Sunday, November 21, 2010

ಬೇಡ

ಇಲ್ಲಿ ವಿಸರ್ಜನೆ ಮಾಡಬಾರದು. ಅಲ್ಲಿ ಕಾಲಿಡಬಾರದು. ಈ ರಸ್ತೆಯಲ್ಲಿ ವಾಪಸ್ಸು ಬರಬಾರದು. ಅಲ್ಲಿ ಕಾರು ನಿಲ್ಲಿಸಬಾರದು. ಮತ್ತೆಲ್ಲೋ ನಿಲ್ಲುವಂತಿಲ್ಲ. ಇನ್ನೆಲ್ಲೋ ಮಲಗಬಾರದು. ಕಾರಲ್ಲಿ ಪ್ರೀತಿ ಮಾಡಬಾರದು. ದೇವಸ್ಥಾನದ ಮುಂದೆ ಸಿಗರೇಟು ಸೇದಬಾರದು. ಒಳಾಂಗಣದಲ್ಲಿ ಕಾಲು ಇಳಿಬಿಟ್ಟು ಕೂರಬಾರದು. ಅಂಗಿ ಬನೀನು ಹಾಕಿಕೊಂಡು ಗರ್ಭಗುಡಿಯನ್ನು ಪ್ರವೇಶಿಸಬಾರದು. ಸತ್ಯನಾರಾಯಣ ಪೂಜೆ ಪ್ರಸಾದ ನಿರಾಕರಿಸಬಾರದು. ಅಯ್ಯಪ್ಪನ ದರ್ಶನಕ್ಕೆ ಹೋಗುವವರು ಕುರಿಕೋಳಿ ತಿನ್ನಬಾರದು. ರಾಘವೇಂದ್ರಸ್ವಾಮಿ ಭಕ್ತರು ಗುರುವಾರ ಊಟ ಮಾಡಬಾರದು. ಚೌಡೇಶ್ವರಿ ಆರಾಧಕರು ಶನಿವಾರ ಕುಡೀಬಾರದು. ಮನೆಬಿಟ್ಟು ಹೋಗುವಾಗ ಎಲ್ಲಿಗೆ ಅಂತ ಕೇಳಬಾರದು. ಹೆಣ್ಮಕ್ಕಳು ಬೋಳುಹಣೆಯಲ್ಲಿ ಇರಬಾರದು. ರಾತ್ರಿ ತಲೆ ಬಾಚಬಾರದು. ಬಟ್ಟೆ ಹೊಲಿಯಬಾರದು....

ನೂರೆಂಟು ರಾಮಾಯಣ. ಎಲ್ಲಿಗೆ ಹೋದರೂ ಇಂಥದ್ದೆ ನಿಯಮ, ನೀತಿ. ಒಂದಲ್ಲ ಎರಡಲ್ಲ. ಕೆಲವು ಕಾನೂನು ಕೊಟ್ಟದ್ದು, ಕೆಲವು ಪರಂಪರೆ ಬಿಟ್ಟದ್ದು, ಕೆಲವು ಅಂಧಶ್ರದ್ಧೆ ಇಟ್ಟದ್ದು.

ಆಕಾಶವಾಣಿ ಕೇಳುತ್ತಿದ್ದರೆ ಮತ್ತೊಂದಷ್ಟು ಸಲಹೆ. ಹಿಂದೆ ನೋಡಿ ಮುಂದೆ ನೋಡಿ, ಮೇಲಕ್ಕೂ ಕೆಳಕ್ಕೂ ನೋಡಿ, ಅಪರಿಚಿತರಿಗೆ ಮನೆ ಕೊಡಬೇಡಿ, ನೀರು ಪೋಲು ಮಾಡಬೇಡಿ, ಎರಡೇ ಮಕ್ಕಳು ಮಾಡಿ, ಕುಡಿದು ವಾಹನ ಓಡಿಸಬೇಡಿ, ದೊಡ್ಡ ದನಿಯಲ್ಲಿ ಮಾತಾಡಬೇಡಿ, ಸಜ್ಜನಿಕೆಯಿಂದ ವರ್ತಿಸಿ, ನಮ್ಮ ದೇಶದ ಮಾನ ಉಳಿಸಿ, ಕರೆಂಟು ಉಳಿಸಿ, ಕಾಡು ಉಳಿಸಿ, ಪ್ರಾಣಿಗಳನ್ನು ಹಿಂಸಿಸಬೇಡಿ.

ಇಷ್ಟೇ ಅಲ್ಲ. ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ, ತನ್ನ ಬಣ್ಣಿಸಬೇಡ ಎಂಬುದರಿಂದ ಹಿಡಿದು ಹುಲ್ಲಿನ ಮೇಲೆ ನಡೆಯಬೇಡಿ, ಕಂಡಕಂಡಲ್ಲಿ ಉಗುಳಬೇಡಿ, ಹೆಂಡತಿಯನ್ನು ಹೊಡೆಯಬೇಡಿ, ಹೆತ್ತವರನ್ನು ಕಡೆಗಣಿಸಬೇಡಿ, ಪರಭಾಷಾ ಸಿನಿಮಾ ನೋಡಬೇಡಿ, ಇಂಗ್ಲಿಷ್ ಕಲಿಯಬೇಡಿ, ಕನ್ನಡ ಮರೆಯಬೇಡಿ, ಆಫೀಸಿಗೆ ರಜೆ ಹಾಕಬೇಡಿ, ದುಡಿಯಲು ಸೋಮಾರಿತನ ಮಾಡಬೇಡಿ, ಹಾದರ ಮಾಡದಿರಿ, ಜವಾಬ್ದಾರಿಯಿಂದ ತಪ್ಪಿಸಿಕೊಂಡು ಓಡದಿರಿ, ಮಹಿಳೆಯರನ್ನು ಕಾಡದಿರಿ, ಕೋತಿಗಳಿಗೆ ತಿಂಡಿತಿನಿಸು ನೀಡದಿರಿ...

ಎಷ್ಟೆಲ್ಲ ಬೇಡಗಳ ಮಧ್ಯೆ ಬದುಕುತ್ತಿದ್ದೇವೆ ಎನ್ನಿಸುತ್ತಿದೆ ಅಲ್ಲವೇ? ಪ್ರಶ್ನೆ ಅದಲ್ಲ. ನಮಗೆ ಇಷ್ಟೊಂದು ಕಟ್ಟುಪಾಡುಗಳು ಬೇಕಾ? ಇದನ್ನೆಲ್ಲ ನಿರ್ಧಾರ ಮಾಡುವವರು ಯಾರು? ಕಾನೂನೇ, ವ್ಯವಸ್ಥೆಯೇ, ಧರ್ಮವೇ, ಜಾತಿಯೇ, ಆಚಾರವೇ, ಮಾನವೀಯತೆಯೇ? ನಾವು ನಿಜಕ್ಕೂ ಅಷ್ಟೊಂದು ಮೂರ್ಖರೇ?

ಸುತ್ತ ನೋಡುತ್ತಿದ್ದರೆ ಗಾಬರಿಯಾಗುತ್ತದೆ. ಬಹುಶಃ ನಾವು ಅತ್ಯಂತ ನಾಗರಿಕರಂತೆ ನಟಿಸುತ್ತಿದ್ದೇವೋ ಏನೋ? ಸಹಾನುಭೂತಿ, ಅನುಕಂಪ, ಕರುಣೆಯ ಮಾತು ಹಾಗಿರಲಿ. ರಸ್ತೆಯಲ್ಲಿ ಎಲ್ಲರಿಗೂ ತೊಂದರೆ ಆಗುವಂತೆ ವಾಹನ ನಿಲ್ಲಿಸಬಾರದು ಎನ್ನುವ ಕನಿಷ್ಟ ತಿಳುವಳಿಕೆಯನ್ನು ನೀಡುವುದಕ್ಕೂ ಕಾನೂನೇ ಬೇಕಾ? ಹಾಗಿದ್ದರೆ ನಮ್ಮ ಶಿಕ್ಷಣ ನಮಗೆ ಕೊಟ್ಟದ್ದೇನು? ಸಂಸ್ಕಾರ ಅನ್ನುವ ಮಾತಿಗೆ ಅರ್ಥವೇನು? ಮೊದಲ ಗುರು ತಾಯಿ, ನಂತರದ ಗುರು ತಂದೆ, ಆಮೇಲಿನ ಗುರು ಆಚಾರ್ಯ, ಇದರೊಟ್ಟಿಗೇ ರಕ್ತಗತವಾಗಿ ಬಂದಿದೆ ಎಂದು ನಂಬಲಾಗುತ್ತಿರುವ ಉತ್ತಮ ಸಂಸ್ಕಾರ- ಇವೆಲ್ಲವನ್ನೂ ಮೀರಿದ್ದು ಮೂಲಪ್ರವೃತ್ತಿಯಲ್ಲವೇ?

ಹಾಗಿದ್ದರೆ ಮೂಲಪ್ರವೃತ್ತಿ ಏನು? ಆಹಾರ, ನಿದ್ರೆ, ಮೈಥುನ. ಅಷ್ಟೇ ಸಾಕೆಂದಿದ್ದವರಿಗೆ ಹೊಸದಾಗಿ ಶುರುವಾಗಿದೆ ಬೇಸರ. ಮತ್ತೆಲ್ಲಿಗೋ ಹೋಗುವ, ಮತ್ತೇನನ್ನೋ ಮುಟ್ಟುವ ಆಸೆ. ಅನನ್ಯವಾಗುವ, ವಿಭಿನ್ನವಾಗುವ, ಬೇರೆಯೇ ಆಗುವ ಹೆಬ್ಬಯಕೆ. ಹೀಗೆ ಬೇರೆಯೇ ಆಗುವ ಆಸೆಗೆ ನೂರೆಂಟು ಹುನ್ನಾರ.

ಎಲ್ಲರೂ ಸಮಾನರು ಎಂದು ನಾವೆಷ್ಟೇ ಹೇಳಿಕೊಂಡರೂ ಅಸಾಮಾನ್ಯನಾಗುವ ಆಸೆ ಬಿಡುವುದಿಲ್ಲ. ಕುರಿಮಂದೆಯಲ್ಲಿ ನೂರು ಕುರಿಯಿರುತ್ತದೆ ಅಂತಿಟ್ಟುಕೊಳ್ಳಿ. ಪ್ರತಿಯೊಂದು ಕುರಿಗೂ ತಾನು ಕುರಿಯೆಂಬುದು ಗೊತ್ತು. ಅದು ಕುರಿಯಂತೆಯೇ ವರ್ತಿಸುತ್ತದೆ. ಕುರಿಯ ಹಾಗೇ ತಲೆತಗ್ಗಿಸಿ ನಡೆಯುತ್ತದೆ. ತುಪ್ಪಳ ಬೆಳೆಸಿ ಅದನ್ನು ಸವರಿ ಮಾರಿದರೂ ಅದಕ್ಕೆ ಆ ಕುರಿತು ಹೆಮ್ಮೆಯೂ ಇಲ್ಲ, ಬೇಸರವೂ ಇಲ್ಲ. ನಾವೂ ಅಷ್ಟೇ, ಹೆಚ್ಚು ತುಪ್ಪಳವನ್ನು ಕೊಡುವ ಕುರಿಯನ್ನು ಹೆಚ್ಚು ಗೌರವದಿಂದ ಕಾಣುತ್ತೇವಾ? ಅದೂ ಇಲ್ಲ. ಅದು ಕೂಡ ಒಂದು ಕುರಿ ಅಷ್ಟೇ.

ನಾವು ಹಾಗಲ್ಲ. ಎಲ್ಲರಿಗೂ ಮಾತು ಬರುತ್ತದೆ. ಕೆಲವರು ಚೆನ್ನಾಗಿ ಮಾತಾಡುತ್ತಾರೆ. ಎಲ್ಲರೂ ಬರೆಯುತ್ತಾರೆ, ಕೆಲವರು ಚೆನ್ನಾಗಿ ಬರೆಯುತ್ತಾರೆ. ಎಲ್ಲರೂ ಮನುಷ್ಯರೇ, ಆದರೆ ಕೆಲವರು ಸುಂದರವಾಗಿರುತ್ತಾರೆ. ಹೀಗೆ ನಮ್ಮನ್ನು ಒಡೆಯುವುದಕ್ಕೆ ಪ್ರತಿಭೆ, ಸಂಪತ್ತು, ಸೌಂದರ್ಯ, ಜಾತಿ, ಅಧಿಕಾರ ಎಂಬ ಐದು ಕೊಡಲಿಗಳು ಕಾದು ಕೂತಿವೆ. ಇವುಗಳಲ್ಲಿ ಯಾವ ಕೊಡಲಿಯನ್ನು ಕೈಗೆತ್ತಿಕೊಂಡರೂ ಸಾಕು, ಅವು ಮಾನವ ಸರಪಳಿಯನ್ನು ತುಂಡರಿಸುತ್ತವೆ. ಕ್ರಮೇಣ ಈ ಐದರ ಪೈಕಿ ಒಂದು ಗುಣ ಗುಲಗಂಜಿ ತೂಕ ಹೆಚ್ಚಿದ್ದರೂ ಕೂಡ, ಅಂಥವನು ಎತ್ತರದಲ್ಲಿ ನಿಲ್ಲುತ್ತಾನೆ. ತನ್ನವರು ತುಂಬ ಕೆಳಗಿದ್ದಾರೆ ಎಂದು ಭಾವಿಸುತ್ತಾನೆ.

ಈ ವೈಚಿತ್ರ್ಯವನ್ನು ಗಮನಿಸಿದ್ದು ಕಾಮರಾಜ ಮಾರ್ಗ’ ಕಾದಂಬರಿಯ ಪುಟಗಳನ್ನು ತಿರುವಿಹಾಕುತ್ತಾ ಹೋದಾಗ. ತುಂಬ ನಿರ್ಬಿಢೆಯಿಂದ ಸಾಗುವ ಕಾದಂಬರಿಗೆ ವಿಷಾದದ ತೆಳುವಾದ ಲೇಪವೂ ಇದ್ದಂತಿದೆ. ಅಲ್ಲಿ ತನ್ನ ಚೆಲುವನ್ನು ಬಳಸುವ ಸುಂದರಿಯರಿದ್ದಾರೆ. ಹಾಗೇ, ತನ್ನ ದೇಹವನ್ನು ಬೇರೊಬ್ಬರು ಬಳಸಿಕೊಂಡಾಗ ನರಳುವವರೂ ಎದುರಾಗುತ್ತಾರೆ. ಅಧಿಕಾರಕ್ಕೆ ಸಮೀಪ ಇರುವ ಸಲುವಾಗಿ ಸೌಂದರ್ಯ, ಜಾತಿ, ಪ್ರತಿಭೆ ಮತ್ತು ಸಂಪತ್ತನ್ನು ಒತ್ತೆಯಿಟ್ಟವರೂ ಕಾಣಸಿಗುತ್ತಾರೆ. ಅವರೆಲ್ಲರೂ ಅಂತಿಮವಾಗಿ ಸಾಧಿಸಹೊರಟಿದ್ದಾದರೂ ಏನನ್ನು ಎಂಬ ಪ್ರಶ್ನೆಯನ್ನು ಕಾಮರಾಜಮಾರ್ಗ’ ಮತ್ತೆ ಮತ್ತೆ ಕೇಳಿಕೊಳ್ಳುತ್ತದೆ.

ಏರುವ ಆಸೆ, ಜಾರುವ ಭಯ, ಆಳ ತಿಳಿಯದೆ ಧುಮುಕುವ ಹುಂಬತನ ಮತ್ತು ಸಾಹಸೀ ಪ್ರವೃತ್ತಿ, ಗೆಲ್ಲುವುದು ತನಗಷ್ಟೇ ಗೊತ್ತಿದೆ ಎಂಬ ಹಮ್ಮು, ನೀನು ಗೆದ್ದದ್ದೂ ಸುಳ್ಳು ಎಂಬಂತೆ ನಗುವ ಕನ್ನಡಿ. ಬದುಕಿಗೆ ಸೀಮೆಯಿಲ್ಲ, ಅದು ನಿಸ್ಸೀಮವೂ ಅಲ್ಲ. ಹೊಸಿಲಾಚೆಗೆ ಏನಿದೆ ಈಚೆಗೇನಿದೆ ಅನ್ನುವುದು ಹೊಸಿಲು ದಾಟುವ ಧಾವಂತದಲ್ಲಿ ನಮಗೆ ಗೊತ್ತಾಗುವುದೇ ಇಲ್ಲ. ಎಷ್ಟೋ ವರ್ಷಗಳ ನಂತರ ತಿರುಗಿ ನೋಡಿದರೆ ನಾವು ದಾಟಿದ್ದೇ ತಪ್ಪೇನೋ ಅನ್ನಿಸಿ ಬೇಸರವಾಗುತ್ತದೆ. ಆ ಕ್ಷಣದ ಜಿಗಿದು ದಾಟುವ ಹುರುಪು, ದಾಟಿದ ಹೆಮ್ಮೆ ಇವೆರಡನ್ನೂ ನೆನಪಿಸಿಕೊಳ್ಳುತ್ತಾ ಕಾಲ ಕಳೆಯುವುದಷ್ಟೇ ಉಳಿದಿರುತ್ತದೆ.

*********

ದೇವನೂರು ಮಹಾದೇವ ಕೂಡ `ಬೇಡ’ ಅಂದರು. ಕನ್ನಡದಲ್ಲಿ ಶಿಕ್ಷಣ ಕೊಡುವ ತನಕ ನೃಪತುಂಗ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಪತ್ರ ಬರೆದರು. ಅವರು ಹೇಳಿದ್ದು ಇಷ್ಟೇ:

ಅದೇನೂ ಸರ್ಕಾರಕ್ಕೆ ಆಗದ ಕೆಲಸವೇನೂ ಆಗಿರಲಿಲ್ಲ. ಪರಿಷತ್ತು ಕೂಡ ಸಾಹಿತ್ಯ ಸಮ್ಮೇಳನ ಮಾಡುವುದಿಲ್ಲ ಎಂದು ಸುಮ್ಮನಿರಬಹುದಾಗಿತ್ತು. ಆದರೆ ಪರಿಷತ್ತು ಕೂಡ ಸರ್ಕಾರವನ್ನು ಅರ್ಥ ಮಾಡಿಕೊಂಡಿದೆ. ಸಮ್ಮೇಳನ ನಡೆಸುವುದಿಲ್ಲ ಎಂದರೆ ಸರ್ಕಾರ ಬೇಡ ಬಿಡಿ’ ಎನ್ನಬಹುದು. ಒಂದು ವರ್ಷ ನಡೆಯದೇ ಹೋದರೆ ಮತ್ತೆಂದೂ ನಡೆಯದೇ ಇರಬಹುದು. ಅಲ್ಲಿಗೆ ಅನೇಕರು ನಿರುದ್ಯೋಗಿಗಳಾಗುತ್ತಾರೆ. ಕೋಟ್ಯಂತರ ರುಪಾಯಿಯ ವಹಿವಾಟು ನಿಂತುಹೋಗುತ್ತದೆ.

ಅದೆಲ್ಲವನ್ನು ಬದಿಗಿಟ್ಟು ನೋಡಿದರೂ ಬೇಸರ. ದೇವನೂರು ಮಹಾದೇವ ಅವರ ಹೇಳಿಕೆಗ ಸಾಹಿತ್ಯ ಜಗತ್ತಿನಲ್ಲಿ ದೊಡ್ಡ ಮಾನ್ಯತೆ ಸಿಗುತ್ತದೆ. ಸಾಹಿತಿಗಳೆಲ್ಲ ಒಗ್ಗೂಡುತ್ತಾರೆ. ಮಹಾದೇವ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡು ಸರ್ಕಾರದ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸಿದರೆ, ಬೇಸರ ಕಾದಿದೆ. ಅಂಥದ್ದೇನೂ ಆಗಿಲ್ಲ. ಬೇಡವಾದರೆ ತಗೋಬೇಡಿ ಎಂದು ಪರಿಷತ್ತು ಪ್ರಶಸ್ತಿಯನ್ನು ಸಿಪಿಕೆಯವರಿಗೆ ಕೊಟ್ಟು ಸುಮ್ಮನಾಗಿದೆ. ದೇವನೂರರ ಜೊತೆಗಿದ್ದ ಕ್ರಾಂತಿಕಾರಿಗಳೂ, ಬಂಡಾಯಗಾರರೂ, ಸೈಜುಗಲ್ಲು ಹೊತ್ತೋರೂ ಸುಮ್ಮನಿದ್ದಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಬಿಡಿ, ಒಂದು ಹೇಳಿಕೆಯೂ ಹೊರಬರಲಿಲ್ಲ. ಸರ್ಕಾರದ ಹಂಗಿನಲ್ಲಿ ಹೇಗೆ ಮಾತು ಉಡುಗಿ ಹೋಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ.

ದೇವನೂರರು ಕೂಡ ಎಲ್ಲರಂತೆ ಪ್ರಶಸ್ತಿ ಸ್ವೀಕರಿಸಿ ವಿನಯವಂತಿಕೆ ಪ್ರದರ್ಶಿಸಬಹುದಾಗಿತ್ತು. ಭಾಷೆಯ ಪ್ರಸ್ತಾಪ ಮಾಡುವ ಅಗತ್ಯ ಅವರಿಗೇನೂ ಇರಲಿಲ್ಲ. ಅವರು ಮಹಾ ಶ್ರೀಮಂತರೇನೂ ಅಲ್ಲ. ಅವರ ಹೇಳಿಕೆ, ನಿಲುವು ಮತ್ತು ದಿಟ್ಟತನ ಒಂದು ಹೋರಾಟವನ್ನೇ ಹುಟ್ಟುಹಾಕಬಹುದಾಗಿತ್ತು.

ಮಾತು ಸೋತ ಭಾರತ ಎಂಬ ಅನಂತಮೂರ್ತಿಯವರ ರೂಪಕ ನಿಜವಾಗುತ್ತಿದೆ.

5 comments:

Unknown said...

ಅಹಾ,ಏನು ಚಂದ ಹೇಳಿದ್ದೀರಿ.ನೀವು ಹೇಳಿರುವ ಎಲ್ಲಾ "ಮಾಡಬೇಡಿ" ಗಳು ನಾವು ಮಾಡದಿರುವವೆ.ಆದರೆ ನಮಗೇಕೆ ಈ ರೀತಿ ಹೇಳಲಾಗಲಿಲ್ಲ?. "ಇದು ಎಂಥಾ ಪಕ್ಷವಯ್ಯಾ ವೇದಿಕೆ"ಯಲ್ಲಿ ನಿಮ್ಮನ್ನ ನಿರೀಕ್ಷಿಸಿದ್ದೆ.ಆದರೆ......

Dr.D.T.Krishna Murthy. said...

ಈ'ಮಾಡಬೇಡ'ಅನ್ನುವ ಕಥೆ ಸಣ್ಣವಯಸ್ಸಿನಲ್ಲೇ ಶುರುವಾಗುತ್ತೆ.'ಟಿ.ವಿ'ನೋಡಬೇಡ ,ಓದು.ಬರೀ ಆಟ ಆಡ್ತಾ ಇರುತ್ತೀಯ,ಓದು.ಬರೀ ಅಲ್ಲಿಇಲ್ಲಿ ಅಲೆಯುತ್ತೀಯ,ಓದು.ಯಾವುದನ್ನು ಹೆಚ್ಚು ಬೇಡ ಅನ್ನುತ್ತಾರೋ ಅದನ್ನೇ ಮಾಡು ಅನ್ನುತ್ತೆ ಮನಸ್ಸು.'ಬೇಡ'ಗಳ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದೀರಿ.ನಮಸ್ಕಾರ.

Keshav.Kulkarni said...

ದಿನ ಪೂರ್ತಿ ಇಂಗ್ಲೀಷ್ ಮಾತಾಡುವುದೇನು ಇಂಗ್ಲೀಷಿನಲ್ಲೇ (ಅಂದರೆ ಪಾಶ್ಚ್ಯಾತ್ಯ)ಯೋಚಿಸುವುದನ್ನು ರೂಢಿಸಿಕೊಂಡಿರುವ ನಮಗೆ, ಔಟ್‍ಲುಕ್‍ನಲ್ಲಿ ಒಮ್ಮೆಯೂ ಬರೆಯದ, ಪೆಂಗ್ವಿನ್ ನಲ್ಲಿ ಪಬ್ಲಿಶ್ ಆಗದ, ಬುಕರ್ ಪ್ರಶಸ್ತಿ ಸಿಗದ ದೇವನೂರು ಮಹಾದೇವವರಿಗೆ ಅದೆಂಥದೋ ಕೇಳರಿಯದ ಪ್ರಶಸ್ತಿ ಕೊಟ್ಟರೆಷ್ಟು, ಅವರು ತಿರಸ್ಕರಿಸಿದರೆಷ್ಟು ಎಂದು ಮಕಾಡೆ ಮಲಗಿದ ಭಾರತೀಯ (ಕನ್ನಡಿಗ) ಯು ಆರ್ ಹೇಳಿದಂತೆ) ಮಾತು ಸೋತಾಗಿದೆ, ತನ್ನ ಮನೆಮಾತನ್ನೂ ಮರೆಯುತ್ತಿದ್ದಾನೆ/ಳೆ.

Badarinath Palavalli said...

life is totally "no entry" alwa sir?
I have to read this Kamaraja marga by my Guruvu.
There days people buy awards. Devanuru is great sir.

ಪ್ರತಾಪ್ ಬ್ರಹ್ಮಾವರ್ said...

ಸುಮ್ನೇ ಓದೊ ಖುಷಿ ಅಷ್ಟೇ ನಂದು :-)):-))