Sunday, January 17, 2010

ನಾನೂ ಅವನು ಮತ್ತು ಹೇಳದೇ ಉಳಿದ ಕತೆ

ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ ಆವಿಯಾಗಿ ಹೋಯಿತು’ ಎಂಬ ಒಂದೇ ಒಂದು ಸಾಲು ಬರೆದು ನಾನು ಸುಮ್ಮನೆ ಕೂತಿದ್ದೆ. ಮುಂದಿನ ಸಾಲುಗಳಿಗಾಗಿ ಮನಸ್ಸು ತಡಕಾಡುತ್ತಿತ್ತು.
ಇನ್ನು ಸ್ವಲ್ಪ ಹೊತ್ತಿಗೆಲ್ಲ ಕತ್ತಲಾಗುತ್ತದೆ. ಕತ್ತಲಲ್ಲಿ ಏನೂ ಹೊಳೆಯುವುದಿಲ್ಲ. ಅದಕ್ಕೂ ಮುಂಚೆ ಬರೆದು ಮುಗಿಸಿಬಿಡು ಅಂತ ಅವನು ಹೇಳಿದ. ಅವನೂ ಕೂಡ ಬರೆಯುವುದಕ್ಕೆ ಹೊಂಚು ಹಾಕುತ್ತಿದ್ದಾನೆ ಎಂದು ನನಗೆ ಅನ್ನಿಸುತ್ತಿತ್ತು. ನನಗೆ ಬರೆಯುವುದರಲ್ಲಿ ಆಸಕ್ತಿಯಿಲ್ಲ. ನೋಡುವುದು, ಓದುವುದು, ಅನುಭವಿಸುವುದು ಮಾತ್ರ ಖುಷಿ ಕೊಡುವ ಸಂಗತಿ. ಬರೆಯುವುದು ಹಿಂಸೆ’ ಅಂತ ಅವನು ಘೋಷಿಸಿಬಿಟ್ಟಿದ್ದ. ಅದಕ್ಕೋಸ್ಕರವೇ ಇರಬೇಕು, ಬೇಗ ಕತೆ ಬರೆದು ಮುಗಿಸು, ನಾನು ಓದಬೇಕು ಎಂದು ಒಂದೇ ಸಮ ಪೀಡಿಸುತ್ತಿದ್ದ.
ಅವನಿಗೆ ಯಾವ ಕತೆ ಇಷ್ಟವಾಗಬಹುದು ಎಂದು ನಾನು ಯೋಚಿಸುತ್ತಾ ಕೂತೆ. ಸುಂದರವಾದ ಒಂದು ಪ್ರೇಮಕತೆಯನ್ನು ಕಟ್ಟಿಕೊಡುವುದು ನನಗೇನೂ ಕಷ್ಟದ ಕೆಲಸ ಆಗಿರಲಿಲ್ಲ. ನಾನು ನೂರಾರು ಪ್ರೇಮಕತೆಗಳನ್ನು ಬರೆದಿದ್ದೆ, ನೂರಾರು ಪ್ರೇಮಪ್ರಸಂಗಗಳನ್ನು ನೋಡಿದ್ದೆ. ಅವನೂ ಅವಳೂ ಮಾತಾಡುತ್ತಾ ಕೂತಿದ್ದನ್ನು ನೋಡಿದರೆ ಸಾಕು, ನನ್ನೊಳಗೆ ಮುಂದಿನದೆಲ್ಲ ಸೃಷ್ಟಿಯಾಗುತ್ತಿತ್ತು. ಅವನು ನೇಕಾರರ ಹುಡುಗನಾಗುತ್ತಿದ್ದ, ಅವಳು ಲಿಂಗಾಯತರ ಹುಡುಗಿಯಾಗುತ್ತಿದ್ದಳು. ಇಬ್ಬರ ಮದುವೆಗೂ ಜಾತಿ ಅಡ್ಡಿ ಬರುತ್ತಿತ್ತು. ಕೊನೆಗೆ ನೇಕಾರರ ಹುಡುಗನ ಸಾವಿನಲ್ಲಿ ಆ ಪ್ರೇಮ ಕೊನೆಯಾಗುತ್ತಿತ್ತು. ಹೀಗೆ ತುಂಬ ವರ್ಷ ಬರೆದ ನಂತರ ನಾನು ಮತ್ತೊಂದು ಆಯಾಮದ ಬಗ್ಗೆ ಚಿಂತಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದೆ. ಈ ಬಾರಿ ಹುಡುಗಿಯೂ ಹುಡುಗನೂ ಒಂದೇ ಜಾತಿಗೆ ಸೇರಿದವರಾಗಿದ್ದರು. ಎಲ್ಲವೂ ಸರಿಹೋಗುತ್ತದೆ ಎನ್ನುವ ಹೊತ್ತಿಗೆ ಅವಳ ಕಣ್ಣಿಗೆ ಮತ್ತೊಬ್ಬ ಹುಡುಗ ಕಾಣಿಸಿಕೊಳ್ಳುತ್ತಿದ್ದ. ಅವಳ ಪ್ರೇಮ ಆ ಹೊಸ ಹುಡುಗನತ್ತ ಹರಿಯುತ್ತಿತ್ತು. ತಾನು ಪ್ರೀತಿಸಿದವನನ್ನು ಮದುವೆಯಾದರೂ ಹೊಸ ಹುಡುಗನತ್ತ ವಾಲುವ ಅವಳ ಮನಸ್ಸು, ಹಂಬಲ ಮತ್ತು ವಾಂಛೆಗಳನ್ನು ನಾನು ದಾಖಲಿಸಿದ್ದೆ. ಅದನ್ನು ನನಗೆ ಗೊತ್ತಿರುವ ಹುಡುಗರು ಅಸಹನೆಯಿಂದ ನಿರಾಕರಿಸಿದ್ದರು. ಹೆಣ್ಮಕ್ಕಳು ನಿಜವಾಗಿಸಲು ಯತ್ನಿಸಿದ್ದರು.
ಈ ಕತೆಗಳನ್ನೆಲ್ಲ ಅವನು ಓದಿದ್ದಾನೆ ಎಂಬ ಅರಿವು ನನಗೂ ಇತ್ತು. ನನ್ನೆದುರು ಕೂತ ಅವನಿಗೆ ಹೊಸ ಶೈಲಿಯ ಕತೆಗಳನ್ನು ನಾನು ಹೇಳಬೇಕಾಗಿತ್ತು. ಒಂದು ವೇಳೆ ಅಂಥ ಕತೆಗಳನ್ನು ಹೇಳದೇ ಹೋದರೆ ನನ್ನನ್ನು ಅವನು ನಿರಾಕರಿಸುತ್ತಾನೆ ಎಂಬ ಭಯವೂ ನನ್ನನ್ನು ಕಾಡುತ್ತಿತ್ತು. ಆ ಕಲ್ಪನೆಯೇ ನನ್ನನ್ನು ಸಾಕಷ್ಟು ಬಾರಿ ಕಂಗೆಡಿಸಿದೆ. ಓದುಗನ ಕಣ್ಣಲ್ಲಿ ಅಪ್ರಸ್ತುತನಾಗುವ ಬರಹಗಾರನ ಆಯಸ್ಸು ಮುಗಿದಂತೆಯೇ ಎಂದು ನಾನು ನಂಬಿದ್ದೆ.
ಸೂರ್ಯಕಿರಣಗಳೇ ಬೀಳದ ಧ್ರುವಪ್ರದೇಶದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಇಬ್ಬರು ತರುಣರ ಕತೆ ಹೇಳುತ್ತೇನೆ ಎಂದೆ. ಅವನಿಗೆ ಅದು ಇಷ್ಟವಾಗಲಿಲ್ಲ. ನನ್ನ ಪರಿಸರಕ್ಕೂ ಆ ಕತೆಗಳಿಗೂ ಸಂಬಂಧವಿಲ್ಲ. ಯಾರದೋ ಕತೆ ಕಟ್ಟಿಕೊಂಡು ನಾನೇನು ಮಾಡಲಿ. ನನಗೆ ಹತ್ತಿರವೆನ್ನಿಸುವ ಕತೆಗಳನ್ನು ಕೊಡು’ ಎಂದು ಅವನು ಕಟ್ಟುನಿಟ್ಟಾಗಿ ಹೇಳಿದ. ಅವನ ದನಿಯಲ್ಲಿ ಎದ್ದು ಕಾಣುತ್ತಿದ್ದ ಒರಟುತನ, ನಿರ್ದಾಕ್ಷಿಣ್ಯ ಒಂದು ಕ್ಷಣ ನನ್ನನ್ನು ಸಿಟ್ಟಿಗೆಬ್ಬಿಸಿತು. ಸುಮ್ನೆ ಕೇಳಿಸ್ಕೋ, ನಾನು ಹೇಳಿದ್ದೇ ಕತೆ. ನಿನಗೆ ಬೇಕಾದ ಕತೆಗಳನ್ನು ಹೇಳುವುದಕ್ಕೆ ನಾನಿಲ್ಲ’ ಎಂದು ಬೈದು ಅವನನ್ನು ಓಡಿಸಿಬಿಡಬೇಕು ಅನ್ನಿಸಿತು. ಆದರೆ ಒಬ್ಬ ಓದುಗನನ್ನು ಕಳೆದುಕೊಳ್ಳುವುದು ಅಷ್ಟು ಖುಷಿಯ ಸಂಗತಿಯೇನೂ ಆಗಿರಲಿಲ್ಲ. ಮತ್ತೊಬ್ಬ ಹೊಸ ಓದುಗನನ್ನು ಹುಡುಕುವ ವ್ಯವಧಾನ ನನ್ನ ಕತೆಗಳಿಗಿವೆ ಎಂಬ ನಂಬಿಕೆಯೂ ನನಗಿರಲಿಲ್ಲ.
ಬೇಗ ಕತೆ ಹೇಳು, ಇಲ್ಲದೇ ಹೋದರೆ ನಾನು ಹೊರಟು ಹೋಗುತ್ತೇನೆ’ ಎಂಬಂತೆ ಅವನು ನನ್ನ ಮುಖ ನೋಡಿದ. ಮುಸ್ಸಂಜೆಯೊಳಗೆ ಇರುಳು ಬೆರೆಯುತ್ತಿತ್ತು. ಕತ್ತಲು ಬೆಳೆಯುತ್ತಿತ್ತು.ದೂರದಲ್ಲಿ ಯಾರೋ ಕೊಳಲೂದುತ್ತಿರುವ ಸದ್ದು ಕೇಳಿಸಿತು. ಅದರಾಚೆಗೆ ಹೆಸರು ಗೊತ್ತಿಲ್ಲದ ಬೆಟ್ಟ. ಆ ಬೆಟ್ಟದ ತಪ್ಪಲಲ್ಲಿ ಸೋಲಿಗರ ಹುಡುಗರು ರಾಗವಾಗಿ ಏನನ್ನೋ ಹಾಡುತ್ತಿದ್ದರು.
ನಾಗರಿಕತೆಯ ಕತೆ ಹೇಳಲಾ?’
ಅವನು ತಲೆಯಾಡಿಸಿದ. ಅಂಥ ಕತೆಗಳನ್ನು ನಾನೂ ತುಂಬ ಓದಿದ್ದೇನೆ. ಹಳೇ ಕಾಲದ ಕತೆಗಳವು. ಚರಿತ್ರೆ ನಿನಗೇನು ಗೊತ್ತಿದೆ? ಯಾರೋ ಬರೆದಿಟ್ಟ ಇತಿಹಾಸದ ವಿವರಗಳನ್ನು ಎತ್ತಿಕೊಂಡು ಅದನ್ನೊಂದಷ್ಟು ತಿರುಚಿ ಕತೆ ಹೇಳಲು ಆರಂಭಿಸುತ್ತಿ. ಅದು ಚರಿತ್ರೆಯೂ ಅಲ್ಲ, ಕಲ್ಪನೆಯೂ ಅಲ್ಲದ ಸ್ಥಿತಿಯಲ್ಲಿರುತ್ತೆ. ಅಂಥ ಹಾಳುಮೂಳು ಸಂಗತಿಗಳಲ್ಲಿ ನನಗೆ ಕಿಂಚಿತ್ತೂ ಆಸಕ್ತಿಯಿಲ್ಲ’ ಎಂದು ಅವನು ದೊಡ್ಡದಾಗಿ ಆಕಳಿಸಿದ.
ಅವನನ್ನು ಸಂತೋಷಪಡಿಸಲು ಇನ್ನೇನು ಹೇಳಬಹುದು ಎಂದು ಯೋಚಿಸಿದೆ. ಜನಾಂಗೀಯ ಕದನ, ಮೇಲು ಕೀಳಿನ, ಕಲ್ಯಾಣದ ಕ್ರಾಂತಿ, ಅರಮನೆಯಲ್ಲಿ ದಾಸಿಯರು ಲೈಂಗಿಕ ಶೋಷಣೆಗೆ ಒಳಗಾದದ್ದು, ಜಮೀನ್ದಾರರು ಬಡವರನ್ನು ಹುರಿದು ಮುಕ್ಕಿದ್ದು, ಪುರೋಹಿತರು ಮಂತ್ರಬಲದಿಂದ ಮುಕ್ಕೋಟಿ ಶೂದ್ರರನ್ನು ಮುಷ್ಟಿಯಲ್ಲಿಟ್ಟುಕೊಂಡದ್ದು, ಮದುವೆ ಮನೆಯಿಂದಲೇ ಪದ್ಮಿನಿಯನ್ನು ಪೃಥ್ವೀರಾಜ ಹಾರಿಸಿಕೊಂಡು ಹೋದದ್ದು, ತಾಳೀಕೋಟೆಯ ಯುದ್ಧದಲ್ಲಿ ವಿಜಯನಗರದ ಕೊನೆಯ ಅರಸ ಪ್ರಾಣಕಳಕೊಂಡದ್ದು.. ಹೀಗೆ ಕಣ್ಮುಂದೆ ಕತೆಗಳು ಸಾಲುಸಾಲಾಗಿ ಹರಿದುಹೋದವು. ಅವುಗಳಲ್ಲಿ ಅವನಿಗೆ ಆಸಕ್ತಿ ಇರಲಾರದು ಅನ್ನಿಸಿತು.
ಅವನ ನಿರೀಕ್ಷೆ ನನ್ನನ್ನು ಕಂಗೆಡಿಸುತ್ತಿತ್ತು. ನಾನು ಕುತೂಹಲ ಹುಟ್ಟಿಸುವ ಏನನ್ನೋ ಹೇಳಲಿದ್ದೇನೆ ಎಂಬಂತೆ ಅವನು ಕಾಯುತ್ತಾ ಕೂತಿದ್ದ. ಅವನ ನಿರೀಕ್ಷೆಗೆ ಸಮನಾದದ್ದನ್ನು ನಾನು ಹೇಳದೇ ಹೋದರೆ ಅವನು ಎದ್ದು ಹೋಗುತ್ತಾನೆ ಮತ್ತು ಎಂದಿಗೂ ಮರಳಿ ನನ್ನ ಬಳಿ ಬರುವುದಿಲ್ಲ ಎಂಬ ಆತಂಕದಲ್ಲಿ ನಾನು ಕೂತಿದ್ದೆ. ನನ್ನ ನೆನಪುಗಳನ್ನು ಬಗೆಯುತ್ತಿದ್ದೆ. ಅವನನ್ನು ಹಿಡಿದಿಡಬಹುದಾದ ಕತೆಯೊಂದನ್ನು ಹುಡುಕುತ್ತಿದ್ದೆ.
ದೇವರ ಕತೆಗಳನ್ನು ಹೇಳುತ್ತೇನೆ ಎಂದು ಅವನ ಮುಖ ನೋಡಿದೆ. ಸಾಕಾಗಿ ಹೋಗಿದೆ. ದೇವರ ಕತೆಗಳೂ ಗೊತ್ತು, ವ್ಯಥೆಗಳೂ ಗೊತ್ತು. ನೂರಾರು ವರ್ಷಗಳಿಂದ ಅದನ್ನೇ ಕೇಳಿಕೊಂಡು ಬಂದಿದ್ದೇನೆ. ದೇವರು, ದೆವ್ವ, ಭೂತ, ಪ್ರೇತ, ಪಿಶಾಚಿಗಳೆಲ್ಲವೂ ಬೋರು ಹೊಡೆಸುತ್ತವೆ. ನಿನಗೆ ಗೊತ್ತಿಲ್ಲದ್ದರ ಬಗ್ಗೆ ಹೇಳಬೇಡ’ ಎಂದು ಅಸಹನೆಯಿಂದ ಹೇಳತೊಡಗಿದ. ನನಗೂ ಸಿಟ್ಟು ಬಂತು.
ಗೊತ್ತಿಲ್ಲದ್ದರ ಬಗ್ಗೆ ಹೇಳಿದರೇ ಅದು ಕತೆ. ಗೊತ್ತಿದ್ದದ್ದನ್ನು ಹೇಳಿದರೆ ಅದು ವರದಿ. ವರದಿ ಒಪ್ಪಿಸುವುದರಲ್ಲಿ ನನಗೆ ಆಸಕ್ತಿಯಿಲ್ಲ’ ಎಂದು ನಾನೂ ಗೊಣಗಿದೆ. ಇಂಥ ಸುಳ್ಳುಗಳನ್ನು ಹೇಳಿಕೊಂಡು ಬಹಳ ಕಾಲದಿಂದ ಬಚಾವಾಗುತ್ತಿದ್ದೀರಿ. ಕತೆ ಹೇಳುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕು, ಕತೆ ಒಳಗೆ ಹರಳುಗಟ್ಟಬೇಕು. ಒಂದು ಅನುಭವ ಕತೆಯ ರೂಪ ತಾಳುವುದಕ್ಕೆ ಕಾದು ಕೂರಬೇಕು. ಅದು ಸುಲಭದಲ್ಲಿ ಸಿದ್ಧಿಸುವ ಸ್ಥಿತಿಯಲ್ಲ’ ಎಂದು ಏನೇನೋ ಸುಳ್ಳುಗಳನ್ನು ಹೇಳುತ್ತಿದ್ದೀರಿ. ಎಲ್ಲವೂ ಬರೀ ಬೊಗಳೆ. ನಿಮಗೆ ಕತೆ ಹೇಳುವುದಕ್ಕೆ ಬರೋದಿಲ್ಲ, ಅಷ್ಟೇ ಸತ್ಯ’ ಎಂದು ಎಲ್ಲರ ಮೇಲೂ ಸಿಟ್ಟು ಕಾರಿಕೊಂಡ. ನಾನು ಅದನ್ನು ನಿರಾಕರಿಸುವ ಹಾಗಿರಲಿಲ್ಲ.
ಕತ್ತಲು ಮತ್ತಷ್ಟು ದಟ್ಟವಾಯಿತು. ಅವನು ಮತ್ತೊಮ್ಮೆ ಆಕಳಿಸಿದ. ಇನ್ನೇನು ಸ್ವಲ್ಪ ಹೊತ್ತಿಗೆಲ್ಲ ಅವನು ನಿದ್ದೆ ಹೋಗುತ್ತಾನೆ. ನನಗೂ ನಿದ್ದೆ ಬರುತ್ತದೆ. ನಾನು ಏಳುವ ಹೊತ್ತಿಗೆ ಅವನು ಎದ್ದು ಹೊರಟು ಹೋಗಿರುತ್ತಾನೆ. ಅವನು ಕಣ್ಮುಚ್ಚುವ ಮುಂಚೆ ಕತೆ ಹೇಳಬೇಕು. ಕತೆ ಹೇಳಿ ಅವನನ್ನು ಉಳಿಸಿಕೊಳ್ಳಬೇಕು ಎಂದು ನಾನು ಯೋಚಿಸುತ್ತಿದ್ದೆ.
ಯಾಕೋ ಅವನ ನಿರೀಕ್ಷೆ ಅತಿಯಾಯಿತು ಅನ್ನಿಸತೊಡಗಿತು. ನಾನೇಕೆ ಇಷ್ಟೊಂದು ಕಷ್ಟಪಟ್ಟುಕೊಂಡು ಅವನಿಗೆ ಕತೆ ಹೇಳಬೇಕು. ಅವನಿಗೆ ಕತೆ ಹೇಳುತ್ತೇನೆ ಅಂತೇನೂ ನಾನು ಮಾತು ಕೊಟ್ಟಿಲ್ಲವಲ್ಲ. ಅಷ್ಟಕ್ಕೂ ಕತೆ ಬೇಕಾಗಿರುವುದು ಅವನಿಗೆ. ಕತೆ ಹೇಳದೇ ನಾನು ಬದುಕಿರಬಲ್ಲೆ, ಕತೆ ಕೇಳದೇ ಅವನು ಬದುಕಿರೋದಕ್ಕೆ ಸಾಧ್ಯವಾ? ಯಾರಿಗೆ ಅದು ಜೀವನ್ಮರಣದ ಪ್ರಶ್ನೆ. ಯಾರ ತುರ್ತು ದೊಡ್ಡದು. ನನ್ನದೋ ಅವನದೋ?
ಹಾಗೆಲ್ಲ ಯೋಚಿಸುತ್ತಾ ಸಿಟ್ಟು ಉಕ್ಕತೊಡಗಿತು. ನಾನು ಇದೇ ಕತೆಯನ್ನು ಹೇಳೋದು. ಹೀಗೇ ಹೇಳೋದು. ಬೇಕಿದ್ದರೆ ಕೇಳಿಸಿಕೋ ಇಲ್ಲದೇ ಹೋದರೆ ಎದ್ದು ಹೋಗು ಎಂದು ಹೇಳಬೇಕು ಅನ್ನಿಸಿತು. ಅಷ್ಟೊಂದು ಸಿಟ್ಟು ಒಳ್ಳೆಯದಲ್ಲ ಎಂದು ವಿವೇಕ ಹೇಳಿತು. ಕತೆ ಹೇಳುವವನಿಗೆ ವಿವೇಕ ಇರಬೇಕಾ ಎಂದು ಮತ್ತೊಮ್ಮೆ ಅನ್ನಿಸಿತು. ವಿವೇಕವಂತ ಲೋಕಕ್ಕೆ ಇಷ್ಟವಾಗುವ ಸಂಗತಿಗಳನ್ನು ಹೇಳುತ್ತಾನೆ. ಜ್ಞಾನಿ ಪರಲೋಕ ಆಪ್ತವಾಗುವಂಥ ಸಂಗತಿಗಳನ್ನು ಹೇಳುತ್ತಾನೆ. ಅವರೆಲ್ಲರೂ ಸ್ವೀಕರಿಸಿದ ನಂತರ ಕೊಡಲು ಹೊರಟವರು. ಆದರೆ ನಾನು ಹಾಗಲ್ಲ, ನಾನು ಕತೆ ಹೇಳುವವನು. ಅಲ್ಲಿ ವಿವೇಕಕ್ಕಿಂತ ಕಲ್ಪನೆ ಹೆಚ್ಚಿಗಿರಬೇಕು. ಈ ಲೋಕದ, ಆ ಲೋಕದ ಕತೆಗಳನ್ನು ಹೇಳುವುದು ನನ್ನ ಕೆಲಸ ಅಲ್ಲ. ನಾನು ಮತ್ತೊಂದು ಲೋಕವನ್ನು ಸೃಷ್ಟಿಸಬೇಕು. ಆ ಲೋಕದಲ್ಲಿ ನಾನೂ ಅವನೂ ಇಬ್ಬರೇ ಇರಬೇಕು. ಉಳಿದವರೆಲ್ಲ ಹೊಸಬರಾಗಿ ಕಾಣಿಸಬೇಕು. ಅವನು ಕಂಡು ಮಾತಾಡಿದ ಜನರೂ ಅವನಿಗೆ ಅಪರಿಚಿತವಾಗಿ ಕಾಣಬೇಕು.
ಉತ್ತರ ದಿಕ್ಕಿನಿಂದ ಮಂಜುಗಡ್ಡೆಯ ಮೇಲೆ ಹಾದು ಬಂದ ಗಾಳಿ ನಮ್ಮಿಬ್ಬರನ್ನೂ ಸವರಿಕೊಂಡು ಹೋಯಿತು. ನಾನು ತತ್ತರಿಸಿಹೋದೆ. ಅವನು ಏನೂ ಆಗಿಲ್ಲವೆಂಬಂತೆ ಕೂತಿದ್ದ. ಅವನ ಇಡೀ ಭಂಗಿ ಒಂದೊಳ್ಳೇ ಕತೆ ಹೇಳು’ ಎಂದು ಬೇಡಿಕೊಳ್ಳುವಂತಿತ್ತು. ಅದು ಕೇವಲ ಬೇಡಿಕೆಯಲ್ಲ, ಆದೇಶ, ಆಜ್ಞೆ, ಕಟ್ಟಪ್ಪಣೆ ಎಂಬಂತೆ ನನಗೆ ಭಾಸವಾಯಿತು.
ನನ್ನ ದರ್ಪ, ಕತೆ ಹೇಳಬಲ್ಲೆ ಎಂಬ ಅಹಂಕಾರ, ಅವನನ್ನು ಮೆಚ್ಚಿಸುವುದು ಸುಲಭ ಎಂಬ ಉಡಾಫೆ ಎಲ್ಲವೂ ಆ ಕ್ಷಣ ಕರಗಿಹೋಯಿತು. ಅವನನ್ನು ಕತೆ ಹೇಳಿ ಮೆಚ್ಚಿಸಬೇಕು ಎಂಬ ಆಸೆ ಕೂಡ ಭಗ್ನವಾಯಿತು. ನೀನ್ಯಾರೋ ನನಗೆ ಗೊತ್ತಿಲ್ಲ ಎಂಬಂತೆ ನಾನೂ ಸ್ವಲ್ಪ ಹೊತ್ತು ಕೂತಿದ್ದೆ. ಆಕಾಶದಲ್ಲಿ ಚಂದ್ರನಿರಲಿಲ್ಲ. ನಕ್ಷತ್ರಗಳ ಬೆಳಕಲ್ಲಿ ಆಕಾಶ ಝಗಮಗಿಸುತ್ತಿತ್ತು.
ನನ್ನ ಮುಂದೆ ಅವನಿದ್ದಾನೆ ಅನ್ನುವುದನ್ನೆ ಮರೆತು ನಾನು ಕತೆ ಹೇಳಲು ಆರಂಭಿಸಿದೆ. ಅದು ನನ್ನ ಕತೆ ಅನ್ನುವ ಅರಿವೂ ನನಗಿರಲಿಲ್ಲ. ನನ್ನ ಅವಮಾನದ ಕ್ಷಣಗಳು, ಸಂಭ್ರಮದ ಗಳಿಗೆಗಳು, ಪ್ರೇಮಿದ ಪಿಸುಮಾತುಗಳು, ವಿರಹದ ತಲ್ಲಣಗಳು, ನೋಯಿಸಿದ ಘಟನೆಗಳು, ವಂಚನೆಯ ಪ್ರಕರಣಗಳು, ಸುಳ್ಳಿನ ಕಂತೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತಾ ಬಂದವು. ನಾನು ನಾನಾಗಿಬಿಟ್ಟಿದ್ದೆ ಹಾಗೂ ಅದನ್ನು ಮರೆತೂ ಬಿಟ್ಟಿದ್ದೆ.
ತನ್ಮಯನಾಗಿ ಕತೆ ಹೇಳುತ್ತಾ ಕುಳಿತವನು, ಅಚಾನಕ್ ಮುಂದೆ ಕಣ್ಣು ಹಾಯಿಸಿದರೆ ಅವನು ತನ್ನ ಇಡೀ ಬಳಗವನ್ನೇ ಕರೆದುಕೊಂಡು ಬಂದಿದ್ದ. ಅವನನ್ನೇ ಹೋಲುವ ಸಾವಿರ ಸಾವಿರ ಮಂದಿ ಕಣ್ಣುಹಾಯಿಸಿದಷ್ಟು ಉದ್ದಕ್ಕೂ ಕೂತು ಕತೆ ಕೇಳಿಸಿಕೊಳ್ಳುತ್ತಿದ್ದರು.
ನಾನು ಭಯವಾಗಿ ಕಣ್ಮುಚ್ಚಿಕೊಂಡೆ. ಕತೆ ಮುಂದುವರಿಸಿದೆ.

4 comments:

ಆನಂದ said...

ಬರಹಗಾರನೊಬ್ಬನ ತಲ್ಲಣ, ಕಥೆ ಹುಟ್ಟುವ ಕ್ಷಣ, ಓದುಗನನ್ನು ಸೆರೆ ಹಿಡಿದಿಡಬೇಕೆಂಬ ತವಕ, ಪಾತ್ರಗಳನ್ನು ಸೃಷ್ಟಿಸುತ್ತಾ ತಾನೇ ಕಥೆಯಲ್ಲಿನ ಪಾತ್ರವಾಗುವ ಬಗೆ, ಇವೆಲ್ಲಾ ಬಹಳ ಚೆನ್ನಾಗಿ ಮೂಡಿ ಬಂದಿವೆ.

Ahalya said...

ಕತೆ ಹುಟ್ಟುವ ಪರಿಯನ್ನೂ ಈ ಪರಿಯ ಸೊಬಗಿನಲಿ ಕತೆ ಮಾಡಿ ಹೇಳಬಹುದೇ ! ಖುಷಿ ಆಯಿತು . Thank you . ಅಹಲ್ಯಾ ಬಲ್ಲಾಳ

ಸಾಗರದಾಚೆಯ ಇಂಚರ said...

ಕಥೆಯ ಹುಟ್ಟು ಚೆನ್ನಾಗಿದೆ
ಒಳ್ಳೆಯ ಬರಹ

Anonymous said...

I think I should mention this now. I don't read many blogs, in my view they are all reporting mundane things in life, however, I regularly read your blog in an attempt to refresh. Some of your writings/analysis are, for me, replacement to the act of sex. Because, they made me to think a lot, thereby use mainly the upper half of the body, so the lower-half is safely forgotten.


Regards
D.M.Sagar