Monday, September 20, 2010

ಬಂಡಾಯ; ಮಳೆ ನಿಂತರು ಮರದ ಹನಿಬಿಡದು ಎಂಬಂತೆ

ಬಂಡಾಯ ಸಾಹಿತ್ಯಕ್ಕೆ ಮೂವತ್ತು ವರ್ಷ. ಮೂವತ್ತೆಂದರೆ ದಂಗೆಯೇಳುವ ವಯೋಮಾನ ದಾಟಿ, ಮನಸ್ಸು ಹದಗೊಳ್ಳುವ ಕಾಲಾವಧಿ. ಬಂಡಾಯ ಚಳವಳಿ ಕೂಡ ಹೆಚ್ಚೂಕಮ್ಮಿ ಅದೇ ಸ್ಥಿತಿಯಲ್ಲಿದೆ. ಕೆಲವೊಮ್ಮೆ ಎಲ್ಲವನ್ನೂ ಒಪ್ಪಿಕೊಳ್ಳುವಂತೆ, ಮತ್ತೆ ಕೆಲವೊಮ್ಮೆ ಸಕಲವನ್ನು ಧಿಕ್ಕರಿಸುವಂತೆ ನಟಿಸುತ್ತಿದ್ದ ಬಂಡಾಯ ಮನೋಧರ್ಮವನ್ನು ಒಂದು ಅವಧಿಯಲ್ಲಿ ನಮ್ಮ ರಾಜಕಾರಣ ಕೈ ಹಿಡಿದು ನಡೆಸಿತ್ತು. ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದ ಅನೇಕರು ಸರ್ಕಾರದ ಆಪ್ತವಲಯದಲ್ಲಿ ಕಾಣಿಸಿಕೊಂಡಿದ್ದರು. ಅನೇಕರು ಈಗಲೂ ಅದೇ ಮೊಗಸಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಾಜಕೀಯ ಅವರ ಕೈ ಹಿಡಿದು ನಡೆಸಿತೋ, ಅವರು ರಾಜಕಾರಣದ ಕೈ ಹಿಡಿದು ನಡೆಸಿದರೋ ಎಂಬುದು ಸ್ಪಷ್ಟವಿಲ್ಲ. ಇಬ್ಬರು ಪರಸ್ಪರ ಕೈ ಕೈ ಹಿಡಿದುಕೊಂಡು ನಡೆಯುವುದನ್ನು ದೂರದಿಂದ ನೋಡಿದವರಿಗೆ, ನಡೆಯುವವರು ಯಾರು, ನಡೆಸುತ್ತಿರುವವರು ಯಾರು ಎಂಬುದು ಸ್ಪಷ್ಟವಾಗುವುದಿಲ್ಲ.
ನವ್ಯಕ್ಕೂ ಬಂಡಾಯಕ್ಕೂ ಅಂಥ ವ್ಯತ್ಯಾಸವೇನೂ ಇದ್ದಂತಿರಲಿಲ್ಲ. ನವ್ಯ ಚಳವಳಿಯಲ್ಲಿ ಎಲ್ಲರೂ’ ಇದ್ದರು. ಬಂಡಾಯ ಚಳವಳಿ ಆರಂಭಿಸಿದಾಗ ಅಲ್ಲಿದ್ದವರು ಕೆಲವರು’ ಮಾತ್ರ. ಆ ಕೆಲವರಿಗೂ ನವ್ಯದ ಜೊತೆ ಅಂಥ ಜಗಳವೇನೂ ಇರಲಿಲ್ಲ. ಬಂಡಾಯದ ಧಾಟಿಗೂ ನವ್ಯ ಶೈಲಿಗೂ ಅಂಥ ಎದ್ದು ಕಾಣುವ ವ್ಯತ್ಯಾಸವೂ ಇರಲಿಲ್ಲ. ಕ್ರಮೇಣ ಬಂಡಾಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ದಲಿತ ಸಾಹಿತ್ಯವನ್ನೂ ತನ್ನ ಒಂದು ಕವಲು ಎಂಬಂತೆ ಭಾವಿಸಿದ್ದೂ ಇದೆ.
ನವ್ಯಚಳವಳಿಯನ್ನು ಪತ್ರಿಕೆಗಳೂ ಲೇಖಕರೂ ಪೋಷಿಸಿದಷ್ಟು ಬಂಡಾಯ ಚಳವಳಿಯನ್ನು ಪೋಷಿಸಲಿಲ್ಲ ಅನ್ನುವುದೂ ಸತ್ಯ. ಹೀಗಾಗಿ ಅದು ಕೇವಲ ತನ್ನ ಸತ್ವದಿಂದಾಗಿಯೇ ಉಳಿಯಬೇಕಾಗಿತ್ತು. ನವ್ಯಕ್ಕೆ ತನ್ನ ರೂಪರೇಷೆಗಳನ್ನು ಅಭಿವ್ಯಕ್ತಿ ವಿಧಾನಗಳನ್ನು ವಿಮರ್ಶೆಯ ಪರಿಭಾಷೆಗಳನ್ನು ಯುರೋಪ್ ಮತ್ತು ಇಂಗ್ಲಿಷ್ ಸಾಹಿತ್ಯದಿಂದ ಪಡೆದುಕೊಂಡು ತನ್ನ ಮೂಸೆಯಲ್ಲಿ ಅದನ್ನು ಬಡಿದು ಕಾಯಿಸಿ ಹೊಸ ಆಭರಣವೆಂಬಂತೆ ಧರಿಸಿಕೊಂಡಿತು. ನವ್ಯ ಕಾವ್ಯದ ಲಯಬದ್ಧತೆ, ರೂಪಕ, ಅಭಿವ್ಯಕ್ತಿಗಳಲ್ಲಿ ಇಂಗ್ಲಿಷ್ ಕವಿಗಳ, ಕಾದಂಬರಿಕಾರರ, ವಿಮರ್ಶಕರ ನೆರಳಿತ್ತು. ಬಂಡಾಯ ಆ ಹೊತ್ತಿಗೆ, ದೇಸಿ ಅಭಿವ್ಯಕ್ತಿಯಂತೆ ಕಾಣಿಸಿದ್ದಂತೂ ನಿಜ. ನಮ್ಮ ಜನಪದ, ನಮ್ಮ ನೋವು, ನಮ್ಮವರ ಶೋಷಣೆಗಳನ್ನು ಹೊತ್ತ ಕತೆ, ಕವಿತೆಗಳು ಆರಂಭದಲ್ಲಿ ಬಂಡಾಯ ಚಳವಳಿಯನ್ನು ಮುನ್ನಡೆಸಿದವು.
ಒಂದು ವಿಚಿತ್ರ ತಲ್ಲಣದೊಂದಿಗೇ ಬಂಡಾಯ ಚಳವಳಿ ಆರಂಭವಾಯಿತು ಎನ್ನಬೇಕು. ಅದಕ್ಕೆ ನವ್ಯದ ತೆಕ್ಕೆಯಿಂದ ಬಿಡಿಸಿಕೊಳ್ಳುವ ಅನಿವಾರ್ಯತೆಯಿತ್ತು. ನವ್ಯ ಸಾಹಿತ್ಯ ಅರ್ಥಪೂರ್ಣತೆಯತ್ತ ತುಡಿಯುತ್ತ, ಶ್ರೇಷ್ಠತೆಯ ವ್ಯಾಮೋಹಕ್ಕೆ ಒಳಗಾಗುತ್ತಾ ಓದುಗರಿಂದ ದೂರವಾಗುವ ಹಂತ ತಲುಪಿತ್ತು. ಕನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಕಳಕೊಂಡದ್ದು ನವ್ಯದ ಅವಧಿಯಲ್ಲೇ. ಬಂಡಾಯ ಚಳವಳಿ ಆ ಓದುಗರನ್ನು ಮರಳಿಸಲಿಲ್ಲ. ಬದಲಾಗಿ, ಹೊಸ ಓದುಗರನ್ನು ದೊರಕಿಸಿಕೊಟ್ಟಿತು.
ಆ ಹುಮ್ಮಸ್ಸಿನಲ್ಲೇ ಬಂಡಾಯ ಚಳವಳಿ, ನವ್ಯಕ್ಕಿಂತ ವಿಸ್ತಾರವೂ ವ್ಯಾಪಕವೂ ಆಗುತ್ತದೆ ಎಂದು ಆರಂಭದ ದಿನಗಳಲ್ಲಿ ನಂಬಿದವರಿದ್ದರು. ಹಾಗೆ ನೋಡಿದರೆ ಬಂಡಾಯ ಮತ್ತು ನವ್ಯ ಚಳವಳಿಗಳು ಜೊತೆಜೊತೆಯಾಗಿಯೇ ಸಾಗಬಹುದಾಗಿತ್ತೋ ಏನೋ? ಯಾಕೆಂದರೆ ನವ್ಯ ಕೂಡ ಒಂದು ಅರ್ಥದಲ್ಲಿ ಬಂಡಾಯವೇ ಆಗಿತ್ತು. ಅಲ್ಲಿ ನವೋದಯದ ವಿರುದ್ಧ ಬಂಡಾಯ ಎದ್ದ ಸೂಚನೆಯಿತ್ತು. ನವೋದಯ ಮತ್ತು ನವ್ಯದ ನಡುವಣ ಅವಧಿಯಲ್ಲಿ ಬರೆದ ಪ್ರಗತಿಶೀಲರು, ನವ್ಯ ಮತ್ತು ಬಂಡಾಯ ಎರಡರ ಸತ್ವವನ್ನೂ ತಮ್ಮೊಳಗೆ ಅವಿತಿಟ್ಟುಕೊಂಡಂತಿದ್ದರು.
ನಾಯಕರಿಲ್ಲದೇ ಹೋದರೆ ಒಂದು ಚಳವಳಿ ಹೇಗೆ ಮಾಸುತ್ತಾ ಹೋಗುತ್ತದೆ ಎನ್ನುವುದಕ್ಕಿಂತ, ಕಾಲಕ್ರಮೇಣ ಹೇಗೆ ಸಾಹಿತ್ಯದ ಆದ್ಯತೆ ಬೇರೆಯಾಗುತ್ತಾ ಹೋಗುತ್ತವೆ ಎನ್ನುವುದನ್ನು ನೋಡಬೇಕು. ಪ್ರಗತಿಶೀಲ ಲೇಖಕರು ಕೂಡ ಅಭಿವೃದ್ಧಿಯನ್ನು ಪೋಷಿಸುತ್ತಾ, ಮೂಢನಂಬಿಕೆ, ಕಂದಾಚಾರ, ಜಾತೀಯತೆಯ ವಿರುದ್ಧ ಸಿಡಿದೆದ್ದವರೇ ಆಗಿದ್ದರು. ನವ್ಯ ಅವೆಲ್ಲವನ್ನೂ ಮೀರಿದ್ದು ವ್ಯಕ್ತಿಯ ಅಂತರಂಗದ ತುಮುಲ, ತೊಳಲಾಟ. ಆ ತೊಳಲಾಟಕ್ಕೆ ಸಾಮಾಜಿಕ ಸ್ಥಿತಿಗತಿಯಷ್ಟೇ ಕಾರಣವಲ್ಲ. ವ್ಯಕ್ತಿಯ ಒಳಗಣ ತಲ್ಲಣ ಎನ್ನುವುದನ್ನು ಪ್ರತಿಪಾದಿಸುತ್ತಿರುವಂತೆ ಕಾಣಿಸಿತು. ಬಂಡಾಯ ಸಾಹಿತ್ಯಕ್ಕೆ ನೆರವಾದದ್ದು ಇದೇ.
ಬಹುಶಃ ೧೯೭೯ರಲ್ಲಿರಬೇಕು. ಧರ್ಮಸ್ಥಳದಲ್ಲಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಅದೇ ದಿನ ಬೆಂಗಳೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಬಂಡಾಯ ಮತ್ತು ನವ್ಯ ಎರಡು ವಿಭಿನ್ನ ದಿಕ್ಕುಗಳನ್ನು ಪ್ರತಿನಿಧಿಸುತ್ತಿದೆ ಎಂಬುದಕ್ಕೆ ಕಾರಣವಾದದ್ದು ಇದೇ ಅಂಶ. ಹಾಗೆ ನೋಡಿದರೆ, ದಂಗೆಯೇಳುತ್ತಲೇ ಇರಬೇಕಾಗುತ್ತದೆ ಪ್ರತಿಯೊಬ್ಬನೂ.. ಎಂದು ಮೊಟ್ಟಮೊದಲು ಬರೆದವರು ಅಡಿಗರೇ. ಅವರು ಅಂತರಂಗದ ದಂಗೆಗೆ ಒತ್ತು ಕೊಟ್ಟಿದ್ದರು. ಬಂಡಾಯ ಸಾಮಾಜಿಕ ನೆಲೆಗಟ್ಟಿನಲ್ಲಿ ಹೆಚ್ಚು ಮೂರ್ತರೂಪದಲ್ಲಿ ಪ್ರಕಟಗೊಂಡಿತು.
ಹಾಗೆ ನೋಡಿದರೆ ಬಂಡಾಯ ಒಂದು ಸಾಹಿತ್ಯ ಸಂಘಟನೆಯಾಗಿ ಆರಂಭವಾಗಲಿಲ್ಲ. ಅದು ಒಂದು ಸಾಮಾಜಿಕ ಚಳವಳಿಯೆಂಬಂತೆ ಶುರುವಾಯಿತು. ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ವಿಚಾರಧಾರೆಗಳನ್ನು ಅಂಗೀಕರಿಸಿಕೊಂಡು ಅಳವಡಿಸಿಕೊಂಡು ಬಲವಾದ ತಾತ್ವಿಕ ನೆಲೆಗಟ್ಟಿನೊಂದಿಗೆ ಬೆಳೆಯತೊಡಗಿತು. ಇದೇ ಸಂದರ್ಭದಲ್ಲಿ ನಡೆದ ಮತ್ತೊಂದು ಘಟನೆ, ಬಂಡಾಯದ ದಿಕ್ಕನ್ನು ಕೊಂಚ ಬದಲಾಯಿಸಿತು ಎನ್ನಬೇಕು.
೧೯೯೦ರಲ್ಲಿ ಆರ್ ಸಿ ಹಿರೇಮಠ್ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಅದನ್ನು ವಿರೋಧಿಸಿ ಬೆಂಗಳೂರಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಬಂಡಾಯ ಮತ್ತು ನವ್ಯ ಲೇಖಕರು ಒಟ್ಟಾದರು. ಇದ್ದಕ್ಕಿದ್ದ ಹಾಗೆ ಸಾಹಿತ್ಯದಲ್ಲಿ ಬೇರೆಲ್ಲದಕ್ಕಿಂತ ಶ್ರೇಷ್ಠತೆಯೇ ಮುಖ್ಯ ಎಂದು ಅನೇಕರು ವಾದಿಸಿದರು. ಆಗ ಶ್ರೇಷ್ಠತೆಯನ್ನು ಒಂದು ವ್ಯಸನ ಎಂದು ಕರೆದವರು ಕೆ ವಿ ಸುಬ್ಬಣ್ಣ ಒಬ್ಬರೇ. ಆ ಅವಧಿಯಲ್ಲಿ ಶ್ರೇಷ್ಠತೆಯ ವಾದ ಎಷ್ಟೊಂದು ಚರ್ಚೆಗಳಿಗೆ ಕಾರಣವಾಯಿತು ಎಂದರೆ ಸಾಹಿತ್ಯದ ಬೇರೆಲ್ಲ ಚಳವಳಿಗಳೂ ಶ್ರೇಷ್ಠತೆಯ ಚಳವಳಿಯೊಳಗೆ ಕರಗಿಹೋಗುತ್ತವೆ ಎಂಬ ಭಾವನೆ ಹುಟ್ಟುವಂತಿತ್ತು.
**********
ಮೂವತ್ತು ವರ್ಷಗಳ ನಂತರ ತಿರುಗಿ ನೋಡಿದರೆ ಬಂಡಾಯದ ಹುರುಪು, ಹುಮ್ಮಸ್ಸು, ಆರಂಭದ ದಿನಗಳಲ್ಲಿ ಬಂದ ಮೈ ನವಿರೇಳಿಸುವ ಕತೆ, ಕವಿತೆಗಳೆಲ್ಲ ಕಣ್ಮುಂದೆ ಸುಳಿಯುತ್ತವೆ. ಬರಗೂರು, ಚನ್ನಣ್ಣ ವಾಲೀಕಾರ, ಕಾಳೇಗೌಡ ನಾಗವಾರ, ಕುಂವೀ, ಚಂದ್ರಶೇಖರ ಪಾಟೀಲ, ಬೆಸಗರಹಳ್ಳಿ ರಾಮಣ್ಣ, ಬೊಳುವಾರು, ಗೀತಾ ನಾಗಭೂಷಣ, ಬಿಟಿ ಲಲಿತಾ ನಾಯಕ, ಸುಧಾಕರ- ಥಟ್ಟನೆ ನೆನಪಾಗುವ ಈ ಹೆಸರುಗಳ ಜೊತೆ ಇನ್ನಷ್ಟು ಮಂದಿ ಬಂಡಾಯ ಸಾಹಿತ್ಯ ಎಂಬ ಹಣೆಪಟ್ಟಿ ಇಲ್ಲದೆಯೂ ಮತ್ತೆ ಮತ್ತೆ ಓದಬಹುದಾದಂಥ ಕತೆ, ಕವಿತೆ, ಕಾದಂಬರಿಗಳನ್ನು ಕೊಟ್ಟರು. ಸಾಮಾಜಿಕ ಕಾಳಜಿಯ ಜೊತೆಗೆ ವೈಯಕ್ತಿಕ ಹಸಿವೂ ಇವರಲ್ಲಿದ್ದುದರಿಂದ ಅದು ಸಾಧ್ಯವಾಯಿತೆನ್ನಬೇಕು. ಅಲ್ಲದೇ, ಒಂದು ಚಳವಳಿಯನ್ನು ಕಟ್ಟಿ ಬೆಳೆಸುವ ಕಾಳಜಿ ಮತ್ತು ಬದ್ಧತೆಯೂ ಅವರಲ್ಲಿತ್ತು. ಆರಂಭದ ದಿನಗಳ ಕಸುವು, ಫಲವತ್ತತೆ ಮತ್ತು ಜೀವಂತಿಕೆಯನ್ನು ಅದು ನಂತರದ ದಿನಗಳಲ್ಲೂ ಉಳಿಸಿಕೊಂಡಿದ್ದರೆ ಬಂಡಾಯ ಚಳವಳಿ ತನ್ನ ಬಿಸುಪನ್ನು ಇವತ್ತೂ ಉಳಿಸಿಕೊಂಡಿರುತ್ತಿತ್ತೋ ಏನೋ?
ಮೂವತ್ತು ವರ್ಷದ ನಂತರವೂ ಬಂಡಾಯ ಸಾಹಿತ್ಯ ಎಂದರೆ ಬರಗೂರು, ವಾಲೀಕಾರ, ನೀರಮಾನ್ವಿ, ವೀರಭದ್ರ, ಕಾಳೇಗೌಡ, ಬೆಸಗರಹಳ್ಳಿ, ಪಾಟೀಲ ಮುಂತಾದವರೇ. ಆರಂಭದ ದಿನಗಳಲ್ಲಿ ಅವರು ಕೊಟ್ಟ ಸತ್ವಯುತ ಸಾಹಿತ್ಯ ಮತ್ತು ಚಳವಳಿಯನ್ನು ಪ್ರಭಾವಿಸಿದ ರೀತಿ ಅನನ್ಯ. ನಂತರದ ದಿನಗಳಲ್ಲಿ ಬಂಡಾಯ ಸಾಹಿತ್ಯಕ್ಕೆ ಅಷ್ಟೇ ತೀವ್ರತೆಯಿಂದ ಫಲವತ್ತು ಕೊಡುಗೆಯನ್ನು ನೀಡುವವರು ಬರಲಿಲ್ಲ. ಆನಂತರ ಬಂದ ಬಹುತೇಕ ಲೇಖಕರು ಈ ತಮ್ಮ ತಮ್ಮ ಸ್ವಂತ ನೆಲೆಯನ್ನು ಕಂಡುಕೊಳ್ಳುವಲ್ಲಿ ಉತ್ಸಾಹ ತೋರಿದರೇ ಹೊರತು, ಒಂದು ಚಳವಳಿಗೆ ನಿಷ್ಠರಾಗುವ ಆಸಕ್ತಿಯನ್ನೂ ಹೊಂದಿರಲಿಲ್ಲ. ಹೀಗಾಗಿ ಬಂಡಾಯ ಎನ್ನುವುದು ನವ್ಯ ಮತ್ತು ಪ್ರಗತಿಶೀಲದ ಹಾಗೆ ಒಂದು ಕಾಲದ ಪ್ರಖರ ಪ್ರತಿಭೆಯಂತೆ ಕಾಣಿಸುತ್ತಿದೆಯೇ ಹೊರತು, ಇವತ್ತು ಚಲಾವಣೆಯಲ್ಲಿರುವ ನಾಣ್ಯದಂತೆ ಕಾಣಿಸುತ್ತಿಲ್ಲ. ನೆನಪುಗಳ ಜೋಕಾಲಿಯಲ್ಲಿ ಅದು ಹಿಂದಕ್ಕೂ ಮುಂದಕ್ಕೂ ತನ್ನನ್ನು ಜೀಕಿಕೊಳ್ಳುತ್ತಾ, ಆ ಓಡಾಟದಲ್ಲೇ ಎರಡೂ ಕಾಲಗಳನ್ನೂ ಸ್ಪರ್ಶಿಸುವುದಕ್ಕೆ ಹಂಬಲಿಸುತ್ತಿರುವಂತೆ ತೋರುತ್ತದೆ.
**********
ಹಾಗಿದ್ದರೆ ಇವತ್ತಿನ ಸಾಹಿತ್ಯದ ನಿಲುವುಗಳೇನು? ರಹಮತ್ ತರೀಕೆರೆಯಂಥ ವಿಮರ್ಶಕರು ತಾತ್ವಿಕತೆ, ಸಾಮಾಜಿಕ ಬದ್ಧತೆಯನ್ನು ಮುಂದಿಟ್ಟುಕೊಂಡು ಸಾಹಿತ್ಯಕೃತಿಯನ್ನೂ ಲೇಖಕರನ್ನೂ ಪರಿಭಾವಿಸುವ ಉತ್ಸಾಹ ತೋರುತ್ತಿದ್ದಾರೆ. ಮತ್ತೊಂದು ಕಡೆ ವಿಚಾರವಾದ, ಬೌದ್ಧಿಕತೆ ಎರಡನ್ನೂ ಒಳಗೊಂಡ ಬರಹಗಳನ್ನು ಮೆಚ್ಚುವ ವಿಮರ್ಶಕರು ಕಾಣಿಸಿಕೊಳ್ಳುತ್ತಿದ್ದಾರೆ. ಸಂಸ್ಕೃತಿ ವಿಮರ್ಶೆಯ ಹೆಸರಲ್ಲಿ ಹೊರಗಿನಿಂದ ಮತ್ತೊಂದಷ್ಟು ವಿಚಾರಗಳು ಹರಿದು ಬರುತ್ತಿವೆ. ನೋಮ್ ಚಾಮ್‌ಸ್ಕಿಯಂಥವರನ್ನು ಹಿಡಿದು ತಂದು, ನಮ್ಮ ಪರಿಸರಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಯತ್ನಗಳು ಸೋಲು ಕಂಡಿವೆ. ಇದ್ದಕ್ಕಿದ್ದ ಹಾಗೆ ಮೌಖಿಕ ಪರಂಪರೆಯೂ ಆ ಪರಂಪರೆಗೆ ನಿಷ್ಠರಾದವರೂ ಹಲವರಿಗೆ ಶ್ರೇಷ್ಠರಾಗಿ ಕಾಣಿಸುತ್ತಿದ್ದಾರೆ. ಈ ಮಧ್ಯೆ ಅಭಿಜಾತ ಸಾಹಿತ್ಯಕ್ಕಷ್ಟೇ ತನ್ನ ಮಾನ್ಯತೆ ಎನ್ನುವ ವಿಮರ್ಶಕರೂ ಇದ್ದಾರೆ. ಹಿರಿಯ ವಿಮರ್ಶಕರ ಗಡಿಯಾರ ನಿಂತು ಹೋಗಿ ದಶಕಗಳೇ ಕಳೆದಿವೆ. ಸಾಮಾಜಿಕ ಬದ್ಧತೆಗೆ ತನ್ನನ್ನು ತೆತ್ತುಕೊಂಡಂತೆ ಬರೆಯಬೇಕು ಎನ್ನುವ ಹುಸಿ ಅಪೇಕ್ಷೆಗಳನ್ನು ಹೊಂದಿದ ವಿಮರ್ಶಕರೂ ಆಗೀಗ ಎದುರಾಗುತ್ತಾರೆ.
ಇವೆಲ್ಲದರ ಮಧ್ಯೆ ಓದುಗರು ನಿಜಕ್ಕೂ ಯಾವುದರ ಪರವಾಗಿದ್ದಾರೆ? ಓದುಗರ ಪ್ರಸ್ತಾಪ ಮಾಡಿದರೆ ಸಂಸ್ಕೃತಿ ವಿಮರ್ಶೆ ಮಾಡುವವರಿಗೆ ಸಿಟ್ಟು ಬರುತ್ತದೆ. ಅವರಿಗೆ ಓದುಗರ ಸಂಖ್ಯೆ ಮಾನದಂಡವಲ್ಲ. ಟಾಪ್‌ಟೆನ್ ಪಟ್ಟಿಯಲ್ಲಿ ಒಂದು ಕೃತಿ ಕಾಣಿಸಿಕೊಂಡರೆ ಅದು ಕಳಪೆ ಕೃತಿ ಎಂಬ ಏಕಾಏಕಿ ತೀರ್ಮಾನಕ್ಕೆ ಅವರು ಬಂದುಬಿಡುತ್ತಾರೆ. ಆದರೆ ಅತ್ಯಂತ ಹೆಚ್ಚು ಓದುಗರನ್ನು ಹೊಂದಿದ್ದ ತೇಜಸ್ವಿಯವರ ವಿಚಾರದಲ್ಲಿ ಅದು ನಿಜವಲ್ಲ ಎನ್ನುವುದನ್ನೂ ಅವರೇ ಒಪ್ಪುತ್ತಾರೆ. ಈ ದ್ವಂದ್ವದಲ್ಲಿ ಹುಟ್ಟುವ ಎಡಬಿಡಂಗಿ ತಾತ್ವಿಕತೆ, ಹುಸಿ ಸಾಮಾಜಿಕ ಬದ್ಧತೆ ಮತ್ತು ಯುವ ಲೇಖಕರನ್ನು ಕಂಗಾಲುಮಾಡುವ ದೇಶಕಾಲ ಚಿಂತನೆಯಲ್ಲಿ ಇವತ್ತಿನ ಸಾಹಿತ್ಯಜಗತ್ತು ಡೋಲಾಯಮಾನವಾಗಿದೆ. ಏನೇ ಮಾತಾಡಿದರೂ ಬಸವಣ್ಣ, ಬುದ್ಧ ಮತ್ತು ಅಲ್ಲಮರನ್ನು ಎಳೆದು ತಂದು ಕೆಕ್ಕರಿಸಿ ನೋಡುವವರ ಪಡೆ ಒಂದು ದಿಕ್ಕಿನಲ್ಲಿದೆ. ಮತ್ತೊಂದು ಕಡೆ ಅಷ್ಟೇ ಅಪಾಯಕಾರಿಯಾದ, ಪ್ರಗತಿಶೀಲತೆಯನ್ನೂ ಬಂಡಾಯವನ್ನೂ ಸ್ತ್ರೀಸ್ವಾತಂತ್ರ್ಯವನ್ನೂ ಜಾತ್ಯತೀತ ನಿಲುವನ್ನೂ ಪ್ರಶ್ನಿಸುವ ನಿಲುವು ಕೂಡ ವ್ಯಕ್ತವಾಗುತ್ತಿದೆ. ಈ ಕವಲು-ದಾರಿಯಲ್ಲಿ ನಿಂತ ಓದುಗ ಕಕ್ಕಾಬಿಕ್ಕಿಯಾಗುವಷ್ಚರ ಮಟ್ಟಿಗೆ ಅವನನ್ನು ಗೊಂದಲಗೊಳಿಸುವುದಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ಸಾಹಿತ್ಯದ ಹೊಸ ವಿದ್ಯಾರ್ಥಿಗಳಂತೂ ಯಾರನ್ನು ಓದಬೇಕು ಎನ್ನುವ ಕುರಿತು ನಿಜವಾದ ಗೊಂದಲದಲ್ಲಿ ತೊಳಲಾಡುತ್ತಿರುವಂತಿದೆ.
ಇಂಥ ಹೊತ್ತಲ್ಲಿ ಮೂವತ್ತರ ಹೊಸಿಲಲ್ಲಿರುವ ಬಂಡಾಯದ ಕೈಯಲ್ಲಿ ಕೆಂಪುಗುಲಾಬಿ ಕೂಡ ಬಣ್ಣ
ಕಳಕೊಂಡಂತೆ ಕಾಣುತ್ತಿದೆ.

5 comments:

Badarinath Palavalli said...

girish sir, my mobile wouldn't support kannada fonts sir. i will re visit ur blog on a pc and read all posts.
pl. visit my blog sir.
"bandaya sahithya" avalokana sakalikavagithu sir

Badarinath Palavalli said...

ಈ ಲೇಖನ ನನ್ನ ಮನ ಮುಟ್ಟಿತು ಸಾರ್.
ನನ್ನ ಬ್ಲಾಗಿಗೂ ಬನ್ನಿ

Unknown said...

preethiya jogi nimma ee lekhana patrikeyalli odidde. namma manada bhavanegalannu neevu bareddidderi. nammantha sahithyada vidyarthigalige iruva gondalagalannu theredittiddiri adare naavinnu ade gondaladalliddve utthara enu?

Unknown said...

ಹೌದು.ಖಂಡಿತ ಸತ್ಯ.ನೋವಿನ ಪಾರಾಯಣ ಕೆಲವು ವರ್ಗದ ವ್ಯವಸ್ತೆಗೆ ಹಿಡಿಸದೇ ಹೋಗಿರಬಹುದು ಆದರೆ ಬರಗೂರು ಸರ್ ರಂತವರ ದಿಟ್ಟ ನೇರ ನಿಲುವು ಇಂದಿನ ಯುವ ಸಾಹಿತ್ಯಿಕ ಸಮುದಾಯ ಅಪ್ಪಿ ಆಮಂತ್ರಿಸಿದೆ.

Unknown said...

ಸಿರಾ ಗಡಿನಾಡ ಕವಿಯೋಧ ಲಕ್ಕನಹಳ್ಳಿ ಎಸ್. ಶೇಕ್ ಮೊಹಮ್ಮದ್ ಆಲಿ ಪ್ರಗತಿಪರವಾದಂತಹ ಬಂಡಾಯ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.