Saturday, March 17, 2012

ಕೊಟ್ಟ ಮಾತು, ಕಾಣದ ಜಗತ್ತು ಮತ್ತು ಅಹಂಕಾರವೆಂಬ ಕನ್ನಡಕ


ಇತ್ತೀಚೆಗೆ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್   ಪ್ರಶಸ್ತಿ ಪಡಕೊಂಡ ‘ದಿ ಸೆಪರೇಷನ್’  ಇರಾನಿ ಚಲನಚಿತ್ರದಲ್ಲೊಂದು ಸನ್ನಿವೇಶವಿದೆ.  ಗಂಡ-ಹೆಂಡತಿ ಜಗಳಾಡಿದ್ದಾರೆ. ಇನ್ನೇನು ವಿವಾಹ ವಿಚ್ಛೇದನ ಪಡಕೊಳ್ಳುವ ಹಂತದಲ್ಲಿದ್ದಾರೆ. ಹನ್ನೊಂದು ವರ್ಷದ ಮಗಳಿಗೆ ಅಪ್ಪನೂ ಬೇಕು, ಅಮ್ಮನೂ ಬೇಕು. ಈ ಮಧ್ಯೆ ಅಪ್ಪ ಕೊಲೆ ಆರೋಪಕ್ಕೆ ಸಿಕ್ಕಿಹಾಕಿಕೊಂಡು ಕೈದಿಯಾಗಿದ್ದಾನೆ. ಅಪ್ಪನನ್ನು ನೋಡಲು ಹೋಗುವ ಮಗಳು, ಅಪ್ಪನ ಹತ್ತಿರ ಹೇಳ್ತಾಳೆ: ‘ಇದೆಲ್ಲ ಸಾಕು ಅಪ್ಪಾ.. ಬಿಟ್ಟುಬಿಡಿ.. ಅಮ್ಮನೂ ನೀವೂ ಒಂದಾಗಿ’. ಅವಳ ಸಮಾಧಾನಕ್ಕೆಂಬಂತೆ ಅಪ್ಪ ‘ಸರಿ’ ಅನ್ನುತ್ತಾನೆ. ಹಾಗಂತ ಮಾತುಕೊಡಿ ಅನ್ನುತ್ತಾಳೆ ಮಗಳು. ಅಪ್ಪ ಒಂದಷ್ಟು ಯೋಚಿಸಿ ಪ್ರಾಮಿಸ್ ಅಂತ ಕೈ ಎತ್ತುತ್ತಾನೆ. ಕೈ ಎತ್ತಲು ಸಾಧ್ಯವಾಗುವುದಿಲ್ಲ ಅವನಿಗೆ. ನೋಡಿದರೆ, ಅವನ ಬಲಗೈಗೂ ಮತ್ತೊಬ್ಬ ಕೈದಿಯ ಎಡಗೈಗೂ ಸೇರಿಸಿ ಬೇಡಿ ಹಾಕಲಾಗಿದೆ. ಪಕ್ಕದ ಕೈದಿ ಸಣ್ಣಗೆ ನಗುತ್ತಾ ‘ಯಾರಿಗೆ ಏನಂತ ಪ್ರಾಮಿಸ್ ಮಾಡ್ತಿದ್ದೀಯಾ ನೀನು?’ ಎಂದು ಅರ್ಥಪೂರ್ಣವಾಗಿ ನಗುತ್ತಾನೆ.
ಸುಮಾರು ಹದಿನೈದು ಸೆಕೆಂಡುಗಳ ದೃಶ್ಯ ಅದು. ನಾವು ಬದುಕುತ್ತಿರುವ ಒಟ್ಟಾರೆ ಜಗತ್ತಿನಲ್ಲಿ ಯಾರಿಗೆ ಯಾರೂ ಯಾವ ಭರವಸೆಯನ್ನೂ ಕೊಡಲಾರೆವು ಅನ್ನುವುದನ್ನು ಅದು ಅಚ್ಚುಕಟ್ಟಾಗಿ ಹೇಳುತ್ತದೆ.
ನಾವು ಅಂದಕೊಂಡದ್ದನ್ನು ಮಾಡಲಿಕ್ಕಾಗದ ಸನ್ನಿವೇಶ ಪದೇ ಪದೇ ನಮಗೆ ಎದುರಾಗುತ್ತಲೇ ಇರುತ್ತವೆ. ಸಂಬಂಧವನ್ನು ವ್ಯಕ್ತಿತ್ವವನ್ನು ಇದು ಬಾಧಿಸುತ್ತಲೇ ಹೋಗುತ್ತದೆ. ಸುಮ್ಮನೆ ಯೋಚಿಸಿ ನೋಡಿ. ಹತ್ತಿಪ್ಪತ್ತು ವರ್ಷಗಳ ಹಿಂದೆ, ಇಂಥ ಹೊತ್ತಿಗೆ ಇಂಥ ಜಾಗಕ್ಕೆ ಬರುತ್ತೇನೆ ಅಂತ ಹೇಳಿದರೆ, ಅಂಥ ಹೊತ್ತಿಗೆ ನಾವು ಹೋಗುವುದು ಸಾಧ್ಯವಿತ್ತು.  ಆಗ ನಾವು ನಂಬಿಕೊಂಡಿದ್ದದ್ದು ನಮ್ಮ ಕಾಲ್ನಡಿಗೆಯನ್ನು. ಇವತ್ತು ವಿಮಾನ, ವೇಗವಾಗಿ ಸಾಗುವುದಕ್ಕೆ ಚತುಷ್ಪಥ ರಸ್ತೆ, ಯಮವೇಗದಲ್ಲಿ ಚಲಿಸುವ ಕಾರುಗಳಿದ್ದರೂ ಕೂಡ ಹೇಳಿದ ಸಮಯಕ್ಕೆ ತಲುಪುತ್ತೇವೆ ಅನ್ನುವುದು ಖಾತ್ರಿಯಿಲ್ಲ.
ನಾವು ಹೇಗೆ ಬಂದಿಯಾಗುತ್ತಿದ್ದೇವೆ ಯೋಚಿಸಿ. ಕೆಲವು ದಿನಗಳ ಹಿಂದೆ ಅಚಾನಕ್ ಆಗಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ವಕೀಲರು ರಸ್ತೆ ತಡೆ ಮಾಡಿದರು. ಆವತ್ತು ಸಾವಿರಾರು ಮಂದಿ, ಆರೆಂಟು ಗಂಟೆಗಳ ಕಾಲ ರಸ್ತೆಯಲ್ಲಿ ಕಾರೊಳಗೆ ಉಳಿದುಕೊಳ್ಳಬೇಕಾಗಿ ಬಂತು. ಇಂಥ ಪರಿಸ್ಥಿತಿ ಕೇವಲ ಹೊರಗಿನ ಓಡಾಟದಲ್ಲಿ ಮಾತ್ರವಲ್ಲ, ಸಂಬಂಧಗಳಲ್ಲೂ ನಡೆಯುತ್ತಿರುತ್ತೆ. ಹೇಳಬೇಕಾದ್ದನ್ನು ಹೇಳಲಾಗದೇ ಒದ್ದಾಡುತ್ತೇವೆ. ಹೇಳಬಾರದ್ದನ್ನು ಹೇಳಿಬಿಡುತ್ತೇವೆ. ಅದನ್ನು ಹೇಳಬೇಕಾಗಿತ್ತು, ಇದನ್ನು ಹೇಳಬಾರದಿತ್ತು ಅಂದುಕೊಳ್ಳುತ್ತೇವೆ. ಅಷ್ಟು ಹೊತ್ತಿಗೆ ಸಂಬಂಧ ಕೆಟ್ಟುಹೋಗಿ, ಏನೇನೋ ಆಗಿಹೋಗಿರುತ್ತದೆ.
ಎಲ್ಲರೂ ಸ್ವತಂತ್ರರಾಗಿ ಹುಟ್ಟುತ್ತಾರೆ, ನಂತರ ನೋಡಿದರೆ ಕೈಕಾಲುಗಳಿಗೆ ಕೋಳ ಹಾಕಿಕೊಂಡಿರುತ್ತಾರೆ ಎನ್ನುವ ಮಾತಿದೆ. ನಮ್ಮ ವಿದ್ಯೆ, ವೃತ್ತಿ, ಊರು, ಆಕಾಂಕ್ಷೆ, ಅಹಂಕಾರ, ಪ್ರತಿಷ್ಠೆ, ಹುದ್ದೆ, ಸಂಬಂಧ- ಎಲ್ಲವೂ ನಮ್ಮನ್ನು ಬಂಧಿಸುತ್ತಲೇ ಹೋಗುತ್ತವೆ. ಇವುಗಳಿಂದ ಬಿಡುಗಡೆ ಹೊಂದುತ್ತೇವೆ ಅಂತ ಹೊರಡುವುದೂ ಒಂದು ಬಂಧನವೇ. ಬಿಡುಗಡೆಗಾಗಿ ಹಾತೊರೆಯತೊಡಗಿದರೆ ನೀವು ಬಂಧನದಲ್ಲಿದ್ದೀರಿ ಅಂತಲೇ ಅರ್ಥ. ಕಂಬವನ್ನು ಗಟ್ಟಿಯಾಗಿ ಅಪ್ಪಿಕೊಂಡು ನನ್ನನ್ನು ಬಿಡಿಸಿ ಅಂತ ಸಹಾಯಕ್ಕಾಗಿ ಕೂಗಿಕೊಂಡಂತೆ. ಕಂಬವನ್ನು ಹಿಡಕೊಂಡಿರುವವರು ನೀವು. ಕಂಬ ಬಿಡಬೇಕು ಎಂಬ ಆಸೆ, ಬಿಡುವುದಕ್ಕೆ ಭಯ. ಯಾರಾದರೂ ಬಂದು ಬಿಡಿಸಲಿ ಎಂಬ ಆಸೆ.
ಕಥಾಸರಿತ್ಸಾಗರದಲ್ಲಿ ಒಂದು ಚೆಂದದ ಕತೆಯಿದೆ. ದುರಾಸೆಯನ್ನು ಪ್ರತಿನಿಧಿಸುವ ಕತೆ ಅದಾದರೂ, ಅದನ್ನೂ ಮೀರಿದ ಒಂದು ಅರ್ಥ ಅದಕ್ಕಿದ್ದಂತಿದೆ. ಒಬ್ಬ ವ್ಯಕ್ತಿಗೆ ಗುರುವೊಬ್ಬ ಶ್ರೀಮಂತನಾಗುವ ವಿಧಾನ ಹೇಳುತ್ತಾನೆ. ಬೆಟ್ಟದ ದಾರಿಯಲ್ಲಿ ನಡೆಯುತ್ತಾ ಹೋಗು. ಮೊದಲು ಬೆಳ್ಳಿ ಸಿಗುತ್ತದೆ, ನಂತರ ಬಂಗಾರ ಸಿಗುತ್ತದೆ, ಆನಂತರ ಅದಕ್ಕಿಂತಲೂ ಹೆಚ್ಚಿನದು ಸಿಗುತ್ತದೆ. ಹುಡುಕುತ್ತಾ ಹೋಗು ಅನ್ನುತ್ತಾನೆ. ನಿನಗೆಷ್ಟು ಬೇಕೋ ಅಷ್ಟೇ ತೆಗೆದುಕೋ, ಅಲ್ಪತೃಪ್ತಿಯೇ ಸೌಭಾಗ್ಯ ಅನ್ನುತ್ತಾನೆ.
ಆತ ಬೆಟ್ಟವೇರುತ್ತಾನೆ. ಮೊದಲು ಬೆಳ್ಳಿಯ ನಾಣ್ಯ ಸಿಗುತ್ತವೆ. ಇದು ಬೇಡ, ಬಂಗಾರದ ನಾಣ್ಯವೇ ಸಿಗಲಿ ಅಂತ ಮತ್ತೂ ಮುಂದೆ ಹೋಗುತ್ತಾನೆ. ಬಂಗಾರದ ಭಂಡಾರ ಕಾಣಿಸುತ್ತದೆ. ಮುಂದೆ ಇದಕ್ಕಿಂತಲೂ ಹೆಚ್ಚಿನದು ಸಿಗಬಹುದು ಅಂದುಕೊಂಡು ಮತ್ತಷ್ಟು ಎತ್ತರಕ್ಕೆ ಹೋದರೆ, ಅಲ್ಲೊಬ್ಬ ಬಿರುಬಿಸಿಲಲ್ಲಿ ನಿಂತಿದ್ದಾನೆ. ಅವನ ನೆತ್ತಿಯ ಮೇಲೆ ಚಕ್ರವೊಂದು ತಿರುಗುತ್ತಿದೆ. ಅವನನ್ನು ಈತ ಕೇಳುತ್ತಾನೆ, ಬೆಳ್ಳಿಗಿಂತಲೂ ಬಂಗಾರಕ್ಕಿಂತಲೂ ಹೆಚ್ಚಿನದು ಇಲ್ಲೇನು ಸಿಗುತ್ತದೆ?
ಥಟ್ಟನೆ ಆ ಚಕ್ರ ಅವನ ತಲೆಯಿಂದ ಇವನ ನೆತ್ತಿಗೆ ಬಂದು ಕೂರುತ್ತದೆ. ಆತ ಹೇಳುತ್ತಾನೆ. ನಾನೂ ನಿನ್ನ ಹಾಗೆ ದುರಾಸೆಯಿಂದ ಬಂದೆ. ಇನ್ನೊಬ್ಬ ದುರಾಸೆಯ ಮನುಷ್ಯ ಬರುವ ತನಕ ನೀನೂ ಕಾಯುತ್ತಿರು. ಅವನು ಬಂದು ನಿನ್ನನ್ನು ಬಿಡುಗಡೆ ಮಾಡುತ್ತಾನೆ. ನಾನು ಐದು ವರ್ಷ ಈ ಚಕ್ರ ನೆತ್ತಿಯಲ್ಲಿಟ್ಟು ಕಾದಿದ್ದೆ.
ಇವತ್ತಿನ ಪರಿಸ್ಥಿತಿಯಲ್ಲಿ ಐದು ವರುಷ ಕಾಯುವ ಅಗತ್ಯವೇ ಇಲ್ಲವೇನೋ? ಐದೈದು ಸೆಕೆಂಡಿಗೊಬ್ಬರು ಚಕ್ರಹೊರುವುದಕ್ಕೆ ಸಿಗುತ್ತಿದ್ದರು. ದುರಾಸೆ ನೆತ್ತಿಯ ಮೇಲಿನ ಚಕ್ರದಂತೆ, ಸುತ್ತುತ್ತಲೇ ಇರುತ್ತದೆ. ಅದು ಸುತ್ತುತ್ತಿದ್ದಷ್ಟೂ ದಿನ ಎಲ್ಲವನ್ನೂ ಮರೆಸುತ್ತದೆ. ನಾವು ದಾಪುಗಾಲಿಟ್ಟು ಏಕಮುಖಿಗಳಾಗಿ ಅದರತ್ತ ಧಾವಿಸುತ್ತಲೇ ಇರುತ್ತೇವೆ. ಕೊನೆಗೆ ನಮಗೆ ಸಿಗುವುದು ಕೇವಲ ನೆತ್ತಿಯ ಮೇಲೆ ಸಿಗುವ ಚಕ್ರ.
ಮತ್ತೆ ಭರವಸೆ ಮಾತಿಗೆ ಮರಳಿದರೆ, ನಾವು ಇವತ್ತು ಯಾರಿಗೆ ಯಾವ ಭರವಸೆ ಕೊಡಬಲ್ಲೆವು. ಕೊಟ್ಟ ಮಾತನ್ನು ಉಳಿಸಿಕೊಳ್ಳಬಲ್ಲೆವಾ? ಒಂದು ಸಣ್ಣ ಮಾತನ್ನು ಉಳಸಿಕೊಳ್ಳುವುದು ನಮ್ಮ ಕೈಲಿ ಸಾಧ್ಯವಾದೀತಾ? ಅಮ್ಮನೊಂದಿಗೆ ಜಗಳ ಆಡೋಲ್ಲ ಅಂತ ಅಪ್ಪ ಮಗುವಿಗೆ ಹೇಳುವುದಕ್ಕೆ ಸಾಧ್ಯವಾ? ಆ ಮಗುವಿನ ಮೇಲೆ ಎಷ್ಟೊಂದು ಒತ್ತಡಗಳಿರುತ್ತವೆ? ಅವಳನ್ನು ನಾವು ಎಂಥ ಪರಿಸರದಲ್ಲಿ ಬೆಳೆಸುತ್ತಿದ್ದೇವೆ? ಆ ಮಕ್ಕಳ ಸಮಸ್ಯೆಗಳೇನು?
ಪೀಳಿಗೆಯ ಅಂತರ ಎಂದಿಗಿಂತ ಹೆಚ್ಚಾಗಿದೆ. ಮೊದಲು ನಲವತ್ತು ವರ್ಷದ ಅಪ್ಪ, ಹತ್ತು ವರ್ಷದ ಮಗನ ನಡುವೆ ಅಂಥ ಅಂತರ ಇರಲಿಲ್ಲ. ಅಪ್ಪನ ಆಸಕ್ತಿಗಳೂ, ಪ್ರೀತಿಗಳೂ, ಆಲೋಚನೆಗಳೂ ಮಕ್ಕಳದ್ದೂ ಆಗಿದ್ದವು. ಪರಿಸರದಲ್ಲಿ ಅಂಥ ಹೇಳಿಕೊಳ್ಳಬಹುದಾದ ಯಾವ ಬದಲಾವಣೆಗಳೂ ಆಗುತ್ತಿರಲಿಲ್ಲ.  ಹೀಗಾಗಿ ಅಪ್ಪ ತಿನ್ನುತ್ತಿದ್ದ, ಅಮ್ಮ ಪ್ರೀತಿಯಿಂದ ಮಾಡುತ್ತಿದ್ದ ಗಂಜಿ, ದೋಸೆ, ಉಪ್ಪಿಟ್ಟು ಇಡೀ ಮನೆಮಂದಿಗೆಲ್ಲ ಇಷ್ಟವಾಗುತ್ತಿತ್ತು. ಇವತ್ತು ಏಳು ವರ್ಷದ ಮಗು ಉಪ್ಪಿಟ್ಟಾ ಅಂತ ವರಾತ ತೆಗೆದು ಸೂರು ಹರಿಯುವಂತೆ ಕೂಗಾಡುತ್ತದೆ.
-2-
ಇದ್ದಕ್ಕಿದ್ದ ಹಾಗೆ, ಒಂದು ಬೆಳಗ್ಗೆ ಅವನಿಗೆ ಎಲ್ಲವೂ ಮಂಜು ಮಂಜಾಗಿ ಕಾಣಿಸಲಾರಂಭಿಸುತ್ತದೆ. ಮಗಳ ಮುಖದ ಭಾವನೆಗಳು ಗೋಚರಿಸುವುದಿಲ್ಲ. ಹೆಂಡತಿಯ ಮುಗುಳ್ನಗೆ ಕಾಣಿಸುವುದಿಲ್ಲ. ಪಕ್ಕದ ಮನೆಯವನ ಅಸಹನೆ ಕಣ್ಣಿಗೆ ಕಾಣುವುದಿಲ್ಲ. ಎಲ್ಲವೂ ಮಂಜು ಮಂಜು. ತನಗೇನೋ ಆಗಿದೆ ಎಂಬ ಗಾಬರಿಯಲ್ಲಿ ಆತ ಒಂದೆರಡು ದಿನ ಕಳೆಯುತ್ತಾನೆ. ಕಣ್ಣುಜ್ಜಿಕೊಂಡು ಕಣ್ಣಿಗೆ ಅದ್ಯಾವುದೋ ಔಷಧಿ ಬಿಟ್ಟುಕೊಂಡು ಎಲ್ಲವನ್ನೂ ಸೂಕ್ಷ್ಮವಾಗಿ ನೋಡಲು ಯತ್ನಿಸುತ್ತಾ ಮತ್ತೊಂದಷ್ಟು ದಿನ ಕಳೆಯುತ್ತಾನೆ. ಕ್ರಮೇಣ ಅವನಿಗೆ ದಿನಪತ್ರಿಕೆ ಓದುವುದೂ ಕಷ್ಟವಾಗುತ್ತದೆ. ಹಾಳಾಗಿ ಹೋಗಲಿ ಅಂತ ಅದನ್ನೂ ಬಿಟ್ಟುಬಿಡುತ್ತಾನೆ.
ಹೀಗೆ ಸ್ವಲ್ಪ ದಿನ ಕಳೆಯುತ್ತಿದ್ದಂತೆ ಅವನಿಗೆ ಇಡೀ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ. ಆಡಿದ ಮಾತುಗಳಷ್ಟೇ ಕಿವಿಗೆ ಬೀಳುತ್ತವೆಯೇ ಹೊರತು, ಯಾರ ಮುಖದ ಭಾವನೆಗಳೂ ಅವನಿಗೆ ಕಾಣಿಸದು. ಹೀಗಾಗಿ ಮಾತುಗಳ ಹಿಂದಿನ ಮರ್ಮ ಅವನಿಗೆ ಹೊಳೆಯುವುದು ನಿಂತುಹೋಗುತ್ತದೆ. ಮಾತಿಗೆ ಮಾತಿಗೆಷ್ಟಿದೆಯೋ ಅಷ್ಟೇ ಅರ್ಥ. ಅದರಾಚೆ ಏನಿಲ್ಲ. ಉಪ್ಪಿಟ್ಟು ಮಾಡಿದ್ದೀನಿ, ತಿಂದ್ಕೊಂಡು ಹೋಗಿ ಅಂತ ಹೆಂಡತಿ ಹೇಳಿದರೆ, ಅವಳು ಉಪ್ಪಿಟ್ಟು ಮಾಡಿದ್ದಾಳೆ, ತಾನು ತಿಂದು ಹೋಗಬೇಕು ಎನ್ನುವುದು ಮಾತ್ರ ವಾಚಾಮಗೋಚರ. ನೀವು ದುಡಿಯೋ ಸಂಬಳಕ್ಕೆ, ನಿಮ್ಮ ಯೋಗ್ಯತೆಗೆ ಇನ್ನೇನು ತಾನೇ ಮಾಡಲಾದೀತು ಎಂಬ ಸಣ್ಣ ಅಸಹನೆ ಅವಳ ತುಟಿಕೊಂಕಲ್ಲೋ, ಕಣ್ಣಂಚಲ್ಲೋ ಹಣಿಕಿ ಹಾಕಿದರೆ ಅವನಿಗೆ ಅದು ಕಾಣಿಸದಂಥ ಸುಖದ ಸ್ಥಿತಿ. ಪತ್ರಿಕೆಯನ್ನಂತೂ ಓದುವಂತಿಲ್ಲ. ಹೀಗಾಗಿ ಜಗತ್ತೇ ಸುಂದರ.
ಹೀಗೆ ಅತ್ಯಂತ ಸುಖವಾಗಿರುವ ಅವನನ್ನು ಗೆಳೆಯನೊಬ್ಬ ಭೇಟಿಯಾಗುತ್ತಾನೆ. ನಿನಗೆ ಬಂದಿರೋದು ಚಾಳೀಸು. ನಲವತ್ತಕ್ಕೆ ಹೀಗೆ ಕಣ್ಣು ಮಂಜಾಗತ್ತೆ.  ಕನ್ನಡಕ ಹಾಕಿಕೋ ಅಂತ ಅವನು ಸಲಹೆ ಕೊಟ್ಟದ್ದೂ ಅಲ್ಲದೇ, ತಾನೇ ಒಂದು ಕನ್ನಡಕವನ್ನೂ ತಂದುಕೊಡುತ್ತಾನೆ. ಅದನ್ನು ಹಾಕಿಕೊಂಡದ್ದೇ ತಡ ಅವನಿಗೆ ಕಾಣಿಸೋ ಜಗತ್ತೇ ಬದಲಾಗುತ್ತದೆ. ಎಲ್ಲವೂ ನಿಚ್ಚಳವಾಗಿ, ತಾನು ಇದುವರೆಗೆ ನೋಡಿದ್ದಕ್ಕಿಂತ ಸ್ಪಷ್ಟವಾಗಿ ಕಾಣಿಸತೊಡಗಿ ಗಾಬರಿಯಾಗುತ್ತದೆ.
ಬೆಳ್ಳಂಬೆಳಗ್ಗೆ ಎದ್ದು ಕಾಫಿ ತಂದಿಟ್ಟುಹೋಗುವ ಹೆಂಡತಿಯ ಮುಖದಲ್ಲಿ ಧುಮುಧುಮು ಸಿಟ್ಟಿದೆ. ಹರಿದ ಕಾಲುಚೀಲ ಹಾಕಿಕೊಂಡು ಸ್ಕೂಲಿಗೆ ಹೊರಡುವ ಮಗನ ಮುಖದಲ್ಲಿ ನಿರ್ಲಕ್ಷವೂ ಅಸಹನೆಯೂ ಇದೆ. ಒಂದೊಳ್ಳೇ  ಮೊಬೈಲು ಕೊಡಿಸದ ಅವನ ಬಗ್ಗೆ ಮಗಳ ಕಣ್ಣಲ್ಲಿ ಇವನೊಬ್ಬ ಕೈಲಾಗದವನು ಎಂಬ ಭಾವವಿದೆ. ಪಕ್ಕದ ಮನೆಯಾತನ ಮುಖದಲ್ಲಿ ಇವನ ಬಗ್ಗೆ ವಿನಾಕಾರಣ ಸಿಟ್ಟಿದೆ. ಎದುರು ಮನೆಯ ಶ್ರೀಮಂತ ತನ್ನನ್ನು ಕ್ರಿಮಿಯಂತೆ ನೋಡುತ್ತಾನೆ. ಆಫೀಸಿನಲ್ಲಿ ತನ್ನ ಬಾಸು, ಯಾವಾಗ ಇವನು ಸಾಯುತ್ತಾನೋ ಎಂಬ ಮುಖ ಮಾಡಿಕೊಂಡು ಕೂತಿದ್ದಾನೆ.
ಇದ್ದಕ್ಕಿದ್ದಂತೆ ಪ್ರತಿಯೊಬ್ಬರ ಮಾತಿನ ಹಿಂದಿರುವ ಹುನ್ನಾರಗಳೂ ಅವನಿಗೆ ಹೊಳೆಯುತ್ತಾ ತಿಳಿಯುತ್ತಾ ಹೋಗುತ್ತವೆ. ಕ್ರಮೇಣ ಅವನು ಅದನ್ನು ಮೀರಲು ಯತ್ನಿಸುತ್ತಾನೆ. ಎಷ್ಟೇ ಪ್ರಯತ್ನಪಟ್ಟರೂ ಅದು ಅವನಿಗೆ ಸಾಧ್ಯವಾಗುವುದೇ ಇಲ್ಲ. ತನ್ನವರ ಅಸಹನೆ, ಅಲಕ್ಷ, ಸಿಟ್ಟನ್ನು ಸಿಟ್ಟಿನ ಮೂಲಕ ಎದುರಿಸಲು ಹೋಗುತ್ತಾನೆ. ಪರಿಸ್ಥಿತಿ ಮತ್ತಷ್ಟು ಕಂಗೆಡುತ್ತದೆ. ಕ್ರಮೇಣ ಅವನು ಕಂಗಾಲಾಗುತ್ತಾ ಹೋಗುತ್ತಾನೆ. ತಾನು ಅಸಹಾಯಕ ಎಂಬ ಭಾವನೆ ಅವನಲ್ಲಿ ಬಲವಾಗುತ್ತಾ ಹೋಗಿ, ಕೊನೆಗೊಂದು ದಿನ ತಾನು ಈ ಜಗತ್ತಿನಲ್ಲಿ ಇರಲು ಅರ್ಹನಲ್ಲ ಅನ್ನಿಸುತ್ತದೆ.
ಅದೇ ಸಂಜೆ ಅವನು ಆಫೀಸಿನಿಂದ ಬರುತ್ತಿರಬೇಕಾದರೆ, ಯಾರಿಗೋ ಡಿಕ್ಕಿ ಹೊಡೆಯುತ್ತಾನೆ. ಕನ್ನಡಕ ಬಿದ್ದು ಒಡೆದುಹೋಗುತ್ತದೆ. ಇಡೀ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ. ಆಮೇಲೆ ಅವನು ಸುಖವಾಗಿರುತ್ತಾನೆ.
ತುಂಬ ವಿವರವಾಗಿ ಗಮನಿಸುವುದು ಕೂಡ ಅಪಾಯಕಾರಿ. ಒಬ್ಬ ಲೇಖಕ, ಕತೆಗಾರ ಮತ್ತೊಬ್ಬರ ಮನಸ್ಸಿನ ಒಳಗೆ ಹೊಕ್ಕಂತೆ ಮತ್ಯಾರೂ ಹೊಗಲಾರರು. ಹಾಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಮತ್ತೊಂದು ಜಗತ್ತೇ ಎದುರಾಗುತ್ತದೆ. ವರ್ತಮಾನದ ವಿನಯವಂತ ಜಗತ್ತು ಮತ್ತು ಒಳಗಿನ ಅಹಂಕಾರಿ ಜಗತ್ತು. ಹೊರಗಿನ ಧೈರ್ಯವಂತ ಜಗತ್ತು ಮತ್ತು ಒಳಗಿನ ಹಿಂಜರಿಕೆಯ ಲೋಕ, ಹೊರಗಿನ ಡೌಲಿನ ಪ್ರಪಂಚ, ಒಳಗಿನ ಕೀಳರಿಮೆಯ ನೆಲ- ಯಾವ ಹಂತದಲ್ಲಿ ಮುಖಾಮುಖಿ ಆಗುತ್ತದೋ ಗೊತ್ತಿಲ್ಲ. ಹಾಗೆ ನಮ್ಮ ಹೊರಜಗತ್ತು ಮತ್ತು ಒಳಜಗತ್ತು ಎದುರುಬದುರಾದಾಗ ಘರ್ಷಣೆ ತಪ್ಪಿದ್ದಲ್ಲ. ಆ ಘರ್ಷಣೆಯಲ್ಲಿ ಇಬ್ಬರಲ್ಲೊಬ್ಬ ಸಾಯಲೇಬೇಕು.
ಒಳಗಿನವನು ಸತ್ತರೆ, ಒಳಜಗತ್ತು ಶೂನ್ಯ. ಹೊರಗಿನವನು ಸತ್ತರೆ ಬಂಧುಮಿತ್ರರು ದೂರದೂರ. ಇವೆರಡರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿತರೆ ನಾಜೂಕಯ್ಯ.
ಅಂತರಂಗದ ಅರಿವು ಬಹಿರಂಗದ ಕ್ರಿಯೆ ಆಗುವ ಕ್ಷಣ ಯಾವುದು?

Making of Seperation