Friday, March 26, 2010

ಪೇಜಾವರ

ಸದಾಶಿವ ತುಂಬ ಒಳ್ಳೆಯ ಬರಹಗಾರ. ಇವತ್ತಿಗೂ ಅವನನ್ನು ನಾನು ನೆನಪಿಸ್ಕೋತೇನೆ’ ಅಂತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಹೇಳಿದ್ದು ಮಾರನೆಯ ದಿನ ಪತ್ರಿಕೆಗಳಲ್ಲೂ ವರದಿಯಾಯಿತು. ಅವರು ಹೇಳಿದ ಸದಾಶಿವ ಯಾರು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವ ಆಸಕ್ತಿ ಇಂಗ್ಲಿಷ್ ಪತ್ರಿಕೆಯ ವರದಿಗಾರರಿಗೆ ಇರಲಿಲ್ಲ. ಕನ್ನಡ ಪತ್ರಿಕೆಗಳ ವರದಿಗಾರರು ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅಷ್ಟಕ್ಕೂ ಅವರಲ್ಲಿ ಅನೇಕರಿಗೆ ಇಬ್ಬರೂ ಸದಾಶಿವರಿರುವ ವಿಚಾರವೇ ಗೊತ್ತಿರಲಿಲ್ಲ.
ಆ ಸುದ್ದಿ ಪತ್ರಿಕೆಯಲ್ಲಿ ಬಂದ ದಿನವೇ, ಪೇಪರ್ ಓದುತ್ತಾ ರಸ್ತೆ ದಾಟುತ್ತಿದ್ದ ಸಾಹಿತ್ಯಾಸಕ್ತನೊಬ್ಬನ್ನು ಅಪರಿಚಿತ ವಾಹನವೊಂದು ತಡವಿಕೊಂಡು ಹೋಯಿತು. ಕೈಯಲ್ಲಿ ಪೇಪರ್ ಹಿಡಿದುಕೊಂಡೇ ಅವನು ಪ್ರಾಣಬಿಟ್ಟಿದ್ದ. ಪತ್ರಿಕೆ ಓದುತ್ತಾ ಕನ್ನಡ ಸರಸ್ವತಿಯ ಸೇವೆ ಮಾಡುತ್ತಾ ಪ್ರಾಣಬಿಟ್ಟದ್ದರಿಂದ ಅವನಿಗೆ ತಕ್ಷಣವೇ ಸ್ವರ್ಗಕ್ಕೆ ಪ್ರವೇಶ ಸಿಕ್ಕಿತು. ಪತ್ರಿಕೆ ಕಂಕುಳಲ್ಲಿಟ್ಟುಕೊಂಡೇ ಆ ಸಾಹಿತ್ಯಾಸಕ್ತ ಸ್ವರ್ಗಕ್ಕೆ ಕಾಲಿಟ್ಟ. ಅಲ್ಲಿನ ಸೊಬಗನ್ನು ನೋಡಿ ಬೆರಗಾಗುತ್ತಾ, ಪತ್ರಿಕೆಯನ್ನು ಅಲ್ಲಿದ್ದ ಅಮೃತಶಿಲೆಯ ಹಾಸಿನ ಮೇಲಿಟ್ಟು ಸ್ವರ್ಗದಲ್ಲೊಂದು ಸುತ್ತು ಹಾಕಲು ಹೊರಟ.
ಆ ಕಲ್ಲುಹಾಸಿನ ಮೇಲೆ ವಾಕಿಂಗ್ ಮುಗಿಸಿ ಬಂದ ಜಿಎಸ್ ಮತ್ತು ಕೆ ಎಸ್ ಆಸೀನರಾದರು. ಎಂದಿನಂತೆ ನವ್ಯ ಸಾಹಿತ್ಯ ಕ್ರಮೇಣ ನಶಿಸುತ್ತಿದೆ, ಬಂಡಾಯಕ್ಕೆ ಮೊದಲಿನ ದಮ್ಮಿಲ್ಲ, ದಲಿತ ಸಾಹಿತ್ಯದಲ್ಲಿ ಹೊಸ ಭರವಸೆಯ ಲೇಖಕರು ಹುಟ್ಟುತ್ತಿಲ್ಲ. ನಾನೀಗ ಅಲ್ಲಿದ್ದರೆ ಒಂದು ಅದ್ಭುತವಾದ ಕಾದಂಬರಿ ಬರೆಯುತ್ತಿದ್ದೆ ಎಂದು ಕೆಎಸ್ ಉತ್ಸಾಹದಲ್ಲಿ ಮಾತಾಡುತ್ತಿದ್ದರು. ಜಿಎಸ್ ಕೇಳಿಸಿಕೊಳ್ಳುತ್ತಿದ್ದರು.
ಅಷ್ಟು ಹೊತ್ತಿಗೆ ಜಿಎಸ್ ಕೈಗೆ ಸಾಹಿತ್ಯಾಸಕ್ತ ಬಿಟ್ಟು ಹೋಗಿದ್ದ ಪತ್ರಿಕೆ ಸಿಕ್ಕಿತು. ಅದನ್ನೆತ್ತಿಕೊಂಡು ಓದುತ್ತಾ, ಕೆಎಸ್ ಮಾತಿನ ದಾಳಿಯಿಂದ ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಂತೆ ಅವರಿಗೆ ಅನಂತಮೂರ್ತಿಯವರ ಹೇಳಿಕೆ ಕಾಣಿಸಿತು. ಅದನ್ನು ಓದುತ್ತಲೇ ಖುಷಿಯಾಗಿ ಜಿಎಸ್ ನೋಡೋ ಇಲ್ಲಿ, ಅನಂತಮೂರ್ತಿ ನನ್ನ ಬಗ್ಗೆ ಹೇಳಿದ್ದಾನೆ’ ಅಂದರು ಜಿಎಸ್.
ಕೆಎಸ್ ಪತ್ರಿಕೆಯನ್ನು ಕಸಿದುಕೊಂಡು ಓದತೊಡಗಿದರು. ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಮಾತಾಡಿದ್ದು ವರದಿಯಾಗಿತ್ತು. ಈ ಬರಹಗಳು ತುಂಬಾ ಚೆನ್ನಾಗಿವೆ. ಇವನ್ನು ಓದುತ್ತಿದ್ದರೆ ನನಗೆ ಸದಾಶಿವ ನೆನಪಾಗುತ್ತಾನೆ. ಸದಾಶಿವ ತುಂಬ ಒಳ್ಳೆಯ ಬರಹಗಾರ. ಇವತ್ತಿಗೂ ಅವನು ನನ್ನ ಮೆಚ್ಚಿನ ಲೇಖಕ ಎಂದು ಅನಂತಮೂರ್ತಿ ಹೇಳಿದರು’ ಎಂದು ವರದಿಗಾರ ಬರೆದಿದ್ದ. ಕೆಎಸ್ ಅದನ್ನು ಓದಿ ಗಹಗಹಿಸಿ ನಕ್ಕರು. ಏನಾಯಿತು ಎಂಬಂತೆ ಜಿಎಸ್ ತಲೆಯೆತ್ತಿ ನೋಡಿದರು.
ಮೂರ್ತಿ ಹೇಳಿದ್ದು ನನ್ನ ಬಗ್ಗೆ’ ಅಂದರು ಕೆಎಸ್.
ಇಲ್ಲ, ನನ್ನ ಬಗ್ಗೆ ಹೇಳಿದ್ದು. ನಿನ್ನನ್ನು ಅವರು ಮರೆತು ಯಾವ ಕಾಲವಾಯಿತೋ ಏನೋ?’ ಎಂದು ಜಿಎಸ್ ಗಂಭೀರವಾಗಿ ಹೇಳಿದರು.
ನಾನೂ ಅನಂತೂ ಎಂಥಾ ಸ್ನೇಹಿತರು ಗೊತ್ತೇನೋ ನಿಂಗೆ. ನಾವು ಜೊತೆಗೇ ಕತೆ ಬರೀತಿದ್ದವರು. ನನ್ನ ಬಹಳಷ್ಟು ಕತೆಗಳನ್ನು ಅವನು ಪ್ರಿಂಟಾಗುವ ಮೊದಲೇ ಓದಿದ್ದ. ನಿನ್ನ ನೆನಪಿರೋ ಚಾನ್ಸೇ ಇಲ್ಲ’ ಕೆಎಸ್ ಹಳೆಯ ಸ್ನೇಹವನ್ನು ನೆನಪಿಸಿಕೊಂಡರು.
ಸರಿ ಅಂತ ಸುಮ್ಮನಾಗಲು ಹೊರಟ ಜಿಎಸ್, ಇದ್ದಕ್ಕಿದ್ದ ಹಾಗೆ ವಾದಿಸುವ ಹುರುಪು ಬಂದವರ ಹಾಗೆ ಮಾತು ಶುರುಮಾಡಿದರು. ಸಾಧ್ಯವೇ ಇಲ್ಲ, ನನ್ನ ಬಗ್ಗೇನೇ ಬರೆದದ್ದು. ನಾವಿಬ್ಬರೂ ಮೈಸೂರಲ್ಲಿ ಕಾಫಿ ಹೌಸಲ್ಲಿ ಕೂತು ಕತೆ ಬಗ್ಗೆ ಮಾತಾಡ್ತಿದ್ದೆವು. ನನ್ನ ಎಷ್ಟೋ ಕತೆಗಳನ್ನು ಅನಂತು ತುಂಬಾ ಹೊಗಳ್ತಿದ್ದ’.
ಹೀಗೆ ಮಾತಿಗೆ ಮಾತು ಬೆಳೆಯುತ್ತಾ ಹೋಯಿತು. ಜಿಎಸ್ ತಾನು ಸಿಕ್ಕು’ ಕತೆ ಬರೆದ ಸಂದರ್ಭವನ್ನೂ ಅದನ್ನು ಸಿನಿಮಾ ಮಾಡಲು ಹೋರಾಡಿದ್ದನ್ನೂ ಹೇಳಿಕೊಂಡರು. ಅಪಘಾತ’ ಕತೆ ಬರೆದದ್ದು ಒಂದು ಸತ್ಯಘಟನೆ ಆಧರಿಸಿಯೇ ಅಂದರು. ಚಪ್ಪಲಿಗಳು ಕತೆ ಬರೆಯಲು ವೈಎನ್‌ಕೆ ಕಥಾವಸ್ತು ಕೊಟ್ಟದ್ದು, ಅದನ್ನೇ ಇಟ್ಟುಕೊಂಡು ಲಂಕೇಶ್ ನಾನಲ್ಲ’ ಅನ್ನೋ ಕತೆ ಬರೆದಿದ್ದು. ತನ್ನ ಕತೆಯೇ ಅತ್ಯುತ್ತಮ ಎಂದು ವೈಎನ್‌ಕೆ, ಅನಂತಮೂರ್ತಿ ಎಲ್ಲರೂ ಹೇಳಿದ್ದು- ಹೀಗೆ ಜಿಎಸ್ ಮತ್ತಷ್ಟು ಘಟನೆಗಳನ್ನು ನೆನಪು ಮಾಡಿಕೊಟ್ಟರು.
ಕೆಎಸ್ ಸುಮ್ಮನಿರಲಿಲ್ಲ. ನನ್ನ ಸಮಗ್ರ ಕತೆಗಳಿಗೆ ಅನಂತು ಒಂದು ಟಿಪ್ಪಣಿ ಬರೆದಿದ್ದಾನೆ, ಓದಿದ್ದೀಯಾ? ನಾವಿಬ್ರೂ ಸೇರಿ ಏನೇನು ಆಟ ಆಡಿದ್ದೀವಿ ಗೊತ್ತೇನೋ ನಿಂಗೆ. ಇಬ್ಬರೂ ಆ ಕಾಲಕ್ಕೆ ಬಡವರಾಗಿದ್ವಿ. ಆದರೆ ಬಡತನ ತೋರಿಸಿಕೊಳ್ತಿರಲಿಲ್ಲ. ಕ್ಷ್ವಾರ ಮಾಡಿಸೋದಕ್ಕೆ ಇಬ್ಬರೂ ಜೊತೆಗೇ ಹೋಗ್ತಿದ್ವಿ. ಒಂದ್ಸಾರಿ ನಾನು ತಮಾಷೆ ಮಾಡೋದಕ್ಕೆ ಅಂತ ನನ್ನ ತಮ್ಮ ಇವನು, ಸಣ್ಣದಾಗಿ ಕಟ್ಟಿಂಗ್ ಮಾಡು’ ಅಂದಿದ್ದೆ. ಕಟ್ಟಿಂಗ್ ಮುಗಿಸಿ ಹೊರಡ್ತಾ ದುಡ್ಡು ನಮ್ಮಣ್ಣನ ಹತ್ರ ತಗೊಳ್ಳಿ’ ಅಂತ ಅನಂತು ಹೇಳಿ ಹೊರಟು ಹೋಗಿದ್ದ. ಅಂಥಾ ತರಲೆಗಳು ನಾವು. ಯಾರಾದ್ರೂ ಬಕ್ಕತಲೆಯವರು ಕಂಡ್ರೆ ಇದ್ದಕ್ಕಿದ್ದ ಹಾಗೆ ಅನಂತು ನಿನ್ನ ಟೋಫನ್‌ಗೆ ಎಷ್ಟು ಕೊಟ್ಟೆ’ ಅಂತ ಕೇಳ್ತಿದ್ದ. ನಂದು ಟೋಫನ್ ಅಂತ ಇಬ್ಬರೂ ಸೇರಿ ಅವನನ್ನು ನಂಬಿಸಿಬಿಡ್ತಿದ್ವಿ.’
ಆದ್ರೆ ನೀನು ಪತ್ರಕರ್ತರು ಬರೆಯೋ ವರದಿ ಥರದ ಕತೆ ಬರೀತಿ ಅಂತ ಅನಂತು ನಿನ್ನ ತಿರಸ್ಕಾರದಿಂದ ಕಾಣ್ತಿದ್ದ’ ಅಂದರು ಜಿಎಸ್.
ಅದು ಆರಂಭದಲ್ಲಿ. ಆದ್ರೆ ನಾನು ನಲ್ಲಿಯಲ್ಲಿ ನೀರು ಬಂದದ್ದು’ ಬರೆದ ನಂತರ ತುಂಬಾ ದೊಡ್ಡ ಕತೆಗಾರ ಅಂತ ಮೆಚ್ಕೊಂಡಿದ್ದ. ನಿನ್ನ ಕತೆಗಳನ್ನು ಅವನು ಏಕಾಂತದಲ್ಲಿ ಮೆಚ್ಕೋತಿದ್ದ, ಅದೂ ಅನುಕಂಪದಿಂದ’
ಜಿಎಸ್‌ಗೆ ಸಿಟ್ಟು ಬಂತು. ನಿನ್ನ ರಾಮನ ಸವಾರಿ ಸಂತೆಗೆ ಹೋದದ್ದು’ ಸಿನಿಮಾ ಆಗಬೇಕು ಅಂತ ಆಶೆಯಿತ್ತು ನಿಂಗೆ. ಆಗಲಿಲ್ಲ. ನನ್ನ ಸಿಕ್ಕು’ ಸಿನಿಮಾ ಆಯ್ತು. ಅದಕ್ಕೇ ನಿಂಗೆ ಹೊಟ್ಟೆಕಿಚ್ಚು’ ಎಂದು ಕೋಪದಿಂದ ಹೇಳಿದರು. ಸಿನಿಮಾ ಆದ್ರೇನಂತೆ. ರಿಲೀಸ್ ಆಗಿಲ್ಲವಲ್ಲ’ ಎಂದು ಕೆಎಸ್ ಕೊಂಚ ಜೋರಾಗಿಯೇ ಗೊಣಗಿಕೊಂಡರು. ಮತ್ತೆ ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನೇ ಕೂತರು.
ಹೋಗ್ಲಿ ಬಿಡೋ, ಯಾರ ಬಗ್ಗೆ ಹೇಳಿದ್ರೆ ಏನಂತೆ? ಅದಕ್ಕೋಸ್ಕರ ನಾವು ಜಗಳ ಆಡೋದು ಬೇಡ ಬಿಡು. ನಿನ್ನ ಬಗ್ಗೇನೇ ಹೇಳಿದ್ದು ಅಂತಿಟ್ಕೋ. ಐ ವಿತ್‌ಡ್ರಾ’
ಅಷ್ಟು ಹೇಳಿ ಜಿ ಎಸ್ ಸುಮ್ಮನಾದರು. ಕೆ ಎಸ್‌ಗೆ ಸಮಾಧಾನವಾದಂತೆ ಕಾಣಲಿಲ್ಲ. ಎದ್ದು ಹೋಗಿ, ಸ್ವರ್ಗದ ಅಂಚಲ್ಲಿ ನಿಂತು ಕೆಳಗೆ ನೋಡಿದರು. ತಮಗೆ ಗೊತ್ತಿದ್ದವರು ಯಾರಾದರೂ ಕಾಣಿಸುತ್ತಾರೇನೋ ಎಂದು ಹುಡುಕಾಡಿದರು. ಯಾರೂ ಕಾಣಿಸಲಿಲ್ಲ. ಯಾವುದೋ ಬೀದಿಯಲ್ಲಿ ಒಂದಷ್ಟು ಮಂದಿ ಹೆಂಗಸರು ಬಿಂದಿಗೆ ಹಿಡಕೊಂಡು ನಲ್ಲಿಯಲ್ಲಿ ನೀರು ಬರಲಿಲ್ಲ ಎಂದು ಗೊಣಗುತ್ತಿದ್ದರು. ತಾನು ಕತೆ ಬರೆದು ಇಷ್ಟು ವರ್ಷಗಳಾದರೂ ಸಮಸ್ಯೆ ನೀಗಿಲ್ಲವಲ್ಲ ಎಂದುಕೊಂಡು ಮತ್ತೊಂದು ದಿಕ್ಕಿಗೆ ತಿರುಗಿ ಕಣ್ಣು ಹಾಯಿಸಿದರೆ ರಾಮನ ಸವಾರಿ ಸಂತೆಗೆ ಹೊರಟಿತ್ತು. ಮತ್ತದೇ ಕತೆ ಎಂದು ಗೊಣಗಿಕೊಂಡು ಬಂದು ಪೇಪರ್ ಕೈಗೆತ್ತಿಕೊಂಡು ಜಿಎಸ್ ಮುಖ ನೋಡಿದರು. ಅದು ಸಿಕ್ಕುಗಟ್ಟಿತ್ತು. ಇದ್ದಕ್ಕಿದ್ದಂತೆ ಕೆ. ಎಸ್. ದೊಡ್ಡದನಿಯಲ್ಲಿ ಇಲ್ನೋಡೋ’ ಅಂತ ಕೂಗಿಕೊಂಡರು. ಮತ್ತದೇ ರಗಳೆ ಎತ್ತುತ್ತಾನೆ ಅಂದುಕೊಂಡು ಜಿಎಸ್ ಪ್ರತಿಕ್ರಿಯಿಸಲಿಲ್ಲ. ನೋಡೋ ಇಲ್ಲಿ, ನಾಡಿಗ, ಚಿಮೂ, ಎನ್ನೆಸ್ಸೆಲ್ ನಾಮರ್ದಗಳು ಅಂತ ಪೇಪರಲ್ಲಿ ಬರೆದಿದ್ದಾರೆ. ಚಂಪಾ ಮಾತಾಡ್ತಾ ಹಾಗಂದಿದ್ರಂತೆ’ ಅಂತ ಕೆಎಸ್ ಹೇಳಿದರೂ ಜಿಎಸ್‌ಗೆ ಉತ್ಸಾಹ ಬರಲಿಲ್ಲ. ಏನಾದ್ರೂ ಬರ್ಕೊಳ್ಳಲಿ ಬಿಡೋ’ ಅಂತ ಜಿ ಎಸ್ ಮತ್ತೆ ಹಳೇ ಭಂಗಿಗೆ ಮರಳಿದರು.
ಹಾಗಂದ್ರೆ ಹೇಗೋ ಆಗತ್ತೆ. ಇಲ್ನೋಡೀಗ, ಎನ್ನೆಸ್ಸೆಲ್ ಅಂತ ಬರೆದಿದ್ದಾರೆ, ನಾಡಿಗ ಅಂತ ಬರೆದಿದ್ದಾರೆ. ಅವರು ಯಾರೂ ಅಂತ ಎಲ್ಲರಿಗೂ ಹೇಗೋ ಗೊತ್ತಾಗುತ್ತೆ. ನಮ್ಮದು ಇದೇ ಕೇಸು. ಸುಮ್ಮನೆ ಸದಾಶಿವ ಅಂತ ಹೇಳಿಬಿಟ್ರೆ ನೀನೋ ನಾನೋ ಅಂತ ಎಲ್ಲರಿಗೂ ಗೊತ್ತಾಗೋದು ಹೇಗೆ? ಇದನ್ನು ಸುಮ್ನೆ ಬಿಡಬಾರದು’ ಎಂದರು ಕೆಎಸ್. ಅವರು ಅದನ್ನು ಇತ್ಯರ್ಥ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಬಂದಂತಿತ್ತು. ಜಿಎಸ್ ಅದನ್ನು ಮರೆಯಲು ನಿರ್ಧರಿಸಿದ್ದರು.
ಅದಾಗಿ ಒಂದು ವಾರಕ್ಕೆ ದಂತಗೋಪುರದಲ್ಲಿ ಕೂತು ಜಿಎಸ್ ದಣಿವಾರಿಸಿಕೊಳ್ಳುತ್ತಿದ್ದರು. ಅಷ್ಟು ಹೊತ್ತಿಗೆ ಕೆಎಸ್ ಓಡೋಡಿ ಬರುತ್ತಿರುವುದು ಕಾಣಿಸಿತು. ಬಂದವರೇ ಏದುಸಿರು ಬಿಡುತ್ತಾ, ಬೇಗ ಬಾ, ಒಂದು ತಮಾಷೆ ತೋರಿಸ್ತೀನಿ’ ಅಂದರು ಕೆಎಸ್. ಏನು ಅಂತ ಕೇಳುವುದರೊಳಗೆ ಜಿಎಸ್ ಕೈ ಹಿಡಕೊಂಡು ಹೊರಟೇ ಬಿಟ್ಟರು.
ಇಬ್ಬರೂ ಸ್ವರ್ಗದ ಅಂಚಿಗೆ ಬಂದು ನಿಂತರು. ಯಾರಿಗಾದ್ರೂ ನಮಗೆ ಬಂದ ಅನುಮಾನ ಬರುತ್ತೇನೋ ಅಂತ ಕಾದೆ. ಎಲ್ಲರೂ ಹಾಳುಬಿದ್ದುಹೋಗಿದ್ದಾರೆ ಕಣಯ್ಯ. ಒಬ್ಬರಿಗೂ ಸಾಹಿತ್ಯದಲ್ಲಿ ನಿಜವಾದ ಆಸಕ್ತಿ ಇಲ್ಲ. ಅನಂತು ಹಾಗೆ ಹೇಳಿದ್ದು ಯಾರ ಬಗ್ಗೆ ಅಂತ ತಿಳ್ಕೊಳ್ಳೋ ಆಸಕ್ತಿಯೂ ಇಲ್ಲ. ಅದಕ್ಕೇ ಒಂದು ಉಪಾಯ ಮಾಡಿದ್ದೀನಿ. ಅಲ್ನೋಡು, ಅಲ್ಲಿ, ನೀಲಿ ಶರ್ಟು ಹಾಕ್ಕೊಂಡಿದ್ದಾನಲ್ಲ, ಅವನ ತಲೆಯೊಳಗೆ ಈ ಪ್ರಶ್ನೆ ಬಿಟ್ಟಿದ್ದೇನೆ. ಅವನು ಅನಂತು ಮನೆಗೇ ಹೋಗ್ತಿದ್ದಾನೆ. ಈಗ ಗೊತ್ತಾಗತ್ತೆ ತಡಿ, ನೀನೋ ನಾನೋ ಅಂತ’ ಎಂದು ಹುರುಪಿನಿಂದ ಜಿಎಸ್ ಮುಖ ನೋಡಿದರು. ಜಿಎಸ್ ನಿರುತ್ಸಾಹದಿಂದ ಸುಮ್ಮನೆ ನಿಂತಿದ್ದರು.
ನೀಲಿ ಶರಟಿನ ವ್ಯಕ್ತಿ ಅನಂತಮೂರ್ತಿಯವರ ಮನೆಗೆ ಬಂದು ತನ್ನನ್ನು ಸಾಹಿತ್ಯದ ಆಸಕ್ತಿ ಇರುವ ಪತ್ರಕರ್ತ ಎಂದು ಪರಿಚಯಿಸಿಕೊಂಡಿತು. ತಪ್ಪುತಪ್ಪಾಗಿ ವರದಿ ಮಾಡ್ತೀರಯ್ಯ ನೀವೆಲ್ಲ’ ಎಂದು ಬೈಸಿಕೊಂಡಿತು. ಕೊನೆಗೆ ಧೈರ್ಯಮಾಡಿ ಪ್ರಶ್ನೆ ಕೇಳಿಯೇ ಬಿಟ್ಟಿತು.
ಸರ್, ಆವತ್ತು ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನೀವು ಸದಾಶಿವ ತುಂಬ ಒಳ್ಳೆಯ ಬರಹಗಾರ ಅಂದಿದ್ರಿ. ನೀವು ಹೇಳಿದ್ದು ಯಾವ ಸದಾಶಿವ ಬಗ್ಗೆ ಅಂತ ಗೊತ್ತಾಗ್ಲಿಲ್ಲ. ಯಾರ ಬಗ್ಗೆ ಅಂತ ಹೇಳ್ತೀರಾ?’ ಎಂದು ಕೇಳಿ ಉತ್ತರಕ್ಕಾಗಿ ಕಾದು ಕೂತಿತು.
ಜಿಎಸ್ ಸದಾಶಿವ ಮತ್ತು ಕೆ ಸದಾಶಿವ ಕಿವಿ ನಿಮಿರಿಸಿಕೊಂಡು ಉತ್ತರಕ್ಕಾಗಿ ಕಾದರು.
ಪೇಜಾವರ ಸದಾಶಿವ. ತುಂಬ ಒಳ್ಳೇ ಪದ್ಯ ಬರೀತಿದ್ದ, ನಾಟ್ಯೋತ್ಸವ ಅಂತ ಒಂದು ....’
ನೀಲಿ ಶರಟು ಮಾತ್ರ ಹುಸಿ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿತ್ತು.

5 comments:

Shweta said...

ಈ ಪೇಜಾವರ ಯಾರು ಅಂದಹಾಗೆ? ಯಾಕೋ ಸಿಕ್ಕಾಪಟ್ಟೆ ಕನ್ಫ್ಯೂಸ್ ಮಾಡಿದ್ದೀರ ಸರ್.Infact, I have not updated my knowledge on current events though..
ಜೋಗಿಮನೆ ಹೆಸರಿನ ಬ್ಲೋಗುಗಳೆರಡು ಇದ್ದಾವೆ .ಬೇರೆ ಬೇರೆ ಯಾಕೆ? ಒಂದರಲ್ಲೇ ಇದ್ದಿದ್ದರೆ ಚೆನ್ನಾಗಿತ್ತು..

Girish Rao H said...

ಪೇಜಾವರ ಸದಾಶಿವರಾಯರು ಎಂಬ ಕವಿಯಿದ್ದರು. ಅವರು ನಾಟ್ಯೋತ್ಸವ ಎಂಬ ಅದ್ಬುತವಾದ ಪದ್ಯ ಬರೆದಿದ್ದಾರೆ. ನವ್ಯದ ಬರಹಗಾರರಲ್ಲಿ ಕೆ ಸದಾಶಿವ, ಜಿ ಎಸ್ ಸದಾಶಿವ ಮತ್ತು ಪೇಜಾವರ ಸದಾಶಿವ ಮೂವರೂ ಗಮನಾರ್ಹರು.

ಜೋಗಿಮನೆ ಹೆಸರಲ್ಲಿ ಎರಡು ಬ್ಲಾಗ್ ಇದೆ. ಹಳೇ ಬ್ಲಾಗಿನ ಪಾಸ್ ವರ್ಡ್ ಮರೆತು ಹೋಗಿ ಹೊಸದು ಶುರು ಮಾಡಿದೆ.

ಮಲ್ಲಿಕಾಜು೯ನ ತಿಪ್ಪಾರ said...

Beautifull story sir.. Koneyavaregu kutuhal uliskondu hogutte.. adar jotege sahity bagegin nirasaktiyannu koda bimbisde.

Anand said...

vastavada nelegattina mele tumba olleya kalpanika katheyannu neevu bareyuttiri great
i m impressed

ಗುರುರಾಜ ಕುಲಕರ್ಣಿ(ನಾಡಗೌಡ) said...

ತುಂಬಾ ವರ್ಷಗಳ ಹಿಂದೆ ಕಸ್ತೂರಿಯಲ್ಲಿ ಓದಿದ್ದ (ಆದರೂ ಮರೆಯಲಾಗದ) "ರಾಮನ ಸವಾರಿ..." ಕಥೆ ಬಗ್ಗೆ ಪ್ರಸ್ತಾಪ ಓದಿ "ದಿಲ್ ಖುಷ್" ಅಯಿತು. ನೀಲಿ ಶರ್ಟಿನವ ಹುಳು ಬಿಡಿಸಿಕೊಳ್ಳದಿದ್ದರೆ, ನಮ್ಮಂತಹವರಿಗೆ ಕಷ್ಟ ಆಗಿರೋದು.ಅಂತೂ ಮೂರ್ತಿಯವರ ಸದಾಶಿವ ನಮಗೆಲ್ಲರಿಗೂ ತಿಳಿಸಿ ಉಪಕಾರ ಮಾಡಿದ ನೀಲಿ ಶರ್ಟಿನವರಿಗೆ ನನ್ನ ಧನ್ಯವಾದಗಳು.

..ಮಂಗಿ ಚಂಪಾರವರ ಮಾತುಗಳು ವಿಕೄತಿ ಸಂವತ್ಸರದಲ್ಲಿ ಇನ್ನೂ ಜಾಸ್ತಿ ಆಗಲಿವೆ ಎಂದೂ ಟಿ.ವಿ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆಂದು ಸುದ್ದಿ.

ನಿಮ್ಮ ’ಸ್ವರ್ಗ’ದ ತಂತ್ರ ತುಂಬಾ ಚೆನ್ನಾಗಿದೆ. ಈ ಬರಹದಿಂದ ಇಂದಿನ ಓದುಗರಿಗೆ, ಪೇಜಾವರ ಸದಾಶಿವ, ಜಿ.ಎಸ್ ಸದಾಶಿವ ಮತ್ತು ಕೆ.ಸದಾಶಿವರವರ ಪರಿಚಯವಾದ್ದದ್ದು, ಓದುಗರ ಪುಣ್ಯ.
-ಗುರುರಾಜ ಕುಲಕರ್ಣಿ