Sunday, January 10, 2010

ಅಹಂಕಾರ ಮಮಕಾರದ ನಡುವೆ ವಿಷ್ಣು ಏಕಾಂಗಿ

ನಮ್ಮಪ್ಪ ರಾಜ್‌ಕುಮಾರ್ ವಿರೋಧಿಯಾಗಿದ್ದವರು. ಸುಮಾರು ವರ್ಷ ಮದ್ರಾಸಿನಲ್ಲಿದ್ದ ಕಾರಣಕ್ಕೋ ಏನೋ ಅಪ್ಪಟ ಎಂಜಿಆರ್ ಅಭಿಮಾನಿ ಬೇರೆ. ನಮ್ಮೂರಿನಲ್ಲಿ ಎಂಜಿಆರ್ ಸಿನಿಮಾಗಳು ಬಿಡುಗಡೆ ಆಗುತ್ತಿರಲಿಲ್ಲ. ಮಂಗಳೂರಿಗೆ ಹೋಗಿಯಾದರೂ ಅಪ್ಪ ಎಂಜಿಆರ್ ಸಿನಿಮಾ ನೋಡಿ ಬರಬೇಕು. ನಮಗೋ ತಮಿಳು ಅರ್ಥವೇ ಆಗುತ್ತಿರಲಿಲ್ಲ. ಅಪ್ಪ ಮಾತ್ರ ನಾಡೋಡಿ ಮನ್ನನ್, ಎಂಗ ವೀಟ್ಟು ಪಿಳ್ಳೈ, ಅಡಿಮೈ ಪೆಣ್ ಎಂದು ಯಾವ್ಯಾವುದೋ ಸಿನಿಮಾದ ಹೆಸರು ಹೇಳುತ್ತಿದ್ದರು. ಅಡಿಮೈ ಪೆಣ್ ಮಾತ್ರ ಆಗ ನನಗೆ ಯಾವುದೋ ಅಶ್ಲೀಲ ಚಿತ್ರದ ಟೈಟಲ್ಲು ಅನ್ನಿಸಿಬಿಟ್ಟಿತ್ತು. ಆ ಟೈಟಲ್ಲನ್ನು ನಾನು ಕನ್ನಡದಲ್ಲಿ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದೂ ಅದು ಅಶ್ಲೀಲ ಅನ್ನಿಸುವುದಕ್ಕೆ ಕಾರಣವಿರಬಹುದು. ಹೀಗೆ ಎಂಜಿಆರ್ ಸಿನಿಮಾಗಳನ್ನು ನೋಡುತ್ತಿದ್ದ ಕಾರಣಕ್ಕೇ ಅವರಿಗೆ ರಾಜ್‌ಕುಮಾರ್ ಹೆಸರು ಕೇಳಿದರೆ ಕೆಂಡಕೋಪ. ಹೀಗಾಗಿ ನಮ್ಮನ್ನು ಅವರು ವಿಷ್ಣುವರ್ಧನ್ ಮತ್ತು ಶ್ರೀನಾಥ್ ಸಿನಿಮಾಗಳಿಗೆ ಮಾತ್ರ ಕರೆದೊಯ್ಯುತ್ತಿದ್ದರು. ಹೀಗಾಗಿ ನಾವು ಗೆಳೆಯರ ಜೊತೆ ಸಿನಿಮಾ ನೋಡುವುದಕ್ಕೆ ಶುರು ಮಾಡುವ ತನಕ ರಾಜ್‌ಕುಮಾರ್ ಸಿನಿಮಾಗಳನ್ನೂ ನೋಡಿರಲಿಲ್ಲ.
ಹೀಗಾಗಿ ಬಾಲ್ಯದಿಂದಲೇ ನಮಗೆ ವಿಷ್ಣುವರ್ಧನ್ ಅಂದರೆ ಅಚ್ಚುಮೆಚ್ಚು. ಬಂಧನ ಸಿನಿಮಾ ಬಿಡುಗಡೆಯಾಗುವ ಮೊದಲೇ ನನ್ನ ಗೆಳೆಯ ಸುಬ್ರಾಯ ನೂರೊಂದು ನೆನಪು, ಎದೆಯಾಳದಿಂದ’ ಚಿತ್ರದ ಹಾಡನ್ನು ಎಲ್ಲೋ ಕೇಳಿಕೊಂಡು ಬಂದು ಅದನ್ನು ಪರಮ ವಿಷಾದದಲ್ಲಿ ಹಾಡುತ್ತಿದ್ದ. ಆ ಸಿನಿಮಾ ಗೆಲ್ಲೋದಿಲ್ಲ ಎಂದೂ ವಿಷ್ಣುವರ್ಧನ್ ಕೊನೆಯಲ್ಲಿ ಸಾಯುವ ದೃಶ್ಯವಿದೆಯೆಂದೂ ಹೇಳುತ್ತಿದ್ದ. ನಾವೆಲ್ಲ ಸೇರಿ ಆ ಚಿತ್ರದ ನಿರ್ದೇಶಕರಿಗೆ ಪತ್ರ ಬರೆದು ವಿಷ್ಣುವರ್ಧನ್ ಸಾಯಕೂಡದು ಎಂದು ಹೇಳಬೇಕು ಎಂದೂ ನಿರ್ಧಾರ ಮಾಡಿದ್ದೆವು. ನಮ್ಮ ಅಸಂಖ್ಯಾತ ನಿರ್ಧಾರಗಳಂತೆ ಅದೂ ಕಾರ್ಯರೂಪಕ್ಕೆ ಬರಲಿಲ್ಲ. ಬಂಧನ’ ಗೆಲುವು ಕಂಡಿತು.
ಅದಕ್ಕೂ ಆರೇಳು ವರ್ಷ ಮುಂಚೆ ನಾವು ಉಪ್ಪಿನಂಗಡಿಯಲ್ಲೊಂದು ವಿಷ್ಣು ಅಭಿಮಾನಿ ಸಂಘ ಆರಂಭಿಸಿದ್ದೆವು. ಆ ಸಂಘದಲ್ಲಿದ್ದ ಸದಸ್ಯರು ಏಳು ಮಂದಿ ಎಂದು ನನಗೆ ನೆನಪು. ಅವರ ಪೈಕಿ ಸುಬ್ರಾಯ ಸಂಘದ ಅಧ್ಯಕ್ಷ. ಆಗ ಕೈಲಿ ದುಡ್ಡಿದ್ದದ್ದು ಅವನ ಬಳಿಯೇ. ಬರೆಯಲು ಗೊತ್ತಿದ್ದ ನಾನು ಕಾರ್ಯದರ್ಶಿ. ಉಳಿದವರು ಸಾಮಾನ್ಯ ಸದಸ್ಯರು. ನಾವೆಲ್ಲರೂ ದಕ್ಷಿಣ ಕನ್ನಡದಲ್ಲಿ ಎಲ್ಲೇ ವಿಷ್ಣುವರ್ಧನ್ ಸಿನಿಮಾ ಬಿಡುಗಡೆಯಾದರೂ ತಪ್ಪದೇ ಹೋಗಿ ನೋಡುತ್ತಿದ್ದೆವು. ಒಂದೇ ಗುರಿ’ ಸಿನಿಮಾ ಬಿಡುಗಡೆ ಆದಾಗ ನಾವೆಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಯಾಂಪಿನಲ್ಲಿದ್ದೆವು. ನಮ್ಮ ಮೇಷ್ಟ್ರು ನಮ್ಮನ್ನು ಕ್ಯಾಂಪಿನಿಂದ ಹೊರಗೆ ಹೋಗುವುದಕ್ಕೆ ಬಿಡುತ್ತಿರಲಿಲ್ಲ. ರಾತ್ರಿ ಹತ್ತು ಗಂಟೆಗೆ ತಾವೇ ಸ್ವತಃ ಪ್ರತಿಯೊಂದು ರೂಮಿಗೂ ಬಂದು ಹಾಜರಾತಿ ತೆಗೆದುಕೊಳ್ಳುತ್ತಿದ್ದರು. ಆ ರಾತ್ರಿ ಒಂಬತ್ತು ಗಂಟೆಗೆ ಅವರ ರೂಮಿಗೆ ಹೊರಗಿನಿಂದ ಬೀಗ ಜಡಿದು, ನಾವೊಂದಷ್ಟು ಮಂದಿ ಸಿನಿಮಾ ನೋಡೋದಕ್ಕೆ ಹೊರಟು ಹೋಗಿದ್ದೆವು. ನಡು ರಾತ್ರಿ ನಾವು ಮರಳುವ ಹೊತ್ತಿಗೆ ಆ ವಿಚಾರ ಎಲ್ಲರಿಗೂ ಗೊತ್ತಾಗಿತ್ತು. ನಮಗೆ ಸರಿಯಾಗಿ ಪೂಜೆ ಆಗುತ್ತದೆ ಎಂದುಕೊಂಡು ಉಳಿದ ಹುಡುಗರೆಲ್ಲ ಖುಷಿಯಾಗಿದ್ದರು. ನಾವು ಸಿನಿಮಾ ನೋಡಿದ ಹುಮ್ಮಸ್ಸಿನಲ್ಲಿ ಏನು ಮಾಡುತ್ತಾರೆ ಮಹಾ, ನಾಲ್ಕೇಟು ಹೊಡೀತಾರೆ ಅಷ್ಟೇ ತಾನೇ. ಹೆಚ್ಚೆಂದರೆ ಮನೆಗೆ ಕಳಿಸಬಹುದು’ ಎಂದೆಲ್ಲ ಮಾತಾಡಿಕೊಳ್ಳುತ್ತಾ ಕೂತಿದ್ದೆವು. ಅಷ್ಟು ಹೊತ್ತಿಗೆ ಮೇಷ್ಟ್ರು ನಮ್ಮನ್ನು ಅವರ ರೂಮಿಗೆ ಕರೆಸಿಕೊಂಡರು.
ಇನ್ನೇನು ಬೈಗಳು ಶುರು ಅಂದುಕೊಳ್ಳುತ್ತಿರುವಾಗ ಅವರು ನಮ್ಮನ್ನೆಲ್ಲ ಕೂರಿಸಿ ಹೇಗಿತ್ತು ಸಿನಿಮಾ, ಕತೆ ಏನು?’ ಎಂದು ಸಹಜವಾಗಿ ಕೇಳಿ, ಇಡೀ ಸಿನಿಮಾದ ಕತೆ ಕೇಳಿ ತಿಳಿದುಕೊಂಡು ಎಂಪಿ ಶಂಕರ್ ಕೂಡ ನಟಿಸಿದ್ದಾರೆ ಎಂದು ಖುಷಿಯಾಗಿ ರಾಮಕೃಷ್ಣ ಮತ್ತು ವಿಷ್ಣು ಹಾಡುವ ಈ ಭಾವಗೀತೆ ನಿನಗಾಗಿ ಹಾಡಿದೆ’ ಹಾಡಿನಿಂದ ಪುಳಕಿತರಾಗಿ ಇನ್ನೂ ಎಷ್ಟು ದಿನ ಓಡಬಹುದು ಎಂದು ತಿಳಿದುಕೊಂಡು, ನಂತರ ನಮ್ಮನ್ನು ಬೈದಂತೆ ನಟಿಸಿದ್ದರು.
******
ಬಿಗುಮಾನ, ಸಿಟ್ಟು, ಸಹನೆ, ನಗು, ನಿರ್ಲಕ್ಷ್ಯ, ವೈರಾಗ್ಯ, ಹಂಬಲ, ಕೀಳರಿಮೆ, ಆತಂಕ, ಭಯ, ಅಭಯ, ಹುಡುಕಾಟ- ಇಷ್ಟೂ ವಿಭಿನ್ನ ಭಾವಗಳನ್ನು ಬೆನ್ನಿಗೆ ಕಟ್ಟಿಕೊಂಡು ಗೊತ್ತಿಲ್ಲದ ಹಾದಿಯಲ್ಲಿ ಗೊತ್ತಿಲ್ಲದ ಊರಿಗೆ ಪ್ರಯಾಣ ಹೊರಟ ಅಪರಿಚಿತನಂತೆ ಕಾಣುತ್ತಿದ್ದ ವಿಷ್ಣುವರ್ಧನ್, ಬಹುಶಃ ಯಾರಿಗೂ ಇಡಿಯಾಗಿ ದಕ್ಕಲೇ ಇಲ್ಲ. ತುಂಬ ನಗಿಸುತ್ತಿದ್ದರು ಎಂದು ಅಂಬರೀಷ್, ಒಂಟಿಯಾಗಿರುತ್ತಿದ್ದರು ಎಂದು ಕೀರ್ತಿ, ಸಿಟ್ಟಿನಲ್ಲಿರುತ್ತಿದ್ದರು ಎಂದು ನಿರ್ದೇಶಕರು, ಯಾರಿಗೂ ಯಾವತ್ತೂ ಬೈದಿಲ್ಲ ಎಂದು ಡ್ರೈವರ್ ರಾಧಾಕೃಷ್ಣ, ಏನನ್ನೂ ಬಯಸುತ್ತಿರಲಿಲ್ಲ ಎಂದು ಅಡುಗೆಯ ಶ್ರೀಧರ್, ಎಂಬತ್ತೊಂದು ಲಕ್ಷಕ್ಕಿಂತ ಒಂದು ಪೈಸೆ ಕಡಿಮೆ ಆದ್ರೂ ಒಪ್ಪೋಲ್ಲ ಅಂತಿದ್ರು ಎಂದು ನಿರ್ಮಾಪಕ ಅವರನ್ನು ಬಗೆಬಗೆಯಾಗಿ ವರ್ಣಿಸುತ್ತಿದ್ದರು. ಪತ್ರಕರ್ತರು ಮೂಡಿ ಫೆಲೋ ಎಂದು ಬರೆದು ಸುಮ್ಮನಾಗುತ್ತಿದ್ದರು. ಬಾಲ್ಯದ ಗೆಳೆಯರು ವಿಷ್ಣು ಮೊದಲಿನಿಂದಲೂ ಹಾಗೇನೇ ಅಂತ ಫರ್ಮಾನು ಹೊರಡಿಸಿ, ಅದೊಂದು ಮಾತಾಡುವ ವಿಚಾರವೇ ಅಲ್ಲ ಎಂದು ತಳ್ಳಿ ಹಾಕುತ್ತಿದ್ದರು.
ಬೇಕು ಎಂದರೆ ಬೇಕು, ಬೇಡ ಎಂದರೆ ಬೇಡ ಎಂಬಂತೆ ಬದುಕಿದವರು ವಿಷ್ಣುವರ್ಧನ್. ಅವರಿಗೆ ತುಂಬ ಹತ್ತಿರವಾಗಲು ಯತ್ನಿಸಿ ಸೋತವರಿದ್ದಾರೆ. ಅವರ ಮನಸ್ಸೆಂಬ ಏಳು ಸುತ್ತಿನ ಕೋಟೆಯ ಕೊನೆಯ ಸುತ್ತನ್ನು ಹೊಕ್ಕವರು ಬಹುಶಃ ಯಾರೂ ಇರಲಿಕ್ಕಿಲ್ಲ. ಇನ್ನೇನು ವಿಷ್ಣುವರ್ಧನ್ ವಿಶ್ವರೂಪ ದೊರಕಿತು ಎನ್ನುವಷ್ಟರಲ್ಲಿ ಅವರು ಕಣ್ಮರೆಯಾಗುತ್ತಿದ್ದರು. ಮತ್ತೊಂದು ಬಾರಿ ಕಂಡಾಗ ಮತ್ತೆ ಮೊದಲನೆ ಬಾಗಿಲಿನಿಂದಲೇ ಆರಂಭಿಸಬೇಕು. ಹಳೆಯ ಮಾತುಗಳಿಗೆ ಅರ್ಥವಿಲ್ಲ. ಪರಿಚಯಕ್ಕೂ ಸ್ನೇಹಕ್ಕೂ ಸಂಬಂಧವಿಲ್ಲ. ಪ್ರತಿಬಾರಿಯೂ ಅವರೂ ಹೊಸಬರು, ಭೇಟಿಯಾಗಲೂ ಹೋದವನೂ ಹೊಸಬ. ಕೈಕುಲುಕಲು ಹಸ್ತ ಚಾಚಿದರೆ, ಕಿರುಬೆರಳನ್ನು ಮುಂದಕ್ಕೆ ಚಾಚುತ್ತಿದ್ದವರು ಅವರು.
ವಿಷ್ಣು ವಿರಕ್ತ ಎಂದು ಕರೆಯವುದು ಸರಿಯಲ್ಲ. ಅನುರಕ್ತ ಅನ್ನುವುದೂ ತಪ್ಪು. ಗುಂಪಿನಿಂದ ದೂರ ಉಳಿಯಲು, ಸಂಬಂಧಗಳಿಂದ ಪಾರಾಗಲು, ಹೊಸ ಸ್ನೇಹಿತರನ್ನು ದೂರವಿಡಲು ಅವರು ಸಾವಿರ ಕಾರಣಗಳನ್ನು ಹುಡುಕುತ್ತಿದ್ದರು. ಕೆಲವೊಮ್ಮೆ ಉತ್ಸಾಹ ಬಂದರೆ ತಾವೇ ಫೋನ್ ಮಾಡಿ ಕರೆಸಿಕೊಳ್ಳುವುದೂ ಇತ್ತು.
ಕನ್ನಡದ ನಟರಲ್ಲಿ ಸಾಮಾನ್ಯವಾಗಿರುವ ಒಂದು ದುರ್ಗುಣವನ್ನು ಇಲ್ಲಿ ಪ್ರಸ್ತಾಪಿಸಬೇಕು. ನನಗೆ ಪ್ರಚಾರ ಬೇಕಾಗಿಲ್ಲ. ನನ್ನ ಬಗ್ಗೆ ಯಾರೂ ಬರೆಯಬೇಕಾಗಿಲ್ಲ. ಬರೆದರೆ ನಾನು ಹೇಳಿದ್ದನ್ನು ಮಾತ್ರ ಬರೆಯಬೇಕು ಎಂದು ಅವರು ನಿರೀಕ್ಷಿಸುತ್ತಿದ್ದರು. ಕನ್ನಡದ ನಟರು ವಿಮರ್ಶೆಯನ್ನೂ ಕಿಂಚಿತ್ತೂ ಸಹಿಸುತ್ತಿರಲಿಲ್ಲ, ಈಗಲೂ ಸಹಿಸುವುದಿಲ್ಲ. ಅಷ್ಟೇ ಅಲ್ಲ, ಅವರಿಗೆ ತಾವು ನಟಿಸುತ್ತಿರುವ ಚಿತ್ರದ ಬಗ್ಗೆ ಮಾತಾಡಬೇಕು ಅಂತಲೂ ಅನ್ನಿಸುವುದಿಲ್ಲ. ತಾನು ನಟಿಸುತ್ತಿರುವ ಚಿತ್ರ ತನ್ನದು ಎಂಬ ಪ್ರೀತಿಯನ್ನು ಪ್ರಕಾಶ್ ರೈ, ಅವಿನಾಶ್, ರವಿಚಂದ್ರನ್, ರಮೇಶ್ ಮುಂತಾದ ಕೆಲವು ನಟರನ್ನು ಬಿಟ್ಟರೆ ಬೇರೆ ಯಾರಲ್ಲೂ ನಾನು ಕಂಡಿಲ್ಲ. ನಾವು ಮಾತಾಡುವುದು ನಿಮ್ಮ ಸೌಭಾಗ್ಯ ಎಂಬ ಧಾಟಿಯಲ್ಲೇ ಅವರು ಮಾತಾಡುತ್ತಿದ್ದರು. ಯಾವತ್ತೂ ತನ್ನ ಸಿನಿಮಾ ನೂರು ದಿನ ಓಡಿತು ಎಂಬ ಸಂತೋಷಕ್ಕೆ ಒಬ್ಬ ಕಲಾವಿದ ಎಲ್ಲರನ್ನೂ ಕರೆದು ಒಂದು ಪಾರ್ಟಿ ಕೊಟ್ಟದ್ದಿಲ್ಲ. ಸಂತೋಷಕೂಟಕ್ಕೆ ಕರೆದದ್ದಿಲ್ಲ. ಅದೇನಿದ್ದರೂ ನಿರ್ಮಾಪಕರ ಕರ್ಮ ಎಂದೇ ಅವರೆಲ್ಲ
ಭಾವಿಸಿಕೊಂಡಿದ್ದವರು.
ವಿಷ್ಣುವರ್ಧನ್ ಕೂಡ ಸಿನಿಮಾದ ವಿಚಾರಕ್ಕೆ ಬಂದರೆ ಹಾಗೇ ಇದ್ದವರು. ಮುಹೂರ್ತದ ದಿನವಾಗಲೀ, ಶೂಟಿಂಗ್ ರೌಂಡಪ್‌ಗೆ ಹೋದಾಗಲಾಗಲೀ, ಚಿತ್ರ ಬಿಡುಗಡೆಯ ನಂತರವಾಗಲೀ ಅವರು ಜಾಸ್ತಿ ಮಾತಾಡುತ್ತಿರಲಿಲ್ಲ. ಆದರೆ, ಕೆಲವೊಮ್ಮೆ ಸುಮ್ಮನೆ ಎಲ್ಲರನ್ನೂ ಕರೆದು ಜೊತೆಗೆ ಊಟ ಮಾಡೋಣ ಅನ್ನುತ್ತಿದ್ದರು. ಸಂಜೆ ಮನೆಗೆ ಬನ್ನಿ ಅಂತ ಕರೆದು ಒಳ್ಳೆಯ ಊಟ ಹಾಕಿಸುತ್ತಿದ್ದರು. ಆಮೇಲೆ ಎಷ್ಟೋ ದಿನಗಳ ತನಕ ಮಾತೇ ಇರುತ್ತಿರಲಿಲ್ಲ.
ವಿಷ್ಣುವರ್ಧನ್ ಹಾಗಾಗುವುದಕ್ಕೆ ಕಾರಣ ಅವರ ಮೇಲಿದ್ದ ಒತ್ತಡ ಅನ್ನುವವರಿದ್ದಾರೆ. ತನ್ನನ್ನು ಹೊರಗಿಡುವುದಕ್ಕೆ ಇಡೀ ಉದ್ಯಮ ಯತ್ನಿಸಿತು ಎಂಬ ಕೊರಗು ಅವರನ್ನು ಕೊನೇ ತನಕ ಕಾಡುತ್ತಿತ್ತು. ನಾನು ಮಾತಾಡುವುದಿಲ್ಲ, ಮಾತಾಡಿದರೆ ಎಂತೆಂಥಾ ಸತ್ಯಗಳು ಹೊರಬೀಳುತ್ತವೋ ಗೊತ್ತಿಲ್ಲ. ದೊಡ್ಡವರು ಅಂದುಕೊಂಡವರ ಬಂಡವಾಳ ಎಲ್ಲವನ್ನೂ ಹೊರಗೆ ಹಾಕಬಲ್ಲೆ. ಆದರೆ ನಾನು ಮಾತಾಡುವುದಿಲ್ಲ ಎಂದು ಗುರುಗಳಿಗೆ ಮಾತು ಕೊಟ್ಟಿದ್ದೇನೆ’ ಎಂದು ವಿಷ್ಣು ಅನೇಕ ಸಾರಿ ಹೇಳಿಕೊಂಡಿದ್ದರು.
ಅವರನ್ನು ನೂರೋ ನೂರೈವತ್ತು ಸಲವೋ ಭೇಟಿ ಮಾಡಿದ ಮೇಲೂ ಮೊದಲ ಸಾರಿ ಭೇಟಿಯಾದಾಗ ಎಲ್ಲಿರುತ್ತಿದ್ದೆವೋ ಅಲ್ಲೇ ಇರುತ್ತಿದ್ದೆವು. ಅವರಿಗೆ ಹತ್ತಿರಾಗುವ ಎಲ್ಲಾ ಹುನ್ನಾರಗಳೂ ವ್ಯರ್ಥ ಎನ್ನಿಸುತ್ತಿದ್ದವು. ಹತ್ತಿರವಾಗಿದ್ದೇವೆ ಅಂದುಕೊಂಡವರೂ ಕ್ರಮೇಣ ಇದು ತಮ್ಮಿಂದ ಸಾಧ್ಯವಾಗದ ಮಾತು ಎಂದು ದೂರ ಸರಿಯುತ್ತಿದ್ದರು. ಅದು ಕಲ್ಲುವೀಣೆಯನ್ನು ನುಡಿಸುವ ಪ್ರಯತ್ನದಂತೆ ಎಂಬುದು ನಿಧಾನವಾಗಿ ಅರಿವಾಗುತ್ತಾ ಹೋಗುತ್ತಿತ್ತು.
ಇತ್ತೀಚೆಗೆ ಅವರನ್ನು ನೋಡಿದಾಗ, ಸಿನಿಮಾ ಸಾಕು ಅನ್ನಿಸಿ ಬರೆಯುವುದಕ್ಕೆ ಶುರುಮಾಡಿದ್ದೇನೆ ಅಂದಿದ್ದರು ವಿಷ್ಣು. ತಡೀರಿ ತೋರಿಸ್ತೀನಿ ಎಂದು ಹೇಳಿ ರಾಧಾಕೃಷ್ಣನ ಹತ್ತಿರ ಸೂಟ್‌ಕೇಸ್ ತರಿಸಿ, ಅದರೊಳಗಿಂದ ಡೈರಿ ತೆಗೆಸಿ, ತಾವು ಬರೆದಿಟ್ಟ ಸಾಲುಗಳನ್ನು ತೋರಿಸಿದ್ದರು. ಅದರಲ್ಲಿ ಒಂದು ಸಾಲು ಹೀಗಿತ್ತು:
ಹಗಲಿಡೀ ಅಹಂಕಾರ, ಮನೆಗೆ ಬಂದೊಡನೆ ಮಮಕಾರ’
ಹಾಗಂದರೆ ಏನು ಅನ್ನುವುದನ್ನೂ ಅವರೇ ವಿವರಿಸಿದ್ದರು. ಇಡೀ ದಿನ ಹೊರಗಿರ್ತೀವಿ. ನಾನು ವಿಷ್ಣು, ನಾನು ಸಾಹಸಸಿಂಹ, ನನಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ, ನಾನು ಏನು ಬೇಕಾದರೂ ಮಾಡಬಲ್ಲೆ ಅನ್ನೋ ಅಹಂಕಾರ ಆವರಿಸಿಕೊಂಡಿರುತ್ತೆ. ಆದರೆ ಸಂಜೆ ಮನೆಗೆ ಬಂದಾಕ್ಷಣ ಅಹಂಕಾರ ಕರಗಿ ಮಮಕಾರ ಮೂಡುತ್ತೆ. ನನ್ನ ಮಕ್ಕಳು, ನನ್ನ ಮನೆಯವರು ಅನ್ನುವ ಭಾವನೆ ಮೂಡುತ್ತಿದ್ದಂತೆ ನಾನು ಅವರಂತೆಯೇ, ಅವರಿಗಿಂತ ಸಣ್ಣವನು ಎಂಬ ಭಾವನೆ ಮೂಡುತ್ತೆ ಎಂದಿದ್ದರು.
ಅಹಂಕಾರ ಮತ್ತು ಮಮಕಾರಗಳ ನಡುವೆ ಅವರು ಸದಾ ತುಯ್ದಾಡುತ್ತಿದ್ದರು ಎಂದು ಕಾಣುತ್ತದೆ. ಬಹುಶಃ ಎಲ್ಲಾ ಪ್ರತಿಭಾವಂತರದೂ ಇದೇ ಕತೆಯೇನೋ?
ವಿಷ್ಣು ಇನ್ನಿಲ್ಲ ಎಂಬುದು ನಾನು ಇತ್ತೀಚೆಗೆ ಕೇಳಿದ ನಂಬಲಾಗದ ಸತ್ಯಸುದ್ದಿಗಳಲ್ಲಿ ಒಂದು ಅನ್ನುವುದಂತೂ ನಿಜ.

2 comments:

ಅಹರ್ನಿಶಿ said...

ಜೋಗಿ ಸರ್,
ವಿಷ್ಣು ಬಗ್ಗೆ ನಾನು ಓದಿದ ಈ ಬರಹ ಅತ್ಯ೦ತ ಪ್ರಾಮಾಣಿಕವಾಗಿದೆ.
ವಿಷ್ಣು ಇನ್ನಿಲ್ಲ ಎಂಬುದು ನಾನು ಇತ್ತೀಚೆಗೆ ಕೇಳಿದ ನಂಬಲಾಗದ ಸತ್ಯಸುದ್ದಿಗಳಲ್ಲಿ ಒಂದು ಅನ್ನುವುದಂತೂ ನಿಜ.ನೂರಕ್ಕೆ ನೂರರಷ್ಟು ಸತ್ಯ.

Anonymous said...

ನಿಜ, ವಿಷ್ಣು ಇದ್ದದ್ದೇ ಹಾಗೆ.
ರಾಘು