ನನಗೆ ಮಾತ್ರ ಗೊತ್ತಿರುವ
ಜೋಗಿ ಕಥೆಗಳು
ಯಾರನ್ನೂ ನೋಯಿಸೋದಿಲ್ಲ.ತಾನೇ ಒಬ್ಬನೇ ಕುಳಿತು ಜೋರಾಗಿ ಅತ್ತುಬಿಟ್ಟಾನು.ನೋವನ್ನು ನುಂಗಿ ಸುಮ್ಮನೇ ನಕ್ಕಾನು.ಏನಾಯಿತೋ ಎಂದರೆ ಮತ್ತೆ ಅದೇ ತುಂಟ ತುಂಟ ನಗೆ.
ಅದು ಜೋಗಿ.
ಜೋಗಿಯೊಳಗೊಬ್ಬ ಕಥೆಗಾರ ಅಥವಾ ಕವಿ ಅಥವಾ ವಿಮರ್ಶಕನನ್ನು ನೀವು ಕಂಡರೆ ಅದು ಆ ಮೂಲದ ನೆಲೆಯಿಂದ ಬಂದದ್ದು.ಅದನ್ನು ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ,ನನ್ನ ಅಡ್ಡಿ ಇಲ್ಲ.
ಜೋಗಿ ತಡವಾಗಿ ಹುಟ್ಟಿದವನು.ಅವನ ಅಣ್ಣನಿಗಿಂತ ಎಷ್ಟೋ ವರ್ಷ ಚಿಕ್ಕವನು.ಅವನು ಹುಟ್ಟಿದ್ದು ಮೈಸೂರಿನ ಆಸ್ಪತ್ರೆಯೊಂದರಲ್ಲಿ.ಅವನಿನ್ನೂ ಅಂಬೆಗಾಲಿಡುತ್ತಿದ್ದಾಗ ಓರ್ವ ಅವಧೂತ ಜೋಗಿ ಮನೆಗೆ ಭಿಕ್ಷೆ ಕೇಳಿ ಬಂದಿದ್ದ.ಅಂಬೆಗಾಲಿಡುತ್ತಿದ್ದ ಮಗುವನ್ನು ನೋಡಿ ಅಮ್ಮ ಶಾರದೆ ಬಳಿ ಅವಧೂತ ಹೇಳಿದ್ದನಂತೆ,
ಅಮ್ಮಾ ಈ ಹುಡುಗ ಈ ನಾಡಿಗೆ ಕೀರ್ತಿ ತರುತ್ತಾನೆ.
"ಹಾಗಂದರೆ ಏನು?" ಎಂದು ಕೇಳಿದ್ದರು ಶಾರದಮ್ಮ.
ಅವಧೂತ ಹೇಳಿದ್ದು ಒಂದೇ ಮಾತು,"ಇವನು ಬರವಣಿಗೆಯಲ್ಲಿ ಅಚ್ಚರಿ ಮೂಡಿಸುತ್ತಾನೆ."
ಬಹಳ ಕಾಲ ಆ ತಾಯಿ ತನ್ನ ಮಗ ಲೆಕ್ಕಪತ್ರ ಬರೆಯುವ ದೊಡ್ಡ ಗುಮಾಸ್ತನಾಗುತ್ತಾನೆ ಎಂದೇ ನಂಬಿದ್ದರು.
ಅವಧೂತ ಹೇಳಿದ ಮಾತು ಸತ್ಯವಾಗಿ ದಶಕವೇ ಸಂದಿದೆ.
ಜೋಗಿ ಮೂಲತಃ ಸಮುದ್ರ ದಂಡೆಯವನು.ಮಂಗಳೂರು ಸಮೀಪದ ಕೂಳೂರಿನ ಸಮುದ್ರದ ಕಿನಾರೆಯಿಂದ ಹೊರಟದ್ದು ಅವನ ಕುಟುಂಬ.ಅಪ್ಪ ಅಮ್ಮ ಹೊಟ್ಟೆಪಾಡಿಗೆ ಬದುಕನ್ನು ಹುಡುಕುತ್ತಾ ಸಾಗಿದರು.ಹಾಗೇ ಬಂದವರು ನೆಲೆಯಾದದ್ದು ಉಪ್ಪಿನಂಗಡಿಯಲ್ಲಿ.
ಅದು ನನ್ನ ಹುಟ್ಟೂರು.ನಾನು ಹುಟ್ಟಿದ್ದು, ಬೆಳೆದದ್ದು, ಮತ್ತು ಈಗಲೂ ಬದುಕುತ್ತಿರುವ ಊರು.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರೆ ನದಿಗಳು ಮಿಲನಗೊಂಡು ಧಾವಂತದಿಂದ ಸಾಗುವುದು ಮೂವತ್ತು ಮೈಲಿ ದೂರದ ಸಮುದ್ರದ ಬಳಿಗೆ.ಉಪ್ಪಿನಂಗಡಿ ಮಳೆಗಾಲದಲ್ಲಿ ಪ್ರಕೃತಿಯ ಪರಮವೈಭವ ನಾಡು.ತುಂಬಿ ಹರಿಯುವ ನದಿಗಳೆರಡು ವಿವಶವಾಗಿ ಅಪ್ಪಿಕೊಂಡು ಸಾಗುವ ಚಿತ್ರ ನಮ್ಮಿಬ್ಬರಿಗೆ ಇಂದಿಗೂ ಸವಾಲು.
ಜೋಗಿಯ ಬರಹಗಳಲ್ಲಿ ಈಗಲೂ ಕಾಣುವುದು ಆ ನದಿಗಳು ನಮಗೆ ಹಾಕಿದ ಸವಾಲುಗಳೇ.
ಜೋಗಿ ನಮ್ಮ ಸಂಗಮಕ್ಷೇತ್ರದ ಸ್ಕೂಲಿಗೆ ಬಂದು ಕುಳಿತದ್ದೇ ನನ್ನ ಬಳಿ.ಆ ಕ್ಷಣದಿಂದ ಶುರುವಾದ ನಮ್ಮ ಗೆಳೆತನಕ್ಕೆ ಬಿಡುವಿಲ್ಲ.
ಗೋಪಾಲ ಮತ್ತು ಗಿರೀಶ ಎಂಬ ಇಬ್ಬರು ಹುಡುಗರು ನಾವು ಆ ಕ್ಷಣಕ್ಕೇ ಸಿದ್ಧಗೊಂಡಿದ್ದೆವು. ಕಪ್ಪು ಬಣ್ಣದ ಚಡ್ಡಿ ಮತ್ತು ಬಿಳಿಗೀಟಿನ ಅವನ ಟೆರ್ರಿಕಾಟನ್ ಶರಟು ಇಂದಿಗೂ ನನ್ನನ್ನು ಬಿಟ್ಟುಹೋಗಿಲ್ಲ.
ಸಂಜೆ ಸ್ಕೂಲು ಬಿಟ್ಟೊಡನೆ ಆ ಮೊದಲ ದಿನ ಆ ಮಳೆಗಾಲದಲ್ಲೂ ನನ್ನನ್ನು ಚಿಣ್ಣಮಾಮರ ಕೋಲ್ಡ್ ಹೌಸಿಗೆ ಕರೆದೊಯ್ದು ಲಾಲಿಪಾಪ್ ಕೊಡಿಸಿದ್ದ.
ಅದಕ್ಕೆ ಪ್ರತಿಯಾಗಿ ನಾನು ಅವನಿಗೆ ಇಂದಿಗೂ ಏನೂ ಕೊಟ್ಟಿಲ್ಲ.ಏಕೆಂದರೆ ಜೋಗಿಯ ಪ್ರೀತಿ ಮುಂದೆ ಯಾರು ಏನು ಕೊಟ್ಟರೂ ಅದು ಸಂದಾಯ ಆಗೋದೇ ಇಲ್ಲ.
ಜೋಗಿ ಭಯಂಕರ ತುಂಟ.ಶಾಲೆಯಲ್ಲಿ ಅವನ ಕಿತಾಪತಿಗಳಿಗೆ ಲೆಕ್ಕವಿಲ್ಲ.ಅಬ್ಬೇಪಾರಿ ಮೇಸ್ತರುಗಳ ತರಗತಿಗಳಿಂದ ಗೆಟ್‌ಔಟ್ ಆಗುವುದಕ್ಕೆ ಆಯಾ ದಿನಗಳಲ್ಲಿ ಏನು ಬೇಕೋ ಅದನ್ನೆಲ್ಲಾ ಮಾಡುತ್ತಿದ್ದ.ನಾವು ಓದುತ್ತಿದ್ದುದು ಕನ್ನಡ ಶಾಲೆಗಳಲ್ಲಿ.ಸರಕಾರಿ ಶಾಲೆಗಳ ಕಾಲವದು.ಮೇಸ್ತರುಗಳು ಎಂದರೆ ನಮಗೆ ಅರ್ಧ ತಮಾಶೆ,ಹೈಸ್ಕೂಲಿನಲ್ಲಿರುವಾಗಲೇ ನಮಗೆ ಈ ಮೇಸ್ತರರು ನಮ್ಮ ಲೆವೆಲ್‌ಗೆ ಇಲ್ಲ ಎಂದು ಮೊದಲ ಬಾರಿಗೆ ನನಗೆ ಪಾಠ ಮಾಡಿದ್ದ.ಪಿಯುಸಿಗೆ ಬರುವಾಗ ನಮ್ಮ ಮುಂದೆ ಇದ್ದ ಕೋರ್ಸು ಎರಡೇ,ಒಂದು ಕಾಮರ್ಸ್ ಮತ್ತೊಂದು ಆರ್ಟ್ಸ್.ಕಾಮರ್ಸ್ ತೆಗೊಳ್ಳೋಣ.ಏಕೆಂದರೆ ನಾವು ಸಿ.ಎ. ಮಾಡಿ ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು ಎಂದು ನನ್ನಲ್ಲಿ ಆಸೆ ಹುಟ್ಟಿಸಿದ.ಪಿಯು ಸೇರಿದ ಮೂರನೇ ದಿನಕ್ಕೇ ಡೆಬಿಟ್ ವಾಟ್ ಕಮ್ಸ್ ಇನ್ ಅಂತ ರೆಡ್ಡಿ ಮಾಸ್ತರ ಪೆದ್ದು ಪೆದ್ದಾಗಿ ಗಿಳಿಪಾಠ ಹೇಳುತ್ತಿದ್ದಾಗ ನಾನು ಸಿಕ್ಕಿ ಬಿದ್ದೆ ಎಂದು ಅವನಲ್ಲಿ ಗೋಗರೆದರೆ,ಜೋರಾಗಿ ನಕ್ಕು(ಈಗಲೂ ಆಗೊಮ್ಮೆ ಈಗೊಮ್ಮೆ ಜೋಗಿ ಆ ನಗು ನಗುವುದು ಇದೆ ನೋಡಿ)ಇದೆಲ್ಲಾ ಸುಮ್ಮನೇ ಮಾರಾಯ.ನಮಗೆ ಕಾಲೇಜಿಗೆ ಬರೋ ನೆಪ ಅಷ್ಟೇ.ಐದು ವರ್ಷ ಹೀಗೆ ಕಳೆಯೋಣ.ನಾವು ಕಲಿಯೋದು ಬೇರೇನೇ ಇದೆ ಎಂದು ಸಂತೈಸಿದ.
ಆ ಮಾತು ನಿಜವಾಯಿತು.ಪಠ್ಯ ಒಂದನ್ನು ಬಿಟ್ಟು ನಾವು ಬದುಕನ್ನು ಕಲಿತೆವು.ಕಾವ್ಯ ಓದಿದೆವು,ಕಾದಂಬರಿ ತಂದು ಮುಗಿಸಿದೆವು.ಕಾಡು ಅಲೆದೆವು,ಹೊಳೆಯಲ್ಲಿ ಈಜಾಡಿದೆವು.ಮಾವಿನ ತೋಟ ಮಾಡಿದೆವು,ಬತ್ತದ ಗದ್ದೆ ಉತ್ತು ಕೊಯ್ಲು ಮಾಡಿದೆವು.
ಜೋಗಿ ಬರೆದ ಮೊದಲ ಕಥೆ,ಜೋಗಿ ಬರೆದ ಮೊದಲ ಕವಿತೆ,ಜೋಗಿ ಮಾಡಿದ ಮೊದಲ ಭಾಷಣ,ಜೋಗಿ ಪ್ರೀತಿಸಿದ ಮೊದಲ ಹುಡುಗಿ,..ಎಲ್ಲದಕ್ಕೂ ನಾನೊಬ್ಬನೇ ಸಾಕ್ಷಿ.ಆ ಮಟ್ಟಿಗೆ ನಾನು ಧನ್ಯ.ಇಂದಿಗೂ ಅವನ ಒಳನೋಟ,ಅವನ ಅಂತರ್ಯಗಳು,ಅವನ ಒಳಗಿನ ಲಹರಿ ನನಗೆ ಮಾತ್ರಾ ಅರ್ಥವಾಗುತ್ತದೆ.ಇದನ್ನು ಅರ್ಧ ಅಹಂಕಾರ ಮತ್ತು ಅರ್ಧ ವಿನಯದಿಂದ ಹೇಳುತ್ತೇನೆ.ಅವನು ಮತ್ತು ನಾನು ಬಿಚ್ಚಿಕೊಳ್ಳದ ಸತ್ಯಗಳಿಲ್ಲ.ನಾವು ಮುಚ್ಚಿಟ್ಟ ವಿಚಾರಗಳೇ ಇಲ್ಲ.ಇದನ್ನು ಕಂಡ ಅವನ ಜ್ಯೋತಿ ಅನೇಕ ಬಾರಿ ಅಸೂಯೆಪಟ್ಟಿದ್ದಾಳೆ.
ಜೋಗಿ ಕತೆಗಾರನಾಗುತ್ತಾನೆ ಎಂದು ಮೊದಲ ಬಾರಿಗೆ ನನಗೆ ಹೇಳಿದವನು ನನ್ನ ಅಪ್ಪ.ಅವನು ಜೋಗಿಯನ್ನು ಏಕೋ ಬಹುವಚನದಲ್ಲೇ ಕರೆಯುತ್ತಿದ್ದ.ನಾವು ಹೈಸ್ಕೂಲಿನಲ್ಲಿ ಇದ್ದಾಗ ನಾವಿಬ್ಬರೂ ಜಿದ್ದಿಗೆ ಬಿದ್ದವರಂತೆ ಕತೆ ಬರೆಯತ್ತಿದ್ದೆವು.ನೂರು ಪುಟದ ನೋಟ್ಸ್ ಬುಕ್ಕು ನಮ್ಮ ಸಂಕಲನ.ಅವನ ಕಥಾಸಂಕಲನಕ್ಕೆ ಕೊನೆ ಪುಟದಲ್ಲಿ ನನ್ನ ವಿಮರ್ಶೆ.ನನ್ನ ಸಂಕಲನಕ್ಕೆ ಅವನದ್ದು.ಎರಡನ್ನೂ ನಾವು ನಮ್ಮ ಕ್ಲಾಸಿನ ಸುಂದರಾಂಗಿಯರಿಗೆ ಕೊಟ್ಟು ಓದಿಸಿ,ಅವರೂ ನಮ್ಮದೇ ವಾಕ್ಯಗಳನ್ನು ಕದ್ದು ವಿಮರ್ಶೆ ಬರೆಯುತ್ತಿದ್ದುದು ಈಗಲೂ ಮರೆತಿಲ್ಲ.
ಹಾಗೇ ಅವನ ಕಥೆಗಳನ್ನು ನನ್ನ ಅಪ್ಪ ಓದುತ್ತಿದ್ದ.ಗಿರೀಶ ದೊಡ್ಡವ ಕತೆಗಾರ ಆಗುತ್ತಾನೆ ಎಂದು ಹೇಳುತ್ತಿದ್ದ.ಬರೆದರೆ ಗಿರೀಶನ ಥರ ಬರೆಯಬೇಕಯ್ಯಾ ಎಂದು ಚಪ್ಪರಿಸುತ್ತಿದ್ದ.ಅಪ್ಪ ಹಾಗೇ ಹೊಗಳಿದ ಎಂದು ನಾನು ಜೋಗಿಗೆ ಹೇಳಿದಾಗ ಅದನ್ನು ಸ್ವತಃ ಕೇಳಿಸಿಕೊಳ್ಳಲು ಜೋಗಿ ನಮ್ಮ ಮನೆಗೆ ಬಂದು ಅಪ್ಪನ ಎದುರು ಕುಳಿತರೆ ನನ್ನ ಅಪ್ಪ ಕುಮಾರವ್ಯಾಸ ಭಾರತವನ್ನು ಏರು ಸ್ವರದಲ್ಲಿ ಮಧ್ಯ ರಾತ್ರಿ ತನಕ ಜೋಗಿ ಮುಂದೆ ಅರ್ಥಸಹಿತ ಪಾರಾಯಣ ಮಾಡಿ ಅವನಿಗೆ ಸಾಕೋ ಸಾಕೋ ಮಾಡಿದ್ದ.
ಜೋಗಿ ಅವನ ಕಿತ್ತು ತಿನ್ನುವ ಬಡತನವನ್ನು ಮೀರಲು ಎಂದೂ ಸಾಹಿತ್ಯವನ್ನು ಆಶ್ರಯಿಸಲಿಲ್ಲ.ಅವನಿಗೆ ಕತೆ,ಕಾವ್ಯ,ಓದು ಬರಹ ಅವನೆಂದೂ ನಂಬದ ದೈವದತ್ತವಾಗಿಯೇ ಬಂದಿತ್ತು.ನಾವು ಚಾರ್ಮಾಡಿ,ಶಿರಾಡಿ ಘಾಟಿಗಳ ತಿರುವುಗಳಲ್ಲಿ ಲ್ಯಾಂಬಿ ಸ್ಕೂಟರ್ ಪಾರ್ಕ್ ಮಾಡಿ,ಕಾಡೊಳಗೆ ಹೊಕ್ಕೆವು ಎಂದರೆ ಹೊರಗೆ ಬರೋವಾಗ ಮೂರು ದಿನಗಳೇ ಕಳೆಯುತ್ತಿದ್ದೆವು.ಕಾಡಿನಲ್ಲಿ ನಾವು ಗಂಟೆಗಟ್ಟಲೆ ಮೌನವಾಗಿ ಕುಳಿತು ಯಾವ ಯಾವ ಹಕ್ಕಿಗಳು ಹೇಗೆ ಹೇಗೆ ಕೂಗುತ್ತವೆ ಎಂದು ಧ್ಯಾನಸ್ಥರಾಗುತ್ತಿದ್ದುದು ಜೋಗಿ ಓರ್ವ ತಪಸ್ವೀಯಾಗಲು ಕಾರಣ ಮಾಡಿತು ಎಂದು ಈಗ ನನಗೆ ಅನಿಸುತ್ತಿದೆ.ಅವನೊಳಗಣ ಆ ತಪಸ್ವೀ ಈಗಲೂ ಅವನ ಕಮರ್ಶಿಯಲ್ ಸೀರಿಯೆಲ್ಲುಗಳಲ್ಲೂ ಎದ್ದೆದ್ದು ಕಾಣಿಸುತ್ತಿದೆ.
ಒಮ್ಮೆ ಬೆಳ್ತಂಗಡಿ ಸಮೀಪದ ಗಡಾಯಿಕಲ್ಲು ಏರಿದ್ದೆವು.ಆ ಪಯಣವನ್ನು ಆಯೋಜಿಸಿದವನು ಜೋಗಿಯೇ.ಕಾರಣ ಕಾವ್ಯಶಕ್ತಿಯನ್ನು ಪ್ರಕೃತಿಯ ಆಸರೆಯಲ್ಲಿ ಪಡೆಯುವುದು.ಎರಡೇ ಎರಡು ಬಾಟಲಿ ಬಿಯರ್ ಮತ್ತು ಒಂದು ಕ್ಯಾನು ನೀರು ಮಾತ್ರಾ ನಮ್ಮ ಜೊತೆಗಿತ್ತು.ಆ ರಾತ್ರಿ ಇಡೀ ಗಡಾಯಿಕಲ್ಲಿನ ನೆತ್ತಿಯಲ್ಲಿ ಕುಳಿತದ್ದು,ಕಾವ್ಯ ಶಕ್ತಿಯನ್ನು ಧ್ಯಾನಿಸಿದ್ದು ಬಹಳ ಕಾಲ ನಮಗೆ ನಗು ತರಿಸಿತ್ತು.ಕೊರೆವ ಛಳಿಯಲ್ಲಿ ಥಂಡಿ ಹಿಡಿದು ನಾನು ವಾರ ಕಾಲ ಜ್ವರ ಹಿಡಿದು ಮಲಗಿದ್ದು ಈಗಲೂ ನನ್ನನ್ನು ಅಣಕಿಸುತ್ತದೆ,ಆದರೆ ಜೋಗಿ ಮಾತ್ರಾ ಅವನ ಕೃತಿಗಳಲ್ಲಿ ಗಡಾಯಿಕಲ್ಲಿನ ತಿರುಳನ್ನು ಢಾಳಾಗಿ ತಂದು ಕೊಡುತ್ತಿದ್ದಾನೆ.
ಪೇಜಾವರ ಮಠದ ವತಿಯಿಂದ ನಡೆದ ಸಾಹಿತ್ಯ ಸ್ಫರ್ಧೆಯಲ್ಲಿ ಜೋಗಿಗೆ ಮೊದಲ ಬಹುಮಾನ.ಆ ಪೇಜಾವರ ಸ್ವಾಮೀಜಿ ಅವರು ಸನ್ಮಾನ ಮಾಡಿ ಕೊಟ್ಟ ಎಂಟುನೂರು ರೂಪಾಯಿಯನ್ನು ಮಂಗಳೂರಿನಲ್ಲಿ ಬೀರ್ ಕುಡಿದು ಮುಗಿಸಿ ಉಳಿದ ಹಣದಲ್ಲಿ ನನಗೆ ಆತ ಆಕ್ಸ್‌ಫರ್ಡ್ ಡಿಕ್ಷನರಿ ಕೊಡಿಸಿದ್ದ.
ಜೋಗಿ ತಂದೆ ಇಂದಿರಾಗಾಂಧಿಯನ್ನು ದೇವರೇ ಎಂದು ನಂಬಿದ್ದರು,ಮಗನನ್ನು ಅಪಾರವಾಗಿ ಪ್ರೀತಿಸುತ್ತಿದ್ದರು,ಮಗ ಮಾಡಿದ್ದೆಲ್ಲವೂ ಸರಿಯಾಗಿದೆ ಎಂದುಕೊಂಡಿದ್ದರು.ಹಾಗಾಗಿ ಅವರೆಂದೂ ಮಗನನ್ನು ತಿದ್ದಿತೀಡಲು ಹೋಗಲೇ ಇಲ್ಲ.ಹಾಗೇನಾದರೂ ಮಾಡಿದ್ದರೆ ಪ್ರಮಾದವಾಗುತ್ತಿತ್ತು.ಜೋಗಿ ತನಗೆ ಇಷ್ಟವಾಗುವಂತೆ ತಾನು ಬೆಳೆದ.ಒಮ್ಮೆ ರೈಲಲ್ಲಿ ಅಪ್ಪ ಮಗ ಹೋಗುತ್ತಿದ್ದರು.ಜೋಗಿ ಮಲಗಿ ನಿದ್ರಿಸಿದ್ದ.ದಾವಣಗೆರೆ ದಾಟಿ ರೈಲು ಹೋಯಿತು.ಜೋಗಿಗೆ ಎಚ್ಚರವಾದಾಗ ಐವತ್ತು ಮೈಲಿ ಮುಂದೆ ಹೋಗಿದ್ದಾಗಿತ್ತು.ಏಕೆ ಎಂದು ತಂದೆಯನ್ನು ಕೇಳಿದರೆ "ನೀನು ನಿದ್ದೆ ಮಾಡ್ತಿದ್ದೆ.ಏಕೆ ಎಬ್ಬಿಸೋದು ಅಂತ ಸುಮ್ಮನಾದೆ.ಏನೀಗ ವಾಪಾಸು ಹೋದರಾಯಿತು ಅಷ್ಟೇ" ಎಂದರು ಆ ಪುಣ್ಯಾತ್ಮ್ಮ!
1989 ಅಕ್ಟೋಬರ 31 ಜೋಗಿ ನನ್ನ ಬಿಟ್ಟು ಹೋದ. ಅವನು ಹೊರಟಿದ್ದು ಬೆಂಗಳೂರಿಗೆ. ಖುಲ್ಲಂಖುಲ್ಲಂ ಬದುಕನ್ನು ಕಟ್ಟುವುದಕ್ಕೆ.ಮುಂದಿನ ಜೀವನದ ರೂಬುರೂಬಿಗೆ.ಆ ರಾತ್ರಿ ಅವನನ್ನು ಕೆಂಪು ಬಸ್ಸು ಏರಿಸಿ ವಾಪಾಸ್ಸು ಬಂದ ನಾನು ವಿಷಣ್ಣನಾಗಿದ್ದೆ.ಮನಸ್ಸು ಭಾರವಾಗಿ ಬಿದ್ದಿತ್ತು.ಜೋಗಿ ಇಲ್ಲದೇ ನಾನು ಊರಿನಲ್ಲಿ ಏನು ಮಾಡೋದು ಸಾಧ್ಯ ಎಂದು ಚಿಂತಿಸಿದೆ.ಅಳು ಬರುವುದೇ ಬಾಕಿ.ಮನೆಗೆ ಬಂದು ಟೇಬಲ್ಲು ಡ್ರಾವರ್ ಎಳೆದರೆ ಒಂದು ಪತ್ರ.
ಅದು ಜೋಗಿ ನನಗೆ ಬರೆದಿಟ್ಟು ಹೋದದ್ದು.
ಅದರಲ್ಲಿ ಬರೆದ ಒಂದೇ ವಾಕ್ಯ."ಹೊಸ ಬದುಕಿನ ಹಾದಿ ಹಿಡಿಯುವುದು ನನಗೆ ಅಗತ್ಯ.ನಿನ್ನ ಬಿಟ್ಟುಹೋಗುವ ಸಂಕಟ ನನ್ನ ಕೊರೆಯುತ್ತಿದೆ.ಏನು ಮಾಡೋಣ ರಕ್ತದೊಂದಿಗೆ ಲಾಳ ಬಡಿಯುತ್ತೇನೆ.ಗೆದ್ದರೆ ನಿನಗೆ ಸಿಗುತ್ತೇನೆ,ಸೋತರೆ ಜಗತ್ತಿಗೇ ವಿದಾಯ!"
ಜೋಗಿ ಗೆದ್ದ.ಕನ್ನಡಿಗರಿಗೆಲ್ಲಾ ಸಿಕ್ಕ,ನನಗೆ ಮಾತ್ರವೇ ಅಲ್ಲ.ಥ್ಯಾಂಕ್ಸ್ ಟು ಬೆಂಗಳೂರ್!
ಜೋಗಿಯ 21 ನೇ ಪುಸ್ತಕ ಇದು.ಅವನು ಬರೆದ ಮೊದಲ ಕಥೆ ನನಗೆ ಗೊತ್ತಿದೆ.ಅದು ಒಂದು ಯುವಕನ ಕಥೆ.ಆ ಕಾಲದ ಆ ಯುವಕನ ಹಂಬಲ ಮತ್ತು ತಹತಹ ಕಥೆಯಲ್ಲಿ ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ನಿರೂಪಿತವಾಗುತ್ತದೆ.ಆ ಯುವಕ ಅಕ್ಕಿ ಮಂಡಿ ಮೇಲೆ ಕುಳಿತು ಗೋಣಿಚೀಲದಿಂದ ಒಂದೊಂದೇ ಅಕ್ಕಿ ಕಾಳನ್ನು ಬಾಯಿಗೆ ಎಸೆಯುತ್ತಾ ಇರುತ್ತಾನೆ.ಒಂದು ಅಕ್ಕಿ ಕಾಳು ಅವನ ಹಲ್ಲಿನ ಕುಳಿಯೊಳಗೆ ಸಿಕ್ಕು ಅವನಿಗೆ ಅಸಾಧ್ಯ ನೋವಾಗಿ,ಅದನ್ನು ಕುಳಿಯಿಂದ ಎಬ್ಬಿಸಲು ಪ್ರಯತ್ನ ಪಡುತ್ತಾನೆ. ಆ ಕ್ಷಣಕ್ಕೆ ಅವನಿಗೆ ತಾನೂ ಒಂದು ಅಕ್ಕಿ ಕಾಳೇ ಎಂದನಿಸುತ್ತದೆ.ಯಾರದೋ ಕುಳಿಯಲ್ಲಿ ಕುಳಿತ ಹಾಗೇ ಅನಿಸುತ್ತದೆ.ಅದೇ ಅವನನ್ನು ಮುಂದಿನ ಹೋರಾಟಕ್ಕೆ ಕಟ್ಟುತ್ತದೆ.ಈ ಕಥೆಯನ್ನು ಯಾವುದೋ ಮಾಸಿಕ ಪ್ರಕಟಿಸಿದ್ದು,ಅದೇ ಕಥೆ ಆ ತಿಂಗಳ ಬಹುಮಾನಿತ ಕತೆಯಾಗಿ ಪ್ರಶಸ್ತಿ ಪಡೆದದ್ದು ,ಕಾಲೇಜಿನಲ್ಲಿ ನನಗೆ ಹೊಟ್ಟೆ ಉರಿದದ್ದು ನೆನಪು.
ಜೋಗಿಯ ಶಕ್ತಿ ಅಥವಾ ವಿಮರ್ಶೆಯ ಪರಿಭಾಷೆಯಲ್ಲಿ ಹೇಳುವುದಾದರೆ ಸೃಜನಾತ್ಮಕ ಸಾಧ್ಯತೆಗಳು ಆ ತರುಣ ವಯಸ್ಸಿಗೇ ಕೆನೆಗಟ್ಟಿದ್ದವು.ಆದರೆ ಅವುಗಳಿಗೆ ರೂಪ ಸಿಗಲು ಆತ ಬೆಂಗಳೂರಿಗೇ ಹೋಗಬೇಕಾಯಿತು.ಜೋಗಿ ಬೆಂಗಳೂರಿಗೆ ಹೋದದ್ದೂ ಅದಕ್ಕಾಗಿ ಏನಲ್ಲ.ಅವನಿಗೆ ರೊಟ್ಟಿ ಬೇಕಾಗಿತ್ತು.ರೊಟ್ಟಯೇ ಅವನ ಗುರಿ ಈಗಲೂ ಅಲ್ಲ.ಚೆನ್ನಾಗಿ ಬದೋಕೋದು ಅವನು ಕಲಿತ ಜೀವನ ಕಲೆ.ವೈಎನ್ಕೆ ಜೋಗಿಯ ವಿದ್ವತ್‌ಪ್ರತಿಭೆಯನ್ನು ಮೊದಲಾಗಿ ಗುರುತಿಸಿದರು.ಯಾರ ಕೈಗೆ ಸಿಗಬೇಕಿತ್ತೋ ಅವರ ಕೈಗೇ ಜೋಗಿ ಸಿಕ್ಕ.ಆಮೇಲೆ ಅವನು ಬೆಳೆದ ರೀತಿಯನ್ನು ಕರ್ನಾಟಕ ಕಂಡಿದೆ.
ವೈಎನ್ಕೆ ಗರಡಿಯಲ್ಲಿ ಬೆಳೆದ ಜೋಗಿ ಇಂದು ಕನ್ನಡದ ವಿಶಿಷ್ಟ ಬಗೆಯ ಸಾಹಿತಿ.ಅವನು ಕನ್ನಡಕ್ಕೆ ತನ್ನದೇ ಛಾಪಿನ ಹೊಸ ಭಾವ ನೀಡಿದ್ದಾನೆ.ಹಾಗೆಂದು ಹೇಳುವಾಗ ಜೋಗಿಯ ಬರಹಗಳ ತುಂಟತನ ನನ್ನನ್ನು ಅಟ್ಟಾಡಿಸುತ್ತದೆ.ಅವನ ಪ್ರತೀ ಮಾತುಗಳಲ್ಲಿ ಕಾಣುವ ತುಂಟತನ ಅವನ ಯಾವತ್ತೂ ಬರಹಗಳಲ್ಲಿ ಬಂದು ನಮ್ಮನ್ನು ಮುದಗೊಳಿಸುತ್ತದೆ.
ಒಮ್ಮೆ ಭೈರಪ್ಪನವರ ಬಗ್ಗೆ ಅವನು ಯವುದೋ ವೆಬ್‌ನಲ್ಲಿ ಬರೆದ ಬರಹಕ್ಕೆ ಭೈರಪ್ಪ ಅಭಿಮಾನಿಗಳು ಅವನನ್ನು ಗಂಡಾಗುಂಡಿ ಮಾಡಿದ್ದರು.ಕಾಮೆಂಟ್‌ಗಳ ಮಹಾಪೂರದಲ್ಲಿ ಜೋಗಿ ಕೊಚ್ಚಿಹೋಗುವುದೇ ಬಾಕಿ.ಕೊನೆಯಲ್ಲಿ ಜೋಗಿಯೇ ಆ ಟೀಕಾಸರಣಿಗೆ ಒಂದು ಕಾಮೆಂಟ್ ಹಾಕಿ ಮುಕ್ತಾಯ ಮಾಡಿದ್ದ.ಹೇಗೆಂದರೆ,"ಎಷ್ಟು ಬೇಕಾದರೂ ಬೈರಪ್ಪಾ".
ಅವನ ತುಂಟತನಕ್ಕೆ ಇಂಥ ನೂರಾರು ಉದಾಹರಣೆಗಳನ್ನು ಕಾಣುತ್ತೇವೆ.
"ದಪ್ಪಗಾಗಿದ್ದೀಯಾ, ವೆಜ್ ಮಾತ್ರಾ ತಿನ್ನು,ವಾಕ್ ಮಾಡು" ಎಂದು ಯಾರೋ ಸಲಹೆ ನೀಡಿದರೆ, "ಆನೆ ಪ್ಯೂರ್ ವೆಜ್,ಅದು ಎಷ್ಟು ವಾಕ್ ಮಾಡುತ್ತದೆ ಅಲ್ವಾ, ಸಣ್ಣಗಾಗಿದ್ದು ನೋಡಿದ್ದೀರಾ? ಎಂದು ಕೇಳಿ ಕೇಳಿದವರನ್ನು ಗರ ಬಡಿಸಿದ್ದ.ವೀರಪ್ಪ ಮೊಯ್ಲಿ ಅವರ ಕಾವ್ಯಕ್ಕೆ ಅವನ ವಿಮರ್ಶೆ, "ಮೊಯ್ಲಿ ಕಾವ್ಯ(ದಿಂದ)ಮೈಲಿ ದೂರ".ಶಿಲ್ಪಾಶೆಟ್ಟಿಯನ್ನು ಕನ್ನಡದಲ್ಲಿ ಅವನು ಪರಿಚಯಿಸಿದ್ದು,"ಇವಳ ಕಾಲೇ ಕಂಬ".ನಾನೊಮ್ಮೆ ಬೈಕ್‌ನಿಂದ ಬಿದ್ದು ಕೈ ಮುರಿಸಿಕೊಂಡಾಗ ಅವನು ಕಳುಹಿಸಿದ ಸಂತಾಪ."ಹೇಗಿದ್ದಿಯೋ "ಏಕೈಕ" ಕನ್ನಡಿಗಾ".
ಒಮ್ಮೆ ಭೀಕರವಾಗಿ ಮಾತನಾಡುವವರು ನಮ್ಮ ಜೊತೆ ಕುಳಿತು ಸಾಯೋ ಬಡಿವ ಹಾಗೇ ಮಾತನಾಡಿದರು.ಮಾತೆತ್ತಿದರೆ ನಾನು ನಿಮ್ಮ ಅಭಿಮಾನಿ ಎಂದು ಪಟ್ಟಾಗಿ ಕುಳಿತುಬಿಟ್ಟಿದ್ದರು. ಅವರು ಹೋದ ಮೇಲೆ ಜೋಗಿ ಹೇಳಿದ್ದು,ಇವರು ಅಭಿಮಾನಿ ನಿಜ.ಆದರೆ ಇವರು ಎಲ್ಲಿ ಸಿಗಬೇಕು ಎಂದರೆ "ನಾವು ಹೋಗುತ್ತಿದ್ದ ಹಡಗು ಒಡೆದು ಚಿಂದಿಯಾಗಿ ಯಾವುದೋ ದ್ವೀಪಕ್ಕೆ ಹೋಗಿ ಬಿದ್ದು,ಅಲ್ಲಿ ನಾವು ಮತ್ತೊಂದು ಹಡಗಿಗೆ ಕಾಯುತ್ತಾ ಇರುವಾಗ ಇವರು ಸಿಗಬೇಕು, ಇಲ್ಲಿ ಅಲ್ಲ."
ಜೋಗಿಯ ಅಭಿಮಾನಿಯೊಬ್ಬರು ಅವನ ಬರಹಗಳ ಬಗ್ಗೆ ಹೇಳಿದ ಒಂದು ಮಾತು ಇಲ್ಲಿ ಕೋಟ್ ಮಾಡಲೇಬೇಕು,"ಜೋಗಿ ಅವರ ಬರಹಗಳು ನಮ್ಮ ಮನೆಯ ಬೆಕ್ಕಿನ ಹಾಗೇ ಸಾರ್.ನಮ್ಮನ್ನು ಸವರಿಕೊಂಡು ತಾನೂ ಅನುಭವಿಸುತ್ತಾ ನಮಗೂ ಅನುಭವ ನೀಡುತ್ತಾ ಹೋಗುತ್ತವೆ"
"ಪಾಪಿ ಇಷ್ಟೊಂದು ಪುಸ್ತಕ ಅದೆಂತು ಬರೆಯುತ್ತಿಯೋ" ಎಂದು ನಮ್ಮ ಊರಿನ ಗೆಳೆಯರ ಅವನು ಬಂದಾಗಲೆಲ್ಲಾ ಹಿಡಿ ಶಾಪ ಹಾಕುತ್ತಾರೆ.ಅವನು ಹ್ಹೋ ಹ್ಹೋ ಎಂದು ಅಬ್ಬರಿಸಿ ಬೊಬ್ಬಿರಿದು ನಗುತ್ತಾನೆ.ಅವನ ಗೆಳತಿಯರು ಅವನನ್ನು ಕಾಡುವ ಪರಿ ನೋಡಿ ನಮ್ಮೂರಿನ ಗೆಳೆಯರು ದಂಗಾಗುತ್ತಾರೆ.
"ಈ ಪರಿಯ ಬೆಡಗಾ ಆವ ದೇವರಲೂ ನಾ ಕಾಣೆ" ಎಂದು ನಾನು ಅವರ ನಡುವೆ ಅರ್ಥಗರ್ಭಿತವಾಗಿ ಹಾಡುತ್ತೇನೆ.
ಅವನ ಯಶಸ್ಸಿನ ಫಾರ್ಮುಲಾ ಕೇಳಬೇಕೆಂದು ಅವನಿಗೆ ದುಂಬಾಲು ಬಿದ್ದವರು,ಆವನಂತೆ ಆಗಬೇಕೆಂದು ನಿರ್ಧಾರ ಮಾಡಿ ಬೆಂಗಳೂರು ಬಸ್ಸು ಹತ್ತಿದವರು,ಅವನ ಗರಡಿಯಲ್ಲಿ ಇರಬೇಕೆಂದು ಬೇಡಿದವರು ಅವನು ಕೊನೆಗೂ ಅರ್ಥವಾಗದೇ ಮರಳುತ್ತಾರೆ.
ಅದೇ ಜೋಗಿ.ಅವನನ್ನು ಅವನೊಳಗೆ ಹುಡುಕಿ ಹಿಡಿಯೋದೇ ಒಂದು ಸವಾಲು.ಸೀರಿಯೆಲ್ಲು, ಸಿನಿಮಾ ಮಂದಿಗೆ ಈ ಕಾರಣಕ್ಕೆ ಅವನ ಸಹವಾಸ ಸಾಕು-ಬೇಕು ಮಾಡುವುದು ಇದೇ ಕಾರಣಕ್ಕೆ.
ಈ ಕತೆಗಳ ಮೂಲಕ ನಿಮಗೆ ಕಾಣಿಸುವ ಈ ಕಥೆಗಾರ ನಿಮ್ಮನ್ನು ಯಾವಜ್ಜೀವ ಪಕ್ಕದಲ್ಲಿ ಕೂರಿಸಿಕೊಂಡು ಹೇಳುತ್ತಿರುವುದು ಅದೇ ಜೋಗಿ ಎಂಬ ಅನಾವರಣವನ್ನೇ.ಅವನನ್ನು ಪೂರ್ತಿ ಅರ್ಥ ಮಾಡಿಕೊಂಡ ಅಹಂಕಾರದಲ್ಲಿ ಈ ಮಾತುಗಳನ್ನು ನಾನು ಪೆಗ್ಗಿಲ್ಲದೇ ಎಗ್ಗಿಲ್ಲದೇ ಒಪ್ಪಿಸಿದ್ದೇನೆ.
ಇಂತು,
ಅವನ ಗೋಪಿ
ಮತ್ತು
ನಿಮ್ಮ ಗೋಪಾಲಕೃಷ್ಣ ಕುಂಟಿನಿ
7 comments:
Wow! Very good write up. I enjoyed every bit of it:-)
-Parameshwar Gundkal
ಮನಸ್ಸಿಗೆ ಆಪ್ತವಾಗುವಂತೆ ಮೂಡಿಬಂದಿದೆ ಲೇಖನ....ವಾವ್ಹ್...ನಿಮ್ಮ ಸ್ನೇಹಕ್ಕೊಂದು ಸಲಾಂ...
:-)
1.ಒಮ್ಮೆ ಭೈರಪ್ಪನವರ ಬಗ್ಗೆ ಅವನು ಯವುದೋ ವೆಬ್‌ನಲ್ಲಿ ಬರೆದ ಬರಹಕ್ಕೆ ಭೈರಪ್ಪ ಅಭಿಮಾನಿಗಳು ಅವನನ್ನು ಗಂಡಾಗುಂಡಿ ಮಾಡಿದ್ದರು.ಕಾಮೆಂಟ್‌ಗಳ ಮಹಾಪೂರದಲ್ಲಿ ಜೋಗಿ ಕೊಚ್ಚಿಹೋಗುವುದೇ ಬಾಕಿ.ಕೊನೆಯಲ್ಲಿ ಜೋಗಿಯೇ ಆ ಟೀಕಾಸರಣಿಗೆ ಒಂದು ಕಾಮೆಂಟ್ ಹಾಕಿ ಮುಕ್ತಾಯ ಮಾಡಿದ್ದ.ಹೇಗೆಂದರೆ,"ಎಷ್ಟು ಬೇಕಾದರೂ ಬೈರಪ್ಪಾ".
ಅವನ ತುಂಟತನಕ್ಕೆ ಇಂಥ ನೂರಾರು ಉದಾಹರಣೆಗಳನ್ನು ಕಾಣುತ್ತೇವೆ.
"ದಪ್ಪಗಾಗಿದ್ದೀಯಾ, ವೆಜ್ ಮಾತ್ರಾ ತಿನ್ನು,ವಾಕ್ ಮಾಡು" ಎಂದು ಯಾರೋ ಸಲಹೆ ನೀಡಿದರೆ, "ಆನೆ ಪ್ಯೂರ್ ವೆಜ್,ಅದು ಎಷ್ಟು ವಾಕ್ ಮಾಡುತ್ತದೆ ಅಲ್ವಾ, ಸಣ್ಣಗಾಗಿದ್ದು ನೋಡಿದ್ದೀರಾ? ಎಂದು ಕೇಳಿ ಕೇಳಿದವರನ್ನು ಗರ ಬಡಿಸಿದ್ದ.ವೀರಪ್ಪ ಮೊಯ್ಲಿ ಅವರ ಕಾವ್ಯಕ್ಕೆ ಅವನ ವಿಮರ್ಶೆ, "ಮೊಯ್ಲಿ ಕಾವ್ಯ(ದಿಂದ)ಮೈಲಿ ದೂರ".ಶಿಲ್ಪಾಶೆಟ್ಟಿಯನ್ನು ಕನ್ನಡದಲ್ಲಿ ಅವನು ಪರಿಚಯಿಸಿದ್ದು,"ಇವಳ ಕಾಲೇ ಕಂಬ".ನಾನೊಮ್ಮೆ ಬೈಕ್‌ನಿಂದ ಬಿದ್ದು ಕೈ ಮುರಿಸಿಕೊಂಡಾಗ ಅವನು ಕಳುಹಿಸಿದ ಸಂತಾಪ."ಹೇಗಿದ್ದಿಯೋ "ಏಕೈಕ" ಕನ್ನಡಿಗಾ".
2.ಯಾರನ್ನೂ ನೋಯಿಸೋದಿಲ್ಲ.ತಾನೇ ಒಬ್ಬನೇ ಕುಳಿತು ಜೋರಾಗಿ ಅತ್ತುಬಿಟ್ಟಾನು.ನೋವನ್ನು ನುಂಗಿ ಸುಮ್ಮನೇ ನಕ್ಕಾನು.ಏನಾಯಿತೋ ಎಂದರೆ ಮತ್ತೆ ಅದೇ ತುಂಟ ತುಂಟ ನಗೆ.
ಅದು ಜೋಗಿ.
3.ಪೇಜಾವರ ಮಠದ ವತಿಯಿಂದ ನಡೆದ ಸಾಹಿತ್ಯ ಸ್ಫರ್ಧೆಯಲ್ಲಿ ಜೋಗಿಗೆ ಮೊದಲ ಬಹುಮಾನ.ಆ ಪೇಜಾವರ ಸ್ವಾಮೀಜಿ ಅವರು ಸನ್ಮಾನ ಮಾಡಿ ಕೊಟ್ಟ ಎಂಟುನೂರು ರೂಪಾಯಿಯನ್ನು ಮಂಗಳೂರಿನಲ್ಲಿ ಬೀರ್ ಕುಡಿದು ಮುಗಿಸಿ ಉಳಿದ ಹಣದಲ್ಲಿ ನನಗೆ ಆತ ಆಕ್ಸ್‌ಫರ್ಡ್ ಡಿಕ್ಷನರಿ ಕೊಡಿಸಿದ್ದ.
4.ಜೋಗಿ ತಂದೆ ಇಂದಿರಾಗಾಂಧಿಯನ್ನು ದೇವರೇ ಎಂದು ನಂಬಿದ್ದರು,ಮಗನನ್ನು ಅಪಾರವಾಗಿ ಪ್ರೀತಿಸುತ್ತಿದ್ದರು,ಮಗ ಮಾಡಿದ್ದೆಲ್ಲವೂ ಸರಿಯಾಗಿದೆ ಎಂದುಕೊಂಡಿದ್ದರು.ಹಾಗಾಗಿ ಅವರೆಂದೂ ಮಗನನ್ನು ತಿದ್ದಿತೀಡಲು ಹೋಗಲೇ ಇಲ್ಲ.ಹಾಗೇನಾದರೂ ಮಾಡಿದ್ದರೆ ಪ್ರಮಾದವಾಗುತ್ತಿತ್ತು.ಜೋಗಿ ತನಗೆ ಇಷ್ಟವಾಗುವಂತೆ ತಾನು ಬೆಳೆದ.ಒಮ್ಮೆ ರೈಲಲ್ಲಿ ಅಪ್ಪ ಮಗ ಹೋಗುತ್ತಿದ್ದರು.ಜೋಗಿ ಮಲಗಿ ನಿದ್ರಿಸಿದ್ದ.ದಾವಣಗೆರೆ ದಾಟಿ ರೈಲು ಹೋಯಿತು.ಜೋಗಿಗೆ ಎಚ್ಚರವಾದಾಗ ಐವತ್ತು ಮೈಲಿ ಮುಂದೆ ಹೋಗಿದ್ದಾಗಿತ್ತು.ಏಕೆ ಎಂದು ತಂದೆಯನ್ನು ಕೇಳಿದರೆ "ನೀನು ನಿದ್ದೆ ಮಾಡ್ತಿದ್ದೆ.ಏಕೆ ಎಬ್ಬಿಸೋದು ಅಂತ ಸುಮ್ಮನಾದೆ.ಏನೀಗ ವಾಪಾಸು ಹೋದರಾಯಿತು ಅಷ್ಟೇ" ಎಂದರು ಆ ಪುಣ್ಯಾತ್ಮ್ಮ!
5.ಮನೆಗೆ ಬಂದು ಟೇಬಲ್ಲು ಡ್ರಾವರ್ ಎಳೆದರೆ ಒಂದು ಪತ್ರ.
ಅದು ಜೋಗಿ ನನಗೆ ಬರೆದಿಟ್ಟು ಹೋದದ್ದು.
ಅದರಲ್ಲಿ ಬರೆದ ಒಂದೇ ವಾಕ್ಯ."ಹೊಸ ಬದುಕಿನ ಹಾದಿ ಹಿಡಿಯುವುದು ನನಗೆ ಅಗತ್ಯ.ನಿನ್ನ ಬಿಟ್ಟುಹೋಗುವ ಸಂಕಟ ನನ್ನ ಕೊರೆಯುತ್ತಿದೆ.ಏನು ಮಾಡೋಣ ರಕ್ತದೊಂದಿಗೆ ಲಾಳ ಬಡಿಯುತ್ತೇನೆ.ಗೆದ್ದರೆ ನಿನಗೆ ಸಿಗುತ್ತೇನೆ,ಸೋತರೆ ಜಗತ್ತಿಗೇ ವಿದಾಯ!"
ಜೋಗಿ ಗೆದ್ದ.
ನಿಮ್ಮ ಮಿತ್ರರು ಪತ್ರವನ್ನಾ ಕೂಡಾ ಕಥೆಯಂತೆ ಬರೆದಿದ್ದಾರೆ ಜೋಗಿ ಸರ್ :-)):-)) ಎಷ್ಟ ಬೇಕಾದ್ರೂ ಭೈರಪ್ಪ:-)):-)):-))
ಜೊಗಿ ಯಾರು,ಏನು ಎಂದು ಅರಿವಾಗಬೇಕಾದರೆ ಮೊದಲೇ ಜೊಗಿ ಬರಹವನ್ನು ಪ್ರೀತಿಸತೊಡಗಿದ್ದೆ...ನಮ್ಮೂರವರು ಎಂದು ತಿಳಿದಾಗ ಸಂತೋಷವಾಗಿತ್ತು..."ಜೊಗಿ ನಮ್ಮ ಗೊಪಲನ friend" ಎಂದು ಒಮ್ಮೆ ಅಪ್ಪ ಹೇಳಿದಾಗ
ಅಚ್ಚರಿಯಿಂದ ನೋಡಿದ್ದೆ..ಅವರ ಬಗ್ಗೆ ಕೆಲವು ಕಥೆಗಳನ್ನೂ ಕೇಳಿದ್ದೆ... ಈಗ ಓದಲು ಖುಷಿ ಅನ್ನಿಸಿತು..Thanks ಗೊಪಾಲ ಮಾವ.. :-)
ಗೆಳೆಯರೇ ನನ್ನ ಮೊದಲ blog ಸೈಟ್ ದಯಮಾಡಿ subscribe ಮಾಡಿ
ರಾಜನೀತಿ :-ಸಮಕಾಲೀನ ರಾಜಕೀ ಯ ಆಗುಹೋಗುಗಳ ಒಳನೋಟ ಮತ್ತು ರಾಜಕೀಯ ಊಹೆ ಮತ್ತು ವಿಶ್ಲೇಷಣೆ. ಎಲ್ಲ ಪಕ್ಷಗಳು ಮತ್ತು ರಾಜಕರಣಿಗಳಿಂದ ಸಮಾನ ಅಂತರ ಮತ್ತು ನೇರ ಬರಹಗಳು. ದಯವಿಟ್ಟು ಬೆಂಬಲಿಸಿ kannadarajaneeti.blogspot.com
Post a Comment