Tuesday, March 9, 2010

ಆಯವ್ಯಯದ ಹಿನ್ನೆಲೆಯಲ್ಲಿ ಬದುಕಿನ ಮುಂಗಡ ಪತ್ರ

ಟೀವಿಯಲ್ಲಿ ಆತ ಅವಸರವಸರವಾಗಿ ಏನೋ ಓದುತ್ತಿದ್ದರು. ಇನ್ಯಾರೋ ಕಿರುಚುತ್ತಿದ್ದರು. ಮತ್ಯಾರೋ ಹಿಂದೆ ನಿಂತುಕೊಂಡು ಕಿರುಚಾಡುತ್ತಿದ್ದರು. ಮತ್ತೊಂದೆಡೆ ಯಾರೋ ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಕೂತಿದ್ದರು. ಎಲ್ಲರಿಗೂ ಧಾವಂತ ಇನ್ನೊಬ್ಬರಿಗಿಂತ ತಾವೇ ಮೊದಲು ಪ್ರಶ್ನೆ ಕೇಳಿಬಿಡುವ ಆತುರ.
ಮೊನ್ನೆ ಮೊನ್ನೆ ತನಕ ಒದ್ದಾಟದಲ್ಲಿದ್ದ, ಎಲ್ಲೆಲ್ಲೋ ಓಡಾಡುತ್ತಿದ್ದ, ಚಿಂತಾಕ್ರಾಂತನಾಗಿ ಅಲೆದಾಡುತ್ತಿದ್ದ ವ್ಯಕ್ತಿ ಅಷ್ಟು ಬೇಗ ಇಡೀ ರಾಜ್ಯದ ಆಯವ್ಯಯ ಲೆಕ್ಕಾಚಾರವನ್ನು ಹಿಡಿದಿಡಲು ಸಾಧ್ಯವಾಗುತ್ತದಾ ಎಂದು ಯೋಚಿಸುತ್ತಿದ್ದೆ. ಅದಕ್ಕೋಸ್ಕರ ಆತ ಎಷ್ಟು ಗಂಟೆ ವ್ಯಯಿಸಿರಬಹುದು. ಆತನ ಸಹಾಯಕರು ಯಾವ ಮಾನದಂಡಗಳನ್ನು ಬಳಸಿರಬಹುದು. ಸುಲಭವಾಗಿ ಸಿಗುವ ಆದಾಯವನ್ನು ಬಾಚಿಕೊಂಡು, ಮುಂದಿನ ಚುನಾವಣೆಗೆ ನೆರವಾಗುವುದಕ್ಕೆ ಒಂದಷ್ಟು ರಿಯಾಯಿತಿ ತೋರಿಸಿ, ಅರ್ಥ ಪಂಡಿತರು ಹೇಳಿದ ಕೆಲವೊಂದು ಸಂಗತಿಗಳನ್ನು ಅಳವಡಿಸಿಕೊಂಡು, ಧರ್ಮಭೀರು ಅನ್ನಿಸಿಕೊಳ್ಳುವುದಕ್ಕೆ ವಿವಿಧ ಮಠಮಾನ್ಯಗಳಿಗೆ ದಾನ, ಅನುದಾನ ಕೊಟ್ಟು, ಪತ್ರಕರ್ತರ ಕಣ್ಣೊರೆಸಿದಂತೆ ಮಾಡಿ....
ಇಡೀ ರಾಜ್ಯವನ್ನು ಕಣ್ಮುಂದೆ ತಂದುಕೊಂಡು ಆತ ಕನಿಷ್ಠ ಒಂದು ಗಂಟೆ ಧ್ಯಾನಿಸಿರಬಹುದೇ? ಯಾರೋ ಯಾವತ್ತೋ ಸಿದ್ಧಮಾಡಿಟ್ಟು ಹೋದ ಒಂದು ಕೋಷ್ಠಕವನ್ನು ತುಂಬುವ ಕೆಲಸ ಮಾತ್ರ ಆಗುತ್ತಿದೆ ಎಂದು ಇವತ್ತಿನ ಬಜೆಟ್ ನೋಡಿದ ಯಾರಿಗಾದರೂ ಅನ್ನಿಸದೇ ಇರದು. ಕಾರು, ಪೆಟ್ರೋಲು, ಸಿಗರೇಟು, ಬಂಗಾರ, ಮದ್ಯ ತುಟ್ಟಿ. ಕಂಪ್ಯೂಟರ್ರು, ಮೊಬೈಲ್ ಅಗ್ಗ. ಅದ್ಯಾವುದ್ಯಾವುದೋ ಊರಿಗೆ ಎಕ್ಸ್‌ಪ್ರೆಸ್ ಹೈವೇ. ಚತುಷ್ಪಥ ರಸ್ತೆ. ಇಂಥದ್ದೇ ತುಂಬಿಕೊಂಡು ಹೊಸದಾಗಿ ಚಿಂತಿಸಲೂ ಆಗದ ಹಳೆಯ ತಲೆ.
ತುಂಬ ಮೆಲೋಡ್ರಾಮಾಟಿಕ್ ಆಗದೇ ಯೋಚಿಸಲು ಯತ್ನಿಸೋಣ. ಇತ್ತೀಚೆಗೆ ನಾವೊಂದಷ್ಟು ಸ್ನೇಹಿತರು ಯಾವುದೋ ಕಾರ್ಯನಿಮಿತ್ತ ಊರೂರು ಸುತ್ತುತ್ತಿದ್ದೆವು. ಚಿಕ್ಕಪುಟ್ಟ ಹಳ್ಳಿಗಳನ್ನೆಲ್ಲ ಸವರಿಕೊಂಡು ಹೋಗುತ್ತಿದ್ದೆವು. ಸೋಮನಮನೆ ಎಂಬ ಉತ್ತರ ಕನ್ನಡದ ಹಳ್ಳಿಯಿಂದ ರಾತ್ರೋ ರಾತ್ರಿ ಹೊರಟು, ಎಷ್ಟೋ ದೂರ ಸವೆಸಿದ ಮೇಲೆ ನಮಗೊಂದು ಪುಟ್ಟ ಅಂಗಡಿ ಸಿಕ್ಕಿತು. ರಾತ್ರಿ ಒಂಬತ್ತಾದರೂ ತೆರೆದೇ ಇದ್ದ ಆ ಅಂಗಡಿಯಲ್ಲಿ ಆತ ಮಾರುತ್ತಿದ್ದದ್ದು ಏನು ಎಂದು ನೋಡಿದರೆ ಆಶ್ಚರ್ಯ ಕಾದಿತ್ತು. ಮನೆಯಲ್ಲಿ ಮಾಡಿ ತಂದಿದ್ದ ಇಡ್ಲಿಗಳನ್ನು ಆತ ಒಂದಕ್ಕೆ ಒಂದು ರುಪಾಯಿಯಂತೆ ಮಾರುತ್ತಿದ್ದ. ಅಲ್ಲಿಗೆ ಇಡ್ಲಿ ತಿನ್ನುವುದಕ್ಕೆ ಬರುವವರಲ್ಲಿ ಹೆಚ್ಚಿನವರು ತೋಟದಲ್ಲಿ ಕೆಲಸ ಮಾಡುವವರು. ಅವರು ವಾರಕ್ಕೊಮ್ಮೆ ಅವನಿಗೆ ದುಡ್ಡು ಕೊಡುತ್ತಾರೆ. ಆ ಹುಡುಗರು ಅಲ್ಲೇಕೆ ಬಂದು ತಿನ್ನುತ್ತಾರೆ ಎಂದು ಯೋಚಿಸುತ್ತಿದ್ದೆ.
ಹಳ್ಳಿಗಳಲ್ಲಿ ರಾತ್ರಿಯೂಟವನ್ನು ಹೊಟೆಲ್ಲಿನಲ್ಲಿ ಮಾಡುವ ಸಂಪ್ರದಾಯವೇ ಇರಲಿಲ್ಲ. ಕೆಲಸಕ್ಕೆ ಹೋಗುವ ಕೂಲಿಯಾಳುಗಳು ಕೂಡ ಗಡಂಗಿಗೆ ಹೋಗಿ ಒಂದೆರಡು ಗ್ಲಾಸು ಶೇಂದಿ ಏರಿಸಿಕೊಂಡು ಹಾಡುತ್ತಾ ಮನೆಯ ಹಾದಿ ಹಿಡಿಯುತ್ತಿದ್ದರು. ಮನೆಯಲ್ಲಿ ಗಂಜಿ ಮತ್ತು ಮೀನಿನ ಚಟ್ನಿ ತಿಂದು ಮಲಗುತ್ತಿದ್ದರು. ಆದರೆ ಈ ಮಂದಿಯೇಕೆ ಇಲ್ಲಿಗೆ ಬರುತ್ತಿದ್ದಾರೆ ಎಂದು ವಿಚಾರಿಸಿದಾಗ, ಅವರ ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಯಾರೂ ಇಲ್ಲ ಎಂದು ಗೊತ್ತಾಯಿತು.
ಅವರಲ್ಲಿ ಬಹಳಷ್ಟು ಮಂದಿಗೆ ಮದುವೆ ಆಗಿರಲಿಲ್ಲ. ಅನೇಕರಿಗೆ ಮದುವೆಯಾಗುವ ವಯಸ್ಸು ದಾಟಿತ್ತು. ಕೂಲಿ ಕಾರ್ಮಿಕರನ್ನು ಯಾರು ತಾನೇ ಮದುವೆ ಆಗ್ತಾರೆ ಅಂತ ಅಂಗಡಿಯಾತ ಬೇಸರದಿಂದ ನಕ್ಕ. ಅವನಿಗೆ ಐವತ್ತೋ ಐವತ್ತಾರೋ ಇರಬೇಕು. ನಮ್ಮ ಮದುವೆ ಆಗಿ ಹೋಗಿದ್ದು ಪುಣ್ಯ. ಈಗಿನ ಹುಡುಗರ ಅವಸ್ಥೆ ನೋಡಿ ಅಂತ ತೋರಿಸಿದ.
ಹುಡುಗರು ಇಡ್ಲಿ ತಿಂದು, ನೀರು ಕುಡಿದು ಬೀಡಿ ಸೇದುತ್ತಾ ಮಧ್ಯರಾತ್ರಿಯ ತನಕ ಅಲ್ಲೇ ಕೂತಿದ್ದರು. ಎಷ್ಟು ದಿನ ಅಂತ ಹೀಗೇ ಬದುಕ್ತಾರೆ ಹೇಳಿ, ಒಂಚೂರು ತಲೆಕೆಟ್ಟರೆ ಕೋವಿ ಹಿಡೀತಾರೆ. ಆಮೇಲೆ ಅವರನ್ನು ಹುಡುಕೋದಕ್ಕೆ ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತೆ. ಅದರ ಬದಲು ಈಗಲೇ ಇವರಿಗೇನಾದರೂ ಮಾಡೋದಕ್ಕಾಗಲ್ವಾ ಅಂದರು. ಆ ಕ್ಷಣಕ್ಕೆ ನಮಗೆಲ್ಲ ಅದೊಂದು ಸರಳವಾದ, ಆಗದ ಹೋಗದ ಮಾತಿನಂತೆ ಕಂಡಿತ್ತು.
ಗ್ರಾಮಗಳು, ಹಳ್ಳಿಗಳೂ ಹೇಗೆ ನಗರದಿಂದ ಹೊರಗೆ ಉಳಿಯುತ್ತಲಿವೆ ಎಂದು ಯೋಚಿಸಿ. ಎಲ್ಲರೂ ಚತುಷ್ಪಥ ರಸ್ತೆಯ ಬಗ್ಗೆ ಯೋಚಿಸುತ್ತಿದ್ದಾರೆ. ಖೇಣಿಯಂಥವರು ರಸ್ತೆ ಮಾಡಿ ಅದಕ್ಕೆ ಎರಡೂ ಬದಿಯಲ್ಲಿ ಬೇಲಿ ಹಾಕಿ, ಆ ರಸ್ತೆಗೆ ಹಳ್ಳಿಯ ಮಂದಿ ಕಾಲಿಡದ ಹಾಗೆ ಮಾಡುತ್ತಾರೆ. ಇವತ್ತು ಇಲ್ಲಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಹೋಗಿ ಬರಬೇಕು ಅಂದರೆ ಇನ್ನೂರು ರುಪಾಯಿ ಟೋಲ್ ಫೀ ಕಟ್ಟಬೇಕು. ಮಂಗಳೂರು ರಸ್ತೆಯಲ್ಲಿ ವೈಷ್ಣೋದೇವಿ ಸೇತುವೆಗೆ ಶತಮಾನಗಳಿಂದ ಸುಂಕ ವಸೂಲಿ ಮಾಡುತ್ತಲೇ ಇದ್ದಾರೆ.
ಒಳ್ಳೆಯ ರಸ್ತೆಗೆಂದು ಮುಂಗಡ ಪತ್ರ ಅದೆಷ್ಟೋ ಲಕ್ಷ ಕೋಟಿ ರುಪಾಯಿಗಳನ್ನು ಎತ್ತಿಡುತ್ತದೆ. ರಸ್ತೆಯೂ ನಿರ್ಮಾಣ ಆಗುತ್ತದೆ. ಆ ರಸ್ತೆಗೆ ಮತ್ತೆ ನಾವು ಟೋಲ್ ಫೀ ಕೊಟ್ಟೇ ಓಡಾಡಬೇಕು. ಬಸ್ಸುಗಳಲ್ಲಿ ಹೋದರೂ ಟಿಕೆಟ್ಟಿಗೆ ಎರಡು ರುಪಾಯಿ ಟೋಲ್ ಫೀ.
ಮೊನ್ನೆ ಕಾರ್ಕಳ ಎಂಬ ಪುಟ್ಟ ಊರಿಗೆ ನಡುರಾತ್ರಿ ಕಳೆದ ನಂತರ ತಲುಪಿದರೆ, ಅಲ್ಲಿ ಸರ್ಕಲ್ಲಿನಲ್ಲೊಬ್ಬ ಹಿರಿಯರು ಆಮ್ಲೆಟ್ಟು ಟೀ ಮಾರುತ್ತಾ ಕೂತಿದ್ದರು. ಬ್ರೆಡು, ಆಮ್ಲೆಟ್ಟು, ಟೀ ಧಾರಾಳವಾಗಿ ಸಿಗುತ್ತಿತ್ತು. ಬೆಳಗಿನ ತನಕ ದುಡಿಯುತ್ತಾರೆ ಅಂತ ಯಾರೋ ಹೇಳಿದರು. ಅಲ್ಲೇ ಪಕ್ಕದಲ್ಲಿ ಒಂದು ಟಾಟ ಸುಮೋ ನಿಂತಿತ್ತು. ಅದರೊಳಗಿನಿಂದ ನಾಲ್ಕಾರು ಕಾಲೇಜು ಹುಡುಗರು, ಒಬ್ಬಳು ಹುಡುಗಿ ಕೆಳಗಿಳಿದರು. ಅವರು ಕಾರಲ್ಲೇ ಕುಳಿತು ಕುಡಿದು ಮುಗಿಸಿದಂತಿತ್ತು. ಅವರ ಜೊತೆಗಿದ್ದ ಹುಡುಗಿ, ಒಂದು ಬ್ರೆಡ್ಡು ಆಮ್ಲೆಟ್ಟು ತಿಂದು ರಸ್ತೆ ಪಕ್ಕ ನಿಂತಿದ್ದಳು. ಸ್ವಲ್ಪ ಹೊತ್ತಿಗೆ ಅದೇ ಟಾಟಾ ಸುಮೋ ಮರಳಿ ಬಂತು. ಅದರಲ್ಲಿ ಮತ್ತೊಂದಷ್ಟು ಹುಡುಗರು ಬಂದಿದ್ದರು. ಆಕೆಯನ್ನು ಹತ್ತಿಸಿಕೊಂಡ ಸುಮೋ ಕತ್ತಲ ರಸ್ತೆಯಲ್ಲಿ ಮರೆಯಾಯಿತು.
ನಾನಿಲ್ಲಿ ರಾತ್ರಿ ಪೂರ ದುಡಿಯುತ್ತೇನೆ. ನನ್ನ ಮಗ ಬೆಳಗ್ಗೆ ಜಬರದಸ್ತು ಮಾಡಿ ನೂರೋ ಇನ್ನೂರೋ ಕಿತ್ತುಕೊಂಡು ಹೋಗುತ್ತಾನೆ. ಅವನೂ ಹೀಗೆಯೇ ಈ ಹುಡುಗರ ಜೊತೆ ಸೇರಿ ಹಾಳಾಗಿದ್ದಾನೆ. ನಾವು ಹಳ್ಳಿಗಳು ಇದ್ದದ್ದರಲ್ಲಿ ಒಳ್ಳೇದು ಅಂತೀವಿ. ಈಗ ಹಾಗೇನಿಲ್ಲ’ ಅಂತ ತುಂಬ ಹೊತ್ತು ಅಲ್ಲೇ ಕೂತಿದ್ದ ನಮ್ಮ ಜೊತೆ ಆ ಅಂಗಡಿಯ ಹಿರಿಯರು ಹೇಳಿದರು.
ಕಾರ್ಕಳದ ರಸ್ತೆಯಲ್ಲಿ ನಿಂತು ನೋಡಿದರೆ ಕುದುರೆಮುಖದ ಇನ್ನೊಂದು ಬದಿ ಹಬ್ಬಿ ನಿಂತದ್ದು ಕಾಣಿಸುತ್ತದೆ. ಕತ್ತಲಲ್ಲಿ ಆ ಆಕಾರ ನಿಗೂಢವಾಗಿ ಕಂಡು ಹಾಗೇ ನೋಡುತ್ತಾ ನಿಲ್ಲುವ ಆಸೆಯಾಗುತ್ತದೆ. ಆ ಬೆಟ್ಟಗಳಿಗೆ ಬೇಸಗೆಯಲ್ಲಿ ಕಾಡ್ಗಿಚ್ಚು ಹತ್ತಿಕೊಂಡು ಹವಳದ ಹಾರ ತೊಡಿಸಿದಂತೆ ಕಾಣುತ್ತದೆ. ಆ ಹಿರಿಯರ ಮಾತುಗಳನ್ನು ಕೇಳಿದಾಗ ಅದನ್ನೆಲ್ಲ ನೋಡಬೇಕು ಅನ್ನಿಸಲಿಲ್ಲ. ಕೆ ಎಸ್ ನ ತುಂಬ ಹಿಂದೆ ಬರೆದ ನಾಲ್ಕು ಸಾಲುಗಳು ನೆನಪಾದವು:
ಬತ್ತಿದ ಕೆರೆಯಂಗಳದಲಿ
ಹಾಡು ಹಕ್ಕಿ ಸತ್ತಿದೆ
ಅದರ ಕತೆಯ ಕೇಳಲಿಕ್ಕೆ
ಯಾರಿಗೆ ಪುರುಸೊತ್ತಿದೆ?
*********
ಸುಮ್ಮನೆ ಯೋಚಿಸುತ್ತಿದ್ದೆ. ನಾವು ಹೇಗೆ ಬದಲಾಗುತ್ತಾ ಬಂದಿದ್ದೇವೆ. ಬಡತನವನ್ನು ಮೀರುತ್ತಾ, ದಾಟುತ್ತಾ, ಆಧುನಿಕರಾಗುತ್ತಾ, ವೈಜ್ಞಾನಿಕವಾಗಿ ಮುಂದುವರಿಯುತ್ತಾ, ಗಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲಿ ಓಡುವ ಕಾರುಗಳಲ್ಲಿ ಓಡಾಡುತ್ತಾ, ರಸಗ್ರಹಣ ಶಕ್ತಿಯನ್ನು ಮಾತ್ರ ಕಳೆದುಕೊಂಡಿದ್ದೇವೆ. ಯೂಜಿ ಕೃಷ್ಣಮೂರ್ತಿ ಹೇಳುತ್ತಿದ್ದರು. ಅಮೆರಿಕನ್ ಮಹಿಳೆ ಎಂಥ ದಡ್ಡಿಯೆಂದರೆ ಗೋಡಂಬಿ ತುಂಬಿದ ಡಬ್ಬವನ್ನು ಅಂಗಡಿಯಿಂದ ತಂದಾಗ, ಆ ಡಬ್ಬದ ಮೇಲೆ ಅದನ್ನು ತೆರೆಯುವುದು ಹೇಗೆ ಅನ್ನುವುದನ್ನೂ ಬರೆದಿರಬೇಕಾಗುತ್ತದೆ. ಇನ್‌ಸ್ಟ್ರಕ್ಷನ್ಸ್ ಟು ಓಪನ್- ಇಲ್ಲದೇ ಹೋದರೆ ಅವಳಿಗೆ ಡಬ್ಬ ತೆರೆಯುವುದು ಹೇಗೆ ಅಂತಲೂ ಗೊತ್ತಾಗುವುದಿಲ್ಲ. ಅದನ್ನೇ ಕೋತಿಯ ಕೈಗೆ ಕೊಟ್ಟರೆ ಸುಲಭವಾಗಿ ಮುಚ್ಚಳ ತೆಗೆಯುತ್ತದೆ.
ನಮಗೀಗ ಸೂಚನೆಗಳು ಬೇಕು, ಸಲಹೆ ಕೊಡುವವರು ಬೇಕು. ದಿನ ಬೆಳಗಾಗೆದ್ದು ಅರ್ಧ ಗಂಟೆ ನಡೆಯಿರಿ ಎಂದು ಹೇಳುವುದಕ್ಕೊಬ್ಬ ಡಾಕ್ಟರ್, ಎರಡು ಇಡ್ಲಿ ಜೊತೆಗೆ ಮೂರು ಕ್ಯಾರಟ್ ತುಂಡು ತಿನ್ನಿ ಎಂದು ಹೇಳುವುದಕ್ಕೆ ಒಬ್ಬ ಡಯಟೀಷಿಯನ್, ಯಾವ ಬಣ್ಣದ ಅಂಗಿ ಹಾಕಿಕೊಂಡು ಹೋಗಬೇಕು ಎಂದು ಹೇಳುವುದಕ್ಕೊಬ್ಬ ಜ್ಯೋತಿಷಿ, ಏನು ಕೆಲಸ ಮಾಡಬೇಕು ಎಂದು ಹೇಳುವುದಕ್ಕೊಬ್ಬ ಬಾಸ್, ಏನು ಕುಡಿಯಬೇಕು ಎಂದು ಹೇಳುವುದಕ್ಕೊಬ್ಬ ಬಾರ್‌ಮನ್, ಎಷ್ಟು ವೇಗದಲ್ಲಿ ಕಾರು ಓಡಿಸಬೇಕು ಎಂದು ಸೂಚಿಸುವ ಸೈನ್‌ಬೋರ್ಡ್, ಎಷ್ಟು ಗಂಟೆಗೆ ಮಲಗಬೇಕು ಎಂದು ಹೇಳುವುದಕ್ಕೆ ಒಂದು ವೆಬ್‌ಸೈಟು...
ಸತ್ಯಂ, ಶಿವಂ, ಸುಂದರಂ..

5 comments:

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ
ಬದುಕಿನ ಮಜಲುಗಳ ನಾವರಣ ಸೊಗಸಾಗಿದೆ
ಬದುಕು ಯಾಂತ್ರಿಕವಾಗುತ್ತಿದೆ
ನಾವು ಕೇವಲ ಸಾಯಲಾಗುವುದಿಲ್ಲ ಎಂದು ಬದುಕಿದ್ದೆವೆಯೇ ಎನಿಸುತ್ತದೆ ಕೆಲವೊಮ್ಮೆ
ಒಳ್ಳೆಯ ಲೇಖನ

Shweta said...

ಬದುಕಿನ ವಿಶೇಷ ಇರುವದೆಲ್ಲ ವೈವಿಧ್ಯತೆಯಲ್ಲಿ ಅಲ್ಲವೇ ಸರ್? ಈ ಬದುಕು ಏನು ಕೊಟ್ಟಿದೆ ನಮಗೆ ಎನ್ನುವದಕ್ಕಿಂತ ನಾವು ಏನು ಕೊಡಬಲ್ಲೆವು ಎಂಬುದು ನಮ್ಮ ಚಿಂತನೆಯಾಗಬೇಕಲ್ಲವ?
-ಶ್ವೇತಾ

VENU VINOD said...

ಕಥೆ ಭಿನ್ನವಾಗಿದೆ, ಚೆನ್ನಾಗಿದೆ, ಕಥಾ ವಸ್ತು ಇಷ್ಟವಾಯ್ತು

Narayan Bhat said...

ನಿಮ್ಮ ಯೋಚನಾ ಶಕ್ತಿಯ ಹರವು ಮತ್ತು ಅದನ್ನು ಮನದಟ್ಟು ಮಾಡುವ ಬಗೆ ತುಂಬ ವಿಶಿಷ್ಟವಾದದ್ದು..

Anonymous said...

ಇಷ್ಟವಾಯ್ತು ಜೋಗಿ ಸರ್, ಈ ಬರಹ. ಮನತಟ್ಟುವಂತಿದೆ. ಆದರೆ ಸದಾಶಿವ ಅನ್ನೋ ತರದ ಕತೆ ಯಾಕೆ ಬರೀತಿದೀರಿ? ವಸ್ತು ಕೊರತೆಯಾಗಿದೆಯೇ? ಮೂವರು ಸದಾಶಿವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು (ನೇರವಾಗಲ್ಲದೇ) ಮಂಡಿಸಿದ ಬರಹದಂತಿದೆ. ನೈಜ ಪಾತ್ರಗಳನ್ನು ಕತೆಯೊಳಗೆ ತಂದು ಕುತೂಹಲ ಮೂಡಿಸುವ ತಂತ್ರವನ್ನು ಈ ಹಿಂದಿನ ಕತೆಗಳಲ್ಲಿ ಅದ್ಭುತವಾಗಿ ಬಳಸಿಕೊಂಡಿದೀರಿ ( ಲಂಕೇಶ್ ಅಭಿಮಾನಿಯ ಕತೆ) ಆದರೆ ಇಲ್ಲಿ ನಿಮ್ಮ ಅದ್ಯಾಕೋ ನಿಮ್ಮ ಕತೆಯ ವಿಫಲ ಪ್ರಯತ್ನವನು ಬ್ಲಾಗಿನ ಓದುಗರ ಮೇಲೆ ಹೇರಿದಂತಿದೆ.