ಜೀವಂತವಾಗಿದ್ದಾರಾ?
ಹೂಂ.
ಕರ್ನಾಟಕದವರಾ? ಹೊರಗಿನವರಾ?
ಕರ್ನಾಟಕದವರು.
ಕಲೆ, ಧಾರ್ಮಿಕ, ಸಾಹಿತ್ಯ, ರಾಜಕೀಯ, ಸಿನಿಮಾ, ಕ್ರೀಡೆ...
ಸಾಹಿತ್ಯ.
ಪ್ರಶಸ್ತಿ ಬಂದಿದ್ಯಾ...
ಹೂಂ.
ನಮ್ಮ ದೇಶದ ಪ್ರಶಸ್ತಿಯಾ, ವಿದೇಶಿ ಪ್ರಶಸ್ತಿಯಾ?
ವಿದೇಶಿ..
ಅಡಿಗ, ಅರವಿಂದ ಅಡಿಗ.
ಎಲ್ಲರೂ ಹೋ’ ಎಂದು ಸಂಭ್ರಮಿಸಿದರು. ಕವಿಗಳು ಬೆರಗಾಗಿ ಕೂತರು.ಮತ್ಯಾರೋ ಕೈ ಕುಲುಕಿದರು. ಐದೇ ಪ್ರಶ್ನೆಗಳಲ್ಲಿ ಉತ್ತರ ಸಿಕ್ಕಿತು ಅಂದರು. ಇದು ನಮ್ಮೂರ ಹುಡುಗರ ಹೊಸ ಆಟ. ಅದಕ್ಕೆ ಅವರಿಟ್ಟ ಹೆಸರು ಅಶ್ವಮೇಧ’. ಆಟದ ನಿಯಮ ಇಷ್ಟೇ. ಒಂದು ಪುಟ್ಟ ಚೀಟಿಯಲ್ಲಿ ಒಬ್ಬ ಖ್ಯಾತನಾಮರ ಹೆಸರು ಬರೆದಿಟ್ಟುಕೊಳ್ಳಿ. ಅವರ ಬಗ್ಗೆ ಆಥ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾನೆ. ನೀವು ಇಪ್ಪತ್ತೊಂದು ಪ್ರಶ್ನೆಗಳಿಗೆ ಉತ್ತರ ಕೊಡುವ ಮೊದಲೇ ನೀವು ಬರೆದಿಟ್ಟುಕೊಂಡ ವ್ಯಕ್ತಿ ಯಾರೆಂದು ಆತ ಹೇಳುತ್ತಾನೆ. ಹಾಗೆ ಹೇಳುವವನ ಹೆಸರು ಮುಸ್ತಫಾ.
ಮೇಲ್ನೋಟಕ್ಕೆ ಇದೊಂದು ಅತ್ಯಂತ ಸರಳವಾದ ಆಟದಂತೆ ಕಾಣಿಸುತ್ತದೆ. ಆದರೆ ಒಂದು ಮಟ್ಟದ ಜನರಲ್ ನಾಲೆಜ್ ಇಲ್ಲದೇ ಹೋದರೆ, ನಿತ್ಯವೂ ಪೇಪರ್ ಓದದೇ ಇದ್ದರೆ, ಚರಿತ್ರೆಯಿಂದ ಹಿಡಿದು, ಇತ್ತೀಚಿನ ಆಗುಹೋಗುಗಳ ತನಕ ಎಲ್ಲವನ್ನೂ ತಿಳಿದುಕೊಂಡಿರದೇ ಇದ್ದರೆ ಕೇವಲ ಕೆಲವೇ ಕೆಲವು ಸೂಚನೆಗಳನ್ನು ಮುಂದಿಟ್ಟುಕೊಂಡು ಹೇಳುವುದು ಕಷ್ಟ. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್, ದಕ್ಷಿಣ ಕನ್ನಡದ ವಿಟ್ಲ ಎಂಬ ಊರಿನ ಹವ್ಯಕ ಹೆಂಗಸು ಎಂಬ ಸಣ್ಣ ವಿವರಗಳೂ ಅಲ್ಲಿ ಮುಖ್ಯ.
ಇದನ್ನು ನೋಡುತ್ತಿದ್ದರೆ ಆಶ್ಚರ್ಯವಾಯಿತು. ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ, ಕೆ ವಿ ತಿರುಮಲೇಶ್, ಯಶವಂತ ಚಿತ್ತಾಲ, ಭೀಮಸೇನ ಜೋಷಿ, ಅಷ್ಟೇನೂ ಖ್ಯಾತರಲ್ಲದ ಡಿ ಎ ಶಂಕರ್- ಹೀಗೆ ಎಲ್ಲರ ಕುರಿತು ಮಾಹಿತಿ ಇಟ್ಟುಕೊಂಡ ಮುಸ್ತಫಾ ಮತ್ತು ಗೆಳೆಯರ ಗುಂಪು ತಮ್ಮಷ್ಟಕ್ಕೇ ತಾವು ಓದುತ್ತಾ, ತಿಳಿದುಕೊಳ್ಳುತ್ತಾ, ಬೆರಗುಗೊಳ್ಳುತ್ತಾ, ಸಂಭ್ರಮಪಡುತ್ತಾ ಇರುವುದನ್ನು ನೋಡಿ ಡುಂಡಿರಾಜ್, ಸುಬ್ರಾಯ ಚೊಕ್ಕಾಡಿ, ಲಕ್ಷ್ಮಣರಾವ್ ಕೂಡ ಅಚ್ಚರಿಯಿಂದ ನೋಡತೊಡಗಿದರು. ಲಕ್ಷ್ಮಣರಾವ್ ಅವರ ಮೂವತ್ತೋ ನಲವತ್ತೋ ಕವಿತೆಗಳನ್ನು ಥಟ್ಟನೆ ಹೇಳಬಲ್ಲ ಆರೆಂಟು ಹುಡುಗರು ಅಲ್ಲಿದ್ದರು. ಎಷ್ಟೋ ವರ್ಷಗಳ ಹಿಂದೆ ಸಂತೋಷ’ ಪತ್ರಿಕೆಯಲ್ಲಿ ದೆಹಲಿಯ ಬಗ್ಗೆ ಚೊಕ್ಕಾಡಿ ಬರೆದ ಕವಿತೆಯನ್ನು ಮತ್ಯಾರೋ ನೆನಪಿಸಿದರು. ಡುಂಡಿರಾಜ್ ಎಂದೋ ಬರೆದಿದ್ದ, ಸದ್ಯಕ್ಕೆ ಯಾರೂ ನೆನಪಿಸಿಕೊಳ್ಳದ ಓಡುವವರು’ ನಾಟಕದ ಸಾಲುಗಳನ್ನು ಹೇಳಿದರು. ಹೀಗೆ ಇಡೀ ರಾತ್ರಿ ಉಲ್ಲಾಸದಿಂದ ಸರಿಯುತ್ತಿತ್ತು.
ಇದು ಉಪ್ಪಿನಂಗಡಿಯ ಕತೆ. ಅಲ್ಲಿ ಎದುರಾಗುವ ಅಶ್ರಫ್, ಮಹೇಂದ್ರ, ಶಾಹುಲ್ ಹಮೀದ್, ಕಿಶೋರ್ ಅಧಿಕಾರಿ, ಮುಸ್ತಫಾ ಮತ್ತು ಇವರೆಲ್ಲರ ಗುರುವಿನಂತಿರುವ ಗೋಪಾಲಕೃಷ್ಣ ಕುಂಟಿನಿ ಮುಂತಾದ ಗೆಳೆಯರ ಬಳಗವೊಂದು ತಣ್ಣಗೆ ತಮಗೆ ಬೇಕಾದ್ದನ್ನು ಓದಿಕೊಂಡು, ನೋಡಿಕೊಂಡು, ಮಾಡಿಕೊಂಡು ತಮ್ಮ ಆರೋಗ್ಯವನ್ನು ಅಭಿರುಚಿಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿದೆ. ನಾನು ನೋಡಿದ ಎಲ್ಲ ಪುಟ್ಟ ಊರುಗಳಲ್ಲೂ ಇಂಥದ್ದೊಂದು ಗುಂಪಿದೆ. ಅವರು ತಮಗಿಷ್ಟ ಬಂದಿದ್ದನ್ನು ಓದುತ್ತಾ, ಪತ್ರಿಕೆಯಲ್ಲಿ ಬಂದ ಪುಸ್ತಕ ತರಿಸಿಕೊಂಡು ಓದಿ ಚರ್ಚಿಸುತ್ತಾ, ಬೆಂಗಳೂರಲ್ಲಿ ಮಾತ್ರ ಒಂದೋ ಎರಡೋ ಪ್ರದರ್ಶನ ಕಾಣುವ ಕಲಾತ್ಮಕ ಚಿತ್ರಗಳ ಡೀವೀಡಿ ತರಿಸಿಕೊಂಡು ಸಿನಿಮಾ ನೋಡುತ್ತಾ, ತಮ್ಮನ್ನು ಮುಖ್ಯವಾಹಿನಿಯಿಂದ ಹೊರಗಿಟ್ಟದ್ದರ ಬಗ್ಗೆ ಬೇಸರಪಡುತ್ತಾ, ಆ ಮಿತಿಯಲ್ಲೇ ಜೀವನೋತ್ಸಾಹ ಕಂಡುಕೊಳ್ಳುತ್ತಿರುತ್ತಾರೆ. ಅಂಥವರಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಬೆಂಗಳೂರು ತಲೆಕೊಡವಿಕೊಂಡು ಇನ್ನೆಲ್ಲೋ ನೋಡುತ್ತಿದೆ.
*****
ಇವತ್ತಿನ ಚೈತನ್ಯದ ಚಿಲುಮೆಗಳು ಗ್ರಾಮೀಣ ಕರ್ನಾಟಕದಲ್ಲಿವೆ ಅನ್ನುವುದಂತೂ ಸತ್ಯ. ಬೆಂಗಳೂರಿನ ಮಟ್ಟಿಗೆ ಇವತ್ತು ದುಡಿಮೆ ಎನ್ನುವುದು ಮೂಲಮಂತ್ರ. ದುಡಿಮೆ ಒಂದು ಮೌಲ್ಯ ಮಾತ್ರವೇ ಆಗಿದ್ದ ದಿನಗಳು ಕಣ್ಮರೆಯಾಗಿ, ದುಡಿಮೆಗೆ ಇವತ್ತು ಅದಕ್ಕಿಂತ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ. ಕಾಯಕವೇ ಕೈಲಾಸ ಎನ್ನುವುದು ಸುಳ್ಳಾಗುತ್ತಿದೆ. ದುಡಿಮೆಯ ಜೊತೆಗೇ ಬೆಸೆದುಕೊಂಡಿದ್ದ ಸೌಖ್ಯ ಮಾಯವಾಗಿದೆ. ನಮ್ಮಲ್ಲಿ ಬಹುತೇಕ ಮಂದಿ, ನಾವು ಮಾಡಬೇಕಾದದ್ದನ್ನು ಸಂತೋಷದಿಂದ ಮಾಡುತ್ತಿಲ್ಲ. ಅದರ ಬದಲು, ಅಲ್ಲೊಂದು ಬಗೆಯ ಅನಿವಾರ್ಯ ಕರ್ಮದ ಒತ್ತಡ, ಸೂತಕದ ಛಾಯೆ ಕಾಣಿಸುತ್ತಿದೆ. ಹಾಡುತ್ತಾ ಗೆಯ್ಮೆ ಮಾಡುತ್ತಿದ್ದ, ನಾಟಿ ಮಾಡುತ್ತಾ, ಬತ್ತ ಕುಟ್ಟುತ್ತಾ, ರಾಗಿ ಬೀಸುತ್ತಾ ಆ ಕೆಲಸದ ಸಂತೋಷವನ್ನು ಅನುಭವಿಸುತ್ತಿದ್ದ ದಿನಗಳು ಇವತ್ತಿಲ್ಲ. ದಿನಕ್ಕೆ ಲಕ್ಷಾಂತರ ರುಪಾಯಿ ವ್ಯಾಪಾರ ಮಾಡುವ ಹೊಟೆಲೊಂದರ ಅಡುಗೆ ಭಟ್ಟರೊಬ್ಬರು ಹೇಳುತ್ತಿದ್ದರು; ಮೊದಲೆಲ್ಲ ನಮ್ಮ ಹೊಟೆಲಿಗೆ ನಾನು ಇಷ್ಟಪಡೋ ವ್ಯಕ್ತಿಗಳು ಬರುತ್ತಿದ್ದರು. ಸಾಹಿತಿಗಳು, ಸಂಗೀತಗಾರರು, ರಾಜಕಾರಣಿಗಳು, ಕ್ರೀಡಾಪಟುಗಳು ಬಂದು ನಾನು ಮಾಡಿದ ದೋಸೆ ತಿಂದು ಸಂತೋಷಪಡುತ್ತಿದ್ದರು. ಆಗೆಲ್ಲ ನನ್ನ ಬಗ್ಗೆ ಒಂಥರ ಖುಷಿಯಾಗುತ್ತಿತ್ತು. ಸಾರ್ಥಕತೆ ಮೂಡುತ್ತಿತ್ತು. ಇವತ್ತು ಹಾಗಿಲ್ಲ. ಆಗ ದಿನಕ್ಕೆ ನೂರಿನ್ನೂರು ದೋಸೆ ಮಾಡುತ್ತಿದ್ದೆ. ಈಗ ಎಂಟು ನೂರು ದೋಸೆ ಮಾಡುತ್ತೇನೆ. ಬರೀ ದೋಸೆ ಮಾಡುವುದಷ್ಟೇ ಜೀವನ ಎಂಬಂತಾಗಿದೆ.
ಪತ್ರಿಕೋದ್ಯಮದಲ್ಲೂ ಅದೇ ಆಗಿದೆ. ನಾವು ಸಿನಿಮಾ ಪತ್ರಿಕೋದ್ಯಮ ಆರಂಭಿಸಿದ ದಿನಗಳಲ್ಲಿ ಅಲ್ಲೊಂದು ಸಂಭ್ರಮ ಇರುತ್ತಿತ್ತು. ಸಿನಿಮಾ ನಟರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸುಮ್ಮನೆ’ ಹರಟುವಷ್ಟು ವ್ಯವಧಾನ ಇಟ್ಟುಕೊಂಡಿದ್ದರು. ವಿಷ್ಣುವರ್ಧನ್ ಜೊತೆ ಕುಳಿತರೆ, ರಾಜಕೀಯ, ಕ್ರಿಕೆಟ್, ಸಂಗೀತ, ಮತ್ಯಾವುದೋ ಇಟೆಲಿಯ ಸಿನಿಮಾದ ಬಗ್ಗೆ ಮಾತಾಗುತ್ತಿತ್ತು. ಪರಸ್ಪರರನ್ನು ಗೇಲಿ ಮಾಡಿಕೊಳ್ಳುತ್ತಾ ಅಲೆಲ್ಲ ನಗು ಹರಡುತ್ತಿತ್ತು. ಇವತ್ತು ಪತ್ರಕರ್ತರಿಗೂ ಅಷ್ಟು ಪುರುಸೊತ್ತಿಲ್ಲ. ಸಿನಿಮಾನಟರಂತೂ ಸೆಕೆಂಡುಗಳ ಲೆಕ್ಕದಲ್ಲಿ ಬದುಕುತ್ತಿದ್ದಾರೆ. ಪತ್ರಕರ್ತ ತಾನು ಕೇಳಿಸಿಕೊಂಡಿದ್ದನ್ನೋ ಶೂಟ್ ಮಾಡಿದ್ದನ್ನೋ ತಕ್ಷಣ ಜನರಿಗೆ ತಲುಪಿಸಬೇಕು ಎಂದು ಓಡುತ್ತಿರುತ್ತಾನೆ. ನಟನಿಗೋಸ್ಕರ ಮುಂದಿನ ಚಿತ್ರದ ಕತೆ ಹೇಳುವವರು ಕಾಯುತ್ತಿರುತ್ತಾರೆ.
ಇಂಥದ್ದರ ಮಧ್ಯೆ ಪ್ರಕಾಶ್ ರೈ ಬೇರೆಯೇ ಆಗಿ ನಿಲ್ಲುತ್ತಾರೆ. ಮೊನ್ನೆ ಊರಿಗೆ ಹೋಗುತ್ತಾ ಅವರ ನಾನೂ ನನ್ನ ಕನಸು’ ಶೂಟಿಂಗ್ ನಡೆಯುತ್ತಿದ್ದ ಯಜಮಾನ್ ಎಸ್ಟೇಟ್ಗೆ ಹೋದರೆ ಅಲ್ಲಿ ಪ್ರಕಾಶ್ ರೈ ಎಂದಿನ ಉಲ್ಲಾಸದಲ್ಲಿ ಕೂತಿದ್ದರು. ಎರಡು ಹಾಡು ನೋಡೋಣ ಎಂದರು. ಹಾಡು ಮುಗಿಯುತ್ತಿದ್ದಂತೆ ಇತ್ತೀಚೆಗೆ ಓದಿದ ಪುಸ್ತಕಗಳ ಬಗ್ಗೆ ಮಾತಾಡಿದರು. ಹಳೆಯ ಗೆಳೆಯರಾದ ಶೆಣೈ, ಮರಕಿಣಿ ಹೇಗಿದ್ದಾರೆ ಎಂದು ವಿಚಾರಿಸಿಕೊಂಡರು. ಕರ್ತವ್ಯದಲ್ಲಿ ಕಳೆದು
ಹೋಗುತ್ತಿದ್ದೀರಿ. ಸುಮ್ಮನೆ ಎಲ್ಲರೂ ಹೊರಟು ಬನ್ನಿ, ಖುಷಿಯಾಗಿ ಒಂದೆರಡು ದಿನ ಇದ್ದು ಹೋಗಿ ಎಂದರು. ಇವತ್ತು ಖುಷಿಯಾಗಿ ಒಂದೆರಡು ದಿನ ಸುಮ್ಮನೆ ಇದ್ದುಹೋಗಿ ಎನ್ನುವವರು ಸಿಕ್ಕಿದ್ದೇ ಒಂದು ಪವಾಡ ಎಂದು ನಾವೊಂದಷ್ಟು ಮಂದಿ ಮಾತಾಡಿಕೊಂಡೆವು.
ಉಲ್ಲಾಸ ತುಂಬುವ ಸಂಗತಿಗಳು ತುಂಬಾ ಕಡಿಮೆ. ಅವುಗಳನ್ನು ನಾವು ಸವಿಯದೇ ಹೋದರೆ, ಆ ರಸಬಿಂದುಗಳೂ ಬತ್ತಿಹೋಗುತ್ತವೆ. ಅನ್ನಿಸಿದ್ದೇನನ್ನೋ ಬರೆದಾಗ, ಅದನ್ನು ಆಪ್ತರ ಜೊತೆ ಹಂಚಿಕೊಳ್ಳುವುದು, ಥ್ರೀ ಈಡಿಯಟ್ಸ್ ಸಿನಿಮಾದ ದೃಶ್ಯವೊಂದನ್ನು ನೆನೆದು ಹಳೆಯ ದಿನಗಳಿಗೆ ಜಾರುವುದು, ನಾಲ್ಕಾರು ಮಂದಿ ತಿಂಗಳಿಗೊಮ್ಮೆ ಕಾವೇರಿ ಫಿಷಿಂಗ್ ಕ್ಯಾಂಪಿಗೆ ಹೋಗಿ ಗಾಳ ಹಾಕುತ್ತಾ ಕೂರುವುದು, ಪಿವಿಆರ್ ಚಿತ್ರಮಂದಿರದ ಮೆಟ್ಟಲಲ್ಲಿ ಕೂತು ಪಾಪ್ಕಾರ್ನ್ ತಿನ್ನುತ್ತಾ ಆ ಗದ್ದಲವನ್ನು ಸವಿಯುವುದು.. ಇವೆಲ್ಲ ಇವತ್ತಿಗೂ ಜಗತ್ತಿನಲ್ಲಿ ನಡೆಯುತ್ತಲೇ ಇದೆ. ಮೊನ್ನೆ ಮೊನ್ನೆ ಒಂದಷ್ಟು ಮಿತ್ರರು ಕೊಡಗಿನ ಪುಷ್ಪಗಿರಿಗೆ ಹೋಗಿ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ನಡೆದಾಡಿ, ಸೂರ್ಯಾಸ್ತ ನೋಡಿ ಬಂದರು. ನಾವೊಂದಷ್ಟು ಮಂದಿ ಡ್ರೈವರ್ ಮೇಲೆ ರೇಗುತ್ತಾ, ಇನ್ನೊಂದು ದಾರಿಯಲ್ಲಿ ಬಂದಿದ್ದರೆ ಅರ್ಧಗಂಟೆ ಮುಂಚೆ ತಲುಪಬಹುದು ಎಂದು ಗೊಣಗಿಕೊಳ್ಳುತ್ತಾ, ಶೂಟಿಂಗು ಮುಗಿದಿದ್ದೇ ತಡ ಮತ್ತೊಂದು ಊರಿಗೆ ಹೋಗುವ ತರಾತುರಿಯಲ್ಲಿ ಧಾವಂತ ಮಾಡಿಕೊಳ್ಳುತ್ತಿದ್ದೆವು.
ಪಯಣಿಸಿದ ಹಾದಿ, ಹೊರಟ ಜಾಗ, ತಲುಪಬೇಕಾದ ಊರು, ಅಲ್ಲಿನ ತಂಗಾಳಿ, ಸೊರಗಿದ ನದಿ, ಮುಂಜಾವದ ಮಂಜು, ಹಳೆಯ ಗುಡಿ, ಕತ್ತಲ ಸುರಂಗ, ನೀರು ಜಿನುಗಿಸುವ ಗುಹೆ- ಎಲ್ಲವನ್ನೂ ಕರ್ತವ್ಯ ನಿಷ್ಠರಂತೆ ನೋಡುತ್ತಿದ್ದೆವು.
ವಾಪಸ್ಸು ಬರುವ ದಾರಿಯಲ್ಲಿ ಕೌದಿ ಹೊದ್ದುಕೊಂಡು ಬೆಂಕಿ ಕಾಯಿಸಿಕೊಳ್ಳುತ್ತಾ ಕುಳಿತಿದ್ದ ಅರುವತ್ತು ದಾಟಿದಂತಿದ್ದ ಮುದುಕನೊಬ್ಬನ ಕಣ್ಣುಗಳು, ಬೆಂಕಿಬೆಳಕಿಗೆ ಪ್ರಜ್ವಲಿಸುತ್ತಿದ್ದವು. ಆ ಕಾಡಿನ ಮಧ್ಯೆ ಕೂತುಕೊಂಡು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಕಲ್ಪನೆಯೇ ಇಲ್ಲದೇ ಕಾಲಾಂತರದಲ್ಲಿ ಲೀನನಾದ ಅವನಂತೆ ಬದುಕಬೇಕು ಎಂದು ಆಸೆಯಾಯಿತು.
ನಡುರಾತ್ರಿ ಸಾಗರದ ಹೊಟೆಲ್ಲಿಗೆ ಕಾಲಿಟ್ಟರೆ, ನಿದ್ದೆಗಣ್ಣಿನ ಹುಡುಗನೊಬ್ಬ ರಿಜಿಸ್ಟರ್ ಮುಂದಿಟ್ಟು ತುಂಬಿ’ ಅಂದ. ಅದರಲ್ಲಿ ಎಲ್ಲಿಂದ ಬರುತ್ತಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ಎಷ್ಟು ದಿನ ಇರುತ್ತೀರಿ ಎಂಬ ಪ್ರಶ್ನೆಗಳಿದ್ದವು. ಆ ಅಪರಾತ್ರಿಯಲ್ಲಿ ಅವು ನನಗೆ ಬದುಕಿನ ಬಹುಮುಖ್ಯ ಪ್ರಶ್ನೆಗಳಾಗಿ ಕಾಣಿಸಿದವು.
7 comments:
ನಮಸ್ಕಾರ ಜೋಗಿಯವರೇ..
ನಾನು ನಿಮ್ಮ ಅಭಿಮಾನಿ, ನಿಮ್ಮ ಬ್ಲಾಗನ್ನು ತಪ್ಪದೆ ಓದುತ್ತೇನೆ. ಎಷ್ಟೋ ವಿಚಾರಗಳನ್ನು ಚಪ್ಪರಿಸಿ ಓದಿ, ಮೆಲುಕು ಹಾಕುತ್ತಿರುತ್ತೇನೆ.
ಆದರೆ ನನ್ನದೊಂದು ದೂರಿದೆ. ತಾವು ಯಾಕೆ ಯಾವುದೇ ಕಮ್ಮೆಂಟಿಗೂ ಉತ್ತರಿಸುವುದೇ ಇಲ್ಲ? ತಮ್ಮ ಇಡೀ ಬ್ಲಾಗಿನಲ್ಲಿ ತಮ್ಮ ಒಂದು ಕಮ್ಮೆಂಟನ್ನೂ ನೋಡಿದ ಜ್ನ್ಯಾಪಕವಿಲ್ಲ ನಂಗೆ. ಕಮ್ಮೆಂಟ್ ಮಾಡುವರೇ ಇಲ್ಲವೆಂದು ಕೊರಗುವ ಬ್ಲಾಗಿಗರಂತೆಯೇ, ತಮ್ಮ ಕಮ್ಮೆಂಟಿಗೆ ಸ್ಪಂದಿಸದಿದ್ದರೆ ಓದುಗರೂ ಮರುಗುತ್ತಾರೆಂದು ಮರೆಯದಿರಿ.
ತಮ್ಮ ಬ್ಲಾಗ್ ಮುಖಾಂತರ ಓದುಗರ ಪ್ರಶ್ನೆಗಳಿಗೆ, ಅನುಮಾನಗಳಿಗೆ, ವಿಚಾರಗಳಿಗೆ ಸ್ಪಂದಿಸಿ ಈಗ ಕೇವಲ ಮೋನೋಲಾಗ್ ಆಗಿರುವ ತಮ್ಮ ಬ್ಲಾಗನ್ನು ಡೈಲಾಗ್ ಆಗಿ ಪರಿವರ್ತಿಸುವ ಸಾಧ್ಯತೆ ತಮಗೆ ಕಂಡು ಬಂದಿಲ್ಲವೇ? ಅಥವಾ ಸಮಯದ ಅಭಾವವೇ..?
ಇದು ತಮ್ಮ ಅಭಿಮಾನಿಯ ಸೌಜನ್ಯಯುತ ಆಗ್ರಹ, ತಪ್ಪೆನಿಸಿದರೆ ಮನ್ನಿಸಿ ಬಿಡಿ..
ಥ್ಯಾಂಕ್ಸ್ ಅನಂತ್,
ನಿಮ್ಮ ಸಲಹೆ ಸರಿ ಎಂದು ನನಗೂ ಅನ್ನಿಸಿದೆ. ಇನ್ನು ಮುಂದೆ ಸಾಧ್ಯವಾದಷ್ಟು ಮಟ್ಟಿಗೆ ಉತ್ತರಿಸುವುದಕ್ಕೆ ಯತ್ನಿಸುತ್ತೇನೆ. ಉತ್ತರಿಸಬೇಕಾದ ಪ್ರಶ್ನೆಗಳಿಗೆ ನಾನು ಆಗಾಗ ಉತ್ತರಿಸುತ್ತಾ ಬಂದಿದ್ದೇನೆ. ಸ್ವಗತ ಆಗಿರುವುದನ್ನು ಮಾತುಕತೆ ಆಗಿಸಬಹುದು ಎನ್ನುವುದು ನನಗೂ ಹೊಳೆದಿರಲಿಲ್ಲ.
ಪ್ರೀತಿಯಿಂದ
ಜೋಗಿ
jogi.. baduku yantravaagibittide! bengaloorinallasthe all prati bhaagadalloo! yantragalannu kalachuva kriyeyalli naavella todagabekide namma namma mitiyalli! aanittinalli kelaamaaduttiruva Ashraf,kuntini muntaada geleyarige vandanegalu.omme bidubeesaagi dharavaadakke banni. dandeliya kaadu medu aleyona!
ಸರ್
ತುಂಬಾ ಚೆನ್ನಾಗಿ ಬರೆದಿದ್ದೀರಿ
ತಮ್ಮ ಬರಹಗಳು ತುಂಬಾ ಹಿಡಿಸುತ್ತವೆ
'ಎಲ್ಲಿಂದ ಬರುತ್ತಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ಎಷ್ಟು ದಿನ ಇರುತ್ತೀರಿ ಎಂಬ ಪ್ರಶ್ನೆಗಳಿದ್ದವು. ಆ ಅಪರಾತ್ರಿಯಲ್ಲಿ ಅವು ನನಗೆ ಬದುಕಿನ ಬಹುಮುಖ್ಯ ಪ್ರಶ್ನೆಗಳಾಗಿ ಕಾಣಿಸಿದವು'
- ಎಂಥ ಸತ್ಯ!
ಕೊನೆಯ ಸಾಲುಗಳನ್ನ ಮತ್ತೆ ಮತ್ತೆ ಓದಿಕೊಂಡೆ
ಸಪ್ನಕ್ಕೆ ಹೋಗಿ ವ್ಯಾಸರ ಪುಸ್ತಕಗಳನ್ನ ತರಲು ಹೊರಟಿದ್ದೇನೆ .. ಈಗಲೇ ಹೊರಡ ಬೇಕಿದೆ ...
ಯಾಕಂತ ಗೊತ್ತಿಲ್ಲ ನಿಮ್ಮ ಬರವಣಿಗೆಯನ್ನ ಓದಿದಾಗ ಯಾರ ಕೈಗೂ ಸಿಗದೇ ಕೋಣೆಯೊಳಗೆ ಕುಳಿತು ಓದುತ್ತಲೇ ಇರಬೇಕು ಅನ್ನಿಸೊತ್ತೆ .. ಹಾಗಂದುಕೊಂಡು ಹೊರಡುವಾಗಲೇ ಯಾರೋ ಫೋನ್ ಮಾಡುತ್ತಾರೆ
ಅರ್ಜೆಂಟ್ ಇದೆ ಕಣ್ರೀ ಲೆಯಿಂಗ್ ಬೇಗ ಮುಗಿಸಿಕೊಡ್ರಿ, ಜಾಸ್ತಿ ಲೇಬರ್ ಕಳಿಸ್ರಿ... ತತ್ತೆರಿಕೆ ಎಂದುಕೊಂಡು ತಲೆ ಕೆರೆದುಕೊಳ್ಳುತ್ತೇನೆ.... ಓದಲು ಬೇಕು ಬದುಕಿನ ಜೊತೆ ಒಡಲೊ ಬೇಕು .... ಹಿಂಗೆ ಬರೀತಾ ಇರಿ ಗುರುವೇ ..
ಜೋಗಿಯವರೇ,
ಒಂದು ಆಟದಿಂದ ಪ್ರಾರಂಭವಾದ ನಿಮ್ಮ ಲೇಖನ,
................ಎಷ್ಟು ದಿನ ಇರುತ್ತೀರಿ? ಎಂಬ, ಬದುಕಿನ
ಬಹುಮುಖ್ಯ ಪ್ರಶ್ನೆವರೆಗೆ ಬಂದು ನಿತ್ತಿದ್ದು,
ತುಂಬಾ ಖುಷಿ ಕೊಟ್ಟಿತು ಲೇಖನ.
Post a Comment