Sunday, November 28, 2010

ಕಾರ್ನಾಡರನ್ನು ಪ್ರೀತಿಸುತ್ತಾ...

ನಮಗೆ ವಚನಗಳೆಂದರೆ ಪ್ರೀತಿ. ನೀತಿ ಪಾಠ ಹೇಳುವವರು ಸಿಕ್ಕರಂತೂ ಅತೀವ ಸಂತೋಷ. ಹೀಗೆ ಮಾಡು, ಹಾಗಿರು, ಇದು ಬದುಕಿನ ರೀತಿ, ಇದು ತಪ್ಪು, ಇದು ನಿಷಿದ್ಧ ಎಂದು ಹೇಳುವ ಲೇಖಕರು ಶ್ರೇಷ್ಠರು. ಸಾಹಿತ್ಯ ಎಂದರೆ ಬದುಕುವುದನ್ನು ಕಲಿಸುವಂಥ ಕಲೆ. ಅದರಲ್ಲೊಂದು ಸಂದೇಶ ಇರಲೇಬೇಕು. ಬೇಕೋ ಬೇಡವೋ, ನಮಗಂತೂ ಸಂದೇಶ ಬೇಕು,
ಸಿನಿಮಾ ನಿರ್ದೇಶಕರನ್ನೂ ಪತ್ರಕರ್ತರು ಹಾಗಂತ ಕೇಳುವುದುಂಟು. ನಿಮ್ಮ ಸಿನಿಮಾದ ಸಂದೇಶ ಏನು. ಸಮಾಜಕ್ಕೆ ಏನು ಸಂದೇಶ ಕೊಡುತ್ತೀರಿ, ಈ ಸಿನಿಮಾ ಕೆಟ್ಟ ಸಂದೇಶ ನೀಡುವುದಿಲ್ಲವೇ –ಹೀಗೆ ಸಾಗುತ್ತದೆ ಪ್ರಶ್ನೆಗಳ ಸರಮಾಲೆ. ಸಂದೇಶ ಕೊಡುವುದಕ್ಕೆ ಸಿನಿಮಾ ಪ್ರನಾಳಿಕೆಯೋ ಒಡಂಬಡಿಕೆಯೋ ಅಲ್ಲವಲ್ಲ. ಅದು ಬದುಕಿನ ಪ್ರತಿಬಿಂಬ ಮಾತ್ರ.ಒಂದು ಜೀವ ನಮ್ಮೆದುರು ಬದುಕಿದ್ದನ್ನು ನೋಡುವಾಗ ನಮಗೆ ಅದರಿಂದ ಏನು ಹುಟ್ಟುತ್ತದೆಯೋ ಅದಷ್ಟೇ ಸಂದೇಶ. ಏನೂ ಹುಟ್ಟದೇ ಹೋಗುವ ಸಾಧ್ಯತೆಯೂ ಉಂಟು. ಅದು ಆ ಜೀವದ ಸೋಲಂತೂ ಅಲ್ಲ. ಯಾಕೆಂದರೆ ಯಾರೂ ಸಂದೇಶ ಕೊಡುವುದಕ್ಕೆಂದೇ ಬದುಕುವುದಿಲ್ಲ.
ಮೊನ್ನೆ ಹೀಗಾಯಿತು. ಗಿರೀಶ್ ಕಾರ್ನಾಡರ ನಾಟಕಗಳ ಮಾತು ಬಂತು. ನಮ್ಮನ್ನು ಈಗಲೂ ಸೆಳೆಯುವ ನಾಟಕಕಾರ ಗಿರೀಶ್. ಅವರ ನಾಟಕಗಳ ಪಾತ್ರಗಳು ಜೀವಂತವಾಗಿರುತ್ತವೆ. ಹಲವು ವ್ಯಕ್ತಿತ್ವಗಳನ್ನು ಒಳಗೊಂಡಿರುತ್ತವೆ. ಸಂಕೀರ್ಣವಾಗಿರುತ್ತವೆ. ಸರಿತಪ್ಪುಗಳಾಚೆಗೂ ಬದುಕಬಲ್ಲ ತೀವ್ರತೆ ಇರುತ್ತವೆ. ಹೀಗೆಲ್ಲ ಮಾತಾಡುತ್ತಾ ತುಘಲಕ್ ಬಗ್ಗೆ ಮಾತಾಡುತ್ತಿರಬೇಕಾದರೆ `ತುಘಲಕ್ ನಾಟಕದ ಸಂದೇಶ ಏನು ಹೇಳು ನೋಡೋಣ’ ಎಂಬ ಸವಾಲು ಎದುರಾಯಿತು.
ಕೆಲವೊಮ್ಮೆ ವಿಚಿತ್ರ ಮುಜುಗರಗಳಾಗುತ್ತವೆ. ಸಾಹಿತ್ಯ ಕೃತಿಗಳನ್ನು ಹೀಗೇ ಅಂತ ವಿವರಿಸುವುದು ಕಷ್ಟ. ಅದು ಪ್ರೀತಿಯ ಹಾಗೆ. ನೀನು ಅವಳನ್ನೇ ಯಾಕೆ ಪ್ರೀತಿಸುತ್ತೀಯಾ ಎಂಬ ಪ್ರಶ್ನೆಗೆ ಇನ್ನೊಬ್ಬರಿಗೆ ಒಪ್ಪಿಗೆಯಾಗುವಂಥ ಉತ್ತರ ಕೊಡುವುದಂತೂ ಸಾಧ್ಯವೇ ಇಲ್ಲ. ಯಾಕೆಂದರೆ ನಾವು ಯಾಕೆ ಪ್ರೀತಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಂಡಿರುವುದಿಲ್ಲ. ವಿಮರ್ಶೆ ಮತ್ತು ಮೆಚ್ಚುಗೆಗೆ ಇರುವ ವ್ಯತ್ಯಾಸ ಅದೇ. ವಿಮರ್ಶೆ ತಾರ್ಕಿಕ ನಿಲುವುಗಳನ್ನು ಬೇಡುತ್ತದೆ. ಮೆಚ್ಚುಗೆ ಬದುಕಿನಿಂದ ಹುಟ್ಟಿದ್ದಾಗಿರುತ್ತದೆ. ಸಾಹಿತ್ಯ ಜೀವಿಸುವುದು ಮೆಚ್ಚುಗೆಯಲ್ಲೇ ಹೊರತು, ವಿಮರ್ಶೆಯಲ್ಲಿ ಅಲ್ಲ.
ತುಘಲಕ್ ಕೂಡ ಹಾಗೆ ಅಕಾರಣವಾಗಿ ಪ್ರೀತಿಸಬಲ್ಲಂಥ ಕೃತಿ. ಗಿರೀಶ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕ ಲೇಖಕರು ಅವರು ಕೇವಲ ನಾಟಕ ಬರೆದವರಲ್ಲವೇ? ನಾಟಕ ಬರೆದದ್ದಕ್ಕೆ ಜ್ಞಾನಪೀಠ ಪ್ರಶಸ್ತಿ ಕೊಡುವುದು ಸರಿಯೇ ಎಂದೆಲ್ಲ ಗೊಣಗಿಕೊಂಡಿದ್ದರು. ಇವತ್ತೂ ಆ ಪ್ರಶ್ನೆಯನ್ನು ಕೇಳುವ ಯುವ ಲೇಖಕರಿದ್ದಾರೆ.
ಅದಕ್ಕೊಂದು ಕಾರಣವೂ ಇದೆ. ನಾಟಕ ಓದಿಕೊಳ್ಳುವ ಸಾಹಿತ್ಯ ಪ್ರಕಾರ ಅಲ್ಲ. ಅದು ರಂಗಕ್ರಿಯೆಯಲ್ಲಿ ಮೈತಳೆಯಬೇಕಾದದ್ದು. ಹಾಗೆ ರಂಗದ ಮೇಲೆ ಪ್ರದರ್ಶಿತಗೊಳ್ಳುವ ಸೌಭಾಗ್ಯ ಎಲ್ಲ ನಾಟಕಗಳಿಗೂ ಸಿಗುವುದಿಲ್ಲ. ಮತ್ತು ಪ್ರದರ್ಶಿತಗೊಂಡ ನಾಟಕಗಳನ್ನು ನೋಡುವ ಅವಕಾಶ ಎಲ್ಲ ಪ್ರದೇಶದ ಮಂದಿಗೂ ಲಭ್ಯವಾಗುವುದಿಲ್ಲ. ಹೀಗಾಗಿ ರಾಜಧಾನಿಯಲ್ಲಿ ತುಂಬ ಜನಪ್ರಿಯತೆ ಗಳಿಸಿದ ನಾಟಕ, ಗ್ರಾಮೀಣ ಪ್ರದೇಶಗಳ ಮಂದಿಗೆ ಗೊತ್ತೇ ಇರುವುದಿಲ್ಲ. ಕಾರ್ನಾಡರ ವಿಚಾರದಲ್ಲಿ ಆದದ್ದೂ ಅದೇ, ಅವರ ಅತ್ಯಂತ ಜನಪ್ರಿಯ ನಾಟಕಗಳು ನಮ್ಮೂರಿನ ಮಂದಿಗೆ ಗೊತ್ತಿಲ್ಲ. ಕಾರಂತರ ಕಾದಂಬರಿಗಳ ಹಾಗೆ ಅವು ಓದಿಸಿಕೊಳ್ಳಲಿಲ್ಲ. ಕುವೆಂಪು ಕವಿತೆಗಳ ಹಾಗೆ ಹಾಡಿಗೆ ಸಿಲುಕಲಿಲ್ಲ. ಮಾಸ್ತಿಯವರ ಕತೆಗಳಂತೆಯೋ ಅನಂತಮೂರ್ತಿಯವರ ಮಾತು-ಕೃತಿಗಳಂತೆಯೋ ಬೇಂದ್ರೆಯವರ ಕಾವ್ಯದ ಹುಚ್ಚಿನಂತೆಯೋ ಕಾರ್ನಾಡರು ಎಲ್ಲರಿಗೂ ಒದಗಲಿಲ್ಲ.
ಅವರ ಕುರಿತಾದರೂ ಯಾರಿಗೆ ಗೊತ್ತಿತ್ತು ಹೇಳಿ. ಉಡುಪಿ ಕುಂದಾಪುರದ ನಡುವಿರುವ ಕಾರ್ನಾಡು, ಗಿರೀಶರ ಊರು ಎಂದೇ ಅನೇಕರು ಭಾವಿಸಿದ್ದೆವು. ಕಾರ್ನಾಡು ಸದಾಶಿವರಾಯರು ಗಿರೀಶರ ಸಂಬಂಧಿ ಎಂದುಕೊಂಡಿದ್ದೆವು. ಗಿರೀಶ ಕಾರ್ನಾಡರು ಯಾವತ್ತೂ ತನ್ನ ಬಗ್ಗೆ ಹೇಳಿಕೊಂಡವರೂ ಅಲ್ಲ, ಬರೆದುಕೊಂಡವರೂ ಅಲ್ಲ. ವಿವೇಕ ಶಾನುಭಾಗರ ಕೃಪೆಯಿಂದ ಅವರ ಆತ್ಮಚರಿತ್ರೆಯ ಎರಡು ಅಧ್ಯಾಯಗಳು ಓದಲಿಕ್ಕೇ ಸಿಕ್ಕಿದುವಲ್ಲ, ಆಗಲೇ ಅವರ ಬಾಲ್ಯ ಯೌವನಗಳ ಕುರಿತು ನಮಗೊಂದಷ್ಟು ವಿವರಗಳು ಸಿಕ್ಕಿದ್ದು.
ಅದಕ್ಕೂ ಮುಂಚೆ ಕಾರ್ನಾಡರು ಪರಿಚಿತರಾದದ್ದು ಅವರ ನಾಟಕ, ಸಿನಿಮಾಗಳ ಮೂಲಕ. ಒಂದಾನೊಂದು ಕಾಲದಲ್ಲಿ, ಕಾಡು ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ಅವರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯಂತೆ ಉಳಿದದ್ದು ಪ್ರಾಣೇಶಾಚಾರ್ಯರ ಪಾತ್ರದಲ್ಲಿ. ನಾರಣಪ್ಪ ಸತ್ತನೆಂದು ಗೊತ್ತಾದ ತಕ್ಷಣ ಊಟವನ್ನು ಹಾಗೇ ಬಿಟ್ಟು ಆಪೋಶನ ತೆಗೆದುಕೊಂಡು ಏಳುವ ಚಿತ್ರವೊಂದು ಇವತ್ತಿಗೂ ನನ್ನ ಮನಸ್ಸಿನಲ್ಲಿದೆ. ಆಮೇಲೆ ಆನಂದಭೈರವಿ ಎಂಬ ಚಿತ್ರದಲ್ಲಿ ಕಾರ್ನಾಡರು ನಾಟ್ಯಾಚಾರ್ಯರಾಗಿ ನಟಿಸಿದ್ದರು. ಆ ಪಾತ್ರವೂ ಕಣ್ಮುಂದೆ ಹಸಿರು.
ಮೂಲತಃ ಪತ್ರಕರ್ತರಾದ ನಮಗೆಲ್ಲ ಕಾರ್ನಾಡರ ಮೇಲೆ ಸಿಟ್ಟು. ಅವರು ಯಾವತ್ತೂ ಹೇಳಿಕೆಗಳನ್ನು ಕೊಟ್ಟವರಲ್ಲ. ಸಾಹಿತ್ಯ ಸಮ್ಮೇಳನದ ಬಗ್ಗೆ ನಿಮಗೇನು ಅನ್ನಿಸುತ್ತದೆ ಎಂದು ಕೇಳಿದರೆ ನೋ ಕಾಮೆಂಟ್ಸ್ ಎಂದು ಹೇಳಿ ಫೋನಿಟ್ಟುಬಿಡುತ್ತಿದ್ದರು. ಎಷ್ಟೋ ಸಾರಿ ಫೋನಿಗೂ ಸಿಗುತ್ತಿರಲಿಲ್ಲ. ಯಾವುದಾದರೂ ಸಮಾರಂಭಕ್ಕೆ ಕರೆದರೆ ಕಠೋರವಾಗಿ ನಿರಾಕರಿಸುತ್ತಿದ್ದರು. ಏನನ್ನಾದರೂ ಬರೆದುಕೊಡಿ ಎಂದರೆ ನಾನು ಬೇರೇನೋ ಮಾಡುತ್ತಿದ್ದೇನೆ ಬಿಡುವಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಅವರ ದನಿಯಲ್ಲಿ ದ್ವಂದ್ವವನ್ನು ನಾನಂತೂ ಕಂಡೇ ಇಲ್ಲ. ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆದರೂ ಅವರದು ಅದೇ ಉತ್ತರ. ನಾನು ಬರುವುದಕ್ಕಾಗುವುದಿಲ್ಲ. ಮತ್ತೆ ಫೋನಿಸುವ ಅಗತ್ಯವಿಲ್ಲ. ನಮಸ್ಕಾರ. ಹೀಗಾಗಿ ಅವರು ಸಾಹಿತ್ಯ ಜಗತ್ತಿನಿಂದ ಹೊರಗೇ ಉಳಿಯಲು ಬಯಸುತ್ತಾರೆ ಎಂದು ನಾವೆಲ್ಲ ಅವರನ್ನು ಅಸೂಯೆ ಮತ್ತು ಸಿಟ್ಟಿನಿಂದ ನೋಡುತ್ತಿದ್ದೆವು.
ಚಿತ್ರರಂಗದ ಮಿತ್ರರೂ ಅವರ ಬಗ್ಗೆ ಕತೆ ಹೇಳುತ್ತಿದ್ದರು. ವಿಪರೀತ ಸಂಭಾವನೆ ಕೇಳುತ್ತಾರೆ ಎಂಬುದು ಅಂಥ ಅಪಾದನೆಗಳಲ್ಲಿ ಪ್ರಮುಖವಾದದ್ದು. ಕನ್ನಡ ನಿರ್ಮಾಪಕರ ರೀತಿನೀತಿಗಳು ತಿಳಿದ ನಂತರ ಕಾರ್ನಾಡರು ಸರಿ ಎಂಬ ತೀರ್ಮಾನಕ್ಕೆ ನಾವು ಬರದೇ ಬೇರೆ ದಾರಿಯೇ ಇರಲಿಲ್ಲ.
ನಿರ್ಮಾಪಕರೊಬ್ಬರು ಒಂದು ಟೀವಿ ಸೀರಿಯಲ್ಲು ಆರಂಭಿಸಿದ ದಿನಗಳಲ್ಲಿ ಅದರಲ್ಲಿ ಪ್ರಮುಖ ಪಾತ್ರವಾಗಿ ನಟಿಸಲು ಕಾರ್ನಾಡರು ಒಪ್ಪಿದ್ದರು. ಅವರನ್ನು ಆಗ ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಕಾರ್ನಾಡರು ತಮ್ಮ ಎಂದಿನ ಗಡಸು ದನಿಯಲ್ಲಿ ತಮ್ಮ ಸಂಭಾವನೆಯನ್ನು ಸೂಚಿಸಿದ್ದರು. ನಾವು ಕತೆ ಹೇಳಲು ಯತ್ನಿಸಿದಾಗ, ಅದೇನೂ ಬೇಕಾಗಿಲ್ಲ. ಒಂಬತ್ತು ಗಂಟೆಗೆ ಬರುತ್ತೇನೆ. ನಿಮ್ಮ ವಸ್ತ್ರವಿನ್ಯಾಸಕನಿಗೆ ಬಂದು ಬಟ್ಟೆಯ ಅಳತೆ ತೆಗೆದುಕೊಂಡು ಹೋಗಲು ಹೇಳಿ ಎಂದಿದ್ದರು. ಕತೆ ಹೇಗಿರಬೇಕು ಎಂದು ಕೇಳಿದ್ದಕ್ಕೆ ಅದು ನಿಮ್ಮ ಜವಾಬ್ದಾರಿ, ನಾನೇ ಕತೆ ಹೇಗಿರಬೇಕು ಎಂದು ಹೇಳುವುದಾದರೆ, ನಾನೇ ಸೀರಿಯಲ್ ಮಾಡುತ್ತಿದ್ದೆ ಎಂದು ನಕ್ಕಿದ್ದರು. ಅದರ ನಿರ್ಮಾಪಕರಿಗೆ ಕಾರ್ನಾಡರ ಕುರಿತು ಏನೇನೂ ಗೊತ್ತಿರಲಿಲ್ಲ. ದೊಡ್ಡ ಮೊತ್ತದ ಸಂಭಾವನೆ ಕೊಟ್ಟ ಕಾರಣಕ್ಕೆ ಮೊದಲ ದಿನವೇ ಅವರು ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರ ತನಕ ಮೂರು ನಾಲ್ಕು ಪುಟಗಳ ಐದೋ ಆರೋ ದೃಶ್ಯಗಳನ್ನು ಚಿತ್ರೀಕರಿಸಿ ಕಾರ್ನಾಡರನ್ನು ಸುಸ್ತುಮಾಡಿಬಿಟ್ಟಿದ್ದರು. ಆವತ್ತು ಶೂಟಿಂಗಿನಿಂದ ಮರಳಿದವರು ಮತ್ತೆ ಆ ಸೆಟ್ಟಿನ ಕಡೆ ತಲೆ ಹಾಕಲಿಲ್ಲ. ನಿರ್ಮಾಪಕರನ್ನು ಕರೆದು ತೆಗೆದುಕೊಂಡ ಮುಂಗಡಹಣವನ್ನು ವಾಪಸ್ಸು ಕೊಟ್ಟು ಸುಮ್ಮನಾದರು. ಮತ್ತೆಂದೂ ಸೀರಿಯಲ್ಲು ಜಗ್ತತ್ತಿಗೆ ಕಾಲಿಡುವುದಿಲ್ಲ ಎಂದು ಆವತ್ತೇ ಅವರು ನಿರ್ಧಾರ ಮಾಡಿರಬೇಕು.
ಕಾರ್ನಾಡರ ಗೆಳೆಯರು ಯಾರು, ಆಪ್ತರು ಯಾರು, ಅವರು ಏನು ಓದುತ್ತಾರೆ, ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಾರೆ ಎಂಬುದು ಇವತ್ತಿಗೂ ನಿಗೂಢ. ಹೊಸ ಗೆಳೆಯರನ್ನು ಅವರು ಸಂಪಾದಿಸಿದಂತಿಲ್ಲ. ಹಳೆ ಗೆಳೆಯರ ಜೊತ ಜಗಳ ಕಾದ ಸುದ್ದಿಯೂ ಇಲ್ಲ. ಅವರು ಫೇಸ್ ಬುಕ್ಕಿನಲ್ಲಾಗಲೀ, ಆರ್ಕುಟ್‍ನಲ್ಲಾಗಲೀ ಸಿಗುವುದಿಲ್ಲ.
ಅವರಾಗೇ ಫೋನ್ ಮಾಡಿ ಮಾತಾಡುತ್ತಿದ್ದವರು ವೈಎನ್‍ಕೆ. ನಾನು ಗಿರೀಶ್ ಎಂದು ಮಾತು ಶುರು ಮಾಡುತ್ತಿದ್ದ ಗಿರೀಶರ ಪ್ರತಿಭೆಯ ಕುರಿತು ವೈಯೆನ್ಕೆ ಬಾಯ್ತುಂಬ ಮಾತಾಡುತ್ತಿದ್ದರು. ಅವರು ಹೇಳಿದ ಗಿರೀಶರ ಗುಣಗಳಲ್ಲಿ ಗಮನಾರ್ಹವಾದದ್ದು ಕಾರ್ನಾಡರಿಗಿರುವ ಏಕಾಗ್ರತೆ. ತುಂಬ ತನ್ಮಯರಾಗಿ ಅವರು ಮಾಡಬೇಕಾದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ ಮತ್ತು ಅದರ ಕಡೆಗೇ ಫೋಕಸ್ ಆಗಿರುತ್ತಾರೆ. ಬೇರೆ ದಿಕ್ಕಿಗೆ ಅವರ ಕಣ್ಣೆತ್ತಿಯೂ ನೋಡುವುದಿಲ್ಲ. ಹೀಗಾಗಿಯೇ ಅವರು ಅಷ್ಟೊಂದು ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಿದ್ದರು ವೈಯೆನ್ಕೆ.
ಒಮ್ಮೆ ಕಾರ್ನಾಡರ ಮನೆಗೆ ಹೋದಾಗ ಅವರ ಪುಟ್ಟ ಆಫೀಸು ಗಮನ ಸೆಳೆದಿತ್ತು. ಒಂದು ಫೋನು, ಫ್ಯಾಕ್ಸು, ಪ್ರಿಂಟರ್ ಮತ್ತು ಕಂಪ್ಯೂಟರ್ ಇಟ್ಟುಕೊಂಡು ಓದುತ್ತಿದ್ದ ಪುಸ್ತಕಗಳನ್ನು ಪಕ್ಕದಲ್ಲಿಟ್ಟುಕೊಂಡು ಗಿರೀಶ್ ಕೂತಿದ್ದರು. ನಾವು ಯಾವುದೋ ವಿಶೇಷಾಂಕಕ್ಕೆ ಕತೆ ಕೇಳಲು ಹೋಗಿದ್ದೆವು. ವೈಯೆನ್ಕೆ ಆ ಕುರಿತು ಮೊದಲೇ ಮಾತಾಡಿದ್ದರಿಂದ ನಮಗೆ ಒಳಗೆ ಪ್ರವೇಶ ಸಿಕ್ಕಿತ್ತು. ಬರೆದಿಟ್ಟ ಕತೆಯನ್ನು ಕೊಟ್ಟು ಅವರು ಹೋಗಿ ಬನ್ನಿ ಅಂದಿದ್ದರು.
ಕಾರ್ನಾಡರ ಐವತ್ತು ವರ್ಷಗಳ ಲೇಖನಗಳ ಸಂಕಲನ ಆಗೊಮ್ಮೆ ಈಗೊಮ್ಮೆ. ಅದನ್ನು ಎರಡನೆ ಸಲ ಓದಿದಾಗ ಅಚ್ಚರಿಯಾಯಿತು. ಸ್ಪಷ್ಟ ಚಿಂತನೆಯ, ಅನ್ನಿಸಿದ್ದನ್ನು ತುಂಬ ಸರಳವಾಗಿ ಸರಾಗವಾಗಿ ಮತ್ತು ಗೊಂದಲವೇ ಇಲ್ಲದಂತೆ ಹೇಳುವ ಕಾರ್ನಾಡರ ಪರಿಚಯವನ್ನು ಈ ಸಂಕಲನ ಮಾಡಿಕೊಡುತ್ತದೆ. ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಅವರು ನಾಗರಿಕ ಮತ್ತು ಸೈನಿಕ ಪರಿಕಲ್ಪನೆಯ ಕುರಿತು ಮಾತಾಡಿದ್ದಾರೆ. ಅಲ್ಲಿ ಅವರ ನಿಲುವು ಅತ್ಯಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವರು ಎಂಥ ಮಾನವತಾವಾದಿ ಎನ್ನುವುದನ್ನೂ ಆ ಭಾಷಣ ಹೇಳುತ್ತದೆ. ಅಲ್ಲಿರುವ ನಾಲ್ಕು ಸಾಲುಗಳನ್ನು ನೋಡಿ-
ಸೈನಿಕನಂತೆ ವರ್ತಿಸುವುದರಿಂದ ನಾಗರಿಕನಿಗೆ ಸಿಗುವ ಅತಿದೊಡ್ಡ ಮಾನಸಿಕ ತೃಪ್ತಿಯೆಂದರೆ ಅವನು ಎಲ್ಲ ಸಾಮಾಜಿಕ, ನೈತಿಕ ಜವಾಬುದಾರಿಗಳಿಂದ ಪಾರಾಗುತ್ತಾನೆ. ಮನುಷ್ಯತ್ವದ ಅತ್ಯಂತ ಮಹತ್ವದ ಕುರುಹು ಎಂದರೆ ಆಯ್ಕೆ ಮಾಡುವ ಸ್ವಾತಂತ್ರ್ಯ. ನನ್ನ ನೈತಿಕ ಮೌಲ್ಯಗಳನ್ನು ನಾನು ನನ್ನ ಅಂತರಂಗದಿಂದ ಸೃಷ್ಟಿಸಬೇಕು.
ಸಂದರ್ಶನ, ಲೇಖನ, ಕತೆ, ನಾಟಕದ ಕುರಿತು ಅನಿಸಿಕೆ ಇವೆಲ್ಲ ತುಂಬಿರುವ `ಆಗೊಮ್ಮೆ ಈಗೊಮ್ಮೆ’ ಕಳೆದ ಎರಡು ವಾರಗಳಿಂದ ನನ್ನನ್ನು ಹಿಡಿದಿಟ್ಟಿದೆ. ಕಾರ್ನಾಡರನ್ನು ಬೇರೆಯೇ ಆಗಿ ನೋಡುವುದನ್ನು ಕಲಿಸಿದೆ. ಗೆಳೆಯರಾದ ಸುರೇಂದ್ರನಾಥ್ ಅಚ್ಚರಿಯಿಂದ ಹೇಳುತ್ತಿರುತ್ತಾರೆ- ನನಗೆ ಕಾರ್ನಾಡರೂ ಶ್ರೀನಿವಾಸ ವೈದ್ಯರೂ ಮಾತಾಡುವುದನ್ನು ಕೇಳಿದಾಗ ಆಶ್ಚರ್ಯವಾಗುತ್ತದೆ. ನೀನು ಅವನು ಅಂತ ಏಕವಚನದಲ್ಲಿ ಧಾರವಾಡ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿರುತ್ತಾರೆ. ಅಂಥ ಹಿರಿಯರಿಬ್ಬರು ಹಾಗೆ ಮಾತಾಡುವುದನ್ನು ನೋಡುವುದೇ ಒಂದು ಚಂದ.
ಕಾರ್ನಾಡರೂ ಹಿರಿಯರಾ? ಹುಡುಕಿದರೆ ಗೊತ್ತಾದದ್ದು ಕಾರ್ನಾಡರಿಗೆ ಎಪ್ಪತ್ತೆರಡು.

9 comments:

ಈಶ್ವರ said...

navoo preethisutteve avarannoo avara naatakagalannoo :) :)

Anonymous said...

visit http://www.mediamirchy.blogspot.com/

ವಸಂತ್ ಗಿಳಿಯಾರ್ said...

ಗಿರೀಶ್ ಕಾರ್ನಾಡರ ಕುರಿತಾದ ಅರ್ಥಪೂರ್ಣ ಲೇಖನ . ಯಾವ ಸಬೆ ಸಮಾರಂಭದಲ್ಲೂ ಅಷ್ಟಾಗಿ ಕಾಣಿಸದ ಕಾರ್ನಾಡರ ಬಗ್ಗೆ ನಾವೆಲ್ಲಾ ತಿಳಿದದ್ದು ಕಡಿಮೆ . ಗಿರೀಶ್ ಕಾರ್ನಾಡ್ ಅಂದ ತಕ್ಷಣ ನಮಗೆ ನೆನಪಾಗುತ್ತಿದ್ದದು 'ಯಯಾತಿ ' ನಾಟಕ ಮತ್ತು 'ಜ್ಞಾನ ಪೀಠ 'ಪ್ರಶಸ್ತಿ ! ದೇಶ ಕಾಲದಲ್ಲಿ ಅವರ ಜೀವನ ಚರಿತ್ರೆಯ ಪುಟಗಳಿದ್ದವಾದ್ದರಿಂದ ಕೊಂಚ ಅರ್ಥವಾಗಿದ್ದರು ... ಆದರೆ ಅವರ ಬಗ್ಗೆ ಅರ್ಥಾತ್ ಅವರ ಕುರಿತಾದ ಒಂದು 'ವ್ಯಕ್ತಿ ಚಿತ್ರ ' ಓದಿ ಕುಶಿ ಆಯಿತು .. ತೀರ ಮೊನ್ನೆ ಮೊನ್ನೆಯ ತನಕ ನಾನು ಕೂಡ ಕಾರಂತಜ್ಜ , ಮೂರ್ತಿಗಳ ಹಾಗೀನೆ ಕಾರ್ನಾಡರು ಕೊಡ ನಮ್ಮ ಜಿಲ್ಲೆಯ ಮೂಲದವರು ಎಂದು ಭಾವಿಸಿದ್ದೆ . ನಿಮ್ಮ ಲೇಖನ ತುಂಬಾ ಖುಷಿ ಕೊಟ್ಟಿತು ದನ್ಯವಾದಗಳು ....
ವಸಂತ್ ಗಿಳಿಯಾರ್

Anonymous said...

visit http://www.patrakarta11.blogspot.com/

Unknown said...

realy it is amazing to read this information

HARI said...

KARNAD BAGGE NANAGU AVRU KANNADADA YAAVUDE KARYAKRAMAKKE BARALLA. KANNADADA BAGEGINA CHARCHEGALALLI KAANISIKOLLALLA ANNODRA BAGGE BESARA ITTU.. AVRA YAYAATI, TUGALAK NAATAKAGALU KOTTA KHUSHIYA NANTARAVU AVRA BAGGE BESARAVITTU. EEGA NIM LEKHANA MATTOMME KAARNADARANNU ODBEKANDU PREREPISTIDE..
THANKS..

Anonymous said...

he is a legendary no doubt about it
because he is a good actor.you must see in kadalan

naveenobservation said...

ಕಾರ್ನಾಡರದು ನೀವು ಹೇಳಿದ ಹಾಗೆ ನೇರ ವಿಚಾರ ಮಾಡುವ ಮನಸ್ಸು. ನಾನು ನೋಡಿದ ಹಾಗೆ ಕನ್ನಡ ಸಾಹಿತ್ಯ ಜಗತ್ತಿನ ವ್ಯವಹಾರದಿಂದ ಅವರು ಬಹಳ ದೂರ. ಮತ್ತು ಅವರು ಮಾಡುವ ಯಾವುದೇ ಕೆಲಸಗಳು ಕನ್ನಡ ಸಾಹಿತ್ಯ ಜಗತ್ತಿನಿಂದ ರೊಕ್ಕವನ್ನು ಬೇಡುವುದಿಲ್ಲ. ಅದಕ್ಕೆ ಅವರು ಯಾರ ಮುಲಾಜಿಗೂ ಸಿಗವವರು ಅಲ್ಲ. ನಿಮಗೆ ಬೇಕೆಂದರೆ ನೀವೇ ಅವರ ಹತ್ತಿರ ಹೋಗಬೇಕು. ಅವರಿಗೆ ಈಗಿರುವಂತೆ ಬೇರೆ ಬೇರೆ ಕಲೆಯ ಸಾಧ್ಯತೆಗಳು ಗೊತ್ತಿಲ್ಲದಿದ್ದರೆ, ಅವರು ಸಹ ಬೇರೆಯ ಸಾಹಿತಿಯಂತೆ ಆಗುತ್ತಿದ್ದರೋ ಅನ್ನುವ ಕಳವಳ. ಸಧ್ಯಕ್ಕೆ ಹಾಗೆ ಆಗಿಲ್ಲ ಅನ್ನುವ ಸಮಾಧಾನ. ಅವರು ಬದುಕಿದ ರೀತಿ ಅದ್ಭುತ. ಮತ್ತು ಮಾದರಿ.

ಪ್ರತಾಪ್ ಬ್ರಹ್ಮಾವರ್ said...

ಕಾರ್ನಾಡರ ಪರಿಚಯ ಲೇಖನ ತುಂಬಾ ಖುಷಿಕೊಟ್ಟಿತು ಜೋಗಿ ಸರ್ . ಧನ್ಯವಾದಗಳು ನಿಮಗೆ .