆ, ಅಲಕ್ಷ, ಸಿಟ್ಟನ್ನು ಸಿಟ್ಟಿನ ಮೂಲಕ ಎದುರಿಸಲು ಹೋಗುತ್ತಾನೆ. ಪರಿಸ್ಥಿತಿ ಮತ್ತಷ್ಟು ಕಂಗೆಡುತ್ತದೆ. ಕ್ರಮೇಣ ಅವನು ಕಂಗಾಲಾಗುತ್ತಾ ಹೋಗುತ್ತಾನೆ. ತಾನು ಅಸಹಾಯಕ ಎಂಬ ಭಾವನೆ ಅವನಲ್ಲಿ ಬಲವಾಗುತ್ತಾ ಹೋಗಿ, ಕೊನೆಗೊಂದು ದಿನ ತಾನು ಈ ಜಗತ್ತಿನಲ್ಲಿ ಇರಲು ಅರ್ಹನಲ್ಲ ಅನ್ನಿಸುತ್ತದೆ.
ಅದೇ ಸಂಜೆ ಅವನು ಆಫೀಸಿನಿಂದ ಬರುತ್ತಿರಬೇಕಾದರೆ, ಯಾರಿಗೋ ಡಿಕ್ಕಿ ಹೊಡೆಯುತ್ತಾನೆ. ಕನ್ನಡಕ ಬಿದ್ದು ಒಡೆದುಹೋಗುತ್ತದೆ. ಇಡೀ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ. ಆಮೇಲೆ ಅವನು ಸುಖವಾಗಿರುತ್ತಾನೆ.
ತುಂಬ ವಿವರವಾಗಿ ಗಮನಿಸುವುದು ಕೂಡ ಅಪಾಯಕಾರಿ. ಒಬ್ಬ ಲೇಖಕ, ಕತೆಗಾರ ಮತ್ತೊಬ್ಬರ ಮನಸ್ಸಿನ ಒಳಗೆ ಹೊಕ್ಕಂತೆ ಮತ್ಯಾರೂ ಹೊಗಲಾರರು. ಹಾಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಮತ್ತೊಂದು ಜಗತ್ತೇ ಎದುರಾಗುತ್ತದೆ. ವರ್ತಮಾನದ ವಿನಯವಂತ ಜಗತ್ತು ಮತ್ತು ಒಳಗಿನ ಅಹಂಕಾರಿ ಜಗತ್ತು. ಹೊರಗಿನ ಧೈರ್ಯವಂತ ಜಗತ್ತು ಮತ್ತು ಒಳಗಿನ ಹಿಂಜರಿಕೆಯ ಲೋಕ, ಹೊರಗಿನ ಡೌಲಿನ ಪ್ರಪಂಚ, ಒಳಗಿನ ಕೀಳರಿಮೆಯ ನೆಲ- ಯಾವ ಹಂತದಲ್ಲಿ ಮುಖಾಮುಖಿ ಆಗುತ್ತದೋ ಗೊತ್ತಿಲ್ಲ. ಹಾಗೆ ನಮ್ಮ ಹೊರಜಗತ್ತು ಮತ್ತು ಒಳಜಗತ್ತು ಎದುರುಬದುರಾದಾಗ ಘರ್ಷಣೆ ತಪ್ಪಿದ್ದಲ್ಲ. ಆ ಘರ್ಷಣೆಯಲ್ಲಿ ಇಬ್ಬರಲ್ಲೊಬ್ಬ ಸಾಯಲೇಬೇಕು.
ಒಳಗಿನವನು ಸತ್ತರೆ, ಒಳಜಗತ್ತು ಶೂನ್ಯ. ಹೊರಗಿನವನು ಸತ್ತರೆ ಬಂಧುಮಿತ್ರರು ದೂರದೂರ. ಇವೆರಡರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿತರೆ ನಾಜೂಕಯ್ಯ.
ಅಂತರಂಗದ ಅರಿವು ಬಹಿರಂಗದ ಕ್ರಿಯೆ ಆಗುವ ಕ್ಷಣ ಯಾವುದು?
Making of Seperation
Monday, February 6, 2012
ಹೂವು ತಂದವನಿಗೆ ವಯಸ್ಸಾಗಿತ್ತು, ಕಾಯುತ್ತಾ ಕೂತವಳು ಮುದುಕಿಯಾಗಿದ್ದಳು
ಮುಸ್ಸಂಜೆಗಳು ಅಪಾಯಕಾರಿ. ಹಗಲೂ ಅಲ್ಲದ ರಾತ್ರಿಯೂ ಅಲ್ಲ ಮುಸ್ಸಂಜೆಗಳಲ್ಲಿ ಮನಸ್ಸು ಇದ್ದಕ್ಕಿದ್ದಂತೆ ಮುದುಡಿಬಿಡುತ್ತದೆ. ಆಫೀಸು ಬಿಟ್ಟು ಮನೆಗೆ ಹೊರಟಾಗ, ಮನೆಯಲ್ಲೇ ಸುಮ್ಮನೆ ಕೂತಾಗ ಇದ್ದಕ್ಕಿದ್ದಂತೆ ಅದೆಂಥದ್ದೋ ಖಿನ್ನತೆ. ಇಳಿಸಂಜೆಯ ಮೌನದೊಳಗೊಂದು ಸ್ಪೋಟಿಸದ ಆರ್ತನಾದ.
ಲೈಫ್ ಈಸ್ ಎಲ್ಸ್ವೇರ್.
ನನ್ನ ಬದುಕು ಇನ್ನೆಲ್ಲೋ ಇದೆ. ಬೇರೇನನ್ನೋ ನಾನು ಮಾಡಬೇಕಾಗಿತ್ತು. ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದೇನೆ. ಇದೂ ಒಂದು ಬದುಕಾ? ಮನಸ್ಸೆಂಬ ಸಮುದ್ರ ಬೇಡದ ಯೋಚನೆಗಳನ್ನು ಬುದ್ಧಿತೀರಕ್ಕೆ ತಂದು ಎಸೆಯುತ್ತದೆ. ಹಿಂತಿರುಗಿ ನೋಡಿದರೆ ರಹೀನ ಕಬ್ಬಿನಜಲ್ಲೆಯಂತೆ ನಿನ್ನೆಗಳ ರಾಶಿ. ಮುಂದಕ್ಕೆ ನೋಡಿದರೆ ಚಾಚಿಕೊಂಡ ಮೂರುದಾರಿಗಳು. ಸಂದಿಗ್ಧದ ಮೂರುಸಂಜೆ!
ಸಾಧನೆಗಳೇ ಬದುಕು ಅನ್ನುವುದನ್ನು ಬಾಲ್ಯದಿಂದಲೇ ನಮ್ಮ ತಲೆಗೆ ತುಂಬುತ್ತಲೇ ಬಂದಿದ್ದಾರೆ. ಏನಾದರೂ ಮಾಡು ಅನ್ನುವುದಕ್ಕಿಲ್ಲಿ ಅರ್ಥವಿಲ್ಲ. ಇಂಥದ್ದು ಮಾಡಿದರೆ, ಇಂಥದ್ದು ಸಿಗುತ್ತದೆ ಎನ್ನುವುದು ಖಚಿತವಾಗಬೇಕು. ಪಂಪನನ್ನೋದಿದರೆ ಕನ್ನಡ ಎಂಎ. ಷೇಕ್ಸ್ಪಿಯರ್ ಕಲಿತರೆ ಇಂಗ್ಲಿಷ್ ಎಂಎ. ಎಂಬಿಬಿಎಸ್ ಓದಿದರೆ ಕತ್ತಿಗೆ ಸ್ಟೆತಾಸ್ಕೋಪು. ಅಲ್ಲಿಗೆ ಓದುವ ಖುಷಿಯನ್ನು ಗುರಿಯ ಚಿಂತೆ ಕಸಿದುಕೊಂಡು ಬಿಡುತ್ತದೆ. ಪ್ರೀತಿಸುವುದು ಯಾಕೆ ಎಂದರೆ ಮದುವೆ ಆಗುವುದಕ್ಕೆ ಎಂದಂತೆ.
ಪಯಣದ ಸುಖವನ್ನು ಅನುಭವಿಸು ಅಂತ ನಮಗೆ ಹೇಳುತ್ತಲೇ ಬಂದಿದ್ದಾರೆ. ಗುರಿ ಮುಖ್ಯವಲ್ಲ, ದಾರಿ ಅನ್ನುವುದನ್ನು ಕೂಡ. ಹಾಗೆ ಹೇಳುವುದು ಸುಲಭ. ದಾರಿ ಸವೆಸದವರೂ ಆ ಮಾತು ಹೇಳಬಹುದು. ವನು ಮತ್ತು ಅವಳು ಎಲ್ಲೋ ಸಂಧಿಸಿದರು. ಒಬ್ಬರನ್ನೊಬ್ಬರು ಮೆಚ್ಚಿಕೊಂಡರು. ಅವನಲ್ಲಿ ಅವಳೇನು ಕಂಡಳೋ ಅವಳಿಗಷ್ಟೇ ಗೊತ್ತು, ಅವಳಲ್ಲಿ ಅವನಿಗೇನು ಕಾಣಿಸಿತೋ ಅವನೊಬ್ಬನೇ ಬಲ್ಲ. ಕಾಲದ ಅಪೂರ್ವ ನಟನೆಯಲ್ಲಿ ಅವರಿಬ್ಬರೂ ಕಾಲಾತೀತ ಆನಂದದಲ್ಲಿ ತೇಲಾಡಿದರು. ಕಾಡುಮೇಡು ಸುತ್ತಾಡಿದರು. ಪ್ರೇಮ ದಾಹವನ್ನು ಇಂಗಿಸಿತ್ತು. ಪ್ರೀತಿ ಆಯಾಸವನ್ನು ನೀಗಿಸಿತ್ತು. ಹಾಗೆ ನಡೆಯುತ್ತಾ ಬಂದರೆ ಎದುರಿಗೊಂದು ದೊಡ್ಡ ಕೊಳ. ಆ ಕೊಳದ ನಡುವಲ್ಲೊಂದು ಪುಟ್ಟ ದ್ವೀಪ. ಆ ದ್ವೀಪದ ನಡುವೆ ಒಂದು ಗಿಡ. ಅದರಲ್ಲಿ ಅರಳಿದ ಬಂಗಾರಬಣ್ಣದ ಹೂವು. ಆ ಹೂವಿನ ಪರಿಮಳ ಮೈಲುಗಟ್ಟಲೆ ಹಾದು ಅವಳನ್ನು ಪುಲಕಗೊಳಿಸಿತು.
ನಂಗೆ ಆ ಹೂವು ಬೇಕು ಅಂದಳು.ದೋ ತಂದುಕೊಟ್ಟೆ, ಇಲ್ಲೇ ಕಾಯುತ್ತಿರು ಎಂದು ಅವನು ಕೊಳಕ್ಕೆ ಜಿಗಿದ. ಕೈ ಬೀಸುತ್ತಾ ಬೀಸುತ್ತಾ ಈಜಿದ. ಈಜುತ್ತಲೇ ಹೋದ. ಅವಳು ದಡದಲ್ಲಿ ಅವನ ಪ್ರೀತಿಯ ಆಳಕ್ಕೆ, ತೀವ್ರತೆಗೆ ಬೆರಗಾಗಿ ಕಾಯುತ್ತ ಕೂತಳು. ವನು ಈಜುತ್ತಿದ್ದ. ದ್ವೀಪ ದೂರದಲ್ಲಿ ಕಾಣಿಸುತ್ತಿತ್ತು. ಕಾಯುತ್ತಿದ್ದ ಅವಳು ನೆನಪಾಗುತ್ತಿದ್ದಳು. ಕೈ ಸೋಲುತ್ತಿತ್ತು. ಹಾಗೆ ಅದೆಷ್ಟು ಕಾಲ ಈಜಿದನೋ ಅವನಿಗೂ ಗೊತ್ತಿರಲಿಲ್ಲ. ಅವಳೆಷ್ಟು ಕಾಲ ಕಾದಿದ್ದಳೋ ಅವಳಿಗೂ ನೆನಪಿರಲಿಲ್ಲ. ಕಾಯುವುದು ಬೇಜಾರು ಅಂತ ಅವಳಿಗೂ ಅನ್ನಿಸಲಿಲ್ಲ. ಈಜುವುದು ಸುಸ್ತು ಅಂತ ಅವನೂ ಭಾವಿಸಲಿಲ್ಲ.ೊನೆಗೂ ದ್ವೀಪ ಸಮೀಪಿಸಿತು. ದೂರದಿಂದ ಕಂಡ ಹೂವು ಈಗ ಕೈಯಳತೆಯಲ್ಲಿ. ಅವನು ಲಗುಬಗೆಯಿಂದ ಹೋಗಿ ಆ ಘಮಘಮಿಸುವ ಹೂವನ್ನು ಸಮೀಪಿಸಿದ. ಒಂದಿಷ್ಟೂ ನಲುಗದಂತೆ ಅದನ್ನು ಕೊಯ್ದ. ಮತ್ತೆ ಕೊಳಕ್ಕೆ ಜಿಗಿದು ಈಜತೊಡಗಿದ. ಹೋದ ದಾರಿಯೇ ಮರಳಿ ಬರುವುದಕ್ಕೆ. ಹೋದಷ್ಟೇ ದೂರ ವಾಪಸ್ಸಾಗುವುದಕ್ಕೆ. ಮತ್ತೆ ಕಾಲಾತೀತನಾಗಿ ಈಜಿದ. ಅವಳ ಹಂಬಲವನ್ನು ಈಡೇರಿಸಿದ ತೃಪ್ತಿ ಅವನ ತೋಳುಗಳಿಗೆ ಬಲಕೊಟ್ಟಂತಿತ್ತು.ೊನೆಗೂ ಅವನು ಮರಳಿ ದಡ ಸೇರಿದಾಗ ಋತುಗಳು ಅರಳಿ, ಮರಳಿ, ಹೊರಳಿದ್ದವು. ಅವಳು ಕಲ್ಲಿನ ಮೇಲೆ ಕುಳಿತೇ ಇದ್ದಳು, ಕಾಯುತ್ತಾ. ಅವನಿಗಾಗಿ ಕಾಯುತ್ತಿದ್ದೇನೆ ಎನ್ನುವುದನ್ನೂ ಅವಳು ಮರೆತಂತಿತ್ತು. ಗೆದ್ದ ಹುಮ್ಮಸ್ಸಿನಲ್ಲಿ ಅವನು ಅವಳನ್ನು ಸಮೀಪಿಸಿದರೆ ಅವಳಲ್ಲ. ಅಲ್ಲಿ ಕೂತಿದ್ದವಳು ಮುಪ್ಪಡರಿದ ಹೆಂಗಸು. ಅವಳ ದೃಷ್ಟಿಯೂ ಮಸುಕಾಗಿತ್ತು. ಅವನು ಬಂದಿದ್ದೂ ಅವಳಿಗೆ ಕಾಣಿಸಿರಲಿಲ್ಲ. ವನು ದಿಗ್ಭ್ರಮೆಗೊಂಡು ತನ್ನನ್ನು ನೋಡಿಕೊಂಡ. ತೋಳುಗಳು ನಿರಿಗೆಗಟ್ಟಿದ್ದವು. ತಲೆ ಬೋಳಾಗಿತ್ತು. ಕೊಳದ ತಡಿಗೆ ಹೋಗಿ ನೀರಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡರೆ ಇಳಿಸಂಜೆಯಲ್ಲಿದ್ದ ಮುದುಕ, ಪ್ರತಿಫಲಿಸಿದ.
ತಾರುಣ್ಯ ಕಳಕೊಂಡ ಅವಳಿಗೆ ಅವನು ಆ ಹೂವು ಕೊಟ್ಟ. ಹೂ ತರಲು ಹೋದವನು ಅವನಲ್ಲ ಎಂದು ಅವಳು ಅಂದುಕೊಂಡಳು. ಹೂವು ಕೇಳಿದವಳು ಇವಳಲ್ಲ ಅನ್ನೋದು ಅವನಿಗೂ ಅನ್ನಿಸಿತು. ತಾನು ಕಾಯುತ್ತಲೇ ಇರಬೇಕಾಗಿತ್ತು ಎಂದು ಅವಳು, ನಾನು ಈಜುತ್ತಲೇ ಇರಬೇಕಾಗಿತ್ತು ಎಂದು ಅವನು ಅಂದುಕೊಂಡು ನಿಟ್ಟುಸಿರಿಟ್ಟರು. ಅವಳು ಕೈಯೆತ್ತಿ ದೂರದ ದ್ವೀಪ ತೋರಿಸುತ್ತ, ನಂಗೆ ಆ ಹೂವು ಬೇಕು ಅಂದಳು. ಅಲ್ಲಿ ಮತ್ತೊಂದು ಹೂವು ಆಗಷ್ಟೇ ಮೊಗ್ಗೆಯರಳಿಸುತ್ತಿತ್ತು. ಇದೋ ತಂದೆ, ಇಲ್ಲೇ ಕಾಯುತ್ತಿರು ಎಂದು ಹೇಳಿ ಅವನು ನೀರಿಗೆ ಜಿಗಿದ.
ಹೊಸ ಯೌವನದಲ್ಲಿ ಈಜುತ್ತಾ ಹೋದ. ಅವಳು ಹೊಸ ಕಾತರದಲ್ಲಿ ಲಂಗ ನಿರಿಗೆ ಸರಿಪಡಿಸಿಕೊಂಡು ಕಾಯುತ್ತಾ ಕೂತಳು.
-2-
ಬದುಕು ಒಡಂಬಡಿಕೆಯಲ್ಲಿ ಇದೆಯೋ, ಈಡೇರಿಕೆಯಲ್ಲೋ ಅನ್ನುವ ದ್ವಂದ್ವ ನಮ್ಮದು. ಅವನು ಈಜುತ್ತಿದ್ದಷ್ಟು ಹೊತ್ತೂ ಕಾಲ ಸ್ತಬ್ಧ. ಕಾಯುತ್ತಿದ್ದಷ್ಟು ಕಾಲವೂ ಅವಳ ಕೆನ್ನೆ ನುಣುಪು ಕಳಕೊಳ್ಳುವುದಿಲ್ಲ. ಅವಳ ಕಾಯುವಿಕೆ, ಅವನ ಕಾಯಕ- ಎರಡೂ ಮುಗಿದ ತಕ್ಷಣ ಅವತಾರ ಸಮಾಪ್ತಿಯಾಗುತ್ತದೆ. ಆ ಬದುಕಿಗೆ ಉದ್ದೇಶಗಳೇ ಇಲ್ಲ. ಜೀವಮಾನಪೂರ್ತಿ ಈ ಕ್ಷಣಕ್ಕೋಸ್ಕರ ಕಾಯುತ್ತಿದ್ದೆ ಅನ್ನಿಸುವಂಥ ಕ್ಷಣವೊಂದು ಥಟ್ಟನೆ ಹಾಜರಾಗಿಬಿಟ್ಟರೆ ಅಲ್ಲಿಗೆ ಮುಕ್ತಿ. ಜ್ಞಾನೋದಯ ಆಗುವ ತನಕ ಮಾತ್ರ ಹುಡುಕಾಟ. ಒಮ್ಮೆ ಅರಿವು ಬೆಳಕಾದರೆ, ಆಮೇಲೆ ಅರಿವೇ ಇರುವುದಿಲ್ಲ. ಇಡಿಯಾಗಿ ದಕ್ಕಿದ್ದು ಯಾವುದೂ ನಮ್ಮದಲ್ಲ. ದಕ್ಕುವ ತನಕದ ಹೋರಾಟವೇ ಬದುಕು. ಜೀವಿಸಿದರೆ ಮಾತ್ರವೇ ಜೀವನ. ಜೀವಿಸುವುದು ಅಂದರೆ ಏನು?್ಷಣಾರ್ಧದಲ್ಲಿ ಎಲ್ಲವೂ ನಡೆದುಹೋಗುತ್ತದೆ. ಪುಟ್ಟಹುಡುಗನಿಗೆ ಕಾರು ಓಡಿಸುವ ಕನಸು. ದೊಡ್ಡವನಾಗುತ್ತಾ ಆಗುತ್ತಾ ಅದೊಂದು ಸಹಜ ಆಶೆ. ಕೊನೆಗೊಂದು ದಿನ ಕಾರು ಕೈಗೆ ಬರುತ್ತದೆ. ಒಂದಷ್ಟು ದಿನ ಕಾರಿನ ಧ್ಯಾನ. ಆಮೇಲೆ ಎರಡೋ ಮೂರೋ ಕಾರು ಕೊಳ್ಳುವಷ್ಟು ಶ್ರೀಮಂತನಾಗುತ್ತಾನೆ. ಮನೆಯಂಗಳದಲ್ಲಿ ಕಾರುಗಳು ನಿಂತಿರುತ್ತವೆ. ಡ್ರೈವರ್ ಕಾರು ಓಡಿಸುತ್ತಾನೆ. ಅವನು ಗಂಭೀರವಾಗಿ ಹಿಂದಿನ ಸೀಟಲ್ಲಿ ಕೂತಿರುತ್ತಾನೆ. ಒಂದು ಕಾಲದ ಕಾರು ಓಡಿಸುವ ಆಸೆಯನ್ನು ನುಂಗಿಹಾಕಿದ್ದು ಯಾವುದು? ಕಾರು ಕೇವಲ ಇಲ್ಲಿಂದ ಅಲ್ಲಿಗೆ ಆರಾಮಾಗಿ ತಲುಪಿಸುವ ವಾಹಕ ಮಾತ್ರ ಎಂದು ಅರಿವಾದ ಕ್ಷಣ ಅದರ ಮಾಂತ್ರಿಕತೆ ಮಾಯ. ವಿಮಾನವನ್ನು ನೆಲದಲ್ಲಿ ನಿಂತು ನೋಡಿದರಷ್ಟೇ ಅಚ್ಚರಿ. ಒಳಗೆ ಕುಳಿತವರಿಗೆ ಅದು ಕೇವಲ ವಾಹನ!
ಒಂದು ವಿಚಿತ್ರ ಕತೆಯನ್ನು ಇತ್ತೀಚಿಗೆ ಗೆಳೆಯನೊಬ್ಬ ಹೇಳಿದ. ಮಲೆಯಾಳಂ ಲೇಖಕರೊಬ್ಬರು ಬರೆದ ಕತೆಯದು. ಒಂದೂರಲ್ಲಿ ಒಂದು ಬಡಕುಟುಂಬ. ಸೋರುವ ಮನೆ. ಹೆಂಡತಿ ಸೋರುವ ಜಾಗಕ್ಕೆ ಬಿಂದಿಗೆಯಿಟ್ಟು ಮನೆಯೊಳಗೆ ನೀರು ತುಂಬದಂತೆ ಕಾಳಜಿ ಮಾಡುತ್ತಾ, ಮಾಡಿಗೆ ಹೊಸ ಹುಲ್ಲು ಹೊದಿಸುವಂತೆ ಗಂಡನಿಗೆ ಹೇಳುತ್ತಿರುತ್ತಾಳೆ. ಅವನಿಗೋ ಸೋಮಾರಿತನ. ಅವಳ ಬೈಗಳು, ಅವನ ಸೋಮಾರಿತನದಲ್ಲಿ ಸಂಸಾರ ಸಾಗುತ್ತಿರುತ್ತದೆ.ಂದು ದಿನ ಗಂಡ ಕಾಡಿಗೆ ಹೋಗುತ್ತಾನೆ. ನದಿಯೊಂದು ಅಡ್ಡವಾಗುತ್ತೆ. ಅದನ್ನು ದಾಟಿಕೊಂಡು ಆಚೆಗೆ ಹೋದರೆ ಅಲ್ಲೊಂದು ಮನೆ. ತನ್ನ ಮನೆಯಂಥದ್ದೇ ಮನೆ. ಅಲ್ಲಿ ತನ್ನ ಹೆಂಡತಿಯಂತೆಯೇ ಕಾಣುವ ಒಬ್ಬಳು. ಆ ಮನೆಯೂ ಸೋರುತ್ತಿರುತ್ತೆ. ಅವಳ ಕಷ್ಟ ನೋಡಲಾರದೆ ಅವನು ಸೂರು ಏರುತ್ತಾನೆ. ಮಾಡಿಗೆ ಹೊಸ ಹುಲ್ಲು ಹೊದೆಸುತ್ತಾನೆ. ಅವಳಿಗೆ ಸಂತೋಷವಾಗುತ್ತದೆ. ಅವನ ಮೇಲೆ ಪ್ರೀತಿ ಉಕ್ಕುತ್ತದೆ. ಅವನು ಅವಳ ಮನೆ ಸರಿಹೋದ ಸಂತೋಷದಲ್ಲಿ ವಾಪಸ್ಸು ಹೊರಡುತ್ತೇನೆ ಅನ್ನುತ್ತಾನೆ. ಅವಳು ಸಣ್ಣ ದನಿಯಲ್ಲಿ ಕೇಳುತ್ತಾಳೆ. ನಿನಗೆ ನನ್ನ ಮೇಲೆ ಪ್ರೀತಿ ಮೂಡಿಯೇ ಇಲ್ಲವಾ? ಅವನೆನ್ನುತ್ತಾನೆ: ಇಲ್ಲವೆಂದರೆ ನನ್ನ ಪ್ರೀತಿಗೆ ವಂಚನೆ ಮಾಡಿದ ಹಾಗೆ. ಹೌದು ಎಂದರೆ ನನ್ನ ಹೆಂಡತಿಗೆ ದ್ರೋಹ ಬಗೆದ ಹಾಗೆ.ವನು ಮತ್ತದೇ ನದಿ ದಾಟಿ ಮರಳಿ ಬಂದು ನೋಡಿದರೆ ಅವನ ಮನೆಯ ಮಾಡಿಗೆ ಹೊಸ ಹುಲ್ಲು. ಬೆರಗಾಗಿ ಕೇಳಿದರೆ ಹೆಂಡತಿ ವಿವರಿಸುತ್ತಾಳೆ: ನೀವು ಕಾಡಿಗೆ ಹೋಗಿದ್ದಾಗ ನಿಮ್ಮ ಥರಾ ಇರೋನೊಬ್ಬ ಬಂದಿದ್ದ. ಇದನ್ನೆಲ್ಲ ಸರಿಮಾಡಿದ. ಹೊರಡೋವಾಗ ನನ್ನ ಮೇಲೆ ಪ್ರೀತಿ ಮೂಡಿಲ್ವಾ ಅಂತ ಕೇಳಿದ. ಮೂಡಿಲ್ಲ ಅಂದರೆ ನನ್ನ ಪ್ರೀತಿಗೆ ವಂಚಿಸಿದ ಹಾಗೆ. ಮೂಡಿದೆ ಅಂದರೆ ನನ್ನ ಗಂಡನಿಗೆ ದ್ರೋಹ ಬಗೆದ ಹಾಗೆ ಅಂದೆ. ಸುಮ್ಮನೆ ಹೊರಟು ಹೋದ.ವನ ಮನೆಗೆ ಹುಲ್ಲು ಹೊದೆಸಿದವನು ಅವನೇನಾ? ನದಿಯಾಚೆ ಪ್ರತಿಬಿಂಬಿಸಿದ್ದು ಅವನದೇ ಮನೇನಾ? ಅವಳೂ ಇವಳೇನಾ? ಇವನೂ ಅವನೇನಾ? ಇದ್ದಕ್ಕಿದ್ದ ಹಾಗೆ ವಿಸ್ಮಯವೊಂದು ಹೊಕ್ಕು, ಅವರಿಬ್ಬರೂ ಹೊಸಬರಾಗಿಬಿಟ್ಟರಾ?
ಗೊತ್ತಿಲ್ಲ, ಮನೆ ಸೋರುವುದು ನಿಂತಿದೆ.
Subscribe to:
Posts (Atom)