Sunday, November 28, 2010
ಕಾರ್ನಾಡರನ್ನು ಪ್ರೀತಿಸುತ್ತಾ...
ಸಿನಿಮಾ ನಿರ್ದೇಶಕರನ್ನೂ ಪತ್ರಕರ್ತರು ಹಾಗಂತ ಕೇಳುವುದುಂಟು. ನಿಮ್ಮ ಸಿನಿಮಾದ ಸಂದೇಶ ಏನು. ಸಮಾಜಕ್ಕೆ ಏನು ಸಂದೇಶ ಕೊಡುತ್ತೀರಿ, ಈ ಸಿನಿಮಾ ಕೆಟ್ಟ ಸಂದೇಶ ನೀಡುವುದಿಲ್ಲವೇ –ಹೀಗೆ ಸಾಗುತ್ತದೆ ಪ್ರಶ್ನೆಗಳ ಸರಮಾಲೆ. ಸಂದೇಶ ಕೊಡುವುದಕ್ಕೆ ಸಿನಿಮಾ ಪ್ರನಾಳಿಕೆಯೋ ಒಡಂಬಡಿಕೆಯೋ ಅಲ್ಲವಲ್ಲ. ಅದು ಬದುಕಿನ ಪ್ರತಿಬಿಂಬ ಮಾತ್ರ.ಒಂದು ಜೀವ ನಮ್ಮೆದುರು ಬದುಕಿದ್ದನ್ನು ನೋಡುವಾಗ ನಮಗೆ ಅದರಿಂದ ಏನು ಹುಟ್ಟುತ್ತದೆಯೋ ಅದಷ್ಟೇ ಸಂದೇಶ. ಏನೂ ಹುಟ್ಟದೇ ಹೋಗುವ ಸಾಧ್ಯತೆಯೂ ಉಂಟು. ಅದು ಆ ಜೀವದ ಸೋಲಂತೂ ಅಲ್ಲ. ಯಾಕೆಂದರೆ ಯಾರೂ ಸಂದೇಶ ಕೊಡುವುದಕ್ಕೆಂದೇ ಬದುಕುವುದಿಲ್ಲ.
ಮೊನ್ನೆ ಹೀಗಾಯಿತು. ಗಿರೀಶ್ ಕಾರ್ನಾಡರ ನಾಟಕಗಳ ಮಾತು ಬಂತು. ನಮ್ಮನ್ನು ಈಗಲೂ ಸೆಳೆಯುವ ನಾಟಕಕಾರ ಗಿರೀಶ್. ಅವರ ನಾಟಕಗಳ ಪಾತ್ರಗಳು ಜೀವಂತವಾಗಿರುತ್ತವೆ. ಹಲವು ವ್ಯಕ್ತಿತ್ವಗಳನ್ನು ಒಳಗೊಂಡಿರುತ್ತವೆ. ಸಂಕೀರ್ಣವಾಗಿರುತ್ತವೆ. ಸರಿತಪ್ಪುಗಳಾಚೆಗೂ ಬದುಕಬಲ್ಲ ತೀವ್ರತೆ ಇರುತ್ತವೆ. ಹೀಗೆಲ್ಲ ಮಾತಾಡುತ್ತಾ ತುಘಲಕ್ ಬಗ್ಗೆ ಮಾತಾಡುತ್ತಿರಬೇಕಾದರೆ `ತುಘಲಕ್ ನಾಟಕದ ಸಂದೇಶ ಏನು ಹೇಳು ನೋಡೋಣ’ ಎಂಬ ಸವಾಲು ಎದುರಾಯಿತು.
ಕೆಲವೊಮ್ಮೆ ವಿಚಿತ್ರ ಮುಜುಗರಗಳಾಗುತ್ತವೆ. ಸಾಹಿತ್ಯ ಕೃತಿಗಳನ್ನು ಹೀಗೇ ಅಂತ ವಿವರಿಸುವುದು ಕಷ್ಟ. ಅದು ಪ್ರೀತಿಯ ಹಾಗೆ. ನೀನು ಅವಳನ್ನೇ ಯಾಕೆ ಪ್ರೀತಿಸುತ್ತೀಯಾ ಎಂಬ ಪ್ರಶ್ನೆಗೆ ಇನ್ನೊಬ್ಬರಿಗೆ ಒಪ್ಪಿಗೆಯಾಗುವಂಥ ಉತ್ತರ ಕೊಡುವುದಂತೂ ಸಾಧ್ಯವೇ ಇಲ್ಲ. ಯಾಕೆಂದರೆ ನಾವು ಯಾಕೆ ಪ್ರೀತಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಂಡಿರುವುದಿಲ್ಲ. ವಿಮರ್ಶೆ ಮತ್ತು ಮೆಚ್ಚುಗೆಗೆ ಇರುವ ವ್ಯತ್ಯಾಸ ಅದೇ. ವಿಮರ್ಶೆ ತಾರ್ಕಿಕ ನಿಲುವುಗಳನ್ನು ಬೇಡುತ್ತದೆ. ಮೆಚ್ಚುಗೆ ಬದುಕಿನಿಂದ ಹುಟ್ಟಿದ್ದಾಗಿರುತ್ತದೆ. ಸಾಹಿತ್ಯ ಜೀವಿಸುವುದು ಮೆಚ್ಚುಗೆಯಲ್ಲೇ ಹೊರತು, ವಿಮರ್ಶೆಯಲ್ಲಿ ಅಲ್ಲ.
ತುಘಲಕ್ ಕೂಡ ಹಾಗೆ ಅಕಾರಣವಾಗಿ ಪ್ರೀತಿಸಬಲ್ಲಂಥ ಕೃತಿ. ಗಿರೀಶ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕ ಲೇಖಕರು ಅವರು ಕೇವಲ ನಾಟಕ ಬರೆದವರಲ್ಲವೇ? ನಾಟಕ ಬರೆದದ್ದಕ್ಕೆ ಜ್ಞಾನಪೀಠ ಪ್ರಶಸ್ತಿ ಕೊಡುವುದು ಸರಿಯೇ ಎಂದೆಲ್ಲ ಗೊಣಗಿಕೊಂಡಿದ್ದರು. ಇವತ್ತೂ ಆ ಪ್ರಶ್ನೆಯನ್ನು ಕೇಳುವ ಯುವ ಲೇಖಕರಿದ್ದಾರೆ.
ಅದಕ್ಕೊಂದು ಕಾರಣವೂ ಇದೆ. ನಾಟಕ ಓದಿಕೊಳ್ಳುವ ಸಾಹಿತ್ಯ ಪ್ರಕಾರ ಅಲ್ಲ. ಅದು ರಂಗಕ್ರಿಯೆಯಲ್ಲಿ ಮೈತಳೆಯಬೇಕಾದದ್ದು. ಹಾಗೆ ರಂಗದ ಮೇಲೆ ಪ್ರದರ್ಶಿತಗೊಳ್ಳುವ ಸೌಭಾಗ್ಯ ಎಲ್ಲ ನಾಟಕಗಳಿಗೂ ಸಿಗುವುದಿಲ್ಲ. ಮತ್ತು ಪ್ರದರ್ಶಿತಗೊಂಡ ನಾಟಕಗಳನ್ನು ನೋಡುವ ಅವಕಾಶ ಎಲ್ಲ ಪ್ರದೇಶದ ಮಂದಿಗೂ ಲಭ್ಯವಾಗುವುದಿಲ್ಲ. ಹೀಗಾಗಿ ರಾಜಧಾನಿಯಲ್ಲಿ ತುಂಬ ಜನಪ್ರಿಯತೆ ಗಳಿಸಿದ ನಾಟಕ, ಗ್ರಾಮೀಣ ಪ್ರದೇಶಗಳ ಮಂದಿಗೆ ಗೊತ್ತೇ ಇರುವುದಿಲ್ಲ. ಕಾರ್ನಾಡರ ವಿಚಾರದಲ್ಲಿ ಆದದ್ದೂ ಅದೇ, ಅವರ ಅತ್ಯಂತ ಜನಪ್ರಿಯ ನಾಟಕಗಳು ನಮ್ಮೂರಿನ ಮಂದಿಗೆ ಗೊತ್ತಿಲ್ಲ. ಕಾರಂತರ ಕಾದಂಬರಿಗಳ ಹಾಗೆ ಅವು ಓದಿಸಿಕೊಳ್ಳಲಿಲ್ಲ. ಕುವೆಂಪು ಕವಿತೆಗಳ ಹಾಗೆ ಹಾಡಿಗೆ ಸಿಲುಕಲಿಲ್ಲ. ಮಾಸ್ತಿಯವರ ಕತೆಗಳಂತೆಯೋ ಅನಂತಮೂರ್ತಿಯವರ ಮಾತು-ಕೃತಿಗಳಂತೆಯೋ ಬೇಂದ್ರೆಯವರ ಕಾವ್ಯದ ಹುಚ್ಚಿನಂತೆಯೋ ಕಾರ್ನಾಡರು ಎಲ್ಲರಿಗೂ ಒದಗಲಿಲ್ಲ.
ಅವರ ಕುರಿತಾದರೂ ಯಾರಿಗೆ ಗೊತ್ತಿತ್ತು ಹೇಳಿ. ಉಡುಪಿ ಕುಂದಾಪುರದ ನಡುವಿರುವ ಕಾರ್ನಾಡು, ಗಿರೀಶರ ಊರು ಎಂದೇ ಅನೇಕರು ಭಾವಿಸಿದ್ದೆವು. ಕಾರ್ನಾಡು ಸದಾಶಿವರಾಯರು ಗಿರೀಶರ ಸಂಬಂಧಿ ಎಂದುಕೊಂಡಿದ್ದೆವು. ಗಿರೀಶ ಕಾರ್ನಾಡರು ಯಾವತ್ತೂ ತನ್ನ ಬಗ್ಗೆ ಹೇಳಿಕೊಂಡವರೂ ಅಲ್ಲ, ಬರೆದುಕೊಂಡವರೂ ಅಲ್ಲ. ವಿವೇಕ ಶಾನುಭಾಗರ ಕೃಪೆಯಿಂದ ಅವರ ಆತ್ಮಚರಿತ್ರೆಯ ಎರಡು ಅಧ್ಯಾಯಗಳು ಓದಲಿಕ್ಕೇ ಸಿಕ್ಕಿದುವಲ್ಲ, ಆಗಲೇ ಅವರ ಬಾಲ್ಯ ಯೌವನಗಳ ಕುರಿತು ನಮಗೊಂದಷ್ಟು ವಿವರಗಳು ಸಿಕ್ಕಿದ್ದು.
ಅದಕ್ಕೂ ಮುಂಚೆ ಕಾರ್ನಾಡರು ಪರಿಚಿತರಾದದ್ದು ಅವರ ನಾಟಕ, ಸಿನಿಮಾಗಳ ಮೂಲಕ. ಒಂದಾನೊಂದು ಕಾಲದಲ್ಲಿ, ಕಾಡು ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ಅವರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯಂತೆ ಉಳಿದದ್ದು ಪ್ರಾಣೇಶಾಚಾರ್ಯರ ಪಾತ್ರದಲ್ಲಿ. ನಾರಣಪ್ಪ ಸತ್ತನೆಂದು ಗೊತ್ತಾದ ತಕ್ಷಣ ಊಟವನ್ನು ಹಾಗೇ ಬಿಟ್ಟು ಆಪೋಶನ ತೆಗೆದುಕೊಂಡು ಏಳುವ ಚಿತ್ರವೊಂದು ಇವತ್ತಿಗೂ ನನ್ನ ಮನಸ್ಸಿನಲ್ಲಿದೆ. ಆಮೇಲೆ ಆನಂದಭೈರವಿ ಎಂಬ ಚಿತ್ರದಲ್ಲಿ ಕಾರ್ನಾಡರು ನಾಟ್ಯಾಚಾರ್ಯರಾಗಿ ನಟಿಸಿದ್ದರು. ಆ ಪಾತ್ರವೂ ಕಣ್ಮುಂದೆ ಹಸಿರು.
ಮೂಲತಃ ಪತ್ರಕರ್ತರಾದ ನಮಗೆಲ್ಲ ಕಾರ್ನಾಡರ ಮೇಲೆ ಸಿಟ್ಟು. ಅವರು ಯಾವತ್ತೂ ಹೇಳಿಕೆಗಳನ್ನು ಕೊಟ್ಟವರಲ್ಲ. ಸಾಹಿತ್ಯ ಸಮ್ಮೇಳನದ ಬಗ್ಗೆ ನಿಮಗೇನು ಅನ್ನಿಸುತ್ತದೆ ಎಂದು ಕೇಳಿದರೆ ನೋ ಕಾಮೆಂಟ್ಸ್ ಎಂದು ಹೇಳಿ ಫೋನಿಟ್ಟುಬಿಡುತ್ತಿದ್ದರು. ಎಷ್ಟೋ ಸಾರಿ ಫೋನಿಗೂ ಸಿಗುತ್ತಿರಲಿಲ್ಲ. ಯಾವುದಾದರೂ ಸಮಾರಂಭಕ್ಕೆ ಕರೆದರೆ ಕಠೋರವಾಗಿ ನಿರಾಕರಿಸುತ್ತಿದ್ದರು. ಏನನ್ನಾದರೂ ಬರೆದುಕೊಡಿ ಎಂದರೆ ನಾನು ಬೇರೇನೋ ಮಾಡುತ್ತಿದ್ದೇನೆ ಬಿಡುವಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಅವರ ದನಿಯಲ್ಲಿ ದ್ವಂದ್ವವನ್ನು ನಾನಂತೂ ಕಂಡೇ ಇಲ್ಲ. ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆದರೂ ಅವರದು ಅದೇ ಉತ್ತರ. ನಾನು ಬರುವುದಕ್ಕಾಗುವುದಿಲ್ಲ. ಮತ್ತೆ ಫೋನಿಸುವ ಅಗತ್ಯವಿಲ್ಲ. ನಮಸ್ಕಾರ. ಹೀಗಾಗಿ ಅವರು ಸಾಹಿತ್ಯ ಜಗತ್ತಿನಿಂದ ಹೊರಗೇ ಉಳಿಯಲು ಬಯಸುತ್ತಾರೆ ಎಂದು ನಾವೆಲ್ಲ ಅವರನ್ನು ಅಸೂಯೆ ಮತ್ತು ಸಿಟ್ಟಿನಿಂದ ನೋಡುತ್ತಿದ್ದೆವು.
ಚಿತ್ರರಂಗದ ಮಿತ್ರರೂ ಅವರ ಬಗ್ಗೆ ಕತೆ ಹೇಳುತ್ತಿದ್ದರು. ವಿಪರೀತ ಸಂಭಾವನೆ ಕೇಳುತ್ತಾರೆ ಎಂಬುದು ಅಂಥ ಅಪಾದನೆಗಳಲ್ಲಿ ಪ್ರಮುಖವಾದದ್ದು. ಕನ್ನಡ ನಿರ್ಮಾಪಕರ ರೀತಿನೀತಿಗಳು ತಿಳಿದ ನಂತರ ಕಾರ್ನಾಡರು ಸರಿ ಎಂಬ ತೀರ್ಮಾನಕ್ಕೆ ನಾವು ಬರದೇ ಬೇರೆ ದಾರಿಯೇ ಇರಲಿಲ್ಲ.
ನಿರ್ಮಾಪಕರೊಬ್ಬರು ಒಂದು ಟೀವಿ ಸೀರಿಯಲ್ಲು ಆರಂಭಿಸಿದ ದಿನಗಳಲ್ಲಿ ಅದರಲ್ಲಿ ಪ್ರಮುಖ ಪಾತ್ರವಾಗಿ ನಟಿಸಲು ಕಾರ್ನಾಡರು ಒಪ್ಪಿದ್ದರು. ಅವರನ್ನು ಆಗ ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಕಾರ್ನಾಡರು ತಮ್ಮ ಎಂದಿನ ಗಡಸು ದನಿಯಲ್ಲಿ ತಮ್ಮ ಸಂಭಾವನೆಯನ್ನು ಸೂಚಿಸಿದ್ದರು. ನಾವು ಕತೆ ಹೇಳಲು ಯತ್ನಿಸಿದಾಗ, ಅದೇನೂ ಬೇಕಾಗಿಲ್ಲ. ಒಂಬತ್ತು ಗಂಟೆಗೆ ಬರುತ್ತೇನೆ. ನಿಮ್ಮ ವಸ್ತ್ರವಿನ್ಯಾಸಕನಿಗೆ ಬಂದು ಬಟ್ಟೆಯ ಅಳತೆ ತೆಗೆದುಕೊಂಡು ಹೋಗಲು ಹೇಳಿ ಎಂದಿದ್ದರು. ಕತೆ ಹೇಗಿರಬೇಕು ಎಂದು ಕೇಳಿದ್ದಕ್ಕೆ ಅದು ನಿಮ್ಮ ಜವಾಬ್ದಾರಿ, ನಾನೇ ಕತೆ ಹೇಗಿರಬೇಕು ಎಂದು ಹೇಳುವುದಾದರೆ, ನಾನೇ ಸೀರಿಯಲ್ ಮಾಡುತ್ತಿದ್ದೆ ಎಂದು ನಕ್ಕಿದ್ದರು. ಅದರ ನಿರ್ಮಾಪಕರಿಗೆ ಕಾರ್ನಾಡರ ಕುರಿತು ಏನೇನೂ ಗೊತ್ತಿರಲಿಲ್ಲ. ದೊಡ್ಡ ಮೊತ್ತದ ಸಂಭಾವನೆ ಕೊಟ್ಟ ಕಾರಣಕ್ಕೆ ಮೊದಲ ದಿನವೇ ಅವರು ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರ ತನಕ ಮೂರು ನಾಲ್ಕು ಪುಟಗಳ ಐದೋ ಆರೋ ದೃಶ್ಯಗಳನ್ನು ಚಿತ್ರೀಕರಿಸಿ ಕಾರ್ನಾಡರನ್ನು ಸುಸ್ತುಮಾಡಿಬಿಟ್ಟಿದ್ದರು. ಆವತ್ತು ಶೂಟಿಂಗಿನಿಂದ ಮರಳಿದವರು ಮತ್ತೆ ಆ ಸೆಟ್ಟಿನ ಕಡೆ ತಲೆ ಹಾಕಲಿಲ್ಲ. ನಿರ್ಮಾಪಕರನ್ನು ಕರೆದು ತೆಗೆದುಕೊಂಡ ಮುಂಗಡಹಣವನ್ನು ವಾಪಸ್ಸು ಕೊಟ್ಟು ಸುಮ್ಮನಾದರು. ಮತ್ತೆಂದೂ ಸೀರಿಯಲ್ಲು ಜಗ್ತತ್ತಿಗೆ ಕಾಲಿಡುವುದಿಲ್ಲ ಎಂದು ಆವತ್ತೇ ಅವರು ನಿರ್ಧಾರ ಮಾಡಿರಬೇಕು.
ಕಾರ್ನಾಡರ ಗೆಳೆಯರು ಯಾರು, ಆಪ್ತರು ಯಾರು, ಅವರು ಏನು ಓದುತ್ತಾರೆ, ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಾರೆ ಎಂಬುದು ಇವತ್ತಿಗೂ ನಿಗೂಢ. ಹೊಸ ಗೆಳೆಯರನ್ನು ಅವರು ಸಂಪಾದಿಸಿದಂತಿಲ್ಲ. ಹಳೆ ಗೆಳೆಯರ ಜೊತ ಜಗಳ ಕಾದ ಸುದ್ದಿಯೂ ಇಲ್ಲ. ಅವರು ಫೇಸ್ ಬುಕ್ಕಿನಲ್ಲಾಗಲೀ, ಆರ್ಕುಟ್‍ನಲ್ಲಾಗಲೀ ಸಿಗುವುದಿಲ್ಲ.
ಅವರಾಗೇ ಫೋನ್ ಮಾಡಿ ಮಾತಾಡುತ್ತಿದ್ದವರು ವೈಎನ್‍ಕೆ. ನಾನು ಗಿರೀಶ್ ಎಂದು ಮಾತು ಶುರು ಮಾಡುತ್ತಿದ್ದ ಗಿರೀಶರ ಪ್ರತಿಭೆಯ ಕುರಿತು ವೈಯೆನ್ಕೆ ಬಾಯ್ತುಂಬ ಮಾತಾಡುತ್ತಿದ್ದರು. ಅವರು ಹೇಳಿದ ಗಿರೀಶರ ಗುಣಗಳಲ್ಲಿ ಗಮನಾರ್ಹವಾದದ್ದು ಕಾರ್ನಾಡರಿಗಿರುವ ಏಕಾಗ್ರತೆ. ತುಂಬ ತನ್ಮಯರಾಗಿ ಅವರು ಮಾಡಬೇಕಾದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ ಮತ್ತು ಅದರ ಕಡೆಗೇ ಫೋಕಸ್ ಆಗಿರುತ್ತಾರೆ. ಬೇರೆ ದಿಕ್ಕಿಗೆ ಅವರ ಕಣ್ಣೆತ್ತಿಯೂ ನೋಡುವುದಿಲ್ಲ. ಹೀಗಾಗಿಯೇ ಅವರು ಅಷ್ಟೊಂದು ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಿದ್ದರು ವೈಯೆನ್ಕೆ.
ಒಮ್ಮೆ ಕಾರ್ನಾಡರ ಮನೆಗೆ ಹೋದಾಗ ಅವರ ಪುಟ್ಟ ಆಫೀಸು ಗಮನ ಸೆಳೆದಿತ್ತು. ಒಂದು ಫೋನು, ಫ್ಯಾಕ್ಸು, ಪ್ರಿಂಟರ್ ಮತ್ತು ಕಂಪ್ಯೂಟರ್ ಇಟ್ಟುಕೊಂಡು ಓದುತ್ತಿದ್ದ ಪುಸ್ತಕಗಳನ್ನು ಪಕ್ಕದಲ್ಲಿಟ್ಟುಕೊಂಡು ಗಿರೀಶ್ ಕೂತಿದ್ದರು. ನಾವು ಯಾವುದೋ ವಿಶೇಷಾಂಕಕ್ಕೆ ಕತೆ ಕೇಳಲು ಹೋಗಿದ್ದೆವು. ವೈಯೆನ್ಕೆ ಆ ಕುರಿತು ಮೊದಲೇ ಮಾತಾಡಿದ್ದರಿಂದ ನಮಗೆ ಒಳಗೆ ಪ್ರವೇಶ ಸಿಕ್ಕಿತ್ತು. ಬರೆದಿಟ್ಟ ಕತೆಯನ್ನು ಕೊಟ್ಟು ಅವರು ಹೋಗಿ ಬನ್ನಿ ಅಂದಿದ್ದರು.
ಕಾರ್ನಾಡರ ಐವತ್ತು ವರ್ಷಗಳ ಲೇಖನಗಳ ಸಂಕಲನ ಆಗೊಮ್ಮೆ ಈಗೊಮ್ಮೆ. ಅದನ್ನು ಎರಡನೆ ಸಲ ಓದಿದಾಗ ಅಚ್ಚರಿಯಾಯಿತು. ಸ್ಪಷ್ಟ ಚಿಂತನೆಯ, ಅನ್ನಿಸಿದ್ದನ್ನು ತುಂಬ ಸರಳವಾಗಿ ಸರಾಗವಾಗಿ ಮತ್ತು ಗೊಂದಲವೇ ಇಲ್ಲದಂತೆ ಹೇಳುವ ಕಾರ್ನಾಡರ ಪರಿಚಯವನ್ನು ಈ ಸಂಕಲನ ಮಾಡಿಕೊಡುತ್ತದೆ. ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಅವರು ನಾಗರಿಕ ಮತ್ತು ಸೈನಿಕ ಪರಿಕಲ್ಪನೆಯ ಕುರಿತು ಮಾತಾಡಿದ್ದಾರೆ. ಅಲ್ಲಿ ಅವರ ನಿಲುವು ಅತ್ಯಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವರು ಎಂಥ ಮಾನವತಾವಾದಿ ಎನ್ನುವುದನ್ನೂ ಆ ಭಾಷಣ ಹೇಳುತ್ತದೆ. ಅಲ್ಲಿರುವ ನಾಲ್ಕು ಸಾಲುಗಳನ್ನು ನೋಡಿ-
ಸೈನಿಕನಂತೆ ವರ್ತಿಸುವುದರಿಂದ ನಾಗರಿಕನಿಗೆ ಸಿಗುವ ಅತಿದೊಡ್ಡ ಮಾನಸಿಕ ತೃಪ್ತಿಯೆಂದರೆ ಅವನು ಎಲ್ಲ ಸಾಮಾಜಿಕ, ನೈತಿಕ ಜವಾಬುದಾರಿಗಳಿಂದ ಪಾರಾಗುತ್ತಾನೆ. ಮನುಷ್ಯತ್ವದ ಅತ್ಯಂತ ಮಹತ್ವದ ಕುರುಹು ಎಂದರೆ ಆಯ್ಕೆ ಮಾಡುವ ಸ್ವಾತಂತ್ರ್ಯ. ನನ್ನ ನೈತಿಕ ಮೌಲ್ಯಗಳನ್ನು ನಾನು ನನ್ನ ಅಂತರಂಗದಿಂದ ಸೃಷ್ಟಿಸಬೇಕು.
ಸಂದರ್ಶನ, ಲೇಖನ, ಕತೆ, ನಾಟಕದ ಕುರಿತು ಅನಿಸಿಕೆ ಇವೆಲ್ಲ ತುಂಬಿರುವ `ಆಗೊಮ್ಮೆ ಈಗೊಮ್ಮೆ’ ಕಳೆದ ಎರಡು ವಾರಗಳಿಂದ ನನ್ನನ್ನು ಹಿಡಿದಿಟ್ಟಿದೆ. ಕಾರ್ನಾಡರನ್ನು ಬೇರೆಯೇ ಆಗಿ ನೋಡುವುದನ್ನು ಕಲಿಸಿದೆ. ಗೆಳೆಯರಾದ ಸುರೇಂದ್ರನಾಥ್ ಅಚ್ಚರಿಯಿಂದ ಹೇಳುತ್ತಿರುತ್ತಾರೆ- ನನಗೆ ಕಾರ್ನಾಡರೂ ಶ್ರೀನಿವಾಸ ವೈದ್ಯರೂ ಮಾತಾಡುವುದನ್ನು ಕೇಳಿದಾಗ ಆಶ್ಚರ್ಯವಾಗುತ್ತದೆ. ನೀನು ಅವನು ಅಂತ ಏಕವಚನದಲ್ಲಿ ಧಾರವಾಡ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿರುತ್ತಾರೆ. ಅಂಥ ಹಿರಿಯರಿಬ್ಬರು ಹಾಗೆ ಮಾತಾಡುವುದನ್ನು ನೋಡುವುದೇ ಒಂದು ಚಂದ.
ಕಾರ್ನಾಡರೂ ಹಿರಿಯರಾ? ಹುಡುಕಿದರೆ ಗೊತ್ತಾದದ್ದು ಕಾರ್ನಾಡರಿಗೆ ಎಪ್ಪತ್ತೆರಡು.
Sunday, November 21, 2010
ಬೇಡ
ಇಲ್ಲಿ ವಿಸರ್ಜನೆ ಮಾಡಬಾರದು. ಅಲ್ಲಿ ಕಾಲಿಡಬಾರದು. ಈ ರಸ್ತೆಯಲ್ಲಿ ವಾಪಸ್ಸು ಬರಬಾರದು. ಅಲ್ಲಿ ಕಾರು ನಿಲ್ಲಿಸಬಾರದು. ಮತ್ತೆಲ್ಲೋ ನಿಲ್ಲುವಂತಿಲ್ಲ. ಇನ್ನೆಲ್ಲೋ ಮಲಗಬಾರದು. ಕಾರಲ್ಲಿ ಪ್ರೀತಿ ಮಾಡಬಾರದು. ದೇವಸ್ಥಾನದ ಮುಂದೆ ಸಿಗರೇಟು ಸೇದಬಾರದು. ಒಳಾಂಗಣದಲ್ಲಿ ಕಾಲು ಇಳಿಬಿಟ್ಟು ಕೂರಬಾರದು. ಅಂಗಿ ಬನೀನು ಹಾಕಿಕೊಂಡು ಗರ್ಭಗುಡಿಯನ್ನು ಪ್ರವೇಶಿಸಬಾರದು. ಸತ್ಯನಾರಾಯಣ ಪೂಜೆ ಪ್ರಸಾದ ನಿರಾಕರಿಸಬಾರದು. ಅಯ್ಯಪ್ಪನ ದರ್ಶನಕ್ಕೆ ಹೋಗುವವರು ಕುರಿಕೋಳಿ ತಿನ್ನಬಾರದು. ರಾಘವೇಂದ್ರಸ್ವಾಮಿ ಭಕ್ತರು ಗುರುವಾರ ಊಟ ಮಾಡಬಾರದು. ಚೌಡೇಶ್ವರಿ ಆರಾಧಕರು ಶನಿವಾರ ಕುಡೀಬಾರದು. ಮನೆಬಿಟ್ಟು ಹೋಗುವಾಗ ಎಲ್ಲಿಗೆ ಅಂತ ಕೇಳಬಾರದು. ಹೆಣ್ಮಕ್ಕಳು ಬೋಳುಹಣೆಯಲ್ಲಿ ಇರಬಾರದು. ರಾತ್ರಿ ತಲೆ ಬಾಚಬಾರದು. ಬಟ್ಟೆ ಹೊಲಿಯಬಾರದು....
ನೂರೆಂಟು ರಾಮಾಯಣ. ಎಲ್ಲಿಗೆ ಹೋದರೂ ಇಂಥದ್ದೆ ನಿಯಮ, ನೀತಿ. ಒಂದಲ್ಲ ಎರಡಲ್ಲ. ಕೆಲವು ಕಾನೂನು ಕೊಟ್ಟದ್ದು, ಕೆಲವು ಪರಂಪರೆ ಬಿಟ್ಟದ್ದು, ಕೆಲವು ಅಂಧಶ್ರದ್ಧೆ ಇಟ್ಟದ್ದು.
ಆಕಾಶವಾಣಿ ಕೇಳುತ್ತಿದ್ದರೆ ಮತ್ತೊಂದಷ್ಟು ಸಲಹೆ. ಹಿಂದೆ ನೋಡಿ ಮುಂದೆ ನೋಡಿ, ಮೇಲಕ್ಕೂ ಕೆಳಕ್ಕೂ ನೋಡಿ, ಅಪರಿಚಿತರಿಗೆ ಮನೆ ಕೊಡಬೇಡಿ, ನೀರು ಪೋಲು ಮಾಡಬೇಡಿ, ಎರಡೇ ಮಕ್ಕಳು ಮಾಡಿ, ಕುಡಿದು ವಾಹನ ಓಡಿಸಬೇಡಿ, ದೊಡ್ಡ ದನಿಯಲ್ಲಿ ಮಾತಾಡಬೇಡಿ, ಸಜ್ಜನಿಕೆಯಿಂದ ವರ್ತಿಸಿ, ನಮ್ಮ ದೇಶದ ಮಾನ ಉಳಿಸಿ, ಕರೆಂಟು ಉಳಿಸಿ, ಕಾಡು ಉಳಿಸಿ, ಪ್ರಾಣಿಗಳನ್ನು ಹಿಂಸಿಸಬೇಡಿ.
ಇಷ್ಟೇ ಅಲ್ಲ. ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ, ತನ್ನ ಬಣ್ಣಿಸಬೇಡ ಎಂಬುದರಿಂದ ಹಿಡಿದು ಹುಲ್ಲಿನ ಮೇಲೆ ನಡೆಯಬೇಡಿ, ಕಂಡಕಂಡಲ್ಲಿ ಉಗುಳಬೇಡಿ, ಹೆಂಡತಿಯನ್ನು ಹೊಡೆಯಬೇಡಿ, ಹೆತ್ತವರನ್ನು ಕಡೆಗಣಿಸಬೇಡಿ, ಪರಭಾಷಾ ಸಿನಿಮಾ ನೋಡಬೇಡಿ, ಇಂಗ್ಲಿಷ್ ಕಲಿಯಬೇಡಿ, ಕನ್ನಡ ಮರೆಯಬೇಡಿ, ಆಫೀಸಿಗೆ ರಜೆ ಹಾಕಬೇಡಿ, ದುಡಿಯಲು ಸೋಮಾರಿತನ ಮಾಡಬೇಡಿ, ಹಾದರ ಮಾಡದಿರಿ, ಜವಾಬ್ದಾರಿಯಿಂದ ತಪ್ಪಿಸಿಕೊಂಡು ಓಡದಿರಿ, ಮಹಿಳೆಯರನ್ನು ಕಾಡದಿರಿ, ಕೋತಿಗಳಿಗೆ ತಿಂಡಿತಿನಿಸು ನೀಡದಿರಿ...
ಎಷ್ಟೆಲ್ಲ ಬೇಡಗಳ ಮಧ್ಯೆ ಬದುಕುತ್ತಿದ್ದೇವೆ ಎನ್ನಿಸುತ್ತಿದೆ ಅಲ್ಲವೇ? ಪ್ರಶ್ನೆ ಅದಲ್ಲ. ನಮಗೆ ಇಷ್ಟೊಂದು ಕಟ್ಟುಪಾಡುಗಳು ಬೇಕಾ? ಇದನ್ನೆಲ್ಲ ನಿರ್ಧಾರ ಮಾಡುವವರು ಯಾರು? ಕಾನೂನೇ, ವ್ಯವಸ್ಥೆಯೇ, ಧರ್ಮವೇ, ಜಾತಿಯೇ, ಆಚಾರವೇ, ಮಾನವೀಯತೆಯೇ? ನಾವು ನಿಜಕ್ಕೂ ಅಷ್ಟೊಂದು ಮೂರ್ಖರೇ?
ಸುತ್ತ ನೋಡುತ್ತಿದ್ದರೆ ಗಾಬರಿಯಾಗುತ್ತದೆ. ಬಹುಶಃ ನಾವು ಅತ್ಯಂತ ನಾಗರಿಕರಂತೆ ನಟಿಸುತ್ತಿದ್ದೇವೋ ಏನೋ? ಸಹಾನುಭೂತಿ, ಅನುಕಂಪ, ಕರುಣೆಯ ಮಾತು ಹಾಗಿರಲಿ. ರಸ್ತೆಯಲ್ಲಿ ಎಲ್ಲರಿಗೂ ತೊಂದರೆ ಆಗುವಂತೆ ವಾಹನ ನಿಲ್ಲಿಸಬಾರದು ಎನ್ನುವ ಕನಿಷ್ಟ ತಿಳುವಳಿಕೆಯನ್ನು ನೀಡುವುದಕ್ಕೂ ಕಾನೂನೇ ಬೇಕಾ? ಹಾಗಿದ್ದರೆ ನಮ್ಮ ಶಿಕ್ಷಣ ನಮಗೆ ಕೊಟ್ಟದ್ದೇನು? ಸಂಸ್ಕಾರ ಅನ್ನುವ ಮಾತಿಗೆ ಅರ್ಥವೇನು? ಮೊದಲ ಗುರು ತಾಯಿ, ನಂತರದ ಗುರು ತಂದೆ, ಆಮೇಲಿನ ಗುರು ಆಚಾರ್ಯ, ಇದರೊಟ್ಟಿಗೇ ರಕ್ತಗತವಾಗಿ ಬಂದಿದೆ ಎಂದು ನಂಬಲಾಗುತ್ತಿರುವ ಉತ್ತಮ ಸಂಸ್ಕಾರ- ಇವೆಲ್ಲವನ್ನೂ ಮೀರಿದ್ದು ಮೂಲಪ್ರವೃತ್ತಿಯಲ್ಲವೇ?
ಹಾಗಿದ್ದರೆ ಮೂಲಪ್ರವೃತ್ತಿ ಏನು? ಆಹಾರ, ನಿದ್ರೆ, ಮೈಥುನ. ಅಷ್ಟೇ ಸಾಕೆಂದಿದ್ದವರಿಗೆ ಹೊಸದಾಗಿ ಶುರುವಾಗಿದೆ ಬೇಸರ. ಮತ್ತೆಲ್ಲಿಗೋ ಹೋಗುವ, ಮತ್ತೇನನ್ನೋ ಮುಟ್ಟುವ ಆಸೆ. ಅನನ್ಯವಾಗುವ, ವಿಭಿನ್ನವಾಗುವ, ಬೇರೆಯೇ ಆಗುವ ಹೆಬ್ಬಯಕೆ. ಹೀಗೆ ಬೇರೆಯೇ ಆಗುವ ಆಸೆಗೆ ನೂರೆಂಟು ಹುನ್ನಾರ.
ಎಲ್ಲರೂ ಸಮಾನರು ಎಂದು ನಾವೆಷ್ಟೇ ಹೇಳಿಕೊಂಡರೂ ಅಸಾಮಾನ್ಯನಾಗುವ ಆಸೆ ಬಿಡುವುದಿಲ್ಲ. ಕುರಿಮಂದೆಯಲ್ಲಿ ನೂರು ಕುರಿಯಿರುತ್ತದೆ ಅಂತಿಟ್ಟುಕೊಳ್ಳಿ. ಪ್ರತಿಯೊಂದು ಕುರಿಗೂ ತಾನು ಕುರಿಯೆಂಬುದು ಗೊತ್ತು. ಅದು ಕುರಿಯಂತೆಯೇ ವರ್ತಿಸುತ್ತದೆ. ಕುರಿಯ ಹಾಗೇ ತಲೆತಗ್ಗಿಸಿ ನಡೆಯುತ್ತದೆ. ತುಪ್ಪಳ ಬೆಳೆಸಿ ಅದನ್ನು ಸವರಿ ಮಾರಿದರೂ ಅದಕ್ಕೆ ಆ ಕುರಿತು ಹೆಮ್ಮೆಯೂ ಇಲ್ಲ, ಬೇಸರವೂ ಇಲ್ಲ. ನಾವೂ ಅಷ್ಟೇ, ಹೆಚ್ಚು ತುಪ್ಪಳವನ್ನು ಕೊಡುವ ಕುರಿಯನ್ನು ಹೆಚ್ಚು ಗೌರವದಿಂದ ಕಾಣುತ್ತೇವಾ? ಅದೂ ಇಲ್ಲ. ಅದು ಕೂಡ ಒಂದು ಕುರಿ ಅಷ್ಟೇ.
ನಾವು ಹಾಗಲ್ಲ. ಎಲ್ಲರಿಗೂ ಮಾತು ಬರುತ್ತದೆ. ಕೆಲವರು ಚೆನ್ನಾಗಿ ಮಾತಾಡುತ್ತಾರೆ. ಎಲ್ಲರೂ ಬರೆಯುತ್ತಾರೆ, ಕೆಲವರು ಚೆನ್ನಾಗಿ ಬರೆಯುತ್ತಾರೆ. ಎಲ್ಲರೂ ಮನುಷ್ಯರೇ, ಆದರೆ ಕೆಲವರು ಸುಂದರವಾಗಿರುತ್ತಾರೆ. ಹೀಗೆ ನಮ್ಮನ್ನು ಒಡೆಯುವುದಕ್ಕೆ ಪ್ರತಿಭೆ, ಸಂಪತ್ತು, ಸೌಂದರ್ಯ, ಜಾತಿ, ಅಧಿಕಾರ ಎಂಬ ಐದು ಕೊಡಲಿಗಳು ಕಾದು ಕೂತಿವೆ. ಇವುಗಳಲ್ಲಿ ಯಾವ ಕೊಡಲಿಯನ್ನು ಕೈಗೆತ್ತಿಕೊಂಡರೂ ಸಾಕು, ಅವು ಮಾನವ ಸರಪಳಿಯನ್ನು ತುಂಡರಿಸುತ್ತವೆ. ಕ್ರಮೇಣ ಈ ಐದರ ಪೈಕಿ ಒಂದು ಗುಣ ಗುಲಗಂಜಿ ತೂಕ ಹೆಚ್ಚಿದ್ದರೂ ಕೂಡ, ಅಂಥವನು ಎತ್ತರದಲ್ಲಿ ನಿಲ್ಲುತ್ತಾನೆ. ತನ್ನವರು ತುಂಬ ಕೆಳಗಿದ್ದಾರೆ ಎಂದು ಭಾವಿಸುತ್ತಾನೆ.
ಈ ವೈಚಿತ್ರ್ಯವನ್ನು ಗಮನಿಸಿದ್ದು ಕಾಮರಾಜ ಮಾರ್ಗ’ ಕಾದಂಬರಿಯ ಪುಟಗಳನ್ನು ತಿರುವಿಹಾಕುತ್ತಾ ಹೋದಾಗ. ತುಂಬ ನಿರ್ಬಿಢೆಯಿಂದ ಸಾಗುವ ಕಾದಂಬರಿಗೆ ವಿಷಾದದ ತೆಳುವಾದ ಲೇಪವೂ ಇದ್ದಂತಿದೆ. ಅಲ್ಲಿ ತನ್ನ ಚೆಲುವನ್ನು ಬಳಸುವ ಸುಂದರಿಯರಿದ್ದಾರೆ. ಹಾಗೇ, ತನ್ನ ದೇಹವನ್ನು ಬೇರೊಬ್ಬರು ಬಳಸಿಕೊಂಡಾಗ ನರಳುವವರೂ ಎದುರಾಗುತ್ತಾರೆ. ಅಧಿಕಾರಕ್ಕೆ ಸಮೀಪ ಇರುವ ಸಲುವಾಗಿ ಸೌಂದರ್ಯ, ಜಾತಿ, ಪ್ರತಿಭೆ ಮತ್ತು ಸಂಪತ್ತನ್ನು ಒತ್ತೆಯಿಟ್ಟವರೂ ಕಾಣಸಿಗುತ್ತಾರೆ. ಅವರೆಲ್ಲರೂ ಅಂತಿಮವಾಗಿ ಸಾಧಿಸಹೊರಟಿದ್ದಾದರೂ ಏನನ್ನು ಎಂಬ ಪ್ರಶ್ನೆಯನ್ನು ಕಾಮರಾಜಮಾರ್ಗ’ ಮತ್ತೆ ಮತ್ತೆ ಕೇಳಿಕೊಳ್ಳುತ್ತದೆ.
ಏರುವ ಆಸೆ, ಜಾರುವ ಭಯ, ಆಳ ತಿಳಿಯದೆ ಧುಮುಕುವ ಹುಂಬತನ ಮತ್ತು ಸಾಹಸೀ ಪ್ರವೃತ್ತಿ, ಗೆಲ್ಲುವುದು ತನಗಷ್ಟೇ ಗೊತ್ತಿದೆ ಎಂಬ ಹಮ್ಮು, ನೀನು ಗೆದ್ದದ್ದೂ ಸುಳ್ಳು ಎಂಬಂತೆ ನಗುವ ಕನ್ನಡಿ. ಬದುಕಿಗೆ ಸೀಮೆಯಿಲ್ಲ, ಅದು ನಿಸ್ಸೀಮವೂ ಅಲ್ಲ. ಹೊಸಿಲಾಚೆಗೆ ಏನಿದೆ ಈಚೆಗೇನಿದೆ ಅನ್ನುವುದು ಹೊಸಿಲು ದಾಟುವ ಧಾವಂತದಲ್ಲಿ ನಮಗೆ ಗೊತ್ತಾಗುವುದೇ ಇಲ್ಲ. ಎಷ್ಟೋ ವರ್ಷಗಳ ನಂತರ ತಿರುಗಿ ನೋಡಿದರೆ ನಾವು ದಾಟಿದ್ದೇ ತಪ್ಪೇನೋ ಅನ್ನಿಸಿ ಬೇಸರವಾಗುತ್ತದೆ. ಆ ಕ್ಷಣದ ಜಿಗಿದು ದಾಟುವ ಹುರುಪು, ದಾಟಿದ ಹೆಮ್ಮೆ ಇವೆರಡನ್ನೂ ನೆನಪಿಸಿಕೊಳ್ಳುತ್ತಾ ಕಾಲ ಕಳೆಯುವುದಷ್ಟೇ ಉಳಿದಿರುತ್ತದೆ.
*********
ದೇವನೂರು ಮಹಾದೇವ ಕೂಡ `ಬೇಡ’ ಅಂದರು. ಕನ್ನಡದಲ್ಲಿ ಶಿಕ್ಷಣ ಕೊಡುವ ತನಕ ನೃಪತುಂಗ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಪತ್ರ ಬರೆದರು. ಅವರು ಹೇಳಿದ್ದು ಇಷ್ಟೇ:
ಅದೇನೂ ಸರ್ಕಾರಕ್ಕೆ ಆಗದ ಕೆಲಸವೇನೂ ಆಗಿರಲಿಲ್ಲ. ಪರಿಷತ್ತು ಕೂಡ ಸಾಹಿತ್ಯ ಸಮ್ಮೇಳನ ಮಾಡುವುದಿಲ್ಲ ಎಂದು ಸುಮ್ಮನಿರಬಹುದಾಗಿತ್ತು. ಆದರೆ ಪರಿಷತ್ತು ಕೂಡ ಸರ್ಕಾರವನ್ನು ಅರ್ಥ ಮಾಡಿಕೊಂಡಿದೆ. ಸಮ್ಮೇಳನ ನಡೆಸುವುದಿಲ್ಲ ಎಂದರೆ ಸರ್ಕಾರ ಬೇಡ ಬಿಡಿ’ ಎನ್ನಬಹುದು. ಒಂದು ವರ್ಷ ನಡೆಯದೇ ಹೋದರೆ ಮತ್ತೆಂದೂ ನಡೆಯದೇ ಇರಬಹುದು. ಅಲ್ಲಿಗೆ ಅನೇಕರು ನಿರುದ್ಯೋಗಿಗಳಾಗುತ್ತಾರೆ. ಕೋಟ್ಯಂತರ ರುಪಾಯಿಯ ವಹಿವಾಟು ನಿಂತುಹೋಗುತ್ತದೆ.
ಅದೆಲ್ಲವನ್ನು ಬದಿಗಿಟ್ಟು ನೋಡಿದರೂ ಬೇಸರ. ದೇವನೂರು ಮಹಾದೇವ ಅವರ ಹೇಳಿಕೆಗ ಸಾಹಿತ್ಯ ಜಗತ್ತಿನಲ್ಲಿ ದೊಡ್ಡ ಮಾನ್ಯತೆ ಸಿಗುತ್ತದೆ. ಸಾಹಿತಿಗಳೆಲ್ಲ ಒಗ್ಗೂಡುತ್ತಾರೆ. ಮಹಾದೇವ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡು ಸರ್ಕಾರದ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸಿದರೆ, ಬೇಸರ ಕಾದಿದೆ. ಅಂಥದ್ದೇನೂ ಆಗಿಲ್ಲ. ಬೇಡವಾದರೆ ತಗೋಬೇಡಿ ಎಂದು ಪರಿಷತ್ತು ಪ್ರಶಸ್ತಿಯನ್ನು ಸಿಪಿಕೆಯವರಿಗೆ ಕೊಟ್ಟು ಸುಮ್ಮನಾಗಿದೆ. ದೇವನೂರರ ಜೊತೆಗಿದ್ದ ಕ್ರಾಂತಿಕಾರಿಗಳೂ, ಬಂಡಾಯಗಾರರೂ, ಸೈಜುಗಲ್ಲು ಹೊತ್ತೋರೂ ಸುಮ್ಮನಿದ್ದಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಬಿಡಿ, ಒಂದು ಹೇಳಿಕೆಯೂ ಹೊರಬರಲಿಲ್ಲ. ಸರ್ಕಾರದ ಹಂಗಿನಲ್ಲಿ ಹೇಗೆ ಮಾತು ಉಡುಗಿ ಹೋಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ.
ದೇವನೂರರು ಕೂಡ ಎಲ್ಲರಂತೆ ಪ್ರಶಸ್ತಿ ಸ್ವೀಕರಿಸಿ ವಿನಯವಂತಿಕೆ ಪ್ರದರ್ಶಿಸಬಹುದಾಗಿತ್ತು. ಭಾಷೆಯ ಪ್ರಸ್ತಾಪ ಮಾಡುವ ಅಗತ್ಯ ಅವರಿಗೇನೂ ಇರಲಿಲ್ಲ. ಅವರು ಮಹಾ ಶ್ರೀಮಂತರೇನೂ ಅಲ್ಲ. ಅವರ ಹೇಳಿಕೆ, ನಿಲುವು ಮತ್ತು ದಿಟ್ಟತನ ಒಂದು ಹೋರಾಟವನ್ನೇ ಹುಟ್ಟುಹಾಕಬಹುದಾಗಿತ್ತು.
ಮಾತು ಸೋತ ಭಾರತ ಎಂಬ ಅನಂತಮೂರ್ತಿಯವರ ರೂಪಕ ನಿಜವಾಗುತ್ತಿದೆ.