Tuesday, January 5, 2010

ಒಳ್ಳೇ ಲೇಖಕ ಒಳ್ಳೇ ಮನುಷ್ಯನೂ ಆಗಿರ್ತಾನೆ ಅಲ್ವಾ?

ಎಲ್ಲವನ್ನೂ ಪ್ರೀತಿಯಿಂದ ನೋಡು; ಅನುಮಾನದಿಂದ ನೋಡು; ಉಡಾಫೆಯಿಂದ ನೋಡು; ಅಗೌರವದಿಂದ ನೋಡು; ಅಕ್ಕರೆಯಿಂದ ನೋಡು ಅಂದವರು ವೈಎನ್‌ಕೆ. ಒಮ್ಮೆ ಅವರು ಸಾಹಿತಿಯೊಬ್ಬರ ಬಗ್ಗೆ ಮಾತಾಡುತ್ತಾ ಅವನು ಕೆಟ್ಟ ಬರಹಗಾರ’ ಎಂದು ರೇಗಿದರು. ಆದರೆ ಒಳ್ಳೆ ಮನುಷ್ಯ’ ಅಂತ ನಾನು ವಾದಿಸಿದೆ. ನಾನು ಓದುಗ. ಅವನು ಒಳ್ಳೆ ಮನುಷ್ಯ ಅನ್ನಿಸಿಕೊಂಡು ನನಗೇನೂ ಆಗಬೇಕಾಗಿಲ್ಲ. ನನಗವನು ಒಳ್ಳೆಯ ಲೇಖಕ ಆಗಿರಬೇಕು ಅಷ್ಟೇ. ಕುರ್ಚಿ ಟೇಬಲ್ಲು ಮಾಡಿಸುವವನು ಒಳ್ಳೇ ಕಸಬುದಾರ ಬಡಗಿಗಾಗಿ ಹುಡುಕುತ್ತಾನೆಯೇ ಹೊರತು, ಅವನ ಒಳ್ಳೇತನವನ್ನು ನೋಡುವುದಿಲ್ಲ’ ಎಂದು ನನ್ನ ವಾದವನ್ನು ಸಾರಾಸಗಟು ತಿರಸ್ಕರಿಸಿದರು. ಲೇಖಕನಿಗೂ ಬರಹಕ್ಕೂ ಸಂಬಂಧ ಇಲ್ಲ. ಲೇಖಕ ಸತ್ತು ಹೋಗ್ತಾನೆ. ಮುಂದಿನ ತಲೆಮಾರಿಗೆ ಉಳಿಯೋದು ಬರಹ ಮಾತ್ರ. ಷೇಕ್ಸ್‌ಪಿಯರ್ ಒಳ್ಳೆಯವನೋ ಕೆಟ್ಟವನೋ ಅನ್ನೋದು ಯಾರಿಗೆ ಬೇಕು, ಕಾಳಿದಾಸ ಸಜ್ಜನನೋ ದುರ್ಜನನೋ ಅನ್ನೋದನ್ನು ಯಾರು ಕೇಳ್ತಾರೆ. ಒಳ್ಳೇತನ, ಕೆಡುಕು ನಮ್ಮ ಸುತ್ತಲಿರುವ ಹತ್ತಾರು ಮಂದಿಗೆ ತಿಳಿಯುತ್ತದೆ ಅಷ್ಟೇ. ಅದನ್ನು ಮೀರಿ ನಿಂತು ಬರೆಯೋದು ಕಲೀಬೇಕು ಎಂದು ಇಡೀ ದಿನ, ನೆನಪಾದಾಗ ಆದಾಗಲೆಲ್ಲ ಹೇಳುತ್ತಲೇ ಇದ್ದರು. ದೊಡ್ಡವರ ಸಣ್ಣತನ, ಸಣ್ಣವರ ದೊಡ್ಡತನ ಎರಡನ್ನೂ ಕೇಳಿ, ನೋಡಿ ಗೊತ್ತಿದ್ದವರು ಹೀಗೆ ಮಾತಾಡುವುದು ಕೇಳಿ ನನಗೆ ಆಶ್ಚರ್ಯವಾಗಿತ್ತು.
ತುಂಬ ವರ್ಷಗಳ ಕಾಲ ಅದರ ಬಗ್ಗೆಯೇ ಯೋಚಿಸಿದೆ. ಒಳ್ಳೆಯ ಲೇಖಕ, ಒಳ್ಳೆಯ ಮನುಷ್ಯ- ಇವೆರಡರ ನಡುವಿನ ಗೊಂದಲ ಆಗಲೂ ಪರಿಹಾರ ಆಗಿರಲಿಲ್ಲ. ಮುಂದೊಂದು ದಿನ ಪೂರ್ಣಚಂದ್ರ ತೇಜಸ್ವಿ ಸಿಕ್ಕಾಗ ಇದರ ಪ್ರಸ್ತಾಪ ಮಾಡಿದ್ದೆ: ಯಾಕೋ ಒಳ್ಳೆಯವನಾಗಬೇಕು ಅಂತ ಸಾಯ್ತೀಯಾ? ಹೋಗ್ಲಿ ಯಾರ ಕಣ್ಣಲ್ಲಿ ಒಳ್ಳೆಯವನಾಗ್ತೀಯ ಹೇಳು? ಒಬ್ಬರಿಗೆ ಬೇಕಾದೋನಾದ್ರೆ ಇನ್ನೊಬ್ಬರಿಗೆ ಬೇಡದೋನಾಗ್ತೀಯ? ಸುಮ್ನೆ ಬದುಕೋದು ಕಲಿ. ಬರೀಬೇಕು ಅನ್ನಿಸಿದಾಗ ಬರಿ. ತುಂಬ ಬರೀತೀಯಾ ಅಂತಾರೆ. ಅವರಿಗೇನು ಹೋಗಬೇಕು? ಈ ಓದುಗರು, ಪ್ರಿಂಟಿಂಗ್ ಉದ್ಯಮ, ಮಾರಾಟಜಾಲ, ಓದೋ ಹುಚ್ಚು ಎಲ್ಲಾ ನಿಂತಿರೋದು ತುಂಬಾ ಬರೆಯೋರಿಂದಲೇ. ವರ್ಷಕ್ಕೆ ಒಂದೇ ಪುಸ್ತಕ ಬರೀಬೇಕು. ಬುದ್ದಿವಂತರು ಮಾತ್ರ ಬರೀಬೇಕು ಅನ್ನೋ ಹಾಗಿದ್ರೆ ಸಂಸ್ಕೃತದ ಹಾಗೆ, ಕನ್ನಡವೂ ಯಾವತ್ತೋ ಸತ್ತು ಹೋಗ್ತಿತ್ತು’ ಅಂತ ಉಪದೇಶ ಮಾಡಿದರು.
ಒಳ್ಳೇ ಲೇಖಕ ಒಳ್ಳೇ ಮನುಷ್ಯನೂ ಆಗಿರ್ತಾನೆ ಅಲ್ವಾ?

6 comments:

ವಸಂತ್ ಗಿಳಿಯಾರ್ said...

ಚನ್ನಾಗಿತ್ತು .. ತೇಜಸ್ವಿಯವರ ಮಾತು ತುಂಬಾ ಸತ್ಯ ಅಲ್ವ ಸರ್ ????

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಒಬ್ಬ ವ್ಯಕ್ತಿ ಒಳ್ಳೆಯವ,ಹೌದೊ ಅಲ್ಲವೊ ?
ನಿರ್ಧರಿಸುವ ಮಾನದಂಡ ಯಾವದು?..
ಅದರೆ,
ಒಳ್ಳೆಯ ಬರಹಗಾರ ಆಗಿದ್ದಲ್ಲಿ,ಅವನಲ್ಲೊಂದು ಒಳ್ಳೆಯ ಮನಸ್ಸಂತೂ ಇರಲೇಬೇಕು.

ದೀಪಸ್ಮಿತಾ said...

ನಿಜ. ಮತ್ತು ಇದು ಹೆಚ್ಚಿನ ಎಲ್ಲ ವೃತ್ತಿಗಳಿಗೂ ಅನ್ವಯಿಸುತ್ತದೆ

ಸಿಂಧು sindhu said...

ಸೃಜನಶೀಲತೆ ಲಯದ ನೆಲೆಗಟ್ಟಿನಲ್ಲಿ ಚಿಗುರೊಡೆಯುತ್ತದೆಯಾ ಹಾಗಾದರೆ?!

dattu kulkarni,australia said...

ಬರಹ ಇರಬಹುದು, (ಅಥವಾ ಯಾವದೇ ಲಲಿತ ಕಲೆ ಇರಬಹುದು), ಅದನ್ನು ಅಭಿವ್ಯಕ್ತಿ ಪಡಿಸುವಾಗ ಅಥವಾ ಆಮೇಲೆ ಅದು ಓದುಗನ ಹಾಗೆ ಬರಹಗಾರನ ಮೇಲು ಪ್ರಭಾವ ಬಿರಬಲ್ಲುದು. ಈ ಪ್ರಭಾವದಿಂದ ಈ ಬರಹಗಾರ ಒಳ್ಳೆಯವನಾಗಬಹುದು. (ಅವನು ಮೊದಲು ಒಳ್ಳೆಯವನಾಗಿರದಿದ್ದಲ್ಲಿ) . ಹಾಗಾದರೆ ಮಾತ್ರ ಆ ಕೃತಿ ಸೃಜನಶೀಲ ಅನ್ನಿಸಿಕೊಳ್ಳುತ್ತದೆ. ಕಾಲವನ್ನು ಮಿರಿ ನಿಲ್ಲುತ್ತದೆ

Shree said...

ನನಗೆ ಗೊತ್ತಿರುವ ಲೇಖಕರು ಎರಡು ವಿಧ -
ಮೊದಲಿನವರು, ಮನಸಲ್ಲಿರುವುದನ್ನ ನೀಟಾಗಿ ಫಿಲ್ಟರ್ ಮಾಡಿ ಜಗತ್ತಿಡೀ ಒಪ್ಪುವ ಥರ ಬರೆಯಲು ಗೊತ್ತಿರುವವರು... ಇವರಿಗೆ ಬರಹವೆಂದರೆ ಒಂದು ಟೂಲ್. ಇವರು ಅತ್ಯುತ್ತಮ ಲೇಖಕರು.
ಮತ್ತೊಂದು ವಿಧದವರಿದ್ದಾರೆ - ಬರಹವೆಂದರೆ ಧ್ಯಾನದಂತೆ, ತಪಸ್ಸಿನಂತೆ... ಬರಹವೆಂದರೆ ನಮ್ಮತನದ ಅಭಿವ್ಯಕ್ತಿ, ನಮ್ಮ ಮನದಲ್ಲಿ ಕಾಡುವ ಮಾತಿನ ಮೂರ್ತರೂಪದಂತೆ ಎಂದು ನಂಬಿದವರು...
ಮೊದಲ ವಿಧದವರನ್ನು ನೋಡಿ ನೋಡಿ ಸಾಕಾಗಿ ಬರಹಗಾರರೆಲ್ಲರೂ ಆಷಾಢಭೂತಿಗಳು ಅಂತ ಅಂದುಕೊಂಡಿದ್ದೆ... ನಂತರ ನನಗೆ ಸಿಕ್ಕಿದವರು ಎರಡನೇ ವಿಧದವರು, ಬರಹದ healing power ಮೇಲೆ ವಿಶ್ವಾಸ ಮೂಡಿಸಿದವರು... ಬರೆಯಬೇಕೆಂಬ ಹಂಬಲ ನನ್ನಲ್ಲೂ ಹುಟ್ಟಿಸಿದವರು... ಇಂಥವರು ಒಳ್ಳೆಯ ಮನುಷ್ಯರು ಅಂತ ನನಗನಿಸಿದೆ.