Thursday, May 27, 2010

ಕತೆ-ಚಿತ್ರಕತೆ-ಸಂಭಾಷಣೆ (ಚಿತ್ರೀಕರಿಸಲಾಗದ ಒಂದು ವಿಫಲ ಸನ್ನಿವೇಶವು)

ಕತೆ:
ಬೆಂಗಳೂರು ಅಥವಾ ಬೆಂಗಳೂರಿನಂಥ ಒಂದೂರು. ಮುಂಜಾನೆ ಅಥವಾ ಮುಂಜಾನೆಯಂಥ ದಿನದ ಒಂದು ಅವಧಿ. ಇಪ್ಪತ್ತಮೂರು ವರ್ಷದ ಅಥವಾ ಇಪ್ಪತ್ತಮೂರು ವರ್ಷದವನಂತೆ ಕಾಣುವ ಹುಡುಗ. ಅವನ ಹೆಸರು ಕಿಟ್ಟಿ ಅಥವಾ ಬೇರೆ ಯಾವ ಹೆಸರಾದರೂ ಆಗಬಹುದು. ಅವನು ವೇಗವಾಗಿ ನಡೆಯುತ್ತಿದ್ದಾನೆ ಅಥವಾ ಓಡುತ್ತಿದ್ದರೂ ಓಡುತ್ತಿರಬಹುದು.
ತನ್ನನ್ನು ಯಾರು ಅಟ್ಟಿಸಿಕೊಂಡು ಬರುತ್ತಿದ್ದಾರೆ ಅನ್ನುವುದು ಅವನಿಗೂ ಗೊತ್ತಿಲ್ಲ. ಅವನು ಒಂದೇ ಸಮ ಓಡುತ್ತಲೇ ಇದ್ದಾನೆ. ಓಡುತ್ತಾ ಓಡುತ್ತಾ ಹೋಗಿ ಈ ಜಗತ್ತಿನ ಅಂತ್ಯವನ್ನು ತಲುಪುತ್ತಾನೆಯ ಅಲ್ಲಿಂದಾಚೆ ಓಡುವುದಕ್ಕೆ ನೆಲವಿಲ್ಲ, ಆಕಾಶವಿಲ್ಲ, ನೀರಿಲ್ಲ. ಇದ್ದಕ್ಕಿದ್ದಂತೆ ಅಲ್ಲಿಗೆ ಜಗತ್ತೇ ಮುಗಿದುಹೋದ ಹಾಗೆ.
ಜಗತ್ತು ಹಾಗೆ ಮುಗಿದು ಹೋಗುವುದಿಲ್ಲ ಎಂದು ಅವನಿಗೆ ಗೊತ್ತು. ಜಗತ್ತು ದುಂಡಗಿದೆ. ಇಡೀ ವಿಶ್ವ ಸುತ್ತಿದರೂ ಮತ್ತೆ ಹೊರಟಲ್ಲಿಗೇ ಬರುತ್ತಿರಬೇಕು ಅನ್ನುವುದು ಬಲ್ಲ ವಿಜ್ಞಾನದ ಹುಡುಗ ಅವನು. ಅವನು ಸುತ್ತುತ್ತಿರುವುದು ಈ ಜಗತ್ತನ್ನಲ್ಲ, ಒಳಜಗತ್ತನ್ನು. ಅದಕ್ಕೆ ಕೊನೆಯುಂಟು. ಜಗದ ಅಂಚಿಗೆ ಬಂದು ಇನ್ನೇನು ಕೆಳಗೆ ಬಿದ್ದೇ ಬೀಳುತ್ತೇನೆ ಎಂಬಂತೆ ಅವಚಿಕೊಂಡು ನಿಂತಾಗ ನೆನಪಾಗುವುದು ಅಮ್ಮ. ಇಷ್ಟಗಲ ಕುಂಕುಮದ, ಸುಕ್ಕುಮೋರೆಯ, ಚೂಪುಗಣ್ಣಿನ, ಅಪ್ಪನೊಡನೆ ಸದಾ ಜಗಳಾಡುವ, ಮನೆ ಮುಂದೆ ಬರುವ ಮಕ್ಕಳ ಕೈಗೆ ತುತ್ತು ಹಾಕುವ, ಸಾಕಿದ ನಾಯಿಯನ್ನು ಸಾಯಬಡಿಯುವ, ನೀನ್ಯಾಕಾದರೂ ಹುಟ್ಟಿದೆ ನನ್ನ ಹೊಟ್ಟೆ ಉರಿಸೋದಕ್ಕೆ ಎಂದು ಚೀರಾಡಿ ಅಳುವ ಅಮ್ಮ.
ಅಮ್ಮನ ನೆನಪಾದಾಗ ಕಣ್ಮುಂದೆ ಬರುವುದು ಅಪ್ಪ. ನಿರ್ಲಿಪ್ತನಂತೆ ಕೂತಿರುವ, ಮನಸ್ಸಿನಲ್ಲೇ ನೂರೆಂಟು ಕಳ್ಳದಾರಿಗಳನ್ನು ಹುಡುಕಿಕೊಳ್ಳುತ್ತಿರುವ, ಪಾರೋತಿಯ ಮನೆಗೆ ಹೋಗಿ ಅವಳನ್ನು ಮುದ್ದಾಡಿ ಬರುವ, ಗಂಗಣ್ಣನ ಗಡಂಗಿನಲ್ಲಿ ಸಾಲ ಕೇಳುವ, ಕೆಲಸ ಕೊಟ್ಟವರನ್ನು ಹೀನಾಮಾನ ಬೈಯುವ, ಬೆಳಗ್ಗೆ ಅವರ ಮುಂದೆಯೇ ಕೈ ಕಟ್ಟಿ ನಿಲ್ಲುವ, ಮಗನನ್ನು ವಾರೆಗಣ್ಣಿಂದ ಗಮನಿಸುತ್ತ, ಅವನು ತನ್ನ ಪ್ರತಿಸ್ಪರ್ಧಿ ಎಂಬಂತೆ ನೋಡುವ, ಖುಷಿಯಾದಾಗ ಹೆಗಲ ಮೇಲೆ ಕೂರಿಸಿಕೊಂಡು ಮಗಳನ್ನು ಸಂತೆಗೆ ಕರೆದೊಯ್ಯುವ ಅಪ್ಪ.
ಇವರಿಬ್ಬರ ಮಧ್ಯೆ ಅಕ್ಕ ಇದ್ದಾಳೆ. ಅವಳಿಗೊಬ್ಬ ಪ್ರೇಮಿ. ಅವನು ಕೂಡ ಇದೇ ಅಪ್ಪನಂಥ ಅಪ್ಪನಿಗೆ, ಅಮ್ಮನಂಥ ಅಮ್ಮನಿಗೆ ಹುಟ್ಟಿದವನು. ಕೆಲಸವೇನು ಎಂದರೆ ಕೆಲಸವಿಲ್ಲ. ಕೆಲಸವಿಲ್ಲ ಅಂದರೆ ಒಂದರೆಗಳಿಗೆ ಬಿಡುವಿಲ್ಲ. ಕೈಲಿ ಕಾಸಿಲ್ಲದಿದ್ದರೂ ಹೆಮ್ಮೆಯಿಂದ ಓಡಾಡುವ, ಸಿನಿಮಾ ನೋಡುವ, ಯಾರದೋ ಬೈಕು ತಂದು ಸುತ್ತಾಡುವ, ಯಾರಿಗೋ ಹೊಡೆದು ಹೊಡೆಸಿಕೊಂಡು ದಿನಗಟ್ಟಲೆ ಮನೆಯಿಂದಾಚೆ ಬರದ, ತಲೆಗೆ ಎಣ್ಣೆ ಹಾಕದ, ತಲೆ ಬಾಚಿಕೊಳ್ಳದ, ಬಣ್ಣಬಣ್ಣದ ಶರಟು ಹಾಕುವ ಹುಡುಗ ಅವಳ ಪ್ರೇಮಿ.
ಅಲ್ಲೊಂದು ಪುಟ್ಟ ನಾಯಿ, ಸುಳಿದು ಬರುವ ರೇಲು, ಅದರಿಂದ ಪ್ರತಿದಿನವೂ ಇಳಿಯುವ ಹತ್ತುವ ಜೀನ್ಸ್ ತೊಟ್ಟ ಹುಡುಗಿ, ಅವಳು ಕೆಲಸ ಮಾಡುವ ಕಲಾಸಿಪಾಳ್ಯಂನ ರೇಷ್ಮೆ ಅಂಗಡಿ, ಅವಳನ್ನು ಹಿಂಬಾಲಿಸುವ ಅಕ್ಕನ ಪ್ರೇಮಿ. ಅಕ್ಕನಿಗೂ ಆ ಬಗ್ಗೆ ಗುಮಾನಿ. ಅವಳು ಜೀನ್ಸ್ ತೊಟ್ಟ ಕಾರಣಕ್ಕೇ, ಅವನಿಗಿಷ್ಟ. ಒಂದು ದಿನ ಅಕ್ಕನೂ ಜೀನ್ಸ್ ತೊಟ್ಟುಕೊಂಡು ಬಂದು ಅವನಿಗೆ ದಾರಿಯಲ್ಲಿ ಎದುರಾಗಿ ಇಬ್ಬರೂ ಡಿಕ್ಕಿಹೊಡೆದು ಬಿದ್ದು, ಎದ್ದು ಕಣ್ತೆರೆದರೆ ಏಳು ಸಮುದ್ರದ ಆಚೆಗಿರುವ ನ್ಯೂಯಾರ್ಕ್.
ಆಮೇಲೊಂದು ಹಾಡು, ಹೊಡೆದಾಟ, ವಿರಹ, ಉಪದೇಶ, ನೀತಿಕತೆ, ಕ್ಲೈಮ್ಯಾಕ್ಸ್ ಮತ್ತು ಶುಭಂ.


ಚಿತ್ರಕತೆ:
ದೃಶ್ಯ -೧
ಹಗಲು/ಹೊರಾಂಗಣ
ಒಂದು ನಿರ್ಜನ ಬೀದಿ, ಓಡುತ್ತಿರುವ ಯುವಕ. ಅಟ್ಟಿಸಿಕೊಂಡು ಬರುತ್ತಿರುವ ಅನಾಮಿಕರು. ಹುಡುಗ ಓಡುತ್ತಾ ಹೋಗುತ್ತಿದ್ದಂತೆ ರಸ್ತೆ ಕೊನೆಯಾಗುತ್ತದೆ. ಇನ್ನು ಎತ್ತಲೂ ಓಡುವುದುಕ್ಕೆ ಜಾಗವೇ ಇಲ್ಲ ಎಂಬ ಸ್ಥಿತಿಗೆ ತಲುಪಿದಾಗ ಅಟ್ಟಿಸಿಕೊಂಡು ಬಂದವರು ಹುಡುಗನ ಮೇಲೆ ಆಕ್ರಮಣ ಮಾಡುತ್ತಾರೆ. ಹುಡುಗ ಅವರ ಮೇಲೆ ಮುಗಿಬಿದ್ದು ಹೋರಾಟ ನಡೆಸುತ್ತಾನೆ. ಆದರೆ ಬಂದವರ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಅವನು ಸೋಲುತ್ತಾನೆ. ಅವನನ್ನು ಕತ್ತರಿಸಿ ಅವರು ಹೊರಡುತ್ತಾರೆ. ಛಿಲ್ಲನೆ ಚಿಮ್ಮಿದ ರಕ್ತ. ಕೆಮರಾದ ಲೆನ್ಸಿಗೆ ಚೆಲ್ಲಿಂದಂತೆ ರಕ್ತ. ರಂಗೋಲಿಯ ಹಾಗೆ ಬಿದ್ದಿರುವ ರಕ್ತ. ಪಕ್ಕದಲ್ಲಿ ಬಿದ್ದಿರುವ ಹುಡುಗನ ದೇಹದ ಒಂದು ಭಾಗ, ಭುಜ, ಒಮ್ಮೆ ಕಂಪಿಸಿ ಸುಮ್ಮನಾಗುತ್ತದೆ.
ದೃಶ್ಯ -೨
ಹಗಲು/ಹೊರಾಂಗಣ
ಅವಳು ಒಬ್ಬಳೇ ಕೂತಿದ್ದಾಳೆ. ಅವಳ ಕಣ್ಣಲ್ಲಿ ಹನಿ ನೀರು. ಎದುರಿಗೆ ಹೊಳೆ ಹರಿಯುತ್ತಿದೆ. ಅವಳು ಎದ್ದು ಮುಖ ತೊಳೆದುಕೊಳ್ಳಲು ಹೊಳೆಗಿಳಿಯುತ್ತಾಳೆ. ಬೊಗಸೆಯೊಡ್ಡಿ ಕೈತುಂಬ ನೀರು ತುಂಬಿಕೊಂಡರೆ ಅದು ನೀರಲ್ಲ ರಕ್ತ. ಅವಳು ಬೆಚ್ಚಿಬೀಳುತ್ತಾಳೆ. ಕೈಯಲ್ಲಿದ್ದ ನೀರನ್ನು ಚೆಲ್ಲಿ ಹೊಳೆಯತ್ತ ನೋಡುತ್ತಾಳೆ. ಹೊಳೆ ತುಂಬ ರಕ್ತ, ಮಾಂಸಲಖಂಡ, ಕೈ ಕಾಲು, ರುಂಡಗಳು ತೇಲಿ ಬರುತ್ತಿವೆ. ಅವಳು ಚೀತ್ಕಾರ ಮಾಡುತ್ತಾ ಓಡೋಡಿ ಬರುತ್ತಾಳೆ.
ದೃಶ್ಯ -೩
ರಾತ್ರಿ/ಒಳಾಂಗಣ/ಹೊರಾಂಗಣ
ದೀಪದ ಮುಂದೆ ಅವ್ವ ಕೂತಿದ್ದಾಳೆ. ದೀಪದ ಕುಡಿಯ ಸಮೀಪದೃಶ್ಯ. ಕ್ರಮೇಣ ಅದು ಅವ್ವನ ಕಣ್ಣಂಚಿನಲ್ಲಿರುವ ಹನಿಯಾಗುತ್ತದೆ. ಅವಳು ಭುಜದ ಮೇಲೆ ಕೈಯಿಟ್ಟು ಮಲಗಿದ್ದಾಳೆ. ಪಕ್ಕದಲ್ಲಿ ಕೆಮ್ಮುತ್ತಾ ಕೂತಿರುವ ಅಪ್ಪ, ಅವರಿಬ್ಬರ ಪಕ್ಕದಲ್ಲಿ ಅಕ್ಕ. ಅಪ್ಪನ ಮುಖದಲ್ಲಿ ಭಯವಾಗಲೀ, ನೋವಾಗಲೀ, ಅವಮಾನವಾಗಲೀ ಇಲ್ಲ. ಅಕ್ಕನ ಮುಖದಲ್ಲಿ ಸಂಕಟ ಮತ್ತು ಸಿಟ್ಟು. ಅವ್ವನ ಕಣ್ಣಲ್ಲಿ ರೋಷ. ಅವ್ವ ತಲೆಯೆತ್ತಿ ನೋಡುತ್ತಾಳೆ. ಅಪ್ಪ ಬೀಡಿ ತುಟಿಗಿಡುತ್ತಾನೆ. ಅವ್ವ ಪಕ್ಕದಲ್ಲಿದ್ದ ಸೀಮೆಎಣ್ಣೆ ಕ್ಯಾನ್ ಎತ್ತಿಕೊಂಡು ಅಪ್ಪನ ಹತ್ತಿರ ಹೋಗಿ ಅವನ ನೆತ್ತಿಗೆ ಅದನ್ನು ಸುರಿಯುತ್ತಾಳೆ. ಬೆಂಕಿಕಡ್ಡಿಗಾಗಿ ಹುಡುಕಾಡುತ್ತಾಳೆ. ಅಪ್ಪ ಭಯಗೊಂಡು ಓಡಿ ಹೋಗುತ್ತಾನೆ. ಹಾಗೆ ಓಡಿಹೋಗುತ್ತಾ ಹೋಗುತ್ತಾ ಅವನ ಮೈಗೆ ಬೆಂಕಿ ಹತ್ತಿಕೊಳ್ಳುತ್ತದೆ. ಅವ್ವ ಓಡಿ ಹೋಗಿ ಅವನ ಕೈ ಹಿಡಕೊಳ್ಳುತ್ತಾಳೆ. ಇದ್ದಕ್ಕಿದ್ದಂತೆ ಆ ದೇಹ ಅವಳ ಕೈಯ ದೊಂದಿಯಾಗುತ್ತದೆ. ಅವಳು ಅದನ್ನು ಹಿಡಕೊಂಡು ಓಡತೊಡಗುತ್ತಾಳೆ.
ದೃಶ್ಯ -೪
ರಾತ್ರಿ/ಹೊರಾಂಗಣ
ಒಂದು ಗುಡ್ಡದ ಮೇಲೆ ಕೂತಿರುವ ಅಕ್ಕ. ಅವಳ ಕೂದಲು ಜ್ಯಾಲೆಯಂತೆ ಉರಿಯುತ್ತಿದೆ. ಅವಳು ತಿರುಗಿ ನೋಡುತ್ತಾಳೆ. ಆ ಪ್ರೇಮಿ ಅಲ್ಲಿ ನಿಂತಿದ್ದಾನೆ. ಅವನು ಸೊಂಟಕ್ಕೊಂದು ತುಂಡು ಬಟ್ಟೆ ಸುತ್ತಿಕೊಂಡಿದ್ದಾನೆ. ಮೈಯೆಲ್ಲ ಕಾದು ಕಂಪಿಸುತ್ತಿದೆ. ಅಕ್ಕ ಅವನನ್ನು ನೋಡಿದವಳೇ ಹತ್ತಿರ ಹೋಗಿ ಅವನನ್ನು ತಳ್ಳುತ್ತಾಳೆ. ಅವನು ಕಮರಿಯಿಂದ ಬೀಳಬೇಕು ಅನ್ನುವಷ್ಟರಲ್ಲಿ ತಾನೂ ಅವನನ್ನು ಹಿಡಿದುಕೊಳ್ಳುತ್ತಾಳೆ. ಇಬ್ಬರೂ ಕಣಿವೆಗೆ ಬೀಳುತ್ತಾ ಬೀಳುತ್ತಾ ಚುಂಬಿಸುತ್ತಾರೆ. ನೋಡನೋಡುತ್ತಿದದ ಹಾಗೇ ಹಕ್ಕಿಯಾಗಿ ಹಾರುತ್ತಾರೆ. ಕಣಿವೆಯ ಕಲ್ಲಿನಾಚೆಗೆ, ಆ ಹಕ್ಕಿಗಳನ್ನು
ಗುಂಡಿಟ್ಟು ಸಾಯಿಸಲು ಕಾದು ಕೂತ ಮೀಸೆಯವನು ಗುಂಡು ಹಾರಿಸುತ್ತಾನೆ. ಗುಂಡಿನ ಸದ್ದಿನ ಬೆನ್ನಿಗೇ ಆಕಾಶ ರಕ್ತಸಿಕ್ತ ಕೆಂಪು. ಎಲ್ಲವೂ ಸ್ತಬ್ಧ.
ದೂರದಲ್ಲಿ ಎಲ್ಲೋ ಅವ್ವನ ಚೀತ್ಕಾರ ಕೇಳಿಸುತ್ತಿದೆ. ವೇಗವಾಗಿ ಚಲಿಸುತ್ತಿರುವ ಕೆಮರಾ. ಎಲ್ಲವನ್ನು ಹಿಂದಿಕ್ಕಿಕೊಂಡು ಮುಂದೆ ಸಾಗುತ್ತಾ ಸಾಗುತ್ತಾ ಥಟ್ಟನೆ ನಿಲ್ಲುತ್ತದೆ.
ಅಲ್ಲಿ ಒಂದು ಮುಚ್ಚಿದ ಬಾಗಿಲು. ಅದು ನಿಧಾನವಾಗಿ ತೆರೆದುಕೊಳ್ಳುತ್ತದೆ. ಅದರಾಚೆಗೆ ನೋಡಿದರೆ ಬರೀ ಶೂನ್ಯ. ಜನರಿಲ್ಲದ, ಕಾಡಿಲ್ಲದ, ಆಕಾಶ ಇಲ್ಲದ, ಯಾರೂ ಇಲ್ಲದ ನಾಡು.
ದೃಶ್ಯ -೫
ರಾತ್ರಿ/ಹೊರಾಂಗಣ
ಮರದ ನೆರಳು, ಚಂದಿರನ ಬೆಳಕು. ಅವರಿಬ್ಬರೂ ಪ್ರೀತಿ ಮಾಡುತ್ತಿದ್ದಾರೆ. ದೇಹಗಳು ಉರುಳಾಡುತ್ತಿವೆ. ಪೊದೆಯ ಮರೆಯಿಂದ ಸರ್ಪವೊಂದು ಬಂದು ಅವರಿಬ್ಬರನ್ನೂ ಸುತ್ತಿಕೊಳ್ಳುತ್ತದೆ. ಅದರ ಪರಿವೆಯೂ ಇಲ್ಲದಂತೆ ಸರ್ಪವನ್ನು ಮೈ ಮೇಲಿನ ಬಟ್ಟೆಯಂತೆ ಭಾವಿಸುತ್ತಾ ಅವರು ಪ್ರೀತಿಮಗ್ನ. ಆಕಾಶದಲ್ಲಿ ಹಾರುತ್ತಿರುವ ಗರುಡ. ಆ ಪಕ್ಷಿ ಹಾರುತ್ತಾ ಹಾರುತ್ತಾ ಬಂದು, ಅವರಿಬ್ಬರ ಸಮೇತ ಸರ್ಪವನ್ನೂ ಎತ್ತಿಕೊಂಡು ಹೋಗುತ್ತದೆ. ಸಾಗರಗಳ ಮೇಲೆ ಹಾರುತ್ತಿರುವ ಗರುಡ.
ಇದ್ದಕ್ಕಿದ್ದಂತೆ ಗರುಡನ ಕಣ್ಣಿಗೆ ಮತ್ತೊಂದು ಸರ್ಪ ಕಾಣಿಸುತ್ತದೆ. ಕೊಕ್ಕಿನಲ್ಲಿ ಕಚ್ಚಿಕೊಂಡಿರುವ ಸರ್ಪವನ್ನು ಬಿಟ್ಟು, ಅದು ಆಗಷ್ಟೇ ಕಂಡ ಸರ್ಪದತ್ತ ಧಾವಿಸುತ್ತದೆ. ಆ ಸರ್ಪ, ಅದು ಸುತ್ತಿಕೊಂಡಿರುವ ಅವರಿಬ್ಬರು, ಆಕಾಶದಲ್ಲಿ ತೇಲುತ್ತಾ ತೇಲುತ್ತಾ ಬೇರೆ ಬೇರೆಯಾಗಿ ಎಲ್ಲೆಲ್ಲೋ ಬೀಳುತ್ತಾರೆ.
ಅವನು ಬಿದ್ದ ಜಾಗದಲ್ಲಿ ಮಹಾನಗರ. ಅವಳು ಬಿದ್ದ ಜಾಗದಲ್ಲಿ ಮಹಾರಣ್ಯ ಮತ್ತು ಸರ್ಪಬಿದ್ದ ಜಾಗದಲ್ಲಿ ಮಹಾಸಮುದ್ರವೊಂದು ಹುಟ್ಟಿಕೊಂಡು....

ಸಂಭಾಷಣೆ:

ಅವ್ವ: ಬೆಂಕಿ ಬೇಕು ನಂಗೆ. ಬೆಂಕಿ. ನನ್ನ ಮಗನ ಕಣ್ಣಲ್ಲೂ ಬೆಂಕಿಯಿಲ್ಲ, ಮಗಳ ಮೈಯಲ್ಲೂ ಬೆಂಕಿಯಿಲ್ಲ. ದರಿದ್ರ ಬಡಿದ ಜನ. ರೊಚ್ಚಿಗೇಳದ ಮನುಷ್ಯರು. ಓಡಿಹೋಗೋ ಮಂದಿ. ಬಸ್ಸು, ಕಾರು, ವಿಮಾನ, ಸೈಕಲ್ಲು, ಮೋಟರ್ ಸೈಕಲ್ಲು ಏನಾದ್ರೊಂದು ಹಿಡಕೊಂಡು ತಪ್ಪಿಸಿಕೊಳ್ಳೋಕೆ ನೋಡೋ ಶನಿಗಳು. ಇವರನ್ನು ಹುಟ್ಟಿಸೋದೇ ತಪ್ಪು.. ಬೆಳೆಸೋದೂ ತಪ್ಪು. ಕೊಚ್ಚಿ ಹಾಕ್ರೋ ಎಲ್ಲರನ್ನೂ..
ಮಗ: ಓಡ್ತಾನೇ ಇರಬೇಕು. ಓಡ್ತಾನೇ ಇರಬೇಕು. ಎಲ್ಲಿಗೆ ಹೋಗಿ ಮುಟ್ತೀನಿ ಅಂತ ಗೊತ್ತಿಲ್ಲದೇ ಇದ್ರೂ ಓಡ್ತಾನೇ ಇರಬೇಕು. ನಿಂತ್ರೆ ಭಯ ಆಗುತ್ತೆ. ನಿಂತೇಬಿಟ್ಟೆ ಅನ್ಸುತ್ತೆ. ಓಡ್ತಿದ್ರೆ ಏನೋ ಒಂದು ಸಮಾಧಾನ. ಕಾಲಿಗೆ ದಣಿವಾಗುತ್ತೆ, ನಿದ್ದೆ ಬರುತ್ತೆ. ಮತ್ತೆ ಎದ್ದು ಓಡ್ತಾ ಇರೋದು. ಕಾರಿಗಿಂತ ಬಸ್ಸಿಗಿಂತ ವಿಮಾನಕ್ಕಿಂತ ರೈಲಿಗಿಂತ ವೇಗವಾಗಿ ಓಡೋದು.
ಅಕ್ಕ: ನನ್ನ ಕೂದಲಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಹೊತ್ತಿ ಉರೀತಿದೆ. ಎಲ್ಲೂ ಒಂಚೂರು ನೀರಿಲ್ಲ, ನಾನು ತಲೆ ತೊಳ್ಕೋಬೇಕು. ನೀರಲ್ಲಿ ನೆತ್ತಿ ಅದ್ದಬೇಕು. ಬೆಂಕಿ ಆರಿಸ್ಕೋಬೇಕು. ಸುಟ್ಟು ಬೂದಿಯೂ ಆಗದ, ಹೊತ್ತಿ ಬತ್ತಿಯೂ ಆಗದ, ನೆತ್ತಿ ಭಸ್ಮವೂ ಆಗದ ಈ ಬೆಂಕಿ ಬೇಡ ನಂಗೆ.. ಆರಿಸ್ರೋ ಯಾರಾದ್ರೂ... ಯಾರೂ ಇಲ್ವೇ ಅಲ್ಲಿ..
ಪ್ರೇಮಿ; ಅವಳು ಕೇಳಿದ್ದೆಲ್ಲ ಕೊಟ್ಟೆ. ಕೇಳದೇ ಇದ್ದಿದ್ದನ್ನೂ ಕೊಟ್ಟೆ. ಮತ್ತೂ ಬೇಕು ಅಂತಿದ್ದಾಳೆ. ಖಂಡವಿದೆಕೋ ಮಾಂಸವಿದೆಕೋ ಅಂದ್ರೇನೇ ಅವಳಿಗೆ ಸಂತೋಷ. ಆದ್ರೆ ಅವಳು ಹುಲಿ ಥರ ಬೆಟ್ಟದಿಂದ ಹಾರಿ ಪ್ರಾಣ ಬಿಡಲ್ಲ. ಬೇಟೆ ಆಡ್ತಾಳೆ. ನನ್ನನ್ನೇ ಬೇಟೆ ಆಡ್ತಾಳೆ. ನನ್ನ ಮುಟ್ಟಿ ಬೇಟೆ ಆಡ್ತಾಳೆ. ಮುಟ್ಟದೇ ಬೇಟೆ ಆಡ್ತಾಳೆ. ಬೇರೆಯವರ ಜೊತೆ ನಗ್ತಾ ನಗ್ತಾ ಬೇಟೆಯಾಡ್ತಾಳೆ. ಮುನಿಸಿಕೊಂಡು ಬೇಟೆಯಾಡ್ತಾಳೆ. ಬೇಕು ಅನ್ನಿಸಿ, ಬೇಡ ಅನ್ನಿಸಿ ಬರೀ ಬೇಟೆ ಆಡ್ತಾಳೆ.
ದೇವರು: ಇಲ್ಲದೇ ಇದ್ದಿದ್ದನ್ನು ಹುಡುಕ್ತಾರೆ, ಇದ್ದಿದ್ದು ಬೇಡ ಅಂತಾರೆ. ನಾನಿದ್ದೀನೋ ಇಲ್ವೋ ಅಂತ ನಂಗೇ ಗೊತ್ತಿಲ್ಲ. ಅವರಿಗೆ ಗೊತ್ತು. ನನ್ನ ಹುಡುಕೋದಕ್ಕೆ ಜ್ಯೋತಿಷ್ಯ, ಶಾಸ್ತ್ರ, ಕುಂಡಲಿ, ಜಾತಕ, ದೇವಸ್ಥಾನ, ಬ್ರಹ್ಮಕಲಶ, ಬಲಿ, ದಾನ, ಧರ್ಮ. ನಾನೇ ಇಲ್ಲ. ನಾನು ನೀನೇ ಅಂದ್ರೆ ಕೇಳಲ್ಲ.
ಬಡ್ಡೀಮಕ್ಳಾ.. ನಾನು ಸತ್ತೋಗಿದ್ದೀನಿ ಕಣ್ರೋ....

Wednesday, May 12, 2010

ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ..

ಬೆಂಗಳೂರಿನ ಬೇಸಗೆಯ ಬಣ್ಣ ಯಾವುದು ಒಂದು ಯೋಚಿಸುತ್ತಿದ್ದೆ. ನಮ್ಮರಲ್ಲಂತೂ ಬೇಸಗೆ ಸುಡುಹಳದಿ. ಮಳೆಗಾಲ ಕಡು ಹಸಿರು. ಚಳಿಗಾಲಕ್ಕೂ ಬೇಸಗೆಗೂ ಅಂಥ ವ್ಯತ್ಯಾಸವಿಲ್ಲ. ಒಂದಷ್ಟು ಮರಗಳು ಎಲೆಯುದುರಿಸಿ ನಿಂತದ್ದು ಬಿಟ್ಟರೆ, ಹಗಲಿಡೀ ಅದೇ ಸುಡುವ ಸೂರ್ಯ ಮತ್ತು ಆ ಬೆಳಕಲ್ಲಿ ಮತ್ತಷ್ಟು ಚಪ್ಪಟೆಯಾಗಿ ಕಾಣುವ ಚಿತ್ರಗಳು.
ಆದರೆ ಬೆಂಗಳೂರಲ್ಲಿ ಹಾಗಲ್ಲ. ಅಲ್ಲಿ ಋತುಗಳು ಬದಲಾದದ್ದೇ ಗೊತ್ತಾಗುವುದಿಲ್ಲ. ಇದೀಗ ವಸಂತ ಋತು ಅನ್ನುವುದಾಗಲೀ, ಇದು ಶಿಶಿರ ಅನ್ನುವುದಾಗಲೇ ಪ್ರಕೃತಿಯಿಂದ ಗೊತ್ತಾಗಬೇಕೇ ಹೊರತು ಕ್ಯಾಲೆಂಡರಿನಿಂದಲ್ಲ. ಬೆಂಗಳೂರಿನಿಂದ ಕೊಂಚ ಆಚೆಗೆ ಹೋದರೆ ಮುಂಜಾನೆ ಹೊತ್ತಲ್ಲಿ ದಟ್ಟ ಮಂಜು ಕವಿದಿರುತ್ತದೆ. ಆದರೆ ಬೆಂಗಳೂರಲ್ಲಿ ಮಂಜು, ಮಳೆ ಮತ್ತು ಬಿಸಿಲು ಮೂರೂ ಅಕಾಲಿಕ. ಇಲ್ಲಿ ಮಳೆಯಾದರೂ ಅದು ಬ್ರೇಕಿಂಗ್ ನ್ಯೂಸ್.
ನನಗೆ ಬೇಸಗೆ ಇಷ್ಟ. ಬೇಸಗೆಯಲ್ಲಿ ಪ್ರಕೃತಿ ಉಳಿದೆಲ್ಲ ಕಾಲಕ್ಕಿಂತ ಸಮೃದ್ಧವಾಗಿರುತ್ತದೆ. ಬೇಸಗೆಯ ಆರಂಭಕ್ಕೆ ಎಲ್ಲ ಮರಗಳೂ ಹೂ ಬಿಡುತ್ತವೆ. ನಡುಬೇಸಗೆಯ ಹೊತ್ತಿಗೆ ಫಲವತಿ ಪೃಥ್ವಿ. ಮಾವಿನ ಹಣ್ಣು, ಗೇರುಹಣ್ಣು, ನೇರಳೆ, ಪೇರಲ ಮತ್ತು ಹೆಸರಿಲ್ಲದ ನೂರೆಂಟು ಹಣ್ಣುಗಳ ಸುಗ್ಗಿಕಾಲ ಅದು. ಜಂಬುನೇರಳೆಯೆಂಬ ರುಚಿರುಚಿಯಾದ ಹಣ್ಣಿಗೆ ಮನಸ್ಸು ಹಂಬಲಿಸುತ್ತದೆ. ತುಮಕೂರು, ಗುಬ್ಬಿ, ಚಿಕ್ಕಮಗಳೂರು ಮುಂತಾದ ಕಡೆ ತಾಳೆಗಿಡಗಳು ಖರ್ಜೂರದ ರುಚಿಯ ಹೊಂಬಣ್ಣದ ಹಣ್ಣನ್ನು ಮೈತುಂಬ ತುಂಬಿಕೊಂಡು ಆಕರ್ಷಿಸುತ್ತವೆ.
ಇಂಥ ಬೇಸಗೆಯಲ್ಲೇ ಎಷ್ಟೋ ಸಲ ಕಾದಂಬರಿಗೊಂದು ವಸ್ತು ಸಿಗುತ್ತದೆ. ಯಾರೋ ಬರೆದ ರುಚಿಕಟ್ಟಾದ ಕಾದಂಬರಿಯೊಂದು ಹೇಗೋ ಕೈ ಸೇರುತ್ತದೆ. ಮೊನ್ನೆ ಹಾಗೇ ಆಯ್ತು. ಯುಸುನಾರಿ ಕವಾಬಾಟ ಎಂಬ ಜಪಾನ್ ಕಾದಂಬರಿಕಾರ ಬರೆದ ಸಾವಿರ ಪಕ್ಷಿಗಳು’ ಎಂಬ ಪುಟ್ಟ ಕಾದಂಬರಿ ಹೇಗೋ ಕೈಸೇರಿತು. ಹಳೆಯ ಕಾಲದ ಕಾದಂಬರಿ ಎಂದುಕೊಂಡು ನಿರ್ಲಕ್ಷಿಸಿದ್ದನ್ನು ಸೆಕೆಗೆ ನಿದ್ದೆ ಬಾರದ ರಾತ್ರಿ ಕೈಗೆತ್ತಿಕೊಂಡಾಗ ಬೆಳಗಿನ ತನಕ ಓದಿಸಿಕೊಂಡಿತು.
ತುಂಬ ವಿಚಿತ್ರವಾಗಿ ಬರೆಯುತ್ತಾನೆ ಕವಾಬಾಟ. ಕಿಕುಜಿ ಎಂಬ ಹುಡುಗನ ಕತೆ ಅದು. ಕಾದಂಬರಿಯಲ್ಲಿ ಎಲ್ಲೂ ತುಂಬ ಅಚ್ಚರಿ ಹುಟ್ಟಿಸುವ ಚಿತ್ರಗಳು ಎದುರಾಗುವುದಿಲ್ಲ. ಆ ಪುಟ್ಟ ಹುಡುಗ ತನ್ನ ತಂದೆಯನ್ನು ಗೆಲ್ಲುವ ಕತೆ ಅದು ಅಂತ ಮುನ್ನುಡಿ ಓದಿದ ಮೇಲೆ ನನಗೂ ಅನ್ನಿಸಿತು. ಕಾದಂಬರಿಯನ್ನಷ್ಟೇ ಓದಿದಾಗ ನೆನಪಾದದ್ದು ನಮ್ಮ ಬಾಲ್ಯ. ನಮ್ಮೂರು, ನಮ್ಮೂರಿನ ರೂಪಸಿಯರು ಮತ್ತು ಎಲ್ಲರೂ ಸಿಟ್ಟಿನಿಂದ ನೋಡುತ್ತಿದ್ದ ಆದರೆ, ನಮ್ಮಂಥ ಹುಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದ್ದ ದಿಟ್ಟೆಯರು.
ಹೇಗೆ ನಮ್ಮ ಅಭಿಪ್ರಾಯಗಳು ಬದಲಾಗುತ್ತಾ ಹೋಗುತ್ತವೆ ಎಂದು ಯೋಚಿಸುತ್ತೇನೆ. ಚಿಕ್ಕವರಿದ್ದಾಗ ಈ ರೂಪಸಿಯರು ಅಮ್ಮನ ಕಣ್ಣಿಗೋ ಅತ್ತಿಗೆಯ ಕಣ್ಣಿಗೋ ಸವತಿಯರ ಹಾಗೆ, ಸ್ಪರ್ಧಿಗಳ ಹಾಗೆ ಕಾಣಿಸುತ್ತಾರೆ ಎಂದು ನಮಗೆ ಅನ್ನಿಸಿರಲೇ ಇಲ್ಲ. ಅವರ ಜೀವನೋತ್ಸಾಹ, ಗಟ್ಟಿ ನಗು, ಆತ್ಮವಿಶ್ವಾಸ, ನಾಜೂಕು ಎಲ್ಲವೂ ಇಷ್ಟವಾಗುತ್ತಿತ್ತು. ಆದರೆ ಅದನ್ನು ಅದುಮಿಡುವ, ಹೀಗಳೆಯುವ ಹೆಂಗಸರನ್ನೂ ನೋಡಿದ್ದೆ. ಒಂದು ಹೊಸ ಸ್ನೇಹ ಅರಳಬಹುದು ಎಂಬ ನಿರೀಕ್ಷೆಯಲ್ಲಿ ಗಂಡಸರೂ ಆತಂಕದಲ್ಲಿ ಹೆಂಗಸರೂ ಬದುಕುತ್ತಿರುತ್ತಾರೆ ಎಂದು ಆಮೇಲೆ ಗೊತ್ತಾಯಿತು. ಈಗ ಅಂಥ ಆತಂಕ ಹುಡುಗರಲ್ಲೂ ಮನೆ ಮಾಡಿಕೊಂಡಿದೆ. ತನ್ನನ್ನು ಪ್ರೀತಿಸುವ ಹುಡುಗಿಯನ್ನು ತನಗಿಂತ ಸುಂದರನೊಬ್ಬ ಆಕರ್ಷಿಸಬಹುದು. ಅಷ್ಟಕ್ಕೂ ಅವಳಿಗೆ ಸೌಂದರ್ಯವಷ್ಟೇ ಮುಖ್ಯವಾಗದೇ ಹೋಗಬಹುದು. ಅವನ ಮಾತು, ಸಾಂತ್ವನ, ಧಾರಾಳತನ, ಮುಗ್ಧತೆ, ಸಂಕೋಚಗಳೂ ಅವಳನ್ನು ಸೆಳೆಯಬಹುದಲ್ಲ ಎಂದು ಅನೇಕರು ಯೋಚಿಸುತ್ತಾರೆ. ಹಿಂದಿನ ಕಾಲದಲ್ಲಿ ಆಗುತ್ತಿದ್ದ ಹಾಗೆ, ಮದುವೆಯೆಂಬ ಬಂಧನ ಗಂಡನ್ನಾಗಲೀ ಹೆಣ್ಣನ್ನಾಗಲೀ ಕಟ್ಟಿಹಾಕಲಾರದು.
ಕವಾಬಾಟನ ಕಾದಂಬರಿಯಲ್ಲೂ ಅದೇ ಆಗುತ್ತದೆ. ಅವನ ಅಪ್ಪನಿಗೆ ಇಬ್ಬರು ಪ್ರೇಯಸಿಯರು: ಚಿಕಕೋ ಮತ್ತು ಓಟ. ಅವಳಲ್ಲಿ ಒಬ್ಬಳು, ಇನ್ನೊಬ್ಬಳಿಂದ ಕಿಕುಜಿಯನ್ನು ಕಾಪಾಡಲು ಹೆಣಗಾಡುತ್ತಿರುತ್ತಾಳೆ. ಕೊನೆಗೂ ಕಿಕುಜಿಯನ್ನು ಆ ಇನ್ನೊಬ್ಬಳೇ ಸೆಳೆಯುತ್ತಾಳೆ. ಅವಳ ಪ್ರೀತಿಯಲ್ಲೊಂದು ಸಹಜತೆ ಅವನಿಗೆ ಕಾಣಿಸುತ್ತದೆ. ತಾನು ತಪ್ಪು ಮಾಡುತ್ತಿದ್ದೇನೆ ಎಂದು ಆಕೆಯೇ ಹೇಳಿಕೊಂಡರು ಕೂಡ ಕಿಕುಜಿಗೆ ಪಾಪಪ್ರಜ್ಞೆ ಕಾಡುವುದಿಲ್ಲ.
ಅವನನ್ನು ಇಮುನಾರ ಎಂಬ ಹುಡುಗಿಗೆ ಕೊಟ್ಟು ಮದುವೆ ಮಾಡುವುದು ಚಿಕಕೋಳ ಉದ್ದೇಶ. ಕಿಕುಜಿಗೂ ಅವಳು ಮತ್ತು ಅವಳ ಕೈಯಲ್ಲಿರುವ ಸಾವಿರ ಕ್ರೌಂಚಪಕ್ಷಿಗಳ ಕರ್ಚೀಫು ಇಷ್ಟ. ಆದರೆ ಸಂಬಂಧಗಳ ಮಾತು ಬಂದಾಗ ಅವನು ವರ್ತಿಸುವ ರೀತಿಯೇ ಬೇರೆ. ತನ್ನ ಅಪ್ಪನನ್ನು ಸೆಳೆದುಕೊಂಡಿದ್ದ ಓಟಾಳ ಸಂಗ ಅವನಿಗೆ ಹಿತವೆನ್ನಿಸುತ್ತದೆ. ಅದಕ್ಕೆ ಕಾರಣ ಅವನಿಗೆ ಓಟಾಳ ಮೇಲಿರುವ ಪ್ರೀತಿಯೋ, ಅಪ್ಪನ ಮೇಲಿರುವ ದ್ವೇಷವೋ ಅನ್ನುವುದೂ ಅರ್ಥವಾಗುವುದಿಲ್ಲ. ಇಂಥ ಅನಿರೀಕ್ಷಿತ ಘಟನೆಗಳ ಮೂಲಕವೇ ಇಡೀ ಕತೆ ಸಾಗುತ್ತದೆ. ಅವು ನಮ್ಮ ಪಾಲಿಗೆ ಅನಿರೀಕ್ಷಿತ, ಕತೆಯ ಪಾತ್ರಕ್ಕಲ್ಲ ಎಂಬ ಕಾರಣಕ್ಕೆ ಅದು ಇಷ್ಟವಾಗುತ್ತದೆ.
ಇಂಥ ಸರಳ ಕತೆಗಳನ್ನು ಓದುವುದು ಸದ್ಯದ ಖುಷಿ. ಬೇಸಗೆಯ ಮಧ್ಯಾಹ್ನಗಳಲ್ಲಿ ಸುಮ್ಮನೆ ಕೂತಾಗ ಕಾರಂತರ ಸರಸಮ್ಮನ ಸಮಾಧಿ’ಯ ಸರಸಿ, ಸೀತಕ್ಕ ಕಣ್ಮುಂದೆ ಬರುತ್ತಾರೆ. ಅವರ ಮೂಲಕ ಕಾದಂಬರಿಯನ್ನು ನೋಡಬೇಕು ಅನ್ನಿಸುತ್ತದೆ. ಇದ್ದಕ್ಕಿದ್ದ ಹಾಗೆ ಜe-ಟಿqಡ್ಡ್ಛಿಡ್ಝ್ಟಿಟಿ ಥಿಯರಿ ನೆನಪಾಗುತ್ತದೆ. ಓದಿದ ಕತೆಯನ್ನು ಮತ್ತೊಂದು ಕ್ರಮದಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವಂತೆ ಅದು. ಲೇಖಕನ ದೃಷ್ಟಿಕೋನ ಬದಿಗಿಟ್ಟು, ಮತ್ತೊಂದು ಪಾತ್ರದ ದೃಷ್ಟಿಕೋನದಿಂದ ನೋಡಿದಾಗ ಕಾದಂಬರಿಯ ನೆಲೆಯೇ ಬದಲಾಗಬಹುದಲ್ಲ. ಉದಾಹರಣೆಗೆ ನನ್ನವಳು ನನ್ನೆದೆಯ ಹೊನ್ನಾಡನಾಳುವಳು, ಬೆಳಗುಗೆನ್ನೆಯ ಚೆಲುವೆ ನನ್ನ ಹುಡುಗಿ ಕವಿತೆಯಲ್ಲಿ ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ, ಬಂಗಾರದಂಥ ಹುಡುಗಿ ಎಂಬ ಸಾಲು ಬರುತ್ತದೆ. ಇದು ಕವಿಯ ಆಶಯವೋ ಅವಳ ಸ್ಥಿತಿಯೋ ಅನ್ನುವುದು ನಮಗೆ ಗೊತ್ತಿಲ್ಲ. ನಮಗೂ ಕೂಡ ಬಂಗಾರದೊಡವೆಗಳ ಬಯಸದ ಬಂಗಾರದಂಥ ಹುಡುಗಿ ಆ ಕ್ಷಣ ಇಷ್ಟವಾಗುತ್ತಾಳೆ. ಅದೇ, ಡಿವಿಜಿಯವರ ಅಂತಃಪುರಗೀತೆ ಏನೀ ಮಹಾನಂದವೇ’ ಕವಿತೆಯಲ್ಲಿ ಆಭರಣ ಕೊಟ್ಟುಕೊಂಡ ಸುಂದರಿಯ ವರ್ಣನೆ ಬರುತ್ತದೆ. ಆಗ ನಮಗೆ ಆಭರಣಗಳಿಂದ ಅಲಂಕೃತಳಾದ ಹುಡುಗಿ ಇಷ್ಟವಾಗತೊಡಗುತ್ತಾಳೆ. ಹೀಗೆ ನಮ್ಮೊಳದೇ ಒಂದು ಸಂಘರ್ಷವೋ ವಿರೋಧಾಭಾಸವೂ ಸೃಷ್ಟಿಯಾಗುತ್ತದೆ. ಅದನ್ನು ನಾವು ಹೇಗೆ ಮೀರುತ್ತೇವೆ ಅನ್ನುವುದು ನಿಜಕ್ಕೂ ನಮ್ಮ ಮುಂದಿರುವ ಸವಾಲು.
ಬೇಸಗೆಯಲ್ಲಿ ವಿಚಿತ್ರವಾದ ಹೂವುಗಳೂ ಅರಳುತ್ತವೆ. ಸುಗಂಧ ಬೀರುತ್ತಾ ಇಡೀ ಕಾಡನ್ನೇ ಪುಷ್ಪವತಿಯನ್ನಾಗಿ ಮಾಡುತ್ತವೆ. ಅವುಗಳತ್ತ ನಮ್ಮ ಕಣ್ಣೇ ಹಾಯುವುದಿಲ್ಲ. ತೇಜಸ್ವಿಯ ಕಾದಂಬರಿಯಲ್ಲಿ ಬರುವ ಹಕ್ಕಿಗಳ ಹೆಸರನ್ನಷ್ಟೇ ಕೇಳಿ ಖುಷಿಪಟ್ಟಿದ್ದ ಗೆಳೆಯ, ಅದ್ಭುತ ಛಾಯಾಗ್ರಾಹಕ ಸತ್ಯಬೋಧ ಜೋಶಿ, ಅವನ್ನೆಲ್ಲ ಚಾರ್ಮಾಡಿ ಘಾಟಿಯ ಉದ್ದಕ್ಕೂ ನೋಡಿದಾಗ ಬೆರಗಾದರು. ಸಾಹಿತ್ಯದಿಂದಲೋ ಸುತ್ತಾಟದಿಂದಲೋ ಏನು ಉಪಯೋಗ ಎಂದು ಕೇಳುವವರಿಗೆ ಅವರ ಮಾತು ಉತ್ತರವಾಗಬಹುದು: ಇಂಥ ಪ್ರಯಾಣ ನಂಗಿಷ್ಟ. ನನ್ನ ಮಗಳಿಗೆ ಮುಂದೆ ನಾನು ಇಂಥ ಕಡೆ ಹೋಗಿದ್ದೆ, ಇಂಥ ಹಕ್ಕಿ ನೋಡಿದ್ದೆ ಅಂತ ಹೇಳಬಹುದು. ಇಲ್ಲದೇ ಹೋದರೆ ನಾನೇನು ಹೇಳಲಿ, ನನ್ನ ಜಗತ್ತು ಯಾವುದು ಅಂತ ಹೇಗೆ ತೋರಿಸಲಿ. ನನ್ನಲ್ಲಿ ಅವಳಿಗೆ ತೋರಿಸೋದಕ್ಕೆ ದೊಡ್ಡ ಮನೆಯೋ ವೈಭವದ ಬದುಕೋ ಇಲ್ಲ. ಅವಳಿಗೆ ನಾನು ಕೊಡಬಹುದಾದದ್ದು ನನ್ನ ಇಂಥ ಅನುಭವದ ತುಣುಕೊಂದನ್ನು ಮಾತ್ರ.
ಮಕ್ಕಳಿಗೆ ಅವೆಲ್ಲ ಬೇಕಾ ಎಂಬ ಪ್ರಶ್ನೆಯೂ ಇಂಥ ಹೊತ್ತಲ್ಲಿ ಅನೇಕರನ್ನು ಕಾಡೀತು. ಆದರೆ ಎರಡೂ ಜಗತ್ತನ್ನು ಕಂಡುಕೊಳ್ಳುವುದು ಅವರವರ ಭಾಗ್ಯ. ಆದರೆ ಅದಕ್ಕೆ ಬೇಕಾದ ಅವಕಾಶವನ್ನಷ್ಟೇ ನಾವು ಕಲ್ಪಿಸಬಹುದು. ನಮ್ಮ ಬಾಲ್ಯದ
ಜಗತ್ತೂ ಹಾಗೇ ಇತ್ತೆಂದು ಕಾಣುತ್ತದೆ. ಬಹುಶಃ ಅಲ್ಲಿ ಮತ್ತಷ್ಟು ಸಂಘರ್ಷಗಳಿದ್ದವೇನೋ?
ಈ ವರ್ಷ ಮಾವಿನಮಿಡಿಯಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಮಳೆ ಸುರಿಯುತ್ತದೆ. ದೇವಸ್ಥಾನದ ಜೀರ್ಣೋದ್ಧಾರ ಆಗಿಲ್ಲ, ಭಕ್ತಾದಿಗಳು ಹೆಚ್ಚಾಗಿದ್ದಾರೆ. ದೇವರ ಮಹಿಮೆಯ ಬಗ್ಗೆ ಪ್ರಚಾರ ಬೇಕು, ದುಡ್ಡಂತೂ ಧಾರಾಳವಾಗಿ ಹರಿದು ಬರುತ್ತದೆ. ಭಕ್ತರು ಉದಾರಿಗಳಾಗಿದ್ದಾರೆ.
ಉದಾರಿಗಳಾಗಬೇಕಾದದ್ದು ಭಕ್ತರೋ ದೇವರೋ ಎಂಬ ಗೊಂದಲದಲ್ಲಿ ಅರ್ಚಕರು ನಿಂತಿದ್ದರು. ದೇವರು ಉದಾರಿಯಾದರೆ ಇಡಿ ಪ್ರದೇಶ ಸುಭಿಕ್ಷವಾಗುತ್ತದೆ. ಭಕ್ತರು ಉದಾರಿಯಾದರೆ ದೊಡ್ಡ ದೇವಸ್ಥಾನ ಕಟ್ಟುತ್ತಾರೆ. ರಾಜಮಹಾರಾಜರು ಕಟ್ಟಿಸಿದ ದೇವಾಲಯಗಳನ್ನು ಪ್ರಾಚ್ಯವಸ್ತು ಇಲಾಖೆ ಶಿಲ್ಪಕಲೆಯೆಂಬ ಹೆಸರಲ್ಲಿ ಕಾಪಾಡುತ್ತದೆ. ಅಲ್ಲಿ ದೇವರೂ ಇಲ್ಲ. ಭಕ್ತಿಯೂ ಇಲ್ಲ, ಕೇವಲ ಸೌಂದರ್ಯ ಮಾತ್ರ. ಈಗಿನ ಹೊಸ ದೇವಾಲಯಗಳಲ್ಲಿ ಸೌಂದರ್ಯವೂ ಇಲ್ಲ, ಭಕ್ತಿಯೂ ಇಲ್ಲ. ಯಾರೋ ಜ್ಯೋತಿಷಿ ಎಳ್ಳು ಕೊಡಿ, ನೀರು ಕೊಡಿ, ಉಂಗುರ ಧರಿಸಿ, ಹಾರ ಹಾಕಿಕೊಳ್ಳಿ, ಹರಕೆ ಹೇಳಿ ಎಂದು ಸಲಹೆ ಕೊಡುತ್ತಾ ಭಯಂಕರ ರಗಳೆ ಮಾಡುತ್ತಿರುತ್ತಾರೆ. ಅದನ್ನು ನಂಬಿಕೊಂಡು ಹುಡುಗ ಹುಡುಗಿಯರೂ ತಾಯಿತ ಹಾಕಿಕೊಂಡು, ಕೈಗೊಂದು ದಾರ ಕಟ್ಟಿಕೊಂಡು ಓಡಾಡುತ್ತಾರೆ.
ನಮ್ಮ ಆತ್ಮವಿಶ್ವಾಸ, ಆರೋಗ್ಯವಂತ ಉಡಾಫೆ, ತಮಾಷೆ ಮಾಡುವ ಗುಣ ಮತ್ತು ನಮ್ಮ ಮೇಲೆ ನಮಗೇ ಇರುವ ನಂಬಿಕೆ ಕೂಡ ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿಕೊಂಡಿದೆಯೇನೋ ಎಂದು ಅನುಮಾನವಾಗುತ್ತದೆ.

Tuesday, May 4, 2010

ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ

ನಾಲ್ಕಕ್ಷರದ ಪದ. ಎಡದಿಂದ ಬಲಕ್ಕೆ. ಕ್ಲೂ: ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಮೇಲಿನಿಂದ ಕೆಳಕ್ಕೆ ಮೂರಕ್ಷರದ ಪದ. ಆ ಮೂರಕ್ಷರದ ಕೊನೆಯ ಅಕ್ಷರ ನಾಲ್ಕಕ್ಷರದ ಪದದ ಮೂರನೆಯ ಅಕ್ಷರ. ಮೇಲಿನಿಂದ ಕೆಳಕ್ಕೆ ಹುಡುಕಬೇಕಾದ ಮೂರಕ್ಷರದ ಪದದ ಕ್ಲೂ: ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ.

ವ್ಯಾಸರು ಯೋಚಿಸುತ್ತಾ ಹಾಗೇ ಜಗಲಿಯಲ್ಲಿ ಅಡ್ಡಾದರು. ಮಧ್ಯಾಹ್ನ ಎಂದಿಗಿಂತ ನಿಧಾನವಾಗಿ ಸಂಜೆಯತ್ತ ಹೆಜ್ಜೆ ಹಾಕುತ್ತಿತ್ತು. ಬಿಸಿಲಲ್ಲಿ ಓಡಾಡುವುದಕ್ಕಾಗದೇ ಗಾಳಿ ಉಸಿರುಬಿಗಿ ಹಿಡಿದುಕೊಂಡು ಕೂತು ಬಿಟ್ಟಿತ್ತು. ಮನೆ ಮುಂದಿನ ಅಡಕೆ ತೋಟ, ಅದರ ಪಕ್ಕದಲ್ಲಿರುವ ಅಪ್ಪಯ್ಯ ಬಿದ್ದು ಸತ್ತ ಬಾವಿ, ಮಗ ಸಾಯುವ ಹಿಂದಿನ ದಿನದ ತನಕವೂ ಓಡಿಸುತ್ತಿದ್ದ ಸೈಕಲ್ಲು ಎಲ್ಲವೂ ಕಣ್ಣು ಕುಕ್ಕುವ ಬಿಸಿಲಿನಲ್ಲಿ ಹಳದಿ ಹಳದಿಯಾಗಿ ಕಾಣಿಸುತ್ತಿತ್ತು.

ಹಾಳಾಗಿ ಹೋಗಲಿ ಎಂದುಕೊಂಡು ವ್ಯಾಸರು ಪತ್ರಿಕೆಯನ್ನು ಮಡಿಚಿ ಗಾಳಿ ಹಾಕಿಕೊಂಡರು. ಎದೆಯುರಿ ಕಡಿಮೆಯಾಯಿತು ಅನ್ನಿಸಲಿಲ್ಲ. ಮನೆಯ ಹಿಂಬದಿಯಲ್ಲಿ ಹಸಿದ ಹಸು ಅಂಬಾ ಎಂದು ಕೂಗಿಕೊಂಡಿತು. ಮೋಹನ ಬರಲಿಲ್ಲ, ಹಸುವಿಗೆ ಹುಲ್ಲು ಹಾಕಲಿಲ್ಲ. ತಾನಾದರೂ ಹಾಕಬಹುದಿತ್ತು ಅಂದುಕೊಂಡರು. ಎದ್ದು ಹೋಗುವ ಮನಸ್ಸಾಗಲಿಲ್ಲ. ಕಣ್ಮುಚ್ಚಿ ಮಲಗಲು ಯತ್ನಿಸಿದರು. ಮತ್ತೆ ಪದಬಂಧ ಕಾಡಿತು.

ತನಗೂ ಸವಾಲಾಗುವ ಪದಬಂಧ ಇರುವುದಕ್ಕೆ ಸಾಧ್ಯವಾ? ಅಥವಾ ಬುದ್ಧಿಗೆ ಗೆದ್ದಲು ಹಿಡಿದಿದೆಯಾ? ಎಂತೆಂಥಾ ಪದಗಳನ್ನೆಲ್ಲ ಬಿಡಿಸಿಲ್ಲ ತಾನು. ಅವಧಾನಕ್ಕೆ ಕೂತಾಗ ಎಂತೆಂಥಾ ಸಮಸ್ಯೆಗಳನ್ನು ಅದೆಷ್ಟು ಸುಲಭವಾಗಿ ಪರಿಹರಿಸಿಲ್ಲ. ಅಪ್ರಸ್ತುತ ಪ್ರಸಂಗದಲ್ಲಾಗಲೀ, ಅರ್ಥವಿಲ್ಲದ ಕಾವ್ಯದ ಕೊನೆಯ ಸಾಲನ್ನು ಮುಂದಿಟ್ಟುಕೊಂಡು ಅವರು ರಚಿಸಿದ ಷಟ್ಪದಿಯಲ್ಲಿ ಕಾವ್ಯ ಕಟ್ಟುವುದನ್ನಾಗಲೀ ಎಷ್ಟು ಸೊಗಸಾಗಿ ಮಾಡಿಲ್ಲ? ಈಗ ಇದೊಂದು ಸುಡುಗಾಡು ಪದ ಅವಳ ಹಾಗೆ ಕಾಡುತ್ತಿದೆಯಲ್ಲ?

ಇಲ್ಲ, ಅದನ್ನು ಬಿಡಿಸಿಯೇ ತೀರುತ್ತೇನೆ ಎಂದುಕೊಂಡು ವ್ಯಾಸರು ಎದ್ದು ಕೂತರು. ಪ್ರೇಮದ ಅವಸ್ಥಾಂತರಗಳಲ್ಲಿ ಯಾತನೆಯದ್ದು ಯಾವುದು, ಮಧುರವಾದದ್ದು ಯಾವುದು? ಭಗ್ನಪ್ರೇಮವೇ ಯಾತನೆಯದ್ದಾಗಿರಬಹುದೇ? ಅದರಲ್ಲಿ ಮಾಧುರ್ಯ ಎಲ್ಲಿಂದ ಬರಬೇಕು? ಒಡೆದು ಹೋದದ್ದು ಯಾವತ್ತೂ ಮಧುರವಾಗಿರಲಿಕ್ಕೆ ಸಾಧ್ಯವೇ ಇಲ್ಲ. ಅವೆರಡೂ ಭಾವನೆಗಳೂ ಒಂದಾಗಿರುವಂಥ ಸ್ಥಿತಿ ಯಾವುದು ಹಾಗಿದ್ದರೆ?

ಸುಕನ್ಯೆ ಬಿರುಬಿಸಿಲಲ್ಲಿ ಪ್ರತ್ಯಕ್ಷಳಾದಳು. ವ್ಯಾಸರು ಶಾಂಭವಿನದಿಯ ತೀರದಲ್ಲಿ ಕೂತಿದ್ದರು. ಪರಾಶರರಿಗೂ ಮತ್ಯ್ಸಗಂಧಿ ಸಿಕ್ಕಿದ್ದು ಗಂಗಾತೀರದಲ್ಲೇ ತಾನೇ? ಅದು ಗಂಗಾನದಿಯೋ ಸರಯೂ ನದಿಯೋ ಮರೆತುಹೋಯಿತು. ಸುಕನ್ಯಾಳನ್ನು ನೋಡಿದ ದಿನ ತಾನು ಇದನ್ನೆಲ್ಲ ಯೋಚಿಸಿದ್ದೆನಾ? ಅವಳೊಂದು ಹೆಣ್ಣಾಗಿ, ತಾನೊಂದು ಗಂಡಾಗಿ ಅಲ್ಲಿ ಎದುರುಬದುರಾಗಿದ್ದೆವು. ಆ ಭೇಟಿಗೆ ಯಾವ ಕಾವ್ಯದ ಹಂಗೂ ಬೇಕಿರಲಿಲ್ಲ. ವಯಸ್ಸಾಗುತ್ತಾ ಆಗುತ್ತಾ ಎಲ್ಲದಕ್ಕೂ ರೆಫರೆನ್ಸುಗಳನ್ನು ಹುಡುಕುತ್ತಾ ಹೋಗುತ್ತದಲ್ಲ ಮನಸ್ಸು? ಯಾಕೆ ಬೇಕು ಅದೆಲ್ಲ, ಸಮರ್ಥನೆಗೋ, ಆ ಭೇಟಿಗೆ ಮತ್ತಷ್ಟು ಹೊಳಪು ಬರುವುದಕ್ಕೋ, ಚರಿತ್ರೆಯ ಜೊತೆಗೋ ಪುರಾಣದ ಜೊತೆಗೋ ಅದನ್ನು ತಳಕು ಹಾಕಿ ಅಜರಾಮರವಾಗಿಸುವುದಕ್ಕೋ?

ಸುಕನ್ಯೆ ಸುಮ್ಮನೆ ನಕ್ಕಿದ್ದಳು. ಕತೆ ಬರೆಯೋದಕ್ಕೆ ಬಂದು ಕೂತಿದ್ದೀರೋ ಹೇಗೆ ಎಂದು ಸಹಜವಾಗಿ ಕೇಳಿದ್ದಳು. ತಾನು ಕತೆ ಬರೆಯುತ್ತೇನೆ ಅನ್ನುವುದು ಅವಳಿಗೆ ಹೇಗೆ ಗೊತ್ತಾಯಿತೋ? ವ್ಯಾಸರು ಏನೂ ಹೇಳದೇ ಸುಮ್ಮನೆ ಅವಳನ್ನು ದಿಟ್ಟಿಸಿದ್ದರು. ತನ್ನ ಕತೆಯ ಬಗ್ಗೆ ಅವಳು ಮತ್ತಷ್ಟು ಕೇಳಲಿ, ಅವಳು ತನ್ನ ಕತೆಗಳನ್ನು ಓದಿರಲಿ ಎಂದು ಹಾರೈಸಿದ್ದರು.

ಅವಳು ಅದೇನೂ ಹೇಳದೇ ಹೊರಟು ಹೋಗಿದ್ದಳು. ಹಾಗೆ ಹೊರಟು ಹೋದವಳು ತನ್ನ ಮನಸ್ಸಿನಿಂದಾಚೆ ಹೋಗಲೇ ಇಲ್ಲವಲ್ಲ ಎಂದುಕೊಂಡರು ವ್ಯಾಸ. ಸೌಭಾಗ್ಯಳನ್ನು ಮದುವೆಯಾಗಿ ಮೂವತ್ತು ವರ್ಷವಾದ ನಂತರವೂ ಕಾಡುತ್ತಾಳೆ. ಬಿರುಬಿಸಿಲಲ್ಲಿ ನಡೆದು ಬರುತ್ತಾಳೆ. ಹೊಳೆಯ ಬದಿಗೆ ಹೋದರೆ ಪ್ರತ್ಯಕ್ಷವಾಗುತ್ತಾಳೆ. ಕತೆ ಬರೆಯೋದಕ್ಕೆ ಬಂದಿರೋ ಎಂದು ಕೇಳುತ್ತಾಳೆ. ತಾನು ಕೈಲಿರುವ ಪುಸ್ತಕ, ಪೆನ್ನು ಎಸೆದು ವಾಪಸ್ಸು ಬರುತ್ತೇನೆ. ವ್ಯಾಸರೇ, ಕತೆ ಕೊಟ್ಟಿಲ್ಲ ನೀವು. ಎಷ್ಟು ತಡಮಾಡ್ತೀರಪ್ಪ ಎಂದು ಸಂಪಾದಕರು ಫೋನು ಮಾಡುತ್ತಾರೆ. ಯಾಕೆ ತಡಮಾಡಿದೆ ಎಂದು ಹೇಳುವುದಾದರೂ ಹೇಗೆ?

ಸುಕನ್ಯೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ತಾನು ಭ್ರಮಿಸಿದ್ದಾದರೂ ಹೇಗೆ? ಅದು ಭ್ರಮೆಯೇ. ಅವಳು ಕೇಳಿದ್ದು ಒಂದೇ ಪ್ರಶ್ನೆ. ಅದಕ್ಕೆ ತಾನು ಉತ್ತರವನ್ನೂ ಕೊಟ್ಟಿರಲಿಲ್ಲ. ಹಾಗೆ ನಡೆದುಹೋದವಳು ಶಾನುಭೋಗ ಸದಾಶಿವಯ್ಯನ ಮಗಳು ಎನ್ನುವುದೂ ತನಗೆ ಆಗ ಗೊತ್ತಿರಲಿಲ್ಲ. ಅವಳು ಯಾರೆನ್ನುವುದು ಪತ್ತೆ ಮಾಡುವುದಕ್ಕೆ ತಿಂಗಳು ಹಿಡಿಯಿತು. ಎರಡನೆಯ ಸಾರಿ ಅವಳು ಎದುರಾದದ್ದು ಗುರುವಾಯನಕೆರೆಯ ದಂಡೆಯಲ್ಲಿ. ಬತ್ತಿಹೋದ ಕೆರೆಯಂಗಣದಲ್ಲಿ ಕ್ರಿಕೆಟ್ಟು ಆಡುತ್ತಾ ನಿಂತ ಹುಡುಗರನ್ನು ನೋಡುತ್ತಾ ನಿಂತವಳನ್ನು ವ್ಯಾಸರೇ ಮಾತಾಡಿಸಿದ್ದರು.

ನೀನು ಆಟ ಆಡೋದಿಲ್ವಾ?’

ಅವಳು ಮಾತನಾಡಿರಲಿಲ್ಲ. ಇಳಿದ ಹಗಲಲ್ಲಿ ಕೆರೆಯೊಳಗೆ ಇಳಿದು, ಆಟವಾಡುತ್ತಿದ್ದ ಹುಡುಗರ ನಡುವಿದ್ದ ಒಬ್ಬನನ್ನು ಕೈ ಹಿಡಿದು ಎಳಕೊಂಡು ಹೊರಟೇ ಬಿಟ್ಟಿದ್ದಳು. ಅವಳ ತಮ್ಮನಿರಬೇಕು. ಇನ್ನೂ ಆಡಬೇಕು ಎಂದು ರಚ್ಚೆ ಹಿಡಿದು ಅಳುತ್ತಿದ್ದ. ಅವಳು ದರದರ ಎಳೆದುಕೊಂಡು ಹೊರಟೇ ಬಿಟ್ಟಿದ್ದಳು; ತನ್ನನ್ನೂ.

ಮಾರನೆಯ ಬೆಳಗ್ಗೆ ರಂಜೆ ಹೂವು ಹೆಕ್ಕುತ್ತಿದ್ದಾಗ ಅವಳೇ ಕಣ್ಮುಂದೆ ಬಂದಿದ್ದಳು. ಅವಳನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿತ್ತು. ಹೊಳೆದಂಡೆಗೆ, ಕೆರೆದಂಡೆಗೆ ನಿತ್ಯವೂ ಓಡಾಡಿದ್ದಾಯಿತು. ಅವಳು ಎಷ್ಟು ತಿಣುಕಾಡಿದರೂ ಹೊರಗೆ ಬರದ ಕತೆಯ ಹಾಗೆ ಅದೆಲ್ಲೋ ಕಣ್ಮರೆಯಾಗಿದ್ದಳು. ಮತ್ತೆ ಅವಳನ್ನು ವ್ಯಾಸರು ನೋಡಿದ್ದು ಶಾನುಭೋಗರ ಜೊತೆ. ಅವರ ಹಳೆಯ ಆಸ್ಟಿನ್ ಆಫ್ ಇಂಗ್ಲೆಂಡ್ ಕಾರಲ್ಲಿ ಕೂತು ಹೋಗುವಾಗ ತನ್ನನ್ನು ನೋಡಿ ಕೈ ಬೀಸಿದ್ದಳು. ಎತ್ತರದಲ್ಲಿರುವ ಹುಡುಗಿಯರು ತಗ್ಗಿನಲ್ಲಿ ನಿಂತ ಹುಡುಗರತ್ತ ಕೈ ಬೀಸುತ್ತಾರೆ.

ಅವಳು ಕೈ, ನೀಳ ಬೆರಳು, ಗಾಳಿಗೆ ಹಾರುತ್ತಿದ್ದ ಕುರುಳು, ಅವಳು ತೊಟ್ಟುಕೊಂಡಿದ್ದ ಪುಗ್ಗೆತೋಳಿನ ಅಂಗಿ, ಅವಳು ಬಿಟ್ಟುಹೋದ ನಗು ಎಲ್ಲವೂ ಸೇರಿಕೊಂಡು ಮತ್ತೊಂದು ವಿಚಿತ್ರ ಜಗತ್ತನ್ನೇ ಕಟ್ಟಿಕೊಟ್ಟ ಸಂಭ್ರಮದಲ್ಲಿ ತಾನು ಮೊದಲ ಕತೆ ಬರೆದಿದ್ದೆ. ಅದಕ್ಕೆ ಬಹುಮಾನ ಬಂದಿತ್ತು. ಅದನ್ನು ಶಾನುಭೋಗರಿಗೆ ತೋರಿಸಲಿಕ್ಕೆಂದು ಅಮ್ಮ ಹೊರಟು ನಿಂತಾಗ ತಾನೂ ಹೋಗಿದ್ದೆ. ಸುಕನ್ಯಾಳೇ ಕಾಫಿ ತಂದುಕೊಟ್ಟಿದ್ದಳು. ಕತೆ ಓದಿ ಹೇಳು ಅಂದಿದ್ದರು ಶಾನುಭೋಗರು. ತೊದಲುತ್ತಲೇ ಓದಿದ್ದೆ. ಹರೆಯದ ಬೆಚ್ಚನೆಯ ವಿವರಗಳು ಬಂದಾಗ ಸುಕನ್ಯಾಳತ್ತ ನೋಡಿದರೆ, ಆಕೆ ಮುಗುಳ್ನಗುತ್ತಿದ್ದಳು. ಹೆಮ್ಮೆಯಿಂದ ಕತೆ ಓದಿ ಮುಗಿಸುವ ಹೊತ್ತಿಗೆ ಶಾನುಭೋಗರು ಗಂಭೀರವಾಗಿದ್ದರು. ನಿನ್ನ ಮಗನಿಗೆ ಭಗತ್ ಸಿಂಗ್,ವಿವೇಕಾನಂದರ ಬಗ್ಗೆ ಬರೆಯೋದಕ್ಕೆ ಹೇಳು.. ಈ ಸುಡುಗಾಡು ಕತೆ ಯಾಕೆ ಬರೀತಾನಂತೆ‘ ಎಂದು ಎದ್ದು ಹೋಗಿದ್ದರು. ಅವರು ಹೋದ ನಂತರ ಸುಕನ್ಯಾ, ನಂಗಿಷ್ಟ ಆಯ್ತು’ ಎಂದಿದ್ದಳು.

ಆಮೇಲೆ ತಾನೇ ನಿತ್ಯವೂ ಶಾನುಭೋಗರ ಮನೆಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದದ್ದು, ಸುಮ್ಮಸುಮ್ಮನೆ ಅವರ ಮನೆಗೆ ಹೋಗುತ್ತಿದ್ದದ್ದು, ಸುಕನ್ಯಾ ಏಕವಚನದಲ್ಲಿ ಮಾತಾಡಿಸಲು ಶುರು ಮಾಡಿದ್ದು, ಅವಳಿಗೆ ಇಷ್ಟ ಎಂದು ಒಂದರ ಮೇಲೊಂದು ಕತೆ ಬರೆಯುತ್ತಾ ಹೋದದ್ದು, ಆ ಕತೆಗಳಲ್ಲಿ ಅವಳೇ ಕಾಣಿಸಿಕೊಳ್ಳುತ್ತಿದ್ದದ್ದು, ಒಂದು ಕತೆಯಲ್ಲಿ ಅವಳನ್ನು ಯಥವತ್ತಾಗಿ ಸೃಷ್ಟಿಸಿ ಅವಳಿಗೇ ಓದಲು ಕೊಟ್ಟದ್ದು. ಸುಕನ್ಯಾ ಅದನ್ನು ಓದಿ ನಕ್ಕಿದ್ದಳು. ಅದು ನಾನು ಪ್ರೀತಿಸೋ ಹುಡುಗಿ ಅಂದಿದ್ದೆ. ಅವಳು ಮತ್ತಷ್ಟು ನಕ್ಕಿದ್ದಳು. ತಾನು ಅವಳ ಕೈ ಹಿಡಿದುಕೊಂಡಿದ್ದೆ. ಅವಳು ಸರಕ್ಕನೆ ಕೈ ಹಿಂದಕ್ಕೆ ಎಳೆದುಕೊಂಡಿದ್ದಳು. ಸಿಟ್ಟಿನಿಂದ ಎದ್ದು ಹೋಗಿದ್ದಳು. ತಾನು ಎದ್ದು ಬರುವಾಗ ಇದ್ದಕ್ಕಿದ್ದಂತೆ ಬಂದು ತಬ್ಬಿಕೊಂಡಿದ್ದಳು. ಭಾನುವಾರ ಮನೆಗೆ ಬಾ, ಯಾರೂ ಇರೋಲ್ಲ ಅಂದಿದ್ದಳು.

ಭಾನುವಾರಕ್ಕೆ ಮೂರು ದಿನ ಉಳಿದಿತ್ತು

ಕ್ಲೂ: ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ. ವ್ಯಾಸರು ವಿರಹ’ ಎಂದು ಬರೆದು ಖುಷಿಯಲ್ಲಿ ನಕ್ಕರು. ನಗುವುದಕ್ಕೆ ಕಾರಣಗಳಿರಲಿಲ್ಲ ಎನ್ನುವುದು ಅವರಿಗೆ ಆಮೇಲೆ ಹೊಳೆಯಿತು.

ಭಾನುವಾರ ಬಂತು, ಬರಲಿಲ್ಲ. ಶಾನುಭೋಗರ ಮನೆಗೆ ಭಾನುವಾರ ಹೋದವನಿಗೆ ಕಂಡದ್ದು ಮುಚ್ಚಿದ ಬಾಗಿಲು. ಶಾನುಭೋಗರ ಕುಟುಂಬ ಹೈದರಾಬಾದಿಗೆ ಹೋಗಿತ್ತು. ಸುಕನ್ಯಾಳಿಗೆ ಮದುವೆ ಗೊತ್ತಾಗಿತ್ತು. ಹುಡುಗ ಅದ್ಯಾವುದೋ ದೇಶದಲ್ಲಿದ್ದನಂತೆ. ಅಲ್ಲಿಗೆ ಹೋದವರು ಮದುವೆ ಮುಗಿಸಿಕೊಂಡೇ ಮರಳಿದರು. ಹುಡುಗನಿಗೆ ಪುರುಸೊತ್ತಿರಲಿಲ್ಲ.

ತಾನು ಆಮೇಲೆ ಬರೆದ ಕತೆಗಳಲ್ಲಿ ಮದುವೆಯಾಗಿ ದೂರದೇಶಕ್ಕೆ ಹೋಗಿ, ಅಲ್ಲಿ ಏಕಾಂತದಲ್ಲಿ ನರಳುವ, ಹಿಂಸೆ ಕೊಡುವ ನಪುಂಸಕ ಗಂಡನಿಂದ ಪಡಬಾರದ ಪಾಡುಪಡುವ, ಮನೆಯೊಳಗೆ ಕೂತು ಕೂತು ನಗುವುದನ್ನೇ ಮರೆತು ಹುಚ್ಚಿಯಂತಾದ ಹೆಣ್ಮಕ್ಕಳೇ ಕಾಣಿಸಿಕೊಳ್ಳುತ್ತಿದ್ದರಲ್ಲ. ಅದು ತನ್ನ ಆಶೆಯಾಗಿತ್ತಾ, ಅವಳ ಸ್ಥಿತಿಯಾಗಿತ್ತಾ, ತಾನು ಅವಳ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಹಾಗೆ ಬರೆಯುತ್ತಿದ್ದೆನಾ?

ಅಥವಾ ನನ್ನ ಯಾತನೆಯಾಗಿತ್ತಾ ಅದು’ ವ್ಯಾಸರು ಗೊಣಗಿಕೊಂಡು ಅಂಗಳ ನೋಡಿದರು. ಕಂಬಳಿಹುಳವೊಂದು ಬಿಸಿಲಿನಿಂದ ನೆರಳಿನತ್ತ ನಿಧಾನ ತೆವಳಿಕೊಂಡು ಬರುತ್ತಿತ್ತು. ಇನ್ನೇನು ನೆರಳನ್ನು ತಲುಪಿತು ಅನ್ನುವಷ್ಟರಲ್ಲಿ ಕಾಗೆಯೊಂದು ಹಾರಿಬಂದು ಅದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋಯಿತು.

*******

ಮಧ್ಯಾಹ್ನಗಳನ್ನು ನಾನು ಪ್ರೀತಿಸುವುದಿಲ್ಲ. ನನಗೆ ಅಪರಾತ್ರಿಗಳೆಂದರೆ ಇಷ್ಟ. ಅಂಥ ಹೊತ್ತಲ್ಲಿ ಅವಳು ಮರಳಿ ಬರುತ್ತಾಳೆ. ಸತ್ತು ಹೋದ ನನ್ನ ಮಗ ಕಾಣಿಸುತ್ತಾನೆ. ಹೇಳದೇ ಕೇಳದೇ ಓಡಿಹೋದ, ಎಲ್ಲೋ ಹುಚ್ಚಿಯಂತೆ ಅಡ್ಡಾಡುತ್ತಿರುವ ನನ್ನ ಹೆಂಡತಿ ಇರುತ್ತಾಳೆ. ಅವರೆಲ್ಲ ಯಾವ ಸ್ಥಿತಿಯಲ್ಲಿದ್ದರೂ ನನಗೆ ಸಹ್ಯವೇ. ನಾನು ಒಂಟಿಯಾಗಿರಲು ಇಷ್ಟಪಡುವುದಿಲ್ಲ…

ಅಷ್ಟು ಬರೆದು ವ್ಯಾಸರು ಮುಂದೇನೂ ತೋಚದೇ ಕೂತಿದ್ದರು. ಕತೆಗಳಲ್ಲಿ ತನ್ನೊಳಗಿನ ಇಷ್ಟಿಷ್ಟನ್ನೇ ಕತ್ತರಿಸಿ ತೆಗೆದು ಹವಿರ್ಭಾಗದಂತೆ ಕಥಾಗ್ನಿಗೆ ಅರ್ಪಿಸುತ್ತಾ ಹೋಗುತಿದ್ದೇನಲ್ಲ ಅನ್ನಿಸಿತು. ಕೊನೆಗೆ ನಾನು ಏನಾಗಿ ಉಳಿಯುತ್ತೇನೆ. ಇಡೀ ಮನೆಯಲ್ಲಿ ತಾನೊಬ್ಬನೇ. ತನ್ನ ಓದುಗರ ಪಾಲಿಗಿದು ನಿಗೂಢ. ಸಂಭ್ರಮ. ಕಾಡಿನ ನಡುವಿನ ಕಟ್ಟೇಕಾಂತದಲ್ಲಿ ಕುಳಿತು ಕತೆಗಳನ್ನು ಸೃಷ್ಟಿಸುವ ಸಂತ ಎಂದು ಮೆಚ್ಚಿಕೊಳ್ಳುತ್ತಾರೆ. ಹಳದಿ ಬಿಸಿಲಲ್ಲಿ ಏನೇನೋ ಕೇಳಿಸುತ್ತದೆ. ಏನೇನೋ ಕಾಣಿಸುತ್ತದೆ, ನಾನೇ ಅಲ್ಲಿ ಇರುವುದಿಲ್ಲ.

ಪುರವಣಿ ಸಂಪಾದಕ ಶಂಕರಯ್ಯ ಬರೆದಿದ್ದ ಪತ್ರವನ್ನು ವ್ಯಾಸರು ಮತ್ತೊಮ್ಮೆ ಓದಿದರು. ವಿಶೇಷಾಂಕ

ಸಿದ್ಧವಾಗುತ್ತಿದೆ. ನಿಮ್ಮ ಕತೆಯೊಂದೇ ಬಾಕಿ. ಎರಡು ದಿನಗಳೊಳಗೆ ಕೈ ಸೇರದೇ ಹೋದರೆ ಅನಾನುಕೂಲವಾಗುತ್ತದೆ.

ಅನಾನುಕೂಲವಾಗುತ್ತದೆ’ ವ್ಯಾಸರು ಸುಮ್ಮನೆ ಗೊಣಗಿಕೊಂಡರು. ಬಾವಿಗೆ ಬಿದ್ದು ಸತ್ತ ಅಪ್ಪ, ಅಪಘಾತದಲ್ಲಿ ತೀರಿಕೊಂಡ ಮಗ, ಹುಚ್ಚಿಯಾಗಿ ಅಲೆದಾಡುತ್ತಿರುವ ಹೆಂಡತಿ, ಮೋಸ ಮಾಡಿದವರು, ಆದರ ತೋರಿ ತಿರಸ್ಕಾರ ಮಾಡಿದವರು,ವಿಕ್ಷಿಪ್ತನಂತೆ ಯೋಚಿಸುವ ತಾನು- ಎಲ್ಲರ ಕುರಿತೂ ತಾನು ಬರೆದಿದ್ದಾಗಿದೆ. ಯಾವ ಗುಟ್ಟನ್ನೂ ಮುಚ್ಚಿಟ್ಟೇ ಇಲ್ಲ. ತನ್ನ ಕನಸಿನಲ್ಲಿ ಮೆಚ್ಚುಗೆಯಾದ ಹೆಣ್ಣುಗಳು, ತನ್ನ ವಿಕೃತಿ, ಒಳಗಿನ ಅತಿರೇಖ, ಅಸಹ್ಯ, ಯಾರೂ ಮೆಚ್ಚುವುದಕ್ಕೂ ಸಾಧ್ಯವಿಲ್ಲದ ಅನಿಸಿಕೆಗಳು- ಇವೆಲ್ಲವನ್ನೂ ಕತೆಗಳಲ್ಲಿ ಬೇರೆ ಬೇರೆ ಪಾತ್ರಗಳ ಮೂಲಕ ತಂದಾಗಿದೆ. ತಾನು ಸುಖಿಸದ ಹೆಣ್ಣುಗಳು ಕೂಡ ಪರಮ ಚಂಚಲೆಯರಾಗಿ ಕತೆಗಳಲ್ಲಿ ಮೂಡಿದ್ದಾರೆ. ಅವರ ಮೂಲಕ ಯಾರ್‍ಯಾರೋ ಯಾರ್‍ಯಾರನ್ನೋ ಕಂಡುಕೊಂಡು ಮೆಚ್ಚಿಕೊಂಡು ಯಾತನೆ ಅನುಭವಿಸಿ ಪತ್ರಬರೆದು ಸಾಂತ್ವನ ಬೇಡಿದ್ದಾರೆ. ಅವರಿಗೆಲ್ಲ ಎರಡೇ ಸಾಲಿನ ಉತ್ತರ: ನಿರೀಕ್ಷೆ ಇಲ್ಲದೆ ಬದುಕು, ನೆನಪುಗಳಿಲ್ಲದೆ ಸಾಯಿ. ಕ್ರೂರ ಸಾಲುಗಳು. ಏಪ್ರಿಲ್ ತಿಂಗಳ ಹಾಗೆ, ಬೆಂಬಿಡದ ಬಿಸಿಲು, ಬಾರದ ಮಳೆ,ಬೀಸದ ಗಾಳಿ, ತಲೆದೂಗದ ತೆಂಗು. ಸಾಯದ ತಾನು.

ಮತ್ತೆ ಪದಬಂಧ ಕೈಗೆತ್ತಿಕೊಂಡರು. ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಅರ್ಥವಾಗಲಿಲ್ಲ. ಕಾಳಿದಾಸ ಕಣ್ಮುಂದೆ ಬಂದ. ಅಲ್ಲಿ ಸಂಶಯಪಟ್ಟದ್ದು ದುಶ್ಯಂತ. ಅವನು ಶಕುಂತಲೆಯನ್ನು ನಿರಾಕರಿಸಿದ. ನಾಲ್ಕಕ್ಷರ.. ನಿರಾಕರಣೆ, ಐದಕ್ಷರ, ಪರಿತ್ಯಾಗ, ಮೂರನೆಯ ಅಕ್ಷರ ಹ. ಮೇಲಿನಿಂದ ಕೆಳಕ್ಕೆ ಬಂದ ವಿರಹ ಸರಿಯಾಗಿದ್ದರೆ.

ಅಪ್ಪ ಸತ್ತದ್ದು ತನ್ನ ಮೇಲಿನ ರೇಜಿಗೆಯಿಂದಲೋ ಅಮ್ಮನ ಮೇಲಿನ ಸಿಟ್ಟಿನಿಂದಲೋ. ತನ್ನನ್ನು ಮಗ ಅಂತ ಅವರು ಒಪ್ಪಿಕೊಳ್ಳಲೇ ಇಲ್ಲ. ಮೈಮೇಲೆಲ್ಲ ಬೆಳ್ಳಗೆ ಬೆಳಗ್ಗೆ ಮಚ್ಚೆ. ವಿಕಾರವಾಗಿ ಪ್ರೇತದಂತೆ ಕಾಣುತ್ತಿದ್ದ ಅಪ್ಪನನ್ನು ಅಮ್ಮ ಕೂಡಲು ನಿರಾಕರಿಸಿ ಜಗಳಾಡುತ್ತಿದ್ದದ್ದು ಕಿವಿಗೆ ಅಪ್ಪಳಿಸಿತು. ಅಪ್ಪ ಬಾಗಿಲಿಗೆ ತಲೆ ಚಚ್ಚಿಕೊಂಡು ಗದ್ದಲ ಮಾಡುತ್ತಿದ್ದ. ಸಾಯುತ್ತೇನೆ ಅನ್ನುತ್ತಿದ್ದ. ಅಂಥ ಅಸಹಾಯಕತೆಗೆ ಅಪ್ಪನನ್ನು ಒಡ್ಡಿದ್ದಾದರೂ ಯಾಕೆ. ಅಮ್ಮನ ಕನಸೇನಿತ್ತು? ಅವಳೂ ತನ್ನ ಹಾಗೆ ಯಾರನ್ನೋ ಪ್ರೀತಿಸಿದ್ದಳಾ? ಸುಕನ್ಯಾಳೂ ಹೀಗೇ ಆಡುತ್ತಿರಬಹುದಾ?

ಮಗನೂ ತನ್ನನ್ನು ಒಂದು ದಿನವಾದರೂ ಮಾತಾಡಿಸಲಿಲ್ಲ. ದಿಟ್ಟನಂತೆ ಎದುರು ಬಂದು ನಿಲ್ಲುತ್ತಿದ್ದ. ತನ್ನ ಕತೆಗಳನ್ನೂ ಅವನೂ ಓದಿಲ್ಲ ಅಂದುಕೊಂಡಿದ್ದೆ. ಒಂದು ದಿನ ಅವನ ಪೆಟ್ಟಿಗೆಯಲ್ಲೇ ಅಷ್ಟೂ ಕತೆಗಳೂ ಸಿಕ್ಕವಲ್ಲ. ತನಗಿಷ್ಟವಾದದ್ದಕ್ಕೋ ಆಗದೇ ಇದ್ದದ್ದಕ್ಕೋ ಅಲ್ಲಲ್ಲಿ ಕೆಲವು ಸಾಲುಗಳ ಕೆಳಗೆ ಗೆರೆ ಎಳೆದಿದ್ದ. ಅಲ್ಲಿ ಅವನಿಗೆ ತನ್ನ ವಿಕೃತಿಯೇ ಕಾಣಿಸಿರಬೇಕು. ವಿರಹದ, ಯಾತನೆಯ, ಅಂಗಲಾಚಿದ ಸಾಲುಗಳೇ ಅವನಿಗೆ ಇಷ್ಟವಾಗಿದ್ದವು. ಅವನೂ ಯಾರನ್ನೋ ಪ್ರೀತಿಸುತ್ತಿದ್ದನಾ?ದೊಡ್ಡ ಮನೆ, ಒಳ್ಳೆಯ ಊಟ, ತಂಗಾಳಿ, ಕಣ್ಣಿಗೆ ಹಸಿರು, ದೂರದಲ್ಲಿ ಕಾಣುವ ಬೆಟ್ಟಸಾಲು, ಮಲಗಿದ್ದರೆ ಒಳ್ಳೆಯ ನಿದ್ದೆ,ಓದುವುದಕ್ಕೆ ಎಷ್ಟು ಬೇಕೋ ಅಷ್ಟು ಪುಸ್ತಕ. ಅಷ್ಟಿದ್ದರೂ ಪ್ರೀತಿ ಬೇಕಾಗುತ್ತಾ? ಏನು ಬೇಕಿತ್ತು ಅವನಿಗೆ. ಕುಡಿದು ಲಾರಿಯಡಿಗೆ ಸಿಕ್ಕು ಸತ್ತ ಅನ್ನುವುದು ನಿಜವಾ? ಕುಡಿದಿದ್ದು ಅವನಾ, ಲಾರಿ ಡ್ರೈವರ್ರಾ?

ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಭಾಸ ನಾಟಕಕಾರನಾ? ಮತ್ಯಾರಿದ್ದಾರೆ. ಷೇಕ್ಸ್‌ಪಿಯರ್. ದುರಂತ ನಾಟಕಕಾರ. ಅದಕ್ಕೇನನ್ನುತ್ತಾರೆ? ಟ್ರಾಜಿಡೀ, ಶೋಕನಾಟಕ, ದುರಂತನಾಟಕ. ಮೂರನೆಯ ಅಕ್ಷರ ಹ. ವಿನಾಕಾರಣ ಸಂಶಯ.

ಸೌಭಾಗ್ಯಳಿಗೆ ಯಾರ ಹುಚ್ಚು? ತಾನೇನೂ ಅವಳಿಗೆ ಅಡ್ಡಿಯಾಗಿರಲಿಲ್ಲ. ಮಗ ಸತ್ತ ದುಃಖದಿಂದ ಅವಳು ಹೊರಬರಲಿಲ್ಲ ಎಂದುಕೊಳ್ಳಲೇ? ಮಗ ಸತ್ತಿದ್ದು ತನ್ನಿಂದಲೇ ಎಂದವಳು ಭಾವಿಸಿದಂತಿತ್ತಲ್ಲ. ಅಂಥದ್ದೇನು ಮಾಡಿದ್ದೇನೆ. ಯಾಕೆ ನನ್ನ ಕುರಿತು, ನಮ್ಮ ಕುರಿತು ಬರೆಯಬಾರದು? ಬಗೆದು ಅಗೆದು ತೆಗೆಯದ ಹೊರತು ಕತೆ ಹೇಗೆ ಬಂದೀತು. ಹಾಗೆ

ಬರೆಯದೇ ಹೋದರೆ ನಾನು ಅನಾಮಿಕ. ಕತೆ ಹುಟ್ಟದ ದಿನ ಬರೀ ಹಳದಿ ಬಿಸಿಲು. ಅದಕ್ಕೊಂದು ಅರ್ಥವಿಲ್ಲ, ಪಾತ್ರವೇ ಇಲ್ಲದಿದ್ದರೆ ಮಾತುಗಳನ್ನು ಯಾರು ಆಡುತ್ತಾರೆ, ಭಾಷೆ ಯಾಕೆ ಬೇಕು? ಕವಿತೆ ಯಾರಿಗೋಸ್ಕರ.

ಹಳದಿ ಬಿಸಿಲು ಮಂದವಾಗುತ್ತಾ ಸಾಗುತ್ತಿತ್ತು. ಗುಪ್ಪೆ ಗುಪ್ಪೆಯಾಗಿ ಕಾಣಿಸುತ್ತಿದ್ದ ಕಾಡು. ರೆಂಜೆ ಹೂವಿನ ಮರದ ಮೇಲ್ಗಡೆ ಬಿಳಿಬಿಳಿಯ ಹಕ್ಕಿಗಳು ಕೂತಿದ್ದವು. ಅವು ಥಟ್ಟನೆ ಹಾರಿಹೋಗುವುದನ್ನು ಕಾಯುತ್ತಾ ವ್ಯಾಸರು ಸುಮ್ಮನೆ ಕೂತರು. ಕತೆ ಕೇಳಿ ಬರೆದ ಶಂಕರಯ್ಯನ ಪತ್ರ ಇನ್ನೊಂದಷ್ಟು ರಹಸ್ಯಗಳನ್ನು ಹೊರಗೆ ಹಾಕು, ನಿನ್ನ ಆತ್ಮವನ್ನೇ ಹವಿಸ್ಸಾಗಿ ಅರ್ಪಿಸು ಎಂದು ಕರೆಯುತ್ತಿತ್ತು.

ಸುಕನ್ಯಾ ಸುಖವಾಗಿಲ್ಲ ಎಂದು ಬರೆಯಬೇಕು ಅನ್ನಿಸಿತು. ಅವಳನ್ನು ತಾನು ಅನುಭವಿಸಿದ್ದನ್ನು ಬರೆಯಬೇಕು. ಅವಳ ಹೆಸರು ಹಾಕಿಯೇ ಬರೆಯಬೇಕು. ಏನಾಗುತ್ತೋ ಆಗಲಿ. ಅವಳು ಓದಿದರೂ ಓದಲಿ. ಓದಬೇಕು. ಅವಳಿಗೆ ಗೊತ್ತಿದ್ದವರಿಗೆ ಎಲ್ಲರಿಗೂ ಗೊತ್ತಾಗಬೇಕು. ಅವಳನ್ನು ವಿಕೃತವಾಗಿ ಸೃಷ್ಟಿಸಬೇಕು ಅಂದುಕೊಂಡರು. ಅದೇ ನಿರ್ಧಾರದಲ್ಲಿ ಎದ್ದು ಬರೆಯುವ ಕೋಣೆಗೆ ಬಂದರು. ಮರೆತು ಎತ್ತಿಕೊಂಡು ಬಂದ ಪದಬಂಧದ ಪೇಪರನ್ನು ಸಿಟ್ಟಿನಿಂದ ಎಸೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಸುಕನ್ಯೆ ಅರಳತೊಡಗಿದಳು, ಮರಳತೊಡಗಿದಳು.

*******

ಹಿಂದಿನ ದಿನ ಕೈ ಕೊಟ್ಟಿದ್ದಕ್ಕೆ ವ್ಯಾಸರು ಬೈಯುತ್ತಾರೆ ಅಂತ ಹೆದರುತ್ತಲೇ ಬಂದ ಮೋಹನ ವ್ಯಾಸರ ಬರೆಯುವ ಕೋಣೆಯ ಬಾಗಿಲು ಹಾಕಿದ್ದನ್ನು ನೋಡಿದ. ಒಳಗೆ ಕೂತು ಬರೆಯುತ್ತಿರಬೇಕು ಅಂತ ಹೊರಗೇ ನಿಂತು ಕಾದ. ಕಾದು ಕಾದು ಬೇಸರಾಗಿ ಅಲ್ಲೇ ಬಿದ್ದಿದ್ದ ಪೇಪರ್ ಕೈಗೆತ್ತಿಕೊಂಡ. ವ್ಯಾಸರು ತುಂಬಿದ ಪದಬಂಧವನ್ನು ನೋಡುತ್ತಾ ಬಂದ. ಕಷ್ಟದ ಪದಗಳನ್ನೆಲ್ಲ ಎಷ್ಟು ಸಲೀಸಾಗಿ ತುಂಬಿದ್ದಾರೆ ಎಂದು ಬೆರಗಾದ. ಒಂದು ಪದವನ್ನು ಮಾತ್ರ ಯಾಕೆ ತುಂಬದೇ ಬಿಟ್ಟಿದ್ದಾರೆ ಎಂದು ಯೋಚಿಸಿದ. ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ.

ಅರೆಕ್ಷಣ ಯೋಚಿಸಿದ ಮೋಹನ ಸಂಶಯದ ನಾಟಕಕಾರ ಸಂಸರಲ್ಲವೇ’ ಎಂದುಕೊಂಡ. ಮೇಲಿಂದ ಕೆಳಕ್ಕೆ ವಿರಹ. ಮೂರನೆಯ ಅಕ್ಷರ ಹ’.

ಆತ್ಮಹತ್ಯೆ’ ಎಂದು ಬರೆದು ಅದನ್ನು ವ್ಯಾಸರು ಮರೆತು ಬಿಟ್ಟಿರಬಹುದಾ, ಅರ್ಥವಾಗದೇ ಬಿಟ್ಟಿರಬಹುದಾ ಎಂದು ಯೋಚಿಸುತ್ತಾ ಅವರು ಬಾಗಿಲು ತೆಗೆಯುವುದನ್ನೇ ಕಾಯುತ್ತಾ ಕೂತ.