ಹಬ್ಬಿದಾ ಮಲೆ. ಎಲ್ಲೆಲ್ಲೂ ಹಸಿರು. ಹಸಿರು ಬಯಲಲ್ಲಿ ಉಸಿರುಬಿಗಿಹಿಡಿದು ಓಡುತ್ತಿರುವ ಪುಟ್ಟ ಹುಡುಗ. ಅವನ ಹಿಂದೆ ಏದುಸಿರು ಬಿಟ್ಟುಕೊಂಡು ಓಟ ಕಿತ್ತಿರುವ ತಾಯಿ.
ಸಂಜೆಯಾಗುತ್ತಿತ್ತು. ನಾವು ಹೋಗುತ್ತಿದ್ದ ಬಸ್ಸು ಕೆಟ್ಟುನಿಂತು ಮೂರೋ ನಾಲ್ಕೋ ಗಂಟೆಯಾಗಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ಬಸ್ಸೂ ಬರುವುದಿಲ್ಲ ಎಂದು ಕಂಡಕ್ಟರ್ ಆತಂಕದಲ್ಲಿದ್ದ. ಬಸ್ಸಿನಲ್ಲಿದ್ದ ಮೂವತ್ತೋ ಮೂವತ್ತೈದೋ ಪ್ರಯಾಣಿಕರ ಪೈಕಿ ಅನೇಕರು ಕಂಗಾಲಾಗಿದ್ದರು. ಥರಹೇವಾರಿ ಮಂದಿ. ದೂರಪ್ರಯಾಣಕ್ಕೆ ಹೊರಟವರು. ಸಿಗರೇಟು ಸೇದಲು ಹಂಬಲಿಸುವವರು. ಸಂಜೆ ತಿಂಡಿ ತಿಂದು ಔಷಧಿ ತೆಗೆದುಕೊಳ್ಳಬೇಕಾದವರು. ಯಾರನ್ನೋ ಸೇರಲು ಹೊರಟವರು. ಯಾರನ್ನೋ ಕರೆದುಕೊಂಡು ಹೊರಟವರು. ಮಾರನೆಯ ದಿನ ಪರೀಕ್ಷೆ ಬರೆಯಬೇಕಾದವರು. ವಿನಾಕಾರಣ ಬೇಗನೇ ಊರು ಸೇರಲೆಂದು ಹಂಬಲಿಸುವವರು. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ವ್ಯಾಪಾರ. ಒಂದೊಂದು ನಿರೀಕ್ಷೆ.
ಬಸ್ಸು ಕೆಟ್ಟು ನಿಂತ ತಕ್ಷಣ ಆ ತಾಯಿಮಗು ಹಸಿರಿಗೆ ಹೊರಟು ಬಿಟ್ಟಿದ್ದರು. ಅವರಿಗೆ ಎಲ್ಲಿಗೂ ಹೋಗುವ ನಿರೀಕ್ಷೆ ಇದ್ದಂತಿರಲಿಲ್ಲ. ಬಸ್ಸು ಕೆಟ್ಟಿತೆಂಬ ಬೇಸರವೂ ಇದ್ದಂತೆ ಕಾಣಲಿಲ್ಲ. ಬಸ್ಸು ಬೇಗ ಹೊರಡಲಿ ಎಂಬ ಆತುರವೂ ಅವರಲ್ಲಿ ಕಾಣಿಸುತ್ತಿರಲಿಲ್ಲ. ಬಸ್ಸು ನಿಂತ ತಕ್ಷಣ, ಅದು ತಮಗೋಸ್ಕರವೇ ಕೆಟ್ಟು ನಿಂತಿದೆ ಎಂಬಂತೆ, ಹಾಗೆ ಕೆಟ್ಟು ನಿಂತದ್ದೇ ವರವೆಂಬಂತೆ ಬಯಲಿಗೆ ಹೋಗು ಆಡುತ್ತಾ ಕೂತಿದ್ದರು. ಅವರದೇ ಲೋಕ ಅದು ಎಂಬಂತೆ.
ಯಾರೋ ಸಿಗರೇಟು ಸೇದಿದರು. ಯಾರೋ ಕೆಮ್ಮಿದರು, ಮತ್ಯಾರೋ ಸರ್ಕಾರವನ್ನು ಬೈದರು. ಸಾರಿಗೆ ಸಚಿವರ ಹೆಸರು ಗೊತ್ತಿದ್ದವರು ಅವರ ಜನ್ಮ ಜಾಲಾಡಿದರು. ಮತ್ಯಾರೋ ಡ್ರೈವರ್ ಜೊತೆ ವಾದಕ್ಕಿಳಿದಿದ್ದರು. ಅವನು ಬೇಸತ್ತು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದ. ಅವನ ಕೈಲೂ ಮೊಬೈಲು. ಅವನಂತೆ ಹಲವರು ಸಿಗದ ನೆಟ್ವರ್ಕ್ನ ನಿರೀಕ್ಷೆಯಲ್ಲಿ ಅತ್ತಿತ್ತ ಅಲೆದಾಡುತ್ತಾ ಫೋನ್ ಆನ್ ಮಾಡುತ್ತಾ ಆಫ್ ಮಾಡುತ್ತಾ ಮತ್ತೊಬ್ಬರ ನೆಟ್ವರ್ಕ್ ಹೇಗಿದೆ ಎಂದು ಪರೀಕ್ಷಿಸುತ್ತಾ ಚಡಪಡಿಸುತ್ತಿದ್ದರು.
ಹುಡುಗನ ಕೈಗೆ ಚೆಂಡು ಬಂದಿತ್ತು. ಹಳದಿ ಚೆಂಡು ಹಸಿರು ಬಯಲಲ್ಲಿ ಓಡುತ್ತಾ ಓಡುತ್ತಾ ಹೋಯ್ತು. ಹುಡುಗ ಅದನ್ನು ಹಿಂಬಾಲಿಸಿದ. ಅಮ್ಮನ ಕಣ್ಣಲ್ಲಿ ಪುಟ್ಟ ಕಂದ ಓಡುತ್ತಿರುವ ಖುಷಿ ತುಳುಕುತ್ತಿತ್ತು. ಜೊತೆಗೊಂದು ಹನಿ ಆತಂಕ. ಹುಲ್ಲಿನ ಮೇಲೆ ಹುಡುಗ ತೊಪ್ಪನೆ ಬಿದ್ದ. ತಿರುಗಿ ನೋಡಿದರೆ ಅಮ್ಮನ ಮುಖದಲ್ಲಿ ನೋವು. ಹುಡುಗ ಕಿಲಕಿಲ ನಕ್ಕ. ಎದ್ದು ನಿಂತು ಮತ್ತೊಮ್ಮೆ ಬಿದ್ದ. ಏಳುವುದು ಬೀಳುವುದೇ ಆಟವಾಯಿತು. ಚೆಂಡು ಕಣ್ಮರೆಯಾಗಿತ್ತು.
ದೂರದಲ್ಲೆಲ್ಲೋ ನವಿಲು ಕೇಕೆ ಹಾಕಿತು. ಹುಡುಗ ಬೆಚ್ಚಿಬಿದ್ದು ನೋಡಿದ. ತಾಯಿಯೂ ಕಿವಿಯಾನಿಸಿ ಕೇಳಿದಳು. ಕೂಗಿದ್ದು ನವಿಲು ಹೌದೋ ಅಲ್ಲವೋ ಎಂಬ ಅನುಮಾನ. ಅದು ನವಿಲು ಮಗೂ ಅಂತ ತಾಯಿ ಹೇಳಿದ್ದು ಅಸ್ಪಷ್ಟವಾಗಿ ಗಾಳಿಯಲ್ಲಿ ಬಂದು ತೇಲಿತು. ಅವಳಿಗೆ ಯಾವುದೋ ಹಳೆಯ ನೆನಪು. ನವಿಲಿನ ಕೂಗಿಗೆ ಅವಳ ಕಂಗಳು ಹೊಳಪಾದವು. ಅದೇ ಮೊದಲ ಬಾರಿಗೆ ನವಿಲಿನ ಕೇಕೆ ಕೇಳಿದ ಮಗು ಬೆಚ್ಚಿ ಅಮ್ಮನನ್ನು ತಬ್ಬಿಕೊಂಡಿತು. ತಾಯಿ ಮಗುವನ್ನು ಅವಚಿಕೊಂಡಳು.
ನಾವು ಕೂಡ ಸುತ್ತ ಹಬ್ಬಿದ ಬೆಟ್ಟವನ್ನು ಅದು ಸಂಜೆ ಬಿಸಿಲಲ್ಲಿ ಮಿರುಗುವುದನ್ನು ನೋಡುತ್ತಾ ಕೂತೆವು. ಅಂಥ ಸಂಜೆಯನ್ನು ಕಣ್ತುಂಬಿಕೊಂಡು ಎಷ್ಟೋ ದಿನವಾಗಿತ್ತು. ಅದರ ಪರಿವೆಯೇ ಇಲ್ಲವೆಂಬಂತೆ ಯಾರೋ ಕಿರುಚಿಕೊಳ್ಳುತ್ತಿದ್ದರು. ಬಸ್ಸು ಕೆಟ್ಟು ನಿಂತದ್ದು ಕೂಡ ಒಂದು ಸೌಭಾಗ್ಯ ಎಂದು ಭಾವಿಸಬೇಕು ಎಂದು ನಾವು ಮಾತಾಡಿಕೊಂಡೆವು.
ಹಾಗೆ ಎಲ್ಲರೂ ಅಂದುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ನಮಗೂ ಗೊತ್ತಾಗಿತ್ತು. ಯಾರೋ ನೀರು ಬೇಕು ಎಂದು ಕಿರುಚುತ್ತಿದ್ದರು. ಮತ್ಯಾರೋ ಒಂದು ಬಾಟಲಿ ನೀರು ತಂದುಕೊಟ್ಟರು. ಮತ್ಯಾರಿಗೋ ಮಾರನೇ ದಿನ ಯಾವುದೋ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ಕೆಟ್ಟು ನಿಂತ ಬಸ್ಸು ಅವರ ಅದೃಷ್ಟವನ್ನೇ ಬದಲಾಯಿಸಬಹುದಿತ್ತು. ಸಿಗಬಹುದಾಗಿದ್ದ ಕೆಲಸ ಸಿಗದೇ ಹೋಗಿ ಮತ್ತೊಂದು ಬಾಗಿಲು ಮತ್ತೆಲ್ಲೋ ತೆರೆದುಕೊಳ್ಳಬಹುದೇನೋ ಎಂಬ ನಿರೀಕ್ಷೆ ಕೂಡ ಇಲ್ಲದವರಂತೆ ಅವರು ಚಡಪಡಿಸುತ್ತಿದ್ದರು. ಮತ್ತೊಂದು ಬಾಗಿಲಿನ ನಿರೀಕ್ಷೆಯೇ ಇಲ್ಲದೆ ಬದುಕುವುದು ಕಷ್ಟವೇ.
ದೂರದಲ್ಲೆಲ್ಲೋ ಬಸ್ಸು ಬಂದ ಸದ್ದು. ಎಲ್ಲರ ಕಿವಿಯೂ ಚುರುಕಾಯಿತು. ಆ ಬಸ್ಸಿನಲ್ಲಿ ಹತ್ತಿ ಹೋಗೋಣ ಎಂದುಕೊಂಡು ಅನೇಕರು ಲಗೇಜು ಕೆಳಗಿಳಿಸಿ ಕಾದರು. ಬಸ್ಸು ಕೆಟ್ಟು ನಿಲ್ಲುವುದು, ಜನ ಕಾಯುವುದು ಹೊಸತೇನಲ್ಲ ಎಂಬಂತೆ ಆ ಬಸ್ಸು ಯಾರ ಮೇಲೂ ಕರುಣೆ ತೋರದೇ ಹೊರಟು ಹೋಯಿತು. ಮುಂದಿನ ಊರಿಗೆ ಹೋಗಿ ಫೋನ್ ಮಾಡಿ ಬೇರೆ ಬಸ್ಸು ತರಿಸುತ್ತೇನೆ ಎಂದು ಡ್ರೈವರ್ ಕೂಡ ಆ ಬಸ್ಸು ಹತ್ತಿ ಹೊರಟೇ ಬಿಟ್ಟ.
ಒಂಟಿಯಾಗಿ ಉಳಿದ ಕಂಡಕ್ಚರಿಗೆ ಸಹಸ್ರನಾಮಾರ್ಚನೆಯಾಯಿತು. ಆ ಬಸ್ಸಿನಲ್ಲಿ ಬಂದದ್ದೇ ತಪ್ಪು ಎಂದು ಅನೇಕರು ಅವನ ಮೇಲೆ ಹರಿಹಾಯ್ದರು. ಮತ್ಯಾರೋ ಪ್ರಾಣ ಹೋಗುತ್ತೆ ಎಂದು ಹಸಿವಿನಿಂದ ಚಡಪಡಿಸುತ್ತಾ ತಿನ್ನುವುದಕ್ಕೆ ಏನಾದರೂ ಕೊಡಿ ಎಂದು ಸಿಕ್ಕಸಿಕ್ಕವರನ್ನು ಕೇಳತೊಡಗಿದರು. ಅವರಿಗೆ ಡಯಾಬಿಟೀಸು ಎಂದು ಯಾರೋ ಹೇಳಿ ಅವರ ಕರುಣಾಜನಕ ಸ್ಥಿತಿಯನ್ನು ಮತ್ತಷ್ಟು ಕರುಣಾಮಯಿಯಾಗಿಸಿದರು.
ಎಷ್ಟು ಹೊತ್ತಾದರೂ ಬಸ್ಸು ಬರಲಿಲ್ಲ. ಅದು ಬಂದರೆ ಬಂತು ಬರದಿದ್ದರೆ ಇಲ್ಲ ಎಂಬಂತೆ ಆ ತಾಯಿ ಮಗು ಆಟವಾಡುತ್ತಲೇ ಇದ್ದರು. ಅವರನ್ನು ಬೆಳಗುತ್ತಿದ್ದ ಸಂಜೆ ಬಿಸಿಲು ಕ್ರಮೇಣ ಹೊಳಪು ಕಳಕೊಳ್ಳುತ್ತಿತ್ತು. ತಣ್ಣನೆ ಗಾಳಿ ಬೀಸತೊಡಗಿ ಎಲ್ಲರಿಗೂ ಹಿತವೆನ್ನಿಸಿತು. ಮೈಮನಗಳು ತಣ್ಣಗಾಗುತ್ತಿದ್ದಂತೆ ಹಲವರು ನಿಂತಲ್ಲೇ ಅಡ್ಡಾದರು. ಕೆಲವರು ರಸ್ತೆ ಬದಿಯಲ್ಲೇ ನಿದ್ದೆ ಹೋದರು.
ನಾವು ನೋಡುತ್ತಿದ್ದ ಹಾಗೆ ತಾಯಿ ಮಗು ಕತ್ತಲಲ್ಲಿ ಕರಗಿಹೋಗಿ ಅವರ ಮಾತಷ್ಟೇ ಕೇಳಿಸುತ್ತಿತ್ತು. ತಾಯಿ ಮಗನಿಗೇನೋ ಗುಟ್ಟುಹೇಳುವಂತೆ ಮಾತಾಡುತ್ತಿದ್ದಳು. ಮಗ ಇಡೀ ಜಗತ್ತಿಗೇ ಕೇಳುವಂತೆ ಕಿರುಚಿಕೊಳ್ಳುತ್ತಿದ್ದ. ಸ್ವಲ್ಪ ಹೊತ್ತಿಗೆಲ್ಲ ಮತ್ತಷ್ಟು ಕತ್ತಲು ಹಬ್ಬಿ ನಾವು ಕೂತ ಜಾಗದಿಂದ ಏನೇನೂ ಕಾಣಿಸುತ್ತಿರಲಿಲ್ಲ. ಬರೀ ತಾಯಿ ಮಗುವಿ.ನ ಮಾತುಗಳು ಬೀಸುತ್ತಿದ್ದ ತಂಗಾಳಿಯಲ್ಲಿ ಆಗಾಗ ಬಂದು ಕಿವಿಗೆ ತಾಕುತ್ತಿದ್ದವು.
ಅದು ಮುಗಿಯದ ರಾತ್ರಿಯಂತೆ ಭಾಸವಾಗುತ್ತಿತ್ತೇನೋ. ಅಷ್ಟರಲ್ಲಿ ಚಂದ್ರ ಮೂಡಿದ. ಚಂದಿರನ ತಂಬೆಳಕಲ್ಲಿ ಇಡೀ ಜಗತ್ತು ವಿಚಿತ್ರ ಹೊಳಪಿನಿಂದ ಕಂಗೊಳಿಸುತ್ತಿತ್ತು. ತಾಯಿ ಈಗ ಮಗುವಿಗೆ ಮೂಡುತ್ತಿದ್ದ ಚಂದ್ರನನ್ನು ತೋರಿಸುತ್ತಿದ್ದಳು. ಚಂದಿರನನ್ನು ನೋಡಿದ ಮಗು ನಗುತ್ತಿತ್ತು. ಅಮ್ಮನಿಲ್ಲದ ತಬ್ಬಲಿ ಚಂದಿರನೂ ನಗುತ್ತಿದ್ದ.
ನಾವು ಎಲ್ಲವನ್ನೂ ನೋಡುತ್ತಾ ಕೂತು ಬಿಟ್ಟೆವು. ಅಲ್ಲೆಲ್ಲೋ ಮತ್ತೆ ನವಿಲು ಕೂಗಿತು. ರಸ್ತೆಯ ಒಂದು ಬದಿಯಲ್ಲಿ ಆಳದ ಕಣಿವೆ. ದೂರದಲ್ಲಿ ಎಲ್ಲೋ ಮಳೆಯಾಗಿರಬೇಕು ಎಂದು ನಾವು ಊಹಿಸುತ್ತಿದ್ದಂತೆ ದೂರದಲ್ಲೆಲ್ಲೋ ಜಲಪಾತದ ಸದ್ದು ಕೇಳಿಸಿತು. ಇಷ್ಟು ಹೊತ್ತೂ ಆ ಸದ್ದು ನಮ್ಮ ಕಿವಿಗೆ ಬಿದ್ದಿರಲೇ ಇಲ್ಲವಲ್ಲ ಎಂದು ನಾವು ಅಚ್ಚರಿಪಟ್ಟೆವು.
ತಾಯಿ ಆ ಕತ್ತಲಲ್ಲೇ ರಸ್ತೆ ಪಕ್ಕದ ಗಿಡದಲ್ಲಿ ಅರಳಿದ ಹೂವು ಕೀಳುತ್ತಿದ್ದಳು. ಮಗು ಅಂಥ ಒಂದಷ್ಟು ಹೂವನ್ನು ಕೈಯಲ್ಲಿಟ್ಟುಕೊಂಡು ದೇವಲೋಕದಿಂದ ಇಳಿದ ಕಂದನಂತೆ ಕಾಣಿಸುತ್ತಿತ್ತು. ಅದೇ ಕತ್ತಲೆಯಲ್ಲಿ ತಾಯಿ ಬಸ್ಸಿಗೆ ಹತ್ತಿ ಪುಟ್ಟದೊಂದು ಬ್ಯಾಗು ತಂದು ಮಗುವಿಗೆ ಹಾಲು ಕುಡಿಸಿದಳು. ಮಗುವಿನ ತುಟಿಯ ಇಕ್ಕೆಲದಲ್ಲಿ ಇಳಿದ ಹಾಲನ್ನು ಸೆರಗಿನಿಂದ ಒರೆಸಿದಳು.
ಇನ್ನೇನು ಅವಳ ಸಹನೆ ಕೆಡುತ್ತದೆ. ಅವಳು ಕಿರುಚುತ್ತಾಳೆ. ಕನಿಷ್ಟ ಮುಖ ಕಿವಿಚುತ್ತಾಳೆ. ಮಗುವಿನ ಮೇಲೆ
ರೇಗುತ್ತಾಳೆ ಎಂದು ನಾವು ಕಾದೆವು. ಅವಳ ಮುಖದಲ್ಲಿ ಹಾಗಿದ್ದರೂ ಮಂದಹಾಸವೇ ಇತ್ತು. ಆ ಬೆಳಕಿನಲ್ಲಿ ಅದು ತನ್ನ ಪ್ರಭೆಯನ್ನು ಹೆಚ್ಚಿಸಿಕೊಂಡು ಚಂದಿರನ ಜೊತೆ ಸ್ಪರ್ಧೆಗಿಳಿದಂತೆ ಕಾಣಿಸುತ್ತಿತ್ತು.
ಇದ್ದಕ್ಕಿದ್ದಂತೆ ತಣ್ಣನೆ ಗಾಳಿ ಬೀಸಿತು. ಆ ಗಾಳಿ ಮಗುವಿನ ಕಿವಿ ಹೊಕ್ಕಿರಬೇಕು. ಮಗು ಕೇಕೆ ಹಾಕಿತು. ನವಿಲಿನ ಕೇಕೆಗಿಂತ ಇದೇ ಚೆಂದ ಅನ್ನಿಸಿತು. ಆ ಕ್ಷಣ ಮಗು ಕೂಡ ನಮಗೆ ನವಿಲಿನ ಹಾಗೆ ಕಾಣಿಸಿತು. ಅದನ್ನು ನೋಡುತ್ತಾ ನಾವು ನಮ್ಮೊಳಗೇ ನಕ್ಕೆವು.
ಬಸ್ಸುಗಳ ಓಡಾಟ ಶುರುವಾಗಿತ್ತು. ಒಂದೆರಡು ಬಸ್ಸುಗಳು ಪ್ರಖರ ಬೆಳಕು ಚೆಲ್ಲುತ್ತಾ ನಮ್ಮನ್ನು ಹಾದು ಹೋದವು. ಅವಕ್ಕೆ ಕೈ ಅಡ್ಡ ಹಿಡಿದು ಕಾಡಿ ಬೇಡಿ ಕೆಲವರು ಬಸ್ಸು ಹತ್ತಿಕೊಂಡು ಹೊರಟು ಹೋದರು. ಹೋದವರನ್ನು ನೋಡುತ್ತಾ ಅನೇಕರು ಅವರ ಅದೃಷ್ಟ ತಮಗಿಲ್ಲವಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದರು.
ಹೀಗೆ ಕಾಯುತ್ತಾ ಎಷ್ಟೊ ಹೊತ್ತು ಕಳೆದಿರಬೇಕು. ಮಗು ತಾಯಿಯ ಮಡಿಲಲ್ಲಿ ನಿದ್ದೆ ಮಾಡುತ್ತಿತ್ತು. ಆ ಮಗುವಿನ ಸಿಹಿನಿದ್ದೆಯೇ ತನ್ನ ಏಕೈಕ ಕಾಯಕ ಎಂಬಂತೆ ತಾಯಿ ಅದನ್ನು ಅವಚಿಕೊಂಡಿದ್ದಳು. ಎಲ್ಲರ ತಾಳ್ಮೆಯೂ ಕೆಟ್ಟು ನಾವೂ ಕೂಡ ಸಿಟ್ಟನ್ನು ಹೊರಹಾಕುವ ಸ್ಥಿತಿಗೆ ಬಂದು ತಲುಪಿದ್ದೆವು. ಇನ್ನೇನು ಕಂಡಕ್ಟರ್ ಮೇಲೆ ನಮ್ಮ ಸಿಟ್ಟು ವ್ಯಕ್ತವಾಗಬೇಕು ಅನ್ನುವಷ್ಟರಲ್ಲಿ ಡ್ರೈವರ್ ಮತ್ತೊಂದು ಬಸ್ಸಿನೊಂದಿಗೆ ಹಾಜರಾದ.
ಎಲ್ಲರೂ ಹೊಸ ಜೀವ ಬಂದಂತೆ ಎದ್ದು ಆ ಬಸ್ಸು ಹತ್ತಿದರು. ನಾವೂ ಬಸ್ಸು ಹತ್ತಿ ಕೂತೆವು. ಎಲ್ಲರ ಅವಸರ ಮುಗಿದ ನಂತರ ಆ ತಾಯಿ ಮಗುವನ್ನು ಅವಚಿಕೊಂಡು ಬಸ್ಸು ಹತ್ತಿ ಕೂತಳು. ಅವಳ ತುಟಿಯ ಮಂದಹಾಸ ಕಿಂಚಿತ್ತೂ ಮಾಸಿರಲಿಲ್ಲ.
ಬಸ್ಸು ಹೊರಡುತ್ತಿದ್ದಂತೆ ನಾವು ನಿದ್ದೆ ಹೋದೆವು. ಕಣ್ಣು ಬಿಡುವ ಹೊತ್ತಿಗೆ ಬೆಳಕಾಗಿತ್ತು. ಹಿಂತಿರುಗಿ ನೋಡಿದರೆ ಅಲ್ಲಿ ಆ ತಾಯಿ ಮತ್ತು ಮಗು ಮತ್ತೆ ಆಟವಾಡುತ್ತಾ ಕೂತಿದ್ದರು. ಮಗು ತಾಯಿಯ ಮುಂಗುರಳನ್ನು ತೀಡುತ್ತಿತ್ತು. ತಾಯಿ ಕಿಲಕಿಲ ನಗುತ್ತಿದ್ದಳು.
ಬೆಳಗಾಯಿತು.
8 comments:
thank you jogi. nimma baraha nanage thumba istha manasige hitha needuva baravanige
thank you jogi. nimma baraha nanage thumba istha manasige hitha needuva baravanige
sir supper
Saar,
Odi tumba khushi aayitu. Chennagide.
taayi manassu andre ade alva Jogi... Jagatte koogi, bobbiridaroo taayiya mogadalli mandahaasa... chennagide baraha
jogi...jogi..jogi...atyadbutha nimma baravanigi. odide. manadalle thabbide.
ಅದ್ಭುತ...ಆ ಪ್ರಯಾಣದಲ್ಲಿ ನಿಮೊಂದಿಗಿದ್ದ ಅನುಭವ ನೀಡಿತು ಬರೆಹ...!
Thanks for the beautiful presentation of "mother's love" excellently authored... Tumba hidisitu .. manasige...:)
Post a Comment