Thursday, May 27, 2010

ಕತೆ-ಚಿತ್ರಕತೆ-ಸಂಭಾಷಣೆ (ಚಿತ್ರೀಕರಿಸಲಾಗದ ಒಂದು ವಿಫಲ ಸನ್ನಿವೇಶವು)

ಕತೆ:
ಬೆಂಗಳೂರು ಅಥವಾ ಬೆಂಗಳೂರಿನಂಥ ಒಂದೂರು. ಮುಂಜಾನೆ ಅಥವಾ ಮುಂಜಾನೆಯಂಥ ದಿನದ ಒಂದು ಅವಧಿ. ಇಪ್ಪತ್ತಮೂರು ವರ್ಷದ ಅಥವಾ ಇಪ್ಪತ್ತಮೂರು ವರ್ಷದವನಂತೆ ಕಾಣುವ ಹುಡುಗ. ಅವನ ಹೆಸರು ಕಿಟ್ಟಿ ಅಥವಾ ಬೇರೆ ಯಾವ ಹೆಸರಾದರೂ ಆಗಬಹುದು. ಅವನು ವೇಗವಾಗಿ ನಡೆಯುತ್ತಿದ್ದಾನೆ ಅಥವಾ ಓಡುತ್ತಿದ್ದರೂ ಓಡುತ್ತಿರಬಹುದು.
ತನ್ನನ್ನು ಯಾರು ಅಟ್ಟಿಸಿಕೊಂಡು ಬರುತ್ತಿದ್ದಾರೆ ಅನ್ನುವುದು ಅವನಿಗೂ ಗೊತ್ತಿಲ್ಲ. ಅವನು ಒಂದೇ ಸಮ ಓಡುತ್ತಲೇ ಇದ್ದಾನೆ. ಓಡುತ್ತಾ ಓಡುತ್ತಾ ಹೋಗಿ ಈ ಜಗತ್ತಿನ ಅಂತ್ಯವನ್ನು ತಲುಪುತ್ತಾನೆಯ ಅಲ್ಲಿಂದಾಚೆ ಓಡುವುದಕ್ಕೆ ನೆಲವಿಲ್ಲ, ಆಕಾಶವಿಲ್ಲ, ನೀರಿಲ್ಲ. ಇದ್ದಕ್ಕಿದ್ದಂತೆ ಅಲ್ಲಿಗೆ ಜಗತ್ತೇ ಮುಗಿದುಹೋದ ಹಾಗೆ.
ಜಗತ್ತು ಹಾಗೆ ಮುಗಿದು ಹೋಗುವುದಿಲ್ಲ ಎಂದು ಅವನಿಗೆ ಗೊತ್ತು. ಜಗತ್ತು ದುಂಡಗಿದೆ. ಇಡೀ ವಿಶ್ವ ಸುತ್ತಿದರೂ ಮತ್ತೆ ಹೊರಟಲ್ಲಿಗೇ ಬರುತ್ತಿರಬೇಕು ಅನ್ನುವುದು ಬಲ್ಲ ವಿಜ್ಞಾನದ ಹುಡುಗ ಅವನು. ಅವನು ಸುತ್ತುತ್ತಿರುವುದು ಈ ಜಗತ್ತನ್ನಲ್ಲ, ಒಳಜಗತ್ತನ್ನು. ಅದಕ್ಕೆ ಕೊನೆಯುಂಟು. ಜಗದ ಅಂಚಿಗೆ ಬಂದು ಇನ್ನೇನು ಕೆಳಗೆ ಬಿದ್ದೇ ಬೀಳುತ್ತೇನೆ ಎಂಬಂತೆ ಅವಚಿಕೊಂಡು ನಿಂತಾಗ ನೆನಪಾಗುವುದು ಅಮ್ಮ. ಇಷ್ಟಗಲ ಕುಂಕುಮದ, ಸುಕ್ಕುಮೋರೆಯ, ಚೂಪುಗಣ್ಣಿನ, ಅಪ್ಪನೊಡನೆ ಸದಾ ಜಗಳಾಡುವ, ಮನೆ ಮುಂದೆ ಬರುವ ಮಕ್ಕಳ ಕೈಗೆ ತುತ್ತು ಹಾಕುವ, ಸಾಕಿದ ನಾಯಿಯನ್ನು ಸಾಯಬಡಿಯುವ, ನೀನ್ಯಾಕಾದರೂ ಹುಟ್ಟಿದೆ ನನ್ನ ಹೊಟ್ಟೆ ಉರಿಸೋದಕ್ಕೆ ಎಂದು ಚೀರಾಡಿ ಅಳುವ ಅಮ್ಮ.
ಅಮ್ಮನ ನೆನಪಾದಾಗ ಕಣ್ಮುಂದೆ ಬರುವುದು ಅಪ್ಪ. ನಿರ್ಲಿಪ್ತನಂತೆ ಕೂತಿರುವ, ಮನಸ್ಸಿನಲ್ಲೇ ನೂರೆಂಟು ಕಳ್ಳದಾರಿಗಳನ್ನು ಹುಡುಕಿಕೊಳ್ಳುತ್ತಿರುವ, ಪಾರೋತಿಯ ಮನೆಗೆ ಹೋಗಿ ಅವಳನ್ನು ಮುದ್ದಾಡಿ ಬರುವ, ಗಂಗಣ್ಣನ ಗಡಂಗಿನಲ್ಲಿ ಸಾಲ ಕೇಳುವ, ಕೆಲಸ ಕೊಟ್ಟವರನ್ನು ಹೀನಾಮಾನ ಬೈಯುವ, ಬೆಳಗ್ಗೆ ಅವರ ಮುಂದೆಯೇ ಕೈ ಕಟ್ಟಿ ನಿಲ್ಲುವ, ಮಗನನ್ನು ವಾರೆಗಣ್ಣಿಂದ ಗಮನಿಸುತ್ತ, ಅವನು ತನ್ನ ಪ್ರತಿಸ್ಪರ್ಧಿ ಎಂಬಂತೆ ನೋಡುವ, ಖುಷಿಯಾದಾಗ ಹೆಗಲ ಮೇಲೆ ಕೂರಿಸಿಕೊಂಡು ಮಗಳನ್ನು ಸಂತೆಗೆ ಕರೆದೊಯ್ಯುವ ಅಪ್ಪ.
ಇವರಿಬ್ಬರ ಮಧ್ಯೆ ಅಕ್ಕ ಇದ್ದಾಳೆ. ಅವಳಿಗೊಬ್ಬ ಪ್ರೇಮಿ. ಅವನು ಕೂಡ ಇದೇ ಅಪ್ಪನಂಥ ಅಪ್ಪನಿಗೆ, ಅಮ್ಮನಂಥ ಅಮ್ಮನಿಗೆ ಹುಟ್ಟಿದವನು. ಕೆಲಸವೇನು ಎಂದರೆ ಕೆಲಸವಿಲ್ಲ. ಕೆಲಸವಿಲ್ಲ ಅಂದರೆ ಒಂದರೆಗಳಿಗೆ ಬಿಡುವಿಲ್ಲ. ಕೈಲಿ ಕಾಸಿಲ್ಲದಿದ್ದರೂ ಹೆಮ್ಮೆಯಿಂದ ಓಡಾಡುವ, ಸಿನಿಮಾ ನೋಡುವ, ಯಾರದೋ ಬೈಕು ತಂದು ಸುತ್ತಾಡುವ, ಯಾರಿಗೋ ಹೊಡೆದು ಹೊಡೆಸಿಕೊಂಡು ದಿನಗಟ್ಟಲೆ ಮನೆಯಿಂದಾಚೆ ಬರದ, ತಲೆಗೆ ಎಣ್ಣೆ ಹಾಕದ, ತಲೆ ಬಾಚಿಕೊಳ್ಳದ, ಬಣ್ಣಬಣ್ಣದ ಶರಟು ಹಾಕುವ ಹುಡುಗ ಅವಳ ಪ್ರೇಮಿ.
ಅಲ್ಲೊಂದು ಪುಟ್ಟ ನಾಯಿ, ಸುಳಿದು ಬರುವ ರೇಲು, ಅದರಿಂದ ಪ್ರತಿದಿನವೂ ಇಳಿಯುವ ಹತ್ತುವ ಜೀನ್ಸ್ ತೊಟ್ಟ ಹುಡುಗಿ, ಅವಳು ಕೆಲಸ ಮಾಡುವ ಕಲಾಸಿಪಾಳ್ಯಂನ ರೇಷ್ಮೆ ಅಂಗಡಿ, ಅವಳನ್ನು ಹಿಂಬಾಲಿಸುವ ಅಕ್ಕನ ಪ್ರೇಮಿ. ಅಕ್ಕನಿಗೂ ಆ ಬಗ್ಗೆ ಗುಮಾನಿ. ಅವಳು ಜೀನ್ಸ್ ತೊಟ್ಟ ಕಾರಣಕ್ಕೇ, ಅವನಿಗಿಷ್ಟ. ಒಂದು ದಿನ ಅಕ್ಕನೂ ಜೀನ್ಸ್ ತೊಟ್ಟುಕೊಂಡು ಬಂದು ಅವನಿಗೆ ದಾರಿಯಲ್ಲಿ ಎದುರಾಗಿ ಇಬ್ಬರೂ ಡಿಕ್ಕಿಹೊಡೆದು ಬಿದ್ದು, ಎದ್ದು ಕಣ್ತೆರೆದರೆ ಏಳು ಸಮುದ್ರದ ಆಚೆಗಿರುವ ನ್ಯೂಯಾರ್ಕ್.
ಆಮೇಲೊಂದು ಹಾಡು, ಹೊಡೆದಾಟ, ವಿರಹ, ಉಪದೇಶ, ನೀತಿಕತೆ, ಕ್ಲೈಮ್ಯಾಕ್ಸ್ ಮತ್ತು ಶುಭಂ.


ಚಿತ್ರಕತೆ:
ದೃಶ್ಯ -೧
ಹಗಲು/ಹೊರಾಂಗಣ
ಒಂದು ನಿರ್ಜನ ಬೀದಿ, ಓಡುತ್ತಿರುವ ಯುವಕ. ಅಟ್ಟಿಸಿಕೊಂಡು ಬರುತ್ತಿರುವ ಅನಾಮಿಕರು. ಹುಡುಗ ಓಡುತ್ತಾ ಹೋಗುತ್ತಿದ್ದಂತೆ ರಸ್ತೆ ಕೊನೆಯಾಗುತ್ತದೆ. ಇನ್ನು ಎತ್ತಲೂ ಓಡುವುದುಕ್ಕೆ ಜಾಗವೇ ಇಲ್ಲ ಎಂಬ ಸ್ಥಿತಿಗೆ ತಲುಪಿದಾಗ ಅಟ್ಟಿಸಿಕೊಂಡು ಬಂದವರು ಹುಡುಗನ ಮೇಲೆ ಆಕ್ರಮಣ ಮಾಡುತ್ತಾರೆ. ಹುಡುಗ ಅವರ ಮೇಲೆ ಮುಗಿಬಿದ್ದು ಹೋರಾಟ ನಡೆಸುತ್ತಾನೆ. ಆದರೆ ಬಂದವರ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಅವನು ಸೋಲುತ್ತಾನೆ. ಅವನನ್ನು ಕತ್ತರಿಸಿ ಅವರು ಹೊರಡುತ್ತಾರೆ. ಛಿಲ್ಲನೆ ಚಿಮ್ಮಿದ ರಕ್ತ. ಕೆಮರಾದ ಲೆನ್ಸಿಗೆ ಚೆಲ್ಲಿಂದಂತೆ ರಕ್ತ. ರಂಗೋಲಿಯ ಹಾಗೆ ಬಿದ್ದಿರುವ ರಕ್ತ. ಪಕ್ಕದಲ್ಲಿ ಬಿದ್ದಿರುವ ಹುಡುಗನ ದೇಹದ ಒಂದು ಭಾಗ, ಭುಜ, ಒಮ್ಮೆ ಕಂಪಿಸಿ ಸುಮ್ಮನಾಗುತ್ತದೆ.
ದೃಶ್ಯ -೨
ಹಗಲು/ಹೊರಾಂಗಣ
ಅವಳು ಒಬ್ಬಳೇ ಕೂತಿದ್ದಾಳೆ. ಅವಳ ಕಣ್ಣಲ್ಲಿ ಹನಿ ನೀರು. ಎದುರಿಗೆ ಹೊಳೆ ಹರಿಯುತ್ತಿದೆ. ಅವಳು ಎದ್ದು ಮುಖ ತೊಳೆದುಕೊಳ್ಳಲು ಹೊಳೆಗಿಳಿಯುತ್ತಾಳೆ. ಬೊಗಸೆಯೊಡ್ಡಿ ಕೈತುಂಬ ನೀರು ತುಂಬಿಕೊಂಡರೆ ಅದು ನೀರಲ್ಲ ರಕ್ತ. ಅವಳು ಬೆಚ್ಚಿಬೀಳುತ್ತಾಳೆ. ಕೈಯಲ್ಲಿದ್ದ ನೀರನ್ನು ಚೆಲ್ಲಿ ಹೊಳೆಯತ್ತ ನೋಡುತ್ತಾಳೆ. ಹೊಳೆ ತುಂಬ ರಕ್ತ, ಮಾಂಸಲಖಂಡ, ಕೈ ಕಾಲು, ರುಂಡಗಳು ತೇಲಿ ಬರುತ್ತಿವೆ. ಅವಳು ಚೀತ್ಕಾರ ಮಾಡುತ್ತಾ ಓಡೋಡಿ ಬರುತ್ತಾಳೆ.
ದೃಶ್ಯ -೩
ರಾತ್ರಿ/ಒಳಾಂಗಣ/ಹೊರಾಂಗಣ
ದೀಪದ ಮುಂದೆ ಅವ್ವ ಕೂತಿದ್ದಾಳೆ. ದೀಪದ ಕುಡಿಯ ಸಮೀಪದೃಶ್ಯ. ಕ್ರಮೇಣ ಅದು ಅವ್ವನ ಕಣ್ಣಂಚಿನಲ್ಲಿರುವ ಹನಿಯಾಗುತ್ತದೆ. ಅವಳು ಭುಜದ ಮೇಲೆ ಕೈಯಿಟ್ಟು ಮಲಗಿದ್ದಾಳೆ. ಪಕ್ಕದಲ್ಲಿ ಕೆಮ್ಮುತ್ತಾ ಕೂತಿರುವ ಅಪ್ಪ, ಅವರಿಬ್ಬರ ಪಕ್ಕದಲ್ಲಿ ಅಕ್ಕ. ಅಪ್ಪನ ಮುಖದಲ್ಲಿ ಭಯವಾಗಲೀ, ನೋವಾಗಲೀ, ಅವಮಾನವಾಗಲೀ ಇಲ್ಲ. ಅಕ್ಕನ ಮುಖದಲ್ಲಿ ಸಂಕಟ ಮತ್ತು ಸಿಟ್ಟು. ಅವ್ವನ ಕಣ್ಣಲ್ಲಿ ರೋಷ. ಅವ್ವ ತಲೆಯೆತ್ತಿ ನೋಡುತ್ತಾಳೆ. ಅಪ್ಪ ಬೀಡಿ ತುಟಿಗಿಡುತ್ತಾನೆ. ಅವ್ವ ಪಕ್ಕದಲ್ಲಿದ್ದ ಸೀಮೆಎಣ್ಣೆ ಕ್ಯಾನ್ ಎತ್ತಿಕೊಂಡು ಅಪ್ಪನ ಹತ್ತಿರ ಹೋಗಿ ಅವನ ನೆತ್ತಿಗೆ ಅದನ್ನು ಸುರಿಯುತ್ತಾಳೆ. ಬೆಂಕಿಕಡ್ಡಿಗಾಗಿ ಹುಡುಕಾಡುತ್ತಾಳೆ. ಅಪ್ಪ ಭಯಗೊಂಡು ಓಡಿ ಹೋಗುತ್ತಾನೆ. ಹಾಗೆ ಓಡಿಹೋಗುತ್ತಾ ಹೋಗುತ್ತಾ ಅವನ ಮೈಗೆ ಬೆಂಕಿ ಹತ್ತಿಕೊಳ್ಳುತ್ತದೆ. ಅವ್ವ ಓಡಿ ಹೋಗಿ ಅವನ ಕೈ ಹಿಡಕೊಳ್ಳುತ್ತಾಳೆ. ಇದ್ದಕ್ಕಿದ್ದಂತೆ ಆ ದೇಹ ಅವಳ ಕೈಯ ದೊಂದಿಯಾಗುತ್ತದೆ. ಅವಳು ಅದನ್ನು ಹಿಡಕೊಂಡು ಓಡತೊಡಗುತ್ತಾಳೆ.
ದೃಶ್ಯ -೪
ರಾತ್ರಿ/ಹೊರಾಂಗಣ
ಒಂದು ಗುಡ್ಡದ ಮೇಲೆ ಕೂತಿರುವ ಅಕ್ಕ. ಅವಳ ಕೂದಲು ಜ್ಯಾಲೆಯಂತೆ ಉರಿಯುತ್ತಿದೆ. ಅವಳು ತಿರುಗಿ ನೋಡುತ್ತಾಳೆ. ಆ ಪ್ರೇಮಿ ಅಲ್ಲಿ ನಿಂತಿದ್ದಾನೆ. ಅವನು ಸೊಂಟಕ್ಕೊಂದು ತುಂಡು ಬಟ್ಟೆ ಸುತ್ತಿಕೊಂಡಿದ್ದಾನೆ. ಮೈಯೆಲ್ಲ ಕಾದು ಕಂಪಿಸುತ್ತಿದೆ. ಅಕ್ಕ ಅವನನ್ನು ನೋಡಿದವಳೇ ಹತ್ತಿರ ಹೋಗಿ ಅವನನ್ನು ತಳ್ಳುತ್ತಾಳೆ. ಅವನು ಕಮರಿಯಿಂದ ಬೀಳಬೇಕು ಅನ್ನುವಷ್ಟರಲ್ಲಿ ತಾನೂ ಅವನನ್ನು ಹಿಡಿದುಕೊಳ್ಳುತ್ತಾಳೆ. ಇಬ್ಬರೂ ಕಣಿವೆಗೆ ಬೀಳುತ್ತಾ ಬೀಳುತ್ತಾ ಚುಂಬಿಸುತ್ತಾರೆ. ನೋಡನೋಡುತ್ತಿದದ ಹಾಗೇ ಹಕ್ಕಿಯಾಗಿ ಹಾರುತ್ತಾರೆ. ಕಣಿವೆಯ ಕಲ್ಲಿನಾಚೆಗೆ, ಆ ಹಕ್ಕಿಗಳನ್ನು
ಗುಂಡಿಟ್ಟು ಸಾಯಿಸಲು ಕಾದು ಕೂತ ಮೀಸೆಯವನು ಗುಂಡು ಹಾರಿಸುತ್ತಾನೆ. ಗುಂಡಿನ ಸದ್ದಿನ ಬೆನ್ನಿಗೇ ಆಕಾಶ ರಕ್ತಸಿಕ್ತ ಕೆಂಪು. ಎಲ್ಲವೂ ಸ್ತಬ್ಧ.
ದೂರದಲ್ಲಿ ಎಲ್ಲೋ ಅವ್ವನ ಚೀತ್ಕಾರ ಕೇಳಿಸುತ್ತಿದೆ. ವೇಗವಾಗಿ ಚಲಿಸುತ್ತಿರುವ ಕೆಮರಾ. ಎಲ್ಲವನ್ನು ಹಿಂದಿಕ್ಕಿಕೊಂಡು ಮುಂದೆ ಸಾಗುತ್ತಾ ಸಾಗುತ್ತಾ ಥಟ್ಟನೆ ನಿಲ್ಲುತ್ತದೆ.
ಅಲ್ಲಿ ಒಂದು ಮುಚ್ಚಿದ ಬಾಗಿಲು. ಅದು ನಿಧಾನವಾಗಿ ತೆರೆದುಕೊಳ್ಳುತ್ತದೆ. ಅದರಾಚೆಗೆ ನೋಡಿದರೆ ಬರೀ ಶೂನ್ಯ. ಜನರಿಲ್ಲದ, ಕಾಡಿಲ್ಲದ, ಆಕಾಶ ಇಲ್ಲದ, ಯಾರೂ ಇಲ್ಲದ ನಾಡು.
ದೃಶ್ಯ -೫
ರಾತ್ರಿ/ಹೊರಾಂಗಣ
ಮರದ ನೆರಳು, ಚಂದಿರನ ಬೆಳಕು. ಅವರಿಬ್ಬರೂ ಪ್ರೀತಿ ಮಾಡುತ್ತಿದ್ದಾರೆ. ದೇಹಗಳು ಉರುಳಾಡುತ್ತಿವೆ. ಪೊದೆಯ ಮರೆಯಿಂದ ಸರ್ಪವೊಂದು ಬಂದು ಅವರಿಬ್ಬರನ್ನೂ ಸುತ್ತಿಕೊಳ್ಳುತ್ತದೆ. ಅದರ ಪರಿವೆಯೂ ಇಲ್ಲದಂತೆ ಸರ್ಪವನ್ನು ಮೈ ಮೇಲಿನ ಬಟ್ಟೆಯಂತೆ ಭಾವಿಸುತ್ತಾ ಅವರು ಪ್ರೀತಿಮಗ್ನ. ಆಕಾಶದಲ್ಲಿ ಹಾರುತ್ತಿರುವ ಗರುಡ. ಆ ಪಕ್ಷಿ ಹಾರುತ್ತಾ ಹಾರುತ್ತಾ ಬಂದು, ಅವರಿಬ್ಬರ ಸಮೇತ ಸರ್ಪವನ್ನೂ ಎತ್ತಿಕೊಂಡು ಹೋಗುತ್ತದೆ. ಸಾಗರಗಳ ಮೇಲೆ ಹಾರುತ್ತಿರುವ ಗರುಡ.
ಇದ್ದಕ್ಕಿದ್ದಂತೆ ಗರುಡನ ಕಣ್ಣಿಗೆ ಮತ್ತೊಂದು ಸರ್ಪ ಕಾಣಿಸುತ್ತದೆ. ಕೊಕ್ಕಿನಲ್ಲಿ ಕಚ್ಚಿಕೊಂಡಿರುವ ಸರ್ಪವನ್ನು ಬಿಟ್ಟು, ಅದು ಆಗಷ್ಟೇ ಕಂಡ ಸರ್ಪದತ್ತ ಧಾವಿಸುತ್ತದೆ. ಆ ಸರ್ಪ, ಅದು ಸುತ್ತಿಕೊಂಡಿರುವ ಅವರಿಬ್ಬರು, ಆಕಾಶದಲ್ಲಿ ತೇಲುತ್ತಾ ತೇಲುತ್ತಾ ಬೇರೆ ಬೇರೆಯಾಗಿ ಎಲ್ಲೆಲ್ಲೋ ಬೀಳುತ್ತಾರೆ.
ಅವನು ಬಿದ್ದ ಜಾಗದಲ್ಲಿ ಮಹಾನಗರ. ಅವಳು ಬಿದ್ದ ಜಾಗದಲ್ಲಿ ಮಹಾರಣ್ಯ ಮತ್ತು ಸರ್ಪಬಿದ್ದ ಜಾಗದಲ್ಲಿ ಮಹಾಸಮುದ್ರವೊಂದು ಹುಟ್ಟಿಕೊಂಡು....

ಸಂಭಾಷಣೆ:

ಅವ್ವ: ಬೆಂಕಿ ಬೇಕು ನಂಗೆ. ಬೆಂಕಿ. ನನ್ನ ಮಗನ ಕಣ್ಣಲ್ಲೂ ಬೆಂಕಿಯಿಲ್ಲ, ಮಗಳ ಮೈಯಲ್ಲೂ ಬೆಂಕಿಯಿಲ್ಲ. ದರಿದ್ರ ಬಡಿದ ಜನ. ರೊಚ್ಚಿಗೇಳದ ಮನುಷ್ಯರು. ಓಡಿಹೋಗೋ ಮಂದಿ. ಬಸ್ಸು, ಕಾರು, ವಿಮಾನ, ಸೈಕಲ್ಲು, ಮೋಟರ್ ಸೈಕಲ್ಲು ಏನಾದ್ರೊಂದು ಹಿಡಕೊಂಡು ತಪ್ಪಿಸಿಕೊಳ್ಳೋಕೆ ನೋಡೋ ಶನಿಗಳು. ಇವರನ್ನು ಹುಟ್ಟಿಸೋದೇ ತಪ್ಪು.. ಬೆಳೆಸೋದೂ ತಪ್ಪು. ಕೊಚ್ಚಿ ಹಾಕ್ರೋ ಎಲ್ಲರನ್ನೂ..
ಮಗ: ಓಡ್ತಾನೇ ಇರಬೇಕು. ಓಡ್ತಾನೇ ಇರಬೇಕು. ಎಲ್ಲಿಗೆ ಹೋಗಿ ಮುಟ್ತೀನಿ ಅಂತ ಗೊತ್ತಿಲ್ಲದೇ ಇದ್ರೂ ಓಡ್ತಾನೇ ಇರಬೇಕು. ನಿಂತ್ರೆ ಭಯ ಆಗುತ್ತೆ. ನಿಂತೇಬಿಟ್ಟೆ ಅನ್ಸುತ್ತೆ. ಓಡ್ತಿದ್ರೆ ಏನೋ ಒಂದು ಸಮಾಧಾನ. ಕಾಲಿಗೆ ದಣಿವಾಗುತ್ತೆ, ನಿದ್ದೆ ಬರುತ್ತೆ. ಮತ್ತೆ ಎದ್ದು ಓಡ್ತಾ ಇರೋದು. ಕಾರಿಗಿಂತ ಬಸ್ಸಿಗಿಂತ ವಿಮಾನಕ್ಕಿಂತ ರೈಲಿಗಿಂತ ವೇಗವಾಗಿ ಓಡೋದು.
ಅಕ್ಕ: ನನ್ನ ಕೂದಲಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಹೊತ್ತಿ ಉರೀತಿದೆ. ಎಲ್ಲೂ ಒಂಚೂರು ನೀರಿಲ್ಲ, ನಾನು ತಲೆ ತೊಳ್ಕೋಬೇಕು. ನೀರಲ್ಲಿ ನೆತ್ತಿ ಅದ್ದಬೇಕು. ಬೆಂಕಿ ಆರಿಸ್ಕೋಬೇಕು. ಸುಟ್ಟು ಬೂದಿಯೂ ಆಗದ, ಹೊತ್ತಿ ಬತ್ತಿಯೂ ಆಗದ, ನೆತ್ತಿ ಭಸ್ಮವೂ ಆಗದ ಈ ಬೆಂಕಿ ಬೇಡ ನಂಗೆ.. ಆರಿಸ್ರೋ ಯಾರಾದ್ರೂ... ಯಾರೂ ಇಲ್ವೇ ಅಲ್ಲಿ..
ಪ್ರೇಮಿ; ಅವಳು ಕೇಳಿದ್ದೆಲ್ಲ ಕೊಟ್ಟೆ. ಕೇಳದೇ ಇದ್ದಿದ್ದನ್ನೂ ಕೊಟ್ಟೆ. ಮತ್ತೂ ಬೇಕು ಅಂತಿದ್ದಾಳೆ. ಖಂಡವಿದೆಕೋ ಮಾಂಸವಿದೆಕೋ ಅಂದ್ರೇನೇ ಅವಳಿಗೆ ಸಂತೋಷ. ಆದ್ರೆ ಅವಳು ಹುಲಿ ಥರ ಬೆಟ್ಟದಿಂದ ಹಾರಿ ಪ್ರಾಣ ಬಿಡಲ್ಲ. ಬೇಟೆ ಆಡ್ತಾಳೆ. ನನ್ನನ್ನೇ ಬೇಟೆ ಆಡ್ತಾಳೆ. ನನ್ನ ಮುಟ್ಟಿ ಬೇಟೆ ಆಡ್ತಾಳೆ. ಮುಟ್ಟದೇ ಬೇಟೆ ಆಡ್ತಾಳೆ. ಬೇರೆಯವರ ಜೊತೆ ನಗ್ತಾ ನಗ್ತಾ ಬೇಟೆಯಾಡ್ತಾಳೆ. ಮುನಿಸಿಕೊಂಡು ಬೇಟೆಯಾಡ್ತಾಳೆ. ಬೇಕು ಅನ್ನಿಸಿ, ಬೇಡ ಅನ್ನಿಸಿ ಬರೀ ಬೇಟೆ ಆಡ್ತಾಳೆ.
ದೇವರು: ಇಲ್ಲದೇ ಇದ್ದಿದ್ದನ್ನು ಹುಡುಕ್ತಾರೆ, ಇದ್ದಿದ್ದು ಬೇಡ ಅಂತಾರೆ. ನಾನಿದ್ದೀನೋ ಇಲ್ವೋ ಅಂತ ನಂಗೇ ಗೊತ್ತಿಲ್ಲ. ಅವರಿಗೆ ಗೊತ್ತು. ನನ್ನ ಹುಡುಕೋದಕ್ಕೆ ಜ್ಯೋತಿಷ್ಯ, ಶಾಸ್ತ್ರ, ಕುಂಡಲಿ, ಜಾತಕ, ದೇವಸ್ಥಾನ, ಬ್ರಹ್ಮಕಲಶ, ಬಲಿ, ದಾನ, ಧರ್ಮ. ನಾನೇ ಇಲ್ಲ. ನಾನು ನೀನೇ ಅಂದ್ರೆ ಕೇಳಲ್ಲ.
ಬಡ್ಡೀಮಕ್ಳಾ.. ನಾನು ಸತ್ತೋಗಿದ್ದೀನಿ ಕಣ್ರೋ....

5 comments:

Narayan Bhat said...

ಈ ಕಥೆ ಓದುವದೇ ಒಂದು ಅನಿರ್ವಚನೀಯ ಮಧುರ ಅನುಭವ.

ದಿನಕರ ಮೊಗೇರ said...

neevu kathe bareyo dhaati, SIMPLY SUPERB sir........ gr8

ದೀಪಸ್ಮಿತಾ said...

ಓದಿಸಿಕೊಂಡು ಹೋಗುತ್ತದೆ. ಒಳ್ಳೆ ಚಿತ್ರವಾಗಬಹುದು

kiran.N said...
This comment has been removed by the author.
Unknown said...

Hi, nice information. i want to share my views which may help many. Where do I begin, I’m about 2 yrs into a marriage life that has had a lot of turbulance due to ED. I cannot make love to my wife or share any intimacy in the bedroom. Anyway all I can say is that I’m trying this new product INVIGO and iam reaching that pleasure. I think there is hope for everyone, Thanks to INVIGO!you can reach this at www.invigo.in