Sunday, January 3, 2010

ಕಾವ್ಯವೀಗ ಮೃಣ್ಮಯ, ಬರುವನೇನು ಚಿನ್ಮಯ

ಕೊಳಲು ಕಳೆದುಹೋಗಿದೆ.

ಎನ್ನುವ ರೂಪಕವೂ ಒಡೆದು ಬಿದ್ದ ಕೊಳಲು ನಾನು ಎಂಬ ಅಡಿಗರ ಕವಿತೆಯ ಸಾಲೂ ನಾಲ್ಕೈದು ದಿನದಿಂದ ಪೀಡಿಸುತ್ತಿವೆ. ಅಶ್ವತ್ಥ ಕಾಯಿಲೆ ಬಿದ್ದಿದ್ದಾರೆ, ಅವರು ಬದುಕಿ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಗೊತ್ತಾದ ದಿನದಿಂದ ಕಾಡುತ್ತಿರುವ ಸಾಲುಗಳಿವು. ಅವರ ಕಣ್ಮರೆಗೂ ರೂಪಕವೊಂದು ಬೇಕಾ? ಯಾರದೋ ಕವಿತೆಯ ಸಾಲು ಬೇಕಾ?

ನಂಗೇನೂ ಬರೆಯೋದಕ್ಕೆ ತೋಚುತ್ತಿಲ್ಲ. ನನ್ನದೂ ಅವನದೂ ಖಾಸಗಿ ಅನುಭವಗಳು. ಏನಂತ ಹೇಳಲಿ, ಶೂನ್ಯ ಆವರಿಸಿಕೊಂಡಿದೆ. ಒಂದಕ್ಷರ ಬರೆಯೋದಕ್ಕೆ ಆಗ್ತಿಲ್ಲ. ಅದು ಈ ಕಾಲದ ಸಮಸ್ಯೆಯೋ ನನ್ನೊಳಗಿನ ಆತಂಕವೋ ಎಲ್ಲರೂ ಹೀಗೇ ಆಗಿದ್ದಾರೋ ಒಂದೂ ಗೊತ್ತಾಗುತ್ತಿಲ್ಲ. ಅತ್ಯಂತ ನಿರುತ್ಸಾಹದ ದಿನಗಳಿವು. ಅಶ್ವತ್ಥ್ ಹೋದ ದಿನ ಬೆಳಗ್ಗಿನಿಂದ ಸಂಜೆ ತನಕ ಅವನ ಮುಂದೆ ಕೂತಿದ್ದೆವು. ಅಷ್ಟೇ ನೆನಪಿರೋದು’ ಎಂದು ಗೆಳೆಯ ಸೂರಿ ಮನಸ್ಸಿನಲ್ಲಿರೋದಕ್ಕೆ ಮಾತು ಕೊಡಲಾರದೆ ಕೂತರು.

ಅಶ್ವತ್ಥ್ ನಮಗ್ಯಾರಿಗೂ ಕೇವಲ ಗಾಯಕರೋ ಸಂಗೀತ ನಿರ್ದೇಶಕರೋ ಸ್ವರ ಸಂಯೋಜಕರೋ ಆಗಿರಲಿಲ್ಲ. ಅವರೊಂದು ಪವಾಡ. ತಿಂಗಳಾನುಗಟ್ಟಲೆ ಫೋನೂ ಇಲ್ಲ, ಮಾತೂ ಇಲ್ಲ. ಯಾರು ಎಲ್ಲಿದ್ದಾರೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ಫೋನೆತ್ತಿಕೊಂಡರೆ ನಾನ್ರೀ ಅಶ್ವತ್ಥ್’ ಎಂಬ ದೊರಗು ದನಿ. ನಿನ್ನೆ ಬಿಜಾಪುರಕ್ಕೆ ಹೋಗಿದ್ದೆ. ಅಲ್ಲಮನ ವಚನಗಳನ್ನು ಹಾಡಿದೆ. ಏನು ಜನ ಅಂತೀರಿ. ನಂಗೇ ಆಶ್ಚರ್ಯ ಆಗುತ್ತೆ. ಅಷ್ಟೊಂದು ಜನ ಹಾಡು ಕೇಳೋಕೆ ಬರ್ತಾರಾ ಅಂತ. ಮೂವತ್ತು ಸಾವಿರ ಜನ ಸೇರಿದ್ರು. ಕಾರ್ಯಕ್ರಮದ ಸ್ಥಳ ಬದಲಾಯಿಸಬೇಕಾಗಿ ಬಂತು. ಅದ್ಭುತ, ಅಶ್ವತ್ಥ್‌ಗೆ ಮಾತ್ರ ಇದು ಸಾಧ್ಯ’ ಅಂತ ತಾನು ಅಶ್ವತ್ಥ್ ಅಲ್ಲವೇನೋ ಎಂಬಂತೆ ಕಾರ್ಯಕ್ರಮದ ಸೊಗಸನ್ನು ವಿವರಿಸತೊಡಗುತ್ತಿದ್ದರು. ಬೇರೆ ಯಾರೇ ಅದನ್ನು ಹೇಳಿದರೂ ಅದು ತುತ್ತೂರಿ ಅನ್ನಿಸುತ್ತಿತ್ತು. ಆದರೆ ಅಶ್ವತ್ಥರು ಅದನ್ನು ಕೂಡ ಎಷ್ಟು ಸಹಜವಾಗಿ ಹೇಳುತ್ತಿದ್ದರೆಂದರೆ ಬೇರೆ ಯಾರೋ ಅದನ್ನು ಹೇಳುತ್ತಿದ್ದಾರೆ ಎಂಬ ಬೆರಗಲ್ಲಿ ನಾವು ಅದನ್ನು ಕೇಳಿಸಿಕೊಳ್ಳುತ್ತಿದ್ದೆವು.

ಅಶ್ವತ್ಥರ ಎಪ್ಪತ್ತನೆಯ ಹುಟ್ಟುಹಬ್ಬದ ಅಭಿನಂದನಾ ಗ್ರಂಥಕ್ಕೆ ಮತ್ತೊಬ್ಬ ಗೆಳೆಯ ಸುರೇಶ್ಚಂದ್ರ ಒಂದು ಲೇಖನ ಬರೆದುಕೊಟ್ಟಿದ್ದರು. ಅದನ್ನು ಓದಿದ್ದೇ ತಡ ಅಶ್ವತ್ಥ್ ಫೋನೆತ್ತಿಕೊಂಡರು. ಸುರೇಶ್ಚಂದ್ರ ಮೆಚ್ಚುಗೆಯ ಮಾತುಗಳ ನಿರೀಕ್ಷೆಯಲ್ಲಿದ್ದಿರಬೇಕು. ಅಶ್ವತ್ಥ್ ಸುರೇಶ್ಚಂದ್ರ. ನಿನ್ನ ಲೇಖನ ಬಂತು. ಓದಿದೆ. ತಿಪ್ಪೆಗೆ ಹಾಕೋದಕ್ಕೆ ಯೋಗ್ಯವಾಗಿದೆ. ಏನು, ಕಸದ ಬುಟ್ಟಿಗಲ್ಲ, ಸೀದಾ ತಿಪ್ಪೆಗೆ ಹಾಕಬೇಕು, ಹಾಗಿದೆ. ನನ್ನ ಬಯೋಡಾಟ ಬರೆಯೋದಕ್ಕೆ ನೀನು ಬೇಕೇನಯ್ಯ, ನಂಗೊತ್ತಿಲ್ವಾ ಅದು. ನಾನೇನು ಓದಿದ್ದೀನಿ, ಎಷ್ಟು ಕೆಸೆಟ್ ಮಾಡಿದ್ದೀನಿ. ಎಷ್ಟು ಸಿನಿಮಾ ಮಾಡಿದ್ದೀನಿ ಅಂತ ಅಂಕಿಅಂಶ ನೀನು ಕೊಡಬೇಕಾ’ ಎಂದು ಒಂದೇ ಸಮ ರೇಗಿ, ನಂತರ ಬೇರೆ ಬರೆದುಕೊಡು’ ಅಂದರು. ಸುರೇಶ್ಚಂದ್ರ ಮೂರು ದಿನಗಳ ನಂತರ ಮತ್ತೊಂದು ಲೇಖನ ಕಳಿಸಿಕೊಟ್ಟರು.

ಅದಾಗಿ ಒಂದು ವಾರಕ್ಕೆ ಯಾವುದೋ ಕಾರ್ಯಕ್ರಮದಲ್ಲಿ ಸುರೇಶ್ಚಂದ್ರ-ಅಶ್ವತ್ಥ ಎದುರಾದರು. ಅಶ್ವತ್ಥರು ತಕ್ಷಣವೇ ಸುರೇಶ್ಚ್ರಂದ್ರನನ್ನು ತಬ್ಬಿ ಮುದ್ದಾಡಿ, ಎಷ್ಟು ಚೆನ್ನಾಗಿ ಬರೀತೀಯೋ... ನಿಂಗೆ ಚೆನ್ನಾಗಿ ಬರೆಯೋ ಶಕ್ತಿ ಇದೆ. ಆದ್ರೆ ಅಶ್ವತ್ಥನಿಗೆ ಇಷ್ಟು ಸಾಕು ಅನ್ನೋ ಉಡಾಫೆ. ಅದೆಲ್ಲ ಆಗೋಲ್ಲ. ನೀನು ಚೆನ್ನಾಗಿ ಬರೀತೀಯ ಅಂತ ಗೊತ್ತಿದ್ದೇ ದಬಾಯಿಸ್ದೆ. ಈಗ ಬರೆದಿರೋದು ನೋಡು. ಅದ್ಭುತ’ ಎಂದು ಕೊಂಡಾಡಿದರು.
ಅದು ಅಶ್ವತ್ಥ್. ಸಿಟ್ಟೂ ಕ್ಷಣಿಕ, ಪ್ರೀತಿ ನಿರಂತರ. ತನ್ನ ಬಗ್ಗೆ ಬರೀಬೇಕು, ಮಾತಾಡಬೇಕು ಎಂಬ ಉತ್ಸಾಹದ ನಡುವೆಯೇ ಬರೆಯೋದು ಮುಖ್ಯ ಅಲ್ಲ ಅನ್ನುವುದೂ ಅವರಿಗೆ ಗೊತ್ತಿತ್ತು. ಜನಪ್ರಿಯನಾಗಬೇಕು ಅನ್ನುವ ಹಪಹಪಿಯ ಆಚೆಗೆ ಜನಪ್ರಿಯತೆ ಪೊಳ್ಳು ಅನ್ನುವುದನ್ನೂ ಅರ್ಥ ಮಾಡಿಕೊಂಡಿದ್ದರು. ಲಕ್ಷಾಂತರ ಮಂದಿಗೆ ಹಾಡಿದಷ್ಟೇ ಉತ್ಸಾಹದಿಂದ ನಾಲ್ಕೈದು ಮಂದಿಯ ಗುಂಪಿಗೂ ಹಾಡುತ್ತಿದ್ದರು. ಹಾಡು ಅವರ ಅಭಿವ್ಯಕ್ತಿ ಮಾಧ್ಯಮ. ಆಡಿದರೂ ಹಾಡಿದರೂ ಅದರಲ್ಲೊಂದು ಅಶ್ವತ್ಥ ಛಾಯೆ. ಅವರ್ಣನೀಯ ಕಾಂತಿ.
ಕನ್ನಡ ಕವಿತೆಗಳನ್ನು ಇಡೀ ನಾಡಿಗೆ ತಲುಪಿಸಿದ್ದು, ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದು, ಸಿನಿಮಾಗಳಿಗೆ ಸಂಗೀತ ನೀಡಿದ್ದು, ಮೈಸೂರು ಮಲ್ಲಿಗೆ ಮತ್ತು ಶಿಶುನಾಳ ಶರೀಫ ಎಂಬೆರೆಡು ಚಿತ್ರಗಳನ್ನು ತನ್ನ ಸಂಗೀತದ ಬಲದಿಂದಲೇ ಗೆಲ್ಲಿಸಿದ್ದು, ಅದೇ ಸಂಗೀತದ ಬಲದಿಂದ ಸಿಂಗಾರೆವ್ವ’ಳನ್ನು ಸೋಲಿಸಿದ್ದು- ಹೀಗೆ ಅವರದು ನಿರಂತರದ ಶ್ರದ್ಧೆ. ತಾನು ಮಾಡುತ್ತಿರುವುದು, ಹಾಡುತ್ತಿರುವುದು, ಆಡುತ್ತಿರುವುದು ಸರಿಯಾ ತಪ್ಪಾ ಎಂದು ಅವರು ಯಾವತ್ತೂ ವಿಮರ್ಶೆ ಮಾಡಿಕೊಂಡವರಲ್ಲ. ನಿಮಗೆ ಸಂಗೀತ ನಿರ್ದೇಶನ ಬರೋಲ್ಲ ಅಂದರೆ ನನ್ನದು ಸ್ವರ ಸಂಯೋಜನೆ ಅಂದರು. ಕವಿತೆಗಳನ್ನು ಹೀಗೆ ಹಾಡಬೇಕು. ಅಲ್ಲಿ ಲೆಕ್ಕಾಚಾರ ಮುಖ್ಯವಲ್ಲ. ಸ್ವರ ಪ್ರಸ್ತಾರ ಮುಖ್ಯವಲ್ಲ, ಲಯಬದ್ಧತೆ ಮುಖ್ಯವಲ್ಲ. ಹಾಡುವ ರೀತಿಯಲ್ಲಿ ಭಾವ ಹೊರಹೊಮ್ಮಬೇಕು. ದೂರದಿಂದಲೇ ಎಂಬ ಸಾಲನ್ನು ದೂsssssರದಿಂದಲೇ ಎಂದು ಹಾಡಬೇಕು. ಹಾಗೆ ಹಾಡುವಾಗಲೇ ಅದು ದೂರದಿಂದ ಎನ್ನುವುದು ಹೊಳೆಯಬೇಕು. ಆ ದೂರ ಈ ಕಾವ್ಯದಲ್ಲಿ ಮೈತಾಳಬೇಕು ಎಂದು ಪ್ರತಿಪಾದಿಸುವುದು ಅವರಿಗೆ ಗೊತ್ತಿತ್ತು. ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಎಂಬುದನ್ನು ಶಾಸ್ತ್ರೀಯವಾಗಿ ಹಾಡಿದಾಗ ಅಶ್ವತ್ಥ್ ಗೇಲಿ ಮಾಡುತ್ತಿದ್ದರು. ಬಾಗಿಲೊಳು ಕೈ ಮುಗಿದು ಒಳಗೆ ಬಾ ಅನ್ನುವುದನ್ನು ಎಷ್ಟು ನಿಧಾನವಾಗಿ ಹಾಡುತ್ತಾರೆ ಅಂದರೆ ಹೊರಗೆ ನಿಂತವನನ್ನು ಒಳಗೆ ಬರುವುದಕ್ಕೇ ಇವರು ಬಿಡುವುದಿಲ್ಲ ಎಂದು ಕಾಲೆಳೆಯುತ್ತಿದ್ದರು. ಶ್ರುತಿಯೇ ಇಲ್ಲ ಅಶ್ವತ್ಥರಿಗೆ ಎಂದು ಅವರು ರೇಗುತ್ತಿದ್ದರು. ಕಾವ್ಯ ಪ್ರೀತಿಯೇ ಇಲ್ಲ ಅವರಿಗೆ ಎಂದು ಅಶ್ವತ್ಥ್ ಗುಟುರು ಹಾಕುತ್ತಿದ್ದರು.

ಕನ್ನಡ ಕಾವ್ಯ ವಾಚಕರ ಕೈಗೆ ಸಿಕ್ಕಿ ಸೊರಗಿ, ತನ್ನ ಅರ್ಥಗಳನ್ನು ನೀಗಿಕೊಂಡು ಬೆಕ್ಕಸಬೆರಗಾಗಿ ನಿಂತ ದಿನಗಳಲ್ಲಿ, ಅದನ್ನು ಸಂಗೀತದ ಮೊರದಲ್ಲಿಟ್ಟು ರಸಿಕರಿಗೆ ಬಾಗಿನ ಕೊಟ್ಟವರು ಅಶ್ವತ್ಥ್. ಕೆ ಎಸ್ ನರಸಿಂಹಸ್ವಾಮಿ, ಬಿಆರ್ ಲಕ್ಷ್ಮಣರಾವ್, ಎಚ್ ಎಸ್ ವೆಂಕಟೇಶ ಮೂರ್ತಿ ಮುಂತಾದವರೆಲ್ಲ ಓದುಬಾರದ, ಓದಲಾಗದ ಮಂದಿಗೆ ದಕ್ಕಿದ್ದು ಅಶ್ವತ್ಥರಿಂದಲೇ. ಕಾವ್ಯಕ್ಕೆ ಇರುವ ಮೂವತ್ತಮೂರೂವರೆ ಓದುಗರ ಬಡಾವಣೆಯಿಂದ ಕವಿತೆಗಳು ಹೊರಬಂದದ್ದೇ ಆಗ.

ಅಶ್ವತ್ಥರು ಭಾವಗಾಯನ ಸಂಸ್ಥಾನದ ಕೊನೆಯ ಅರಸ. ಕಾಳಿಂಗರಾವ್, ಅನಂತಸ್ವಾಮಿ ಮತ್ತು ಅಶ್ವತ್ಥ್- ತಮ್ಮ ತಮ್ಮ ಜೀವಿತಾವಧಿಯಲ್ಲಿ ಕಾವ್ಯವನ್ನು ಪೊರೆಯುತ್ತಾ ಬಂದವರು. ಅಶ್ವತ್ಥರು ಒಂದು ಹೆಜ್ಜೆ ಮುಂದೆ ಹೋಗಿ, ಕವಿಗಳ ಜೊತೆಗೆ ಕೂತು ತಾವೇ ಹಠದಿಂದ ಕವಿತೆಗಳನ್ನು ಬರೆಸಿ ಸಂಗೀತ ಸಂಯೋಜಿಸಿ ಹಾಡಲು ಆರಂಭಿಸಿದರು. ಹೀಗಾಗಿ ಸಾಕಷ್ಟು ಕವಿತೆಗಳು ಅಶ್ವತ್ಥರಿಗಾಗಿಯೇ ಹುಟ್ಟಿಕೊಂಡವು, ಅಥವಾ ಬದಲಾವಣೆ ಕಂಡವು. ಲಕ್ಷ್ಮಣರಾವ್ ಅವರ ನವ್ಯ ಕವಿತೆಗಳು ಅಶ್ವತ್ಥರಿಗಾಗಿ ಲಯಬದ್ಧ ಸಾಲುಗಳಾದವು. ಕೃಷ್ಣನ ಮೇಲೆ ಎಚ್‌ಎಸ್‌ವಿ ಒಂದಷ್ಟು ಪದ್ಯಗಳನ್ನು ಬರೆದು ಅಶ್ವತ್ಥ್ ಮುಂದಿಟ್ಟರೆ, ಅಶ್ವತ್ಥರು ಅದನ್ನು ತೂಗುಮಂಚದಲ್ಲಿಟ್ಟು ತೂಗಿದರು. ರಾಗರಥದಲ್ಲಿಟ್ಟು ಬೀಗಿದರು.

ಒಂದೊಂದು ಸಾಲನ್ನೂ ಒಂದೊಂದು ಪದವನ್ನೂ ಹೇಳಿ, ಹೇಗಿದೆ ನೋಡಿ ಈ ಪದ ಎಂದು ಬೆರಗಾಗುತ್ತಾ ಆಗುತ್ತಾ ರಾಗಸಂಯೋಜನೆ ಮಾಡುವ ಶಕ್ತಿ ಅವರಿಗಿತ್ತು. ಅದು ಶಕ್ತಿಯಲ್ಲ, ಪ್ರೀತಿ. ಅವರಿಗೆ ಕವಿತೆ ತನ್ನ ರಾಗಕ್ಕೊಪ್ಪುವ ಪದಗಳ ನಿರರ್ಥಕ ಪುಂಜವಷ್ಟೇ ಆಗಿರಲಿಲ್ಲ. ತನ್ನನ್ನು ಆವಾಹಿಸಿಕೊಂಡು ರೂಪಾಂತರಗೊಳಿಸಬಲ್ಲ ಅಪೂರ್ವ ಶಕ್ತಿ ಕಾವ್ಯಕ್ಕಿದೆ ಎಂದು ಅವರಿಗೂ ಗೊತ್ತಿತ್ತು. ಸರಳವಾದ, ಕಳಪೆಯಾದ ರಚನೆಗಳು ಅವರ ಕೈಯಲ್ಲಿ ಯಾವತ್ತೂ ಅಪೂರ್ವ ತೇಜಸ್ಸನ್ನು ಪಡೆದುಕೊಳ್ಳುತ್ತಲೇ ಇರಲಿಲ್ಲ. ಒಂದು ಸಾರಿ ಒಬ್ಬರೇ ಕೂತು ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ’ ಹಾಡನ್ನು ಕೇಳಿನೋಡಿ. ಆ ಹಾಡು ನಿಮ್ಮಲ್ಲೂ ಸಂಭವಿಸದೇ ಹೋದರೆ ಅಶ್ವತ್ಥ್ ಹಾಡಿದ್ದೇ ಸುಳ್ಳು, ರಾಗ ಸಂಯೋಜನೆ ಮಾಡಿದ್ದೇ ಸುಳ್ಳು.

ಅಶ್ವತ್ಥ್ ನಂತರ ಯಾರು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಫಲ್ಗುಣ, ಉಪಾಸನಾ ಮೋಹನ್ ಮುಂತಾದವರು ಭಾವಗೀತೆಯನ್ನು ಕಲಿಸುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ. ಎಂ. ಡಿ. ಪಲ್ಲವಿ ಕವಿತೆಯ ಅರ್ಥವನ್ನೆಲ್ಲ ಹೀರಿಕೊಂಡು, ತನ್ನೊಳಗೆ ಅದನ್ನು ರೂಪಾಂತರಿಸಿ ದಾಟಿಸುವ ಅಪರೂಪದ ಗಾಯಕಿಯಾಗಿದ್ದಾರೆ. ಹೊಸಬರೂ ಅಲ್ಲದ ಹಳಬರೂ ಅಲ್ಲದ ಯಶವಂತ್ ಹಳೀಬಂಡಿ, ಸುಪ್ರಿಯಾ ಆಚಾರ್ಯ, ದಿವ್ಯಾ ರಾಘವನ್ ಮುಂತಾದವರಿದ್ದಾರೆ. ಅವರನ್ನು ಮುನ್ನಡೆಸುವುದಕ್ಕೆ ಕಿಕ್ಕೇರಿ ಕೃಷ್ಣಮೂರ್ತಿಯಿದ್ದಾರೆ. ಗುರಿ ತೋರುವುದಕ್ಕೆ ಮುದ್ದು ಕೃಷ್ಣ ಇದ್ದಾರೆ.

ಆದರೆ ಇವರು ಯಾರೂ ಅಶ್ವತ್ಥರ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರವಲ್ಲ. ಅವರೆಲ್ಲ ಅಶ್ವತ್ಥರ ಜತೆಗೇ ಹಾಡುತ್ತಿದ್ದವರು. ಅವರ ಸಮಕಾಲೀನರು. ಅಶ್ವತ್ಥರ ಪ್ರತಿಭೆಯನ್ನೂ ಮೀರಿಸಿದ ಜನಪ್ರಿಯತೆಯ ಪ್ರಭಾವಳಿಯನ್ನು ಮೀಟಿ ಹೊರಬರುವುದು ಇವರೆಲ್ಲರಿಗೂ ಕಷ್ಟದ ಕೆಲಸ. ಅಶ್ವತ್ಥರ ಪ್ರತಿಭೆಯನ್ನು ಹೋಲುವ ಯಾರೂ ಇಲ್ಲಿಲ್ಲ ಎಂದು ನಾವೆಲ್ಲ ನಂಬಿಕೊಂಡಾಗಿದೆ. ಅದು ಎಲ್ಲಾ ಕ್ಷೇತ್ರಗಳಲ್ಲೂ ಸಹಜ.

ಒಳ್ಳೆಯ ಕವಿತೆಯೊಂದನ್ನು ಓದಿದಾಗ ಅದನ್ನು ಯಾರಾದರೂ ಹಾಡಬೇಕಿತ್ತು ಎಂಬ ಭಾವವೇನೂ ನನ್ನಲ್ಲಿ ಮೂಡುವುದಿಲ್ಲ. ಆದರೆ ಮನಮುಟ್ಟುವಂತೆ ಹಾಡಿದಾಗ, ಈ ಕವಿತೆಯನ್ನು ನಾನು ಓದಿದ್ದೆ ಎಂಬುದು ನೆನಪಾಗುತ್ತದೆ. ಭಾವಪೂರ್ಣವಾಗಿ ಹಾಡಿ ನಮಗೆ ಆ ಕವಿತೆ ಓದುವಾಗ ಹೊಳೆದ ಅರ್ಥಕ್ಕಿಂತ ಹೆಚ್ಚಿನ ಅರ್ಥವನ್ನು ಹೊಳಯಿಸಿದರೆ ಸಂತೋಷವಾಗುತ್ತದೆ.

ಅಶ್ವತ್ಥರು ಎಷ್ಟೋ ಕವಿತೆಗಳಲ್ಲಿ ಅಂಥ ಪವಾಡ ಮಾಡಿದ್ದಾರೆ. ಚಂದ್ರನಲಿ ಚಿತ್ರಿಸಿದ ಚೆಲುವಿನನೊಳಗುಡಿಯಿಂದ ಗಂಗೆ ಬಂದಳು ಇದ್ದ ಕಡೆಗೇನೇ’ ಎಂಬ ಸಾಲಿನ ಕೊನೆಗೆ ಪ್ರಶ್ನಾರ್ಥಕ ಚಿನ್ಹೆಯಿದೆಯಾ, ಆಶ್ಚರ್ಯ ಸೂಚಕ ಇದೆಯಾ, ಪೂರ್ಣ ವಿರಾಮ ಇದೆಯಾ ಎಂದು ಅಶ್ವತ್ಥರನ್ನೊಮ್ಮೆ ಕೇಳಿದ್ದೆ. ಅವರು ಆ ಮೂರೂ ಭಾವವೂ ಹೊರಹೊಮ್ಮುವಂತೆ ಆ ಸಾಲನ್ನು ಹಾಡಿ ತೋರಿಸಿದ್ದರು.

ಅದು ಅವರ ಕಾವ್ಯಪ್ರೀತಿ ಮತ್ತು ನಮ್ಮ ಕಾಲದ ಪುಣ್ಯ. ಸದ್ಯಕ್ಕಂತೂ ಕಾವ್ಯ ಮೃಣ್ಮಯ. ಅದನ್ನೆತ್ತಿಕೊಳುವ ಧೀರ ಬಂದಾಗ ಚಿನ್ಮಯ.

4 comments:

ಆನಂದ said...

ಭಾವನಗರಿಯ ದಿಡ್ಡಿಬಾಗಿಲ ಬಳಿ ಅಶ್ವತ್ಥ ಮರದಂತಿದ್ದವರು ಇನ್ನಿಲ್ಲ ಅಂದಾಗ ಸಂಕಟ ಸಹಜ. ನೆನಪಿಗೆ ಸಾಕಷ್ಟು ಹಾಡುಗಳನ್ನು ಬಿಟ್ಟು ಹೋಗಿದ್ದಾರೆ. ಒಮ್ಮೊಮ್ಮೆ ಕಾವ್ಯ ವಾಚನ ಮಾಡುತ್ತಿದ್ದಾರೇನೋ ಎಂದನಿಸುತ್ತಿದ್ದರೂ ಬಿಡದೆ ಅವರ ಹೊಸ ಹಾಡುಗಳನ್ನು ಕೊಳ್ಳುವಂತೆ ಸೆಳೆಯುವ ಶಕ್ತಿ ಅವರಲ್ಲಿತ್ತು. ನಮ್ಮ ಕಾಲದವರಿಗೆ ಕಾವ್ಯವನ್ನು ಸಂಗೀತದೊಡನೆ ನೀಡಿದವರು ಅವರು.
ಆಪ್ತವಾದ ಬರಹ.

Anonymous said...

ನನ್ನ ಮೂಕಮನಸ್ಸಿನ ಮಾತಾಗಿದೆ ಈ ಲೇಖನ.

ನನ್ನ ಏಕಾಂತವನ್ನು ಸಹ್ಯವಾಗಿಸಿದ, ದುಃಖದ ಸಮಯದಲ್ಲಿ ಮೈದಡವುತಿದ್ದ ಅದ್ಭುತ ರಾಗ ಸಂಯೋಜಕ ಅಶ್ವತ್ಥ್.

ಕೆಲವರಿಗೆ ನಾವು ಸಾಮಾಜಿಕವಾಗಿ ಋಣಿಗಳಾಗಿರಬೇಕು ಅಂತ ಅನ್ನಿಸಿದ್ದೇ ಅವರ ಹಾಡುಗಳನ್ನು ಕೇಳಿದ ಮೇಲೆ.

ಮುಂದೇನನ್ನಬೇಕೋ ಗೊತ್ತಾಗ್ತಿಲ್ಲ. ಬಹಳ ಚಂದದ ಲೇಖನ. ಓದಿ ತೃಪ್ತವಾಯ್ತು ಮನಸ್ಸು.

ಸಿಂಧು Sindhu said...

ಅದ್ಭುತ!

ಇನ್ಯಾರೇ ಸಂಯೋಜನೆ ಮಾಡಿದರೂ ನಾದವಿರದು ಅದರಲಿ, ವಿನೋದವಿರದು ಅದರಲಿ ಎಂದನ್ನಿಸುವಂತೆ ಹಾಡು ಕಟ್ಟಿದವರು, ಮಾಡುವವನದಲ್ಲ ಹಾಡು ಹಾಡುವವನದು ಎಂಬುದನ್ನ ಅಕ್ಷರಶಃ ಸಾಕ್ಷಾತ್ಕರಿಸಿಕೊಟ್ಟವರು ಅವರು.
ನಿಮ್ಮ ಲೇಖನ ಓದಿ ಅವರ ದೂsssssರ ಸನಿಹವಾಗಿದೆ.

ಪ್ರೀತಿಯಿಂದ,
ಸಿಂಧು

ಸುಶ್ರುತ ದೊಡ್ಡೇರಿ said...

ಕ್ಲಾಸಿಕ್! ಎಷ್ಟೆಲ್ಲ ಓದಿದೆ ಅಶ್ವತ್ಥ್ ಬಗ್ಗೆ.. ಇದು ಎಲ್ಲಕ್ಕಿಂತ ಆಪ್ತ ಅನ್ನಿಸಿತು.